Categories
ಉಡುಪಿ

ಉಡುಪಿಯಲ್ಲಿ ಕ್ರಿಯೇಟಿವ್‌ ಆವಿರ್ಭವ!

ಉಡುಪಿಯಲ್ಲಿ ಕ್ರಿಯೇಟಿವ್‌ ಆವಿರ್ಭವ!
– ಗಮನ ಸೆಳೆದ ಕಾಲೇಜು ವಾರ್ಷಿಕೋತ್ಸವ
– ವಿದ್ಯಾರ್ಥಿಗಳ ಸಾಧನೆಗೆ ವೇದಿಕೆ: ಸಾಂಸ್ಕೃತಿಕ ರಂಗು

NAMMUR EXPRESS NEWS
ಉಡುಪಿ: ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭ “ವಸುಧೈವ ಕುಟುಂಬಕಂ” ಎಂಬ ಕಲ್ಪನೆಯಲ್ಲಿ ಮೂಡಿಬಂದಿತು. ಸಮಾರಂಭದಲ್ಲಿ ಮಿಲಾಗ್ರಿಸ್‌ ಚರ್ಚ್‌ನ ಧರ್ಮಗುರುಗಳಾದ ವಲೇರಿಯನ್‌ ಮೆಂಡೊನ್ಸಾ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಜವಾಬ್ದಾರಿಯುತವಾದ ಒಂದು ಸಮುದಾಯವನ್ನು ನಿರ್ಮಾಣ ಮಾಡುವ ಕನಸು ಕಂಡು ಉತ್ತಮ ರೀತಿಯಿಂದ ಮುನ್ನಡೆಯುತ್ತಿದೆ. ಉಡುಪಿ ಪ್ರಾಂತ್ಯದಲ್ಲಿ ಕ್ರಿಯೇಟಿವ್‌ನ ಹೆಸರು ಇತ್ತೀಚೆಗೆ ಎಲ್ಲ ಕಡೆ ಕೇಳಲಾರಂಭಿಸಿದೆ. ಉನ್ನತವಾದ ಯಶಸ್ಸು ಕೀರ್ತಿ ಲಭಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಸಹ ಸಂಸ್ಥಾಪಕರಲ್ಲಿ ಓರ್ವರಾದ ಡಾ.
ಗಣನಾಥ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ವಿಶೇಷವಾದ ಬೆಳವಣಿಗೆಗಳಿಗೆ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲಿ ಎಂದು ಆಶಿಸಿದರು.

ಸಹ ಸಂಸ್ಥಾಪಕರಾದ ಅಶ್ವತ್‌ ಎಸ್. ಎಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಸ್ಥಾಪಕರಾದ ವಿದ್ವಾನ್‌ ಗಣಪತಿ ಭಟ್‌, ಅಮೃತ್‌ ರೈ, ಆದರ್ಶ ಎಂ.ಕೆ, ವಿಮಲ್‌ ರಾಜ್‌ ಜಿ, ಗಣಪತಿ ಕೆ.ಎಸ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅನೇಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಪ್ರಾಂಶುಪಾಲರಾದ ಸ್ಟಾನಿ ಲೋಬೋ ವಾರ್ಷಿಕ ವರದಿ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರ ಜೋಯೆಲ್‌ ಸ್ವಾಗತಿಸಿ. ಸೋನಾಲ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ಶಿಲ್ಪಾ ಕ್ರಾಸ್ತಾ ವಂದಿಸಿದರು.

Categories
ಮಾಹಿತಿ

ದ್ವಿತೀಯ ಪಿಯುಸಿ, 10ನೇ ತರಗತಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ದ್ವಿತೀಯ ಪಿಯುಸಿ, 10ನೇ ತರಗತಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ
– ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15ರವರೆಗೆ ಅವಕಾಶ
– 3 ತಿಂಗಳ ಮೊದಲೇ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

NAMMUR EXPRESS NEWS
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಮತ್ತು 10ನೇ ತರಗತಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೂರು ತಿಂಗಳ ಮುಂಚಿತವಾಗಿಯೇ 2023-24 ನೇ ಸಾಲಿನ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಮಾಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ 2, 2024ರಿಂದ ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 22,2024ರವರೆಗೂ ಪರೀಕ್ಷೆ ನಡೆಯಲಿದೆ. ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ. ಮಾರ್ಚ್ 25ರಿಂದ ಏಪ್ರಿಲ್ 6ರವರೆಗೂ ಎಸ್‌ಎಸ್ಎಲ್‌ಸಿ ಪರೀಕ್ಷೆ ನಡೆಯಲಿದೆ.

ಆಕ್ಷೇಪಣೆ ಸಲ್ಲಿಸಲು 15ರವರೆಗೆ ಅವಕಾಶ

ಮಂಡಲಿಯಿಂದ ಪ್ರಕಟಿಸಿರುವ ಎಸ್.ಎಸ್.ಎಲ್.ಸಿ.ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 15ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ
ಆಕ್ಷೇಪಣೆಯನ್ನು ಮಂಡಲಿಯ ಇಮೇಲ್ ವಿಳಾಸ: chairpersonkseab@gmail.comಕ್ಕೆ ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿಗೆ ನಿಗದಿತ ಸಮಯದೊಳಗಾಗಿ ಕಳುಹಿಸುವುದು. ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories
ಕಾರ್ಕಳ

ಬಡ ಮಕ್ಕಳಿಗಾಗಿ ಪಾದರಕ್ಷೆ ಅಭಿಯಾನ!

ಬಡ ಮಕ್ಕಳಿಗಾಗಿ ಪಾದರಕ್ಷೆ ಅಭಿಯಾನ!
– ಗ್ರೀನ್‌ ಸೋಲ್‌, ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಸಹಯೋಗ
– ಬೃಹತ್‌ ಪಾದರಕ್ಷೆ ಸಂಗ್ರಹ ಅಭಿಯಾನ

NAMMUR EXPRESS NEWS
ಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ ಮತ್ತು “ಗ್ರೀನ್‌ ಸೋಲ್”‌ ಸಂಸ್ಥೆಯ ಸಹಕಾರ ಹಾಗೂ ಸಾರ್ವಜನಿಕರಿಂದ ಬಳಸಿದ ಪಾದರಕ್ಷೆಗಳನ್ನು ಸಂಗ್ರಹಿಸಿ ಅದನ್ನು ಉನ್ನತ ತಂತ್ರಜ್ಞಾನದ ಮೂಲಕ ಮರುಬಳಕೆ ಮಾಡಿ ಶಾಲೆಯ ಬಡಮಕ್ಕಳಿಗೆ ಹಂಚುವ ವಿನೂತನ ಮತ್ತು ಮಾದರಿ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ಅತ್ಯಂತ ಬಡತನ ಹೊಂದಿದ ಶಾಲೆಯ ಮಕ್ಕಳಿಗೆ ಪಾದರಕ್ಷೆಯನ್ನು ಒದಗಿಸುವ ಅಭಿಯಾನ “ಗ್ರೀನ್‌ ಸೋಲ್”‌ ಎಂಬ ಸಂಸ್ಥೆಯೊಂದಿಗೆ ಸೇರಿ ನಡೆಸಲಾಗುತ್ತಿದೆ. ಅವಿನಾಶ್‌ ಕಾಮತ್‌ ಅವರ ಕನಸಿನ ಯೋಜನೆಗೆ
ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯೂ ಕೈ ಜೋಡಿಸಿದ್ದು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್‌ ಎಸ್. ಎಲ್‌ ಭಾಗಿಯಾಗಿದ್ದರು.

ಕಾರ್ಕಳದಿಂದ 1000 ಪಾದರಕ್ಷೆ ಹಸ್ತಾಂತರ

ಗ್ರಾಮೀಣ ಪ್ರದೇಶದ ಕನಿಷ್ಟ ಅವಶ್ಯಕತೆಗಳನ್ನೂ ಪೂರೈಸಿಕೊಳ್ಳಲಾಗದ ವಿದ್ಯಾರ್ಥಿಗಳಿಗೆ ಈ ಯೋಜನೆ ವರದಾನವಾಗಲಿದೆ. “ನಡಿಗೆ” ಯೋಜನೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಕಳ ಪರಿಸರದಿಂದ ಒಂದು ಸಾವಿರಕ್ಕೂ ಅಧಿಕ ಪಾದರಕ್ಷೆಗಳ ಜೊತೆಯನ್ನು “ಗ್ರೀನ್‌ ಸೋಲ್”‌ ಸಂಸ್ಥೆಗೆ ಹಸ್ತಾಂತರಿಸಲಾಯಿತು.

Categories
ಶಿವಮೊಗ್ಗ

ವಿಜಯೇಂದ್ರ ಭೇಟಿ ಮಾಡಿದ ತೀರ್ಥಹಳ್ಳಿ ಬಿಜೆಪಿ ಯುವ ಪಡೆ!

ವಿಜಯೇಂದ್ರ ಭೇಟಿ ಮಾಡಿದ ತೀರ್ಥಹಳ್ಳಿ ಬಿಜೆಪಿ ಯುವ ಪಡೆ!
– ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಅಭಿನಂದನೆ
– ಯುವ ನಾಯಕ ಕುಕ್ಕೆ ಪ್ರಶಾಂತ್ ನೇತೃತ್ವದ, ಬಿಜೆಪಿ ಯುವ ಪಡೆ
– ಬೇಗುವಳ್ಳಿ ಸತೀಶ್,ಚಂದವಳ್ಳಿ ಸೋಮಶೇಖರ್ ಉಪಸ್ಥಿತಿ

NAMMUR EXPRESS NEWS
ಶಿಕಾರಿಪುರ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದ ಬಿ.ವೈ.ವಿಜಯೇಂದ್ರ ಅವರನ್ನು ತೀರ್ಥಹಳ್ಳಿ ಬಿಜೆಪಿಯ ಮುಖಂಡರು, ಪದಾದಿಕಾರಿಗಳು,ಕಾರ್ಯಕರ್ತರು,ಅಭಿಮಾನಿಗಳು150ಕ್ಕೂ ಅಧಿಕ ಸಂಖ್ಯೆಯಲ್ಲಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿ ಅಭಿನಂದಿಸಿ ಶುಭ ಕೋರಿದರು.
ತೀರ್ಥಹಳ್ಳಿಯಿಂದ ಆಗಮಿಸಿದ್ದ ಯುವಪಡೆಯನ್ನು ತಮ್ಮ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಭೇಟಿಯಾದ ಬಿ.ವೈ.ವಿಜಯೇಂದ್ರ ಅವರು ತೀರ್ಥಹಳ್ಳಿ ಬಿಜೆಪಿ ಸಂಘಟನೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಆರಗ ಜ್ಞಾನೇಂದ್ರ ಅವರ ಜೊತೆ ತೀರ್ಥಹಳ್ಳಿ ಗೆ ಬಂದು ಸಂಘಟನಾತ್ಮಕವಾಗಿ ಹೆಚ್ಚಿನ ಸಮಯ ನೀಡುತ್ತೇನೆ. ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶುಭ ಹಾರೈಸಿದ ಯುವ ಮೋರ್ಚಾ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿ ಜೊತೆಗೂಡಿ ಸಂಘಟನೆಯನ್ನು ಕಟ್ಟೋಣ ಬಿಜೆಪಿಯನ್ನು ಬಲಪಡಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು

ಸಂಸದ, ಯುವ ನಾಯಕರಾದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾದಂತಹ ಸಮಯದಲ್ಲಿಯುವ ಪ್ರಮುಖರನ್ನು ಶ್ಲಾಘಿಸಿ ಮಾತನಾಡಿದ ಸಂಸದರಾದ ರಾಘವೇಂದ್ರ ಅವರು ತೀರ್ಥಹಳ್ಳಿಯ ಯುವ ಪಡೆಯನ್ನು ಉದ್ದೇಶಿಸಿ ಮುಂದಿನ ಚುನಾವಣೆಯಲ್ಲಿ ನರೇಂದ್ರಮೋದಿ ಅವರ ಕೈ ಬಲ ಪಡಿಸಿ ಅಧಿಕಾರಕ್ಕೆ ತರಲು ನಾವೆಲ್ಲ ಒಟ್ಟಾಗಿ ಸಂಘಟನೆಯನ್ನು ಕಟ್ಟೋಣ ಮತ್ತೊಮ್ಮೆ ವಿಜಯಶಾಲಿಗಳಾಗೋಣ ಎಂದು ಪ್ರೇರಣೆ ಮಾತುಗಳನ್ನಾಡಿದರು. ಪ್ರಮುಖರಾದ ಬೇಗುವಳ್ಳಿ ಸತೀಶ್,ಚಂದವಳ್ಳಿ ಸೋಮಶೇಖರ್ ಸೇರಿ ಹಲವರು ಇದ್ದರು.

ತೀರ್ಥಹಳ್ಳಿ ಸಂಘಟನೆಗೆ ಮೆಚ್ಚುಗೆ

ಶಿಕಾರಿಪುರದಲ್ಲಿ ಬಿಜೆಪಿ ತೀರ್ಥಹಳ್ಳಿಯ ಯುವ ಪಡೆಯನ್ನು ಕಂಡ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್,ಯಡಿಯೂರಪ್ಪ ನವರು ಉತ್ಸಾಹಿ ಯುವಕರನ್ನು ಕಂಡು ಹರ್ಷ ವ್ಯಕ್ತಪಡಿಸಿ, ಆಗಮಿಸಿದ್ದ ಎಲ್ಲರೊಂದಿಗೆ ಫೋಟೋ ತೆಗಿಸಿಕೊಂಡದ್ದು ವಿಶೇಷವಾಗಿತ್ತು ಈ ಸಂದರ್ಭದಲ್ಲಿ ತೀರ್ಥಹಳ್ಳಿ ಬಿಜೆಪಿಯ ಯುವ ಪ್ರಮುಖರು,ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳು ಬಿಜೆಪಿ ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Categories
ಬೆಂಗಳೂರು

ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸ್ ಅಲರ್ಟ್!

ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸ್ ಅಲರ್ಟ್!
– ಕ್ರಮಕ್ಕೆ ಅಧಿಕಾರಿಗಳಿಗೆ ಸಿಎಂ ಸೂಚನೆ: ಯಾರು ಬೆದರಿಕೆ ಹಾಕಿದ್ದು.. ಯಾಕೆ…?

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಶಾಲೆಗಳಿಗೆ ಬಂದಿರುವ ಬಂದಿರುವ ಬಾಂಬ್‌ ಬೆದರಿಕೆ ಈಗ ಭಾರೀ ಸದ್ದು ಮಾಡಿದೆ.
ಇದಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಘಟನೆಗೆ ಸಂಬಂಧಪಟ್ಟಂಥೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬಸವೇಶ್ವರ ನಗರದ ನ್ಯಾಷನಲ್, ವಿದ್ಯಾಶಿಲ್ಪ, ಎನ್ ಪಿಎಸ್, ಕಾರ್ಮೆಲ್, ಹೆಬ್ಬಗೋಡಿಯ ಎಬಿನೈಜರ್ ಸೇರಿದಂತೆ 15 ಶಾಲೆಗಳಿಗೆ ಬೆದರಿಕೆ ಸಂದೇಶ ಬಂದಿವೆ. ನಗರದ 15 ಶಾಲೆಗಳ ಆಡಳಿತ ಮಂಡಳಿಯ ಇ-ಮೇಲ್ ಗೆ ಬಾಂಬ್ ಇಡಲಾಗಿದೆ ಎಂದು ದುಷ್ಕರ್ಮಿಗಳು ಸಂದೇಶ ರವಾನಿಸಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದೆ. ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ಗೊತ್ತಾಗಿದೆ. ಕೂಡಲೇ ಆಡಳಿತ ಮಂಡಳಿಗಳು ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸುತ್ತಿದ್ದಾರೆ.

Categories
ತೀರ್ಥಹಳ್ಳಿ

ಡಿ.2ಕ್ಕೆ ಕರಿನೀರ ವೀರ ನಾಟಕ ಪ್ರದರ್ಶನ

ಡಿ.2ಕ್ಕೆ ಕರಿನೀರ ವೀರ ನಾಟಕ ಪ್ರದರ್ಶನ
– ತೀರ್ಥಹಳ್ಳಿಯ ಕಡಗೋಲು ವಿಚಾರ ಮಂಥನ ವೇದಿಕೆ ಆಯೋಜನೆ
– ಸಾವರ್ಕರ್ ಅವರ ಜೀವನ ಆಧಾರಿತ ನಾಟಕ

NAMMUR NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸಾವರ್ಕರ್ ಜೀವನ ಆಧಾರಿತ ಕರಿನೀರ ವೀರ ನಾಟಕ ಪ್ರದರ್ಶನ ಡಿ.2ಕ್ಕೆ ನಡೆಯಲಿದೆ.
ತೀರ್ಥಹಳ್ಳಿಯ ಕಡಗೋಲು ವಿಚಾರ ಮಂಥನ ವೇದಿಕೆ ಆಯೋಜನೆಯಲ್ಲಿ ಡಿ.12ರ ಶನಿವಾರ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ 6:00 ಗಂಟೆಗೆ ಸರಿಯಾಗಿ ದೇಶಭಕ್ತಿಯ ಸಾಕ್ಷಿಪ್ರಜ್ಞೆ ವೀರ ಸಾವರ್ಕರ್ ರವರ ಬದುಕಿನ ಕಥನ ಕರಿನೀರ ವೀರ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂದೇಶ ಜವಳಿ ತಿಳಿಸಿದ್ದಾರೆ.
ರಾಷ್ಟ್ರಸಮರ್ಪಿತವಾಗಿ ಬದುಕಿ,ಬ್ರಿಟಿಷರ ಅವ್ಯಾಹತ ಹಿಂಸೆಯನ್ನು ದಿಟ್ಟವಾಗಿ ಎದುರಿಸಿ ,ಅಂಡಮಾನ್ ಕಾರಾಗೃಹದಲ್ಲಿ ಅತ್ಯಂತ ಕ್ರೂರ ಕರಿ ನೀರಿನ ಶಿಕ್ಷೆ ಅನುಭವಿಸಿ, ಈ ದೇಶದ ಸ್ವಾತಂತ್ರ್ಯಕ್ಕೆ ಬಹು ದೊಡ್ಡ ಕೊಡುಗೆ ಸಲ್ಲಿಸಿದ ಸಾವರ್ಕರ್ ರವರ ಜೀವನ ದರ್ಶನವನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮೈಸೂರಿನ ಸಾವರ್ಕರ್ ಪೃತಿಷ್ಠಾನ ಈ ನಾಟಕವನ್ನು ಅಭಿನಯಿಸುತ್ತಿದೆ, ನಾಟಕದರಚನೆ, ವಿನ್ಯಾಸ ಮತ್ತು ನಿರ್ದೇಶನವನ್ನು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಶ್ರೀ ಅಡ್ಡಂಡ ಕಾರ್ಯಪ್ಪ ನಿರ್ವಹಿಸಿದ್ದಾರೆ.ಮೈಸೂರಿನ ಗಜಾನನ ನಾಯ್ಕ ಮತ್ತು ಸುಬ್ರಮಣ್ಯರವರ ಸಂಗೀತವಿರುವ ಈ ನಾಟಕಕ್ಕೆ ಶ್ರೀಮತಿ ಅನಿತಾ ಕಾರ್ಯಪ್ಪ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಕಾರ್ತಿಕ್ ಉಪಮನ್ಯು ಮತ್ತು ಮಂಜುನಾಥ್ ಶಿಲ್ಪಿಯವರ ರಂಗ ಸಹಕಾರವಿರುವ ಈ ನಾಟಕವನ್ನು ಮೈಸೂರಿನ ರಾಷ್ಟ್ರವಿಕಾಸ ಚಾರಿಟೇಬಲ್ ಟ್ರಸ್ಟ್ ನ ಸಹಕಾರದಲ್ಲಿ ಕರ್ನಾಟಕದ ಎಲ್ಲಾ ಭಾಗ ಗಳಲ್ಲಿ ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ನೀಡಲು ಸಾವರ್ಕರ್ ಪ್ರತಿಷ್ಠಾನ ಯೋಜನೆ ರೂಪಿಸಿದೆ.

ಸಾವರ್ಕರ್ ಕುರಿತಾದ ಮೊದಲ ಕನ್ನಡ ನಾಟಕ ಇದಾಗಿದ್ದೂ ರಂಗಾಸಕ್ತರು, ದೇಶಾಭಿಮಾನಿಗಳು, ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕ ವೀಕ್ಷಿಸಬೇಕೆಂದೂ, ನಾಟಕಕ್ಕೆ 100/- ರೂಗಳ ಪ್ರವೇಶ ನಿಗದಿಗೊಳಿಸಲಾಗಿದ್ದೂ ನಾಟಕದ ಮುನ್ನ ಯಾವುದೇ ಸಭಾ ಕಾರ್ಯಕ್ರಮವಿಲ್ಲದೇ ಸಮಯಕ್ಕೆ ಸರಿಯಾಗಿ ಪ್ರದರ್ಶನ ಪ್ರಾರಂಭವಾಗಲಿದೆ ಎಂದು ಆಯೋಜಕರ ಪರವಾಗಿ ಸಂದೇಶ್ ಜವಳಿ ವಿನಂತಿಸಿದ್ದಾರೆ

Categories
ಹವಾಮಾನ ಸುದ್ದಿ

ಇನ್ನೂ ಐದು ದಿನ ಭಾರೀ ಮಳೆ..!

ಇನ್ನೂ ಐದು ದಿನ ಭಾರೀ ಮಳೆ..!
– ಹವಮಾನ ಇಲಾಖೆ ಮುನ್ಸೂಚನೆ
– 17 ಜಿಲ್ಲೆಗಳಲ್ಲಿ ಮಳೆ ಅಲರ್ಟ್

NAMMUR EXPRESS NEWS
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಿಧಿಲಿ ಚಂಡಮಾರುತ ಬಳಿಕ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದೆ. ಆಗ್ನೆಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತವು ಗಂಟೆಗೆ 45 ರಿಂದ 80 ಕಿಲೋ ಮೀಟ‌ರ್ ವೇಗದಲ್ಲಿ ಬಂಗಾಳಕೊಲ್ಲಿ ಕರಾವಳಿ ಭಾಗಕ್ಕೆ ಬಂದಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Categories
ಮಾಹಿತಿ

ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಅವಕಾಶ!

ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಅವಕಾಶ!
– 733 ಹುದ್ದೆಗಳಿಗೆ ಅರ್ಜಿ ಆಹ್ವಾನ
– ಪಿಡಿಒ, ಎಸ್ ಡಿಎ ಕಾರ್ಯದರ್ಶಿ ಹುದ್ದೆಗಳ ನೇಮಕ

NAMMUR EXPRESS NEWS
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ವಿವಿಧ ವೃಂದಗಳ ನೇರ ನೇಮಕಾತಿ ಮೂಲಕ ಖಾಲಿ ಇರುವ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸನ್ನದ್ಧವಾಗಿದೆ. ರಾಜ್ಯದ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆ ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಹುದ್ದೆ ಭರ್ತಿಯಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ: ಒಟ್ಟು 733 ಹುದ್ದೆಗಳ ಭರ್ತಿಗೆ ಈಗಾಗಲೇ ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ)ದ ಮೂಲಕ ನೇಮಕಾತಿ ಅಧಿಸೂಚನೆ ಹೊರಡಿಸಲು ತಯಾರಿ ನಡೆದಿದೆ. ಈಗಾಗಲೇ ಕೆಪಿಎಸ್‌ಸಿ ಮೂಲಕ ಹುದ್ದೆ ಭರ್ತಿಗೆ ಆರ್‌ಡಿಪಿಆ‌ರ್ ಇಲಾಖೆಯಿಂದ ಪ್ರಸ್ತಾವನೆಯೂ ಸಲ್ಲಿಸಲಾಗಿದೆ. ಡಿಸೆಂಬ‌ರ್ ಮೊದಲ ವಾರ ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ.
ಈ ಹುದ್ದೆಗಳು ಭರ್ತಿ ಪ್ರಕ್ರಿಯೆ ಆರಂಭವಾದರೆ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಮಾತ್ರವಲ್ಲದೇ, ಹಾಲಿ ಇರುವ ಗ್ರಾಮ ಪಂಚಾಯತಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೂ ಆಶಾಭಾವನೆ ಮೂಡಲಿದೆ. ಏಕೆಂದರೆ ರಾಜ್ಯದ ಹಲವ ಗ್ರಾಮ ಪಂಚಾಯತಿಗಳಲ್ಲಿ ಒಬ್ಬ ಪಿಡಿಒಗೆ ಎರಡೂರು ಪಂಚಾಯಿತಿಗಳ ಪ್ರಭಾರ ನೀಡಲಾಗಿದ್ದು, ಕೆಲಸದ ಒತ್ತಡ ಹೆಚ್ಚಾಗಿದೆ. ಜೊತೆಗೆ ಉದ್ಯೋಗಾಕಾಂಕ್ಷಿಗಳ ವಯಸ್ಸಿನ ಮಿತಿಯೂ ಮೀರುತ್ತಿದೆ. ಹುದ್ದೆಗಳು ಭರ್ತಿಯಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ (ಆರ್‌ಡಿಪಿಆ‌ರ್) ಇಲಾಖೆಯಲ್ಲಿ ಪಿಡಿಒ 660, ಕಾರ್ಯದರ್ಶಿ (ಗ್ರೇಡ್ 1) 350, ಕಾರ್ಯದರ್ಶಿ (ಗ್ರೇಡ್ 2) 415 ಹುದ್ದೆಗಳು ಸೇರಿ ಒಟ್ಟು 1,425 ಹುದ್ದೆಗಳು ಖಾಲಿ ಇವೆ. ಈ ಪೈಕಿ ಇದೀಗ 733 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ನೇಮಕಾತಿ ನಡೆಯಲಿರುವ ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ ವಿವರ ಈ ಕೆಳಗಿನಂತಿದೆ:

ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) :

ಒಟ್ಟು 150 ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗುತ್ತಿದ್ದು; ಈ ಹುದ್ದೆಗಳಿಗೆ ಯಾವುದೇ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ಸ್‌ ಪದವಿ ಪರೀಕ್ಷೆ ಪಾಸ್ ಮಾಡಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಪರಿಗಣಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕಾರ್ಯದರ್ಶಿ ಗ್ರೇಡ್ 1: ಒಟ್ಟು 135 ಗ್ರೇಡ್ 1 ಕಾರ್ಯದರ್ಶಿ ಹುದ್ದೆಗಳ ನೇಮಕ ನಡೆಯಲಿದ್ದು; ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಾರ್ಯದರ್ಶಿ ಗ್ರೇಡ್ 2 : ಅದೇ ರೀತಿ ಒಟ್ಟು 343 ಗ್ರೇಡ್ 2 ಕಾರ್ಯದರ್ಶಿ ಹುದ್ದೆಗಳ ನೇಮಕ ನಡೆಯಲಿದ್ದು; ಈ ಹುದ್ದೆಗಳಿಗೂ ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ದ್ವಿತೀಯ ದರ್ಜೆ ಲೆಕ್ಕ ಸಹಾಯಕ : ಇನ್ನು ಒಟ್ಟು 105 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕ ನಡೆಯಲಿದ್ದು ಈ ಹುದ್ದೆಗಳಿಗೂ ಸಹ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಹೇಗೆ?: ಕೆಪಿಎಸ್‌ಸಿಯಿಂದ ಅಭಿವೃದ್ಧಿಪಡಿಸಿರುವ ಕೆಪಿಎಸ್‌ಸಿ-ಉದ್ಯೋಗ (ಇಂಟೆಗ್ರೇಟೆಡ್ ಪ್ರಿ ಎಕ್ಸಾಮಿನೇಷನ್ ಸಾಪ್ಟ‌ರ್) ಮೂಲಕ ಆನ್‌ಲೈನ್‌ನಲ್ಲಿ ಹೊಸ ಹುದ್ದೆಗಳ ನೇಮಕಾತಿಗಾಗಿ ಲೆವಲ್-1 ಮತ್ತು ಲೆವಲ್ -2 ಅಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಬಳಿಕ ಪ್ರಸ್ತಾವನೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಪ್ರಕ್ರಿಯೆ ನಡೆಯಲಿದೆ.

Categories
ಮಾಹಿತಿ

ನಿಮ್ಮ ಸಿಮ್ ಕಾರ್ಡ್ ಲಾಕ್ ಆಗಬಹುದು!

ನಿಮ್ಮ ಸಿಮ್ ಕಾರ್ಡ್ ಲಾಕ್ ಆಗಬಹುದು!
– ಕೇಂದ್ರ ಸರ್ಕಾರದಿಂದ ಮಹತ್ವದ ಕಾನೂನು
– ಬೇಕಾಬಿಟ್ಟಿ ಸಿಮ್ ಖರೀದಿ ಮಾಡಿದ್ರೆ ಶಿಕ್ಷೆ!

NAMMUR EXPRESS NEWS
ಹೆಚ್ಚುತ್ತಿರುವ ಸೈಬ‌ರ್ ವಂಚನೆ ಮತ್ತು ದೇಶ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೇಕಾಬಿಟ್ಟಿ ಸಿಮ್ ಖರೀದಿಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಮುಂದಾಗಿದ್ದು ಡಿ.1ರಿಂದ ಕಠಿಣ ನಿಯಮಗಳು ಜಾರಿಗೆ ಬರಲಿವೆ. ಹೊಸ ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದ್ದ ಡೀಲರ್‌ಗಳಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಡಿ.1ರಿಂದ ಸಿಮ್ ಮಾರಾಟದ ನಿಯಮಗಳಲ್ಲಿ ಬದಲಾವಣೆಯಾಗಲಿದೆ
ನಿಯಮಗಳು ಈ ಕೆಳಗಿನಂತಿದೆ.

*ಸಿಮ್‌ಗಳನ್ನು ಮಾರಾಟ ಮಾಡುವ ಎಲ್ಲ ಡೀಲರ್‌ಗಳು ಪರಿಶೀಲನೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಅಷ್ಟೇ ಅಲ್ಲದೆ
ಡೀಲರ್‌ಗಳು ಸಿಮ್ ಗಳನ್ನು ಮಾರಾಟ ಮಾಡಲು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ
*ಸಿಮ್ ಮಾರಾಟಗಾರರು ಮತ್ತು ಖರೀದಿದಾರರು ಇನ್ನು ಮುಂದೆ ಈ ನಿಯಮಗಳನ್ನು ಅನುಸರಿಸುವುದು ಅಗತ್ಯವಾಗಿದೆ.
*ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವವರು ಸಮಗ್ರ ಪರಿಶೀಲನೆಗೆ ಒಳಪಡುವ ಅಗತ್ಯವಿದೆ.
* ಪೊಲೀಸ್ ಪರಿಶೀಲನೆ ಜವಾಬ್ದಾರಿಯನ್ನು ಆಯಾ ಟೆಲಿಕಾಮ್ ಸಂಸ್ಥೆಗಳು ವಹಿಸಿಕೊಳ್ಳಬೇಕಿದೆ.
* ಸಿಮ್ ಮಾರಾಟ ಮಾಡಿದ ಕ್ಷಣವೇ ನೋಂದಣಿಯನ್ನೂ ಮಾಡಬೇಕಿದ್ದು ಈ ನಿಯಮ ಪಾಲನೆಯಲ್ಲಿ ವಿಫಲರಾದರೆ 10 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ
*ಸಿಮ್‌ ಕಾರ್ಡ್ ನಿಷ್ಕ್ರಿಯಗೊಂಡ ತಕ್ಷಣ ಅದೇ ನಂಬರ್ ಅನ್ನು ಬೇರೆ ಯಾರಿಗೋ ಹಂಚಿಕೆ ಮಾಡುವಂತಿಲ್ಲ.
* ಸಿಮ್ ನಿಷ್ಕ್ರಿಯಗೊಂಡ 90 ದಿನಗಳ ಒಳಗೆ ಅದೇ ವ್ಯಕ್ತಿ ಬೇಕಿದ್ದರೆ ನವೀಕರಣ ಮಾಡಿಕೊಳ್ಳುವ ಅವಕಾಶವಿದೆ. ಅವಧಿ ಮೀರಿದ ಬಳಿಕ ಬೇಕಿದ್ದರೆ ಮತ್ತದೇ ಸಂಖ್ಯೆಯ ಹಂಚಿಕೆಗೆ ಅವಕಾಶವಿದೆ.
*ನಿಯಮ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ. ಗಂಭೀರ ಪ್ರಕರಣವಾದಲ್ಲಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
*ಈ ನಿಯಮದ ಪ್ರಕಾರ ವ್ಯಾಪಾರಸ್ಥರು ಹಾಗೂ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನ ಚೀಟಿಯಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಲು ಅವಕಾಶವಿದೆ.