Categories
ತೀರ್ಥಹಳ್ಳಿ

ಕೋಣಂದೂರಿಗೆ ಕುಮಾರಣ್ಣನ ಎಂಟ್ರಿ!

ಕೋಣಂದೂರಿಗೆ ಕುಮಾರಣ್ಣನ ಎಂಟ್ರಿ!
– ಏ.29ರಂದು ರಾಘವೇಂದ್ರ ಪರ ಪ್ರಚಾರ
– ಮೈತ್ರಿ ಹಿನ್ನಲೆಯಲ್ಲಿ ಬಿಜೆಪಿ ಪರ ಮತ ಕೇಳಲು ಆಗಮನ

NAMMUR EXPRESS NEWS
ತೀರ್ಥಹಳ್ಳಿ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಚುನಾವಣಾ ಪ್ರಚಾರ ನಡೆಸಲು ಮೈತ್ರಿ ಕೂಟದ ಪ್ರಮುಖ ನಾಯಕರು, ಮಾಜಿ ಮುಖ್ಯಮಂತ್ರಿಗಳೂ ಆದ ಹೆಚ್.ಡಿ.ಕುಮಾರಸ್ವಾಮಿ ಏಪ್ರಿಲ್ 29ರ ಸೋಮವಾರ ಬೆಳಿಗ್ಗೆ 10-30ಕ್ಕೆ ಕೋಣಂದೂರಿಗೆ ಆಗಮಿಸಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ಪರ ಪ್ರಚಾರಕ್ಕೆ ಬಂದಿದ್ದ ಕುಮಾರಸ್ವಾಮಿ ಈಗ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಾಗಿರುವ ಹಿನ್ನಲೆಯಲ್ಲಿ ಬಿಜೆಪಿ ಪರ ಮತ ಕೇಳಲು ಆಗಮಿಸುತ್ತಿದ್ದಾರೆ.

Categories
ರಾಜ್ಯ ಹವಾಮಾನ ಸುದ್ದಿ

ಏ.30ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರಂಭ

ಏ.30ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರಂಭ
– ಶುರುವಾಯ್ತಾ ಪೂರ್ವ ಮುಂಗಾರು?
– ಹವಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಕರ್ನಾಟಕದಲ್ಲಿ ಬಿಸಿಲಿನ ಧಗೆ ಏರುತ್ತಿದ್ದು, ಕೆಲವು ದಿನಗಳ ಹಿಂದೆ ರಾಜ್ಯದ ಹಲವೆಡೆ ಮಳೆಯಾಗಿತ್ತು. ಆಮೇಲೆ ವರುಣ ದೇವ ಕಣ್ಮರೆಯಾಗಿದ್ದಾನೆ. ಮಳೆಯಿಲ್ಲದೇ ತಾಪಮಾನ ಹೆಚ್ಚಾಗುತ್ತಿದ್ದು, ಜನರು ಸಂಕಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಮತ್ತೆ ಏಪ್ರಿಲ್‌ 30ರಿಂದ ರಾಜ್ಯದ ಹಲವೆಡೆ ಮಳೆ ಸುರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಏಪ್ರಿಲ್‌ 27, 28 ಮತ್ತು 29ರಂದು ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ. ಏಪ್ರಿಲ್‌ 30 ರಿಂದ ಮೇ 3 ರವರೆಗೆ ರಾಜ್ಯದ ಹಲವೆಡೆ ಮಳೆ ಬರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಏಪ್ರಿಲ್‌ 30ರಂದು ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಚಿತ್ರದುರ್ಗದ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಮೇ 1ರಂದು ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮೇ 2ರಂದು ಬೀದರ್‌, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತಯ ರಾಮನಗರ ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗುವ ನಿರೀಕ್ಷೆ ಇದೆ. ಇನ್ನು, ಮೇ 3ರಂದು ಕೊಡಗು, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾಗೂ ಮಂಡ್ಯ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

– ಹಲವು ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ!

ಮಳೆ ಜೊತೆ ರಾಜ್ಯದಲ್ಲಿ ಉಷ್ಣ ಅಲೆಯ ಎಚ್ಚರಿಕೆಯನ್ನು ಕೂಡ ಹವಾಮಾನ ಇಲಾಖೆ ನೀಡಿದೆ. ಏಪ್ರಿಲ್‌ 30 ರವರೆಗೂ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೀದರ್‌, ವಿಜಯನಗರ, ಗದಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾವೇರಿ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಬಿಸಿಲು ಇರುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಅದಲ್ಲದೇ ಮುಂದಿನ ಐದು ದಿನಗಳಲ್ಲಿ ರಾಜ್ಯದ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ನಿರೀಕ್ಷೆ ಇದೆ.

Categories
ರಾಜ್ಯ

ಮೇ.7ರಂದು 2ನೇ ಹಂತದ ಮತ: ಸರ್ಕಾರಿ ರಜೆ ಘೋಷಣೆ

ಮೇ.7ರಂದು 2ನೇ ಹಂತದ ಮತ: ಸರ್ಕಾರಿ ರಜೆ ಘೋಷಣೆ
– ಯಾವ ಯಾವ ಜಿಲ್ಲೆಗಳಿಗೆ ಮತದಾನ: ಯಾರಿಗೆ ರಜೆ?
– ಇನ್ನೇನಿದ್ದರೂ ಎರಡನೇ ಹಂತದ ಮತ ಸಮರಕ್ಕೆ ಸಜ್ಜು!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಮತದಾನ ಯಶಸ್ವಿಯಾಗಿ ನಡೆದ ಬೆನ್ನಲ್ಲೇ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. ಕರ್ನಾಟಕ ಸೇರಿ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾರರು ಮತ ಚಲಾಯಿಸಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಒಂದು ಹಂತದ ಮತದಾನ ಮುಗಿದಿದೆ. ಈಗ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆದಿದೆ.
ಎರಡನೇ ಹಂತದ ಮತದಾನ ಪ್ರಕ್ರಿಯೇ ಮುಂದಿನ ತಿಂಗಳು ಅಂದರೆ ಮೇ 7 ರಂದು ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಲೇ ಇದೆ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆ ಇದೀಗ ಮತದಾನದ ದಿನದಂದು ಸಾರ್ವತ್ರಿಕ ರಜೆ ಘೋಷಿಸಲು ಆದೇಶ ಹೊರಡಿಸಲಾಗಿದೆ.

ಯಾವ ಯಾವ ಜಿಲ್ಲೆಗೆ ರಜೆ?

ರಾಜ್ಯದಲ್ಲಿ ಮೇ 7ರಂದು ಲೋಕಸಭೆ ಚುನಾವಣೆ 14 ಕ್ಷೇತ್ರಗಳಲ್ಲಿ ನಡೆಯಲಿದೆ. ಇದರಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ. ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು ಸೇರಿವೆ.

ಎಲ್ಲಾ ಕಡೆ ರಜೆ ಘೋಷಣೆ

ಸರಕಾರಿ ಕಚೇರಿ, ಶಾಲಾ ಕಾಲೇಜ್, ಸರಕಾರಿ ಸ್ವಾಮ್ಯದ ಸಂಸ್ಥೆ ಜೊತೆಗೆ ವ್ಯವಹಾರಿಕ ಸಂಸ್ಥೆಗಳಿಗೂ ರಜೆ ಘೋಷಣೆಯಾಗಲಿದೆ. ಈ ಆದೇಶ ಜಿಲ್ಲೆಯ ಜನಸಾಮಾನ್ಯರಿಗೆ ಮತದಾನ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ಮಾಡಲಾಗಿದೆ.

Categories
ಶಿಕ್ಷಣ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನ.!

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನ.!
– ರಾಜ್ಯಮಟ್ಟದ 9ನೇ ರ್‍ಯಾಂಕ್ ಪಡೆದ ಹೆಬ್ರಿ ಎಸ್.ಆರ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಪ್ರಿಯ
– ಕಾಲೇಜು ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವೈ ಸಾಕ್ಷತ್

NAMMUR EXPRESS NEWS
ಹೆಬ್ರಿ: ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಬ್ರಿಯ ಎಸ್.ಆರ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರಿಯ ಆಚಾರ್ ಅವರು ಮರುಮೌಲ್ಯಮಾಪನದಲ್ಲಿ ಇಂಗ್ಲಿಷ್ ವಿಷಯದಲ್ಲಿ 5 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳುವುದರ ಮೂಲಕ ಒಟ್ಟು 589 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 9ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಈ ಮೂಲಕ ಸಂಸ್ಥೆಯು ರಾಜ್ಯಮಟ್ಟದ 3 ರ್‍ಯಾಂಕ್ ಗಳನ್ನು ತನ್ನದಾಗಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ವೈ ಸಾಕ್ಷತ್ ಶೆಟ್ಟಿ ಇವರು ಕನ್ನಡ ವಿಷಯದಲ್ಲಿ 7 ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುವುದರ ಮೂಲಕ ಒಟ್ಟು 587 ಅಂಕಗಳನ್ನು ಪಡೆದು ಕಾಲೇಜು ಮಟ್ಟದಲ್ಲಿ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳನ್ನು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಹಾಗೂ ಕಾರ್ಯದರ್ಶಿಯವರಾದ ಸಪ್ನಾ.ಎನ್. ಶೆಟ್ಟಿಯವರು ಅಭಿನಂದಿಸಿದ್ದಾರೆ.

Categories
ತೀರ್ಥಹಳ್ಳಿ

ಹೊದಲದಲ್ಲಿ ಹುಲಿ, ಚಿರತೆ ಕಾಟ: ಜನರಿಗೆ ಭಯ!

ಹೊದಲದಲ್ಲಿ ಹುಲಿ, ಚಿರತೆ ಕಾಟ: ಜನರಿಗೆ ಭಯ!
– ತೀರ್ಥಹಳ್ಳಿ ತಾಲೂಕು ಹೊದಲ ಸುತ್ತಮುತ್ತ ದನಗಳು ಬಲಿ
– ಮನೆಯ ಬಳಿಯೇ ಓಡಾಟ : ಕರುವಿಗೆ ಕಚ್ಚಿ ಗಾಯ
– ರಸ್ತೆಯಲ್ಲೇ ಪತ್ತೆ: ಅರಣ್ಯ ಇಲಾಖೆ ಏನು ಮಾಡುತ್ತಿದೆ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊದಲ ಭಾಗದಲ್ಲಿ ಇದೀಗ ಚಿರತೆ ಹಾಗೂ ಹುಲಿಗಳ ಕಾಟ ಹೆಚ್ಚಾಗಿದ್ದು, ಪ್ರತಿನಿತ್ಯ ಮನೆ ಬಳಿಯೇ ಹುಲಿ ಚಿರತೆಗಳು ಕಾಣಿಸುತ್ತಿದೆ. ಇತ್ತೀಚಿಗಷ್ಟೇ ರಸ್ತೆ ಬದಿಯಲ್ಲಿ ಚಿರತೆ ಒಂದು ಕಾಣಿಸಿದ್ದು, ವಾಹನ ಸವಾರರು ಇದನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಶುಕ್ರವಾರ ರಾತ್ರಿ ಹೊದಲದ ಮನೆ ಒಂದಕ್ಕೆ ಆಗಮಿಸಿದ ಚಿರತೆ ಕರುವೊಂದನ್ನು ತಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ. ಈ ಭಾಗದಲ್ಲಿ ಓಡಾಡಲು ಕೂಡ ಭಯವನ್ನು ಸೃಷ್ಟಿ ಮಾಡಿದಂತಿದೆ. ಕಳೆದ ಎರಡು ತಿಂಗಳಿನಿಂದ ಹುಲಿ ಚಿರತೆಗಳ ಓಡಾಟ ಹೆಚ್ಚಾಗಿದ್ದರು, ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದರೂ ಗಮನಿಸುತ್ತಿಲ್ಲ. ಇದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆ ಸಮೀಪವೇ ಬರುತ್ತೆ ಚಿರತೆ!

ಚಿರತೆಗಳು ಮನೆ ಮತ್ತು ಮನೆಯ ಸಮೀಪ ಓಡಾಡುತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಇನ್ನು ಮನೆಯ ಬಳಿಯ ಕೊಟ್ಟಿಗೆಗೆ ಬಂದು ದನ ಕರುಗಳನ್ನು ಹಿಡಿಯುತ್ತಿದೆ. ನಾಯಿಗಳ ಮೇಲೆ ಕೂಡ ದಾಳಿ ಮಾಡಲಾಗಿದೆ. ಹೀಗಾಗಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಸ್ಥಳಕ್ಕೆ ಪರಿಶೀಲಿಸಿ ಬೋನು ಇಡಬೇಕು ಜೊತೆಗೆ ಈ ಬಗ್ಗೆ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Categories
ರಾಜ್ಯ

ಕರ್ನಾಟಕದಲ್ಲಿ ಮತ ದಾಖಲೆ!

ಕರ್ನಾಟಕದಲ್ಲಿ ಮತ ದಾಖಲೆ!
– ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!
– ​ಕರುನಾಡಲ್ಲಿ ಶಾಂತಿಯುತ ಮತದಾನ
– ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತೀ ಕಡಿಮೆ
– 247 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ ಶುಕ್ರವಾರ ಮುಕ್ತಾಯವಾಗಿದೆ. ಒಂದೆರಡು ಕಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿದರೆ ಎಲ್ಲೆಡೆ ಬಹುತೇಕ ಶಾಂತಿಯುತವಾಗಿ ಮತದಾನ ಜರುಗಿದ್ದು, 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಒಟ್ಟು ಶೇ.69.23 ಮತದಾನ ದಾಖಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.81.48 ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 52.81 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಮೊದಲ ಹಂತದಲ್ಲಿ ಒಟ್ಟು 2,88,08,182 ಮತದಾರರು ಮತ ಚಲಾಯಿಸಿದ್ದು, 14 ಕ್ಷೇತ್ರಗಳಲ್ಲಿ 118 ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದರಲ್ಲಿ 226 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

ಇಂಡಿಗನತ್ತ ಮತಗಟ್ಟೆಯಲ್ಲಿ ಮರು ಮತದಾನ ಸಾಧ್ಯತೆ

ಚಾಮರಾಜನಗರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಮರು ಮತದಾನ ನಡೆಯುವ ಸಾಧ್ಯತೆ ಇದೆ. ಶುಕ್ರವಾರ ಕೇವಲ 10 ಮತದಾರರು ಮಾತ್ರ ಹಕ್ಕು ಚಲಾವಣೆ ಮಾಡಿದ್ದಾರೆ. ಮತಗಟ್ಟೆಯಲ್ಲಿ ಮೂಲಸೌಕರ್ಯ ಇಲ್ಲ ಎಂದು ಮತದಾರರು ಅಸಮಾಧಾನ ಹೊರಹಾಕಿ ಮತದಾನ ಬಹಿಷ್ಕರಿಸಿದ್ದರು. ಹೀಗಾಗಿ 2 ದಿನಗಳೊಳಗೆ ಅಧಿಕಾರಿಗಳು ಮಾತುಕತೆ ನಡೆಸಿ ಮರು ಮತದಾನ ಮಾಡಿಸುವ ಸಾಧ್ಯತೆ ಇದೆ.

ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್​ ಮುಚ್ಚಿದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್​ಗೆ ರವಾನೆಯಾಗಲಿವೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಕ್ಷೇತ್ರ ಲೋಕಸಭಾ ಚುನಾವಣೆ-2024 ಮತ್ತು ಲೋಕಸಭಾ ಚುನಾವಣೆ-2019
ಉಡುಪಿ-ಚಿಕ್ಕಮಗಳೂರು ಶೇ. 76.06 ಶೇ. 76.07
ಹಾಸನ ಶೇ. 77.51 ಶೇ. 77.35
ದಕ್ಷಿಣ ಕನ್ನಡ ಶೇ. 77.43 ಶೇ. 77.99
ಚಿತ್ರದುರ್ಗ ಶೇ. 73.11 ಶೇ. 70.80
ತುಮಕೂರು ಶೇ. 77.70 ಶೇ. 77.43
ಮಂಡ್ಯ ಶೇ. 81.48 ಶೇ. 80.59
ಮೈಸೂರು–ಕೊಡಗು ಶೇ. 70.45 ಶೇ. 69.51
ಚಾಮರಾಜನಗರ ಶೇ. 76.59 ಶೇ. 75.35
ಬೆಂಗಳೂರು ಗ್ರಾಮಾಂತರ ಶೇ.67.29 ಶೇ. 64.98
ಬೆಂಗಳೂರು ಉತ್ತರ ಶೇ.54.42 ಶೇ. 54.76
ಬೆಂಗಳೂರು ಸೆಂಟ್ರಲ್‌ ಶೇ. 52.81 ಶೇ. 54.32
ಬೆಂಗಳೂರು ದಕ್ಷಿಣ ಶೇ. 53.15 ಶೇ. 53.70
ಚಿಕ್ಕಬಳ್ಳಾಪುರ ಶೇ. 76.82 ಶೇ. 76.74
ಕೋಲಾರ ಶೇ. 78.07 ಶೇ. 77.25

ಒಟ್ಟು ಶೇಕಡಾವಾರು ಮತದಾನ 69.23

Categories
ಬೆಂಗಳೂರು ರಾಜ್ಯ

ಚುನಾವಣೆ ಬಸ್ ಇಲ್ಲದೆ ಲಕ್ಷ ಲಕ್ಷ ಜನರ ಪರದಾಟ!

ಚುನಾವಣೆ ಬಸ್ ಇಲ್ಲದೆ ಲಕ್ಷ ಲಕ್ಷ ಜನರ ಪರದಾಟ!
– ಸರ್ಕಾರದಿಂದ ಚುನಾವಣೆಯ ದಿನವೂ ಜನರಿಗೆ ಸಂಕಷ್ಟ
– ಖಾಸಗಿ ಬಸ್ ಗಳು ಇಲ್ಲ, ಸರ್ಕಾರಿ ಬಸ್ ಇಲ್ಲ: ಬಸ್ ನಿಲ್ದಾಣಗಳಲ್ಲೇ ಮಲಗಿದ ಜನ!

NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಏಪ್ರಿಲ್ 26ರಂದು ನಡೆಯಿತು, ಆದರೆ ಇದರಿಂದಾಗಿ ಅನೇಕ ಸರ್ಕಾರಿ ಬಸ್ ಸೇವೆ ಇಲ್ಲದೆ ಸಾವಿರಾರು ಜನರು ಪರದಾಡಿದರು. ತಮ್ಮ ಊರಿಗೆ ಹೋಗಲು ಸಾಕಷ್ಟು ಪರದಾಡುವಂತಹ ಸ್ಥಿತಿ ಉಂಟಾಯಿತು . ಸರ್ಕಾರ ಈ ರೀತಿಯ ಪುನರ್ ಪರಿಶೀಲನೆ ಮಾಡದೇ, ಏಕಾಏಕಿ ನಿರ್ಧಾರ ಮಾಡುವುದರಿಂದ ಸರ್ಕಾರಿ ಬಸ್ ಗಳ ಸಮಸ್ಯೆ ಉಂಟಾಗಿ ಜನ ಪರದಾಟ ಎದುರಿಸಿದರು, ಇತ್ತ ಚುನಾವಣೆಯು ಬೇಡ ಮತದಾನನೂ ಬೇಡ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು ಬಹುತೇಕ ರಾಜ್ಯದ ಎಲ್ಲಾ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕಂಡು ಬಂತು.

ಬಸ್ ರಶ್..ಮನೆ ಸೇರಲು ಆಗಲೇ ಇಲ್ಲ!

ಜನ ಬಸ್ ಗಾಗಿ ಕಾದು ಕುಳಿತಿರುವಂತಹ ದೃಶ್ಯಗಳು ಎಲ್ಲಾ ಬಸ್ ನಿಲ್ದಾಣಗಳಲ್ಲಿ ಕಂಡುಬಂದವು ಇದರಿಂದ ಜನತೆ ಸಂಕಷ್ಟಕೀಡಾಗಿದ್ದರು. ಸಾವಿರಾರು ಜನ ಮನೆ ಸೇರಲಾಗದೆ ಪರದಾಟ ನಡೆಸಿದರು. ಬೆಂಗಳೂರು-ಶಿವಮೊಗ್ಗ, ಬೆಂಗಳೂರು ಹುಬ್ಬಳಿ, ಬೆಂಗಳೂರು ಮಂಗಳೂರು ಭಾಗದಲ್ಲಿ ಅತೀ ಹೆಚ್ಚು ತೊಂದರೆ ಆಗಿತ್ತು.

Categories
ಕರಾವಳಿ ಕಾರ್ಕಳ ಶಿಕ್ಷಣ

ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದ ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್

ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದ ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್
– ಮರು ಮೌಲ್ಯ ಮಾಪನದಲ್ಲಿ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ
– ಕ್ರಿಯೇಟಿವ್ ಕಾಲೇಜು ಈಗ ರಾಜ್ಯದಲ್ಲೇ ಟಾಪ್ ಕಾಲೇಜು
– 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ

NAMMUR EXPRESS NEWS
ಕಾರ್ಕಳ: ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಮರು ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದಾಳೆ. ಹೊನ್ನಾವರ ಜಗದೀಶ್ ರಾವ್ ಹಾಗೂ ವಿನುತಾ ಭಟ್ ದಂಪತಿಗಳ ಪುತ್ರಿ ಸಾನ್ವಿ ಅವರ ಸಾಧನೆ ಈಗ ರಾಜ್ಯದ ಗಮನ ಸೆಳೆದಿದೆ. ಈಕೆ ಫಲಿತಾಂಶ ಬಂದಾಗ 595 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಳು. ಇದೀಗ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.

ಮತ್ತಷ್ಟು ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳು

ಶೈಕ್ಷಣಿಕ ಸಾಧನೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದಿದ್ದು ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಸಂಸ್ಕೃತ ಮತ್ತು ಇ.ಬಿ.ಎ.ಸಿ ಯಲ್ಲಿ ತಲಾ 100 ಕ್ಕೆ 100ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್ ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು. ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 03 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ವಾಣಿಜ್ಯ ವಿಭಾಗದ ಭಕ್ತಿ ಕಾಮತ್ 596 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ರ‍್ಯಾಂಕ್, ವಿಜ್ಞಾನ ವಿಭಾಗದ ಸಾಗರ್ ಎಸ್. ಟಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್ ಹಾಗೆಯೇ ವಾಣಿಜ್ಯ ವಿಭಾಗದ ವಿನಯ್ ಪ್ರಶಾಂತ್ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿರುತ್ತಾರೆ.

12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವುದು ಹೆಮ್ಮೆಯ ವಿಷಯವಾಗಿದ್ದು ವಿದ್ಯಾರ್ಥಿಗಳ ಈ ವಿಶೇಷ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ. ಕಾರ್ಕಳ ಕ್ರಿಯೇಟಿವ್ ಕಾಲೇಜು ಸತತ ಮೂರನೇ ವರ್ಷವೂ ಶೇ.100 ಫಲಿತಾಂಶ ದಾಖಲು ಮಾಡಿದ್ದು ಈ ಸಾಧನೆ ಮೂಲಕ ರಾಜ್ಯದ ಅಗ್ರಗಣ್ಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.

Categories
ಅಪಘಾತ ತೀರ್ಥಹಳ್ಳಿ

ತೀರ್ಥಹಳ್ಳಿ ಬಳಿ ಹಿಟ್ ಅಂಡ್ ರನ್!

ತೀರ್ಥಹಳ್ಳಿ ಬಳಿ ಹಿಟ್ ಅಂಡ್ ರನ್!
– ಬೈಕ್ ಕುಟ್ಟಿ ಪರಾರಿಯಾದ ಪಿಕ್ ಅಪ್: ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದರು
– ಇಬ್ಬರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ತುಡಕಿ ಬಳಿ ಬೈಕಿನಲ್ಲಿ ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿಗೆ ಬರುವ ಬೈಕ್ ಸವಾರರಿಗೆ ತೀರ್ಥಹಳ್ಳಿಯಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿದ್ದ ಪಿಕ್ ಅಪ್ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಆಕ್ಸಿಡೆಂಟ್ ಆದ ಸ್ಥಳದಲ್ಲಿ ಸ್ಥಳೀಯರಾದ ತುಡುಕಿಯ ಪದ್ಮನಾಭ ಮತ್ತು ಅವರ ಸ್ನೇಹಿತರು ಇಬ್ಬರನ್ನು ಹಾಸ್ಪಿಟಲ್ ಗೆ ತಂದು ಪ್ರಥಮ ಚಿಕಿತ್ಸೆ ಕುಡಿಸಿ ಮಾನವೀಯತೆ ಮೆರೆದಿದ್ದಾರೆ ಸ್ಥಳೀಯರು ಪಿಕಪ್ ಅನ್ನು ಚೇಸ್ ಮಾಡಿ ಬೆಜ್ಜವಳ್ಳಿಯಲ್ಲಿ ಸ್ಥಳೀಯರು ಹಿಡಿದು ಪಿಕಪ್ ಚಾಲಕನನ್ನು ಹಿಡಿದು ಮಾಳೂರು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ತನಿಖೆಯನ್ನು ತನಿಖೆ ಕೈಗೊಂಡಿದ್ದಾರೆ. ಬೈಕ್ ಸವಾರನ ಒಬ್ಬನ ಕಾಲು ನುಚ್ಚುಗುಜ್ಜಾಗಿದ್ದು ಇನ್ನೊಬ್ಬನ ಕಾಲು ಮುರಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ

Categories
ರಾಜ್ಯ

ಘಟಾನುಘಟಿ ನಾಯಕರ ಮತ ಹಾಕಿದ್ರು!

ಘಟಾನುಘಟಿ ನಾಯಕರ ಮತ ಹಾಕಿದ್ರು!
– ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ ಸಿಎಂ ಸಿದ್ದರಾಮಯ್ಯ.!
– ದೊಡ್ಡಆಲಹಳ್ಳಿಯಲ್ಲಿ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಮತದಾನ
– ಸೂಟು ಬೂಟು ಹಾಕಿಕೊಂಡು ಸ್ಟೈಲಾಗಿ ಮತದಾನ ಮಾಡಿದ ಜಮೀರ್ ಅಹಮ್ಮದ್
– ಹಾಸನದಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು
– ಕುಟುಂಬ ಸಮೇತರಾಗಿ ಮತದಾನ ಮಾಡಿದ ಕುಮಾರಸ್ವಾಮಿ

NAMMUR EXPRESS NEWS
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತ ಮತದಾನವಾಗಿದ್ದರಿಂದ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬುದನ್ನು ಹೇಳೋಕೆ ಆಗಲ್ಲ. ಆದರೆ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ. ಚಾಮರಾಜನಗರ ಹಾಗೂ ಮೈಸೂರಿನಲ್ಲಿಯೂ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.

ದೊಡ್ಡಆಲಹಳ್ಳಿಯಲ್ಲಿ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಮತದಾನ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂದು ಕನಕಪುರದ ದೊಡ್ಡಆಲನಹಳ್ಳಿಯ ಮತಗಟ್ಟೆಗೆ ತೆರಳಿದಂತ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಮತ ಚಲಾಯಿಸಿದರು.

ಸೂಟು ಬೂಟು ಹಾಕಿಕೊಂಡು ಸ್ಟೈಲಾಗಿ ಮತದಾನ ಮಾಡಿದ ಜಮೀರ್ ಅಹಮ್ಮದ್:

ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆ 2024 ರಲ್ಲಿ ಇಂದು ಹಲವು ರಾಜಕೀಯ ನಾಯಕರೂ ಮತದಾನ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಜಮೀರ್ ಅಹಮ್ಮದ್ ಮತದಾನ ಮಾಡಲು ಸ್ಟೈಲಾಗಿ ಬಂದಿದ್ದು ಎಲ್ಲರ ಗಮನ ಸೆಳೆಯಿತು. ಸೂಟು, ಬೂಟು ಜೊತೆಗೆ ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಚಿವ ಜಮೀರ್ ಅಹಮ್ಮದ್ ಮತದಾನ ಮಾಡಲು ಫುಲ್ ರೆಡಿಯಾಗಿ ಬಂದಿದ್ದರು. ಶಿವನಗರದ ಮತಗಟ್ಟೆ 52 ರಲ್ಲಿ ಜಮೀರ್ ಅಹಮ್ಮದ್ ಮತದಾನ ಮಾಡಿದರು. ಬಳಿಕ ಮಾಧ‍್ಯಮಗಳಿಗೆ ಪೋಸ್ ನೀಡಿದ್ದಾರೆ.

ಹಾಸನದಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು:

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಸನಕ್ಕೆ ಆಗಮಿಸಿ, ಮತದಾನ ಮಾಡಿದ್ದಾರೆ. ದೇವೇಗೌಡರಿಗೆ ಅವರ ಪತ್ನಿ ಚೆನ್ನಮ್ಮ ಕೂಡ ಸಾಥ್ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತೆರಳಿದ ದೇವೇಗೌಡರು, ರಾಾಜ್ಯದಲ್ಲಿ ಮೈತ್ರಿ ಸರ್ಕಾರ ಜಯಗಳಿಸಲಿ ಎಂದು ಪ್ರಾರ್ಥಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕುಟುಂಬ ಸಮೇತರಾಗಿ ಮತದಾನ ಮಾಡಿದ ಕುಮಾರಸ್ವಾಮಿ:

ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ಸಮೇತವಾಗಿ ಮತದಾನ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪ್ರಜಾಪ್ರಭುತ್ವದ ಗೆಲುವಿಗಾಗಿ ಮತದ ಹಕ್ಕು ಚಲಾಯಿಸಿದ್ದು ನನಗೆ ಬಹಳ ಸಂತೋಷ ತಂದಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎನ್ನುವುದು ನನ್ನ ಕಳಕಳಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.