Categories
ಬೆಂಗಳೂರು ರಾಜ್ಯ

ಕೆ ಆರ್‌ ಪುರಂನಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್‌ ಸವಾರ ಬಲಿ

ಕೆ ಆರ್‌ ಪುರಂನಲ್ಲಿ ಶೋಭಾ ಕರಂದ್ಲಾಜೆ ಕಾರಿಗೆ ಬೈಕ್‌ ಸವಾರ ಬಲಿ
– ಪಕ್ಷದ ವತಿಯಿಂದ ಕುಟುಂಬಕ್ಕೆ ಪರಿಹಾರ
– ಶೋಭಾ ಕರಂದ್ಲಾಜೆ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ

NAMMUR EXPRESS NEWS
ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಿಗೆ ಸವಾರನೊಬ್ಬ ಬಲಿಯಾಗಿದ್ದಾನೆ. ಟಿಸಿ ಪಾಳ್ಯ ನಿವಾಸಿ ಪ್ರಕಾಶ್ (35) ಮೃತ ದುರ್ದೈವಿ. ಬೆಂಗಳೂರಿನ ಕೆ.ಆರ್ ಪುರಂ ಸಮೀಪದ‌ ದೇವಸಂದ್ರ ವಿನಾಯಕ‌ ದೇವಸ್ಥಾನ ಬಳಿ ಅಪಘಾತ ಸಂಭವಿಸಿದೆ. ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ತೆರೆಯುವಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಪ್ರಕಾಶ್‌ ಗುದ್ದಿ ಕೆಳಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಪ್ರಕಾಶ್‌ ಮೇಲೆ ಖಾಸಗಿ ಬಸ್‌ ಹರಿದಿದೆ. ಗಂಭೀರ ಗಾಯಗೊಂಡ ಪ್ರಕಾಶ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ್‌ ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕೆ.ಆರ್. ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಪ್ರಕಾಶ್‌ ಬಿಜೆಪಿ ಕಾರ್ಯಕರ್ತ. ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಡೋರ್‌ ತೆರೆಯುವಾಗ ಬೈಕ್‌ನಲ್ಲಿ ಬಂದು ಗುದ್ದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಸ್‌ ಹರಿದಿದೆ. ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗುವುದು. ಈ ಘಟನೆ ನಿಜಕ್ಕೂ ದುಃಖ ತಂದಿದೆ. ಅವರ ಕುಟುಂಬಸ್ಥರ ಜತೆಗೆ ನಾವಿದ್ದೇವೆ, ಪಾರ್ಟಿ ವತಿಯಿಂದ ಪರಿಹಾರ ಕೊಡುತ್ತೇವೆ ಎಂದರು. ಶೋಭಾ ಕರಂದ್ಲಾಜೆ, ಶಾಸಕ ಭೈರತಿ ಬಸವರಾಜು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

Categories
ಆರೋಗ್ಯ ಬೆಂಗಳೂರು ರಾಜ್ಯ

ವೃದ್ಧರೇ, ಗರ್ಭಿಣಿಯರೇ ಎಚ್ಚರ..!

ವೃದ್ಧರೇ, ಗರ್ಭಿಣಿಯರೇ ಎಚ್ಚರ..!
– ಬಿಸಿಲಿನ ಝಳದಿಂದ ನಲುಗಿದ ಕರ್ನಾಟಕ
– ಬರೋಬ್ಬರಿ 569 ಹೀಟ್‌ವೇವ್ ಕೇಸು ದಾಖಲು!

NAMMUR EXPRESS NEWS
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದ್ದು, ಜನರು ಮನೆಯಿಂದ ಹೊರಗೆ ಬಂದರೆ ಬೆಂಕಿಯಲ್ಲಿ ನಡೆಯುತ್ತಿರುವ ಅನುಭವವಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ತಾಪಮಾನ ಏರುತ್ತಿರುವ ಸಮಯದಲ್ಲೇ ಇದೀಗ ಜನರಿಗೆ ಮತ್ತೊಂದು ಆತಂಕದ ಸುದ್ದಿ ಹೊರ ಬಿದ್ದಿದ್ದು, ಹೀಟ್ ವೇವ್ ಇನ್ನೂ ಹೆಚ್ಚಾಗುವ ಮುನ್ಸೂಚನೆಯನ್ನು ಆಧಿಕಾರಿಗಳು ನೀಡಿದ್ದಾರೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಈ ಹಿನ್ನೆಲೆ ಎಲ್ಲೆಡೆ ಹೀಟ್ ವೇವ್ ಆತಂಕ ಹೆಚ್ಚಾಗಿದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಬರೋಬ್ಬರಿ 569 ಹೀಟ್ ವೇವ್ ಪ್ರಕರಣ ದಾಖಲು ಆಗಿದ್ದು, ಹೆಚ್ಚಿದ ತಾಪಮಾನದಿಂದಾಗಿ 85 ವರ್ಷದ ವೃದ್ದನಿಗೆ ಹೀಟ್ ಸ್ಟ್ರೋಕ್ ಉಂಟಾಗಿದೆ. ಮೈಸೂರು ಮೂಲದ ವೃದ್ಧನಿಗೆ ಏಪ್ರಿಲ್ 4 ರಂದು ಸ್ಟ್ರೋಕ್ ಆಗಿದ್ದು, ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯಿಂದ ಹೀಟ್ ವೇವ್ ಮಾಹಿತಿ ನೀಡಲಾಗಿದೆ.

ಹೀಟ್ ವೇವ್ ಪ್ರಕರಣದಲ್ಲೇ ಬೇರೆ ಬೇರೆ ರೀತಿಯ ಕೇಸು ದಾಖಲಾಗಿದ್ದು, ಆ ಪೈಕಿ ಹೀಟ್ ರಾಷ್ – 367 ಪ್ರಕರಣ, ಹೀಟ್ ಕ್ರಾಪ್ಸ್ (ಸೆಳೆತ) – 131 ಪ್ರಕರಣ ಮತ್ತು ಹೀಟ್ ಎಕ್ಸಾಯುಯೇಷನ್ – 70 ಪ್ರಕರಣ ದಾಖಲಾಗಿದೆ. ಈಗಾಗಲೇ ಹೀಟ್ ವೇವ್ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ಬೆಳಗ್ಗೆ 11 ಗಂಟೆಯಿಂದ ಸಂಜೆ 4ರವೆಗೂ ಬಿಸಿಲಿಗೆ ಓಡಾಡದಂತೆ ಜನರಿಗೆ ಸೂಚನೆ ನೀಡಲಾಗಿದೆ.

ಅಷ್ಟೇ ಅಲ್ಲದೇ, ವಯಸ್ಸಾದವರಲ್ಲಿ ಹೀಟ್ ಸ್ಟ್ರೋಕ್ ಹಾಗೂ ಬಿಪಿ ಲೋ, ನಿತ್ರಾಣದಂತಹ ಸಮಸ್ಯೆ ಎದುರಾಗುತ್ತಿದ್ದು, ವಯೋ ವೃದ್ಧರು ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಹೊರಗಡೆ ಬರಬೇಕು. ಬಿಸಿಲಿನಿಂದಾಗಿ ಮಕ್ಕಳಲ್ಲಿ ಜ್ವರ, ಆಯಾಸ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು ಹೆಚ್ಚಾಗಿ ನೀರು ಕುಡಿಯಬೇಕು, ಗರ್ಭಿಣಿಯರು ಕೂಡ ಆದಷ್ಟು ಬಿಸಿಲಿಗೆ ಹೊರಗಡೆ ಬರದಂತೆ ವೈದ್ಯರು ಸಲಹೆ ನೀಡಿದ್ದಾರೆ. ಇನ್ನು, ಈ ಸಂದರ್ಭದಲ್ಲಿ ಮಳೆ ಏನಾದ್ರು ಬಂದರೆ, ನೀರು ಕುಡಿಯೋದರಿಂದ ವಾಂತಿ ಭೇಧಿ ಪ್ರಕರಣಗಳು ಹೆಚ್ಚಾಗಬಹುದು.

ಮಳೆ ಬಂದಾಗ ನೀರು ಸಂಗ್ರಹಣೆಯಾದರೆ ಸೊಳ್ಳೆ ಉತ್ಪತ್ತಿಯಾಗಿ ಶಂಕಿತ ಡೆಂಗ್ಯೂ ಬರುವ ಸಾಧ್ಯತೆಯೂ ಇದ್ದು, ಬಿಸಿಲಿನ ಬೇಗೆ ಹೆಚ್ಚಳ ಮತ್ತು ಕಾಲರಾದಂತಹ ಪ್ರಕರಣ ಉಂಟಾಗಿರುವ ಹಿನ್ನೆಲೆ ಜನರಿಗೆ ಆರೋಗ್ಯ ಇಲಾಖೆ ಸೂಚನೆ ರವಾನಿಸಿದೆ. ಈತನ್ಮಧ್ಯೆ ಕರ್ನಾಟಕ ಆರೋಗ್ಯ ಇಲಾಖೆಯಿಂದ ರಾಜ್ಯದ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದ್ದು, ಹೀಟ್ ವೇವ್ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ಮೀಸಲಿಡಬೇಕು, 4-6 ರಷ್ಟು ಬೆಡ್‌ಗಳನ್ನು ಪ್ರತ್ಯೇಕವಾಗಿ ಇಡಬೇಕು. ರೋಗಿಗಳು ಬಂದ ಕೂಡಲೇ ಚಿಕಿತ್ಸೆ ನೀಡಬೇಕು, ನಿರ್ಜಲೀಕರಣ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕುಔಷಧ, ಏರ್ ಕೂಲರ್, ಫ್ಯಾನ್ ಇಡಬೇಕು ಎಂದು ಸೂಚನೆ ನೀಡಲಾಗಿದೆ.

Categories
ರಾಜ್ಯ ಶಿಕ್ಷಣ

ಬಿಪಿಎಲ್ ಕಾರ್ಡ್ ದಾರರ ಮಕ್ಕಳಿಗೆ ಉಚಿತ ಶಿಕ್ಷಣ..!

ಬಿಪಿಎಲ್ ಕಾರ್ಡ್ ದಾರರ ಮಕ್ಕಳಿಗೆ ಉಚಿತ ಶಿಕ್ಷಣ..!
– ಕೇಂದ್ರೀಯ ವಿದ್ಯಾಲಯದಿಂದ ಆರ್ ಟಿಇ ಪ್ರವೇಶಕ್ಕೆ ಅರ್ಜಿ

NAMMUR EXPRESS NEWS
ಬೆಂಗಳೂರು: ಕೇಂದ್ರೀಯ ವಿದ್ಯಾಲಯದಲ್ಲಿರುವ ಶೇಕಡ 25ರಷ್ಟು ಶಿಕ್ಷಣ ಹಕ್ಕು ಕಾಯ್ದೆ ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಏಪ್ರಿಲ್ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕೇಂದ್ರೀಯ ವಿದ್ಯಾಲಯದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಅಭ್ಯರ್ಥಿಗಳು ಮತ್ತು ಬಿಪಿಎಲ್ ಕಾರ್ಡ್ ದಾರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೇಂದ್ರೀಯ ವಿದ್ಯಾಲಯದಲ್ಲಿ ಆರ್.ಟಿ.ಇ. ಸೀಟುಗಳಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ kvsanghathan.nic.in ಅಥವಾ kvonlineadmission.kvs.gov.in ಸಂಪರ್ಕಿಸಬಹುದು ಎಂದು ಹೇಳಲಾಗಿದೆ.

Categories
ಕರಾವಳಿ ಮಂಗಳೂರು

ಬಿಜೆಪಿ ಭದ್ರಕೋಟೆಗೆ ಮೋದಿ ಮತ್ತೆ ಆಗಮನ!?

ಬಿಜೆಪಿ ಭದ್ರಕೋಟೆಗೆ ಮೋದಿ ಮತ್ತೆ ಆಗಮನ!?
– ಏ.14ರಂದು ಮಂಗಳೂರಿನಲ್ಲಿ ಸಾರ್ವಜನಿಕರ ಸಭೆ
– ಜನರನ್ನು ಉದ್ದೇಶಿಸಿ ಭಾಷಣ, ಅಭ್ಯರ್ಥಿಗಳ ಪರ ಪ್ರಚಾರ
– ಕರಾವಳಿ ರಾಜಕಾರಣದಲ್ಲಿ ಹೊಸ ಹುಮ್ಮಸ್ಸು

NAMMUR EXPRESS NEWS
ಮಂಗಳೂರು: ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 14 ಕ್ಷೇತ್ರಗಳಲ್ಲಿ ಪ್ರಚಾರದ ಕಾವು ಜೋರಾಗುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಚುನಾವಣಾ ಪ್ರಚಾರದ ಭರಾಟೆ ಕೂಡ ಜೋರಾಗುತ್ತಿದೆ. ರಾಷ್ಟ್ರ, ರಾಜ್ಯ ನಾಯಕರು, ಸ್ಟಾರ್‌ ಪ್ರಚಾರಕರು ಅಭ್ಯರ್ಥಿಗಳ ಪ್ರರ ಪ್ರಚಾರಕ್ಕೆಂದು ಕ್ಷೇತ್ರಗಳಿಗೆ ಬಂದು ಹೋಗುತ್ತಿದೆ. ಸದ್ಯ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿಯು ರಾಷ್ಟ್ರ ನಾಯಕರು ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿಯ ಭದ್ರಕೋಟೆ ಕರಾವಳಿಗೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಮೋದಿ ಅವರು ಏ.14ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೋಡ್‌ಶೋ ಕೂಡ ನಡೆಸಲಿದ್ದಾರೆ. ಅದಾದ ಬಳಿಕ ಅದೇದೀನ ಮಂಗಳೂರಿಗೆ ಆಗಮಿಸಲಿದ್ದು, ನಗರದಲ್ಲಿ ನಡೆಯಲಿರುವ ಸಾರ್ವಜನಿಕರ ಬಹಿರಂಗ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಎಲ್ಲಿ ನಡೆಯುತ್ತೆ ಎಂಬುದು ಸ್ಪಷ್ಟ ಆಗಿಲ್ಲ

ಪ್ರಧಾನಿ ಅವರು ಏ.14ರಂದು ಮಧ್ಯಾಹ್ನದ ನಂತರ ಮಂಗಳೂರಿಗೆ ಬರುವ ಕಾರ್ಯಕ್ರಮ ನಿಗದಿಯಾಗಿರುವುದು ನಿಜ. ಸದ್ಯದ ಮಾಹಿತಿ ಪ್ರಕಾರ ಆ ದಿನ ಮಧ್ಯಾಹ್ನದ ನಂತರ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಆದರೆ, ಸಮಾವೇಶ ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಇನ್ನಷ್ಟೇ ಸ್ಥಳ ನಿಗದಿಯಾಗಬೇಕಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಂಗಳೂರಿಗೆ ಬಂದಿದ್ದರು!

ಈ ಹಿಂದೆ ಪ್ರಧಾನಿ ಅವರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದು ಹೋಗಿದ್ದಾರೆ. ಮಂಗಳೂರಿನಲ್ಲಿ ರೋಡ್‌ ಶೋ ಕೂಡ ನಡೆಸಿದ್ದಾರೆ. ಇತ್ತೀಚೆಗೆ ಅಂದರೆ 2022ರ ಸೆ.2ರಂದು ಮೋದಿ ಅವರು ಮಂಗಳೂರಿಗೆ ಆಗಮಿಸಿದ್ದು, ಬಂದರಿಗೆ ಸಂಬಂಧಿಸಿದ ಹಲವು ಅಭಿವೃದ್ಧಿ ಪರ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕೆ ಆಗಮಿಸಿದ್ದರು. ಅದಕ್ಕೂ ಮೊದಲು ನೆಹರೂ ಮೈದಾನದಲ್ಲಿನಡೆದ ಪ್ರಚಾರ ಸಮಾವೇಶದಲ್ಲಿಯೂ ಪ್ರಧಾನಿ ಅವರು ಭಾಗವಹಿಸಿದ್ದರು. ಹೀಗಿರುವಾಗ, ಮೋದಿ ಅವರು ಮತ್ತೊಮ್ಮೆ ಕರಾವಳಿಗೆ ಆಗಮಿಸುತ್ತಿರುವುದು ಕರಾವಳಿಯ ಬಿಜೆಪಿ ಅಭ್ಯರ್ಥಿಗಳ ಉತ್ಸಾಹವನ್ನು ಹಿಮ್ಮಡಿಗೊಳಿಸಿದೆ.

Categories
ಮಲ್ನಾಡ್ ರಾಜ್ಯ ಹವಾಮಾನ ಸುದ್ದಿ

ಯುಗಾದಿ ಹಬ್ಬಕ್ಕೆ ಮಳೆ!

ಯುಗಾದಿ ಹಬ್ಬಕ್ಕೆ ಮಳೆ!
– ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ
– ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
– ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

NAMMUR EXPRESS NEWS
ಬೆಂಗಳೂರು : ಇಂದಿನಿಂದ ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಾವಣಗೆರೆ, ತುಮಕೂರು, ಬಾಗಲಕೋಟೆ, ಬೀದರ್, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆ ಕರಾವಳಿ, ಮಲೆನಾಡು ಹಾಗೂ ಒಳನಾಡಿನಲ್ಲಿ ಮಳೆಯಾಗಲಿದೆ. ಇಂದು ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

– ಈ ಜಿಲ್ಲೆಗಳಲ್ಲಿ ನಾಳೆ ಮಳೆ ಸಾಧ್ಯತೆ

ಏಪ್ರಿಲ್ 9 ರಂದು ದಕ್ಷಿಣ ಕನ್ನಡ, ಉಡುಪಿ, ಬೀದ‌ರ್, ಕಲಬುರಗಿ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Categories
ಕರಾವಳಿ ಶಿಕ್ಷಣ

ಏಪ್ರಿಲ್ 14 ಆಳ್ವಾಸ್ ಶೈಕ್ಷಣಿಕ ಪ್ರವೇಶ ಪರೀಕ್ಷೆ

ಏಪ್ರಿಲ್ 14 ಆಳ್ವಾಸ್ ಶೈಕ್ಷಣಿಕ ಪ್ರವೇಶ ಪರೀಕ್ಷೆ
– ಪರೀಕ್ಷೆ ಜೊತೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
– ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷಾ ಪತ್ರಿಕೆ

NAMMUR EXPRESS NEWS
ಏಪ್ರಿಲ್ 14 ರಂದು ಆಳ್ವಾಸ್‌ ಶೈಕ್ಷಣಿಕ ವಿದ್ಯಾರ್ಥಿ ವೇತನ ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿದ್ದು ಮಲೆನಾಡಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಾಗಿದ್ದು ಸಿಬಿಎಸ್‌ಇ, ಐಸಿಎಸ್‌ಸಿ ಮತ್ತು ರಾಜ್ಯ ಪಠ್ಯಕ್ರಮದ ಕನ್ನಡ ಇಂಗ್ಲೀಷ್ ಮಾಧ್ಯಮದ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಆಳ್ವಾಸ್ ಘಟಕದ ಸಂಚಾಲಕ ಎನ್. ಸತೀಶ್ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಮದ ನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಾ ಶೈಕ್ಷಣಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ ಸಹಾಯಧನ. ವಿವಿಧ ಶಿಷ್ಯವೇತನ ಬಹುಮಾನ ಪುರಸ್ಕಾರಗಳನ್ನು ವಿತರಿಸುತ್ತಾ ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನವು ಈ ಬಾರಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ ಕೋಟಿಗೂ ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ ಎಂದರು. ಎಸ್.ಎಸ್.ಎಲ್.ಸಿ.ತರಗತಿಯಲ್ಲಿ ಸಿಬಿಎಸ್‌ಸಿ, ಐಸಿಎಸ್‌ಇ. (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ- ಭಾರತೀಯ ಪ್ರೌಢಶಿಕ್ಷಣ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯ ಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ )ಪರೀಕ್ಷೆ ಬರೆದ ವಿಧ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬಹುದಾಗಿದೆ. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅಯ್ಕೆಯಾದ ವಿದ್ಯಾರ್ಥಿಗಳು ದೇಶದಲ್ಲೇ ಅತ್ಯುತ್ತಮ ಮತ್ತು ಅನನ್ಯ ಮಾದರಿಯ ಶಿಕ್ಷಣ ನೀಡುತ್ತಿರುವ ಕಾಲೇಜಿನಲ್ಲಿ ವಿಜ್ಞಾನ ವಾಣಿಜ್ಯ ಕಲಾ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ.

ಇದೇ 14 ರಂದು ನಡೆಯುವ ಪ್ರವೇಶ ಪರಿಕ್ಷಾಗೆ ಹಾಜರಾಗಬಯಸುವ ವಿದ್ಯಾರ್ಥಿಗಳು ಮೂಡುಬಿದರೆಯ ವಿದ್ಯಾಗಿರಿ ಆಳ್ವ ಅವರಣದಲ್ಲಿ ಆಳ್ವಾಸ್‌ ಪದವಿ ಪೂರ್ವ ಕಾಲೇಜ್‌ಗೆ ಅಗಮಿಸಿ ಪರೀಕ್ಷೆ ಬರೆಯಬಹುದು. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷಾ ಪತ್ರಿಕೆ ಇರಲಿದೆ. ಅಲ್ಲದೆ ಈ ಪರೀಕ್ಷೆಗೆ ಹೋಗವ ವಿದ್ಯಾರ್ಥಿಗಳು ಆಧಾರ ಕಾರ್ಡ್ ಮತ್ತು ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ ತರುವುದು ಹಾಗೂ ರಾತ್ರಿ ಉಳಿಯಲು ರೂಂ ವ್ಯವಸ್ಥೆಯೊಂದಿಗೆ ಉಪಹಾರದ ವ್ಯವಸ್ಥೆಯನ್ನು ಸಹ ಸಂಸ್ಥೆಯಿಂದ ಉಚಿತವಾಗಿ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು https://scholarship.alvas.org/ ಈ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಗೆ ಕಳಂಕ ತರುತ್ತಿರುವ ದುಷ್ಟ ಶಕ್ತಿಗಳು!

ತೀರ್ಥಹಳ್ಳಿಗೆ ಕಳಂಕ ತರುತ್ತಿರುವ ದುಷ್ಟ ಶಕ್ತಿಗಳು!
– ದೇಶ ದ್ರೋಹ ಕೆಲಸಕ್ಕೆ ಬೆಂಬಲಿಸುತ್ತಿರುವವರಿಗೆ ಧಿಕ್ಕಾರ ಇರಲಿ
– ಯುವ ನಾಯಕ ಮಹಾಂತ್ ಗೌಡ ಪತ್ರಿಕಾ ಪ್ರಕಟಣೆ

NAMMUR EXPRESS : 
ತೀರ್ಥಹಳ್ಳಿ ಎಂದಾಗ ನೆನಪಾಗುವುದು ಕುವೆಂಪು, ಆಗುಂಬೆಯ ಮಳೆ, ರಾಮೇಶ್ವರ ದೇವಸ್ಥಾನ, ತುಂಗಾ ಸೇತುವೆ..ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಈ ಎಲ್ಲ ಹೆಗ್ಗಳಿಕೆಗಳನ್ನು ಅಳಿಸಿ ರಾಷ್ಟ್ರ ಮಟ್ಟದಲ್ಲಿ ಕಳಂಕ ಅಂಟಿಸಲು ಕೆಲ ಕಿಡಿಗೇಡಿಗಳು ಕಾರಣರಾಗಿದ್ದಾರೆ. ತೀರ್ಥಹಳ್ಳಿಯನ್ನು ಎರಡನೇ ಭಟ್ಕಳ ಮಾಡಲು ಹೊರಟಿರುವ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಕೆಲವು ರಾಜಕಾರಣಿಗಳು ಅವರ ಅಭಿಮಾನಿಗಳಿಗೆ ದಿಕ್ಕಾರ.

ಸಾಂಸ್ಕೃತಿಕ, ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ತೀರ್ಥಹಳ್ಳಿಯ ಭವ್ಯ ಪರಂಪರೆಗೆ ಪದೇಪದೇ ಎನ್. ಐ. ಎ ದಾಳಿಯಿಂದ ಒಳಗಿರುವ ದುಷ್ಟಶಕ್ತಿಗಳ ಅನಾವರಣವಾಗಿದೆ. ಹಗಲು ರಾತ್ರಿ ಎನ್ನದೇ, ಹಳ್ಳಿ ಪಟ್ಟಣ ಎನ್ನದೇ ಮಲೆನಾಡಿನ ಎಲ್ಲ ಭಾಗಗಳಲ್ಲಿ ಜನಸಾಮಾನ್ಯರು ಒಬ್ಬಂಟಿಯಾಗಿ ತಿರುಗಾಡಿ ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಉಗ್ರ ಚಟುವಟಿಕೆ ಒಳಗೊಳಗೇ ಜೋರಾಗಿ ನಡೆಯುತ್ತಿದ್ದರೂ ಕಂಡರೂ ಕಾಣದಂತಿದ್ದು ಬೆಳೆಸಿದವರೂ ಇಲ್ಲಿನ ಮೂರ್ಖ ಜನರೇ. ಇವರ ವ್ಯವಹಾರಗಳು ಅಂಥವರ ಬಳಿಯಲ್ಲೇ. ಏಕೆಂದರೆ ಈಗ ಬಾಂಬ್ ಬ್ಲಾಸ್ಟ್ ನಲ್ಲಿ ಬಂಧನದಲ್ಲಿರುವವರು ಯಾರೂ ಹೊರಗಿನವರಲ್ಲ, ಇಲ್ಲೇ ಹುಟ್ಟಿ ಬೆಳೆದವರು. ಆದರೆ ಅಂತವರ ಬಂಧನವಾದಾಗ ಅವರ ಕುಟುಂಬಸ್ಥರ ಬಗ್ಗೆ ಕನಿಕರದ ಮಾತನಾಡಿ ಅವರ ಇಂಟರ್ವ್ಯೂ ಮಾಡಿ ಮುಗ್ಧರೆಂಬಂತೆ ಚಿತ್ರಿಸಿದವರು ನಮ್ಮದೇ ತೀರ್ಥಹಳ್ಳಿಯ ಕೆಲ ಜಾತ್ಯಾತೀತ ತೆವಲಿನ ಪ್ರಜ್ಞಾವಂತರು.

ತೀರ್ಥಹಳ್ಳಿಯಲ್ಲಿ ಗುಪ್ತವಾಗಿ ಉಗ್ರ ಚಟುವಟಿಕೆ ನಡೆಯುತ್ತಿದ್ದುದು ಇಂದು ನಿನ್ನೆಯಿಂದಲ್ಲ. ಸಮಾಜದ ಎದುರು ಸಜ್ಜನರಂತೆ ನಟಿಸಿ ಒಳಗೊಳಗೆ ಧರ್ಮಾಂಧತೆ ಪ್ರದರ್ಶಿಸುವ ಹೀನ ಬುದ್ಧಿ ಈಗೀಗ ಜಗಜ್ಜಾಹೀರಾಗಿದೆ. ಕೆಲ ವರ್ಷಗಳ ಹಿಂದೆಯೇ ತಾಲೂಕಿನ ಕೆಲವು ಜಾಗಗಳಿಂದ ಸೆಟಲೈಟ್ ಫೋನ್ ಹೋದ ವಿಚಾರವಾಗಿ ಹಾಗೂ ಬಾಂಬ್ ಪ್ರಯೋಗ ನಡೆಸಿದ ಸಲುವಾಗಿ ಕೇಂದ್ರ ತಂಡ ತನಿಖೆಗೆ ಬಂದಿತ್ತು. ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣದಲ್ಲಿ ತೀರ್ಥಹಳ್ಳಿಯ ಉಗ್ರನೊಬ್ಬನ ಬಂಧನವೂ ಆಗಿತ್ತು. ಮಂಗಳೂರಿನಲ್ಲಿ ಕುಕ್ಕರ್ ಬಾಂಬರ್ ಬಂಧನವಾದಾಗ ತೀರ್ಥಹಳ್ಳಿ ಹೆಸರಿಗೆ ಮತ್ತಷ್ಟು ಮಸಿ ಅಂಟಿತ್ತು. ನಂತರ ಇದೀಗ ಬೆಂಗಳೂರಿನ ರಾಮೇಶ್ವರಂ ಕೆಫೆ ಯಲ್ಲಿ ಬಾಂಬ್ ಬ್ಲಾಸ್ಟ್ ಮೂಲವೂ ತೀರ್ಥಹಳ್ಳಿಯದ್ದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿರುವ ಉಗ್ರನ ಸಂಪರ್ಕ ಹೊಂದಿದ್ದ ಎನ್ನಲಾದ ಕಾರಣಕ್ಕೆ ಎನ್ ಐ ಎ ತಂಡದಿಂದ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನೊಬ್ಬನ ವಿಚಾರಣೆ ನಡೆಯಿತು. ತಕ್ಷಣ ಎಚ್ಚರಗೊಂಡ ಕೆಲ ತಲೆಹಿಡುಕ ರಾಜಕೀಯ ವ್ಯಕ್ತಿಗಳು ಬಿಜೆಪಿಯೇ ಬಾಂಬ್ ಬ್ಲಾಸ್ಟ್ ಗೆ ಕಾರಣ ಎಂಬಂತೆ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ಬ್ಲಾಸ್ಟ್ ಗೆ ಕಾರಣನಾದ ವ್ಯಕ್ತಿಯ ಗೆಳೆಯನಾಗಿದ್ದ, ಆತನೊಂದಿಗೆ ವ್ಯವಹಾರ ನಡೆಸುತ್ತಿದ್ದ ಎಂಬ ಕಾರಣಕ್ಕೆ ಕೇವಲ ಮಾಹಿತಿ ಸಂಗ್ರಹಕ್ಕಾಗಿವಿಚಾರಣೆಗೆ ಕರೆದೊಯ್ಯಲಾಗಿತ್ತೇ ಹೊರತೂ ಬಂಧನದಲ್ಲಿ ಇಟ್ಟಿರಲಿಲ್ಲ. ಆತ ವಿಚಾರಣೆ ಮುಗಿಸಿ ಹಿಂತಿರುಗಿಯೂ ಆಗಿದೆ. ಇದೀಗ ಬಂದ ಮಾಹಿತಿಯಂತೆ ಕೆಲ ಮತಾಂಧರು ತಮ್ಮ ಮೊಬೈಲ್ ಅಂಗಡಿಗೆ ಬಂದ ಹಿಂದೂ ಹುಡುಗರ ಹೆಸರು, ನಂಬರ್ ಬಳಸಿ ಫೇಕ್ ಐಡಿ ಮಾಡಿಕೊಂಡು ಉಗ್ರ ಚಟುವಟಿಕೆಗೆ ಸಹಾಯ ಮಾಡುತ್ತಿದ್ದರು ಎನ್ನಲಾಗುತ್ತಿದೆ.

ಇದುವರೆಗೆ ಜಿಲ್ಲೆಯಲ್ಲಿ ಹತ್ತಾರು ವ್ಯಕ್ತಿಗಳು ನೇರವಾಗಿ ಉಗ್ರ ಚಟುವಟಿಕೆ ನಡೆಸಿದ್ದು ಖಚಿತವಾಗಿದ್ದು ಬಂಧಿಸಲಾಗಿದ್ದರೂ ಈ ಬಗ್ಗೆ ಅನೇಕ ರಾಜಕಾರಣಿಗಳು, ಚಿಂತಕರು ತುಟಿ ಬಿಚ್ಚಿರಲಿಲ್ಲ. ಆದರೆ ತನ್ನ ಹೆಸರಿನ ಫೇಕ್ ಐಡಿ ಇದ್ದ ಕಾರಣ ಬಿಜೆಪಿ ಕಾರ್ಯಕರ್ತನೊಬ್ಬ ಎನ್. ಐ ಎ ವಿಚಾರಣೆಗೆ ಒಳಪಟ್ಟಿದ್ದನ್ನು ಅಪಪ್ರಚಾರಕ್ಕೆ ಬಳಸುತ್ತಿದ್ದಾರೆ. ಉಗ್ರರು ಎಷ್ಟು ಅಪಾಯವೋ ಇಂತಹ ಡಬಲ್ ಸ್ಟಾಂಡರ್ಡ್ ನ ರಾಜಕಾರಣಿಗಳೂ ಅಷ್ಟೇ ಅಪಾಯ.

ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗುವವರನ್ನು ಇಲ್ಲಿಂದ ತೊಲಗಿಸಿ ನೆಮ್ಮದಿಯ ತೀರ್ಥಹಳ್ಳಿ ಮತ್ತೆ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಇದರ ಜತೆಗೆ ಒಂದು ಧರ್ಮದವನೆಂಬ ಕಾರಣಕ್ಕೆ ಉಗ್ರರ ಬಗ್ಗೆ ಮೌನ ತಾಳುವವರು ಹಾಗೂ ಹಿಂದೂ ಯುವಕ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಯದೇ ಅಪಪ್ರಚಾರ ಮಾಡುವುದು ಹೊಲಸು ಕೆಲಸವೇ ಸರಿ.

ದೇಶದ ಭದ್ರತೆಯ ದೃಷ್ಟಿಯಿಂದ ಯಾರೇ ಅನುಮಾನಾಸ್ಪದ ವ್ಯಕ್ತಿಗಳು ಇದ್ದರೂ ತನಿಖೆ ಆಗಲೇಬೇಕು, ಅದನ್ನು ಬಿಜೆಪಿ ಪಕ್ಷವಾಗಲಿ, ಯಾವುದೇ ಹಿಂದೂಪರ ಸಂಘಟನೆಯಾಗಲೀ ವಿರೋಧ ಮಾಡಲಾರದು. ಆದರೆ ಬಾಂಬ್ ಬ್ಲಾಸ್ಟ್ ಮಾಡಿದ ಆರೋಪಿಗಳನ್ನು ತನಿಖೆ ಮಾಡುತ್ತಿದ್ದಾಗ NIA ಕಾರ್ಯವ್ಯಾಪ್ತಿ ಬಗ್ಗೆ ಎಬಿಸಿಡಿ ತಿಳಿಯದವರೆಲ್ಲಾ ಇದು ರಾಜಕೀಯ ಪ್ರೇರಿತ ಎಂಬಂತೆ ಮಾತಾಡುತ್ತಿದ್ದರು. ತಮ್ಮ ರಾಜಕೀಯ ತೆವಲಿಗೆ ಇಲ್ಲದ ಸಲ್ಲದ ಆರೋಪದ ಬದಲು ತೀರ್ಥಹಳ್ಳಿಗೆ ಇನ್ಮುಂದೆ ಇಂತಹ ಕಳಂಕ ಬಾರದಂತೆ ನಾವೆಲ್ಲರೂ ಸೇರಿ ತಡೆಯಬೇಕಿದೆ.

– ಮಹಾಂತ್ ಗೌಡ
ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ, ತೀರ್ಥಹಳ್ಳಿ

ಭಾರತ್ ಮಾತಾ ಕೀ ಜೈ

Categories
ಬೆಂಗಳೂರು ರಾಜ್ಯ ಶಿಕ್ಷಣ

ಮೇ 29ಕ್ಕೆ ಶಾಲೆ ಪುನರಾರಂಭ

ಮೇ 29ಕ್ಕೆ ಶಾಲೆ ಪುನರಾರಂಭ
– ವರ್ಷದ ಮೊದಲ ಅವಧಿ ಮೇ 29ರಿಂದ ಅ. 2ರವರೆಗೆ
– 2ನೇ ಅವಧಿ ಅ. 21ರಿಂದ 2025ರ ಏ.10ರವರೆಗೆ

NAMMUR EXPRESS NEWS
ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2024- 25ರ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಮೇ 29ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಈ ವರ್ಷ ಕಾನೂನಿನ ಸುಳಿಯಲ್ಲಿ ಸಿಲುಕಿಕೊಂಡಿದ್ದ ಮೌಲ್ಯಾಂಕನ ಪರೀಕ್ಷೆ ಮುಂದಿನ ವರ್ಷವು ಮುಂದುವರಿಯಲಿದೆ. ಆದರೆ ಮೌಲ್ಯಾಂಕನದ ಬಗ್ಗೆ ಪ್ರತ್ಯೇಕ ಸುತ್ತೋಲೆ ಹೊರಡಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

ಶೈಕ್ಷಣಿಕ ವರ್ಷದ ಮೊದಲ ಅವಧಿ ಮೇ 29ರಿಂದ ಅ. 2ರ ವರೆಗೆ ಎರಡನೇ ಅವಧಿ ಅ. 21ರಿಂದ 2025ರ ಏಪ್ರಿಲ್ 10ರ ವರೆಗೆ ಇರಲಿದೆ. ಒಟ್ಟು 244 ಶಾಲಾ ಕರ್ತವ್ಯದ ದಿನಗಳಿರಲಿದ್ದು, 180 ದಿನಗಳು ಕಲಿಕೆ-ಬೋಧನೆ ಪ್ರಕ್ರಿಯೆಗೆ ಉಳಿಯಲಿದೆ. ದಸರಾ ರಜೆ ಅ. 3ರಿಂದ 20ರ ವರೆಗೆ ಇರಲಿದೆ. ಒಟ್ಟಾರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ 121 ದಿನ ರಜೆ ಇರಲಿದೆ. ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನದ ಉದ್ದೇಶದಿಂದ ಈ ಮಾರ್ಗಸೂಚಿಯನು, ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಮಾರ್ಗಸೂಚಿಯಲ್ಲಿ ತಿಂಗಳುವಾರು ಪಾಠ ಹಂಚಿಕೆ, ಪಠ್ಯತರ ಚಟುವಟಿಕೆಗಳು, ಫಲಿತಾಂಶಮುಖೀ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ), ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ, ಪರೀಕ್ಷೆಗಳು, ಮೌಲ್ಯಾಂಕನ ವಿಶ್ಲೇಷಣೆಗೆ ಅವಕಾಶ ಮತ್ತು ಸಮಯ ನಿಗದಿಪಡಿಸಲಾಗಿದೆ.

244 ಶಾಲಾ ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನಕ್ಕಾಗಿ 26 ದಿನ, ಪಠೇತರ ಚಟುವಟಿಕೆಗಳಿಗೆ 24 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ನಿರ್ವಹಣೆಗೆ 10 ದಿನ. ಸ್ಥಳೀಯ ರಜೆಗೆ 4 ದಿನವನ್ನು ನಿಗದಿ ನಿಗದಿಪಡಿಸಲಾಗಿದೆ. ಹಾಗೆಯೇ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಎರಡು ಜತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ, ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳು ತಾಲೂಕುಗಳಿಗೆ ಸರಬರಾಜು ಆಗುತ್ತಿದ್ದು, ಮೊದಲ ಹಂತದಲ್ಲಿ ಏ. 10ರಂದು ಮುಖ್ಯೋಪಾಧ್ಯಯರು ಈ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ. ಜೂ. 30ರೊಳಗೆ ಶಾಲಾ ದಾಖಾಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ,

Categories
ಹೊಸನಗರ

ಇಂದಿನ ರಾಶಿ ಫಲ ಹೇಗಿದೆ?

ಇಂದಿನ ರಾಶಿ ಫಲ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
2024 ಎಪ್ರಿಲ್ 08ರ ಸೋಮವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

* ಮೇಷ ರಾಶಿ :
ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಮನೆಯ ಹೊರಗೆ ಅನಿರೀಕ್ಷಿತ ಸಮಸ್ಯೆಗಳು ಉದ್ಭವಿಸುತ್ತವೆ. ನಿರುದ್ಯೋಗ ಪ್ರಯತ್ನಗಳು ಕೂಡಿ ಬರುವುದಿಲ್ಲ. ವೃತ್ತಿ ಮತ್ತು ವ್ಯವಹಾರದಲ್ಲಿ ಆಲೋಚನೆಗಳು ಕೂಡಿ ಬರುವುದಿಲ್ಲ. ಆರ್ಥಿಕ ಪರಿಸ್ಥಿತಿ ನಿಧಾನವಾಗಿರುತ್ತದೆ. ಹಣದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.

* ವೃಷಭ ರಾಶಿ :
ದಿಢೀರ್ ಧನಲಾಭ ಉಂಟಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳು ವಿಸ್ತಾರಗೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ. ದೀರ್ಘಾವಧಿ ಸಾಲದ ಒತ್ತಡದಿಂದ ಮುಕ್ತಿ ದೊರೆಯುತ್ತದೆ.

* ಮಿಥುನ ರಾಶಿ :
ಮಿತ್ರರೊಂದಿಗೆ ವಿವಾದ ಉಂಟಾಗುತ್ತದೆ. ಕೈಗೊಂಡ ಕೆಲಸಗಳು ಪ್ರಗತಿಯಾಗದೇ ನಿರಾಸೆ ಹೆಚ್ಚಾಗುತ್ತದೆ. ಮನೆಯ ಕಿರಿಕಿರಿಗಳು ಹೆಚ್ಚಾಗುತ್ತವೆ ಮತ್ತು ಮಾನಸಿಕ ಅನಾರೋಗ್ಯ ಸಮಸ್ಯೆಗಳು ನೋಯಿಸುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ದೊರೆಯುವುದಿಲ್ಲ.

* ಕಟಕ ರಾಶಿ :
ಆಪ್ತ ಸ್ನೇಹಿತರಿಂದ ಆಶ್ಚರ್ಯಕರ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಾಗುತ್ತದೆ. ಸ್ಥಿರಾಸ್ತಿ ಖರೀದಿಸಲಾಗುತ್ತದೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುತ್ತದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.

* ಸಿಂಹ ರಾಶಿ :
ಬಾಲ್ಯದ ಗೆಳೆಯರ ಭೇಟಿ ಸಂತಸ ತರುತ್ತದೆ. ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ವ್ಯವಹಾರಗಳಲ್ಲಿ ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಬಂಧು ಮಿತ್ರರ ನೆರವಿನಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಆರ್ಥಿಕ ವಾತಾವರಣವು ಆಶಾದಾಯಕವಾಗಿರುತ್ತದೆ.

* ಕನ್ಯಾ ರಾಶಿ :
ಪೋಷಕರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಸಂಬಂಧಿಕರೊಂದಿಗೆ ಅನಿರೀಕ್ಷಿತ ಜಗಳಗಳು ಉಂಟಾಗುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯಾಪಾರಗಳು ನಿಧಾನವಾಗಿರುತ್ತವೆ ಮತ್ತು ಉದ್ಯೋಗದ ವಾತಾವರಣವು ಉದ್ವಿಗ್ನವಾಗಿರುತ್ತದೆ.

* ತುಲಾ ರಾಶಿ :
ಪ್ರಮುಖ ವಿಷಯಗಳ ಆಲೋಚನೆಗಳಲ್ಲಿ ಸ್ಥಿರತೆಯ ಕೊರತೆ ಇರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ವಿವಾದಗಳು ಉದ್ಭವಿಸುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಪ್ರಯತ್ನಗಳು ಫಲ ನೀಡುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಚರ್ಚೆಗಳಿರುತ್ತವೆ.

* ವೃಶ್ಚಿಕ ರಾಶಿ :
ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ದೇಗುಲಕ್ಕೆ ಭೇಟಿ ನೀಡುತ್ತೀರಿ. ನಿರುದ್ಯೋಗ ಪ್ರಯತ್ನಗಳು ಧನಾತ್ಮಕವಾಗಿರುತ್ತವೆ. ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ವೃತ್ತಿಪರ ಉದ್ಯೋಗಗಳು ಅನುಕೂಲಕರವಾಗಿರುತ್ತದೆ.

* ಧನುಸ್ಸು ರಾಶಿ :
ನಿರುದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲದಿಂದ ಉದ್ಯೋಗಾವಕಾಶ ದೊರೆಯುತ್ತದೆ. ಮಾನಸಿಕ ಪ್ರಶಾಂತತೆ ದೊರೆಯುತ್ತದೆ ಮತ್ತು ವ್ಯವಹಾರಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ.

* ಮಕರ ರಾಶಿ :
ವ್ಯಾಪಾರ ವ್ಯವಹಾರಗಳಲ್ಲಿ ಕೆಲವು ಗೊಂದಲಗಳು ಉಂಟಾಗುತ್ತದೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೀರಿ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ನಿರೀಕ್ಷಿತ ಸಮಯಕ್ಕೆ ಹಣ ಕೈ ಸೇರದೆ ತೊಂದರೆ ಉಂಟಾಗುತ್ತದೆ.

* ಕುಂಭ ರಾಶಿ :
ಹಠಾತ್ ಪ್ರಯಾಣ ಮಾಡಬೇಕಾಗುತ್ತದೆ. ಮಿತ್ರರೊಂದಿಗೆ ಸಣ್ಣಪುಟ್ಟ ವಿವಾದ ಉಂಟಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಖರ್ಚು ವೆಚ್ಚಗಳ ಬಗ್ಗೆ ಯೋಚಿಸುವುದು ಉತ್ತಮ. ವ್ಯವಹಾರಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಕೂಡಿ ಬರುವುದಿಲ್ಲ. ವೃತ್ತಿ ಪರ ಉದ್ಯೋಗಗಳು ನಿಧಾನವಾಗುತ್ತವೆ. ಸಾಲದ ಒತ್ತಡ ಹೆಚ್ಚಾಗುತ್ತವೆ.

* ಮೀನ ರಾಶಿ :
ವೃತ್ತಿ ಮತ್ತು ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ವಿಶೇಷ ಬೆಂಬಲ ದೊರೆಯುತ್ತದೆ. ಕೈಗೊಂಡ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುತ್ತೀರಿ. ಹಳೆಯ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಉದ್ಯೋಗಿಗಳಿಗೆ ಸಂಬಳದ ಬಗ್ಗೆ ಶುಭ ಸುದ್ದಿ ಸಿಗುತ್ತದೆ.

Categories
ತೀರ್ಥಹಳ್ಳಿ

ದೇವಂಗಿ ಗ್ರಾಮದ ಜನರಿಂದ ಚುನಾವಣೆ ಬಹಿಷ್ಕಾರ!

ದೇವಂಗಿ ಗ್ರಾಮದ ಜನರಿಂದ ಚುನಾವಣೆ ಬಹಿಷ್ಕಾರ!
– ಜಲ್ಲಿ ಕಲ್ಲಿನ ದಾರಿಯಲ್ಲಿ ನಡೆಯೋದು ಕಷ್ಟ ಕಷ್ಟ
– ಹಾಸ್ಯದ ಮೂಲಕ ಓಟು ಕೇಳೋರಿಗೆ ಎಚ್ಚರಿಕೆ!

NAMMUR EXPRESS NEWS
ತೀರ್ಥಹಳ್ಳಿ: ಸಾಕಷ್ಟು ವರ್ಷಗಳಿಂದ ರಸ್ತೆ ಮಾಡದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ತರು ಲೋಕ ಸಭಾ ಚುನಾವಣೆ ಬಹಿಷ್ಕರಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿಗೆ ಸೇರಿದ ಬಾಣಂಕಿಯಿಂದ ನಗಡವಳ್ಳಿಗೆ ತಲುಪುವ ರಸ್ತೆ ಜಲ್ಲಿಕಲ್ಲಿನಿಂದ ಕೂಡಿದ್ದು, ಜನ ನಿತ್ಯ ಪರದಾಡುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಜಲ್ಲಿ ಕಲ್ಲಿನಿಂದ ಕೂಡಿದ ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಬಾಣಂಕಿ ಗ್ರಾಮದ ಜನ ಹಾಸ್ಯಮಯವಾಗಿ ಎಚ್ಚರಿಕೆ ನೀಡಿದ್ದಾರೆ. ಈ ರಸ್ತೆಯಲ್ಲಿ ಎದ್ದು ಬಿದ್ದು ಸಾಕಾಗಿದೆ. ಹೀಗಾಗಿ ವೋಟ್ ಹಾಕದಿರಲು ನಿರ್ಧಾರ ಮಾಡಿದ್ದಾರೆ.

ಕಾಮಿಡಿ ಬೋರ್ಡ್ ಮೂಲಕ ಗಮನ ಸೆಳೆದ ಗ್ರಾಮಸ್ಥರು!

ಗರ್ಭಿಣಿಯರು, ವಯಸ್ಸು ಆದವರು , ಎಣ್ಣೆ ಕುಡಿದು ಓಡಾಡುವವರು ನಿಧಾನ ಹೋಗಿ, ವೋಟ್ ಕೇಳೋಕೆ ಬರೋರರೂ ನಿಧಾನ ಬನ್ನಿ ಎಂದು ಟಾಂಗ್ ಕೊಟ್ಟಿದ್ದಾರೆ.