Categories
ಶಿಕ್ಷಣ

ಕಾಲೇಜು ವಿದ್ಯಾರ್ಥಿಗಳ ವರ್ಗ ಪ್ರಕ್ರಿಯೆ ಇನ್ನಷ್ಟು ಸರಳ

  • ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಅವಕಾಶ ಕಲ್ಪಿಸಿ ಶಿಕ್ಷಣ ಇಲಾಖೆ ಆದೇಶ

NAMMUR EXPRESS NEWS
ಬೆಂಗಳೂರು : ರಾಜ್ಯದ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯ ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಇನ್ನು ಮುಂದೆ ವ್ಯಾಸಂಗದ ನಡುವೆ ರಾಜ್ಯದ ಯಾವುದೇ ಕಾಲೇಜುಗಳಿಗೆ ವರ್ಗಾವಣೆ ಪಡೆದು ಓದು ಮುಂದುವರೆಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ರಡಿ ಅವಕಾಶ ನೀಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೊತೆಗೆ ವರ್ಗ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಆ ಪ್ರಕಾರವಾಗಿ ವಿದ್ಯಾರ್ಥಿಯು ಹಾಲಿ ವಿಶ್ವವಿದ್ಯಾಲಯದ ಒಂದು ಸಂಯೋಜಿತ ಕಾಲೇಜಿನಿಂದ ಅದೇ ವಿಶ್ವವಿದ್ಯಾಲಯದಡಿಯ ಇನ್ನೊಂದು ಸಂಯೋಜಿತ ಕಾಲೇಜಿಗೆ ಅಥವಾ ರಾಜ್ಯದ ಬೇರೆ ಯಾವುದೇ ವಿವಿಯ ಸಂಯೋಜಿತ ಕಾಲೇಜಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಬೆಸ ಸಂಖ್ಯೆಯ ಸೆಮಿಸ್ಟರ್ ಗಳಿಗೆ ಮಾತ್ರ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯ ತಂತ್ರಾಂಶ ಬಳಸಿ ಕಾಲೇಜುಗಳು ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಹಿಂದಿನ ಸೆಮಿಸ್ಟರ್ ರಲ್ಲಿ ಪಾಸ್ ಆಗದೆ ಇರುವ ವಿಷಯಗಳನ್ನು ವರ್ಗಾವಣೆ ಪಡೆದ ಕಾಲೇಜಿನಲ್ಲೆ ಮುಂದುವರೆಸಬಹುದು ಎಂದು ಇಲಾಖೆ ಸೂಚಿಸಿದೆ. ಅಲ್ಲದೆ, ಎನ್ ಇಪಿ ಅಡಿಯಲ್ಲಿ ಇರುವ ಬಹು ಆಗಮನ ಮತ್ತು ನಿರ್ಗಮನ ಅವಕಾಶದಡಿ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗದ ವೇಳೆ ಯಾವುದೇ ವರ್ಷ ವಿದ್ಯಾರ್ಥಿ ಓದು ನಿಲ್ಲಿಸಿದರೆ ಆಯಾ ವರ್ಷ ಅಥವಾ ಸೆಮಿಸ್ಟರ್ ಅವಧಿಗೆ ನಿಗದಿತ ಕ್ರೆಡಿಟ್ ಅಂಕಗಳನ್ನು ಪಡೆದಿದ್ದರೆ ಪ್ರಥಮ ವರ್ಷಕ್ಕೆ ಸರ್ಟಿಫಿಕೇಟ್, ದ್ವಿತೀಯ ವರ್ಷಕ್ಕೆ ಡಿಪ್ಲೋಮಾ, ಮೂರನೇ ವರ್ಷಕ್ಕೆ ಪದವಿ ಪ್ರಮಾಣ ಪತ್ರ, ನಾಲ್ಕನೇ ವರ್ಷಕ್ಕೆ ಹಾನರ್ಸ್ ಪದವಿ ಪತ್ರ ನೀಡಬೇಕು. ಅಂತಹ ವಿದ್ಯಾರ್ಥಿ ನಂತರ ಓದು ಮುಂದುವರೆಸುವುದಾದರೆ ಪ್ರಥಮ ಸೆಮಿಸ್ಟರ್ ಗೆ ಪ್ರವೇಶಾತಿ ಪಡೆದ 7 ವರ್ಷದೊಳಗೆ ಪುನಃ ಪ್ರವೇಶ ಪಡೆಯಬಹುದು ಎಂದು ತಿಳಿಸಿದೆ.

Categories
ರಾಜ್ಯ

146 ವರ್ಷಗಳಲ್ಲೇ ಫೆಬ್ರವರಿ ತಿಂಗಳಲ್ಲಿ ದಾಖಲೆ ಉಷ್ಣಾಂಶ!

  • ದೇಶದಲ್ಲಿ ಸರಾಸರಿ 29.5 ಡಿಗ್ರಿ ತಾಪ ದಾಖಲು
  • ಬೇಸಿಗೆಯಲ್ಲಿ ಬಾರಿ ಬಿಸಿ ವಾತಾವರಣ ಸಂಭವ

NAMMUR EXPRESS NEWS
ನವದೆಹಲಿ : ಈ ವರ್ಷ ಫೆಬ್ರವರಿಯಲ್ಲಿ ಸರಾಸರಿ ತಾಪಮಾನ 29.54 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದ್ದು, ಇದು ಕಳೆದ 146 ವರ್ಷಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ ದಾಖಲಾದ ಗರಿಷ್ಠ ತಾಪಮಾನ ಎನಿಸಿಕೊಂಡಿದೆ. ಹಾಗಾಗಿ ಈ ವರ್ಷ ಬೇಸಿಗೆ ಮತ್ತಷ್ಟು ಬಿಸಿಯಿಂದ ಕೂಡಿರಲಿದ್ದು, ಜನರ ಸಂಕಷ್ಟ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 1877ರ ಬಳಿಕ 2023ರ ಫೆಬ್ರವರಿಯಲ್ಲಿ ಅತಿ ಅಧಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಇದೆ ವೇಳೆ 1901ರ ಬಳಿಕ ಫೆಬ್ರವರಿಯಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನ 5ನೇ ಅತಿ ಹೆಚ್ಚಿನ ಕನಿಷ್ಠ ತಾಪಮಾನ ಎನಿಸಿಕೊಂಡಿದೆ. ಫೆಬ್ರವರಿಯಲ್ಲಿ ಈ ಸ್ಥಿತಿ ಇರುವ ಕಾರಣ ಈ ವರ್ಷ ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ ಹಗಲು ಮತ್ತು ರಾತ್ರಿಯ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ ಎಂದು ಹವಮಾನ ಇಲಾಖೆ ಅಂದಾಜಿಸಿದೆ. ದಕ್ಷಿಣ ಭಾರತವನ್ನು ಹೊರತುಪಡಿಸಿ ಭಾರತದ ಬಹುತೇಕ ಎಲ್ಲ ಭಾಗಗಳಲ್ಲೂ ಈ ಬಾರಿ ಬೇಸಿಗೆ ತಾಪ ಹೆಚ್ಚಾಗಿರಲಿದೆ.

Categories
ರಾಜಕೀಯ

ಮಾ.4ಕ್ಕೆ ರಾಜೇಗೌಡ ಸ್ನೇಹ ಶೃಂಗ!

  • ಬೆಂಗಳೂರಿನಲ್ಲಿ ಮಲೆನಾಡಿನ ಮನಸ್ಸುಗಳ ಸಮಾಗಮ
  • ಶೃಂಗೇರಿ ಕ್ಷೇತ್ರ ಮೂಲದ ಬೆಂಗಳೂರಿಗರ ಸಮಾವೇಷಕ್ಕೆ ರಾಜೇಗೌಡರ ಆಹ್ವಾನ

NAMMUR EXPRESS NEWS
ಬೆಂಗಳೂರಿನಲ್ಲಿ ವಾಸವಿರುವ ಎಲ್ಲಾ ಮಲೆನಾಡಿನ ಮನಸ್ಸುಗಳಿಗೆ ನನ್ನ ಸವಿ ನೆನಪುಗಳು, ನನ್ನ ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಾದ ಕೊಪ್ಪ ತಾಲ್ಲೂಕು, ಶೃಂಗೇರಿ ತಾಲ್ಲೂಕು, ನ ರಾ ಪುರ ತಾಲ್ಲೂಕು ಹಾಗೂ ಖಾಂಡ್ಯಾ ಹೋಬಳಿ ಮತ್ತು ಮಲೆನಾಡಿನ ಅಸಂಖ್ಯಾತ ಜನರು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೆಲೆ ನಿಂತು ಉದ್ಯೋಗ, ವ್ಯವಹಾರಗಳ ಮುಖೇನ ತಮ್ಮದೇ ಆದ ಛಾಪನ್ನು ಮೂಡಿಸಿ, ಹುಟ್ಟಿದ ಊರಿಗೆ ಗೌರವವನ್ನು ತಂದಿರುತ್ತೀರಿ. ನಿಮ್ಮೊಂದಿಗೆ ಪ್ರತೀ ವರ್ಷವೂ ಸಂವಾದ ನಡೆಸಿ ಬೆರೆತು ಮಾತನಾಡುವ ಉತ್ಸಾಹ ನನ್ನದು. ಹಾಗಾಗಿಯೇ ಬೆಂಗಳೂರಿನ ನನ್ನ ಆತ್ಮೀಯರ ಸಹಕಾರದೊಂದಿಗೆ “ಸ್ನೇಹ ಶೃಂಗ” ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ.
ಈ ವರ್ಷದ ಸ್ನೇಹ ಶೃಂಗ ಕಾರ್ಯಕ್ರಮವು ದಿನಾಂಕ: 04-03-2023 ರ ಶನಿವಾರದಂದು
ಆನಂದ್‌ ರಾವ್ ಸರ್ಕಲ್ ಹತ್ತಿರದ ರೇಸ್ ಕೋರ್ಸ್ ರಸ್ತೆಯ ಕೆ.ಇ.ಬಿ ಸಭಾಭವನದಲ್ಲಿ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಮಲೆನಾಡಿಗರಾದ ನೀವೆಲ್ಲರೂ ಹಾಗೂ ಮಲೆನಾಡಿನ ಎಲ್ಲಾ ಪ್ರಾತಿನಿಧಿಕ ಸಂಸ್ಥೆಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕಾಗಿ ಕೋರುತ್ತೇನೆ.

ಧನ್ಯವಾದಗಳು,

ಇಂತಿ ವಿಶ್ವಾಸಿ,
ಟಿ.ಡಿ.ರಾಜೇಗೌಡ, ಶಾಸಕರು ಹಾಗೂ ಗೌರವಾಧ್ಯಕ್ಷರು, ಸ್ನೇಹ ಶೃಂಗ ಬೆಂಗಳೂರು
9448407800

Categories
ಮಲ್ನಾಡ್

ಆಗುಂಬೆ ಘಾಟಿಯಲ್ಲಿ ಮರಕ್ಕೆ ಬಸ್ ಡಿಕ್ಕಿ!

  • 20 ಜನರಿಗೆ ಗಾಯ: ಜೀವ ಉಳಿಸಿದ ಚಾಲಕ
  • ಸೊರಬದಲ್ಲಿ ಹೆಜ್ಜೇನು ಹೊಡೆದು ಗಂಡ ಹೆಂಡತಿಗೆ ಸ್ಥಿತಿ ಗಂಭೀರ
  • ಹೊಸನಗರದ ಸೊನಲೆಯಲ್ಲಿ ಬಕೆಟ್ ನೀರಿಗೆ ಬಿದ್ದು ಮಗು ಸಾವು

NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ಖಾಸಗಿ ಬಸ್‌ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ಸಂಜೆ ನಡೆದಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಪ್ರವಾಸಿಗರನ್ನು ಕರೆದೊಯ್ಯುತಿದ್ದ ಖಾಸಗಿ ಬಸ್ ಆಗುಂಬೆ ಘಾಟಿಯ 12 ನೇ ತಿರುವಿನಲ್ಲಿ ಬ್ರೇಕ್ ವಿಫಲವಾಗಿಮರಕ್ಕೆ ಡಿಕ್ಕಿ ಹೊಡೆದಿದೆ.ಘಾಟಿ ರಸ್ತೆಯ 11ನೇ ತಿರುವಿನಲ್ಲಿ ಖಾಸಗಿ ಮಿನಿ ಬಸ್ ಬ್ರೇಕ್ ವೈಫಲ್ಯಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ದೊಡ್ಡ ದುರಂತ ತಪ್ಪಿದೆ. 12ನೇ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಂತಿದೆ.
ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ 20 ಜನರಿದ್ದು ಹಲವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಹೆಬ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದವರೆಲ್ಲಾ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕೆರೆ ಗ್ರಾಮದ ನಿವಾಸಿಗಳು ಎನ್ನಲಾಗುತಿದ್ದು ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಕೊಪ್ಪ ಬಂದು ಹಿಂದಿರುಗುತಿದ್ದಾಗ ಈ ಅಪಘಾತ ಸಂಭವಿಸಿದೆ.
ಬೇಲಿ ಸವರುವಾಗ ಹೆಚ್ಚೇನು ದಾಳಿ, ಗಂಡ ಹೆಂಡತಿ ಗಂಭೀರ: ಬೇಲಿ ಸವರುವ ವೇಳೆ ಹೆಚ್ಚೇನು ದಾಳಿ ಮಾಡಿದ ಹಿನ್ನಲೆಯಲ್ಲಿ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇ ಇಡಗೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೃಷ್ಣಪ್ಪ ಮತ್ತು ರೇಣುಕಮ್ಮ ದಂಪತಿ ಇವತ್ತು ಮನೆ ಹಿಂಭಾಗದಲ್ಲಿ ಬೇಲಿ ಸವರುತ್ತಿದ್ದರು. ಈ ವೇಳೆ ಹೆಚ್ಚೇನುಗಳು ದಾಳಿ ನಡೆಸಿವೆ. ಕೂಡಲೆ ಅವರನ್ನು ಆನವಟ್ಟಿ ಸಮುದಾಯ ಕೇಂದ್ರಕ್ಕೆ ದಾಖಲು ಮಾಡಲಾಯಿತು.
ನೀರಿನ ಬಕೆಟ್‌ಗೆ ಬಿದ್ದು ಒಂದು ವರ್ಷದ ಮಗು ಸಾವು
ನೀರು ತುಂಬಿದ ಬಕೆಟ್‌ಗೆ ಬಿದ್ದು ಒಂದು ವರ್ಷದ ಗಂಡು ಮಗು ಮೃತಪಟ್ಟಿರುವ ಘಟನೆ ಹೊಸ ನಗರ ತಾಲೂಕಿನ ಸೊನಲೆ ಗ್ರಾಪಂ ವ್ಯಾಪ್ತಿಯ ಸೊನಲೆ ಗ್ರಾಮದ ಹೊಸಕೊಪ್ಪ ಎಂಬಲ್ಲಿ ನಡೆದಿದೆ.ಕೂಲಿ ಕೆಲಸಗಾರರಾದ ಹರೀಶ್ ಹಾಗೂ ವೀಣಾ ದಂಪತಿಗಳ ಒಂದು ವರ್ಷ ಒಂದು ತಿಂಗಳ ಸಂಕೇತ್ ಎಂಬ ಮಗು ಮೃತಪಟ್ಟಿರುವುದಾಗಿ ಎಂದು ತಿಳಿದುಬಂದಿದೆ.
ಪೋಷಕರು ಬಕೆಟ್‌ನಲ್ಲಿ ನೀರು ಹಾಕಿ ಆಗಾಗ ಮಗುವಿಗೆ ಆಟವಾಡಿಸುವ ಅಭ್ಯಾಸ ಹೊಂದಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ದುರಂತವೆಂದರೆ ದನಗಳಿಗೆ ಕುಡಿಯಲು ಇಟ್ಟಿದ್ದ ಅರ್ಧ ಬಕೆಟ್ ನೀರಿನಲ್ಲಿ ಮಗು ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ತೋಟದ ಕೆಲಸಕ್ಕೆ ಪೋಷಕರು ಹೋದಾಗ ಈ ಘಟನೆ ನಡೆದಿದ್ದು ಅವರು ಬಂದು ನೋಡುವಷ್ಟರಲ್ಲಿ ಮಗು ಮೃತಪಟ್ಟಿದೆ.

Categories
ಆರೋಗ್ಯ

ಎಚ್. ಡಿ.ದೇವೇಗೌಡ ಆಸ್ಪತ್ರೆಗೆ ದಾಖಲು

  • ಕಾಲು ಊತದ ಕಾರಣ ಬೆಂಗಳೂರಲ್ಲಿ ಚಿಕಿತ್ಸೆ
  • ಕುಮಾರಸ್ವಾಮಿ ಮಾಹಿತಿ: ಈಗ ಚೇತರಿಕೆ

NAMMUR EXPRESS NEWS
ಬೆಂಗಳೂರು : ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಚೇತರಿಕೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10:30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ದೇವೇಗೌಡರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಅವರು ಗುಣಮುಖರಾಗಿ ಬಂದ ಬಳಿಕ ಕೆಲವು ಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

Categories
ರಾಜ್ಯ

ದಿನಗೂಲಿ, ಹೊರ ಗುತ್ತಿಗೆ ನೌಕರರ ಗೋಳು ಕೇಳೋರು ಯಾರು?

  • ಸರ್ಕಾರಿ ನೌಕರರ ವೇತನ ಹೆಚ್ಚಳ, ನಿಜವಾಗಿ ಕೆಲಸ ಮಾಡೋರಿಗೆ ಇಲ್ಲ?
  • ಹಗಲು ರಾತ್ರಿ ದುಡಿದರೂ ಬದುಕು ಸಾಗಿಸೋದು ಕಷ್ಟ!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲಾಗಿದೆ. ಆದ್ರೆ ನಿಜವಾಗಿಯೂ ಅತೀ ಹೆಚ್ಚು ಕೆಲಸ ಮಾಡುವ ದಿನಗೂಲಿ, ಹೊರ ಗುತ್ತಿಗೆ ನೌಕರರ ಗೋಳು ಕೇಳೋರಿಲ್ಲವಾಗಿದೆ.
ಸರ್ಕಾರಿ ನೌಕರರಿಗೆ ಉತ್ತಮ ಸೌಲಭ್ಯ ಇದೆ. ಜೊತೆಗೆ ಅಧಿಕಾರಿಗಳು ಬಹಳಷ್ಟು ಸಂಬಳ ಪಡೆಯುತ್ತಾರೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ದಿನಗೂಲಿ, ಹೊರ ಗುತ್ತಿಗೆ ನೌಕರರಿಗೆ ಇನ್ನು ಸಂಬಳ ಹೆಚ್ಚಿಲ್ಲ. ಜೊತೆಗೆ 3-4 ತಿಂಗಳು ಸಂಬಳವೇ ಸಿಗಲ್ಲ. ಆದರೆ ಸಂಘಗಳು ಗಟ್ಟಿಯಾಗಿಲ್ಲದ ಕಾರಣ ಅವರಿಗೆ ದನಿ ಇಲ್ಲದಾಗಿದೆ.
ವಯಸ್ಸಿನ ಆಧಾರದಲ್ಲಿ ಸರ್ಕಾರಿ ನೌಕರರಿಗೆ 70 ಸಾವಿರ ಸಂಬಳ ಇದ್ದರೆ ಗುತ್ತಿಗೆ ಆಧಾರದ ನೌಕರರಿಗೆ 15 ಸಾವಿರ ಸಂಬಳ ಇರುತ್ತದೆ. ಆದರೆ ಅತೀ ಹೆಚ್ಚು ಕೆಲಸ ಮತ್ತು ಶ್ರಮ ಅರೆಕಾಲಿಕ ನೌಕರರದ್ದಾಗಿದೆ.
ಬಹುತೇಕ ಬಡವರು, ಅಂಗವಿಕಲರು, ಓದಿದವರು ದಿನಗೂಲಿ, ಹೊರ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ಸರ್ಕಾರ ಅವರಿಗೆ ಯಾವುದೇ ಉತ್ತಮ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.

ಎಲ್ಲಾ ಇಲಾಖೆಯಲ್ಲೂ ಕೆಲಸ!

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ದಿನಗೂಲಿ ಹೊರಗುತ್ತಿಗೆ, ತಾತ್ಕಾಲಿಕವಾಗಿ ನೇಮಕವಾದಂತಹ ನೌಕರರೂ ಸಹ ಕರ್ತವ್ಯ ಮಾಡುತ್ತಿದ್ದು ಖಾಯಂ ನೌಕರರಂತೆಯೇ ದಿನದ 24 ಗಂಟೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಪೂರ್ಣ ವೇತನ ಹೋಗಲಿ, ಖಾಯಂ ‌ನೌಕರರ ಯಾವುದೇ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ. ಹೋಗಲಿ ಇವರ ಜೊತೆಯಲ್ಲೆ ಕೆಲಸ ಮಾಡುವ ಜೊತೆಗಾರ ನೌಕರರೂ ಸಹ ಸಾಥ್ ನೀಡ್ತಾ ಇಲ್ಲ. ಇದರಿಂದ ಒತ್ತಡದ ನಡುವೆ ಮೇಲಿನ ಅಧಿಕಾರಿಗಳ ಆಳಾಗಿ ಕೆಲಸ ಮಾಡುತ್ತಿದ್ದಾರೆ.
ಆದರೆ ರಾಜ್ಯದಲ್ಲಿ ನಡೆದ ಮುಷ್ಕರದಲ್ಲೂ ಮಾತಿಲ್ಲ.

ಬಡ ಕಾರ್ಮಿಕರ ಮೇಲೆ ಕರುಣೆ ಇಲ್ಲವೇ?

ಸರ್ಕಾರ ಬಡಪಾಯಿ ಹಂಗಾಮಿಯವರ ಕಡೆ ಯಾಕೆ ನೋಡಲ್ಲ. ಖಾಯಂ ನೌಕರರ ಅರ್ಧ ಸಂಬಳದಲ್ಲಿ ದಿನ ಪೂರ್ತಿ ದುಡಿಯುವ ಇವರ ಬಗ್ಗೆ ಸರ್ಕಾರ ನೋಡ್ತಾಇಲ್ಲ. ಕೋಟಿಗಟ್ಟಲೆ ಖರ್ಚು ಭರಿಸುವ ಈ ಸರ್ಕಾರಕ್ಕೆ ಹಂಗಾಮಿ ನೌಕರರಿಗೆ ಸಾವಿರ ನೀಡಲು ಸಾಧ್ಯವಿಲ್ಲವೆ?.ಅಲ್ಲದೆ ಇವರಲ್ಲಿ ಕೆಲವರು 60 ವರ್ಷ ತುಂಬಿದ್ದಾರೆ, ಕೆಲವರು ಅಂಗವಿಕಲರಿದ್ದಾರೆ, ಬಹುತೇಕರು ಇದೇ ಸಂಬಳ ನಂಬಿದವರಿದ್ದಾರೆ. ಇವರ ಮೇಲೆ ಸರ್ಕಾರಕ್ಕೆ ಕರುಣೆ ಇಲ್ಲವೇ..?.

Categories
ರಾಜಕೀಯ

ಪಂಚರತ್ನ ಯಾತ್ರೆ ಯಶಸ್ವಿ: ಜನತೆಗೆ ಧನ್ಯವಾದಗಳು!

  • ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಭ್ಯರ್ಥಿ ರಾಜಾರಾಮ್

NAMMUR EXPRESS NEWS
ತೀರ್ಥಹಳ್ಳಿ : ಪಂಚರತ್ನ ಯಾತ್ರೆಯನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ಸಿಗೆ ಕಾರಣರಾದ ಜೆಡಿಎಸ್ ಮುಖಂಡರಿಗೂ ಮತ್ತು ಕಾರ್ಯಕರ್ತರಿಗೂ ದೇವೇಗೌಡರ ಅಭಿಮಾನಿಗಳಿಗೂ, ಕುಮಾರಸ್ವಾಮಿಯವರ ಅಭಿಮಾನಿಗಳಿಗೂ, ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರೀಕರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ತಿಳಿಸಿದ್ದಾರೆ.
ಸಮಾವೇಷದಲ್ಲಿ ಬೃಹತ್ ಅಡಿಕೆ ಹಾರವನ್ನು ಹಾಕಿದ ಕುಮಾರಸ್ವಾಮಿಯವರ ಅಭಿಮಾನಿಯಾದ ಅಂಬಳಿಕೆ ಮಹೇಂದ್ರ ಗೌಡರಿಗೆ ಅಭಿನಂದನೆಗಳು ಹಾಗೂ ಸಹಕರಿಸಿದ ಎಲ್ಲ ತೀರ್ಥಹಳ್ಳಿ ನಾಗರೀಕರಿಗೂ ಧನ್ಯವಾದಗಳನ್ನು ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಕುಣಜೆ ಪ್ರಭಾಕರ್, ಜಿಲ್ಲಾ ಜೆಡಿಎಸ್ ಮುಖಂಡರಾದ ನಟರಾಜ್ ಹೆಗಡೆ ಹೆದ್ದೂರು ಮತ್ತು ಯುವ ಜನತಾದಳದ ಅಧ್ಯಕ್ಷರಾದ ರಾಘವೇಂದ್ರ ತಲಬಿ ಹಾಗೂ ಪಕ್ಷದ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಂಚರತ್ನ ಯಾತ್ರೆಯಲ್ಲಿ ಹೊಡಿಯಾಲದ ಸಮೀಪ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ಅವರನ್ನು ಕುಮಾರಸ್ವಾಮಿಯವರು ಕರೆಯಿಸಿ ತೀರ್ಥಹಳ್ಳಿ ತಾಲೂಕು ಸಂಘಟನೆಯ ಬಗ್ಗೆ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಮತದಾರರಿದ್ದಾರೆ, ಆದರೆ ಆ ಮತಗಳನ್ನು ಕ್ರೂಢೀಕರಿಸುವ ಮತ್ತು ಮೂಲ ಜೆಡಿಎಸ್ ನವರನ್ನು ಉಗ್ಗೂಡಿಸುವ ಮತ್ತು ಜೆಡಿಎಸ್ ತೊರೆದಿರುವ ಹಳೆಯ ಮುಖಂಡರುಗಳನ್ನು ಮರಳಿ ಪಕ್ಷಕ್ಕೆ ಕರೆತರುವ ಹೊಣೆಯನ್ನು ಮತ್ತು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಬೇಕೆಂದು ಕರೆ ನೀಡಿದರು.

Categories
ರಾಜಕೀಯ

ಭಾಸ್ಕರ್ ರಾವ್ ಬಿಜೆಪಿಗೆ ಜಂಪ್..!

  • ಬೆಂಗಳೂರಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ
  • ಮಾ.4ರ ಕೇಜ್ರಿವಾಲ್ ಭೇಟಿ ನಡುವೆ ಮಹತ್ವದ ನಡೆ

NAMMUR EXPRESS NEWS
ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ತೊರೆದು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬುಧವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ಪ್ರಬಲ ಹಾಗೂ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ಭಾಸ್ಕರ್ ರಾವ್ ಅವರು ಬಿಜೆಪಿ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಅವರ ಬಿಜೆಪಿ ಸೇರ್ಪಡೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾರ್ಚ್ 4ಕ್ಕೆ ದಾವಣಗೆರೆಯಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ.
ಬಿಜೆಪಿ ಸೇರ್ಪಡೆಗೆ ಮುನ್ನ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ನಂತರ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರು ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದುಕೊಂಡರು. ಬಳಿಕ ಆಮ್​ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸೇರ್ಪಡೆ?

ನಳೀನ್ ಕುಮಾರ್ ಕಟೀಲ್ ಮಾತನಾಡಿ, ಭಾಸ್ಕರ್ ರಾವ್ ಅವರು ನಿವೃತ್ತಿ ನಂತರ ಆಪ್ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಧ್ಯ ಎಂದು ಪಕ್ಷಕ್ಕೆ ಬಂದಿದ್ದಾರೆ. ಇವತ್ತು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬೇರೆ ಬೇರೆ ನಾಯಕರು ಇನ್ನೂ ಬಿಜೆಪಿ ಸೇರಲು ರೆಡಿ ಆಗಿದ್ದಾರೆ. ಅವರ ಆಡಳಿತಾತ್ಮಕ ಅನುಭವ ಗಳನ್ನು ಪಾರ್ಟಿ ಸ್ವೀಕಾರ ಮಾಡುತ್ತದೆ. ಅವರು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟಿಲ್ಲ. ಅವರಿಗೆ ಪಕ್ಷದಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಬಸವನಗುಡಿಯೋ..? ಲೋಕ ಸಭೆಗೋ..?

ಭಾಸ್ಕರ್​ ರಾವ್​ ಅವರು ಬಸವನಗುಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.  ಈ ಹಿಂದೆ ಎಎಪಿಯಲ್ಲಿ ಇದ್ದಾಗಲೂ ಇದೇ ಕ್ಷೇತ್ರದಿಂದ ಸ್ಪರ್ಧೆಗೆ ತೀರ್ಮಾನಿಸಿದ್ದರು. ಬೆಂಗಳೂರಿನ ಬಸವನಗುಡಿ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರದಿಂದಲೇ ಭಾಸ್ಕರ್ ರಾವ್ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ಬಸವನಗುಡಿಯಲ್ಲಿ ಈಗಾಗಲೇ ಬಿಜೆಪಿಯ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಇರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆಗೆ ಬೆಂಗಳೂರಿನಿಂದ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

Categories
ರಾಜಕೀಯ

ಸರ್ಕಾರಿ ನೌಕರರ ಮುಷ್ಕರ ಸಕ್ಸಸ್!

  • ಶೇಕಡಾ 17ರಷ್ಟು ವೇತನಕ್ಕೆ ಗ್ರೀನ್ ಸಿಗ್ನಲ್
  • ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

NAMMUR EXPRESS NEWS
ಬೆಂಗಳೂರು: ಸರ್ಕಾರಿ ನೌಕರರ ಮುಷ್ಕರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಘೋಷಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸರ್ಕಾರಿ ನೌಕರರ ಜೊತೆ ಮಂಗಳವಾರ ತಡರಾತ್ರಿವರೆಗೂ ಸಿಎಂ ಸುದೀರ್ಘ ಸಭೆ ನಡೆಸಿದ್ದರು. ಬುಧವಾರ ಬೆಳಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದ್ದಾರೆ.
7ನೇ ವೇತನ ಆಯೋಗ ಶಿಪಾರಸ್ಸು ಅನ್ವಯ ಶೇ.17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಎನ್‌ಸಿಎಸ್ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ವರದಿ ಕೊಟ್ಟ ನಂತರ ಎನ್ ಪಿಎಸ್ ಜಾರಿ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತಂತೆ ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

Categories
ಶಿಕ್ಷಣ

ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ಸಾಧನೆ!

  • JEE B. Arch ನಲ್ಲಿ ಉತ್ತಮ ಸಾಧನೆ
  • ದೀಕ್ಷಾ, ಸಾತ್ವಿಕ್, ವರುಣ್ ಉತ್ತಮ ಫಲಿತಾಂಶ

NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ ತಿಂಗಳಿನಲ್ಲಿ ನ್ಯಾಷನಲ್‌ ಎಜೆನ್ಸಿ ನಡೆಸಿದ ಜಂಟಿ ಪ್ರವೇಶ
ಪರೀಕ್ಷೆ-ಮುಖ್ಯ (ಜೆಇಇ-ಮೈನ್) ‌2ಎ (ಆರ್ಕಿಟೆಕ್ಚರ್‌) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳಾದ ಕು. ದೀಕ್ಷಾ ಪಾಂಡು 95.8311 ಪರ್ಸಂಟೈಲ್‌, ಸಾತ್ವಿಕ್‌ ಕೆ ಭಟ್‌ 91.4659 ಪರ್ಸಂಟೈಲ್‌, ವರುಣ್‌ ಜಿ ನಾಯಕ್‌ 86.1552 ಪರ್ಸಂಟೈಲ್‌ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕ್ರಿಯೇಟಿವ್‌ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಸುಮಂತ
ದಾಮ್ಲೆ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.
ಕ್ರಿಯೇಟಿವ್‌ ಕಾಲೇಜಿನ ಪ್ರಥಮ ವರ್ಷದಲ್ಲಿಯೇ ಅತ್ಯುತ್ತಮ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.