Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಯಶಸ್ವಿ ಬಿಜೆಪಿ ಸಮಾವೇಶ

ತೀರ್ಥಹಳ್ಳಿಯಲ್ಲಿ ಯಶಸ್ವಿ ಬಿಜೆಪಿ ಸಮಾವೇಶ
– ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರರ ಭಾಷಣ
– ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರ್
– ಲೋಕ ಸಭಾ ಗೆಲುವಿಗೆ ಕಾರ್ಯಕರ್ತರಿಗೆ ಚುನಾವಣಾ ತಂತ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಶುಕ್ರವಾರ ಸಂಜೆ ಪಟ್ಟಣ ಪಂಚಾಯತ್ ಆವರಣದಲ್ಲಿ ತಾಲೂಕು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು. ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದ ತೀರ್ಥಹಳ್ಳಿ ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್, ಈ ಬಾರಿಯ ಚುನಾವಣೆ ದೇಶದ ಚುನಾವಣೆ, ದೇಶದ ಭವಿಷ್ಯದ ಚುನಾವಣೆಯಾಗಿದೆ. ದೇಶದ ಭವಿಷ್ಯ ಎಂದರೆ ನಮ್ಮ ನಿಮ್ಮೆಲ್ಲರ ಮಕ್ಕಳ ಭವಿಷ್ಯದ ಚುನಾವಣೆ ಕೂಡ ಹೌದು. ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಒಂದು ಸರ್ಕಾರ ರಚನೆಯಾಗಿ ಮೋದಿ ಅವರ ನೇತೃತ್ವದಲ್ಲಿ ಏನು ಆಡಳಿತ ನಡೆದಿದೆ ಆ ಆಡಳಿತವನ್ನು ನೋಡಿದ ನಮ್ಮ ಕಾರ್ಯಕರ್ತರಿಗೆ ತಾನು ಪರಿಶ್ರಮಪಟ್ಟು ಯಾವ ಸರ್ಕಾರವನ್ನು ರಚನೆ ಮಾಡಲು ಸಹಕಾರಿಯಾಗಿದೆ. ಆ ಸರ್ಕಾರ ನಾನು ಮತ ಕೇಳಲು ಮತ್ತೊಮ್ಮೆ ಹೋದಾಗ ಯಾವುದೇ ಮನೆಯಲ್ಲಿ ಹೆಮ್ಮೆ ಪಡುವ ರೀತಿಯಲ್ಲಿ ನಡೆದು ಕೊಂಡಿದ್ದಾರೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ನಾವು ಈ ಚುನಾವಣೆಗೆ ಹೇಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಏನು ಮಾಡಬೇಕು ಎನ್ನುವುದನ್ನು ಸ್ಪಷ್ಟಪಡಿಸುವುದಕ್ಕಾಗಿ ಇಂದು ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ರಾಷ್ಟ್ರವನ್ನು ಕಟ್ಟುವಂತಹ, ರಾಷ್ಟ್ರವನ್ನು ಸದೃಢಗೊಳಿಸುವಂತಹ, ರಾಷ್ಟ್ರದ ಭವಿಷ್ಯವನ್ನು ನಿರ್ಮಾಣ ಮಾಡುವಂತಹ ಚುನಾವಣೆ ಇದಾಗಿದೆ. ಯಾವ ಸ್ಥಿತಿಯಲ್ಲಿತ್ತು ರಾಷ್ಟ್ರ, ಎಲ್ಲಿಗೆ ಬಂದಿದ್ದೇವೆ. ಎಷ್ಟು ಕೋಟಿ ಜನರು ಬಡತನ ರೇಖೆಗಿಂತ ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರ ಕೃಪೆಯಿಂದ ಹೊರಗೆ ಬಂದಿದ್ದಾರೆ. ಐದನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಮೂರನೇ ಅತಿ ದೊಡ್ಡ ಸೈನ್ಯವನ್ನು ಕಟ್ಟಿದ್ದೇವೆ. ಅತಿದೊಡ್ಡ ರೈಲ್ವೆ ವಿಮಾನ ನಿಲ್ದಾಣಗಳಿಂದ ಹಿಡಿದು ನ್ಯಾಷನಲ್ ಹೈವೇ ಗಳು ಇದರ ಲೆಕ್ಕಚಾರ ನಮಗೆ ಗೊತ್ತಿದೆ. ಹತ್ತು ವರ್ಷಗಳಲ್ಲಿ ಬಹಳ ದೊಡ್ಡ ಪರಿವರ್ತನೆಯನ್ನು ಕಂಡಿದೆ. ಇಡೀ ಜಗತ್ತು ನಮ್ಮ ದೇಶದ ಕಡೆ ತಿರುಗಿ ನೋಡುವ ಹಾಗೆ ಆಗಿದೆ. ಜಗತ್ತಿನ ಸಮಸ್ಯೆಗೆ ಭಾರತದ ಅಭಿಪ್ರಾಯವನ್ನು ಮೋದಿಯವರ ಅಭಿಪ್ರಾಯವನ್ನು ಕೇಳುವಂತಹ ಸ್ಥಿತಿಗೆ ಈ ದೇಶ ಬಂದಿದೆ ಎಂದರೆ ನಾವೆಲ್ಲ ಹೆಮ್ಮೆಪಡುವ ವಿಷಯ ಎಂದರು.

ಬಿಜೆಪಿ ಮುಖಂಡ ಪುಣ್ಯಪಾಲ್ ಮಾತನಾಡಿ ಕಾರ್ಯಕರ್ತರ ಆಧಾರದಲ್ಲಿ ಆರಂಭವಾದ ಪಾರ್ಟಿ ಇಂದು ಜಗತ್ತಿನ ಅತ್ಯಂತ ದೊಡ್ಡ ಪೊಲಿಟಿಕಲ್ ಪಾರ್ಟಿಯಾಗಿದೆ. ದೇಶಕ್ಕೆ 18ನೇ ಲೋಕಸಭಾ ಚುನಾವಣೆ ನಡೆಯುತ್ತಿದೆ, ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಗೆದ್ದ, ಸೋತ ಎಲ್ಲಾ ಅನುಭವ ಕೂಡ ಇದೆ. ಆದರೆ ಈ ಬಾರಿಯ ಚುನಾವಣೆ ಕಳೆದೆಲ್ಲ ಚುನಾವಣೆಗಳಿಗಿಂತಲೂ ಸ್ವಲ್ಪ ವಿಭಿನ್ನ ಚುನಾವಣೆಯಾಗಿದೆ ಎಂದರು. ಭಾರತದ ಭವಿಷ್ಯದ ಗ್ಯಾರಂಟಿಯ ಕಾತ್ರಿಯ ಚುನಾವಣೆಗೆ ನಾವು 30 ದಿನಗಳ ಹಿಂದೆ ಇದ್ದೇವೆ ಎಂದರು.

ಲೋಕಸಭಾ ಚುನಾವಣೆಯ ಬಿಜೆಪಿ ಚುನಾವಣಾ ಅಭ್ಯರ್ಥಿ ಬಿ ವೈ ರಾಘವೇಂದ್ರ ಮಾತನಾಡಿ ಹೆಚ್ಚಿನ ಸದಸ್ಯತ್ವವನ್ನು ಮಾಡಿದಂತಹ ರಾಷ್ಟ್ರೀಯ ಪಕ್ಷ ಪ್ರಪಂಚದಲ್ಲಿ ಯಾವುದಾದರೂ ಇದ್ದರೆ ಅದು ಬಿಜೆಪಿ. ಸುಮಾರು 18 ಕೋಟಿಗಿಂತ ಹೆಚ್ಚಿನ ಮೆಂಬರ್ಶಿಪ್ ಆಗಿದೆ. ರಾಮ ಮಂದಿರ ಕಟ್ಟಬೇಕುಎನ್ನುವ ಸುಮಾರು 400-500 ವರ್ಷಗಳ ಹೋರಾಟ ಇಂದು ನನಸಾಗಿದೆ. ಅಯೋಧ್ಯೆಯಲ್ಲಿ ಆದಂತಹ ಸಂತೋಷವನ್ನು ನಾವೆಲ್ಲರೂ ಕೂಡ ನೋಡುತ್ತಿದ್ದೇವೆ. ರಾಮನಿಗೆ ಪಟ್ಟಾಭಿಷೇಕ ಮಾಡಿದ ನರೇಂದ್ರ ಮೋದಿಯವರಿಗೆ ಕೂಡ ಅವರ ಪಟ್ಟಾಭಿಷೇಕ ಕೂಡ ಮೂರನೇ ಬಾರಿಗೆ ಭಾರತ ವಿಶ್ವಗುರು ಆಗಲಿಕ್ಕೋಸ್ಕರ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ವಿಧಾನ ಪರಿಷತ್ ಶಾಸಕರಾದ ಬೋಜೇಗೌಡ, ಉಡುಪಿ ಮಾಜಿ ಶಾಸಕರು ರಘುಪತಿ ಭಟ್, ಮಂಡಲ ನಿಕಟ ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಬಾಳೆಬೈಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್, ಸಹಕಾರಿ ನಾಯಕರದ ನಾಗರಾಜ್ ಶೆಟ್ರು, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸಾಲೆಕೊಪ್ಪ ರಾಮಚಂದ್ರ, ಬೈಂದೂರು ಕ್ಷೇತ್ರದ ಪ್ರಭಾರಿಗಳಾದ ಅಶೋಕ್ ಮೂರ್ತಿ, ನಿಕಟ ಪೂರ್ವ ಮಂಡಲದ ಅಧ್ಯಕ್ಷರು ಮೋಹನ್, ಹಿರಿಯರಾದ ಸಿ ಬಿ ಈಶ್ವರ್, ಸಂಘಟನೆಯ ಹಿರಿಯರಾದ ಶಂಕರ್ ನಾರಾಯಣ ಐತಾಳ್, ಮಂಡಲದ ಉಪಾಧ್ಯಕ್ಷರಾದ ಗೀತಾ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಶೋದಾ ಮಂಜುನಾಥ್, ಎಸ್ ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸ್ ಕಾಸರವಳ್ಳಿ, ಸಂಘಟನೆಯ ಮಾಜಿ ಅಧ್ಯಕ್ಷರಾದ ಚೊಕ್ಕಡಬೈಲು ರಾಘವೇಂದ್ರ, ಸುಧಾಕರ್ ಹೊಸಹಳ್ಳಿ, ಮರಳಿ ಚಂದ್ರಶೇಖರ್, ಟಿಡಿ ಮೇಘರಾಜ್, ಬಿ ವೈ ರಾಘವೇಂದ್ರ, ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Categories
ಕರಾವಳಿ ರಾಜ್ಯ

ಕರಾವಳಿಯಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ!

ಕರಾವಳಿಯಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ!
– ದಕ್ಷಿಣ ಕನ್ನಡದ ಕಡಬದ ಮನೆಯೊಂದರಲ್ಲಿ ಊಟ ಮಾಡಿ ಹೋದ ಶಂಕಿತರು
– ಒಂದೇ ತಿಂಗಳಲ್ಲಿ ಇದೀಗ ಮೂರನೇ ಬಾರಿಗೆ ಪತ್ತೆ?

NAMMUR EXPRESS NEWS
ಕಡಬ: ದಕ್ಷಿಣ ಕನ್ನಡದಲ್ಲಿ ಒಂದೇ ತಿಂಗಳಲ್ಲಿ ಇದೀಗ ಮೂರನೇ ಬಾರಿಗೆ ನಕ್ಸಲರು ಪ್ರತ್ಯಕ್ಷರಾಗಿರುವ ಮೂಲಕ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಕ್ಸಲರ ತಂಡವೊಂದು ಶಸ್ತ್ರಾಸ್ತ್ರದೊಂದಿಗೆ ಅಲ್ಲಿನ ಮನೆಗೆ ಬಂದು ಊಟ ಮಾಡಿ ಅಕ್ಕಿ ಮುಂತಾದ ವಸ್ತು ಕೂಡ ತೆಗೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಹಾಗೂ ಕಡಬ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ನಿಗ್ರಹ ಪಡೆಯಿಂದ ಕೂಬಿಂಗ್‌ ಕೂಡ ಚುರುಕುಗೊಂಡಿದೆ.

ಬುಧವಾರ ರಾತ್ರಿ ಸುಮಾರು 7 ಗಂಟೆ ಅವಧಿಗೆ ಬಿಳಿನೆಲೆ ಚೇರು ಎಂಬಲ್ಲಿ ನಕಲ್ಸಲರ ತಂಡವು ಮನೆಗೆ ಬಂದಿದ್ದು, ಆ ತಂಡದಲ್ಲಿ ಆರು ಮಂದಿ ಶಂಕಿತ ನಕ್ಸಲರು ಇದ್ದರು ಎನ್ನಲಾಗಿದೆ. ಮನೆಯೊಂದಕ್ಕೆ ಬಂದ ತಂಡವು ಅಲ್ಲಿ ಊಟ ಮಾಡಿ ತಮ್ಮ ಮೊಬೈಲ್‌ ಅನ್ನು ಜಾರ್ಜ್‌ ಮಾಡಿಕೊಂಡು ಹೋಗಿದೆ. ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಆಗಿರುವ ವಿಕ್ರಮ ಗೌಡ, ಮುಂಡಗಾರು ಲತಾ ತಂಡವೇ ಪ್ರತ್ಯಕ್ಷವಾಗಿರುವ ಬಗ್ಗೆ ಅನುಮಾನ ಮೂಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮಕ್ಕೆ ನಕ್ಸಲರ ತಂಡ ಬಂದು ಹೋಗಿರುವುದಾಗಿ ಅಲ್ಲಿನ ಜನರು ಹೇಳಿದ್ದರು. ಮಾ.23ರಂದು ಕಡಬ ತಾಲೂಕಿನ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಗಳಿಗೆ ಭೇಟಿ ನೀಡಿ ಊಟ ಮಾಡಿ ಒಂದಷ್ಟು ದಿನಸಿ ಸಾಮಾನು ತೆಗೆದುಕೊಂಡು ಹೋಗಿದ್ದರು. ಮಾ.16ರಂದು ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಪ್ರದೇಶವಾದ ಕೂಜಿಮಲೆ ಎಸ್ಟೇಟ್‌ನ ಅಂಗಡಿಯೊಂದಕ್ಕೆ ಭೇಟಿ ನೀಡಿ ಸಾಮಗ್ರಿಗಳನ್ನು ಖರೀದಿಸಿ ತೆರಳಿದ್ದರು. ಕೂಜಿಮಲೆ ಹಾಗೂ ಐನೆಕಿದು ಗ್ರಾಮದ ಮನೆಗಳಿಗೆ ಬಂದ ನಕ್ಸಲರ ತಂಡದಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದೆ.

ಈ ಹಿಂದೆ ಶೂಟೌಟ್‌ ನಡೆದಿದ್ದ ಅರಣ್ಯ ಪ್ರದೇಶ 2012ರಲ್ಲಿ ನಕ್ಸಲರು ಭೇಟಿ ನೀಡಿದ್ದ ಪರಿಸರದಲ್ಲಿ ಶೂಟೌಟ್‌ ನಡೆದ ಪರಿಸರದ ಸಮೀಪದ ಪ್ರದೇಶವೇ ಚೇರು. ಸುಬ್ರಹ್ಮಣ್ಯ ಸಮೀಪದ ಚೇರು, ಭಾಗ್ಯ, ಎರ್ಮಾಯಿಲ್‌, ನಡುತೋಟ, ಪಳ್ಳಿಗದ್ದೆ ಭಾಗಕ್ಕೆ ಆಗ ನಕ್ಸಲರು ಬಂದು ಹೋಗಿದ್ದರು. ಆ ಸಂದರ್ಭದಲ್ಲಿ ಪಳ್ಳಿಗದ್ದೆ ಕಾಡಿನಲ್ಲಿ ನಕ್ಸಲರು ಮತ್ತು ಎಎನ್‌ಎಫ್‌ ತಂಡದ ನಡುವೆ ಗುಂಡಿನ ಚಕಮಕಿ ನಡೆದಿತ್ತು. ನಂತರದ ದಿನಗಳಲ್ಲಿ ಬಿಸಿಲೆ ಸಮೀಪದ ಭಾಗಿಮಲೆ ಕಾಡಿನಲ್ಲಿ ಎನ್‌ಐಎ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ತಂಡದ ಓರ್ವ ಸದಸ್ಯ ಸಾವನ್ನಪ್ಪಿದ್ದ. ಇದೀಗ ಅದೇ ಪರಿಸರದಲ್ಲಿ ಮತ್ತೊಮ್ಮೆ ಶಂಕಿತರು ಭೇಟಿ ನೀಡಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

Categories
ಬೆಂಗಳೂರು ರಾಜ್ಯ ಶಿವಮೊಗ್ಗ

ಸೆಕೆಂಡ್ ಹ್ಯಾಂಡ್ ಮೊಬೈಲ್, ಸಿಮ್ ವಿಚಾರಕ್ಕೆ ವಿಚಾರಣೆ!

ಸೆಕೆಂಡ್ ಹ್ಯಾಂಡ್ ಮೊಬೈಲ್, ಸಿಮ್ ವಿಚಾರಕ್ಕೆ ವಿಚಾರಣೆ!
– ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತನ ಸಾಕ್ಷಿ ಪಡೆದ ಎ. ಎನ್. ಐ
– ಮಾಜಿ ಗೃಹ ಸಚಿವ ಸ್ಫೋಟಕ ಪ್ರತಿಕ್ರಿಯೆ

NAMMUR EXPRESS NEWS
ಶಿವಮೊಗ್ಗ/ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ಸಾಕ್ಷಿಯನ್ನಾಗಿ ಪರಿಗಣಿಸಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುಜಾಮಿಲ್‌ಗೆ ಈತ ಮೊಬೈಲ್ ಮಾರಾಟ ಮಾಡಿದ್ದರು. ಮುಜಾಮಿಲ್ ಷರೀಫ್ ಪ್ರಕರಣದ ಮತ್ತೊಬ್ಬ ಆರೋಪಿ ಮುಸಾವೀರ್‌ಗೆ ಮೊಬೈಲ್ ಸಿಮ್ ಕೊಟ್ಟಿದ್ದ. ಮುಸಾವೀರ್ ಬಳಸಿದ್ದು ಇದೇ ಮೊಬೈಲ್ ಎಂಬ ಅನುಮಾನದ ಮೇಲೆ ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರಾಟ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆ ನಡೆಸಿದೆ. ಮುಜಾಮಿಲ್‌ ಮೊಬೈಲ್ ಖರೀದಿ ಮಾಡಿದ ಹಿನ್ನೆಲೆಯಲ್ಲಿ ಎನ್‌ಐಎ ಬಿಜೆಪಿ ಕಾರ್ಯಕರ್ತನ ಸಾಕ್ಷಿಯನ್ನಾಗಿ ಪರಿಗಣಿಸಿ ಕೆಲವೊಂದು ಮಾಹಿತಿಯನ್ನು ಪಡೆದು ಕಳುಹಿಸಿದೆ ಎಂಬ ವಿಚಾರ ಈಗ ತಿಳಿದುಬಂದಿದೆ.

ಮಾಜಿ ಗೃಹ ಸಚಿವ ಸ್ಫೋಟಕ ಪ್ರತಿಕ್ರಿಯೆ

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿರುವ ಕುರಿತು ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರ ಸಂಬಂಧ ಶುಕ್ರವಾರ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ಎನ್‌ಐಎ ವಿಚಾರಣೆಗೆ ಕರೆದೊಯ್ದಿತ್ತು. ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಸೇರಿದ್ದಾನೆ ಎಂಬ ರೀತಿ ಪ್ರಚಾರ ಆಗಿತ್ತು. ಈಗಾಗಲೇ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಮ್ ಖರೀದಿಸುವಾಗ ಫೇಕ್ ಐಡಿ!

ಮತೀನ್ ಎಂಬ ಕ್ರಿಮಿ ಬಿಜೆಪಿ ಕಾರ್ಯಕರ್ತನನ್ನು ವಿಳಾಸ ಬಳಸಿ ಫೇಸ್‌ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದ. ಈ ಸತ್ಯಾಂಶ ಎನ್‌ಐಎಗೆ ಗೊತ್ತಾದ ಬಳಿಕ ಆತನನ್ನು ವಾಪಾಸ್ ಕಳುಹಿಸಲಾಗಿದೆ. ಮುಸ್ಲಿಂ ಯುವಕನ ಮೊಬೈಲ್ ಅಂಗಡಿಯಲ್ಲಿ ಸಿಮ್ ಖರೀದಿಸಿದ್ದ 8 ಮಂದಿ ಹಿಂದೂ ಯುವಕರ ಹೆಸರಿನಲ್ಲಿ ಫೇಸ್‌ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದಾನೆ. ಎನ್‌ಐಎ ಉಳಿದ 8 ಮಂದಿಯನ್ನು ವಿಚಾರಣೆಗೆ ಕರೆಯಬಹುದು. ಕೆಲವು ಅಂಗಡಿಗಳಲ್ಲಿ ಸಿಮ್ ಖರೀದಿ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಎಷ್ಟು ದುರುಪಯೋಗ ಆಗ್ತಿದೆ ಅಂತಾ ಇದರಿಂದ ಗೊತ್ತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಯಾವ ಬಿಜೆಪಿ ಕಾರ್ಯಕರ್ತ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಖಂಡಿತ ಭಾಗಿಯಾಗಲಾರ. ಸಾಮಾನ್ಯ ಕಾರ್ಯಕರ್ತ ಒಳ್ಳೆಯ ಜೀವನ ನಡೆಸುತ್ತಿದ್ದಾನೆ. ಆತ ಒಬ್ಬ ಪೈಂಟರ್, ವಿಚಾರಣೆಯಲ್ಲಿ ಸಹಕರಿಸಿ ಸತ್ಯಾಂಶ ಹೇಳಿದ್ದಾನೆ. ಅಪಾರ್ಥ ಕಲ್ಪಿಸುವ ಪ್ರಚಾರ ಬೇಡ ಎಂಬುದು ನನ್ನ ವಿನಂತಿ ಎಂದು ಮನವಿ ಮಾಡಿದ್ದಾರೆ.

Categories
ಬೆಂಗಳೂರು ರಾಜ್ಯ

ಬಿಸಿಲ ಧಗೆ ಹೆಚ್ಚಳ: ವಹಿವಾಟು ಕುಸಿತ!

ಬಿಸಿಲ ಧಗೆ ಹೆಚ್ಚಳ: ವಹಿವಾಟು ಕುಸಿತ!
– ವ್ಯಾಪಾರಕ್ಕೆ ತಟ್ಟಿದ ಬಿಸಿ: ಶೇ 50-70 ರಷ್ಟು ನಷ್ಟ
– ಯುಗಾದಿ ಹಬ್ಬದ ಸಂಭ್ರಮಕ್ಕೆ ಬಿಸಿಲು ಮಂಕು!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಧಗೆಯಿಂದ ಜನ ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಬಿಸಿಲು ಕಾರಣ ಗ್ರಾಹಕರು ಇಲ್ಲದೇ ಮಾರುಕಟ್ಟೆಗಳು ಖಾಲಿ ಖಾಲಿಯಾಗಿವೆ. ವ್ಯಾಪಾರ ತಗ್ಗಿದ್ದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಮಳಿಗೆಗಳ ಮಾಲೀಕರು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ಇದರಿಂದಾಗಿ ವ್ಯಾಪಾರ- ವಹಿವಾಟು ಶೇ 50 ರಿಂದ ಶೇ 70ರಷ್ಟು ಕುಸಿದಿದ್ದು, ವ್ಯಾಪಾರಿಗಳು ಗ್ರಾಹಕರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯಗಳು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿವೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬಿಸಿಲಿನ ಧಗೆ ಇರುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾರುಕಟ್ಟೆಗಳಲ್ಲಿ ಗ್ರಾಹಕರ ಸಂಖ್ಯೆ ಕ್ಷೀಣಿಸಿದೆ. ಸಂಜೆ 6 ಗಂಟೆಯ ನಂತರ ಕೆಲವು ಗ್ರಾಹಕರು ಮಳಿಗೆಗಳಿಗೆ ಬರುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ವ್ಯಾಪಾರವಾಗುತ್ತಿಲ್ಲವೆಂದು ವ್ಯಾಪಾರಿಗಳು ನೋವು ತೋಡಿಕೊಂಡಿದ್ದಾರೆ.
ಬಟ್ಟೆ ಅಂಗಡಿ, ಆಭರಣ ಮಳಿಗೆ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಅಲಂಕಾರಿಕ ವಸ್ತುಗಳು ಹಾಗೂ ಇತರೆ ಮಳಿಗೆಗಳಿಗೆ ಗ್ರಾಹಕರು ಭೇಟಿ ನೀಡುವ ಪ್ರಮಾಣ ಶೇ 90ರಷ್ಟು ಕಡಿಮೆಯಾಗಿದೆ. ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಧಗೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಹಕರೇ ಕಾಣುತ್ತಿಲ್ಲ. ಗ್ರಾಹಕರು ಬರದಿರುವುದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ.

ಹಬ್ಬದ ಸಂಭ್ರಮಕ್ಕೂ ಬಿಸಿಲಿನ ಮಂಕು!

ಯುಗಾದಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹೊಸ ಬಟ್ಟೆ ಹಾಗೂ ಇತರೆ ವಸ್ತುಗಳ ಖರೀದಿ ಜೋರಾಗುವ ಸಮಯವಿದು. ಆದರೆ, ಬಿಸಿಲಿನ ಧಗೆ ಹಬ್ಬದ ಖರೀದಿ ಮೇಲೂ ಪರಿಣಾಮ ಬೀರಿದೆ.

ವ್ಯಾಪಾರಕ್ಕೆ ಹೊಡೆತ ಕೊಟ್ಟ ಚುನಾವಣೆ..!

ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ₹ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ದಾಖಲೆ ಇಲ್ಲದೇ ಕೊಂಡೊಯ್ಯದಂತೆ ಚುನಾವಣೆ ಆಯೋಗ ಮಿತಿ ಹೇರಿದೆ. ಇದರಿಂದಾಗಿಯೂ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ‘ಯುಗಾದಿ ಹಬ್ಬವಿರುವುದರಿಂದ ಮನೆ ಮಂದಿಯೆಲ್ಲ ಸಾಮೂಹಿಕವಾಗಿ ಬಟ್ಟೆ ಹಾಗೂ ಚಿನ್ನಾಭರಣ ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಬಹುತೇಕರು ನಗದು ತರುತ್ತಾರೆ. ಚುನಾವಣೆ ಇರುವುದರಿಂದ, ಅಧಿಕಾರಿಗಳು ನಗದು ಜಪ್ತಿ ಮಾಡುವ ಆತಂಕದಲ್ಲಿದ್ದಾರೆ.

ಬೀದಿ ಬದಿ ವ್ಯಾಪಾರಕ್ಕೂ ಬಿಸಿ..!

ಬೀದಿಬದಿ ವ್ಯಾಪಾರಕ್ಕೂ ಧಗೆಯ ಬಿಸಿ ತಟ್ಟಿದೆ. ದಿನದ ದುಡಿಮೆ ನಂಬಿ ಬದುಕುತ್ತಿರುವ ಬೀದಿಬದಿ ವ್ಯಾಪಾರಿಗಳು ಬಿಸಿಲಿನಲ್ಲಿ ಎಂದಿನಂತೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಗ್ರಾಹಕರು ಬರುತ್ತಿಲ್ಲ. ಇದರಿಂದಾಗಿ ದುಡಿಮೆಯೂ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ತಂಪು ಪಾನೀಯಕ್ಕೆ ಬೇಡಿಕೆ.!

ಐಸ್‌ಕ್ರಿಮ್ ಜ್ಯೂಸ್ ಹಾಗೂ ತಂಪು ಪಾನೀಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿದೆ. ತಂಪು ಪಾನೀಯಗಳು ಎಳನೀರು ಕಲ್ಲಂಗಡಿ ಕರಬೂಜ ಹಾಗೂ ಇತರೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿಸಿಲು ಹೆಚ್ಚಿರುವುದರಿಂದ ತಂಪು ಪದಾರ್ಥಗಳನ್ನು ಸೇವಿಸಲು ಜನರು ಇಷ್ಟಪಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಉತ್ತಮ ವ್ಯಾಪಾರ ಆಗುತ್ತಿದೆ. ಐಸ್‌ಕ್ರಿಮ್ ಹಾಗೂ ತಂಪು ಪಾನೀಯಗಳು ಹೆಚ್ಚು ಮಾರಾಟವಾಗುತ್ತಿವೆ.

Categories
ಜಾತಕ

ನಿಮ್ಮ ರಾಶಿ ಫಲ ಹೇಗಿದೆ?

ನಿಮ್ಮ ರಾಶಿ ಫಲ ಹೇಗಿದೆ?
– ಯಾವ ರಾಶಿಗೆ ಒಳಿತು? ಯಾವ ರಾಶಿಗೆ ಕೆಡುಕು?
– ಯುಗಾದಿ ಮುನ್ನ ಏನೇನು ಒಳಿತಾಗುತ್ತೆ?

NAMMUR EXPRESS NEWS
2024 ಎಪ್ರಿಲ್ 06ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.?

* ಮೇಷ ರಾಶಿ :
ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಪ್ರಮುಖ ಸಮಯದಲ್ಲಿ ಬಂಧುಗಳ ಸಹಾಯ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೀರಿ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿರುತ್ತವೆ.

* ವೃಷಭ ರಾಶಿ :
ಉದ್ಯೋಗ ಪ್ರಯತ್ನಗಳು ನಿಧಾನವಾಗಿ ಸಾಗುತ್ತವೆ. ಮನೆಯ ಹೊರಗಿನ ಜವಾಬ್ದಾರಿಗಳು ಒತ್ತಡಕ್ಕೆ ಕಾರಣವಾಗುತ್ತವೆ. ಹೊಸ ಸಾಲಗಳನ್ನು ಮಾಡಬೇಕಾಗುತ್ತದೆ. ವ್ಯಾಪಾರ ವಿಚಾರಗಳಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಆರೋಗ್ಯದ ವಿಚಾರದಲ್ಲಿ ನಿಷ್ಕಾಳಜಿ ವಹಿಸುವುದು ಒಳ್ಳೆಯದಲ್ಲ. ವೃತ್ತಿಗಳು ಮತ್ತು ವ್ಯಾಪಾರಗಳಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶಗಳು ದೊರೆಯುವುದಿಲ್ಲ.

* ಮಿಥುನ ರಾಶಿ :
ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನೆಗಳಿರುತ್ತವೆ. ಪ್ರಮುಖ ಕಾರ್ಯಗಳಲ್ಲಿ ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯುವುದಿಲ್ಲ. ಪ್ರಯಾಣದಲ್ಲಿ ವಾಹನ ತೊಂದರೆಗಳಿರುತ್ತವೆ. ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳಿರುತ್ತವೆ. ವ್ಯಾಪಾರದಲ್ಲಿ ಸಮಸ್ಯಾತ್ಮಕ ವಾತಾವರಣವಿರುತ್ತದೆ.

* ಕಟಕ ರಾಶಿ :
ವ್ಯಾಪಾರ ವಿಸ್ತರಣೆಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಉದ್ಯೋಗಗಳಲ್ಲಿ ಸಂಬಳದ ವಿಷಯದಲ್ಲಿ ಅನುಕೂಲತೆ ಇರುತ್ತದೆ. ಬಾಲ್ಯ ಮಿತ್ರರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ ಮತ್ತು ಆರ್ಥಿಕ ಪರಿಸ್ಥಿತಿ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ.

* ಸಿಂಹ ರಾಶಿ :
ಭೂಮಿಗೆ ಸಂಬಂಧಿಸಿದ ವಿವಾದಗಳು ಹೆಚ್ಚು ಕಿರಿಕಿರಿಯುಂಟು ಮಾಡುತ್ತವೆ. ಮಹತ್ವದ ಕೆಲಸಗಳು ಮುಂದೂಡಲ್ಪಡುತ್ತವೆ. ಆರ್ಥಿಕ ಪರಿಸ್ಥಿತಿ ನಿರುತ್ಸಾಹಗೊಳಿಸುತ್ತವೆ. ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತವೆ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗ ನಿರ್ವಹಣೆಯಲ್ಲಿ ಲೋಪದಿಂದ ಅಧಿಕಾರಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.

* ಕನ್ಯಾ ರಾಶಿ :
ಕೈಗೊಂಡ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಆರ್ಥಿಕ ಬೆಳವಣಿಗೆ ಉಂಟಾಗುತ್ತದೆ. ಹಳೆ ಸಾಲಗಳನ್ನು ಇತ್ಯರ್ಥಗೊಳಿಸುತ್ತೀರಿ. ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಹೊಸ ವ್ಯವಹಾರಗಳಿಗೆ ಹೂಡಿಕೆಗಳು ದೊರೆಯುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಮನೆಯಲ್ಲಿ ದೈವಿಕ ಕಾರ್ಯಕ್ರಮಗಳು ನಡೆಯುತ್ತವೆ. ನಿರುದ್ಯೋಗಿಗಳಿಗೆ ಸೂಕ್ತ ಅವಕಾಶಗಳು ದೊರೆಯುತ್ತವೆ.

* ತುಲಾ ರಾಶಿ :
ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿಯದಿರುವುದು ಉತ್ತಮ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಕೆಲಸದ ಒತ್ತಡದಿಂದಾಗಿ ಸಾಕಷ್ಟು ವಿಶ್ರಾಂತಿ ಇರುವುದಿಲ್ಲ, ಮನೆಯ ಹೊರಗೆ ಸಮಸ್ಯೆಗಳು ಹೆಚ್ಚಾಗುತ್ತವೆ, ವೃತ್ತಿಪರ ವ್ಯವಹಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡು,ನಷ್ಟವನ್ನು ಅನುಭವಿಸುತ್ತೀರಿ.

* ವೃಶ್ಚಿಕ ರಾಶಿ :
ಕೈಗೊಂಡ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ. ನಿರ್ಣಾಯಕ ಸಮಯದಲ್ಲಿ ಕುಟುಂಬ ಸದಸ್ಯರಿಂದ ಸಹಾಯ ದೊರೆಯುತ್ತದೆ. ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಹಣಕಾಸಿನ ವ್ಯವಹಾರಗಳು ತೃಪ್ತಿಕರವಾಗಿರುತ್ತವೆ. ಬಂಧುಗಳಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ.

* ಧನುಸ್ಸು ರಾಶಿ :
ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳ ಬೆಂಬಲ ಹೆಚ್ಚಾಗುತ್ತದೆ. ಹಳೆ ಸಾಲ ವಸೂಲಿಯಾಗುತ್ತದೆ. ಬಂಧುಮಿತ್ರರ ಭೇಟಿ ಸಂತಸ ತರುತ್ತದೆ. ಆಧ್ಯಾತ್ಮಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ಉದ್ಯೋಗಗಳು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ.

* ಮಕರ ರಾಶಿ :
ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಆತುರದಿಂದ ಇತರರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಗೊಂದಲ ಉಂಟಾಗುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.

* ಕುಂಭ ರಾಶಿ :
ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಹೆಚ್ಚಿನ ವೆಚ್ಚ ಪ್ರಯತ್ನದಿಂದಲೂ ಕೈಗೆತ್ತಿಕೊಂಡ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ವೃತ್ತಿಪರ ವ್ಯವಹಾರಗಳು ಸ್ವಲ್ಪ ಲಾಭದಾಯಕವಾಗಿ ಸಾಗುತ್ತವೆ. ಉದ್ಯೋಗದ ವಾತಾವರಣವು ಸಮಸ್ಯಾತ್ಮಕವಾಗಿರುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ.

*ಮೀನ ರಾಶಿ :
ವ್ಯಾಪಾರದಲ್ಲಿ ಕುಟುಂಬ ಸದಸ್ಯರ ಬೆಂಬಲ ದೊರೆಯುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಬಡ್ತಿ ಹೆಚ್ಚಾಗುತ್ತದೆ. ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ನಿರುದ್ಯೋಗಿಗಳಿಗೆ ಅನಾಯಾಸವಾಗಿ ಅವಕಾಶಗಳು ದೊರೆಯುತ್ತವೆ. ಕೆಲವು ಸಂದರ್ಭಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಂತರ ಉಪಯುಕ್ತವಾಗುತ್ತವೆ.

Categories
ರಾಜ್ಯ

ರಾಜ್ಯದೆಲ್ಲೆಡೆ ಯುಗಾದಿ ಹಬ್ಬಕ್ಕೆ ಸಜ್ಜು!

ರಾಜ್ಯದೆಲ್ಲೆಡೆ ಯುಗಾದಿ ಹಬ್ಬಕ್ಕೆ ಸಜ್ಜು!
– ಯುಗಾದಿ ಆರಂಭಕ್ಕೂ ಮೊದಲೇ ಗಗನಕ್ಕೇರಿದ ಹೂವಿನ ಬೆಲೆ
– ಸಾಲು ಸಾಲು ರಜೆ: ಖಾಸಗಿ ಬಸ್‌ಗಳ ದರ ಕೇಳಿದ್ರೆ ಸುಸ್ತೋ ಸುಸ್ತು!
– ಹೊಸ ತೊಡಕು ಹಬ್ಬಕ್ಕೂ ಮುನ್ನವೇ ಚಿಕನ್, ಮಟನ್ ಬೆಲೆ ಏರಿಕೆ!
– ಬಟ್ಟೆ, ವಾಹನ, ಚಿನ್ನದಂಗಡಿಗಳಲ್ಲಿ ಆಫರ್ ಆಫರ್

NAMMUR EXPRESS NEWS
ಬೆಂಗಳೂರು: ರಾಜ್ಯದ ಎಲ್ಲೆಡೆ ಯುಗಾದಿ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಅಂಗಡಿಗಳಲ್ಲಿ ಖರೀದಿ ಜೋರಾಗಿದೆ. ಅದರಲ್ಲೂ ವಾರದ ಅಂತ್ಯದಲ್ಲಿ ಹಬ್ಬ ಬಂದಿದ್ದು ಒಂದು ದಿನ ರಜೆ ಹಾಕಿ ಬೆಂಗಳೂರು ಕಡೆಯಿಂದ ಊರಿಗೆ ಹೊರಡುವವರ ಸಂಖ್ಯೆ ಹೆಚ್ಚಿದೆ. ರಾಜ್ಯದ ಪ್ರಮುಖ ದೇವಾಲಯ ಸೇರಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗೆ ಸಿದ್ಧತೆಗಳು ನಡೆಯುತ್ತಲೇ ಇದೆ.

ಯುಗಾದಿ ಹಬ್ಬ ಸಂಭ್ರಮಾಚರಣೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು, ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಳವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂಗಳ ಪೂರೈಕೆ ಕಡಿಮೆಯಾಗಿದ್ದು, ಹೂವುಗಳ ಬೆಲೆ ದುಬಾರಿಯಾಗಿದೆ. ಇನ್ನೂ ಯುಗಾದಿ ಹಬ್ಬ ಕೆಲವೇ ದಿನಗಳು ಬಾಕಿದ್ದು, ಮತ್ತೊಂದೆಡೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಗ್ರಾಹಕರು ಹೂಗಳ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. 2 ಕೆಜಿ ಹೂವು ತೆಗೆದುಕೊಳ್ಳೋವರು. ಒಂದು ಕೆಜಿ ತೆಗೆದುಕೊಳ್ಳುತ್ತಿದ್ದಾರೆ.

ಸಾಲು ಸಾಲು ರಜೆ: ಖಾಸಗಿ ಬಸ್‌ಗಳ ದರ ಕೇಳಿದ್ರೆ ಸುಸ್ತೋ ಸುಸ್ತು!

ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ ಬೆಂಗಳೂರಿನಿಂದ ಊರಿಗೆ ಹೊರಟ ಜನರಿಗೆ ಖಾಸಗಿ ಬಸ್ ಗಳಿಂದ ದರ ಏರಿಕೆಯ ಕಹಿ. ಬ್ಯಾಕ್ ಟು ಬ್ಯಾಕ್ ರಜೆ ಹಿನ್ನೆಲೆ ಟ್ರಿಪ್ ಗೂ ಹಲವರಿಂದ ಪ್ಲಾನ್ ಆಗಿದ್ದು ಖಾಸಗಿ ಬಸ್ ನಲ್ಲಿ ಟಿಕೆಟ್ ದರ ದುಪ್ಪಟ್ಟಾಗಿದೆ.

ಚಿಕನ್, ಮಟನ್ ಬೆಲೆ ಏರಿಕೆ!

ಯುಗಾದಿ ಹಬ್ಬದ ಮರುದಿನ ಆಚರಿಸುವ ಹೊಸತೊಡಕು ಹಬ್ಬಕ್ಕೂ ಮುನ್ನವೇ ಮಾಂಸಹಾರಿಗಳಿಗೆ ಬಿಗ್ ಶಾಕ್ ಎದುರಾಗಿದೆ. ದಿನದಿಂದ ದಿನಕ್ಕೆ ಚಿಕನ್, ಮಟನ್ ಬೆಲೆ ಏರಿಕೆಯಾಗುತ್ತಿದೆ. ಹೌದು, ಸದ್ಯ ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಬೆಲೆ ಏರಿಕೆಯಾಗಿದೆ.

ರಾಜ್ಯದ ವಿವಿಧ ಕಡೆ 2000 ಹೆಚ್ಚುವರಿ ಬಸ್!

ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್‌ಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಏ. 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಸೋಮವಾರ ಒಂದು ದಿನ ರಜೆ ಮಾಡಿದರೆ 4 ದಿನ ರಜೆ ಸಿಕ್ಕಂತಾಗುತ್ತದೆ. ಮುಂದಿನ ವಾರ, ಏಪ್ರಿಲ್ 11 ರ ಗುರುವಾರ ಮುಸ್ಲಿಮರ ಹಬ್ಬ ರಂಜಾನ್ ಸಹ ಇರಲಿದೆ. ಮತ್ತೆ ದೀರ್ಘ ವಾರಾಂತ್ಯ ರಜೆ ಸಿಗಲಿದೆ. 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ‌ ಇದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್ ನಿಯೋಜನೆ ಮಾಡಿದೆ.

ಬಟ್ಟೆ, ಚಿನ್ನ, ವಾಹನ ಆಫರ್ ಬೆಲೆ

ರಾಜ್ಯದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಬಟ್ಟೆ, ಚಿನ್ನ, ವಾಹನ, ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಆಫರ್ ಘೋಷಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಎಲ್ಲೆಡೆ ಖರೀದಿ ಕಂಡು ಬರುತ್ತಿದೆ.

Categories
ತೀರ್ಥಹಳ್ಳಿ ರಾಜಕೀಯ ರಾಜ್ಯ ಶಿವಮೊಗ್ಗ

ಗೀತಾ, ರಾಘವೇಂದ್ರ ಇಬ್ಬರನ್ನು ಸೋಲಿಸ್ತೇನೆ!

ಗೀತಾ, ರಾಘವೇಂದ್ರ ಇಬ್ಬರನ್ನು ಸೋಲಿಸ್ತೇನೆ!
– ಒಂದು ಕುಟುಂಬದ ಕೈಗೆ ಬಿಜೆಪಿ ಹೋಗಲು ಬಿಡಲ್ಲ
– ಯಡಿಯೂರಪ್ಪ ಕುಟುಂಬದ ವಿರುದ್ದ ಟೀಕಾಸ್ತ್ರ
– ಶಿವಮೊಗ್ಗ ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಈಶ್ವರಪ್ಪ ಇದೀಗ ಪ್ರಚಾರದ ಕಣಕ್ಕೆ ಇಳಿದಿದ್ದು, ಈ ಬಾರಿ ರಾಘವೇಂದ್ರ ಹಾಗೂ ಗೀತಾ ಶಿವರಾಜ್ ಕುಮಾರ್ ಇಬ್ಬರನ್ನು ಸೋಲಿಸುವುದಾಗಿ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಅಂಬುತೀರ್ಥ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಚುನಾವಣೆಯ ಪ್ರವಾಸ ಆರಂಭ ಮಾಡಿದ್ದೇನೆ. ಈ ಬಾರಿ ಅನ್ಯಾಯವಾಗಿರುವ ಹಿಂದುತ್ವವಾದಿಗಳ ಪರ ನೀವು ಹೋರಾಟ ಮಾಡುತ್ತಿದ್ದೀರಾ ನಿಮ್ಮ ಜೊತೆ ನಾವಿದ್ದೇವೆ ಎಂದು ಹಳ್ಳಿಯ ಜನರು ಕೂಡ ಆಶೀರ್ವಾದ ಮಾಡಿದ್ದಾರೆ. ಪ್ರತಿ ಊರಲ್ಲೂ ಒಳ್ಳೆ ಸ್ಪಂದನೆ ಇದೆ ಎಂದರು.

ಯಡಿಯೂರಪ್ಪ ಕುಟುಂಬದ ವಿರುದ್ಧ ಗುಡುಗು

ಕೇಂದ್ರದಲ್ಲಿ ಒಂದೇ ಕುಟುಂಬದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಅದರ ವಿರುದ್ಧವಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮೋದಿ ಹಾಗೂ ಅಮಿತ್ ಶಾ ಹೇಳುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಸಂಸ್ಕೃತಿಯಲ್ಲಿದೆ ಎಂದು ಯಡಿಯೂರಪ್ಪ ಕುಟುಂಬದ ವಿರುದ್ದ ಗುಡುಗಿದ ಈಶ್ವರಪ್ಪ, ಅಪ್ಪ ಮಕ್ಕಳ ಕೈಯಲ್ಲಿ ಬಿಜೆಪಿ ಪಕ್ಷ ಇರುವುದನ್ನ ವಿರೋಧ ಮಾಡಿದ್ದಕ್ಕೆ ಇಡೀ ಕರ್ನಾಟಕದ ಜನತೆ ಮೆಚ್ಚಿ ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಸ್ಪರ್ಧೆ ಮಾಡಲೇಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ಕರ್ನಾಟಕದಲ್ಲಿ ಯಡಿಯೂರಪ್ಪನವರೆ ಲಿಂಗಾಯತ ನಾಯಕರು, ಅವರೇ ಜನರ ನಾಯಕರು, ಅವರ ಕುಟುಂಬವನ್ನು ಬಿಟ್ಟರೆ ಬೇರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಆಗುವುದಿಲ್ಲ ಎಂಬ ಭ್ರಮೆ ಹುಟ್ಟಿಸಿರುವುದರಿಂದ ನಮ್ಮ ರಾಜ್ಯಕ್ಕೆ ಈ ಪರಿಸ್ಥಿತಿ ಬಂದಿದೆ ಎಂದರು.

ದೆಹಲಿಗೆ ಹೋಗಿದ್ದೆ…ಬುದ್ದಿವಂತಿಕೆ ತೋರಿಸಿದ್ದಾರೆ!

ದೆಹಲಿಗೆ ಅಮಿತ್ ಶಾ ಕರೆದಿದ್ದರು, ನಾನು ಹೋಗಿದ್ದೆ, ಅವರು ಬುದ್ಧಿವಂತಿಕೆಯಿಂದ ನನ್ನನ್ನು ವಾಪಸ್ ಕಳಿಸಿದ್ದಾರೆ. ಚುನಾವಣೆಯಲ್ಲಿ ನಿಂತು ಗೆದ್ದು ಪುನಃ ಅವರ ಬಳಿ ಹೋಗುತ್ತೇನೆ. ಅವಮಾನ ಎಂದು ನಾನು ಭಾವಿಸುವುದಿಲ್ಲ. ದೊಡ್ಡವರು ಕರೆದಾಗ ಹೋಗಲಿಲ್ಲ ಎಂದರೆ ನನಗೆ ಸೊಕ್ಕು ಎನ್ನುತ್ತಾರೆ. ನನ್ನನ್ನು ಬೆಳೆಸಿರುವವರೆ ಅವರು. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಹೇಳಿದಾಗ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ವಾಲ್ ಬಂದಿದ್ದರು. ಅವರಿಗೆ ಚುನಾವಣೆಗೆ ಯಾಕೆ ನಿಲ್ಲುತ್ತೇನೆ ಎಂದು ತಿಳಿಸಿದ್ದೇನೆ ಎಂದರು.

ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಲ್ಲ

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ಇಬ್ಬರನ್ನು ಸೋಲಿಸುತ್ತೇನೆ. ಹೊಂದಾಣಿಕೆ ರಾಜಕಾರಣ ಹೇಗೆ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲೆಯ ಜನ ಬಲಿಯಾಗಲ್ಲ. ಸಿದ್ಧಾಂತದ ವಿಚಾರದಲ್ಲಿ ಹಿಂದುತ್ವದ ವಿಚಾರದಲ್ಲಿ ಸ್ಪರ್ಧೆ ಮಾಡಿರುವ ಈಶ್ವರಪ್ಪನವರಿಗೆ ಖಂಡಿತವಾಗಿ ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಈಶ್ವರಪ್ಪ ಹೇಳಿದರು.

ಆರಗಗೆ ಮರಳು ಮಾಫಿಯಾ ಗೊತ್ತಿಲ್ವಾ?.. ಜ್ಞಾನೇಂದ್ರ ನಾನು ಬೆಳೆಸಿದ ಹುಡುಗ!

ಆರಗ ಜ್ಞಾನೇಂದ್ರರ ಈಶ್ವರಪ್ಪನವರ ಸ್ಪರ್ಧೆ ನಾಮಕಾವಸ್ಥೆ ಎಂಬ ಮಾತಿಗೆ ಉತ್ತರಿಸಿದ ಅವರು ಈ ಕ್ಷೇತ್ರದಲ್ಲಿ ಮರಳು ಮಾಫಿಯಾ ಎಷ್ಟು ನಡೆಯುತ್ತಿದೆ ಎಂದು ನನಗೆ ಮೊನ್ನೆ ಮೊನ್ನೆ ಗೊತ್ತಾಯಿತು. ಬಹಳ ಹಿರಿಯರು ನನಗೆ ಈ ವಿಷಯ ತಿಳಿಸಿದರು. ಜ್ಞಾನೇಂದ್ರರ ಕಣ್ಣಿಗೆ ಬಿದ್ದಿಲ್ಲವೇ? ಅವನ ರೋಲ್ ಎಷ್ಟು ಇದೆ ನನಗೆ ಗೊತ್ತಿಲ್ಲ, ಎಂ.ಪಿ ರೋಲ್ ಬಹಳ ಇದೆ ಎಂದು ಹೇಳುತ್ತಾರೆ. ನನಗೆ ಅದು ಕ್ಲಿಯರ್ ಇಲ್ಲ. ಈ ಚುನಾವಣೆ ಮುಗಿಯುತ್ತಿದ್ದಂತೆ ನಾಮಕಾವಸ್ತೆ ಯಾರು ಎಂದು ಜನ ತೋರಿಸುತ್ತಾರೆ. ಚುನಾವಣೆಯಲ್ಲಿ ಗೆದ್ದು ಈ ಮರಳು ಮಾಫಿಯಾವನ್ನು ಮಟ್ಟ ಹಾಕುತ್ತೇನೆ ಎಂದರು.

ನಾನು ಬೆಳಸಿದ ಹುಡುಗನೇ ಜ್ಞಾನೇಂದ್ರ, ನಮ್ಮ ಮನೆಯಲ್ಲೇ ಇದ್ದವನು, ಡಿಗ್ರಿ ಓದಿದ್ದು ನಮ್ಮ ಮನೆಯಲ್ಲೇ, ವೈಯಕ್ತಿಕವಾಗಿ ನಾನು ಅವನ ಬಗ್ಗೆ ಟೀಕೆ ಮಾಡುತ್ತಿಲ್ಲ. ಒಬ್ಬ ಎಂಎಲ್‌ಎ ಆದವನ ಡ್ಯೂಟಿ ಇದು, ಮರಳು ಮಾಫಿಯಾ ಆಗುತ್ತಿರುವ ಸಮಯದಲ್ಲಿ ಯಾಕೆ ಸುಮ್ಮನೆ ಕೂತಿದ್ದಾರೆ. ಹಿಂದುತ್ವಕ್ಕೆ ತೀರ್ಥಹಳ್ಳಿಯಲ್ಲಿ ಹೆಚ್ಚಿನ ಶಕ್ತಿ ಬರಬೇಕು. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಡೆಸುತ್ತೇನೆ ಎಂದರು.

Categories
ಬೆಂಗಳೂರು ರಾಜ್ಯ

ಬೆಂಕಿಯಾದ ಬಿಸಿಲು: ಮಳೆಗೆ ಜನರ ಮೊರೆ!

ಬೆಂಕಿಯಾದ ಬಿಸಿಲು: ಮಳೆಗೆ ಜನರ ಮೊರೆ!
– ಏ.8ರಿಂದ 25 ಜಿಲ್ಲೆಯಲ್ಲಿ ಮಳೆ
– ಕೆಲವು ಕಡೆ ಮಳೆ: ಮೋಡ ಕವಿದ ವಾತಾವರಣ

NAMMUR EXPRESS NEWS
ಬೆಂಗಳೂರು: ಇಡೀ ರಾಜ್ಯದಲ್ಲಿ ಬಿಸಿಲು ಜನರನ್ನು ಕಂಗಾಲು ಮಾಡಿದೆ. ಜನ ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಈ ನಡುವೆ ಏಪ್ರಿಲ್​ 8ರ ಬಳಿಕ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 6ರಂದು ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ಏಪ್ರಿಲ್​ 8 ರಂದು ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಳಿದಂತೆ ಏಪ್ರಿಲ್​ 9ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಯಾದಗಿರಿ, ಹಾವೇರಿ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತಷ್ಟು ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ.

Categories
ಉದ್ಯೋಗ ಸುದ್ದಿ ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಉದ್ಯೋಗ ಅವಕಾಶ

ತೀರ್ಥಹಳ್ಳಿಯಲ್ಲಿ ಉದ್ಯೋಗ ಅವಕಾಶ
– ಶಿಕ್ಷಕರು, ಉಪನ್ಯಾಸಕರು ಸೇರಿ ವಿವಿಧ ಹುದ್ದೆ

NAMMUR EXPRESS JOB NEWS
ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ತೀರ್ಥಹಳ್ಳಿ ಕುಶಾವತಿ ಇಲ್ಲಿ ಹಲವು ಉದ್ಯೋಗ ಲಭ್ಯವಿದೆ.

ಸಹ್ಯಾದ್ರಿ ಕಾಂಪೋಸಿಟ್ ಜೂನಿಯರ್ ಕಾಲೇಜು ಸಹ್ಯಾದ್ರಿ ಸೆಂಟ್ರಲ್ [ICSE] ಮತ್ತು ಸಹ್ಯಾದ್ರಿ ರಾಜ್ಯ, ತೀರ್ಥಹಳ್ಳಿಗೆ ಈ ಕೆಳಗಿನ ಶಿಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕ್ರ.ಸಂಖ್ಯೆ ಖಾಲಿ ಹುದ್ದೆ ಪೋಸ್ಟ್‌ಗಳು ವಿದ್ಯಾರ್ಹತೆ ನಿರ್ದಿಷ್ಟತೆ

01 ಇಂಗ್ಲಿಷ್ 03 ಬಿ ಎ , ಬಿ .ಎಡ್ /ಎಮ್ ಎ , ಬಿ .ಎಡ್ ಇಂಗ್ಲಿಷ್ ಮೇಜರ್

02 ಜೀವಶಾಸ್ತ್ರ 01 ಬಿ .ಎಸ್ ಸಿ , ಬಿ .ಎಡ್ /ಎಂ. ಎಸ್ ಸಿ , ಬಿ .ಎಡ್

ಎಂ. ಎಸ್ ಸಿ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ಬಿ .ಎಸ್ ಸಿ ಸಿಬಿಝೆಡ್

03 ವಿಜ್ಞಾನ 02 ಬಿ .ಎಸ್ ಸಿ , ಬಿ .ಎಡ್ , ಎಂ .ಎಸ್ ಸಿ , ಬಿ .ಎಡ್, ಬಿ.ಎಸ್ಸಿ, ಪಿಸಿಎಂ

04 ಗಣಿತಶಾಸ್ತ್ರ 01 ಎಂ.ಎಸ್ಸಿ, ಬಿ.ಎಡ್
M.Sc ಗಣಿತ

05 ಸಮಾಜ ವಿಜ್ಞಾನ 02 ಬಿಎ, ಬಿ.ಎಡ್/ಎಂಎ, ಬಿ.ಎಡ್
ಪದವಿಯಲ್ಲಿ ಭೂಗೋಳ/ಇತಿಹಾಸ

06 ಕಂಪ್ಯೂಟರ್ 01 ಕಂಪ್ಯೂಟರ್ ನಲ್ಲಿ ಬಿ.ಎಸ್ಸಿ/ಎಂ.ಎಸ್ಸಿ ವಿಜ್ಞಾನ

07 ನರ್ಸರಿ ಶಿಕ್ಷಕ 02 ಎನ್.ಟಿ.ಟಿ

08 ಅಟೆಂಡರ್ಸ್, ಪುರುಷ 1, ಮಹಿಳೆ 1

ಆಸಕ್ತ ಅಭ್ಯರ್ಥಿಗಳು ಬೆಳಿಗ್ಗೆ 10:30 ಗಂಟೆಗೆ ಎಲ್ಲಾ ಮೂಲಗಳೊಂದಿಗೆ ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು. 12/04/2024 ಶುಕ್ರವಾರದಂದು ಸಹ್ಯಾದ್ರಿ ಶಾಲೆಯಲ್ಲಿ, ಕುಶಾವತಿ ತೀರ್ಥಹಳ್ಳಿ. ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿ ತರಗತಿಯನ್ನು ನೀಡಬೇಕು. ಹಾಸ್ಟೆಲ್ ಸೌಲಭ್ಯವಿದೆ.

ಸಂಪರ್ಕ ಸಂಖ್ಯೆ : 9448238500, 9449699049, 9448171131, 9449455135, 9480765888, 9448309494
08181-227314, 228035, 228810

Categories
ಶಿವಮೊಗ್ಗ

ಟಾಪ್ ನ್ಯೂಸ್ ಶಿವಮೊಗ್ಗ

ಟಾಪ್ ನ್ಯೂಸ್ ಶಿವಮೊಗ್ಗ
ರಾಮೇಶ್ವರಂ ಕೆಫೆ ಕೇಸ್: ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತನ ವಿಚಾರಣೆ!
– ಎನ್‌ಐಎ ಅಧಿಕಾರಿಗಳಿಂದ ವಿಚಾರಣೆ: ಏನಿದು ಕೇಸ್?
– ಶಿವಮೊಗ್ಗ ಸೈಬರ್ ಕ್ರೈಂ ಎಎಸ್ಐ ಲೋಕಾಯುಕ್ತ ಬಲೆಗೆ.!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಉಗ್ರರ ಸಂಪರ್ಕದ ಎನ್‌ಐಎ ವಿಚಾರಣೆಗೆ ಸಂಬಂಧಪಟ್ಟಂತೆ ಬಿಜೆಪಿ ನಗರ ಘಟಕದ ಕಾರ್ಯಕರ್ತನ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ ಯಾವ ಕಾರಣಕ್ಕಾಗಿ ಇನ್ನು ನಿಗೂಢವಾಗಿದೆ. ಇತ್ತೀಚೆಗೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಹಿಂದೆ ಬೆಳ್ಳಂಬೆಳಿಗ್ಗೆ ಎನ್‌ಐಎ ಹಲವು ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.ಇಬ್ಬರ ವಿಚಾರಣೆ ಕೂಡ ಮಾಡಲಾಗಿತ್ತು. ಅದರ ಬೆನ್ನಲ್ಲೆ ತೀರ್ಥಹಳ್ಳಿಯ ಬಿಜೆಪಿಯ ಯುವ ಕಾರ್ಯಕರ್ತನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಮೊಬೈಲ್ ಅಂಗಡಿಯ ಇಬ್ಬರು ಯುವಕರನ್ನು ವಿಚಾರಣೆ ನಡೆಸಿದ್ದ ಎನ್‌ಐಎ ತಂಡ ಈ ಹುಡುಗರ ಜೊತೆ ನಗರ ಘಟಕ ಜೊತೆ ಸಂಪರ್ಕ ಇದ್ದ ಕಾರಣ ವಿಚಾರಣೆಗೆ ಒಳಪಡಿಸಿರಬಹುದು ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಸೈಬರ್ ಕ್ರೈಂ ಎಎಸ್ಐ ಲೋಕಾಯುಕ್ತ ಬಲೆಗೆ.!

ಶಿವಮೊಗ್ಗ ಸೈಬರ್ ಕ್ರೈಂ ವಿಭಾಗದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮಾನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು 1 ಲಕ್ಷ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಮಟ್ಕಾ ದಂದೆ ನಡೆಸುವ ಸಲುವಾಗಿ ರೂ.1,20,000 ಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರ ಬಾಪ್ತಾಗಿ ರೂ. 1 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.