Categories
ಬೆಂಗಳೂರು ರಾಜ್ಯ

ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಬಂದ ತಕ್ಷಣ ಎಸ್‌ಐಟಿ ವಶಕ್ಕೆ?

ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಬಂದ ತಕ್ಷಣ ಎಸ್‌ಐಟಿ ವಶಕ್ಕೆ?
– ಮೇ 4ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ
– ಜರ್ಮನಿಯಲ್ಲಿರುವ ಹಾಸನ ಸಂಸದ

NAMMUR EXPRESS NEWS
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅತೀವ ಕೋಲಾಹಲ ಸೃಷ್ಟಿಸಿರುವ ಹಾಸನದ ಪೆನ್‌ಡ್ರೈವ್‌ ಪ್ರಕರಣದ ಅಶ್ಲೀಲ ವಿಡಿಯೋದಲ್ಲಿರುವ ಪ್ರಧಾನ ಆರೋಪಿ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮೇ 3ರಂದು ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಅವರು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿದ್ದಾರೆ. ಲುಪ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಮೇ 3ರ ಪ್ರಯಾಣಕ್ಕೆ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೇ 3 ಮಧ್ಯರಾತ್ರಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಅವರು ಆಗಮಿಸಬಹುದು. ಮೇ 4ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಅಥವಾ ಅವರು ವಿಮಾನದಿಂದ ಇಳಿದ ಕೂಡಲೇ ಅವರನ್ನು ವಿಶೇಷ ತನಿಖಾ ತಂಡ (SIT) ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಮೊದಲ ಹಂತದ ಮತದಾನದ ದಿನವೇ ಪ್ರಜ್ವಲ್‌ ಅವರು ದೇಶ ಬಿಟ್ಟು ತೆರಳಿದ್ದರು. ಬ್ಯುಸಿನೆಸ್‌ ವೀಸಾವನ್ನು ಅವರು ಹೊಂದಿದ್ದಾರೆ. ಟೂರಿಸ್ಟ್‌ ವೀಸಾದಲ್ಲಿ ಅವರು ಜರ್ಮನಿಗೆ ತೆರಳಿದ್ದು, ಇದರ ಅವಧಿ 90 ದಿನಗಳ ಕಾಲ ಚಾಲೂ ಇರುತ್ತದೆ. CRPC41A ಸೆಕ್ಷನ್‌ ಪ್ರಕಾರ, ಅವರು ನೋಟೀಸ್‌ಗೆ ಸ್ಪಂದಿಸಿ ಹಾಜರಾಗದೆ ಇದ್ದರೆ ಅವರನ್ನು ಬಂಧಿಸಬಹುದಾಗಿದೆ.

ಆದರೆ ಹಾಗೆ ಏಕಾಏಕಿ ಯಾರನ್ನೂ ಬಂಧಿಸಲು ಮುಂದಾಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಇಂದು ಬೆಳಗ್ಗೆ ಹೇಳಿದ್ದಾರೆ. “ಅದಕ್ಕೆ ಪುರಾವೆಗಳು, ದೂರು, ದೂರಿನಲ್ಲಿ ಏನು ಹೇಳಿರುತ್ತಾರೆ ಅನ್ನೋದು ಮುಖ್ಯ. ಯಾವ ಸೆಕ್ಷನ್ ಬರುತ್ತೆ, ಅದರಲ್ಲಿ ‌ಅರೆಸ್ಟ್ ಮಾಡಬಹುದಾ, ಬೇಲ್ ಕೇಸಾ, ನಾನ್ ಬೇಲ್ ಕೇಸಾ ಅಂತ ನೋಡಬೇಕು. ಅದಕ್ಕೆ 41A CRPC ಸೆಕ್ಷನ್ ಅಡಿ‌ ನೊಟೀಸ್ ಕೊಟ್ಟಿದ್ದಾರೆ. ಅವರು 24 ಗಂಟೆ ಒಳಗೆ ಒಂದು ಹಾಜರಾಗಬೇಕು. ಹಾಜರಾಗದೇ ಹೋದರೆ SITಯವರು ಮುಂದಿನ ಪ್ರಕ್ರಿಯೆ ಮಾಡ್ತಾರೆ” ಎಂದಿದ್ದಾರೆ.

ಪ್ರಜ್ವಲ್‌ ತನಿಖೆ ಮುಖ್ಯ!

ಸದ್ಯ ಪ್ರಜ್ವಲ್ ತನಿಖೆ ಎಸ್‌ಐಟಿಗೆ ತುಂಬಾ ಮುಖ್ಯವಾಗಿದೆ. ಎ1 ರೇವಣ್ಣ ಆಗಿದ್ದರೂ ಪ್ರಕರಣಗಳು ಹೊರಬಂದಿದ್ದು ಪ್ರಜ್ವಲ್ ರೇವಣ್ಣ ವಿಡೀಯೋಗಳಿಂದ ಆಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಸ್ಟೇಟ್‌ಮೆಂಟ್ ಇಲ್ಲಿ ಅಗತ್ಯವಿದೆ. ಮಾಜಿ ಸಚಿವ ಎಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇವರಿಬ್ಬರ ಹೊಳೆನರಸೀಪುರ ಮನೆಯ ಬಾಗಿಲಿಗೆ ಇಂದು ನೊಟೀಸ್ ಅನ್ನು ಎಸ್‌ಐಟಿ (SIT) ಟೀಂ ಅಂಟಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ತನಿಖೆಗೆ ಬೇಕು ಎಂದರೆ ಪ್ರಜ್ವಲ್ ಹಾಜರಾಗ್ತಾನೆ ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ಬಾರದಿದ್ದಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗಬಹುದು. ಆದರೆ ಈಗಾಗಲೇ ಎಸ್‌ಐಟಿ ವಿಚಾರಣೆ ನೋಟೀಸ್‌ ಜಾರಿ ಮಾಡಿದೆ.
ಇದಕ್ಕೆ ಉತ್ತರಿಸದೆ ತಲೆ ಮರೆಸಿಕೊಂಡರೆ ಆರೋಪಿಗೆ ಇಂಟರ್‌ಪೋಲ್ ಮುಖಾಂತರ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೊಟೀಸ್ ಜಾರಿ ಮಾಡುವ ಸಾಧ್ಯತೆಯೂ ಎಸ್‌ಐಟಿ ಮುಂದಿದೆ. ಈಗಾಗಲೇ ಡ್ರೈವರ್ ಕಾರ್ತಿಕ್‌ನನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿದೆ. ಹಾಗೂ ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿದೆ. ನಾಳೆ ಅಥವ ನಾಡಿದ್ದು CRPC 164 ಅಡಿಯಲ್ಲಿ ಸ್ಟೆಟ್ಮೆಂಟ್ ಪಡೆಯಲಿದೆ. ವಿಚಾರಣೆ ಬಳಿಕ ಕಾರ್ತೀಕ್ ಮೊಬೈಲ್ ಸೀಜ್ ಮಾಡಿ ಎಫ್ಎಸ್ಎಲ್‌ಗೆ ವಿಧಿವಿಜ್ಞಾನ ಪರಿಶೀಲನೆಗಾಗಿ ಕಳಿಸಲಾಗಿದೆ.

Categories
ರಾಜ್ಯ ಹವಾಮಾನ ಸುದ್ದಿ

ಇಂದು ಭಾರೀ ಮಳೆ ಸಾಧ್ಯತೆ..!

ಇಂದು ಭಾರೀ ಮಳೆ ಸಾಧ್ಯತೆ..!
– 5 ದಿನ ಬಿಸಿಲು ಕೂಡ ಹೆಚ್ಚಳ
– ಗರಿಷ್ಠ ತಾಪಮಾನ: ಜನರ ಪರದಾಟ!

NAMMUR EXPRESS NEWS
ಬೆಂಗಳೂರು: ರಾಜ್ಯದ ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ದಿನೇ ದಿನೇ ಬಿಸಿಲು ಹೆಚ್ಚುತಿದೆ. ರಾಜ್ಯಾದ್ಯಂತ ಮೇ 5ರವರೆಗೆ ಒಣ ಹವೆ ಇರುವ ಸಾಧ್ಯತೆ ಇದೆ. ಮೇ 6ರಂದು ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಮೇ 7ರಂದು ಕೂಡ ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮೇ 1 ರಿಂದ ಮೇ 4ರವರೆಗೆ ಬೀದ‌ರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ (ಬಯಲು ಪ್ರದೇಶ), ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು (ಬಯಲು ಪ್ರದೇಶ) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮೇ 4 ರವರೆಗೆ ಬಿಸಿ ಮತ್ತು ಆದ್ರ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಮುಂದಿನ 5 ದಿನಗಳವರೆಗೆ ಬಾಗಲಕೋಟೆ, ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇನ್ನು ಮುಂದಿನ 5 ದಿನಗಳವರೆಗೆ ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

Categories
ಕರಾವಳಿ

ಟಾಪ್ 4 ನ್ಯೂಸ್ ಕರಾವಳಿ

ಟಾಪ್ 4 ನ್ಯೂಸ್ ಕರಾವಳಿ
ಬಂಟ್ವಾಳ: ನಾಯಿ ಬಿಸ್ಕೆಟ್ ತಯಾರಿಸುವ ಕಂಪನಿಯಿಂದ ದುರ್ನಾತ ಬಿತಿ
– ಮಂಗಳೂರು: ಮದುವೆಗೆ ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ
– ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನ
– ವಿಟ್ಲ: ಬೈಕ್‌ಗೆ ಕಾರ್ ಡಿಕ್ಕಿ ಬೈಕ್ ಸವಾರನಿಗೆ ಗಾಯ

NAMMUR EXPRESS NEWS
ಬಂಟ್ವಾಳ: ಕೊಡ್ಮಾಣ್ ಶಾಲೆಯ ಅನತಿ ದೂರದಲ್ಲಿ ಮಾಂಸದ ತ್ಯಾಜ್ಯಗಳನ್ನು ತಂದು ನಾಯಿ ಬಿಸ್ಕೆಟ್ ತಯಾರಿಸುವ ಕಂಪನಿಯಿಂದ ದುರ್ನಾತ ಬೀರಿ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಇಒ ರಾಹುಲ್ ಕಾಂಬಳೆ ನೇತೃತ್ವದ ನಿಯೋಗ ಭೇಟಿ ನೀಡಿ ಕಂಪೆನಿಯನ್ನು ಮುಚ್ಚುವಂತೆ ಆದೇಶಿಸಿದರು.

– ಮಂಗಳೂರು: ಮದುವೆಗೆ ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ

ಮಂಗಳೂರು: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮದುವೆ ಬಂದಿದ್ದ ಸಂದರ್ಭದಲ್ಲಿ ಕಿರುಕುಳ, ಸಮಾರಂಭದಲ್ಲಿ ಲೈಂಗಿಕ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಯಸ್ಕರನ್ನು ಬಂಧಿಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.

– ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನ

ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ವಿರುದ್ದ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬ್ಯಾರೇಜ್ ಕಮ್ ಡ್ಯಾಂ ನ ಎದುರುಭಾಗದಿಂದ ಅಕ್ರಮವಾಗಿ ಮರಳು ತೆಗೆಯುವ ಉದ್ದೇಶದಿಂದ ನದಿಯಲ್ಲಿ ನಿಲ್ಲಿಸಲಾಗಿದ್ದ ಒಂದು ಟಿಪ್ಪರ್ ಹಾಗೂ ಹಿಟಾಚಿಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನದಿ ಭಾಗದಲ್ಲಿ ಸುಮಾರು 7 ಟಿಪ್ಪರ್ ಲಾರಿ ಲೋಡ್ ಗಳಷ್ಟು ಮರಳನ್ನು ರಾಶಿ ಹಾಕಿದ್ದು, ಮರಳನ್ನು ತೆಗೆಯಲು ಬಳಸಿದ ಹಾರೆ, ಫೈಬರ್ ಬುಟ್ಡಿಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ಅಬ್ದುಲ್ ಮುತಾಲಿಬ್ ಯಾನೆ ನಾವೂರ ಪುತ್ತಾ ಮತ್ತು ಇತರರ ವಿರುದ್ಧ ಕಲಂ 379 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

– ವಿಟ್ಲ: ಬೈಕ್‌ಗೆ ಕಾರ್ ಡಿಕ್ಕಿ ಬೈಕ್ ಸವಾರನಿಗೆ ಗಾಯ

ವಿಟ್ಲ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಪಲ್ಟಿಯಾಗಿ ಸವಾರ ಗಾಯಗೊಂಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಬೈಕ್ ಸವಾರ ಕೊಳ್ಳಾಡು ಗ್ರಾಮದ ಮಂಕುಡೆ ಶಾಲಾ ಬಳಿಯ ಕೆ.ಹರ್ಷವರ್ಧನ ರಾವ್ (58 ವ)ರವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಅಡುಗೆ ಕೆಲಸದ ನಿಮಿತ್ತ ತಾನು ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಕಬಕ ಕಡೆಗೆ ಹೊರಟು ಸಾಲೆತ್ತೂರು-ಕಬಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಬಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ವಿಟ್ಲ ಕಸಬ ಗ್ರಾಮದ ವಿಟ್ಲ ಜಂಕ್ಷನ್ ತಲುಪಿದಾಗ ಕಲ್ಲಡ್ಕ ಕಡೆಯಿಂದ ಉಕ್ಕುಡ ಕಡೆಗೆ ಬರುತ್ತಿದ್ದ ಕಾರನ್ನು ಅದರ ಚಾಲಕ ಶೇಖ್ ಸಮೀರ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಮೋಟಾರ್ ಸೈಕಲ್‌ಗೆ ಅಪಘಾತಪಡಿಸಿದ ಪರಿಣಾಮ, ತಾನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದದರಿಂದ ಎಡ ಕಾಲಿನ ಎರಡು ಬೆರಳಿಗೆ, ಎಡ ಮೊಣ ಕಾಲಿಗೆ, ಎಡ ಕೈಗೆ ಗುದ್ದಿದ ಹಾಗೂ ತರಚಿದ ರಕ್ತಗಾಯವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಾಯಾಳು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ರಸ್ತೆ ಪಕ್ಕದಲ್ಲಿ ಒಣಗಿದ ಮರ ಹುಷಾರ್!

ರಸ್ತೆ ಪಕ್ಕದಲ್ಲಿ ಒಣಗಿದ ಮರ ಹುಷಾರ್!
– ರಸ್ತೆಯಲ್ಲಿ ಓಡಾಡುವವರಿಗೆ ಪ್ರಾಣಪಾಯದ ಭಯ
ಗ್ರಾಪಂ, ಅರಣ್ಯ ಇಲಾಖೆ ನಿದ್ರೆ: ಸಾರ್ವಜನಿಕರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಹಾಗೂ ತೀರ್ಥಹಳ್ಳಿ ತಾಲೂಕಿನ ಹಲವು ಭಾಗಗಳಲ್ಲಿ ರಸ್ತೆ ಪಕ್ಕದಲ್ಲಿ ಒಣಗಿದ ಮರ ನಿಂತಿದೆ. ಈ ಮರಗಳು ಮಳೆ ಹಾಗೂ ಗಾಳಿಗೆ ಬಿದ್ದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಹಾಗೂ ರಸ್ತೆ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ರಸ್ತೆಯಲ್ಲಿ ಓಡಾಡುವ ಜನರು ಪ್ರಾಣಾಪಾಯದ ಭಯದಲ್ಲಿ ಓಡಾಡುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಗಳು ಗಮನವಹಿಸಿಲ್ಲ. ಈಗ ಎಲ್ಲೆಡೆ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ನಿತ್ಯ ನೂರಾರು ವಾಹನಗಳು ರಸ್ತೆಯಲ್ಲಿ ಓಡಾಡುತ್ತಿವೆ. ಬಸ್ ನಿಲ್ದಾಣ ಪಕ್ಕವೇ ಮರಗಳು ಒಣಗಿ ನಿಂತಿವೆ. ಆದರೂ ಈ ಬಗ್ಗೆ ಗಮನಿಸಿಲ್ಲ. ತೀರ್ಥಹಳ್ಳಿ ತಾಲೂಕಿನ ಹಲವೆಡೆ ಇಂತಹ ಒಣಗಿದ ಮರಗಳು ಕಾಣುತ್ತಿವೆ.

ದೇಮ್ಲಾಪುರದಲ್ಲಿ ಮರ ಬಿದ್ದು ಓರ್ವ ಸಾವು!

ಈಗಾಗಲೇ ಕಳೆದ ಕೆಲ ದಿನಗಳ ಹಿಂದೆ ದೇಮ್ಲಾಪುರದಲ್ಲಿ ಮರ ಬಿದ್ದು ಓರ್ವರು ಮೃತಪಟ್ಟಿದ್ದು, ಆಗುಂಬೆಯಲ್ಲಿ ಕೂಡ ಒಂದು ವಾಹನದ ಮೇಲೆ ಮರ ಬಿದ್ದು ವಾಹನ ಜಖಂಗೊಂಡು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆಗಳು ವರದಿಯಾಗಿದೆ. ಆದರೂ ಈ ಬಗ್ಗೆ ಅಧಿಕಾರಿಗಳು ಗಮನಿಸುತ್ತಿಲ್ಲ. ರಸ್ತೆಯ ಬದಿ ಅಪಾಯಕ್ಕೆ ಆಹ್ವಾನ ನೀಡಿದಂತಿರುವ ಮರಗಳು ಇದ್ದು, ಪದೇ ಪದೇ ಇಂತಹ ಘಟನೆಗಳು ನಡೆದಾಗ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಇದಕ್ಕೆ ಸಂಬಂಧಪಟ್ಟಂತೆ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದೊಂದು ದಿನ ಅನಾಹುತವನ್ನು ಎದುರಿಸಬೇಕಾಗುತ್ತದೆ. ಗಾಳಿ ಮಳೆಗೆ ಮರ ಬಿದ್ದು ಅನಾಹುತವಾದಲ್ಲಿ ಅದಕ್ಕೆ ನೇರ ಹೊಣೆ ಅಧಿಕಾರಿಗಳಾಗಿರುತ್ತಾರೆ.

Categories
ಜಾತಕ

ಮೇ 1ರಂದು ರಾಶಿ ಭವಿಷ್ಯ ಹೇಗಿದೆ?

ಮೇ 1ರಂದು ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಗೆ ಶುಭ?ಯಾವ ರಾಶಿಗೆ ಅಶುಭ?

NAMMUR EXPRESS NEWS
2024 ಮೇ 01ರ ಮಂಗಳವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಒಳಿತು..? ಯಾವ ರಾಶಿಯವರಿಗೆ ಕೆಡಕು…?

* ಮೇಷ ರಾಶಿ.
ಸ್ನೇಹಿತರಿಂದ ಕೆಲವು ಆಸಕ್ತಿಕರ ಮಾಹಿತಿ ದೊರೆಯುತ್ತದೆ. ದೂರದ ಪ್ರಯಾಣದ ಸೂಚನೆಗಳಿವೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳಿಂದ ದೂರ ಇರುವುದು ಉತ್ತಮ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸುತ್ತೀರಿ. ವ್ಯಾಪಾರ ಉದ್ಯೋಗಗಳಲ್ಲಿ ಅಲ್ಪ ಪ್ರಗತಿ ಕಂಡುಬರುತ್ತದೆ. ಅನಗತ್ಯ ವಿಷಯಗಳಿಗೆ ಹಣ ವ್ಯಯವಾಗುತ್ತದೆ.

* ವೃಷಭ ರಾಶಿ.
ಆತ್ಮೀಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಹೊಸ ವಸ್ತು ಲಾಭವನ್ನು ಪಡೆಯಲಾಗುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ಸಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ.

* ಮಿಥುನ ರಾಶಿ.
ಹೊಸ ಯೋಜನೆಗಳನ್ನು ಪ್ರಾರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಆಸ್ತಿ ವಿವಾದಗಳು ಇತ್ಯರ್ಥವಾಗುತ್ತವೆ. ಆತ್ಮೀಯರಿಂದ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಹಠಾತ್ ಧನ ಲಾಭ ದೊರೆಯುತ್ತದೆ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತೀರಿ.

* ಕಟಕ ರಾಶಿ.
ದೂರ ಪ್ರಯಾಣ ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರಿಂದ ಸಹಾಯ ಸಿಗದೆ ತೊಂದರೆ ಉಂಟಾಗುತ್ತದೆ. ಹಳೆಯ ಸಾಲಗಳನ್ನು ತೀರಿಸುವ ಪ್ರಯತ್ನಗಳು ಫಲ ನೀಡುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಏರಿಳಿತಗಳು ನಿವಾರಣೆಯಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

* ಸಿಂಹ ರಾಶಿ.
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಸಕಾಲಕ್ಕೆ ಬರಬೇಕಾದ ಹಣ ಸಿಗದೇ ನಿರಾಸೆ ಉಂಟಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಕೆಲಸ ಹೆಚ್ಚಾಗುತ್ತದೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಇತರರಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗುತ್ತದೆ.

* ಕನ್ಯಾ ರಾಶಿ.
ಹೊಸ ಪರಿಚಯಗಳು ಉಪಯುಕ್ತವಾಗುತ್ತವೆ. ಆಪ್ತ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಸ್ಥಿರ ಆಸ್ತಿಗಳ ಮಾರಾಟದಲ್ಲಿ ಲಾಭ ದೊರೆಯುತ್ತದೆ. ವ್ಯವಹಾರಗಳಲ್ಲಿ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಲಾಭಗಳನ್ನು ಪಡೆಯುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ತೃಪ್ತಿಕರ ವಾತಾವರಣಗಳು ಇರುತ್ತವೆ.

* ತುಲಾ ರಾಶಿ.
ಹೊಸ ಉದ್ಯಮ ಆರಂಭಿಸಲು ಇದ್ದ ಅಡೆತಡೆಗಳು ದೂರವಾಗುತ್ತವೆ. ಪ್ರಮುಖ ವ್ಯವಹಾರಗಳಲ್ಲಿ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಮಾಜದಲ್ಲಿ ಹಿರಿಯರ ಪರಿಚಯಗಳು ಹೆಚ್ಚಾಗುತ್ತವೆ. ಬಂಧು ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ.

* ವೃಶ್ಚಿಕ ರಾಶಿ.
ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು ಹೆಚ್ಚಾಗುತ್ತದೆ. ಹಣದ ವಿಷಯದಲ್ಲಿ ಏರಿಳಿತಗಳು ಹೆಚ್ಚಾಗುತ್ತವೆ, ಹೆಚ್ಚಿನ ಪ್ರಯತ್ನದಿಂದ ನೀವು ಸ್ವಲ್ಪ ಫಲಿತಾಂಶವನ್ನು ಪಡೆಯುತ್ತೀರಿ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ. ಕೈಗೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳದೆ ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತವೆ.

* ಧನುಸ್ಸು ರಾಶಿ.
ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಆರ್ಥಿಕ ಪರಿಸ್ಥಿತಿ ತುಂಬಾ ಕಳಪೆಯಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ನೆಮ್ಮದಿಗಾಗಿ ದೈವಿಕ ದರ್ಶನ ಪಡೆಯುವುದು ಒಳ್ಳೆಯದು. ವ್ಯಾಪಾರ ಉದ್ಯೋಗಗಳು ನಿಧಾನವಾಗಿ ಸಾಗುತ್ತವೆ.

* ಮಕರ ರಾಶಿ.
ಕೆಲವು ವಿವಾದಗಳಿಗೆ ಸಂಬಂಧಿಸಿದಂತೆ ಆಪ್ತ ಸ್ನೇಹಿತರಿಂದ ಮಹತ್ವದ ಮಾಹಿತಿ ದೊರೆಯುತ್ತದೆ. ಯೋಜಿತ ಕಾರ್ಯಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ ಮತ್ತು ಹೊಸ ವಸ್ತು ಲಾಭಗಳು ದೊರೆಯುತ್ತವೆ. ಸಮಾಜದ ಹಿರಿಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಉದ್ಯೋಗಗಳಿಗೆ ಅನುಕೂಲಕರ ವಾತಾವರಣವಿರುತ್ತದೆ.

* ಕುಂಭ ರಾಶಿ.
ಬಂಧು ಮಿತ್ರರ ಮಾತುಗಳಿಂದ ಸ್ವಲ್ಪ ತೊಂದರೆ ಉಂಟಾಗುತ್ತದೆ. ಅತಿಯಾದ ಪ್ರಯತ್ನ ಮಾಡಿದರೂ ಕೆಲಸ ಪೂರ್ಣಗೊಳ್ಳುವುದಿಲ್ಲ.ಮನೆಯ ಹೊರಗೆ ಪರಿಸ್ಥಿತಿಗಳು ವಿರುದ್ಧವಾಗಿರುತ್ತವೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯದ ಸೂಚನೆಗಳಿವೆ. ಕೆಲಸಗಳಲ್ಲಿ ಆತುರದಿಂದ ಅಧಿಕಾರಿಗಳ ಜೊತೆ ಮಾತನಾಡುವುದು ಒಳ್ಳೆಯದಲ್ಲ.

* ಮೀನ ರಾಶಿ.
ಕೌಟುಂಬಿಕ ವ್ಯವಹಾರಗಳಲ್ಲಿ ವಿಚಾರಗಳು ಕಾರ್ಯರೂಪಕ್ಕೆ ಬರುತ್ತವೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ಹೊಸ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ಹಳೆಯ ಸ್ನೇಹಿತರೊಂದಿಗೆ ಭೋಜನ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ.

Categories
ಕ್ರಿಕೆಟ್

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರಾಹುಲ್ ಔಟ್!

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರಾಹುಲ್ ಔಟ್!
– ರೋಹಿತ್‌ ಶರ್ಮಾ ನಾಯಕ, ಉಪ ನಾಯಕನಾಗಿ ಹಾರ್ದಿಕ್ ಪಾಂಡ್ಯ
– ಯಾರಿಗೆ ಅವಕಾಶ? ಯಾರಿಗೆ ಅವಕಾಶ ಸಿಗಲಿಲ್ಲ?

NAMMUR EXPRESS NEWS
2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ 15 ಆಟಗಾರರ ಭಾರತ ತಂಡವನ್ನು ಮಂಗಳವಾರ ಬಿಸಿಸಿಐ ಪ್ರಕಟಿಸಿದೆ. ನಿರೀಕ್ಷೆಯಂತೆ ಭಾರತ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದು, ಉಪ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ರಾಜಸ್ಥಾನ್‌ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ ಹಾಗೂ ಯುಜ್ವೇಂದ್ರ ಚಹಲ್ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಕನ್ನಡಿಗ ಕೆಎಲ್‌ ರಾಹುಲ್‌ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯುಜ್ವೇಂದ್ರ ಚಹಲ್ , ಅರ್ಷದೀಪ್ ಸಿಂಗ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್

Categories
ರಾಜ್ಯ

ಕಾರ್ಮಿಕರೇ ನಿಮಗೆ ಸಲಾಂ!

ಕಾರ್ಮಿಕರೇ ನಿಮಗೆ ಸಲಾಂ!
– ಮೇ 1 ಕಾರ್ಮಿಕರ ದಿನ: ಕಾರ್ಮಿಕರ ಶ್ರಮಕ್ಕೆ ನಮನ
– ಕಾರ್ಮಿಕರ ದಿನ ಹುಟ್ಟಿಕೊಂಡಿದ್ದೇಕೆ.?
– ಕಾರ್ಮಿಕರ ದಿನದ ಮಹತ್ವವೇನು?

NAMMUR EXPRESS NEWS
ಪ್ರತಿ ವರ್ಷ ಮೇ ಮೊದಲ ದಿನವನ್ನು ಮೇ ದಿನ ಅಥವಾ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರ್ಮಿಕ ವರ್ಗದ ಸಾಧನೆಗಳನ್ನು ಗೌರವಿಸುವ ಸಲುವಾಗಿರುವ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ, ಮೇ 1ರ ಬುಧವಾರ ಮೇ ದಿನವನ್ನು ಆಚರಿಸಲಾಗುವುದು. ಮೇ ದಿನ ಅಥವಾ ಕಾರ್ಮಿಕರ ದಿನವನ್ನು ಬಾಂಗ್ಲಾದೇಶ, ಕ್ಯೂಬಾ, ಭಾರತ, ಜರ್ಮನಿ, ಚೀನಾ ಮುಂತಾದ ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವೆಂದು ಆಚರಿಸಲಾಗುತ್ತದೆ.
ಕಾರ್ಮಿಕರಿಗೆ ಅವರ ಹಕ್ಕುಗಳನ್ನು ನೆನಪಿಸಲು ಮತ್ತು ಸಮಾಜಕ್ಕೆ ಅವರ ಕೊಡುಗೆಗಳಿಗಾಗಿ ಅವರು ಅರ್ಹವಾದ ಮನ್ನಣೆಯನ್ನು ನೀಡಲು ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಕಾರ್ಮಿಕರ ದಿನ ಏಕೆ ಆಚರಿಸುತ್ತಾರೆ. ಯಾವುದೇ ದೇಶದ ಅಭಿವೃದ್ಧಿಗೆ ಅಲ್ಲಿನ ಕಾರ್ಮಿಕರ ಕೊಡುಗೆ ಅಪಾರ.

19ನೇ ಶತಮಾನದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾರ್ಮಿಕರ ಹಕ್ಕುಗಳ ಹೋರಾಟಕ್ಕೂ ಮುನ್ನ ಆರಂಭಗೊಂಡಿದೆ ಎಂದು ತಿಳಿಯುತ್ತದೆ. ಮೇ 1, 1886 ರಂದು, ಸುಮಾರು 200,000 ಕಾರ್ಮಿಕರು ದಿನಕ್ಕೆ 8 ಗಂಟೆಗಳ ಕೆಲಸಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಈ ಕೆಲಸದ ಅವಧಿ ಕುರಿತು ಚರ್ಚೆಗಳು, ಪ್ರತಿಭಟನೆಗಳು, ಪರ ವಿರೋಧ ಚರ್ಚೆಗಳೂ ನಡೆಯುತ್ತಲೇ ಇವೆ. ಉದ್ಯಮಿಗಳು ಕಾರ್ಮಿಕರು ಹೆಚ್ಚು ಕೆಲಸ ಮಾಡಬೇಕೆಂದು, ಕಾರ್ಮಿಕ ಪರ ಸಂಘಟನೆಗಳು ಕೆಲಸದ ಅವಧಿ ಹಾಗೂ ಕೆಲಸ ಮಾಡುವ ಪರಿಸರದ ಕುರಿತಂತೆ ಹೆಚ್ಚು ಗಮನ ನೀಡುವಂತೆ ವಾದ ಮಾಡುತ್ತಾ ಬರಲಾಗಿದೆ. ಜೊತೆಗೆ ಒಂದಿಷ್ಟು ಕೆಲಸದ ಸ್ಥಳಗಳಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಕೆಲಸಗಳು ಸಹ ನಡೆಯುತ್ತಿವೆ. ಇನ್ನು ಇದೇ ಕಾರಣಕ್ಕೆ 1886ರಲ್ಲಿ ಚಿಕಾಗೋದಲ್ಲಿ ಪ್ರತಿಭಟನೆ ನಡೆಸಲಾಗಿತ್ತು, ಇಡೀ ದೇಶದ ಕಾರ್ಮಿಕರು ಅಲ್ಲಿ ಸೇರಿದ್ದರು, ಆದರೆ ಈ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತ್ತು.

ಪೊಲೀಸರು ಕಾರ್ಮಿಕರ ಮೇಲೆ ಲಾಠಿ ಬೀಸಿದ್ದರು. ಆದರೆ ಚಿಕಾಗೋದ ಹೇಮಾರ್ಕೆಟ್ ಸ್ಕ್ವೇರ್‌ನಲ್ಲಿ ನಡೆದ ಶಾಂತಿಯುತ ಸಭೆ ವೇಳೆ ಬಾಂಬ್ ಸ್ಫೋಟಗೊಂಡು ಈ ಪ್ರತಿಭಟನೆ ದುರಂತವಾಗಿ ತಿರುಗಿತು. ಹಲವರು ಪ್ರಾಣ ಕಳೆದುಕೊಂಡರು. ಈ ಘಟನೆ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಯಿತು. ಇದಾದ ಬಳಿಕ ಈ ಕಾರ್ಮಿಕರ ಬಲಿದಾನವನ್ನು ನೆನೆಯಲೆಂದು ಈ ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲು ನಿರ್ಧರಿಸಲಾಯಿತು. ಹೀಗಾಗಿ 1889ರ ಮೇ 1ರಂದು ಮೊದಲ ಕಾರ್ಮಿಕರ ದಿನ ಘೋಷಣೆಯಾಗಿತ್ತು. ಆದರೆ ಅಧಿಕೃತವಾಗಿ 1890ರ ಮೇ 1ರಂದು ಕಾರ್ಮಿಕರ ದಿನಾಚರಣೆ ಆರಂಭಗೊಂಡಿತು.

ಕಾರ್ಮಿಕರ ದಿನದ ಮಹತ್ವ

ಕಾರ್ಮಿಕರು ತಮ್ಮ ಶ್ರಮ ದಾನದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯ ಕೊಡುಗೆ ನೀಡುತ್ತಾರೆ. ನೀವು ಕೆಲವು ರಾಷ್ಟ್ರಗಳ ನೋಡಬಹುದು. ಅಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆ ಇದೆ. ಹೀಗಾಗಿ ಆ ದೇಶಕ್ಕೆ ವಲಸೆ ಹೋಗುವವರು, ಹಾಗೂ ನುರಿತ ಕಾರ್ಮಿಕರ ಕೊರತೆಯ ಹಿನ್ನೆಲೆ ಆ ದೇಶದ ಅಭಿವೃದ್ಧಿ ಕುಂಠಿತವಾಗುವುದನ್ನು ಸಹ ನಾವು ನೋಡಬಹುದು. ಈ ಕಾರ್ಮಿಕರ ದಿನವು ಕಾರ್ಮಿಕರ ಶ್ರಮವನ್ನು ಗುರುತಿಸುವುದು ಮಾತ್ರವಲ್ಲದೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಶೋಷಣೆಗೆ ಒಳಗಾಗದಂತೆ ಅವರನ್ನು ರಕ್ಷಿಸುವ ಗುರಿಯನ್ನು ಸಹ ಹೊಂದಿದೆ. ಸಮಸ್ತ ಕಾರ್ಮಿಕ ವರ್ಗಕ್ಕೆ ಕಾರ್ಮಿಕರ ದಿನದ ಶುಭಾಶಯಗಳು.