Categories
ತೀರ್ಥಹಳ್ಳಿ ರಾಜ್ಯ

ಹೊಸ ವರ್ಷಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಹೊಸ ಹೆಜ್ಜೆ

ಹೊಸ ವರ್ಷಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಹೊಸ ಹೆಜ್ಜೆ
– 2024ಕ್ಕೆ 9 ವರ್ಷಗಳ ಸುದೀರ್ಘ ಪಯಣ

ಹೊಸ ವರ್ಷದ ಸುಸಂದರ್ಭದಲ್ಲಿ ತಮ್ಮೆಲ್ಲರ, ಸಹಕಾರ, ಸಲಹೆ, ಮಾರ್ಗದರ್ಶನಕ್ಕೆ ಧನ್ಯವಾದಗಳು. ಕಳೆದ 8 ವರ್ಷದ ಕಲ್ಲು ಮುಳ್ಳಿನ ಹಾದಿಯಲ್ಲಿ ಎಂದೂ ಪತ್ರಿಕಾ ಧರ್ಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಿಮ್ಮಗಳ ಸಹಕಾರದಿಂದ ಮುನ್ನಡೆಸಿದ್ದೇವೆ. ಕರೋನಾ, ಆರ್ಥಿಕ ಸಂಕಷ್ಟದ ಹೊಡೆತದಲ್ಲೂ ದಿನ ನಿತ್ಯ ಸ್ಪಷ್ಟ, ನಿಸ್ಪಕ್ಷಪಾತ ಸುದ್ದಿ, ಮಾಹಿತಿ ಕೊಟ್ಟಿದ್ದೇವೆ. ನೊಂದವರು, ಹಳ್ಳಿ ಹಳ್ಳಿಯ ಕಷ್ಟದಲ್ಲಿರುವವರ ಜತೆ ನಿಂತಿದ್ದೇವೆ. ಸಾವಿರಾರು ಪ್ರತಿಭೆಗಳನ್ನು ಗುರುತಿಸಿದ್ದೇವೆ.. ಕಷ್ಟದ ಹಾದಿಯಲ್ಲೂ ಈವರೆಗೆ ಸುಮಾರು 400ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದೇವೆ.

ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮತ್ತಷ್ಟು ಹೊಸ ಪ್ರಯೋಗದೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದೇವೆ

ಪ್ರಾಮಾಣಿಕ ಪ್ರಯತ್ನಕ್ಕೆ ಗೆಲುವು ತಂದು ಕೊಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ…

ಸರ್ವರಿಗೂ ಹೊಸ ವರ್ಷದ ಶುಭಾಶಯಗಳು

ಸಂಪಾದಕರು
ನಮ್ಮೂರ್ ಎಕ್ಸ್ ಪ್ರೆಸ್
ಮಾಧ್ಯಮ

Categories
ಬೆಂಗಳೂರು

ಸರ್ಕಾರದ ಎಚ್ಚರಿಕೆಗೆ ಬಗ್ಗದ ಅತಿಥಿ ಉಪನ್ಯಾಸಕರು.!

ಸರ್ಕಾರದ ಎಚ್ಚರಿಕೆಗೆ ಬಗ್ಗದ ಅತಿಥಿ ಉಪನ್ಯಾಸಕರು.!
– ಬಜೆಟ್ ಘೋಷಣೆಯಂತೆ ಸೇವೆ ಕಾಯಂಗೆ ಪಟ್ಟು
– ಹೊಸ ವರ್ಷದಿಂದಲೇ ಬೆಂಗಳೂರಿಗೆ ಪಾದಯಾತ್ರೆ

NAMMUR EXPRESS NEWS
ಬೆಂಗಳೂರು: ಸರ್ಕಾರದ ಎಚ್ಚರಿಕೆಗೆ ಬಗ್ಗದ ಅತಿಥಿ ಉಪನ್ಯಾಸಕರು ಸೇವೆ ಕಾಯಂಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಹೊಸ ವರ್ಷದ ದಿನವೇ ತುಮಕೂರಿನಿಂದ ಅತಿಥಿ ಉಪನ್ಯಾಸಕರ ಪಾದಯಾತ್ರೆ ಆರಂಭವಾಗಿದ್ದು,ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸೇವೆ ಕಾಯಂಗಾಗಿ ಸೂಕ್ತ ಯೋಜನೆ ರೂಪಿಸುವುದಾಗಿ ಕಾಂಗ್ರೆಸ್‌ ಪಕ್ಷ ಕಳೆದ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದ್ದಾರೆ. ಸರ್ಕಾರದ ಪರ್ಯಾಯ ವ್ಯವಸ್ಥೆ ಬೆದರಿಕೆ ಅಸ್ತ್ರಕ್ಕೆ ಜಗ್ಗದೇ ರಾಜ್ಯ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘಟನೆಗಳಿಂದ ಸೇವೆ ಕಾಯಂಗೆ ಆಗ್ರಹಿಸಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ರಾಮೇಶ್ವರ ದೇವರ ಹೊರೆ ಕಾಣಿಕೆ ವಾಹನ ಬರುತ್ತೆ!

ರಾಮೇಶ್ವರ ದೇವರ ಹೊರೆ ಕಾಣಿಕೆ ವಾಹನ ಬರುತ್ತೆ!
– ದೇವಸ್ಥಾನದಿಂದ ಹೊರಟ ಹೊರೆ ಕಾಣಿಕೆ ವಾಹನಗಳು
– ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಹೊರೆ ಕಾಣಿಕೆ ಸಂಗ್ರಹ!

NAMMUR EXPRESS THIRTHALLI
ತೀರ್ಥಹಳ್ಳಿ: ಎಳ್ಳಮವಾಸ್ಯೆಯ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿಯು ಸಹ ಶ್ರೀ ರಾಮೇಶ್ವರ ದೇವಸ್ಥಾನದಿಂದ ಹೊರೆ ಕಾಣಿಕೆ ವಾಹನಗಳು, 01-01-2024 ರ ಬೆಳಿಗ್ಗೆ 9.30 ಕ್ಕೆ ಹೊರಟಿವೆ. ಹಸಿರು ಹೊರೆಕಾಣಿಕೆ ಸಂಗ್ರಹಿಸುವ ವಾಹನ ನಿಮ್ಮ ಗ್ರಾಮಕ್ಕೆ ಬಂದು ಹಸಿರು ಹೊರೆಕಾಣಿಕೆ ಸಂಗ್ರಹಿಸಲಿವೆ. ಪ್ರತಿ ಗ್ರಾಮಗಳಲ್ಲಿ ಕೇವಲ ಸ್ವಲ್ಪ ಸಮಯ ಮಾತ್ರ ನಿಲ್ಲಲಿರುವ ಹೊರೆ ಕಾಣಿಕೆ ವಾಹನದಲ್ಲಿ ಹಸಿರು ಹೊರೆಕಾಣಿಕೆಯಾದ ಅಕ್ಕಿ, ಬೆಲ್ಲ, ತೆಂಗಿನಕಾಯಿ, ದವಸಧಾನ್ಯ, ಅಡಿಕೆ, ತರಕಾರಿ ಇತ್ಯಾದಿ ಹಾಗು ಯಥಾನುಶಕ್ತಿ ಕಾಣಿಕೆಯನ್ನು ನೀಡುವುದರ ಮೂಲಕ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು, ಶ್ರೀ ರಾಮೇಶ್ವರ ದೇವಸ್ಥಾನದ ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದ ಮನವಿ ಮಾಡಿದೆ.

13 ವರ್ಷದಿಂದ ಅನ್ನ ದಾನ

ಕಳೆದ 13 ವರ್ಷಗಳಿಂದ ಅನ್ನ ಸಂತರ್ಪಣೆ ನಡೆಸಿಕೊಂಡು ಬರುತ್ತಿರುವ “ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದ”ವು ಪ್ರತಿವರ್ಷವು ಧ್ವಜಾರೋಹಣ ದಿನದಿಂದ ಜಾತ್ರೆಯ 3 ದಿನಗಳವರೆಗೆ ಅನ್ನಸಂತರ್ಪಣೆಯನ್ನು ಆಯೋಜಿಸುತ್ತಿದ್ದು ಅಂದಾಜು 55/60 ಸಾವಿರ ಜನ ಅನ್ನ ಪ್ರಸಾದ ಸ್ವೀಕರಿಸುತ್ತಾರೆ. ಅಂತೆಯೇ, ಇದುವರೆಗೆ ಹಸಿರು ಹೊರೆಕಾಣಿಕೆಯಲ್ಲಿ ಸಂಗ್ರಹವಾಗಿ ಉಳಿದ ಆದಾಯದಲ್ಲಿ ಸುಮಾರು ₹ 10.50 ಲಕ್ಷ ಮೌಲ್ಯದ ಎರಡು “ರಜತ ಪ್ರಭಾವಳಿ” ಉತ್ಸವ ಮೂರ್ತಿಗೆ ಒಂದು “ರಜತ ಪೀಠ”ವನ್ನ ಶ್ರೀ ರಾಮೇಶ್ವರ ದೇವರಿಗೆ ಸಮರ್ಪಿಸಲಾಗಿದೆ. ಈ ಅನ್ನಸಂತರ್ಪಣೆಗೆ ಹೊರೆಕಾಣಿಕೆಯೇ ಮುಖ್ಯವಾಗಿರುತ್ತದೆ, ಹೊರೆಕಾಣಿಕೆ ವಾಹನ ನಿಮ್ಮ ಊರು, ಗ್ರಾಮ, ಮನೆಬಾಗಿಲಿಗೆ ಬಂದಾಗ ಯಥಾನುಶಕ್ತಿ ಹಸಿರು ಹೊರೆಕಾಣಿಕೆ ನೀಡುವುದರ ಮೂಲಕ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗೋಣ ಎಂದು ಭಕ್ತ ಬಂಧುಗಳಲ್ಲಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

Categories
ರಾಜ್ಯ

ಹೊಸ ವರ್ಷ: ಸರಕಾರಿ, ಶಾಲಾ ರಜೆ ಯಾವುದು?

ಹೊಸ ವರ್ಷ: ಸರಕಾರಿ, ಶಾಲಾ ರಜೆ ಯಾವುದು?
– ಬ್ಯಾಂಕ್ ಎಷ್ಟು ದಿನ ರಜೆ ಇದೆ… ಇಲ್ಲಿದೆ ಮಾಹಿತಿ
– ಸಂಪೂರ್ಣ ರಜೆ ಪಟ್ಟಿ ಇಲ್ಲಿದೆ..!

NAMMUR EXPRESS NEWS
ಹೊಸ ವರ್ಷ ಆರಂಭಗೊಂಡಿದೆ. ಹೊಸ ವರ್ಷದ ಕ್ಯಾಲೆಂಡ‌ರ್ ಬದಲಾಗಿದೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಈ ವರ್ಷ ಎಷ್ಟು ದಿನಗಳ ಕಾಲ ರಜೆ ಇರಲಿದೆ. ಸರ್ಕಾರಿ ರಜೆ, ಶಾಲೆ ರಜೆ, ಬ್ಯಾಂಕ್ ರಜೆ ಮಾಹಿತಿ ಇಲ್ಲಿದೆ. ಹೊಸ ವರ್ಷದಲ್ಲಿ ಒಟ್ಟು 52 ಭಾನುವಾರಗಳು, 21 ಸಾಮಾನ್ಯ ರಜಾದಿನಗಳು, 15 ಸಾಂದರ್ಭಿಕ ರಜಾದಿನಗಳು ಮತ್ತು 2 ಸೀಮಿತ ರಜಾದಿನಗಳು, 5 ಸ್ಥಳೀಯ ರಜಾದಿನಗಳು ಒಟ್ಟು 95 ರಜಾದಿನಗಳು ಹಾಗೂ ವರ್ಷದಲ್ಲಿ 271 ಕೆಲಸದ ದಿನಗಳು ಮಾತ್ರ. ಬ್ಯಾಂಕ್ ಉದ್ಯೋಗಿಗಳ ರಜಾದಿನಗಳು : 2024 ಅಧಿಕ ವರ್ಷವಾಗಿದೆ ಆದ್ದರಿಂದ 366 ದಿನಗಳು ಇರಲಿದೆ. 52 ಭಾನುವಾರಗಳು, 24 ಎರಡನೇ ಮತ್ತು ನಾಲ್ಕನೇ ಶನಿವಾರಗಳು, 21 ಸಾರ್ವಜನಿಕ ರಜಾದಿನಗಳು, 12 ಉದ್ಯೋಗಿಗಳಿಗೆ ವೈಯಕ್ತಿಕ ರಜಾದಿನಗಳು ಸೇರಿದಂತೆ ಒಟ್ಟು 109 ರಜೆಗಳಿವೆ. ಕೆಲಸದ ದಿನಗಳು ಕೇವಲ 257. ಜನವರಿಯಲ್ಲಿ ಬ್ಯಾಂಕ್‌ ಉದ್ಯೋಗಿಗಳಿಗೆ 13, 14 ಮತ್ತು 15 ಮೂರು ದಿನಗಳ ಹ್ಯಾಟ್ರಿಕ್ ರಜೆ ಲಭ್ಯವಿದೆ.

ಫೆಬ್ರವರಿಯಲ್ಲಿ 29 ದಿನಗಳು ಇದ್ದರೂ, ಯಾವುದೇ ಸಾರ್ವಜನಿಕ ರಜೆ ಇಲ್ಲ. ಮಾರ್ಚ್‌ನಲ್ಲಿ 8,9,10 ದಿನಾಂಕಗಳು ಬ್ಯಾಂಕ್ ಉದ್ಯೋಗಿಗಳಿಗೆ ಮತ್ತೊಂದು ಹ್ಯಾಟ್ರಿಕ್ ರಜಾದಿನವಾಗಿದೆ. ಮಾರ್ಚ್ 29 ಗುಡ್ ಪ್ರೈಡೆ ರಜೆ ಮತ್ತು ಮಾರ್ಚ್ 30 ರಂದು ಶನಿವಾರ ಸೀಮಿತ ರಜೆಯಾಗಿದ್ದರೆ, ನೌಕರರು ಭಾನುವಾರ 31 ಸೇರಿದಂತೆ 3 ದಿನಗಳ ರಜೆ ಪಡೆಯಬಹುದು. ಏಪ್ರಿಲ್ 9 ರಂದು ಯುಗಾದಿ ಮತ್ತು 11 ರಂದು ರಂಜಾನ್. ಈ ನಡುವೆ, 10 ಮತ್ತು 12 ರಂದು ಸಾಂದರ್ಭಿಕ ರಜೆ, 13 ನೇ 2 ನೇ ಶನಿವಾರ 5 ದಿನಗಳ ದೀರ್ಘ ರಜೆ ಸೇರಿದಂತೆ ನೀಡಲಾಗುತ್ತದೆ. 14 ಮತ್ತು 21 ಭಾನುವಾರಗಳು ಕ್ರಮವಾಗಿ ಅಂಬೇಡ್ಕ‌ರ್ ಜಯಂತಿ ಮತ್ತು ಮಹಾವೀರ ಜಯಂತಿ ಆಗಿರುವುದರಿಂದ 2 ರಜೆಗಳು ಕಡಿಮೆ ಮತ್ತು 2 ಕೆಲಸದ ದಿನಗಳು ಹೆಚ್ಚು. ಜೂನ್‌ನಲ್ಲಿ, ಮುಸ್ಲಿಂ ನೌಕರರು 17 ರಂದು 1 ಕ್ಯಾಶುಯಲ್ ರಜೆ ತೆಗೆದುಕೊಂಡರೆ, ಅವರು 16, 17 ಮತ್ತು 18 ರಂದು ಮೂರು ದಿನ ರಜೆ ಪಡೆಯಬಹುದು.

ಸೆಪ್ಟೆಂಬರ್‌ನಲ್ಲಿ ಸ್ವರ್ಣಗೌರಿ ವ್ರತಕ್ಕೆ ಸೆಪ್ಟಂಬ‌ರ್ 6ರಂದು ಸೀಮಿತ ರಜೆ ನೀಡಲಾಗಿದ್ದು, ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ರಜೆ ಇದ್ದು, ಸೆಪ್ಟೆಂಬ‌ರ್ 8ನೇ ಭಾನುವಾರದವರೆಗೆ ರಜೆ ಇರುವುದರಿಂದ ಮಹಿಳಾ ನೌಕರರು 3 ದಿನಗಳ ಹಬ್ಬ ಆಚರಿಸಬಹುದು. ಸೆಪ್ಟಂಬರ್ 14, ಸೆಪ್ಟಂಬರ್ 15 ಮತ್ತು ಸೆಪ್ಟೆಂಬ‌ರ್16 ರಂದು ಬ್ಯಾಂಕ್ ಉದ್ಯೋಗಿಗಳಿಗೆ ಮತ್ತೊಂದು ಹ್ಯಾಟ್ರಿಕ್ ರಜೆ ಸಿಗಲಿದೆ.ಅಕ್ಟೋಬರ್‌ನಲ್ಲಿ 11, 12 ಮತ್ತು 13 ಸರಣಿ ರಜೆಗಳಿವೆ. ಅಕ್ಟೋಬರ್ 12 ಎರಡನೇ ಶನಿವಾರ ವಿಜಯದಶಮಿಯ ಸಾರ್ವತ್ರಿಕ ರಜೆ. ಅಕ್ಟೋಬ‌ರ್ 31 ನರಕ ಚತುರ್ದಶಿ, ನವೆಂಬರ್ 1 ರಾಜ್ಯೋತ್ಸವ, 2ನೇ ಬಲಿಪಾಡ್ಯಮಿ, 3ನೇ ಭಾನುವಾರ ರಜೆ.

2024 ರ ಸರಕಾರಿ ರಜಾದಿನಗಳ ಪಟ್ಟಿ:

ಜನವರಿ 15, ಸೋಮವಾರ- ಮಕರ ಸಂಕ್ರಾಂತಿ
ಜನವರಿ 26, ಶುಕ್ರವಾರ – ಗಣರಾಜ್ಯೋತ್ಸವ
ಮಾರ್ಚ್ 8, ಶುಕ್ರವಾರ- ಮಹಾ ಶಿವರಾತ್ರಿ
ಮಾರ್ಚ್ 29, ಶುಕ್ರವಾರ – ಶುಭ ಶುಕ್ರವಾರ
ಏಪ್ರಿಲ್ 9, ಮಂಗಳವಾರ-ಯುಗಾದಿ
ಏಪ್ರಿಲ್ 11, ಗುರುವಾರ- ರಂಜಾನ್‌
ಮೇ 1, ಬುಧವಾರ – ಕಾರ್ಮಿಕರ ದಿನ
ಮೇ 10, ಶುಕ್ರವಾರ- ಬಸವ ಜಯಂತಿ/ ಅಕ್ಷಯ ತೃತೀಯ
ಜೂನ್ 17, ಸೋಮವಾರ- ಬಕ್ರೀದ್
ಜುಲೈ 17, ಬುಧವಾರ- ಮೊಹರಂ ಕೊನೆಯ ದಿನ
ಆಗಸ್ಟ್ 15, ಗುರುವಾರ – ಸ್ವಾತಂತ್ರ್ಯ ದಿನ
ಸೆಪ್ಟೆಂಬರ್ 7, ಶನಿವಾರ- ವರಸಿಧಿ ವಿನಾಯಕ ವ್ರತ
ಸೆಪ್ಟೆಂಬರ್ 16, ಸೋಮವಾರ- ಈದ್ ಮಿಲಾದ್
ಅಕ್ಟೋಬರ್ 2, ಬುಧವಾರ- ಗಾಂಧಿ ಜಯಂತಿ/ ಮಹಾಲಯ ಅಮವಾಸ್ಯೆ
ಅಕ್ಟೋಬರ್ 11, ಶುಕ್ರವಾರ- ಮಹಾನವಮಿ/ ಆಯುಧಪೂಜೆ
ಅಕ್ಟೋಬರ್ 17, ಗುರುವಾರ- ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31, ಗುರುವಾರ- ನರಕ ಚತುರ್ದಶಿ
ನವೆಂಬರ್ 1, ಶುಕ್ರವಾರ- ಕನ್ನಡ ರಾಜ್ಯೋತ್ಸವ
ನವೆಂಬರ್ 2, ಶನಿವಾರ- ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 18, ಸೋಮವಾರ- ಕನಕದಾಸ ಜಯಂತಿ
ಡಿಸೆಂಬರ್ 25, ಬುಧವಾರ – ಕ್ರಿಸ್ಮಸ್.

Categories
ರಾಜ್ಯ ಸಿನಿಮಾ

ಕಾಟೇರ ಹೌಸ್‌ಫುಲ್.. ಹೌಸ್‌ಫುಲ್..!

ಕಾಟೇರ ಹೌಸ್‌ಫುಲ್.. ಹೌಸ್‌ಫುಲ್..!
– ತಮಿಳುನಾಡು, ಗೋವಾದಲ್ಲೂ ಕಾಟೇರನ ಕಿಚ್ಚು
– ಹಳ್ಳಿ, ರೈತರ ನೋವು ನಲಿವಿನ ಕಥೆಗೆ ಸಕ್ಕತ್ ರೆಸ್ಪಾನ್ಸ್
– 3ನೇ ದಿನಕ್ಕೆ 50 ಕೋಟಿ ಬಾಚುತ್ತಾ ಸಿನಿಮಾ

NAMMUR EXPRESS NEWS
ಹೊಸ ವರ್ಷಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರನಾಗಿ ಬಂದು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಿ ಸಂಚಲನ ಸೃಷ್ಟಿಸಿದೆ. ಕೊಟಿ ಕೋಟಿ ಕೊಳ್ಳೆ ಹೊಡೆದು ಹುಬ್ಬೇರಿಸಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿದೆ. ಹೊಸ ವರ್ಷ ಹಿನ್ನೆಲೆ ಜನ ಸಿನಿಮಾ ಮಂದಿರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕರ್ನಾಟಕದ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಕೆಲವೆಡೆ ಸಿನಿಮಾ ಬಿಡುಗಡೆಯಾಗಿದೆ. ಈ ವರ್ಷ ಕನ್ನಡ ಚಿತ್ರರಂಗ ಪ್ರೇಕ್ಷಕರ ಬರ ಎದುರಿಸುತ್ತಿತ್ತು. ‘ಕಾಟೇರ’ ಸಿನಿಮಾ ಬಂದು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಥಿಯೇಟರ್‌ಗೆ ಬರುವಂತಾಗಿದೆ. ಸೆಕೆಂಡ್ ಶೋಗಳು ಕೂಡ ಹೌಸ್‌ಫುಲ್ ಆಗುತ್ತಿದೆ. ತರುಣ್ ಟೇಕಿಂಗ್, ದರ್ಶನ್ ಪರ್ಫಾರ್ಮನ್ಸ್, ಡೈಲಾಗ್ಸ್ ಎಲ್ಲವೂ ಸಿನಿಮಾ ಸಿನಿಮಾ ತೆರೆಮೇಲೆ ಜಾದೂ ಮಾಡಿದೆ. 3 ಗಂಟೆಯ ಸುದೀರ್ಘ ಚಿತ್ರವನ್ನು ಕೂಡ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.

70ರ ಕಾಲಘಟ್ಟದ ಕಥೆ, ಉಳುವವನೆ ಭೂಮಿಕ ಒಡೆಯ ಕಾಯ್ದೆ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟದ ಕಥೆ ಪ್ರೇಕ್ಷಕರ ಮನಗೆದ್ದಿದೆ. ದರ್ಶನ್ ಇತ್ತೀಚೆಗೆ ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಒಂದೊಳ್ಳೆ ಸಂದೇಶ ಇರುವ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ‘ಯಜಮಾನ’ ಚಿತ್ರದಲ್ಲಿ ಎಣ್ಣೆ ಗಾಣ, ‘ಕ್ರಾಂತಿ’ ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಕಥೆ ಇತ್ತು. ‘ಕಾಟೇರ’ ಚಿತ್ರದಲ್ಲಿ ಹಳ್ಳಿಗಳ, ರೈತರ ನೋವು ನಲಿವಿನ ಕಥೆ ಇದೆ. ಉಳ್ಳವರ, ಇಲ್ಲದವರ ನಡುವಿನ ಸಂಘರ್ಷವಿದೆ. ‘ಕಾಟೇರ’ ಸಿನಿಮಾ ಎಲ್ಲಾ ವಿಭಾಗಗಳಲ್ಲೂ ಬೆಸ್ಟ್‌ ಎನಿಸಿಕೊಂಡಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನ‌ರ್ ಸಿನಿಮಾ ಆಗಿ ರೂಪುಗೊಂಡಿದೆ. ಅದೇ ಕಾರಣಕ್ಕೆ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಿಂದಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎರಡು ದಿನಕ್ಕೆ ಸಿನಿಮಾ 37 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. 3ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

Categories
ಬೆಂಗಳೂರು ರಾಜ್ಯ

2024ಕ್ಕೆ ಅದ್ದೂರಿ ಸ್ವಾಗತ…!

2024ಕ್ಕೆ ಅದ್ದೂರಿ ಸ್ವಾಗತ…!
– ಎಲ್ಲೆಡೆ ಸಂಭ್ರಮ: ಶುಭಾಶಯಗಳ ವಿನಿಮಯ
– ರೆಸಾರ್ಟ್ ಮತ್ತು ರೆಸ್ಟೋರೆಂಟ್ ಗಳು ಫುಲ್!
– ಪಬ್ ಮತ್ತು ಬಾರ್ ಗಳು ಫುಲ್ ಬ್ಯುಸಿ!

NAMMUR EXPRESS NEWS
ಬೆಂಗಳೂರು: ಇಡೀ ವಿಶ್ವವೇ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿದೆ. 2024ಕ್ಕೆ ಎಲ್ಲಡೆಯೂ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಪ್ರತಿ ರಸ್ತೆಗಳು, ಕ್ಲಬ್, ಪಬ್, ಬಾರ್, ರೆಸ್ಟೋರೆಂಟ್, ರೆಸಾರ್ಟ್ ಮತ್ತು ಪ್ರವಾಸಿ ತಾಣಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು. ಎಲ್ಲೆಡೆಯೂ ಝಗಮಗ ಬೆಳಕಿನ ನಡುವೆ, ಸಂಗೀತ, ನೃತ್ಯ, ತಿಂಡಿ ತಿನಿಸುಗಳೊಂದಿಗೆ ಮದ್ಯಪಾನವೂ ಜೋರಾಗಿತ್ತು. ಮಧ್ಯ ರಾತ್ರಿಯ ಹೊಸ ವರ್ಷದ ಆಹ್ವಾನ ಕಣ್ ಕುಕ್ಕುವಂತಿದ್ದು ಜನರ ಸಂಭ್ರಮ ಮಿತಿ ಮೀರಿದ್ದು ಇಡೀ ದೇಶದಾದ್ಯಂತ ಕಂಡು ಬಂದ ದೃಶ್ಯವಾಗಿತ್ತು. ಮುಖ್ಯ ರಸ್ತೆಗಳಲ್ಲಿ, ಕಮರ್ಷಿಯಲ್ ಏರಿಯಾಗಳಲ್ಲಿ ಪೋಲೀಸರ ರೌಂಡ್ ಗಳೂ ಜೋರಾಗಿದ್ದು ಮಧ್ಯರಾತ್ರಿಯ ನಂತರ ಸದ್ದು ಗದ್ದಲ, ಗಲಾಟೆ ಮತ್ತು ಅಹಿತಕರ ಘಟನೆಗಳಾಗದ ಹಾಗೆ ತಡೆಯುವಲ್ಲಿ ಸಫಲರಾಗಿದ್ದಾರೆ. ಅಲ್ಲಲ್ಲಿ ಪಾನಮತ್ತ ಜನರ ರಂಪಾಟಗಳು ಕಂಡುಬಂದಿದ್ದು, ಅವರನ್ನು ರಕ್ಷಿಸುವಲ್ಲಿ, ನೂಕು ನುಗ್ಗಲು ತಡೆದು ಕ್ಷೇಮವಾಗಿ ಮನೆ ತಲುಪಿಸುವ ನಿಟ್ಟಿನಲ್ಲಿ ನಗರದಾದ್ಯಂತ ಪೋಲೀಸರು ಹರಸಾಹಸ ಮಾಡಿದ್ದಾರೆ.

ಜನಜಂಗುಳಿ ನಿವಾರಿಸುವ ಸಲುವಾಗಿ ಲಘು ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು. ಈ ಮಧ್ಯೆಯೂ ಹೊಸ ವರ್ಷದ ಸಂಭ್ರಮ ಎಲ್ಲೆಡೆಯೂ ಮನೆಮಾಡಿತ್ತು. ಹೊಸ ವರ್ಷ ವಾರಾಂತ್ಯದಲ್ಲಿ ಬಂದಿರುವುದು ಅನುಕೂಲ ಮತ್ತು ಇನ್ನಷ್ಟು ಮೆರುಗು ತಂದಿದೆ. ರಾಜ್ಯದ ಎಲ್ಲಾ ಹೋಮ್ ಸ್ಟೇ, ರೆಸಾರ್ಟ್ ಗಳು, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್ ಗಳು ಫುಲ್ ಬ್ಯುಸಿಯಾಗಿದ್ದು, ಮ್ಯೂಸಿಕ್ ಡ್ಯಾನ್ಸ್ ಮತ್ತು ಅನ್ ಲಿಮಿಟೆಡ್ ಫುಡ್, ಡ್ರಿಂಕ್, ಡಿಜೆ ಮತ್ತು ಫನ್ ಜೊತೆಗೆ ಭರ್ಜರಿಯಾಗಿ ನಡೆಯಿತು. ಡಿಸೆಂಬರ್. 31 ರ ಅರ್ಧರಾತ್ರಿಯ ಚುಮು ಚುಮು ಚಳಿಯಲ್ಲಿ ಹೊಸವರ್ಷದ ಸಂಭ್ರಮವನ್ನು ಗದ್ದೆ ಬಯಲಿನಲ್ಲಿಯೂ ಆಚರಿಸಿದ್ದು ಮಲೆನಾಡಿನ ವಿಶೇಷವಾಗಿದೆ.