Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿಂದು ಸಿನಿ ತಾರೆಯರ ರೋಡ್ ಶೋ!

ತೀರ್ಥಹಳ್ಳಿಯಲ್ಲಿಂದು ಸಿನಿ ತಾರೆಯರ ರೋಡ್ ಶೋ!
– ಇಂದು ಸಂಜೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ರೋಡ್ ಶೋ
– ಶಿವಣ್ಣ, ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಸೇರಿ ಅನೇಕರ ಆಗಮನ
– ಸಚಿವ ಸಂತೋಷ್ ಲಾಡ್ ಕೂಡ ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ಲೋಕ ಸಭಾ ಚುನಾವಣೆ ಕಣ ರಂಗೇರುತ್ತಿದೆ. ದಿನೇ ದಿನೇ ಪ್ರಚಾರ ಸಭೆಗಳು, ತಾರೆಯರು ಮತ ಕೇಳುತ್ತಿದ್ದಾರೆ. ಇದೀಗ ಸೋಮವಾರ ತೀರ್ಥಹಳ್ಳಿಗೆ ನಟ ನಟಿಯರ ದಂಡೇ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಮತ ಪ್ರಚಾರ ಮಾಡಲಿದ್ದಾರೆ. ಏ.29ರ ಸೋಮವಾರ ಸಂಜೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದು, ಈ ರೋಡ್ ಶೋನಲ್ಲಿ ಲೋಕಸಭಾ ಅಭ್ಯರ್ಥಿಯಾದ ಗೀತಾ ಶಿವರಾಜಕುಮಾರ್ , ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಸಚಿವ ಸಂತೋಷ್ ಲಾಡ್ , ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ಮತ್ತು ಆರ್ .ಎಂ ಮಂಜುನಾಥ್ ಗೌಡ ಸೇರಿ ಅನೇಕ ನಾಯಕರು ಆಗಮಿಸಲಿದ್ದಾರೆ.

ಖ್ಯಾತ ಚಲನ ಚಿತ್ರ ನಟರಾದ ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಬಾಲಾಜಿ ಹಾಗೂ ಅನೇಕ ಚಿತ್ರನಟರು ಈ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ತೀರ್ಥಹಳ್ಳಿಗೆ ಇದೇ ಮೊದಲ ಬಾರಿಗೆ ಇಷ್ಟು ಮಂದಿ ನಟ ನಟಿಯರು ಆಗಮಿಸಲಿದ್ದಾರೆ.

ಯಾರ್ಯಾರು ಬರ್ತಾರೆ?

ಶಿವಣ್ಣ, ಡಾಲಿ ಧನಂಜಯ್, ದುನಿಯಾ ವಿಜಯ್, ಪ್ರೇಮ್, ವಿಜಯ ರಾಘವೇಂದ್ರ ,ಚಿಕ್ಕಣ್ಣ, ನಿಶ್ವಿಕಾ ನಾಯ್ಡು , ಚಂದನ್ ಶೆಟ್ಟಿ , ಅನುಶ್ರೀ , ಅಕುಲ್ ಸೇರಿ ಅನೇಕರ ಆಗಮನ. ಸಚಿವ ಸಂತೋಷ್ ಲಾಡ್ ಕೂಡ ಹಾಜರಿದ್ದು ತೀರ್ಥಹಳ್ಳಿ ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ.

Categories
ರಾಜಕೀಯ ರಾಜ್ಯ

ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ

ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ
– ವಯೋಸಹಜ ಅನಾರೋಗ್ಯ: ತೀವ್ರ ಹೃದಯಾಘಾತದಿಂದ ನಿಧನ
– ಮೈಸೂರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

NAMMUR EXPRESS NEWS
ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ (76) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ನಿಧನ ಹೊಂದಿದ್ದಾರೆ. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಕಳೆದ ವಾರ ಏರುಪೇರಾಗಿತ್ತು. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ‌ ಸೋಂಕು ಸೇರಿದಂತೆ ಇತರ ವಯೋಸಹಜ ಕಾಯಿಲೆಯಿಂದ ಏಪ್ರಿಲ್ 22ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.‌ ಸದ್ಯ ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ಪಾರ್ಥಿವ ಶರೀರ ರವಾನೆ ಮಾಡಲಾಗಿದ್ದು, ಇಂದು ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಪಾರ್ಥಿವ ಶರೀರವನ್ನು ಮಣಿಪಾಲ್ ಆಸ್ಪತ್ರೆಯಿಂದ ಮೈಸೂರಿಗೆ ಅಂಬ್ಯುಲೆನ್ಸ್ ಮೂಲಕ‌ ರವಾನೆ ಮಾಡಲಾಗಿದೆ. ಮೈಸೂರಿನ ವಸ್ತುಪ್ರದರ್ಶನ ಕೇಂದ್ರದಲ್ಲಿ ಸಾರ್ವಜನಿಕದ ದರ್ಶನಕ್ಕೆ ಇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಶ್ರೀನಿವಾಸ್ ಪ್ರಸಾದ್, ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು. ಚಾಮರಾಜನಗರ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಸಾದ್, ಕಳೆದ ಮಾರ್ಚ್ 17 ರಂದು ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಮಕ್ಕಳು: ಪ್ರತಿಮಾ ಪ್ರಸಾದ್, ಐ.ಆರ್​.ಎಸ್. ಅಧಿಕಾರಿ, ಪೂರ್ಣಿಮಾ ಪ್ರಸಾದ್, ಮಾಜಿ ಶಾಸಕ ಹರ್ಷವರ್ಧನ್ ಪತ್ನಿ, ಪೂನಂ ಪ್ರಸಾದ್, ಬಿಜೆಪಿ ಮುಖಂಡ ಡಾ.ಮೋಹನ್ ಪತ್ನಿ

ರಾಜ್ಯ ರಾಜಕೀಯದಲ್ಲಿ ಹಿರಿಯ ನಾಯಕ

– ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದ.
– ನಂಜನಗೂಡು ಕ್ಷೇತ್ರದಿಂದ 2 ಬಾರಿ ಶಾಸಕ.
– 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ
– 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು .
– 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ
– 2017ರಲ್ಲಿ ನಂಜನಗೂಡು ಉಪಚುನಾವಣೆಯಲ್ಲಿ ಸೋಲು
– 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.
– 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ

Categories
ಉಡುಪಿ ಕರಾವಳಿ ಯಶಸ್ಸಿನ ಕಥೆಗಳು ರಾಷ್ಟ್ರೀಯ ವಾರ್ತೆ

ಉಡುಪಿ ಹುಡುಗ ಈಗ ಅಮೇರಿಕಾದಲ್ಲಿ ಬಾಸ್!

ಉಡುಪಿ ಹುಡುಗ ಈಗ ಅಮೇರಿಕಾದಲ್ಲಿ ಬಾಸ್!
– ಅಮೆರಿಕದಲ್ಲಿ ಜನಿಸಿ ಸ್ಕ್ಯಾನ್ ಫರ್ಡ್ ವಿವಿಯಿಂದ ಎಂಎಸ್ ಪದವಿ ಪಡೆದಿರುವ ಕನ್ನಡಿಗ
– ಕರಾವಳಿ ಮೂಲದ ಕಾರ್ತಿಕ್ ಕಂಟೆಂಟ್‌ಫುಲ್ ಎಂಬ ಕಂಪೆನಿಯ ಸಿಇಒ

NAMMUR EXPRESS NEWS
ಉಡುಪಿ: ಕನ್ನಡದ ಮಣ್ಣು ಅನೇಕ ಸಾಧಕರನ್ನು ವಿಶ್ವಕ್ಕೆ ಕೊಟ್ಟಿದೆ. ಅದರಲ್ಲೂ ಕರಾವಳಿ ಪ್ರತಿಭೆಗಳ ಕಣಜ. ಇದೀಗ ಅಮೆರಿಕದ ಕಂಟೆಂಟ್‌ಫುಲ್ ಎಂಬ ಕಂಪೆನಿಯ ಸಿಇಒ ಆಗಿ ಉಡುಪಿ ಮೂಲದ ಕಾರ್ತಿಕ್ ರಾವ್ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಉಡುಪಿ ತಾಲೂಕು ಅಲೆವೂರು ಮೂಲದವರಾದ ಅಮೆರಿಕ ನಿವಾಸಿ ದಿವಂಗತ ಡಾ. ಸುಬ್ರಹ್ಮಣ್ಯ ರಾವ್ ಅವರ ಮಗನಾಗಿರುವ ಕಾರ್ತಿಕ್, ಉನ್ನತ ಹುದ್ದೆಗೇರಿರುವುದು ನಾಡಿನ ಹೆಮ್ಮೆಯಾಗಿದೆ. ಮೈಕ್ರೋಸಾಫ್ಟ್, ಆಲ್ಬಾ ಬೆಟ್, ನೊವಾರ್ಟಿಸ್, ಎಡೋಬ್, ಐಬಿಎಂ ಸಹಿತ 30ಕ್ಕೂ ಅಧಿಕ ಜಾಗತಿಕ ಕಂಪನಿಗಳಿಗೆ ಭಾರತೀಯರು ಯಶಸ್ವಿಸಿ ಇಒಗಳಾಗಿದ್ದು, ಈಗ ಉಡುಪಿ ಮೂಲದ ಕಾರ್ತಿಕ್ ರಾವ್ ಸಾಧಕರ ಸಾಲಿಗೆ ಸೇರಿದ್ದಾರೆ. ಅಮೆರಿಕದ ಕಂಟೆಂಟ್‌ಫುಲ್ (ಡೆನ್ವರ್ ಆಂಡ್ ಸಾನ್ ಫ್ರಾನ್ಸಿಸ್ಕೊ ಆಂಡ್ ಬರ್ಲಿನ್) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ತಿಕ್ ಅಧಿಕಾರ ವಹಿಸಿಕೊಂಡಿದ್ದಾರೆ. 2019ರಿಂದ ಸಿಇಒ ಆಗಿದ್ದ ಸ್ಟೀವ್ ಫ್ಲೋವನ್ ಬದಲಿಗೆ ಅವರು ಕಂಪನಿಯನ್ನು ಮುನ್ನಡೆಸಲಿದ್ದಾರೆ.

ಹಲವು ಪ್ರಮುಖ ಹುದ್ದೆ ಅಲಂಕರಿಸಿದ್ದ ಕಾರ್ತಿಕ್

ಉಡುಪಿ ತಾಲೂಕು ಅಲೆವೂರು ಮೂಲದ ಅಮೆರಿಕ ನಿವಾಸಿ ದಿ. ಡಾ. ಸುಬ್ರಹ್ಮಣ್ಯ ರಾವ್ ಅವರ ಪುತ್ರ ಕಾರ್ತಿಕ್ ರಾವ್ (46) ಅಮೆರಿಕದಲ್ಲಿ ಹುಟ್ಟಿ ಎಂಎಸ್ (ಸ್ಕ್ಯಾನ್ ಫರ್ಡ್ ವಿವಿಯಿಂದ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ) ಪೂರೈಸಿದ್ದಾರೆ. 20 ವರ್ಷಗಳಿಂದ ನಾಯಕತ್ವದ ಅನುಭವದೊಂದಿಗೆ ಕಂಪನಿಯ ಸ್ಥಾಪಕ, ನಿರ್ವಹಣಾ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಾರ್ತಿಕ್ ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಕ್ಲೋಡ್ ಮಾನಿಟರಿಂಗ್‌ಗೆ ಸಂಬಂಧಿಸಿದ ಸಿಗ್ನಲ್ ಎಫ್ ಎಕ್ಸ್ ಕಂಪನಿಯನ್ನು ಇತ್ತೀಚೆಗೆ ಸ್ಪ್ಲಂಕ್ ಕಂಪನಿಯು 1.05 ಬಿಲಿಯನ್ ಡಾಲರ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿದೆ. ವಿಎಂವೇರ್ ಸಂಸ್ಥೆಯ ಪ್ರೊಡಕ್ಟ್ ಮ್ಯಾನೇಜ್‌ಮೆಂಟ್ ಮತ್ತು ವರ್ಲ್ಡ್ ವೈಡ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾಗಿದ್ದ ಕಾರ್ತಿಕ್, ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಪ್ಪ, ಅಜ್ಜನೂ ಪ್ರತಿಭಾವಂತರು!

ತಂದೆ, ಉಡುಪಿ ಅಲೆವೂರಿನ ದಿವಂಗತ ಡಾ. ಎಲ್. ಸುಬ್ರಹ್ಮಣ್ಯ ರಾವ್ ಚೆನ್ನೈನ ಸ್ಪ್ಯಾನ್ಸಿ ಮೆಡಿಕಲ್ ಕಾಲೇಜಿನಿಂದ ಚಿನ್ನದ ಪದಕ ಪಡೆದಿದ್ದು, ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿದ್ದರು. ತಾಯಿ ರಜಿ ರಾವ್ ಹಿರಿಯ ಚಲನಚಿತ್ರ ನಿರ್ದೇಶಕ ಬಿ. ವಿಠಲ ಆಚಾರ್ಯರ ಪುತ್ರಿ. ಅಜ್ಜ ದಿವಂಗತ ಜಿ. ಲಕ್ಷ್ಮೀನಾರಾಯಣ್, ಇಂಡಿಯನ್ ಬ್ಯಾಂಕ್ ಚೇರ್ ಮೆನ್ ಮತ್ತು ಎಂಡಿಯಾಗಿದ್ದರು.

Categories
ತೀರ್ಥಹಳ್ಳಿ ರಾಜಕೀಯ

ಗ್ಯಾರಂಟಿ ಪದವನ್ನೇ ಕದ್ದ ಬಿಜೆಪಿ!

ಗ್ಯಾರಂಟಿ ಪದವನ್ನೇ ಕದ್ದ ಬಿಜೆಪಿ!
– ಮೋದಿ ಅವರೇ ನೀವು ಗ್ಯಾರೆಂಟಿ ಪದವನ್ನು ಕದ್ದಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಏನೂ ಗ್ಯಾರಂಟಿ ಇದೆ: ಮಂಜುನಾಥ್ ಭಂಡಾರಿ
– ಗೀತಾ ಶಿವರಾಜ್ ಕುಮಾರ್ ಗೆಲುವು ಗ್ಯಾರಂಟಿ

NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್ ಬಡವರ ಪಕ್ಷ. ನಾವು ಹೇಳಿದ ಹಾಗೆ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತಂದು ಜನರ ಮನಸು ಗೆದ್ದಿದ್ದೇವೆ. ಮೋದಿ ಅವರೇ ನೀವು ಗ್ಯಾರೆಂಟಿ ಪದವನ್ನು ಕದ್ದಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಏನೂ ಗ್ಯಾರಂಟಿ ಇದೆ. ಭಾವನೆಗಳನ್ನು ಕೆರಳಿಸಿ ಚುನಾವಣೆ ಮಾಡುವುದು ಬಿಜೆಪಿ ಅಜೆಂಡಾ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಬಿಟ್ಟು ಭಾವನೆ ಕೆರಳಿಸಿ ಚುನಾವಣೆ ಮಾಡಲಾಗುತ್ತಿದೆ. ಇಲೆಕ್ಟ್ರಾನಿಕ್ ಬಾಂಡ್ ಮೂಲಕ ದೇಶದ ದೊಡ್ಡ ಭ್ರಷ್ಟಾಚಾರ ನಡೆಡಿದೆ. ಸಾರ್ವಧಿಕಾರದತ್ತ ದೇಶ ಹೋಗುತ್ತಿದೆ. 1947ರ ಹಿಂದಿನ ದಿನಗಳತ್ತ ನಾವು ಹೋಗುತ್ತಿದ್ದೇವೆ. ಎಲ್ಲಾ ರಾಜ್ಯಗಳಲ್ಲಿ ಪ್ರಜಾಪ್ರಭುತ್ವ ಕೆಡವಿದ್ದೀರಿ. ಒಂದೇ ದೇಶ ಒಂದೇ ಚುನಾವಣೆ ಮೂಲಕ ಒಬ್ಬರೇ ಸಾರ್ವಧಿಕಾರಿ ಧೋರಣೆ ಮಾಡುತ್ತಿದೆ.
ಬಿಜೆಪಿಯಲ್ಲಿ ಭ್ರಷ್ಟಾಚಾರ ಇಲ್ವಾ? ಇವರ ನಾಯಕರ ಬಂಡವಾಳ ಏನಿಲ್ವಾ?, ಭ್ರಷ್ಟಾಚಾರ ಆರೋಪ ಮಾಡಿದವರು ನಿಮ್ಮ ಪಕ್ಷದಲ್ಲಿದ್ದಾರೆ. ಹೆದರಿಸಿ, ದಾಳಿ ಮಾಡಿ ಈಗ ಎಲ್ಲಾ ನಾಯಕರನ್ನು ಸೇರಿಸಿಕೊಳ್ಳುತ್ತೀರಿ.ನಿಮಗೆ ಭಯ ಇಲ್ಲದಿದ್ದರೆ ಜೆಡಿಎಸ್ ಏಕೆ ಸೇರಿಸಿಕೊಂಡಿದ್ದೀರಿ. 18 ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಿದೆ. ಗ್ಯಾರಂಟಿ ಯೋಜನೆಗಳು ಬಡವರು, ಸಾಮಾನ್ಯ ಜನರ ಬದುಕನ್ನು ಸುಧಾರಿಸಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಡಾ. ಆರ್. ಎಂ. ಮಂಜುನಾಥ ಗೌಡ, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಗೀತಾ ರಮೇಶ್, ಹಾರೋಗೋಳಿಗೆ ಪದ್ಮನಾಭ, ಡಾ. ಸುಂದರೇಶ್, ಅಮರನಾಥ ಶೆಟ್ಟಿ, ರತ್ನಾಕರ್ ಶೆಟ್ಟಿ, ಶಬನಮ್, ಮಂಜುಳಾ ನಾಗೇಂದ್ರ, ಅಸಾದಿ, ಉದಯ್ ಕುಮಾರ್ ಇತರರು ಇದ್ದರು.

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ

ಶಿವಮೊಗ್ಗದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ. ರಾಜ್ಯದಲ್ಲಿ ಗ್ಯಾರಂಟಿ ಪ್ರಯೋಜನ ಆಗಿದೆ. ಈಗ ಎಲ್ಲೆಡೆ ಗ್ಯಾರಂಟಿ ಬಂದಿದೆ. ನಮಗೆ ಅನುಕೂಲ ಆಗಿದೆ. ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂದರು.

ಯಾರಿಂದಲೂ ಹಿಂದುತ್ವ ಕಲಿಯಬೇಕಿಲ್ಲ..

ಹಿಂದುತ್ವ ಬಿಜೆಪಿಯಿಂದ ಅಥವಾ ಯಾವುದೊ ಪಕ್ಷದಿಂದ ಕಲಿಯಬೇಕಿಲ್ಲ. ನಮ್ಮ ತಂದೆ ತಾಯಂದಿರು ಕಲಿಸಿದ್ದಾರೆ. ಎಲ್ಲಾ ಜಾತಿ ಧರ್ಮ ಜೊತೆ ಮಾನವೀಯತೆಯಡಿ ಬದುಕಬೇಕು ಎಂದು ಮಂಜುನಾಥ್ ಭಂಡಾರಿ ಹೇಳಿದರು. ನಮ್ಮ ಜೀವನ ಪದ್ಧತಿ ಹಿಂದುತ್ವ. ರಾಷ್ಟ್ರ ಪ್ರೇಮ ಭಾಷಣದಿಂದ ಕಲಿಯಬೇಕಿಲ್ಲ. ಬಡವರನ್ನು ಗಲಾಟೆ ಮಾಡಲು ಕಳುಹಿಸಿ ಅವರ ಬದುಕನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ಉದ್ಯೋಗ ಬದುಕು ಕೊಡುತ್ತದೆ. ಬಿಜೆಪಿ ಹಿಂದುತ್ವದಲ್ಲಿ ಯುವ ಜನತೆಯ ಬದುಕು ಹಾಳಾಗುತ್ತದೆ ಎಂದರು.

ಕುಮಾರ್ ಬಂಗಾರಪ್ಪ ಜ್ಯೋತಿಷಿ ಆಗಿದ್ದು ಯಾವಾಗ?

ಶಿವಮೊಗ್ಗ ಅಭ್ಯರ್ಥಿ ವ್ಯಕ್ತಿಗತ ಚುನಾವಣೆ ಅಲ್ಲ. ನನಗೂ ನಾನು ಚುನಾವಣೆಗೆ ನಿಂತಾಗ ಕಾಂಗ್ರೆಸ್ ಲಕ್ಷ ಲಕ್ಷ ಜನ ಮತದಾನ ಮಾಡಿದ್ದಾರೆ. ಯಾವುದೇ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.ಕುಮಾರ್ ಬಂಗಾರಪ್ಪ ಜ್ಯೋತಿಷಿ ಆಗಿದ್ದು ಯಾವಾಗ? ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.

ಹಾಸನ ಪೆನ್ ಡ್ರೈವ್ ಸದ್ದು!

2014ರವರೆಗೆ ಕಾಂಗ್ರೆಸ್ ಸರ್ಕಾರ ಇರುವಾಗ ದೇಶದಲ್ಲಿ ನೆಮ್ಮದಿ ಇತ್ತು. ಬಿಜೆಪಿಯವರು ಭಾವನಾತ್ಮಕ ಹೇಳಿಕೆ ಸೃಷ್ಟಿಸಿ ರಾಜಕಾರಣ ಮಾಡುವ ಸಣ್ಣತನದವರು. ಭಾವನಾತ್ಮಕವಾಗಿ ಹೇಳಿ ಯುವಕರನ್ನು ರೊಚ್ಚಿಗೆ ತಳ್ಳಿ ಬಿಜೆಪಿ ಮಾಡುತ್ತಿದೆ. 10 ವರ್ಷ ದೇಶದಲ್ಲಿ ಏನು ಮಾಡಿದ್ದೀರಿ. 2014ರಿಂದ 2024ರಲ್ಲಿ ಏನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಹಲವಾರು ಯುದ್ಧ ಗೆದ್ದಿದ್ದೇವೆ. ಕಾಂಗ್ರೆಸ್ ಬದುಕು ಕಟ್ಟುವ ಹೇಳಿಕೆ ನೀಡುತ್ತಿದೆ. ಜನತಾ ಪಾರ್ಟಿಯದ್ದು ಅನೇಕ ಹಿಡನ್ ಅಜೆಂಡಾ ಇದೆ ಎಂದರು. ಇದೇ ವೇಳೆ ಅವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.

Categories
ತೀರ್ಥಹಳ್ಳಿ ಮಲ್ನಾಡ್ ರಾಜ್ಯ ಶಿವಮೊಗ್ಗ ಹೊಸನಗರ

ಚುನಾವಣಾ ಬಹಿಷ್ಕಾರ ಮಾಡಿದ ಮಾಗಲು ಗ್ರಾಮದ ಜನತೆ!

ಚುನಾವಣಾ ಬಹಿಷ್ಕಾರ ಮಾಡಿದ ಮಾಗಲು ಗ್ರಾಮದ ಜನತೆ!
– ವರಾಹಿ ಹಿನ್ನೀರಿನ ಗ್ರಾಮಕ್ಕೆ ರಸ್ತೆ ಇಲ್ಲ..ಮೂಲಭೂತ ಸೌಲಭ್ಯ ಇಲ್ಲವೇ ಇಲ್ಲ
– ಪ್ರಧಾನಿ ಮೋದಿ ಪತ್ರಕ್ಕೂ ಬೆಲೆ ಕೊಡದ ಆಡಳಿತ?!
– ರಸ್ತೆ ಇಲ್ಲದೆ ಮಳೆಗಾಲದಲ್ಲಿ ಜೀವ ಭಯ!

ವಿಶೇಷ ವರದಿ
NAMMUR EXPRESS NEWS
ಹೊಸನಗರ: ಮೂಲ ಭೂತ ಸೌಲಭ್ಯದಿಂದ ವಂಚಿತರಾದ ಗ್ರಾಮಸ್ತರು ಈಗ ಮುಂಬರುವ ಲೋಕ ಸಭಾ ಚುನಾವಣೆ ಬಹಿಷ್ಕಾರಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಮಾಗಲು ಗ್ರಾಮದ ಜನ ಮುಂದಾಗಿದ್ದಾರೆ.
ಇಡೀ ರಾಜ್ಯಕ್ಕೆ ಬೆಳಕು ಕೊಡಲು ತಮ್ಮ ಬದುಕನ್ನೇ ಕಳೆದುಕೊಂಡ ವರಾಹಿ ಹಿನ್ನೀರಿನಲ್ಲಿ ಬರುವ ಗ್ರಾಮ ಇದಾಗಿದ್ದು ಸುಮಾರು 20 ಕುಟುಂಬಗಳು ವಾಸಿಸುತ್ತಿವೆ, ಆದರೆ ಈ ಕುಟುಂಬಗಳ ಪರಿಸ್ಥಿತಿ ತೀರಾ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯವಿಲ್ಲದೆ ಈಗಗಾಗಲೆ 4 ಕುಟುಂಬಗಳು ವಲಸೆ ಹೋಗಿವೆ. ಸುಮಾರು 50 ವರ್ಷದಿಂದ ರಸ್ತೆಗಾಗಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಜನ ಇದೀಗ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಬ್ಯಾನರ್ ಹಾಕಿ ಜಿಲ್ಲಾ ಮತ್ತು ತಾಲೂಕು ಆಡಳಿತವನ್ನು ಎಚ್ಚರಿಸಿದ್ದಾರೆ.

ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ!

ಮಳೆಗಾಲದ ಸನ್ನಿವೇಶದಲ್ಲಿ ಯಾವುದೇ ವಾಹನಗಳು ಬರಲಾಗದ ಪರಿಸ್ಥಿತಿ ಊರಿನದ್ದು,ಕಳೆದ 50 ವರ್ಷಗಳಲ್ಲಿ ಆಶ್ವಾಸನೆಗಳಿಂದ ಜನರಿಂದ ಮತವನ್ನು ಕೇಳಿರುವುದು ಬಿಟ್ಟರೆ ,ಹೇಳಿ ಕೊಳ್ಳುವುದಕ್ಕೂ ಯಾವುದೇ ಅಭಿವೃದ್ಧಿ ಆಗಿಲ್ಲ. ವಯಸ್ಕರು ಅಸ್ಪತೆಗೆ ಹೋಗಬೇಕಾದರೆ ಅಥವಾ ಮಕ್ಕಳು ಶಾಲೆಗಳಿಗೆ ಹೋಗವರಿಗೆ ತುಂಬಾ ಕಷ್ಟದ ಪರಿಸ್ಥಿತಿ ಈ ಊರಿನದ್ದು, ಈ ಸಮಸ್ಯೆಗಳನ್ನು ಪ್ರಧಾಮಂತ್ರಿವರೆಗೂ ಪತ್ರ ಬರೆದು ಅವರ ಗಮನಕ್ಕೆ ತಂದಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸ್ಥಳೀಯ ಎಂಜಿನಿಯರ್ ( ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸಾಗರ) ಇವರುಗಳು ನಕಲಿ ಎಸ್ತಿಮೇಷನ್ ಸೃಷ್ಟಿಸಿ ಅನಾವಶ್ಯಕವಾಗಿ 2 ಕೋಟಿ ಎಸ್ತೀಮೇಷನ್ ತೋರಿಸಿರುತ್ತಾರೆ. ಇದೆ ಎಂಜಿನಿಯರ್ ಸ್ಥಳ ಪರಿಶೀಲನೆಗೆ ಬಾರದೆ ಗ್ರಾಮಸ್ಥರ ಗಮನಕ್ಕೂ ತರದೆ ಮೋದಿ ಅವರ ಪತ್ರಕ್ಕೆ ಫೇಕ್ ಎಸ್ಟಿಮೇಷನ್ ನೀಡಿರುತ್ತಾರೆ ಎಂದು ಗ್ರಾಮಸ್ತರು ಆರೋಪಿಸಿದ್ದಾರೆ. ಆದ್ದರಿಂದ ಈ ಬಾರಿ ಆಶ್ವಾಸನೆ ಗಳಿಗೆ ಬೇಸತ್ತು ಮಾಗಲು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಓಡಾಡಲು ಜೀವ ಭಯ!

ರಾಜಕೀಯ ಪ್ರಮುಖರು ಮತ ಕೇಳುವುದಕ್ಕೆ ಬರುವಾದರೆ ದಯವಿಟ್ಟು ಬರಲೇಬೇಡಿ…ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಯೊಂದಿಗೆ ಬನ್ನಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಈ ಗ್ರಾಮಕ್ಕೆ ಸುಮಾರು 2.5 ಕಿಮೀ ರಸ್ತೆಯ ಅವಶ್ಯಕತೆ ಇದೆ, ಪ್ರತಿವರ್ಷ ಗ್ರಾಮಸ್ಥರೇ ಸೇರಿ ರಸ್ತೆಗೆ ಮಣ್ಣು ತುಂಬಿಸಿ ರಸ್ತೆ ಮಾಡಿಕೊಂಡರು ಸುರಿಯುವ ಮಳೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಬರಿ ಕಲ್ಲುಗಳು ರಸ್ತೆಯ ಮೇಲೆ ಉಳಿಯುತ್ತದೆ, ಆ ರಸ್ತೆಯಲ್ಲಿ ವಾಹನವಿರಲಿ ಕಾಲ್ನಡಿಗೆಯಲ್ಲಿ ಕೂಡ ಚಲಿಸಲು ಈ ರಸ್ತೆ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಸಂಪೂರ್ಣ ರಸ್ತೆ ಜಖಂಗೊಂಡು ವಾಹನಗಳು ಯಾವುದು ಬರುವುದಿಲ್ಲ , ಈ ಎಲ್ಲಾ ವಿಷಯಗಳು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರಿಗೂ ತಿಳಿದಿದ್ದರೂ ಅದರಿಂದ ಯಾವುದೇ ಉಪಯೋಗಗಳು ಆಗಿಲ್ಲ. ಆದ್ದರಿಂದ ಇಷ್ಟು ವರ್ಷಗಳು ಮತ ನೀಡಿಯೂ ಕೂಡ ಯಾವುದೇ ಮೂಲಭೂತ ಸೌಕರ್ಯಗಳು ಸಿಕ್ಕಿರುವುದಿಲ್ಲ. ಅದಕ್ಕಾಗಿ ಮಾಗಲಿನ 43 ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುತ್ತಾರೆ.

ಜವಾಬ್ದಾರಿ ಮರೆಯಿತೇ ಕೆಪಿಸಿ?

ವಿಪರ್ಯಾಸವೆಂದರೆ ವರಾಹಿ ಹಿನ್ನೀರಿಗೆ ಡ್ಯಾಂ ನಿರ್ಮಾಣಕ್ಕೆ ಕಲ್ಲನ್ನು ಇದೇ ಮಾಗಲಿನಿಂದ ಸಾಗಿಸಿಕೊಂಡಿದ್ದಾರೆ. ಆದ್ರೆ ಅದೇ ಕೆಪಿಸಿ ಅವರ ಕಡೆಯಿಂದಲೂ ನಮಗೆ ರಸ್ತೆ ಮಾಡಿಕೊಡದಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ…ಹಲವು ಬಾರಿ KPC ಎಂಜಿನಿಯರ ಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಆದ್ದರಿಂದ ಎಲ್ಲಾ ಗ್ರಾಮಸ್ಥರು ಬೇಸತ್ತು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

Categories
ತೀರ್ಥಹಳ್ಳಿ

ಜೆಡಿಎಸ್ -ಬಿಜೆಪಿ ದೋಸ್ತಿ ದೋಸ್ತಿ!

ಜೆಡಿಎಸ್ -ಬಿಜೆಪಿ ದೋಸ್ತಿ ದೋಸ್ತಿ!
– ಕುಮಾರಸ್ವಾಮಿ ಬರ್ತಾರೆ, ಎಲ್ಲರೂ ಬನ್ನಿ: ಕುಣಜೆ
– ತೀರ್ಥಹಳ್ಳಿ ತಾಲೂಕಿನಲ್ಲಿ 50 ಸಾವಿರಕ್ಕೂ ಹೆಚ್ಚು ಲೀಡ್: ಜ್ಞಾನೇಂದ್ರ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಂಘಟನೆ ಅತ್ಯುತ್ತಮ ಕೆಲಸ ಮಾಡುತ್ತಿದೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಸೋಮವಾರ ಸೋಮವಾರ ಕೋಣಂದೂರಿಗೆ ಬರಲಿದ್ದು, ಭಾರೀ ಸಿದ್ಧತೆ ನಡೆದಿವೆ ತೀರ್ಥಹಳ್ಳಿ ಚುನಾವಣಾ ಕಚೇರಿಯಲ್ಲಿ ತೀರ್ಥಹಳ್ಳಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಕುಣಜೆ ಕಿರಣ್ ಪ್ರಭಾಕರ್ ಮತ್ತು ಬಿಜೆಪಿ ಪಕ್ಷದ ಶಾಸಕರಾದ ಆರಗ ಜ್ಞಾನೇಂದ್ರ, ಅಧ್ಯಕ್ಷರಾದ ಹೆದ್ದೂರ್ ನವೀನ್ ಸೇರಿ ಅನೇಕ ಗಣ್ಯರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಕುಣಜೆ ಕಿರಣ್ ಪ್ರಭಾಕರ್, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸೋಮವಾರದಂದು ಕೋಣಂದೂರಿನಲ್ಲಿ ಮಾಜಿ ಮುಖ್ಯಮಂತ್ರಿ, ಕುಮಾರಸ್ವಾಮಿ,ಬಿಜೆಪಿ ಲೋಕಸಭೆ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ . ಬಿಜೆಪಿ ಮತ್ತು ಜೆಡಿಎಸ್ ಅಭಿಮಾನಿಗಳು ಮತ್ತುಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.

ನಮ್ಮದೇ ಗೆಲುವು ಎಂದ ಜ್ಞಾನೇಂದ್ರ

ಶಾಸಕ ಅರಗ ಜ್ಞಾನೇಂದ್ರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಇಡೀ ಜಿಲ್ಲೆಯಲ್ಲಿ ಬಿಜೆಪಿಯ ಪರವಾದ ವಾತಾವರಣವಿದೆ.. ಪ್ರತಿಯೊಂದು ಬೂತಿನಲ್ಲೂ ಬಿಜೆಪಿಯ ಕಾರ್ಯಕರ್ತರು ಅತ್ಯಂತ ಉತ್ಸಾಹದಾಯಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಗೆಲ್ಲುತ್ತೇವೆ, ಕಾರಣ ಬಿವೈ ರಾಘವೇಂದ್ರರ ಕಾರ್ಯವೈಕರಿ ಮತ್ತು ಅಭಿವೃದ್ಧಿ ಬಿಜೆಪಿ ಗೆಲ್ಲುವುದರಲ್ಲಿ ಎರಡು ಮಾತಿಲ್ಲ ಎಂದರು. ಈ ಬಾರಿ ಪಕ್ಷ ಮೇರಿ ಜಾತಿಗಳನ್ನು ಮೀರಿ ಬಿ ವೈ ರಾಘವೇಂದ್ರರವರನ್ನು ಜನರು ಬೆಂಬಲಿವಿಸುವುದು ಖಚಿತವಾಗಿದೆ ಎಂದರು.

ಜೆಡಿಎಸ್ಸಿನೊಂದಿಗೆ ಹೊಂದಾಣಿಕೆ ನಮಗೆ ಆನೆ ಬಲ ಬಂದಂತಾಗಿದೆ. ಶಿವಮೊಗ್ಗದಲ್ಲಿ ಜಾತ್ಯಾತೀತ ಜನತಾದಳಕ್ಕೆ ಬಾರಿ ದೊಡ್ಡ ನೆಲೆ ಇದೆ. ಆದಕಾರಣ ಈಗಾಗಲೇ ಜೆಡಿಎಸ್ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ ಒಟ್ಟಿಗೆ ಕೆಲಸ ಮಾಡಿ ಬಿವೈ ರಾಘವೇಂದ್ರರ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದರು. ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮತ ಲೀಡ್ ಬರಲಿದೆ, ಅಂತ ಒಂದು ವಾತಾವರಣ ಸೃಷ್ಟಿಯಾಗಿದೆ

ಕಾಂಗ್ರೆಸಿನ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿಗೆ ಸರಿಸಮನಾಗಿ ಇಲ್ಲ ಅವರು ನಮ್ಮ ಹತ್ತಿರನೂ ಬರೋಲ್ಲ.. ಹಾಗಾಗಿ ಯಾವ ಗ್ಯಾರಂಟಿ ಯೋಜನೆಗಳು ಈ ಬಾರಿ ಪ್ರಯೋಜನ ಕೊಡಲ್ಲ ಎಂದರು. ರಾಷ್ಟ್ರ ಸದೃಢವಾಗಬೇಕು ರಾಷ್ಟ್ರ ಬಲವಾಗಬೇಕು, ಈ ಕಾರಣಕ್ಕಾಗಿ ಮೋದಿಯ 10 ವರ್ಷ ಆಡಳಿತ ಜಗತ್ತಿನಲ್ಲಿ ಈ ರಾಷ್ಟ್ರವನ್ನು ಅತ್ಯಂತ ಎತ್ತರಕ್ಕೆ ಏರಿಸಿದೆ. ಹಾಗಾಗಿ ಧರ್ಮ ಜಾತಿಯನ್ನು ಎಲ್ಲವನ್ನು ಮೀರಿ ಈ ರಾಷ್ಟ್ರದ ದೃಷ್ಟಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ದೃಷ್ಟಿಯಿಂದ ತೀರ್ಥಹಳ್ಳಿ ತಾಲೂಕು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ವೋಟ್ ಬರುವ ಸಾಧ್ಯತೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷ ನವೀನ್ ಹೆದ್ದೂರು, ಬಾಳೆಬೈಲು ರಾಘವೇಂದ್ರ, ಮೇದೊಳಿಗೆ ರಾಮಸ್ವಾಮಿ, ಸಂದೇಶ್ ಜವಳಿ ಹಾಗೂ ಬಿಜೆಪಿಯ ಪ್ರಮುಖರು ಮತ್ತು ಜೆಡಿಎಸ್ ಪ್ರಮುಖರು ಇದ್ದರು.

Categories
ರಾಜ್ಯ

ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್: ವಿಶೇಷ ತನಿಖಾ ತಂಡ ರಚಿಸಿದ ಸರ್ಕಾರ!

ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್: ವಿಶೇಷ ತನಿಖಾ ತಂಡ ರಚಿಸಿದ ಸರ್ಕಾರ!
– ಸಿದ್ದರಾಮಯ್ಯ ಹೇಳಿದ್ದೇನು?
– ರಾಜ್ಯದ ಮೂಲೆ ಮೂಲೆಯಲ್ಲಿ ಹಸಿಬಿಸಿ ಚರ್ಚೆ!

NAMMUR EXPRESS NEWS
ಹಾಸನ/ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಏನಿದು ಪ್ರಕರಣ?

ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳು ಭಾರೀ ವೈರಲ್ ಆಗಿದ್ದವು. ಚುನಾವಣೆ ಮುನ್ನ ಕೆಲವೆಡೆ ಪ್ರಜ್ವಲ್ ಜತೆ ಅನೇಕ ಮಹಿಳೆಯರ ವಿಡಿಯೋ ವೈರಲ್ ಆಗಿತ್ತು. ಆದರೆ ಡೀಪ್ ಫೇಕ್ ಮಾಡಿ ಅವಹೇಳನ ಮಾಡಲಾಗಿದೆ ಎಂದು ಪ್ರಜ್ವಲ್ ರೇವಣ್ಣ ಪರವಾಗಿ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ರಾಜ್ಯದಲ್ಲಿ ಈ ಬಗ್ಗೆ ಹಸಿಬಿಸಿ ಚರ್ಚೆ ಕಾವು ಪಡೆದಿದೆ.

Categories
ಕರಾವಳಿ ಕುಂದಾಪುರ

ಕುಂದಾಪುರದಲ್ಲಿ ಭೀಕರ ಅಪಘಾತಕ್ಕೆ ಯುವತಿ ಬಲಿ!

ಕುಂದಾಪುರದಲ್ಲಿ ಭೀಕರ ಅಪಘಾತಕ್ಕೆ ಯುವತಿ ಬಲಿ!
– ಮರಕ್ಕೆ ಡಿಕ್ಕಿಯಾದ ಇನ್ನೋವಾ ಕಾರು: ಸಂಪೂರ್ಣ ಪುಡಿ ಪುಡಿ
– 4 ಜನರ ಸ್ಥಿತಿ ಗಂಭೀರ: ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ

ಕುಂದಾಪುರ ವರದಿ: ಗಣೇಶ್
NAMMUR EXPRESS NEWS
ಕುಂದಾಪುರ: ಕುಂದಾಪುರ ತಾಲೂಕು ಗುಡ್ಡೆಅಂಗಡಿ ರಾ.ಹೆ. ಕೊಯ್ಕಾಡಿ ತಿರುವಿನಲ್ಲಿ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

ಅಪಘಾತ ಹೇಗೆ?

ಅಪಘಾತದಲ್ಲಿ ಬೆಂಗಳೂರಿನ ಫೋನ್ ಪೇ ಖಾಸಗಿ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಇನ್ನೋವಾ ಕಾರಿನಲ್ಲಿ ಬೆಂಗಳೂರು ಮೂಲದ ಸ್ನೇಹಿತರಾದ ವಿಪ್ಪೇಶ್ (28), ಚೇತನ್ (28), ಐಶ್ವರ್ಯಾ (27), ಗಾಯಗಳಾಗಿದ್ದು, (26) ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವಾಸಕ್ಕೆ ಬಂದಾಗ ನಡೆಯಿತು ದುರಂತ!

ಎಲ್ಲರೂ ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಂದಾಗಿ ಮುರುಡೇಶ್ವರ, ಗೋಕರ್ಣದ ಕಡೆಗೆ ವೀಕೆಂಡ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದವರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಒಂದು ಬದಿ ಸಂಪೂರ್ಣ ಜಖಂಗೊಂಡಿತ್ತು. ಕಾರಿನ ಒಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆಯಲು ಸ್ಥಳೀಯರು ಹರ ಸಾಹಸಪಟ್ಟರು.

Categories
ಜಾತಕ

ನಿಮ್ಮ ರಾಶಿ ಭವಿಷ್ಯ ಹೇಗಿದೆ?

ನಿಮ್ಮ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಒಳಿತು? ಯಾವ ರಾಶಿಗೆ ಕೆಡುಕು?

NAMMUR EXPRESS NEWS
2024 ಏಪ್ರಿಲ್ 28ರ ರವಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

** ಮೇಷ ರಾಶಿ :
ಆತ್ಮೀಯರಿಂದ ವಿವಾದಗಳ ಸಂಬಂಧಿಸಿದ ಮಾಹಿತಿ ದೊರೆಯುತ್ತದೆ. ಕೈಗೆತ್ತಿಕೊಂಡ ಕೆಲಸ ವಿಳಂಬವಾದರೂ ನಿಧಾನಗತಿಯಲ್ಲಿ ಪೂರ್ಣಗೊಳಿಸುತ್ತೀರಿ. ಆರ್ಥಿಕ ಪರಿಸ್ಥಿತಿ ಕಳಪೆಯಾಗಿದ್ದರೂ ಅಗತ್ಯಕ್ಕೆ ಹಣ ದೊರೆಯುತ್ತದೆ. ವೃತ್ತಿ ಉದ್ಯೋಗಗಳಲ್ಲಿ ಚರ್ಚೆಗಳು ಯಶಸ್ವಿಯಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.

** ವೃಷಭ ರಾಶಿ :
ಇತರರೊಂದಿಗೆ ವಿವಾದ ಉಂಟಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ನಿಮ್ಮ ಮಾತಿಗೆ ಒಪ್ಪುವುದಿಲ್ಲ. ನಿಮ್ಮ ಮಕ್ಕಳ ಆರೋಗ್ಯವನ್ನು ನೋಡಿಕೊಳ್ಳಿ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಆರ್ಥಿಕ ನಷ್ಟದ ಸೂಚನೆಗಳಿವೆ.

** ಮಿಥುನ ರಾಶಿ :
ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ನೋವುಂಟು ಮಾಡುತ್ತವೆ. ತಂದೆಯ ವರ್ಗದ ಬಂಧುಗಳೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ಕೂ ಅಡೆತಡೆಗಳಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಮಿಶ್ರ ಫಲಿತಾಂಶಗಳಿರುತ್ತವೆ. ಉದ್ಯೋಗಿಗಳಿಗೆ ಗೊಂದಲದ ಪರಿಸ್ಥಿತಿಗಳಿರುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

** ಕರ್ಕ ರಾಶಿ :
ಹೊಸ ವಸ್ತುಗಳು ಮತ್ತು ಆಭರಣಗಳನ್ನು ಖರೀದಿಸುತ್ತೀರಿ ಎಲ್ಲಾ ಕಡೆಯಿಂದ ಲಾಭ ದೊರೆಯುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಧೈರ್ಯದಿಂದ ನಿರ್ಧಾರ ಕೈಗೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ವೃತ್ತಿ ವ್ಯವಹಾರ ಸುಗಮವಾಗಿ ಸಾಗುತ್ತವೆ. ಸಹೋದರರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ.

** ಸಿಂಹ ರಾಶಿ :
ಪ್ರಾರಂಭಿಸಿದ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ. ಆರ್ಥಿಕ ಪರಿಸ್ಥಿತಿ ಮತ್ತಷ್ಟು ನಿಧಾನವಾಗುತ್ತದೆ. ಮನೆಯ ಹೊರಗೆ ದೀರ್ಘಕಾಲದ ಸಮಸ್ಯೆಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಆಲೋಚನೆಗಳು ಕೂಡಿ ಬರುವುದಿಲ್ಲ. ಹಣಕಾಸಿನ ವಿಷಯಗಳಲ್ಲಿ ನಿಧಾನವಾಗಿ ವರ್ತಿಸುವುದು ಉತ್ತಮ.

** ಕನ್ಯಾ ರಾಶಿ :
ಖರ್ಚಿಗೆ ತಕ್ಕ ಆದಾಯ ದೊರೆಯುತ್ತದೆ. ಮನೆಯ ಹೊರಗೆ ಸಮಸ್ಯೆಗಳು ನಿಧಾನವಾಗಿ ಬಗೆಹರಿಯುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ನಷ್ಟಗಳು ನಿವಾರಣೆಯಾಗಿ ಲಾಭದ ಹಾದಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ಮಾತನಾಡುವಾಗ ಎಚ್ಚರದಿಂದಿರಿ. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ವೇಗಗೊಳ್ಳುತ್ತವೆ.

** ತುಲಾ ರಾಶಿ :
ಕೆಲವು ವ್ಯವಹಾರಗಳಲ್ಲಿ ಅನಿರೀಕ್ಷಿತ ತೊಂದರೆಗಳು ಉಂಟಾಗುತ್ತವೆ. ದೂರದ ದೇಶಕ್ಕೆ ಪ್ರಯಾಣಿಸಬೇಕಾಗುತ್ತದೆ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುತ್ತವೆ. ನಿರುದ್ಯೋಗಿಗಳಿಗೆ ನಿರಾಸೆ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಆತುರದಿಂದ ಇತರರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ ವ್ಯಾಪಾರಗಳು ನಿರೀಕ್ಷಿತ ಲಾಭದಾಯಕವಾಗಿರುವುದಿಲ್ಲ.

** ವೃಶ್ಚಿಕ ರಾಶಿ :
ಆದಾಯ ಉತ್ತಮವಾಗಿರುತ್ತದೆ. ಇತರರ ಸಹಾಯದಿಂದ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ. ಹಳೆ ಸಾಲಗಳನ್ನು ತೀರಿಸುತ್ತೀರಿ. ಮಕ್ಕಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ದೈಹಿಕ ಮತ್ತು ಮಾನಸಿಕ ಪ್ರಶಾಂತತೆ ದೊರೆಯುತ್ತದೆ. ವೃತ್ತಿಪರ ಉದ್ಯೋಗಳಲ್ಲಿ ಅಧಿಕಾರಿಗಳ ಬೆಂಬಲ ದೊರೆಯುತ್ತದೆ ವ್ಯಾಪಾರಗಳು ವಿಸ್ತರಿಸುತ್ತವೆ.

** ಧನುಸ್ಸು ರಾಶಿ :
ಬಂಧುಗಳೊಂದಿಗೆ ಆಸ್ತಿ ವಿವಾದಗಳು ಪರಿಹಾರದತ್ತ ಸಾಗುತ್ತವೆ. ಉದ್ಯೋಗಿಗಳಿಗೆ ಉನ್ನತ ಹುದ್ದೆಗಳು ದೊರೆಯುತ್ತವೆ. ಕೆಲವು ವ್ಯವಹಾರಗಳಲ್ಲಿ ಆತ್ಮಸ್ಥೈರ್ಯದಿಂದ ದೃಢ ನಿರ್ಧಾರಗಳನ್ನು ತೆಗೆದುಕೊಂಡು ಲಾಭ ಪಡೆಯುತ್ತೀರಿ. ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಬಾರದು. ಮನೆಯ ಹೊರಗೆ ಗೌರವ ಹೆಚ್ಚಾಗುತ್ತದೆ.

** ಮಕರ ರಾಶಿ :
ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಗೃಹ ನಿರ್ಮಾಣ ವಿಚಾರಗಳು ಕಾರ್ಯರೂಪಕ್ಕೆ ಬರುತ್ತವೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಮಕ್ಕಳ ವಿವಾಹ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಆರ್ಥಿಕ ವಾತಾವರಣ ಅನುಕೂಲಕರವಾಗಿರುತ್ತದೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಶುಭ ಸುದ್ದಿ ದೊರೆಯುತ್ತದೆ.

** ಕುಂಭ ರಾಶಿ :
ನಿರೀಕ್ಷಿತ ಸಮಯದಲ್ಲಿ ಸೌಲಭ್ಯಗಳು ಸಿಗದೆ ತೊಂದರೆ ಅನುಭವಿಸುವರು. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಹಣದ ವಿಷಯಗಳಲ್ಲಿ ಇತರರಿಗೆ ಮಾತು ನೀಡಿ ಕಷ್ಟಗಳನ್ನು ಎದುರಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಿರತೆಯ ಕೊರತೆಗಳು ಎದುರಾಗುತ್ತವೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚು ನೋವುಂಟು ಮಾಡುತ್ತವೆ.

** ಮೀನ ರಾಶಿ :
ಸಂಗಾತಿಯ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ಹೊಸ ವಾಹನ ಖರೀದಿಸಲಾಗುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಬಂಧು ಮಿತ್ರರ ಭೇಟಿ ಸಂತಸ ತರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ವರ್ತಿಸಿ ಮೆಚ್ಚುಗೆಯನ್ನು ಪಡೆಯುತ್ತೀರಿ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಶ್ರೀ ಕ್ಷೇತ್ರ ಜಯಪುರದಲ್ಲಿ 15ನೇ ವರ್ಷದ ವಾರ್ಷಿಕೋತ್ಸವ..!

ತೀರ್ಥಹಳ್ಳಿಯ ಶ್ರೀ ಕ್ಷೇತ್ರ ಜಯಪುರದಲ್ಲಿ 15ನೇ ವರ್ಷದ ವಾರ್ಷಿಕೋತ್ಸವ..!
– ಸುದರ್ಶನ್ ಉಡುಪರಿಂದ ನಾಗ ಸಂದರ್ಶನ
– ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನ ಸಂತರ್ಪಣೆ

NAMMUR EXPRESS NEWS
ತೀರ್ಥಹಳ್ಳಿ: ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾರ್ಶಿವಾದದೊಂದಿಗೆ ಮಹಾಸತಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಆದಿಶಕ್ತಿ ಮಹಾಸತಿ, ಅಣ್ಣಪ್ಪಪಂಜುರ್ಲಿ, ನಾಗ-ನಾಗಯಕ್ಷಿ ಪರಿಹಾರ ದೇವತೆಗಳ ದೇವಸ್ಥಾನ ಶ್ರೀ ಕ್ಷೇತ್ರ ಜಯಪುರ, ಗುಡ್ಡೆಕೊಪ್ಪ ಇಲ್ಲಿ 15 ನೇ ವರ್ಷದ ವಾರ್ಷಿಕೋತ್ಸವವನ್ನು ದಿನಾಂಕ 29-04-2024 ಸೋಮವಾರದಂದು ನಡೆಸಲಾಗುವುದು. ಬೆಳಗ್ಗೆ ಚಂಡಿಕಾಹೋಮ ಮತ್ತು ಸಂಜೆ ಪಂಚದುರ್ಗಾ ದೀಪ ನಮಸ್ಕಾರ ಪೂಜೆ ಹಾಗೂ ದಿನಾಂಕ 30-04-2024 ನೇ ಮಂಗಳವಾರದಂದು ಶ್ರೀ ಕ್ಷೇತ್ರ ಜಯಪುರದಲ್ಲಿ ಇರತಕ್ಕಂಹ ಸಪರಿವಾರ ನಾಗದೇವರ 15ನೇ ವರ್ಷದ ವರ್ಧಂತ್ಯೋವವನ್ನು ಮಾಡಲಾಗುವುದು.

ಆಪ್ರಯುಕ್ತ ಬೆಳಿಗ್ಗೆ ಗಂಟೆ 9-00 ರಿಂದ ಗಣಪತಿ ಪೂಜೆ ಮಾಸ್ತಿಗೆ ದುರ್ಗಾಹೋಮ, ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ನಾಗ-ನಾಗಯಕ್ಷಿಗೆ ಅಷ್ಟೋತರ ಪರಿಕಲಶ ಸಹಿತ ಪ್ರಧಾನ ಬ್ರಹ್ಮಕುಂಭ ಸ್ಥಾಪನಾ ಅದಿವಾಸಹೋಮ, ಬ್ರಹ್ಮ ಕಲಶಾಭಿಷೇಕ ಮಹಾಪೂಜೆ, ನಾಗ ಸಂದರ್ಶನ ಹಾಗೂ ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗವಿರುತ್ತದೆ. ಶ್ರೀಯುತ ಸುದರ್ಶನ್ ಉಡುಪ ಇವರಿಂದ ನಾಗ ಸಂದರ್ಶನ ಇರುತ್ತದೆ.

ಮಧ್ಯಾಹ್ನ 1-00 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ಇರುತ್ತದೆ. ಇದೇ ದಿನ ಸಂಜೆ ಸರ್ವಪ್ರಾಯಶ್ಚಿತ ಆಶ್ಲೇಷಬಲಿ, ಉದ್ಯಾಪನಹೋಮ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ಈ ಕಾರ್ಯಕ್ರಮದ ಆಚಾರ್ಯತ್ವವನ್ನು ಶ್ರೀ ಕ್ಷೇತ್ರ ಮಂದಾರ್ತಿಯ ಆರ್ಚಕರಾದ ಶ್ರೀ ಶ್ರೀ ವೇ। ಬ್ರ॥ ವೆಂಕಟೇಶ್ ಮಯ್ಯ ಇವರು ನಡೆಸಿಕೊಡುವವರು. ಇದೇ ದಿನ ರಾತ್ರಿ 8-30ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರ ಗೋಳಿಗರಡಿ ಸಾಸ್ತಾನ ಯಕ್ಷಗಾನ ಮೇಳದವರಿಂದ ದಶಾವತಾರ ಯಕ್ಷಗಾನ ಬಯಲಾಟ ಆಡಿ ತೋರಿಸಲಿರುವವರು.

ಈ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತನು-ಮನ-ಧನ ಸಹಕಾರದೊಂದಿಗೆ ಸಹಕರಿಸಿ ಶ್ರೀ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರ ಜಯಪುರ ಧರ್ಮದರ್ಶಿಗಳಾದ ಶ್ರೀ ರಾಜೇಂದ ಡಿ.ಎಸ್. ಹಾಗೂ ದೇವಸ್ಥಾನದ ಸಮಿತಿ ವಿನಂತಿಸಿಕೊಂಡಿದೆ.

ವಿಶೇಷ ಸೂಚನೆ:

ಸಾನಿಧ್ಯದಲ್ಲಿ ಪ್ರತಿ ಅಮವಾಸೆ ಹುಣ್ಣಿಮೆಯೆಂದು ದೇವರ ದರ್ಶನ ವಿದ್ದು ಹೇಳಿಕೆ ಕೇಳಿಕೆ ಇರುತ್ತದೆ. ಮತ್ತು ಎಲ್ಲಾ ದಿನಗಳಂದು ಪ್ರಶ್ನ, ಚಿಂತನೆ ಇರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ಶ್ರೀ ರಾಜೇಂದ್ರ ಜೈಪುರ : 6360337682