Categories
ರಾಜ್ಯ ಶಿಕ್ಷಣ

ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಸಿಗಲಿದೆ ಬಿಸಿಯೂಟ

ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಸಿಗಲಿದೆ ಬಿಸಿಯೂಟ
– 223 ಬರಪೀಡಿತ ತಾಲೂಕುಗಳಲ್ಲಿ ವ್ಯವಸ್ಥೆ
– ಸರ್ಕಾರದಿಂದ 80 ಕೋಟಿ ರೂ.ಅನುದಾನ ಕೋರಿದ ಸಾರ್ವಜನಿಕ ಶಿಕ್ಷಣ ಇಲಾಖೆ

NAMMUR EXPRESS NEWS
ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿರುವ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಇದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ವೇಳೆಗೆ ಶಾಲೆಗೆ ಹೋಗಿ ಊಟ ಮಾಡಿ ಮನೆಗೆ ವಾಪಸಾಗಬಹುದು. ಜೊತೆಗೆ ಬೇಸಿಗೆ ರಜೆಯಲ್ಲಿ ವಲಸೆ ಹೋಗುವ, ಬಂಧುಗಳ ಮನೆಗೆ ಹೋಗುವ ಮಕ್ಕಳು ಸಹ ಪಕ್ಕದ ಶಾಲೆಗೆ ಹೋಗಿ ಬಿಸಿಯೂಟ ಮಾಡಬಹುದು. ರಾಜ್ಯ ಸರಕಾರ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಇಲ್ಲಿರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬೇಸಿಗೆ ರಜೆಯಲ್ಲೂ ಎಂದಿನಂತೆ ಮಧ್ಯಾಹ್ನ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಕೇಂದ್ರ ಸರಕಾರಕ್ಕೆ 80 ಕೋಟಿ ರೂ.ಅನುದಾನ ಕೋರಿ ಶಿಕ್ಷಣ ಇಲಾಖೆಯ ಮಧ್ಯಾಹ್ನ ಬಿಸಿಯೂಟ ಉಪಾಹಾರ ಯೋಜನೆ ವಿಭಾಗವು ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇದಕ್ಕೆ ಅನುಮೋದನೆ ದೊರೆತಿಲ್ಲ. ಬರ ಪರಿಸ್ಥಿತಿ ಇರುವುದರಿಂದ ಅನುದಾನ ಬಿಡುಗಡೆ ಮಾಡುವ ನಂಬಿಕೆಯನ್ನು ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ. ಈ ಹಿಂದೆ ಕೋವಿಡ್‌ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಆಹಾರ ಬಡಿಸುವ ಬದಲು ಆಹಾರ ಧಾನ್ಯಗಳನ್ನು ಮಕ್ಕಳಿಗೆ ನೀಡಲಾಗಿತ್ತು. ಆ ವೇಳೆಯಲ್ಲೂ ಕೇಂದ್ರ ಸರಕಾರ ಅನುದಾನ ನೀಡಿತ್ತು. ಈ ಬಾರಿ ಕೂಡ ಅನುದಾನ ನೀಡುವ ನಿರೀಕ್ಷೆಯಿದೆ. ಈ ಯೋಜನೆಯು ಕೇಂದ್ರದ ಶೇ.60 ಮತ್ತು ರಾಜ್ಯ ಸರಕಾರದ ಶೇ.40 ಅನುದಾನದಲ್ಲಿ ನಡೆಯಲಿದೆ.

– ಏ.14 ನಂತರ ಒಟ್ಟು 41 ದಿನ

ಶಿಕ್ಷಣ ಇಲಾಖೆಯ 2024ರ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ರಾಜ್ಯದಲ್ಲಿಏ.14 ಪ್ರಸಕ್ತ ಶೈಕ್ಷಣಿಕ ಸಾಲಿನ ಕೊನೆಯ ಕೆಲಸದ ದಿನ ಎಂದು ನಿರ್ಧಾರ ಮಾಡಿದೆ. ಆ ನಂತರವೇ ಬೇಸಿಗೆ ರಜೆ ಆರಂಭವಾಗಲಿದ್ದು, ಮೇ 28ರವರೆಗೆ ಇರಲಿದೆ. ಈ ಅವಧಿಯಲ್ಲಿ ಸಾರ್ವತ್ರಿಕ ರಜೆಯನ್ನು ಕಳೆದು ಒಟ್ಟಾರೆ 41 ಶೈಕ್ಷಣಿಕ ದಿನಗಳನ್ನು ಲೆಕ್ಕ ಹಾಕಿ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

– ಹಾಲು ಇರುವುದಿಲ್ಲ

ಮಧ್ಯಾಹ್ನ ಬಿಸಿಯೂಟದ ಜತೆಗೆ ಕ್ಷೀರಭಾಗ್ಯ ಇರುವುದಿಲ್ಲ. ಮಕ್ಕಳಿಗೆ ಬೆಳಗ್ಗೆ ಸಮಯದಲ್ಲಿ ವಾರದಲ್ಲಿ 5 ದಿನ ಹಾಲು ಕಾಯಿಸಿ ನೀಡಬೇಕಾಗಿರುವುದರಿಂದ ಮಧ್ಯಾಹ್ನದ ಅಡುಗೆ ಸಹಾಯಕರಿಗೆ ಕಷ್ಟವಾಗಲಿದೆ. ಅಲ್ಲದೆ, ಆ ವೇಳೆಗೆ ಶಾಲಾ ಮಕ್ಕಳು ಆಗಮಿಸುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಕ್ಷೀರಭಾಗ್ಯವನ್ನು ನಿಲ್ಲಿಸಲಾಗಿದೆ. ಶೇ.40ರಷ್ಟು ಮಕ್ಕಳು ರಾಜ್ಯದಲ್ಲಿ 47 ಸಾವಿರ ಸರಕಾರಿ ಮತ್ತು 6,485 ಅನುದಾನಿತ ಶಾಲೆಗಳಿದ್ದು, ಇದರಲ್ಲಿ 55.57 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಶೇ.40ರಷ್ಟು ಮಕ್ಕಳು ಮಧ್ಯಾಹ್ನದ ಬಿಸಿಯೂಟದ ಯೋಜನೆ ಫಲಾನುಭವಿಗಳಾಗುವ ನಿರೀಕ್ಷೆ ಇದೆ.

ಬೇಸಿಗೆ ಕಾರಣಕ್ಕೆ ವಿದ್ಯಾರ್ಥಿಗಳು ಅಜ್ಜಿಮನೆ, ಬಂಧುಗಳ ಮನೆ ನೆಪದಲ್ಲಿ ಹೊರ ಜಿಲ್ಲೆಗಳಿಗೆ ಹೋಗುವ ಸಾಧ್ಯತೆ ಇದೆ. ಈ ರೀತಿ ವಲಸೆ ಕೊಡಗು, ಕಲಬುರಗಿ ಮತ್ತು ಯಾದಗಿರಿ ಭಾಗದಲ್ಲಿ ಹೆಚ್ಚಾಗಿದೆ. ಇಂಥವರೂ ಕೂಡ ಹತ್ತಿರದ ಶಾಲೆಗಳಿಗೆ ಹೋಗಿ ಊಟ ಮಾಡಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು.

Categories
ರಾಜ್ಯ ರಾಷ್ಟ್ರೀಯ ವಾರ್ತೆ

ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು!?

ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು!?
– ಆರ್‌ಬಿಐ ಕೊಟ್ಟ ಸೂಚನೆ ಏನು?

NAMMUR EXPRESS NEWS
ನವದೆಹಲಿ: 100 ರೂ ಹಳೆ ನೋಟುಗಳು ಬ್ಯಾನ್ ಆಗಲಿದೆ, ಹೀಗಾಗಿ ಆದಷ್ಟು ಬೇಗ ಬ್ಯಾಂಕ್ಗಳಿಗೆ ನಿಮ್ಮ ಬಳಿ ಇರುವ ಹಳೆ ನೋಟುಗಳನ್ನ ವಾಪಸ್ ಮಾಡಿ ಹೊಸ ನೋಟುಗಳನ್ನ ಪಡೆದುಕೊಳ್ಳಿ ಎಂಬ ಸಂದೇಶ ಒಂದು ವಾಟ್ಸಾಪ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಜನರನ್ನ ಗೊಂದಲಕ್ಕೀಡು ಮಾಡಿದೆ. ಇದು ನಿಜವೋ ಸುಳ್ಳೋ ಅಂತ ತಿಳಿಯದೇ ಕೆಲವರು ಬ್ಯಾಂಕ್ ಗೆ ಭೇಟಿ ಕೊಟ್ಟವರು ಬಹಳ ಮಂದಿ ಇದ್ದಾರೆ. ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ 2000 /- ಮುಖಬೆಲೆಯ ನೋಟುಗಳನ್ನ ಬ್ಯಾಂಕ್ ಗೆ ಹಿಂದಿರುಗಿಸಿ ಬದಲಿ ಹಣ ಪಡೆದುಕೊಳ್ಳಲು ಸೂಚಿಸಿತ್ತು. ಈ ಹಿಂದೆ 2017ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳನ್ನ ಅಮ್ಮನ್ನೀಕರಣಗೊಳಿಸಿ ಆದೇಶ ಹೊರಡಿಸಿತ್ತು. ಆ ಸಂದರ್ಭದಲ್ಲಿ ಇದಕ್ಕೆ ಪರ್ಯಾಯವಾಗಿ 100,200 ಮತ್ತು 500 ಹಾಗೂ ಸಾವಿರ ಮುಖಬೆಲೆಯ ಹೊಸ ನೋಟುಗಳನ್ನ ಜಾರಿಗೊಳಿಸಿತ್ತು. ತದನಂತರ 6 ವರ್ಷಗಳ ಬಳಿಕ ಮತ್ತೆ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ 1000 ರೂಪಾಯಿ ನೋಟುಗಳನ್ನ ಬನ್ ಮಾಡಿತ್ತು.

ಇದೀಗ ಅದೇ ರೀತಿ ಮತ್ತೆ 100 ರೂಪಾಯಿ ಹಳೆ ನೋಟುಗಳು ಬ್ಯಾನ್ ಆಗಿಲಿದೆ ಎಂಬ ಸುದ್ದಿ ಹರಿದಾಡ್ತಿದೆ. ಆದ್ರೆ ಇದು ನಿಜವಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.ನೂರು ರೂಪಾಯಿ ಹಳೆ ನೋಟ್‌ ಬ್ಯಾನ್ ಆಗೋದಿಲ್ಲ! ನೂರು ರೂಪಾಯಿ ಮುಖ ಬೆಲೆಯ ಹಳೆನೋಟು ಅಮಾನ್ಯ ಎಂಬ ಸುದ್ದಿ ಹರಿದಾಡಿದ್ದು, ಕೊನೆಗೂ ಈ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡಿದೆ. ಹಾಗಾಗಿ ಜನರಿಗೂ ಕೂಡ ಈ ವಿಚಾರದ ಬಗ್ಗೆ ಗೊಂದಲಗೊಳ್ಳದಂತೆ ಸೂಚನೆ ಸಿಕ್ಕಿದೆ. ನೂರರ ಮುಖಬೆಲೆ ನೋಟು ಮಾರ್ಚ್ 31ರ ವರೆಗೆ ಮಾತ್ರ ಬಳಸಬಹುದು ಆ ನಂತರ ಮತ್ತೆ ಬಳಸಬಾರದು ಎಂದು ಸುಳ್ ಸುದ್ದಿ ಹಬ್ಬಿಸಲಾಗಿತ್ತು. ಹೀಗಾಗಿ ಜನರು ತಮ್ಮ ಹಳೆ ನೂರು ರೂಪಾಯಿ ನೋಟು ಹಿಂದಕ್ಕೆ ಹಿಂದಿರುಗಿಸಲು ಬ್ಯಾಂಕಿನ ಮೊರೆ ಹೋಗುವ ಅಗತ್ಯ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಆ ಮೂಲಕ ನೂರು ರೂಪಾಯಿಯ ಹೊಸ ಮತ್ತು ಹಳೆಯ ಎರಡು ನೋಟುಗಳೂ ಕೂಡ ಚಾಲ್ತಿಯಲ್ಲಿ ಇರಲಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಇನ್ನು ಮುಂದೆ ಈ ರೀತಿಯ ಸುದ್ದಿಗಳು ನಿಮ್ಮನ್ನ ತಲುಪಿದರೆ ಗಾಬರಿಯಾಗದೆ, ಸರಿಯಾದ ಮಾಹಿತಿಯನ್ನು ಪಡೆದುಕೊಂಡ ನಂತರವಷ್ಟೇ ಮುಂದುವರೆಯಬೇಕು. ಹಾಗೇನಾದ್ರೂ ಮತ್ತೆ ಯಾವುದಾದ್ರೂ ನೋಟ್ ಬ್ಯಾನ್ ಆದಲ್ಲಿ ಬ್ಯಾಂಕ್ ಅದರ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಮತ್ತು ನೋಟುಗಳ ಎಂಜ್ ಮಾಡಿಕೊಳ್ಳಲು ಸಾಕಷ್ಟು ಕಾಲವಕಾಶವನ್ನೂ ನೀಡಲಿದೆ.

Categories
ತೀರ್ಥಹಳ್ಳಿ ಮಲ್ನಾಡ್ ರಾಜ್ಯ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ ಮತ ಬಹಿಷ್ಕಾರ ಅಭಿಯಾನ.!

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ ಮತ ಬಹಿಷ್ಕಾರ ಅಭಿಯಾನ.!
– ನಾನು ಮತ ನೀಡುವುದಿಲ್ಲ ಎಂಬ ಸ್ವಯಂ ಘೋಷಣ ಪತ್ರಕ್ಕೆ ಸಹಿ
– ಇದು ಅಂತ್ಯವಲ್ಲ ಆರಂಭ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಉದ್ದೇಶಿತ ಜಲ ಜೀವನ್ ಮಿಷನ್ ಅಡಿಯಲ್ಲಿ ಅವೈಜ್ಞಾನಿಕ ಕೇಂದ್ರೀಕೃತ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಜಾರಿಯನ್ನು ವಿರೋಧಿಸಿ ರೈತರು ಹಾಗೂ ಸಾರ್ವಜನಿಕರು ಕಳೆದ ಎಂಟು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಳೆದ ಫೆಬ್ರುವರಿ 26 ರಂದು ಈ ಯೋಜನೆಯ ಕಾಮಗಾರಿ ನಡೆಸಲು ಶಸ್ತ್ರ ಸಜ್ಜಿತ ಪೋಲೀಸರನ್ನು ನೇಮಿಸಿ ಸ್ಥಳೀಯ ಜನರ ದಿನ ನಿತ್ಯದ ಚಟುವಟಿಕೆಗಳಿಗೂ ಅವಕಾಶ ಕೊಡದೆ ಸರ್ಕಾರ ದಬ್ಬಾಳಿಕೆ ನಡೆಸಿದೆ. ಇದನ್ನು ವಿರೋಧಿಸಿ ಆ ಕ್ಷಣದಿಂದಲೇ ಸ್ಥಳೀಯ ಜನತೆ ಅಲ್ಲಿಯೇ ಧರಣಿ ಸತ್ಯಾಗ್ರಹ ಆರಂಭಿಸಿದ್ದು ಇಂದಿಗೆ ಒಂದು ತಿಂಗಳಾದರೂ ಸರ್ಕಾರ ಮತ್ತು ಆಡಳಿತ ಯಂತ್ರ ಚಳುವಳಿಯನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದರೂ ಸತ್ಯಾಗ್ರಹ ನಿಂತಿರಲಿಲ್ಲ.

ಈ ಮಧ್ಯೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಚಳುವಳಿಯ ಪ್ರಮುಖರು ಚರ್ಚೆ ನಡೆಸಿ ಪ್ರತಿಭಟನೆಯ ಇನ್ನೊಂದು ಮಾರ್ಗ ಅನುಸರಿಸಲು ತೀರ್ಮಾನಿಸಿ ಮತ ಬಹಿಷ್ಕಾರ ಅಭಿಯಾನ ಕೈಗೊಂಡಿದ್ದಾರೆ. ಈ ಅಭಿಯಾನವನ್ನು ಗಂಭಿರವಾಗಿ ಮುಂದುವರಿಸಲು ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಿದ್ದಾರೆ. ಒಂದು ತಿಂಗಳ ಕಾಲದ ಈ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮುನ್ನ ಅಲ್ಲಿ ಸೇರಿದ್ದ ಸತ್ಯಾಗ್ರಹಿಗಳು ಈ ಲೋಕಸಭಾ ಚುನಾವಣೆಯಲ್ಲಿ ನಾನು ಮತ ನೀಡುವುದಿಲ್ಲ ಎಂಬ ಸ್ವಯಂ ಘೋಷಣ ಪತ್ರಕ್ಕೆ ಸಹಿ ಹಾಕಿ ಸಾಂಕೇತಿಕವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಇದು ಅಂತ್ಯವಲ್ಲ ಆರಂಭ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಯ ಹೊಸ ಮಜಲಿಗೆ ಕಾರ್ಯಕರ್ತರು ಸಜ್ಜಾದರು.

Categories
ತೀರ್ಥಹಳ್ಳಿ ಮಲ್ನಾಡ್

ರಾಜ್ಯ ಖೋ-ಖೋ ಸಹಾಯಕ ತರಬೇತುದಾರರಾಗಿ ತೀರ್ಥಹಳ್ಳಿಯ ಕ್ರೀಡಾ ಪ್ರತಿಭೆಗಳು ಆಯ್ಕೆ.!

ರಾಜ್ಯ ಖೋ-ಖೋ ಸಹಾಯಕ ತರಬೇತುದಾರರಾಗಿ ತೀರ್ಥಹಳ್ಳಿಯ ಕ್ರೀಡಾ ಪ್ರತಿಭೆಗಳು ಆಯ್ಕೆ.!
– ಮಾ.28ರಿಂದ ಏ.1ರವರೆಗೆ ನವ ದೆಹಲಿಯಲ್ಲಿ ಕ್ರೀಡಾಕೂಟ
– ತೀರ್ಥಹಳ್ಳಿಯ ರವಿ ದೇವಾಡಿಗ, ಪ್ರದೀಪ್ ಎಸ್ ಪೂಜಾರಿ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ನವ ದೆಹಲಿಯಲ್ಲಿ ನಡೆಯುವ 56ನೇ ಹಿರಿಯರ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿಗೆ ಪುರುಷರ ಹಾಗೂ ಮಹಿಳೆಯರ ಕರ್ನಾಟಕ ರಾಜ್ಯ ತಂಡಕ್ಕೆ ಸಹಾಯಕ ತರಬೇತುದಾರರಾಗಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವoತಹ ತೀರ್ಥಹಳ್ಳಿಯ ರವಿ ದೇವಾಡಿಗ (ಶಂಕರ್ ಗುಡ್ಡ) ಹಾಗೂ ಪ್ರದೀಪ್ ಎಸ್ ಪೂಜಾರಿ (ಸೀಬಿನಕೆರೆ) ಇವರು ಆಯ್ಕೆಯಾಗಿದ್ದಾರೆ. ಅದೇ ರೀತಿ ಆಟಗಾರರಾಗಿ ಆಳ್ವಾಸ್ ಕಾಲೇಜನ್ನು ಪ್ರತಿನಿಧಿಸುತ್ತಿರುವಂತಹ ತೀರ್ಥಹಳ್ಳಿಯ ಆಟಗಾರರಾದ ಸವೀನ (ಹೆದ್ದೂರು), ದಿವ್ಯ ಕೆ ಆರ್ (ಮಂಡಗದ್ದೆ), ಹಾಗೂ ದೀಕ್ಷಿತ್ (ಗುಡ್ಡೆಕೇರಿ).

ಇವರುಗಳು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ( ರವಿ ದೇವಾಡಿಗ ಹಾಗೂ ಪ್ರದೀಪ್ ಎಸ್ ಪೂಜಾರಿ ಇವರುಗಳಿಂದ ತರಬೇತಿ ಪಡೆದ ಕ್ರೀಡಾಪಟುಗಳಾಗಿದ್ದಾರೆ.) ಈ ಕ್ರೀಡಾಕೂಟವು ಮಾರ್ಚ್ 28 ರಿಂದ ಏಪ್ರಿಲ್ 1ರವರೆಗೆ ನವ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವಂತಹ ಎಲ್ಲರಿಗೂ ತೀರ್ಥಹಳ್ಳಿಯ ರಾಜ್ಯ ಹಾಗೂ ರಾಷ್ಟ್ರಮಟ್ಟದ ಖೋ-ಖೋ ಆಟಗಾರರು ಶುಭ ಕೋರಿದ್ದಾರೆ.

 

Categories
ರಾಜ್ಯ

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರು ಪಾಲು!

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರು ಪಾಲು!
– ಕುಡಿದು ಬರ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಚಪ್ಪಲಿ ಸೇವೆ!
• ಚಪ್ಪಲಿಯಿಂದ ಅಟ್ಟಾಡಿಸಿದ ವಿದ್ಯಾರ್ಥಿಗಳು
– IPLಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂ ಕಳೆದುಕೊಂಡ ಪತಿ
• ಸಾಲಗಾರರ ಕಾಟಕ್ಕೆ ಪತ್ನಿ ಆತ್ಮಹತ್ಯೆ

NAMMUR EXPRESS NEWS
ಮೈಸೂರು: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿ‌ನ ಮುತ್ತತ್ತಿಯಲ್ಲಿ ನಡೆದಿದೆ. ಮೃತರು ಮೈಸೂರು ಮೂಲದ ನಾಗೇಶ್(40), ಭರತ್(17), ಗುರು(32), ಮಹದೇವ್(16) ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಸೇರಿ ಒಂದೇ ಬಸ್‌ನಲ್ಲಿ 40 ಜನ ಮೈಸೂರಿನಿಂದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನಾಲ್ವರು ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದು, ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ರಕ್ಷಣೆ ಮಾಡಲು ಉಳಿದ ಮೂವರು ಹೋಗಿ ದುರಂತ ಅಂತ್ಯಕಂಡಿದ್ದಾರೆ.

– ಕುಡಿದು ಬರ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಚಪ್ಪಲಿ ಸೇವೆ!
• ಚಪ್ಪಲಿಯಿಂದ ಅಟ್ಟಾಡಿಸಿದ ವಿದ್ಯಾರ್ಥಿಗಳು

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಸಾಕಷ್ಟು ಜನ ಇರುತ್ತಾರೆ. ಅವರು ಲಕ್ಷಾಂತರ ಮಕ್ಕಳನ್ನು ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿದ್ದಾರೆ. ಅವರ ಮಧ್ಯೆ ಕೆಲವರಿಗೆ ಸರ್ಕಾರಿ ಶಾಲೆಗಳೆಂದರೆ ಅದೇನೋ ನಿರ್ಲಕ್ಷ್ಯ. ಶಿಕ್ಷಕರಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಶಕ್ತಿ ಇದ್ದರೂ ನಿರ್ಲಕ್ಷ್ಯ ತೋರುತ್ತಾರೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ನಿದ್ದೆ ಮಾಡಿ ಸಂಬಳ ತೆಗೆದುಕೊಳ್ಳುವವರಿದ್ದಾರೆ. ಕಾಟಾಚಾರಕ್ಕೆ ಶಾಲೆಗೆ ಬರುವ ಶಿಕ್ಷಕರೂ ಇದ್ದಾರೆ. ಇನ್ನೂ ಕೆಲವರು ಕುಡಿತದ ದಾಸರಾಗಿರುತ್ತಾರೆ.. ಕುಡಿದೇ ಶಾಲೆಗೆ ಬರುತ್ತಾರೆ. ಶಾಲೆಯಲ್ಲೇ ಕುಡಿಯುತ್ತಾರೆ. ಇದೇ ರೀತಿ ಶಿಕ್ಷಕನೊಬ್ಬ ಕುಡಿದು ಬಂದು ವಿದ್ಯಾರ್ಥಿಗಳಿಂದ ಧರ್ಮದೇಟು ತಿಂದಿದ್ದಾನೆ.

• ಚಪ್ಪಲಿಯಿಂದ ಅಟ್ಟಾಡಿಸಿದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು ಬುದ್ಧಿ ಕಲಿಸಬೇಕು. ಆದ್ರೆ ಇಲ್ಲಿ ವಿದ್ಯಾರ್ಥಿಗಳೇ ಶಿಕ್ಷಕನೊಬ್ಬನಿಗೆ ಬುದ್ಧಿ ಕಲಿಸಿದ್ದಾರೆ. ದಿನಾ ಕಂಠಪೂರ್ತಿ ಕುಡಿದು ಶಾಲೆಗೆ ಬರ್ತಿದ್ದ ಶಿಕ್ಷಕನಿಗೆ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ಚಪ್ಪಲಿ ಸೇವೆ ಮಾಡಿದ್ದಾರೆ. ಶಾಲಾ ಆವರಣದಲ್ಲೆಲ್ಲಾ ಆಟ್ಟಾಡಿಸಿದ್ದಾರೆ. ಕೊನೆಗೆ ವಿದ್ಯಾರ್ಥಿಗಳ ಆಕ್ರೋಶದಿಂದ ಭಯಭೀತನಾದ ಶಿಕ್ಷಕ ಬೈಕ್‌ ಏರಿ ಪರಾರಿಯಾಗಿದ್ದಾರೆ.

IPLಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂ ಕಳೆದುಕೊಂಡ ಪತಿ
• ಸಾಲಗಾರರ ಕಾಟಕ್ಕೆ ಪತ್ನಿ ಆತ್ಮಹತ್ಯೆ

ಐಪಿಎಲ್ IPL ಕ್ರಿಕೆಟ್ ಬೆಟ್ಟಿಂಗ್ ಗೀಳಿಗೆ ಬಿದ್ದ ಪತಿ ಬರೋಬ್ಬರಿ 1.5 ಕೋಟಿ ರೂ. ಸಾಲ ಮಾಡಿಕೊಂಡಿದ್ದ. ಇತ್ತ ಸಾಲ ಕೊಟ್ಟವವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮಾ.20ರಂದು ಚಿತ್ರದುರ್ಗ ನಗರದ ಹೊಳಲ್ಕೆರೆ ನಗರದ ಬಸವ ಲೇಔಟ್ ನಿವಾಸಿ ರಂಜಿತಾ (23) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತ್ನಿ ಸಾವಿಗೆ ಸಾಲಗಾರರೆ ಕಾರಣ ಎಂದು ರಂಜಿತಾ ಪತಿ ದರ್ಶನ್ ಆರೋಪಿಸಿದ್ದಾರೆ. ದರ್ಶನ್ ಹಾಗೂ ರಂಜಿತಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವು ಇದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ದರ್ಶನ್, ಕ್ರಿಕೆಟ್ ಬೆಟ್ಟಿಂಗ್ ವ್ಯಾಮೋಹಕ್ಕೆ ಬಿದ್ದು ಬರೋಬ್ಬರಿ 1.5 ಕೋಟಿ ಹಣ ಕಳೆದುಕೊಂಡಿದ್ದ. ಇತ್ತ ದಿನನಿತ್ಯ ಹಣ ನೀಡುವಂತೆ ಸಾಲಗಾರರು ಮನೆಗೆ ಬರುತ್ತಿದ್ದರು. ಹಣಕ್ಕಾಗಿ ಮನೆ ಹತ್ತಿರ ಬಂದು ದಂಪತಿಗೆ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್‌ನಲ್ಲಿ ರಂಜಿತಾ ಉಲ್ಲೇಖಿಸಿದ್ದಾರೆ.

ಸದ್ಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ರಂಜಿತಾ ತಂದೆ ವೆಂಕಟೇಶ್ ಅವರು ಅಳಿಯ ದರ್ಶನ್‌ಗೆ ಕಾನೂನು ಬಾಹಿರವಾಗಿ ಸಾಲ ನೀಡಿದ್ದ 13 ಮಂದಿ ವಿರುದ್ಧ ದೂರು ನೀಡಿದ್ದಾರೆ. ವೆಂಕಟೇಶ್ ಕೊಟ್ಟ ದೂರಿನ ಆಧಾರದ ಮೇಲೆ ಐಪಿಸಿ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಶಿವು, ಗಿರೀಶ್,ವೆಂಕಟೇಶ್ ಎಂಬುವವರುನ್ನು ಬಂಧಿಸಲಾಗಿದೆ. ಇನ್ನುಳಿದವರು ತಲೆಮರೆಸಿಕೊಂಡಿದ್ದು, ಹೊಳಲ್ಕೆರೆ ಪೊಲೀಸರು ಶೋಧ ನಡೆಸಿದ್ದಾರೆ. ಅಳಿಯನಿಗೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಲು ಇಷ್ಟವಿರಲಿಲ್ಲ. ಆದರೆ ಕೆಲವು ವ್ಯಕ್ತಿಗಳು ಶ್ರೀಮಂತರಾಗಲು ಇದು ಸುಲಭ ಮಾರ್ಗ ಎಂದೇಳಿ ಬಲವಂತವಾಗಿ ಬೆಟ್ಟಿಂಗ್ ಚಟುವಟಿಕೆಗಳಿಗೆ ಹಣ ನೀಡಿದ್ದಾರೆ ಎಂದು ರಂಜಿತಾ ತಂದೆ ವೆಂಕಟೇಶ್ ಮಾಹಿತಿ ನೀಡಿದ್ದಾರೆ. ದರ್ಶನ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಆದರೆ ಆತ ಮಾಡಿದ್ದ ಸಾಲಕ್ಕಿಂತ ಹೆಚ್ಚಿನ ಹಣವನ್ನು ಮರುಪಾವತಿ ಮಾಡಿದ್ದಾರೆ. 2021 ಮತ್ತು 2023ರಲ್ಲಿ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ದರ್ಶನ್ ಎಲ್ಲವನ್ನೂ ಕಳೆದುಕೊಂಡಿದ್ದರು. ಇತ್ತ ಸಾಲಗಾರರು ಹಣವನ್ನು ತಕ್ಷಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು ಎಂದಿದ್ದಾರೆ.

Categories
ತೀರ್ಥಹಳ್ಳಿ ರಾಜ್ಯ

ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಜಾಡು: ಎನ್.ಐ.ಎ ದಾಳಿ!

ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಜಾಡು: ಎನ್.ಐ.ಎ ದಾಳಿ!
– 4-5 ಕಡೆ ಅಧಿಕಾರಿಗಳ ಪರಿಶೀಲನೆ
– ಇನ್ನಷ್ಟು ಉಗ್ರ ಚಟುವಟಿಕೆ ಬಗ್ಗೆ ಮಾಹಿತಿ
– ಹಲವರ ಬಗ್ಗೆ ಶಂಕೆ: ಇನ್ನು ತನಿಖೆ ಚುರುಕು

NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಥಹಳ್ಳಿಯಲ್ಲಿ ಸುಮಾರು 4ರಿಂದ 5 ಕಡೆ ಬೆಳ್ಳಂ ಬೆಳಗ್ಗೆ ಎನ್ ಐ ಎ ದಾಳಿ ನಡೆಸಿದ್ದು ಇನ್ನು ತಪಾಸಣೆ ನಡೆಸಲಾಗುತ್ತಿದೆ. ಈ ದಾಳಿ ಭಾರೀ ಮಹತ್ವ ಪಡೆದಿದೆ. ಅನೇಕ ಉಗ್ರ ಚಟುವಟಿಕೆಯಲ್ಲಿ ಹಲವರ ಹೆಸರು ಕೇಳಿ ಬಂದಿದ್ದು ಇತ್ತೀಚಿಗೆ ಬೆಂಗಳೂರಲ್ಲಿ ನಡೆದ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿ ಮೂಲದ ಇಬ್ಬರ ಹೆಸರು ಕೇಳಿ ಬಂದಿತ್ತು. ಇದೀಗ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಬೆಟ್ಟಮಕ್ಕಿ, ಪಟ್ಟಣದ ಗಾಂಧಿ ಚೌಕದ ಒಂದು ಅಂಗಡಿ ಸೇರಿ ತೀರ್ಥಹಳ್ಳಿ ಪಟ್ಟಣದ 5ಕ್ಕೂ ಹೆಚ್ಚು ಕಡೆ ಎನ್‌ಐಎ ಟೀಂ ದಾಳಿ ನಡೆದಿದೆ. 5 ತಂಡಗಳಲ್ಲಿ ಬಂದ ಅಧಿಕಾರಿಗಳು ಭಾರೀ ತನಿಖೆ ನಡೆಸುತ್ತಿದ್ದಾರೆ.

ತೀರ್ಥಹಳ್ಳಿಯ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ಇನ್ನು ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಮಾಹಿತಿ ಲಭ್ಯ ಆಗಿಲ್ಲ. ಬೆಂಗಳೂರಿನಿಂದ 5ಕ್ಕೂ ವಾಹನದಲ್ಲಿ ಬಂದಿರುವ 15 ಕ್ಕೂ ಹೆಚ್ಚು ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಎನ್‌ಐಎ ಟೀಮ್ ದಾಳಿ ಮಾಡಿದ್ದಾರೆ. ಕೆಲ ಶಂಕಿತರ ಮನೆಯ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.

Categories
ರಾಜಕೀಯ ರಾಜ್ಯ ಶಿವಮೊಗ್ಗ

ನಾಮಪತ್ರ ಸಲ್ಲಿಸಲು ದಿನಾಂಕ ಘೋಷಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ನಾಮಪತ್ರ ಸಲ್ಲಿಸಲು ದಿನಾಂಕ ಘೋಷಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
– ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

NAMMUR EXPRESS NEWS
ಶಿವಮೊಗ್ಗ : ಲೋಕಸಭ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಏಪ್ರಿಲ್‌ 12 ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಘೋಷಿಸಿದ್ದಾರೆ. ಇಂದು ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ನಡೆದ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಏಪ್ರಿಲ್ 12 ರಂದು ಸುಮಾರು 25 ಸಾವಿರ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ನನ್ನ ಗುರುತು ಕೂಡ ಇನ್ನೂ ತೀರ್ಮಾನವಾಗಿಲ್ಲ. ಮತದಾನದ ದಿನಾಂಕ ನಿಗದಿಯಾಗಿದೆ. ಆದ್ದರಿಂದ ಏಪ್ರಿಲ್ 12ರಂದು ಸಾವಿರಾರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವೆ. ಈ ರೀತಿ ಘೋಷಿಸಿದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ಶಕ್ತಿ ಪ್ರದರ್ಶನಕ್ಕೆ ಇಳಿದಾಗಿದೆ ಎಂದು ಸಮಾವೇಶದಲ್ಲಿ ಕೆ. ಎಸ್​ ಈಶ್ವರಪ್ಪ ಘೋಷಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು 108 ಸ್ಥಾನಗಳನ್ನು ನಾವು ಗೆದ್ದಿದ್ದೆವು. ಬಸವರಾಜ ಬೊಮ್ಮಾಯಿ, ಡಿ. ವಿ ಸದಾನಂದ ಗೌಡ ಮತ್ತು ಜಗದೀಶ್‍ ಶೆಟ್ಟರ್ ಸಿಎಂ ಆದರು. ಆದರೆ, ಈ ಬಾರಿ ಬಿಜೆಪಿ 108 ರಿಂದ 66 ಸ್ಥಾನಕ್ಕೆ ಕುಸಿಯಿತು. ಇದಕ್ಕೆ ಕಾರಣ ಕಾರ್ಯಕರ್ತರು ಅಲ್ಲ. ಕೆಲವು ನಮ್ಮ ಪಕ್ಷದ ನಾಯಕರು ಎಂದು ಈಶ್ವರಪ್ಪ ಆರೋಪಿಸಿದರು. ಶೇ.40 ರಷ್ಟು ಕಮಿಷನ್ ಹಗರಣ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರೂ ಕೂಡ ಮಾತಿನಂತೆ ನನಗೆ ಸಚಿವ ಸ್ಥಾನವನ್ನು ಕೊಡಲಿಲ್ಲ. ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದಾದರೆ ನನ್ನ ಮಗ ವಿಜಯೇಂದ್ರನಿಗೂ ಸಚಿವ ಸ್ಥಾನ ನೀಡಬೇಕು ಎಂದಿದ್ದರು ಎಂದು ಬಿ.ಎಸ್ ಯಡಿಯೂರಪ್ಪ ಅವರ ಹೆಸರು ಹೇಳದೆ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಇನ್ನು ಲೋಕಸಭಾ ಚುನಾವಣೆಗೆ ಮಗನಿಗೆ ಟಿಕೆಟ್ ಕೊಡುತ್ತೇವೆ ಎಂದರು. ಆದರೆ ಕೊಡಲಿಲ್ಲ, ಇದರ ಹಿಂದೆ ಹಿಂದುಳಿದ ನಾಯಕರನ್ನು ಬೆಳೆಸಬಾರದು ಎಂಬ ಹುನ್ನಾರವಿದೆ. ಪ್ರತಾಪ್ ಸಿಂಹ, ಅನಂತ್‍ಕುಮಾರ್ ಹೆಗಡೆ, ಸಿ. ಟಿ. ರವಿ ಮುಂತಾದವರಿಗೂ ಸೀಟು ನಿರಾಕರಿಸಲಾಗಿದೆ. ಈಗಾಗಲೇ ಜಿಲ್ಲಾ ಪ್ರವಾಸ ಮಾಡಿದ್ದೇನೆ. ಬೈಂದೂರಿನಲ್ಲಿ ಸಂಸದ ಬಿ ವೈ ರಾಘವೇಂದ್ರ ಬಗ್ಗೆ ಸಿಟ್ಟಿದೆ. ಹಿಂದುತ್ವಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಹೋದ ಕಡೆಯೆಲ್ಲ ಅವರಿಗೆ ವಿರೋಧವಾಗುತ್ತಿದೆ. ನನ್ನನ್ನು ಗೆಲ್ಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಗೆದ್ದು ನಿಮ್ಮ ಋಣ ತೀರಿಸುವೆ ಎಂದು ಈಶ್ವರಪ್ಪ ಹೇಳಿದ್ರು.

Categories
ಹೊಸನಗರ

ಹೊಸನಗರ ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾಗಿ ಸುಮಾ ಸುಬ್ರಹ್ಮಣ್ಯ.!

ಹೊಸನಗರ ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾಗಿ ಸುಮಾ ಸುಬ್ರಹ್ಮಣ್ಯ.!
– ಮಲೆನಾಡ ಮಹಿಳಾ ಸಂಘಟಕಿಗೆ ಒಲಿದ ಹುದ್ದೆ
– ಗೀತಾ, ಶಿವಣ್ಣ,ಕಿಮ್ಮನೆ ಸೇರಿ ಅನೇಕ ನಾಯಕರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ

NAMMUR EXPRESS NEWS
ಹೊಸನಗರ: ಹೊಸನಗರ ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾಗಿ ಸುಮಾ ಸುಬ್ರಹ್ಮಣ್ಯ ಆಯ್ಕೆಯಾಗಿದ್ದಾರೆ. ಹೊಸನಗರ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಮಾ ಸುಬ್ರಮಣ್ಯ ಅವರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಅನೀತಾಕುಮಾರಿ ಅವರಿಂದ ಅಧಿಕಾರ ಸ್ವೀಕರಿಸಿದರು. ಹೊಸನಗರ ತಾಲೂಕು ಪಂಚಾಯಿತಿಗೆ ಎರಡು ಬಾರಿ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರಾಗಿ, ಕೊಡಚಾದ್ರಿ ಮಹಿಳಾ ಬ್ಯಾಂಕ್ ನಿರ್ದೇಶಕರಾಗಿ, ವಿವಿಧ ಮಹಿಳಾ ಹಾಗೂ ಸಂಘಟನೆಗಳಲ್ಲಿ ಕೆಲಸ ಮಾಡಿ ಅನುಭವವಿರುವ ಸುಮಾ ಸುಬ್ರಹ್ಮಣ್ಯ ಅವರು ಇದೀಗ ನೂತನವಾಗಿ ಹೊಸನಗರ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

ಸೋಮವಾರ ಹೊಸ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರಾದ ಕಿಮ್ಮನೆ ರತ್ನಾಕರ್, ಆರ್‌ಎಂ ಮಂಜುನಾಥಗೌಡ, ಸುಂದರೇಶ್ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿದರು.

2 ಬಾರಿ ಹೊಸನಗರ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಸೇವೆ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಸೇರಿದಂತೆ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಸುಮಾ ಸುಬ್ರಹ್ಮಣ್ಯ ಮಹಿಳಾ ಸೇವಾ ಕ್ಷೇತ್ರದಲ್ಲಿ ತಮ್ಮದೇ ಆದ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಬಂಧು ಬಳಗವನ್ನು ಸ್ನೇಹಿತರನ್ನು ಹೊಂದಿರುವ ಇವರು ಅಪಾರ ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಭವಿಷ್ಯದ ಭರವಸೆಯ ನಾಯಕರಾಗುವಲ್ಲಿ ಈ ಸ್ಥಾನ ಮಾನ ಪ್ರಮುಖವಾಗಿದ್ದು, ಪಕ್ಷಕ್ಕೂ ಕೂಡ ಇವರ ಸೇವೆ ಮತ್ತಷ್ಟು ಬಲ ನೀಡಿದೆ.
ಎಂ.ಎ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಮ ಸುಬ್ರಮಣ್ಯ ಈಗ ಪಕ್ಷ ಸಂಘಟನೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಇನ್ನು ಇವರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್‌ಎಂ ಮಂಜುನಾಥಗೌಡ, ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ, ತೀರ್ಥಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಮಹಾಬಲೇಶ್ ಹಸಿರುಮನೆ ಸೇರಿದಂತೆ ಅನೇಕರು ಶುಭಾಶಯ ಸಲ್ಲಿಸಿದ್ದಾರೆ.

ಸುಮಾ ಸಾಧನೆಯ ಹಿಂದೆ ಸುಬ್ರಹ್ಮಣ್ಯ ಮಾಸ್ತಿಕಟ್ಟೆ

ಹೊಸನಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮೂಡಿಸಿರುವಂತಹ ಯುವ ನಾಯಕ ಹಾಗೂ ಕಷ್ಟ ಎಂದವರಿಗೆ ನೆರವಾಗುವ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರು ತಮ್ಮ ಪತ್ನಿ ಸುಮಾ ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮೂಡಿಸಿರುವಂತಹ ಈ ದಂಪತಿಗಳು ರಾಜಕೀಯವಾಗಿ ಮತ್ತಷ್ಟು ಸ್ಥಾನಮಾನ ಪಡೆಯಲಿ ಎಂದು ಜನ ಆಶೀರ್ವದಿಸಿದ್ದಾರೆ.

Categories
ಕರಾವಳಿ

ಟಾಪ್ ನ್ಯೂಸ್ ಕರಾವಳಿ

ಮೀನು ಹಿಡಿಯಲು ಹೋದ ಯುವಕರು ನೀರುಪಾಲು.!
– ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ
– ದಾಖಲೆಗಳಿಲ್ಲದೆ ಬೃಹತ್ ಮೊತ್ತದ ನಗದು ಚುನಾವಣಾ ಅಧಿಕಾರಿಗಳ ವಶಕ್ಕೆ
– ಮನೆಮಂದಿ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು
– ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಕೃಷಿಕ ಆತ್ಮಹತ್ಯೆ.!!
– ಮೂಡುಬಿದಿರೆ: ಇನ್ನೂ ಬಂಧನವಾಗದ ಕಾಮುಕ ಶಿಕ್ಷಕ

NAMMUR EXPRESS NEWS
ಬ್ರಹ್ಮಾವರ : ದೋಣಿಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾನದಿಯಲ್ಲಿ ಮಾ.೨೬ರಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ. ಮೃತರನ್ನು ಹೊಸಾಳ ಗ್ರಾಮದ ಶ್ರೀಶ(21) ಹಾಗೂ ಪ್ರಶಾಂತ್ ಪೂಜಾರಿ (30) ಎಂದು ಗುರುತಿಸಲಾಗಿದೆ. ಇವರಿಬ್ಬರು ಮೀನು ಹಿಡಿಯಲೆಂದು ನಾಗರಮಠದ ಸೀತಾನದಿಗೆ ದೋಣಿಯಲ್ಲಿ ತೆರಳಿದ್ದರು. ಅಲ್ಲಿ ಇವರು ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ ಸ್ಥಳೀಯರು ಮುಳುಗುತ್ತಿರುವ ಇವರ ರಕ್ಷಣೆಗೆ ಧಾವಿಸಿದರು. ಆದರೆ ನೀರಿನ ಸೆಳೆತದಿಂದಾಗಿ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಸ್ಥಳೀಯರ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ

ಉಡುಪಿ: 6 ಮಂದಿಯ ತಂಡವೊಂದು ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ಮಣಿಪಾಲ ಸರಳೆಬೆಟ್ಟು ಪ್ರದೇಶದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತು ಉಡುಪಿ ಎಸ್ಪಿ ಡಾ.ಅರುಣ್ ಕೆ ಮಾತನಾಡಿ, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಐವರು ವಯಸ್ಕರು ಮತ್ತು ಒಬ್ಬರು ಅಪ್ರಾಪ್ತರಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸಲಾಗುವುದು ಎಂದರು.

ದೂರುದಾರ ಅರುಷ್‌ ಕುಮಾರ್‌, ಮಣಿಪಾಲದ ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ ಪ್ರವೇಶಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಆ ಕ್ಷಣದಲ್ಲಿ ಇತರ ಕೆಲವು ಯುವಕರು ಮೊದಲು ರೆಸ್ಟೋರೆಂಟ್‌ಗೆ ಪ್ರವೇಶಿಸುವುದಾಗಿ ಹೇಳಿ ಕಿಡಿಕಾರಿದರು. ಘಟನೆಯ ನಂತರ ಅರುಷ್‌ ತನ್ನ ಮನೆಗೆ ಆಟೋದಲ್ಲಿ ಹೋದನು. ನಂತರ ಆತನನ್ನು ಹಿಂಬಾಲಿಸಿ ಆರು ಸದಸ್ಯರು ಥಳಿಸಿದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಟ್ಲ: ದಾಖಲೆಗಳಿಲ್ಲದೆ ಬೃಹತ್ ಮೊತ್ತದ ನಗದು ಚುನಾವಣಾ ಅಧಿಕಾರಿಗಳ ವಶಕ್ಕೆ

ವಿಟ್ಲ: ಅಧಿಕೃತ ದಾಖಲೆಗಳಿಲ್ಲದೆ ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ಕೊಂಡುಹೋಗುತ್ತಿದ್ದ ಬೃಹತ್ ಮೊತ್ತದ ನಗದನ್ನು ವಿಟ್ಲ ಸಮೀಪದ ನೆಲ್ಲಿಕಟ್ಟೆ ಚೆಕ್ ಪೋಸ್ಟ್‌ ನಲ್ಲಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳ ಮೂಲದ ನಿತ್ಯನಿಧಿ ಸಂಗ್ರಾಹಕ ಧನಂಜಯ ಎಂಬವರು ನಗದು ಕೊಂಡು ಹೋಗುತ್ತಿದ್ದ ವೇಳೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ಗೋಳ್ತಮಜಲು ಗ್ರಾಮಪಂಚಾಯತ್ ಪಿಡಿಒ , ಎಸ್.ಎಸ್.ಟಿ.ತಂಡದ ಮುಖ್ಯಸ್ಥ ವಿಜಯಶಂಕರ್ ಆಳ್ವ ಅವರ ತಂಡ ತನಿಖೆ ನಡೆಸಿ, ಸೂಕ್ತವಾದ ದಾಖಲೆಗಳಿಲ್ಲದ 99 ಸಾವಿರದ 800 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧನಂಜಯ ಅವರು ದ್ವಿಚಕ್ರ ವಾಹನದಲ್ಲಿ ದಾಖಲೆಗಳಿಲ್ಲದ ನಗದನ್ನು ಕೊಂಡುಹೋಗುತ್ತಿದ್ದರು.

ಧನಂಜಯ ಅವರು ಕೇರಳದಲ್ಲಿ ನಿತ್ಯನಿಧಿ ಸಂಗ್ರಾಹಕರಾಗಿದ್ದು, ನಿತ್ಯನಿಧಿಯ ಹಣ ಹಾಗೂ ಕರ್ನಾಟಕದ ರಾಜ್ಯದ ವಿಟ್ಲದ ಕನ್ಯಾನದಲ್ಲಿರುವ ಆಶ್ರಮಕ್ಕೆ ಬಂದು ಅಲ್ಲಿರುವ ಇಬ್ಬರು ಹಿರಿಯ ನಾಗರಿಕರ ಪಿಂಚಣಿಯ ಹಣವನ್ನು ನೀಡಿ ವಾಪಾಸು ಕೇರಳಕ್ಕೆ ಹೋಗುವು ವೇಳೆ ಹಣ ಸಿಕ್ಕಿದೆ ಎಂದು ಹೇಳಲಾಗಿದೆ. ಇವರ ಜೊತೆಯಲ್ಲಿ ಇದ್ದ ಸಾವಿರಾರು ರೂ. ಗಳಿಗೆ ಸೂಕ್ತವಾದ ದಾಖಲೆಗಳಿದ್ದರೆ ಹತ್ತು ದಿನಗಳೊಳಗೆ ಜಿ.ಪಂ.ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಖ್ಯಸ್ಥರಾಗಿರುವ ಸಿ.ಎಸ್.ಆರ್.ಕಮಿಟಿಗೆ ದಾಖಲೆಯನ್ನು ಸಲ್ಲಿಸಿ ಹಣವನ್ನು ಪಡೆಯಲು ಅವಕಾಶವಿದೆ ಎಂದು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿ ಡಾ| ಉದಯ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಕಾರ್ಕಳ: ಮನೆಮಂದಿ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು

ಕಾರ್ಕಳ : ಮನೆಮಂದಿ ಮಲಗಿದ್ದ ವೇಳೆ ಕಳ್ಳರು ಕಿಟಕಿಯ ಬಾಗಿಲ ಚಿಲಕ ಮುರಿದು ಮನೆಯ ಒಳನುಗ್ಗಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2.25 ಲಕ್ಷ ನಗದು ದೋಚಿದ ಘಟನೆ ಕುಕ್ಕುಂದೂರು ನಲ್ಲಿ ನಡೆದಿದೆ. ಇಲ್ಲಿನ ಜೋಡುರಸ್ತೆ ನಿವಾಸಿ ಜಗದೀಶ್ ಬಿ.ಎ. ಅವರ ಮನೆಯಲ್ಲಿ ಕಳ್ಳತನವಾಗಿದ್ದು, ರಾತ್ರಿ ಮನೆಯ ಬಾಗಿಲು ಹಾಕಿ ಭದ್ರಪಡಿಸಿ ಮಲಗಿದ್ದರು. ಆದರೆ ಬೆಳಗ್ಗಿನ ಜಾವ 3: 40 ಗಂಟೆಗೆ ಜಗದೀಶ್ ರವರು ಮಲಗಿದ್ದ ಕೋಣೆಯು ತೆರೆದ ಶಬ್ದ ಕೇಳಿ ಎದ್ದು ನೋಡಿದಾಗ ಮನೆಯ ಮುಂದಿನ ಬಾಗಿಲು ಅರ್ಧ ತೆರೆದಿದ್ದು, ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿರುವುದು ಕಂಡುಬಂದಿದೆ.

ಮನೆಯೊಳಗೆ ಪರಿಶೀಲಿಸಿ ನೋಡಿದಾಗ ಯಾರೋ ಕಳ್ಳರು ಮನೆಯ ಮುಖ್ಯದ್ವಾರದ ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿ ಬಾಗಿಲಿನ ಚಿಲಕವನ್ನು ಕಿಟಿಕಿಯ ಮೂಲಕ ತೆರೆದು ಮನೆಯೊಳಗೆ ಪ್ರವೇಶಿಸಿ ಮನೆಯ ಇನ್ನೊಂದು ಕೋಣೆಯೊಳಗೆ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹುಡುಕಾಡಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2,25,000 ರೂ. ನಗದು ಎಗರಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಡಬ: ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಕೃಷಿಕ ಆತ್ಮಹತ್ಯೆ.!!

ಕಡಬ : ಕೃಷಿಗಾಗಿ ಮಾಡಿಕೊಂಡ ಸಾಲ ಮರುಪಾವತಿಸಲು ಸಾಧ್ಯವಾಗದೆ ಹತಾಶೆಗೊಂಡ ಕೃಷಿಕ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದೆ. ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಬುಡಲೂರು ಎಂಬಲ್ಲಿ ಈ ಘಟನೆ ನಡೆದಿದ್ದು ಬೂಡಲೂರು ನಿವಾಸಿ ಶಿವಣ್ಣ ಗೌಡ(61)ಆತ್ಮಹತ್ಯೆ ಮಾಡಿಕೊಂಡ ಕೃಷಿಕರಾಗಿದ್ದಾರೆ. ತಮ್ಮ ಮನೆಯಿಂದ ಅನತಿ ದೂರದ ಗುಡ್ಡೆಯೊಂದರಲ್ಲಿ ಶಿವಣ್ಣ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಣ್ಣ ಗೌಡ ಅವರು ಸ್ಥಳೀಯ ಸಹಕಾರಿ ಕೃಷಿ ಪತ್ತಿನ ಸಹಕಾರಿ ಸಂಘ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗಾಗಿ ರೂ.10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರ ಹೇಮಂತ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡುಬಿದಿರೆ: ಇನ್ನೂ ಬಂಧನವಾಗದ ಕಾಮುಕ ಶಿಕ್ಷಕ

ಮೂಡುಬಿದಿರೆ: ಕಲ್ಲಮುಂಡ್ಕೂರು ಸರಕಾರಿ ಶಾಲೆಯಲ್ಲಿ‌ ನಡೆದಿದ್ದ ಪೋಕ್ಸೊ ಪ್ರಕರಣದಲ್ಲಿ ಇನ್ನೂ ಆರೋಪಿಯ ಬಂಧನವಾಗದಿರುವ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌. ಫೆ.28ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಅಧ್ಯಾಪಕ ಗುರುವ ಮೊಗೇರಾ ಎಂಬಾತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕುರುಕುಳ ನೀಡಿರುವ ಬಗ್ಗೆ ಮಾ.13ರಂದು ಶಾಲೆಯ ಮುಖ್ಯೋಪಾಧ್ಯಾಯರು ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಮಾ.14ರಂದು ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು.

ಈ ನಡುವೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಮಹಿಳಾ ಠಾಣೆಯ ಪೊಲೀಸರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ್ದರು‌. ಈ ವೇಳೆ ಅಧ್ಯಾಪಕ ಗುರುವ ಮೊಗೇರ ಲೈಂಗಿಕ ಕಿರುಕುಳ ನೀಡಿರುವುದನ್ನು ವಿದ್ಯಾರ್ಥಿನಿಯರು ಬರವಣಿಗೆಯಲ್ಲಿ ನೀಡಿದ್ದರು ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ಪರಿಣಾಮವಾಗಿ ಆರೋಪಿಯ ಬಂಧನವಾಗುತ್ತಿಲ್ಲ. ಈ ಪ್ತಕರಣದಲ್ಲಿ ಸ್ಥಳೀಯರೂ ಮುಂದೆ ಹೋಗಲು ಹೆದರುತ್ತಿದ್ದಾರೆ. ಆರೋಪಿಯ ಸ್ವಜಾತಿಯವರು ಆತನ ಜೊತೆ ನಿಂತಿದ್ದಾರೆ ಎಂಬ ಮಾತುಗಳು ಇವೆ. ದೇವರ ಸಮಾನರಾದ ಮಕ್ಕಳ ಮೇಲೆ ಘೋರ ಕೃತ್ಯ ಎಸಗಿರುವ ಆರೋಪಿಗೆ ಯಾವುದೇ ಸಮುದಾಯ, ಸಂಘಟನೆಗಳು ರಕ್ಷಣೆಗೆ ಮುಂದಾಗಬಾರದು ಎಂದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದನಂಜಯ ಅವರು ಹೇಳಿದ್ದಾರೆ.

ಮಾ.14ರಂದು ಪ್ರಕರಣ ದಾಖಲಾಗಿದ್ದ ವೇಳೆ ಆರೋಪಿ ಊರಿನಲ್ಲಿ ಆರಾಮವಾಗಿ ಸುತ್ತಾಡಿಕೊಂಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಕಾರ್ಯ ಪ್ರವೃತ್ತರಾದವು. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆತನನ್ನು ಬಂಧಿಸಲು ಮುಂದಾಗದ ಪೊಲೀಸ್ ಇಲಾಖೆ ಈಗ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವುದು ವಿಪರ್ಯಾಸ ಎಂದು ಕಲ್ಲಮುಂಡ್ಕೂರು ಗ್ರಾಮಸ್ಥರು ಹೇಳಿದ್ದಾರೆ‌.

Categories
ಬೆಂಗಳೂರು ರಾಜ್ಯ ಶಿಕ್ಷಣ

CET ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

CET ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ
– ಏಪ್ರಿಲ್ 18 ಮತ್ತು 19 ರಂದು ಪರೀಕ್ಷೆ
– ಇಲ್ಲಿದೆ ಸಂಪೂರ್ಣ ಮಾಹಿತಿ

NAMMUR EXPRESS NEWS
ಬೆಂಗಳೂರು : ಕರ್ನಾಟಕ ಪರೀಕ್ಷ ಪ್ರಾಧಿಕಾರವು ಯುಜಿ ಸಿಇಟಿ (ಯುಜಿ ಸಿಇಟಿ) ಪರೀಕ್ಷೆಗೆ ದಿನಾಂಕ ಪ್ರಕಟಿಸಿದ್ದು, ಏಪ್ರಿಲ್ 18 ಮತ್ತು 19 ರಂದು ಪರೀಕ್ಷೆ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ: 18.04.2024 ಮತ್ತು 19.04.2024 ರಂದು ನಡೆಸಲಾಗುವ ಯುಜಿಸಿಇಟಿ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಘನ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ 18.04.2024 – 19.04.2024 ನಡೆಸಲಾಗುವ ಯುಜಿಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ದಿನಾಂಕವನ್ನು ಪ್ರಕಟಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಪರೀಕ್ಷೆಯನ್ನು ನಡೆಸಲು ಅಗತ್ಯವಿರುವ ಮೂಲಭೂತ ಸೌಕರ್ಯ ಇರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಿ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರವರಿಗೆ ನೇರವಾಗಿ ಸಲ್ಲಿಸಲು ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ತಮ್ಮ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಕರ್ನಾಟಕ ಪರೀಕ್ಷ ಪ್ರಾಧಿಕಾರ ರವರಿಗೆ ತುರ್ತಾಗಿ ಸಲ್ಲಿಸಿ ಈ ಕಛೇರಿಗೆ ಪ್ರತಿಯನ್ನು ಸಲ್ಲಿಸಲು ತಿಳಿಸಿದೆ.