Categories
ಅಡಿಕೆ-ದರ

ಅಡಿಕೆ ದರ 01-03-2024

ಅಡಿಕೆ ದರ
01-03-2024
ಸರಕು 51009 80800
ಬೆಟ್ಟೆ 43099 52899
ರಾಶಿ 20000 48259
ಗೊರಬಲು 16309 33289
Nammur Express

Categories
ತೀರ್ಥಹಳ್ಳಿ

ಕಿಮ್ಮನೆ ವಿರುದ್ಧ ಕೂಗು: ಈಗ ಮಹಿಳೆಗೆ ಸಂಕಷ್ಟ!

ಕಿಮ್ಮನೆ ವಿರುದ್ಧ ಕೂಗು: ಈಗ ಮಹಿಳೆಗೆ ಸಂಕಷ್ಟ!
– ಯೋಜನೆಗೆ ಮಾರ್ಗದರ್ಶನ ಮಾಡಿದ ಆರಗ ಬಿಟ್ಟು ಕಿಮ್ಮನೆ ಮೇಲೆ ಆರೋಪ ಏಕೆ?
– ಕ್ರಿಮಿನಲ್ ಕೇಸ್ ಹಾಕಲು ಮುಂದಾದ ಯುವ ಕಾಂಗ್ರೆಸ್
– ಆಗುಂಬೆ ಠಾಣೆಯಲ್ಲಿ ದೂರು ದಾಖಲು!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ ಮುಂಚಿತವಾಗಿ ನಡೆದ ಪ್ರಕ್ರಿಯೆಗಳು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು, ಹಾಲಿ ಶಾಸಕರು ಆಗಿರುವ ಶ್ರೀ ಆರಗ ಜ್ಞಾನೇಂದ್ರ ರವರ ಮಾರ್ಗದರ್ಶನ ಶಿಫಾರಸ್ಸಿನ ಮೇರೆಗೆ ಟೆಂಡರ್‌ ಮೂಲಕ ನ್ಯಾಷನಲ್‌ ಕನ್‌ಸ್ಟ್ರಕ್ಷನ್‌ ಕಂಪೆನಿಯವರು ಕಾಮಗಾರಿ ಕೈಗೆತ್ತಿಕೊಂಡಿರುತ್ತಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಿರೋಧ ಮಾಡುವಂತವರು, ನೀರು ಶುದ್ದೀಕರಣ ಘಟಕದ ಕಾಮಗಾರಿ ಮತ್ತು ಮಾಲತಿ ನದಿ ಮತ್ತು ತುಂಗಾ ನದಿಯಿಂದ ನೀರು ತೆಗೆಯುವ ಯೋಜನೆ ಹಾಲಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರ ಶಿಫಾರಸ್ಸು ಮತ್ತು ಅನುಮತಿ ಇಲ್ಲದೇ ನಡೆದ ಕಾಮಗಾರಿ ಆಗಿರುವುದಿಲ್ಲ. ವಿರೋಧ ಮಾಡುವಂತಹ ಪ್ರತಿಯೊಬ್ಬರೂ ಕೂಡಾ ಸದರಿ ಯೋಜನೆಗೆ ಅಥವಾ ನಿರ್ದಿಷ್ಟ ನೀರು ಶುದ್ದೀಕರಣ ಘಟಕ ಅಥವಾ ನೀರು ಎಲ್ಲಿಂದ ಸಂಗ್ರಹಣೆ ಮಾಡಿ ನೀರು ಶುದ್ಧೀಕರಣ ಘಟಕಕ್ಕೆ ಒದಗಿಸಬೇಕೆಂತಹ ವಿಚಾರಗಳು ಶಾಸಕರ ಗಮನಕ್ಕೆ ಬಾರದ ಕಾಮಗಾರಿಗಳು ಅಲ್ಲ.

ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಜನಪ್ರತಿನಿಧಿ ಮತ್ತು ಪಕ್ಷದ ತಾಲ್ಲೂಕು ಮಟ್ಟದ ಪದಾಧಕಾರಿಗಳು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಎಲ್ಲರೂ ಕೂಡಾ ಮೇಲ್ಕಂಡ ಯೋಜನೆಗೆ ಬೆಂಬಲಕ್ಕೆ ನಿಂತಿರುತ್ತಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಶಾಸಕರ ಸಮ್ಮತಿ ಆಧಾರದ ಮೇರೆಗೆ ಯೋಜನೆಯ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದಾರೆ. ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ ಮಾಜಿ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್‌ ಅವರ ಹೆಸರನ್ನು ಅಥವಾ ಕಾಂಗ್ರೆಸ್‌ ಪಕ್ಷವನ್ನು ಈ ಸಂಘರ್ಷದಲ್ಲಿ ಎಳೆದು ತರುವ ಅಗತ್ಯವಿಲ್ಲ. ಮೇಲ್ಕಂಡ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸುವವರು ನೇರವಾಗಿ ಮಾಜಿ ಸಚಿವರು ಮತ್ತು ಹಾಲಿ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರ ವಿರುದ್ಧ ನೇರವಾಗಿ ಹೋರಾಟಕ್ಕಿಳಿಯುವ ಅಥವಾ ಅವರ ನಡೆಗಳನ್ನು ಖಂಡಿಸಬೇಕು….

ಅನಾವಶ್ಯಕವಾಗಿ ಪ್ರಸ್ತುತ ಅಧಿಕಾರದಲ್ಲಿದ ಶ್ರೀ ಕಿಮ್ಮನೆ ರತ್ನಾಕರ್‌ರವರನ್ನು ಈ ಸಂಘರ್ಷಕ್ಕೆ ಎಳೆದು ತರುವುದು ಹಾಸ್ಯಾಸ್ಪದವಾಗಿದೆ. ಮೇಲ್ಕಂಡ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಅನಾವಶ್ಯಕವಾಗಿ ನಮ್ಮ ನಾಯಕರು , ಮಾಜಿ ಸಚಿವರು ಮತ್ತು ಮಾಜಿ ಶಾಸಕರಾದ ಶ್ರೀ ಕಿಮ್ಮನೆ ರತ್ನಾಕರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇವೆ ಮತ್ತು ಸಂಬಂಧಿಸಿದ ಹೇಳಿಕೆ ನೀಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು. ಕಿಮ್ಮನೆ ಹಾಗೂ ಕಾಂಗ್ರೆಸ್‌ ಪಕ್ಷವನ್ನು ನಿಂದಿಸಿರುವ ಮಹಿಳೆಗೆ ಬೆಂಬಲಕ್ಕೆ ನಿಂತ ಹೋರಾಟದ ಸಮಿತಿ ಮತ್ತು ಪಧಾದಿಕಾರಿಗಳ ವಿರುದ್ಧವೂ ಕೂಡಾ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತದೆ. ಕಾರಣ ಯೋಜನೆ ವಿರೋಧಿ ಹೋರಾಟದ ಸಮಿತಿಯವರು ಈವರೆಗೆ ಅವಹೇಳನಾಕಾರಿ ಹೇಳಿಕೆ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡದಿರುವುದು ನಮ್ಮ ಗಮನದಲ್ಲಿ ಇರುತ್ತದೆ ಎಂದು ತೀರ್ಥಹಳ್ಳಿ ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ ಹಾಗೂ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಆಗುಂಬೆಯಲ್ಲಿ ದೂರು ದಾಖಲು!

ತೀರ್ಥಹಳ್ಳಿ ತಾಲ್ಲೂಕು, ಹೆಗ್ಗೋಡು ಗ್ರಾಮ ಪಂಚಾಯ್ತಿ ಆಲಗೇರಿ ನಿವಾಸಿ ಶಾಂತಾ ಕೋಂ ಗಿರೀಶ ಇವರು ಮಾಜಿ ಸಚಿವ ಶ್ರೀ ಕಿಮ್ಮನೆ ರತ್ನಾಕರ್ ಇವರಿಗೆ ಮಾನಹಾನಿಕಾರಕವಾಗಿ ನಿಂದಿಸಿ ಸಾರ್ವಜನಿಕವಾಗಿ ಅಪಮಾನ ಮಾಡಿ ಹಲ್ಲೆ ನಡೆಸುವಂತೆ ಪ್ರಚೋದನೆ ನೀಡಿ ಜೀವಬೆದರಿಕೆ ಹಾಕಿರುವ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವ ವಿಚಾರಣೆ ನಡೆಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರರು ಎಸ್ ಸಿ ವಿಭಾಗ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಭಿಮಾನಿ ಪಡುವಳ್ಳಿ ಹರ್ಷೇಂದ್ರ ಕುಮಾರ್ ಆಗುಂಬೆ ಠಾಣೆಗೆ ದೂರು ನೀಡಿದ್ದಾರೆ.

ತೀರ್ಥಹಳ್ಳಿ ಸಮೀಪದ ಭೀಮನಕಟ್ಟೆ ತುಂಗಾನದಿ ತೀರದ ಆಲಗೇರಿ ಎಂಬಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯ ಶುದ್ದೀಕರಣ ಘಟಕದ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಸ್ಥಳೀಯ ಕೆಲವು ಸಂಘಟನೆಗಳು ವಿರೋಧಿಸುತ್ತಿವೆ. ಈ ಸಂಬಂಧ ದಿನಾಂಕ 26-02-2024 ರಂದು ಹೆಗ್ಗೋಡು ಶಾಲಾ ಮುಂಭಾಗ ಪ್ರತಿಭಟನೆಗಳು ನಡೆದಿವೆ. ಈ ಸಂದರ್ಭ ಮಧ್ಯಾಹ್ನ 12-30 ರ ಸುಮಾರಿಗೆ ಮಾದ್ಯಮದವರೊಂದಿಗೆ ಮಾತನಾಡಿದ ಸ್ಥಳೀಯರಾದ ಶಾಂತಾ ಕೋಂ ಗಿರೀಶ ಎನ್ನುವವರು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌ರವರಿಗೆ ಹೀನಾಮಾನ ಬೈದು ಚಪ್ಪಲಿಯಲ್ಲಿ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾಳೆ.

“ಕಿಮ್ಮನೆ ಎಲ್ಲಿ ಸತ್ತಿದ್ದಾನೆ, ಅವನು ಓಟು ಕೇಳಲು ಬರಲಿ, ಅವನಿಗೆ ಚಪ್ಪಲಿಯಿಂದ ಹೊಡೆಯಿರಿ” ಅಂತ ಅವಹೇಳನಾಕಾರಿಯಾಗಿ ನಿಂದಿಸಿ ಜನರನ್ನು ಎತ್ತಿಕಟ್ಟಿ ಶಾಂತಿ ಭಂಗಕ್ಕೆ ಪ್ರಯತ್ನಿಸಿರುತ್ತಾಳೆ. ಘಟನೆಗೆ ಸಂಬಂಧ ಪಡದಿರುವ ಕಿಮ್ಮನೆ ರತ್ನಾಕರ್‌ಗೆ ಅವಹೇಳನ ಮಾಡಿ ನಿಂದಿಸಿರುವ ವೀಡಿಯೋ ಕ್ಲಿಪ್‌ ಗಳನ್ನು ಈ ದೂರು ಅರ್ಜಿಯ ಜೊತೆ ಲಗತ್ತಿಸಿರುತ್ತೇನೆ. ಎಂದು ಎ ಎಸ್ ಐ ಉಮೇಶ್ ನಾಯಕ್ ಅವರಿಗೆ ಶಾಂತ ವಿರುದ್ಧ ದೂರು ನೀಡಲಾಗಿ ದೂರು ದಾಖಲಿಸಿಕೊಂಡಿದ್ದಾರೆ. ಅಮರನಾಥ ಶೆಟ್ಟಿ ಅಧ್ಯಕ್ಷ ಯುವ ಕಾಂಗ್ರೆಸ್ ತೀರ್ಥಳ್ಳಿ, ಸಾತ್ವಿಕ್ ಆಗುಂಬೆ ಯುವ ಕಾಂಗ್ರೆಸ್ ಕಾರ್ಯದರ್ಶಿ, ಯುವ ಕಾಂಗ್ರೆಸ್ ಮುಖಂಡರುಗಳಾದ ವಿಕ್ರಂ ಶೆಟ್ಟಿ, ಶಶಿಭೂಷಣ್ ಆಗುಂಬೆ, ಅರುಣ್ ಕುಮಾರ್, ಕಿರಣ್ ಕುಮಾರ್ ಚಂದನ್ ಉಪಸ್ಥಿತರಿದ್ದರು.

Categories
ಉಡುಪಿ ಕರಾವಳಿ ಕಾರ್ಕಳ ಮಂಗಳೂರು

ಕರಾವಳಿ ಪತ್ರಿಕೋಧ್ಯಮದ ಕೊಂಡಿ ಕಳಚಿತು!

ಕರಾವಳಿ ಪತ್ರಿಕೋಧ್ಯಮದ ಕೊಂಡಿ ಕಳಚಿತು!
– ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ, ನಿರೂಪಕ ಮನೋಹರ ಪ್ರಸಾದ್ ನಿಧನ
– ಅಪಾರ ಸ್ನೇಹಿತರು, ಪತ್ರಕರ್ತರ ಕಂಬನಿ

NAMMUR EXPRESS NEWS
ಮಂಗಳೂರು: ಕರಾವಳಿ ಭಾಗದ ಕನ್ನಡ ಪತ್ರಿಕೋದ್ಯಮದ ಧೀಮಂತ ಪತ್ರಕರ್ತ, ಅತ್ಯುತ್ತಮ ನಿರೂಪಕ, ಲೇಖಕ, ಮನೋಹರ ಪ್ರಸಾದ್ (65) ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರ ನಟ, ಕತೆಗಾರ ಹಾಗೂ ಅಪಾರ ಭಾಷಾ ಪಾಂಡಿತ್ಯವಿದ್ದ ಮನೋಹರ ಪ್ರಸಾದ್ ಅವರು ಅನೇಕ ಕಾರ್ಯಕ್ರಮಗಳನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಿರೂಪನೆ ಮಾಡುತ್ತಾ ಜನಸಾಮಾನ್ಯರಿಗೂ ಚಿರಪರಿಚಿತರಾಗಿದ್ದರು.

ಕಾರ್ಕಳ ಮೂಲದವರು

ಮೂಲತಃ ಕಾರ್ಕಳ ತಾಲೂಕಿನ ಕರುವಾಲು ಗ್ರಾಮದವರು. ಅವರ ತಂದೆ ಶಿಕ್ಷಕರಾಗಿ ತಾಯಿ ಗೃಹಿಣಿಯಾಗಿದ್ದರು. ಮನೋಹರ ಪ್ರಸಾದ್ ಅವರು ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಆರಂಭಗೊಂಡು ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು.

ಸಂದ ಪ್ರಶಸ್ತಿ ಗೌರವಗಳು:

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರ ಮೊದಲಾದ ಹಲವು ಗೌರವಗಳು ಅವರಿಗೆ ಒಲಿದುಬಂದಿತ್ತು.

Categories
ತೀರ್ಥಹಳ್ಳಿ

ಬಜೆಟ್ ಬಜೆಟ್… ತೀರ್ಥಹಳ್ಳಿ ಉಳಿತಾಯ ಬಜೆಟ್..!

ಬಜೆಟ್ ಬಜೆಟ್… ತೀರ್ಥಹಳ್ಳಿ ಉಳಿತಾಯ ಬಜೆಟ್..!
– ಮೊದಲ ಬಜೆಟಲ್ಲೇ ಮನಗೆದ್ದ ಪಪಂ ಅಧ್ಯಕ್ಷೆ ಗೀತಾ ರಮೇಶ್
– ಹೊಸ ಬಿಪಿಒ ಕಟ್ಟಡ ಸೇರಿದಂತೆ ಹಲವು ಯೋಜನೆ
– ತೀರ್ಥಹಳ್ಳಿ ಫೋಟೋ ಸೆಲ್ಫಿ ಪಾಯಿಂಟ್ ನಿರ್ಮಾಣ

NAMMUR EXPRESS NEWS
ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಗೀತಾ ರಮೇಶ್ ಫೆ.29ರಂದು ಪ.ಪಂ.ನ ವಾರ್ಷಿಕ ಬಜೆಟ್ ಮಂಡಿಸಿದರು. 2024-25 ನೇ ಸಾಲಿನಲ್ಲಿ 33.86 ಕೋಟಿ ಆದಾಯ, 33.72 ಕೋಟಿ ಖರ್ಚಿನ ಲೆಕ್ಕಪತ್ರ ದೊಂದಿಗೆ 13.66 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಅನ್ನು ಅವರು ಮಂಡಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ವಿಪಕ್ಷನಾಯಕ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ಯತಿರಾಜ್, ರವೀಶ್ ಬಾಳೇಬೈಲು, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ಆಡಳಿತ ಪಕ್ಷದ ಸದಸ್ಯರಾದ ಉಪಾಧ್ಯಕ್ಷರೆಹಮತ್ ಉಲ್ಲಾ ಅಸಾದಿ, ಬಿ.ಗಣಪತಿ, ಜಯಪ್ರಕಾಶ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಸುಶೀಲ ಶೆಟ್ಟಿ, ಶಬನಂ, ಮಂಜುಳಾ ನಾಗೇಂದ್ರ, ನಮೃತ್ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಕುರಿಯಾ ಕೋಸ್ ಮತ್ತು ಸಿಬ್ಬಂದಿಗಳು ಬಜೆಟ್ ಸಭೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು.

ತೀರ್ಥಹಳ್ಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಿದ್ದಪಡಿಸಲಾಗಿರುವ ಕಾರ್ಯ ಯೋಜನೆಗೆ ಎಲ್ಲರ ಸಹಕಾರವನ್ನು ಕೋರಿದ ಪ ಪಂ ಅಧ್ಯಕ್ಷರು 2024-25 ಸಾಲಿನಲ್ಲಿ ಸರ್ಕಾರದ ಅನುದಾನ ಮತ್ತು ಪ.ಪಂ.ಯ ವಿವಿಧ ಆದಾಯ ಮೂಲದಿಂದ 2,23,96,500 ಆದಾಯವನ್ನು ನಿರೀಕ್ಷಿಸಲಾಗಿದೆ. ನಿರೀಕ್ಷಿತ ಆದಾಯದಲ್ಲಿ 33,72,39,725 ರೂ ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷದ ಸದಸ್ಯರು ಆಯವ್ಯಯ ಪತ್ರದ ಅಂಕಿ ಅಂಶಗಳು ಸೇರಿದಂತೆ ಯೋಜಿತ ಉದ್ದೇಶಗಳು ವಾಸ್ತವತೆಗೆ ದೂರವಾಗಿದೆ ಎಂದು ದೂರಿದರು. ಮುಂಗಡ ಪತ್ರದ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಸಾಮಾಜಿಕ ನ್ಯಾಯ ಮತ್ತು ಬದ್ದತೆಯೊಂದಿಗೆ ಅಭಿವೃದ್ಧಿಯಿಂದ ಕೂಡಿದ್ದು ಮಾದರಿ ಆಯವ್ಯಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಂಗಡ ಪತ್ರವನ್ನು ಸಮರ್ಥಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಮಹಿಳಾ ಅಧ್ಯಕ್ಷರ ಕಳಕಳಿ ಮತ್ತು ಚಿಂತನೆಯಲ್ಲಿ ಮಂಡಿಸಲಾದ ಬಜೆಟ್‌ ಮಾದರಿಯಾಗಿದ್ದು ಇದರಲ್ಲಿ ತುಳಿತಕ್ಕೊಳಗಾದ ವರ್ಗದ ಹಿತವನ್ನು ಬಯಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಬದ್ದತೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಾದರಿಯಾಗಿದೆ ಎಂದರು. ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ ಸೇರಿದಂತೆ ಆಡಳಿತ ಪಕ್ಷದ ಎಲ್ಲ ಸದಸ್ಯರು ದನಿಗೂಡಿಸಿದರು ಮುಂಗಡ ಪತ್ರ ವಾಸ್ತವಿಕತೆಗೆ ದೂರವಾಗಿದೆ ಎಂದು ಟೀಕಿಸಿದ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಈ ಮುಂಗಡ ಪತ್ರದ ಕಲ್ಪನೆ ಮೇಲ್ನೋಟಕ್ಕೆ ಉತ್ತಮವಾಗಿದೆ. ಆದರೆ ನಿರೀಕ್ಷತ ಆದಾಯ ಅಸಾಧ್ಯ.

ಕಳೆದ ಎರಡು ವರ್ಷಗಳಿಂದ ತೆರಿಗೆಯನ್ನು ಯಾಕೆ ಕ್ರಮ ಬದ್ಧವಾಗಿ ವಸೂಲಿ ಮಾಡುತ್ತಿಲ್ಲಾ ಎಂದು ಪ್ರಶ್ನಿಸಿದರು. ಮುಂಗಡ ಪತ್ರದಲ್ಲಿ ಹೇಳಲಾದ ಆದಾಯದ ಮೂಲವನ್ನು ಪ್ರಶ್ನಿಸಿದ ಸದಸ್ಯ ಸಂದೇಶ್ ಜವಳಿ, ಮುಂಗಡ ಪತ್ರ ತಯಾರಿಯಲ್ಲೇ ಎಡವಿದ್ದೀರಿ. ಅಂಕಿ ಅಂಶಗಳಲ್ಲೇ ತಪ್ಪುಗಳಿವೆ. ರಾಜಸ್ವ ನಿರೀಕ್ಷೆ ವಾಸ್ತವತೆಗೆ ದೂರವಾಗಿದೆ. ಗೋಪಾಲಗೌಡ ರಂಗಮಂದಿರ ನಿರ್ವಹಣೆ ಇಲ್ಲಾ ಎಂದು ಟೀಕಿಸಿದರಲ್ಲದೇ ಅಬ್ದುಲ್ ಕಲಾಂ ವಾಣಿಜ್ಯ ರೋಲಿಂಗ್ ಷೆಟರ್ ತುಕ್ಕು ಹಿಡಿಯುತ್ತಿದ್ದು ಅಲ್ಲಿರುವ ಮಳಿಗೆಗಳನ್ನು ಮರು ಹರಾಜು ಮಾಡೋದು ಸೂಕ್ತ ಎಂದೂ ಹೇಳಿದರು.

ಬಜೆಟ್ ನಲ್ಲಿ ಏನೇನಿದೆ.? :

ವಿಶೇಷ ಅನುದಾನದ 2.50 ಕೋಟಿ, ಕೇಂದ್ರ ಸರ್ಕಾರದ ಸ್ವಚ್ಚ ಭಾರತ್ ಮಿಷನ್ ಅನುದಾನ 25.00 ಲಕ್ಷ, ಸಣ್ಣ ನೀರಾವರಿ ಇಲಾಖೆಯಿಂದ 50.00 ಲಕ್ಷ, ಪ.ಪಂ ನಿವೇಶನಗಳ ಮಾರಾಟದಿಂದ 4.00 ಕೋಟಿ, ಪ.ಪಂ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 95.00 ಲಕ್ಷ ರೂ, ಆಸ್ತಿ ತೆರಿಗೆ, ಖಾತಾ ವರ್ಗಾವಣೆಯಿಂದ 1.90 ಕೋಟಿ, ರಾಜ್ಯ ಸರ್ಕಾರದಿಂದ ವಿದ್ಯುಚ್ಚಕ್ತಿ ಬಿಲ್‌ ಪಾವತಿ 1.58 ಕೋಟಿ, 24×7 ಕುಡಿಯುವ ನೀರು ಸಂಬಂಧಿತ ಇತರೆ ಬಾಬಿನಿಂದ 1.00 ಕೋಟಿ, 15 ನೇ ಹಣಕಾಸು ಯೋಜನೆಯಡಿ 57.00 ಲಕ್ಷ ರೂಗಳನ್ನು ನಿರೀಕ್ಷಿಸಲಾಗಿದೆ.

ಉದ್ದೇಶಿತ ಯೋಜನೆಗಳು:

ವಿದ್ಯಾವಂತ ಯುವಕ ಯುವತಿಯರ ಉದ್ಯೋಗ ಅವಕಾಶ ಕಲ್ಪಿಸಲು ಬೆಟ್ಟಮಕ್ಕಿಯಲ್ಲಿರುವ ಬಿಪಿಓ ವಿಸ್ತರಣಾ ಕಟ್ಟಡ ನಿರ್ಮಾಣಕ್ಕೆ 50.00 ಲಕ್ಷ ರೂ, ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆಗೆ 45.00 ಲಕ್ಷ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಲುವಾಗಿ ಮನೆಗಳಿಗೆ ಡಸ್ಟ್ ಬಿನ್ ವಿತರಣೆ ಮತ್ತು ಕಸ ವಿಲೇವಾರಿ ವಾಹನ ಖರೀದಿಗೆ ಒಟ್ಟು 28.00 ಲಕ್ಷ, ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಪೇಪಾರ್ಕ್‌ ವ್ಯವಸ್ಥೆಗೆ 15.00 ಲಕ್ಷ ಮತ್ತು ಸಾರ್ವಜನಿಕರಿಗಾಗುವ ಅನಾನುಕೂಲವನ್ನು ತಪ್ಪಿಸಲು ಆಧುನಿಕ ತಂತ್ರ ವ್ಯವಸ್ಥೆಗೆ 15.00 ಲಕ್ಷ, ಮಾನವ ದಿನಗಳನ್ನು ಕಡಿತಗೊಳಿಸಿ ಅತ್ಯಾಧುನಿಕ ರಸ್ತೆ ಸ್ವಚ್ಛ ಮಾಡುವ ಯಂತ್ರ ಖರೀದಿಗೆ ,15.00 ಲಕ್ಷ ರೂಗಳನ್ನು ಮುಂಗಡ ಪತ್ರದಲ್ಲಿ, ಸಿಸಿ ಟಿವಿ ಅಳವಡಿಕೆ, ಫುಡ್ ಕೋರ್ಟ್ ನಿರ್ಮಾಣ, ವನ ಮಹೋತ್ಸವ, ಜಾತ್ರೆ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಪ.ಪಂ ಸದಸ್ಯರ ಅಧ್ಯಯನ ಪ್ರವಾಸ ಹೀಗೆ ಆದಾಯದ ಮೂಲವನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಮುಖ್ಯಾಧಿಕಾರಿ ಕುರಿಯ ಕೋಸ್, ಸದಸ್ಯರುಗಳಾದ ಶಬನಂ, ಸುಶೀಲಾ ಶೆಟ್ಟಿ, ಜಯಪ್ರಕಾಶ್‌ ಶೆಟ್ಟಿ, ಯತಿರಾಜ್‌, ಜ್ಯೋತಿ ಮೋಹನ್‌, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Categories
ರಾಷ್ಟ್ರೀಯ ವಾರ್ತೆ

ಎಲ್ ಪಿಜಿ ಗ್ರಾಹಕರಿಗೆ ಬಿಗ್‌ ಶಾಕ್..!

ಎಲ್ ಪಿಜಿ ಗ್ರಾಹಕರಿಗೆ ಬಿಗ್‌ ಶಾಕ್..!
– ಎಲ್ ಪಿಜಿ ಗ್ಯಾಸ್ ಸಿಲಿಂಡ‌ರ್ ಬೆಲೆಯಲ್ಲಿ ಏರಿಕೆ
– ಇಂದಿನಿಂದಲೇ ಹೊಸದರ ಅನ್ವಯ

NAMMUR EXPRESS NEWS
ನವದೆಹಲಿ: ಮಾರ್ಚ್ ಮೊದಲ ದಿನವೇ ಜನರಿಗೆ ಬಿಗ್ ಶಾಕ್ ಆಗಿದೆ. ಹೌದು ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ಗಳಷ್ಟು ಹೆಚ್ಚಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಶುಕ್ರವಾರ ವಾಣಿಜ್ಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿವೆ. ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ. ಈಗಿನ ಬೆಲೆಗಳ ಏರಿಕೆಯ ನಂತರ, ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ 1,795 ರೂ.ಗೆ ಲಭ್ಯವಾಗಲಿದೆ. ಬೆಲೆ ಏರಿಕೆಯು ಕೋಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಇತರ ಮಹಾನಗರಗಳ ಜನರ ಮೇಲೂ ಪರಿಣಾಮ ಬೀರಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕಬಡ್ಡಿ ಲೀಗ್!

ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕಬಡ್ಡಿ ಲೀಗ್!
– ಮಾ.9ಕ್ಕೆ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾವಳಿ!
– ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ನಯನಾ ಶೆಟ್ಟಿ ಸಾರಥ್ಯ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು ಇದರ ಸಾರಥ್ಯವನ್ನು ನಯನಾ ಶೆಟ್ಟಿ ವಹಿಸಲಿದ್ದಾರೆ. ಮಲೆನಾಡ ಮಹಿಳಾ ಟ್ರಸ್ಟ್ ಈ ಹಿಂದಿನಿಂದಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದೆ‌. ಇದೀಗ ಮಲೆನಾಡ ಮಹಿಳಾ ಟ್ರಸ್ಟ್ (ರಿ) ತೀರ್ಥಹಳ್ಳಿ ಇವರ ವತಿಯಿಂದ, ನಯನಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಅಹ್ವಾನಿತ ತಂಡಗಳ ಹೊನಲು ಬೆಳಕಿನ ಲೀಗ್ ಮಾದರಿಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಯನ್ನು ದಿನಾಂಕ: 09-03-2024 ರ ಶನಿವಾರ ತೀರ್ಥಹಳ್ಳಿಯ ಸಾಂಸ್ಕೃತಿಕ ಮಂದಿರದ ಆವರಣದಲ್ಲಿ ನಡೆಸಲಾಗುವುದು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳು ಪ್ರಥಮ ಬಹುಮಾನ 35,000, ದ್ವಿತೀಯ ಬಹುಮಾನ 25,000, ತೃತೀಯ ಬಹುಮಾನ 15,000 ಹಾಗೂ ಚತುರ್ಥ ಬಹುಮಾನ 10,000 ಪಡೆದುಕೊಳ್ಳಲಿವೆ.

ಹೆಚ್ಚಿನ ಮಾಹಿತಿ ಬೇಕಾದಲ್ಲಿ

8073170053, 9110438570, 7411476020, 8618496122 ಈ ನಂಬರ್ ಗಳಿಗೆ ಸಂಪರ್ಕಿಸಬಹುದು.

Categories
ಬೆಂಗಳೂರು ರಾಜ್ಯ

ಆಲ್ ದಿ ಬೆಸ್ಟ್ ಸ್ಟೂಡೆಂಟ್ಸ್!

ಆಲ್ ದಿ ಬೆಸ್ಟ್ ಸ್ಟೂಡೆಂಟ್ಸ್!
– ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಶುರು!
– ಪರೀಕ್ಷೆ ಭಯ ಬೇಡ, ಆರಾಮಾಗಿ ಬರೆಯಿರಿ..!

NAMMUR EXPRESS NEWS
ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1ರ ಇಂದಿನಿಂದ ಆರಂಭವಾಗಿದ್ದು , ರಾಜ್ಯದಾತ್ಯಂತ 1124 ಕೇಂದ್ರಗಳಲ್ಲಿ 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳು ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಈ ನಿಯಮಗಳ ಪಾಲನೆ ಕಡ್ಡಾಯ:

1) ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್ಗಳನ್ನು ಮಾತ್ರ ಬಳಸಲು ಅವಕಾಶ
2) ಸ್ಟ್ರಾಟಿಸ್ಟಿಕ್ಸ್ ವಿಷಯದಲ್ಲಿ ಮಾತ್ರ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬಳಸಲು ಅನುಮತಿ
3) ಪರೀಕ್ಷೆಯ ಅಂತಿಮ ಬೆಲ್ ಹೊಡೆಯುವ ಮುನ್ನ ಪರೀಕ್ಷಾ ಕೊಠಡಿಯಿಂದ ಹೊರಡುವ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ.
4) ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯ
5) ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ.
6) ಮೊಬೈಲ್ ಫೋನ್, ಎಲೆಕ್ಟ್ರಿಕ್ ಉಪಕರಣಗಳ ಬಳಕೆ ನಿಷೇಧ
7) ಪರೀಕ್ಷಾ ಅವಧಿಗಿಂತ ಮುಂಚೆ ಹೊರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗುವುದಿಲ್ಲ.

ಪರೀಕ್ಷೆಗೆ ಬೇಡ ಟೆನ್ನನ್… ಆರಾಮಾಗಿ ಬರೆಯಿರಿ

ಉನ್ನತ ಶಿಕ್ಷಣದ ಗುರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಪೈಪೋಟಿ ಪರೀಕ್ಷಾ ವಿಧಾನಗಳಲ್ಲಿ ಆದ ಸುಧಾರಣಾ ಕ್ರಮಗಳಿಂದ ಮತ್ತು ಫಲಿತಾಂಶ ವೃದ್ಧಿಗೆ ನಡೆಸಿದ ಯತ್ನಗಳಿಂದ ಇತ್ತೀಚಿನ ದಿನಗಳಲ್ಲಿ ಪಾಸ್ ಆಗುವುದು ದೊಡ್ಡ ವಿಷಯವೇ ಅಲ್ಲ. ಈಗೇನಿದ್ದರೂ ಶೇ.90 ಪ್ಲಸ್ ಫಲಿತಾಂಶದ ಗುರಿಯಷ್ಟೇ. ಈ ಗುರಿ ಬೆನ್ನೇರಿದ ಅನೇಕರು ಇಂದು ಅನವಶ್ಯ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಕೆಲ ತಪ್ಪು ತಿಳಿವಳಿಕೆ ಮತ್ತು ಮಾಹಿತಿಯಿಂದ ತಮ್ಮ ಸಾಮರ್ಥ್ಯ ಹಾಗೂ ವಿಶ್ವಾಸದ ಮೇಲೆ ಅನುಮಾನ ಪಟ್ಟು ಅನಗತ್ಯ ಮಾನಸಿಕ ಒತ್ತಡ ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಫಲಿತಾಂಶಕ್ಕೆ ಒತ್ತು ಕೊಟ್ಟು ಸಾಗುತ್ತಿರುವಾಗ ಅಲ್ಲೆಲ್ಲೋ ಅದರಲ್ಲಿ ಎಡವಿದಾಗ ಸಮಾಜ ಎಲ್ಲಿ ತನ್ನನ್ನು ಧಿಕ್ಕರಿಸುವುದೋ ಎಂಬ ಆತಂಕ ವಿದ್ಯಾರ್ಥಿಗಳನ್ನು ಕಾಡಲಾರಂಭಿಸುತ್ತದೆ. ಜತೆಗೆ ಪಾಲಕರ ಸಾಮಾಜಿಕ ಸ್ಟೇಟಸ್‌ಗೆ ಎಲ್ಲಿ ಧಕ್ಕೆ ಬರುವುದೋ ಎನ್ನುವ ಪ್ರಶ್ನೆಯು ಎದುರಾಗುತ್ತದೆ. ಪದೇಪದೆ ಗುರಿ ಬದಲಾಯಿಸಬಾರದು. ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಮತ್ತು ಆತ್ಮವಿಶ್ವಾಸ ಈ ಮೂರು ಇದ್ದಲ್ಲಿ ಸಾಧನೆಯ ಶಿಖರ ಏರುವುದು ದೊಡ್ಡ ಮಾತಲ್ಲ, ಆಲ್ ದಿ ಬೆಸ್ಟ್ ಮಕ್ಕಳೇ..!. ಎಲ್ಲರೂ ಗೆಲ್ಲುತ್ತೀರಿ.. ಗೆದ್ದವರು ಮಾತ್ರ ಗೆಲುವಲ್ಲ ಸೋತವರಿಗೂ ಇಲ್ಲಿ ಉತ್ತಮ ಅವಕಾಶ ಇದೆ. ಮರಳಿ ಪ್ರಯತ್ನವ ಮಾಡಿ… ಗುಡ್ ಲಕ್!

Categories
ರಾಷ್ಟ್ರೀಯ ವಾರ್ತೆ

ವ್ಯಕ್ತಿಯ ಶ್ವಾಸಕೋಶದಲ್ಲಿತ್ತು ಜಿರಳೆ!

ವ್ಯಕ್ತಿಯ ಶ್ವಾಸಕೋಶದಲ್ಲಿತ್ತು ಜಿರಳೆ!
– 4 ಸೆಂ.ಮೀ. ಉದ್ದ ಜಿರಳೆ ಹೊರತೆಗೆದ ಕೇರಳದ ವೈದ್ಯರು!
– ಜಿರಳೆ ತೆಗೆಯಲು 8 ಗಂಟೆ ಆಪರೇಷನ್.. ಏನಿದು ಕೇಸ್?

NAMMUR EXPRESS NEWS
ಕೊಚ್ಚಿ: ಕೇರಳದಲ್ಲಿ ವ್ಯಕ್ತಿಯೋರ್ವನ ಶ್ವಾಸಕೋಶದಲ್ಲಿದ್ದ 4 ಸೆಂಟಿ ಮೀಟರ್ ಉದ್ದದ ಜಿರಳೆಯನ್ನು ಹೊರತೆಗೆದ ವೈದ್ಯರು ರೋಗಿಯ ಜೀವ ಉಳಿಸಿದ್ದಾರೆ. ಕೊಚ್ಚಿಯ ಅಮೃತಾ ಆಸ್ಪತ್ರೆಯ ವೈದ್ಯರು ರೋಗಿಯ ಶ್ವಾಸಕೋಶ ಸೇರಿದ್ದ ಜಿರಳೆಯನ್ನು ಹೊರತೆಗೆಯಲು ಶತತ 8 ಗಂಟೆಗಳ ಕಾಲ ಶ್ರಮಿಸಿದ್ದಾರೆ. ಕೇರಳದ 55 ವರ್ಷದ ವ್ಯಕ್ತಿಯೊಬ್ಬರಿಗೆ ಉಸಿರಾಡುವಾಗ ಉಸಿರು ಕಟ್ಟಿದಂತಹ ಅನುಭವವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಪರೀಕ್ಷಿಸಿಕೊಂಡಿದ್ದಾರೆ. ಡಾ ಟಿಂಕು ಜೋಸೆಫ್ ಅವರ ನೇತೃತ್ವದ ಶ್ವಾಸಕೋಶ ತಜ್ಞರು ಈ 55 ವರ್ಷದ ವ್ಯಕ್ತಿಗೆ ಎಕ್ಸರೇ ಹಾಗೂ ಸ್ಕ್ಯಾನಿಂಗ್ ಮಾಡಿದ ವೇಳೆ ಅವರ ಶ್ವಾಸಕೋಶದಲ್ಲಿ ಜಿರಳೆ ಇರುವುದು ಕಾಣಿಸಿದೆ.

ನಂತರ ಜಿರಳೆ ಹೊರಬರುವುದಕ್ಕಾಗಿ ಚಿಕಿತ್ಸೆ ನೀಡಲು ಆರಂಭಿಸಿದಾಗ ಜಿರಳೆ ಅಲ್ಲಿಯೇ ವಿಭಜನೆಯಾಗಿದ್ದು, ಇದು ರೋಗಿಯ ಆರೋಗ್ಯವನ್ನು ಮತ್ತಷ್ಟು ಕೆಡಿಸಿತ್ತು. ಪರಿಣಾಮ ಚಿಕಿತ್ಸೆ ಮತ್ತಷ್ಟು ಕಠಿಣವಾದರೂ ಛಲ ಬಿಡದ ವೈದ್ಯರು ಸತತ ಎಂಟು ಗಂಟೆಗಳ ಕಾಲ ನಿರಂತರ ಪ್ರಯತ್ನ ಮಾಡಿ ವ್ಯಕ್ತಿಯ ಶ್ವಾಸಕೋಶದಲ್ಲಿದ್ದ ಜಿರಳೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಈ ರೋಗಿಗೆ ಈ ಹಿಂದೆಯೂ ಉಸಿರಾಟದ ಸಮಸ್ಯೆ ಇದಿದ್ದರಿಂದ ಶಸ್ತ್ರಚಿಕಿತ್ಸೆ ಸಂಪೂರ್ಣ ಸಂಕೀರ್ಣವಾಗಿತ್ತು.

ಆಸ್ಪತ್ರೆಯ ಚಿಕಿತ್ಸೆ ವೇಳೆ ಜಿರಳೆ ಸೇರಿತ್ತು!

ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಈ ರೋಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಕುತ್ತಿಗೆ ಮೂಲಕ ಉಸಿರಾಟದ ಕೊಳವೆಯೊಂದನ್ನು ಅವರಿಗೆ ಅಳವಡಿಸಲಾಗಿತ್ತು. ಅದರ ಮೂಲಕ ಈ ಜಿರಳೆ ಅವರ ಶ್ವಾಸಕೊಶವನ್ನು ಪ್ರವೇಶಿಸಿತ್ತು ಎಂದು ವೈದ್ಯರು ಹೇಳಿದ್ದಾರೆ. ಪ್ರಸ್ತುತ ಈ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.