Categories
ರಾಜ್ಯ

ಕರ್ನಾಟಕ ಟಾಪ್ 5 ನ್ಯೂಸ್

ಕರ್ನಾಟಕ ಟಾಪ್ 5 ನ್ಯೂಸ್
– ರಾಜ್ಯದಲ್ಲಿ ಇಂದಿನಿಂದ ಭಾರೀ ಮಳೆ: 12 ಜಿಲ್ಲೆಗಳಿಗೆ ಅಲರ್ಟ್
– ಬಾಗಲಕೋಟೆ: ಮನೆಯ ಚಾವಣಿ ಕುಸಿತ: ಮಕ್ಕಳಿಬ್ಬರು ಸಾವು
– ವಿಜಯನಗರ: ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿ ಧ್ವಂಸ
– ಬೆಂಗಳೂರು: ವಾಣಿಜ್ಯ ಗ್ಯಾಸ್ ಬೆಲೆ ಇಳಿಕೆ: ಗೃಹ ಬಳಕೆ ಯಥಾಸ್ಥಿತಿ
– ಕುಂದಾಪುರ: ವೈದ್ಯೆಗೆ ವೈದ್ಯಾಧಿಕಾರಿ ಕಿರುಕುಳ: ಕೇಸ್

NAMMUR EXPRESS NEWS
ಬಾಗಲಕೋಟೆ: ಮನೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ಬಾಗಲಕೋಟೆಯ ಕಂದಗಲ್ಲ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ದುರ್ದೈವಿಗಳು. 40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿಕೆಯಾಗಿತ್ತು. ಈ ವೇಳೆ ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ. ಈ ದುರ್ಘಟನೆ ನಡೆದಾಗ ಮನೆಯಲ್ಲಿ ಮಕ್ಕಳ ತಂದೆ-ತಾಯಿ ಇರಲಿಲ್ಲ. ಮಕ್ಕಳ ಮೇಲೆ ಚಾವಣಿ ಬಿದ್ದ ಪರಿಣಾಮ ಹೊರಬರಲು ಆಗದೆ ಮಣ್ಣಲ್ಲಿ ಸಿಲುಕಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.

– ವಿಜಯನಗರ: ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿ ಧ್ವಂಸ ಮಾಡಿದ ದುಷ್ಕರ್ಮಿಗಳು

ವಿಜಯನಗರ: ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಂಜನೇಯ ಪ್ರತಿಮೆ ತುಂಡಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಹಂಪಿ ಗ್ರಾಮದಲ್ಲಿ ಘಟನೆ ನಡೆದಿದೆ. ತಡರಾತ್ರಿ ಕಾರ್ಯಸಿದ್ಧಿ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು, ಒಳ ನುಗ್ಗಿರುವ ದುಷ್ಟರು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಮುಂಜಾನೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ವಿಭಾಗ ತಜ್ಞರು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ವಾಣಿಜ್ಯ ಗ್ಯಾಸ್ ಬೆಲೆ ಇಳಿಕೆ: ಗೃಹ ಬಳಕೆ ಯಥಾಸ್ಥಿತಿ

ನವದೆಹಲಿ: ಜೂನ್‌ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 69.50 ರೂ. ಕಡಿಮೆ ಮಾಡಿವೆ. ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 69.50 ರೂ. ಕಡಿತಗೊಂಡು 1,756 ರೂ.ಗೆ ತಲುಪಿದೆ. ಇನ್ನು ದೆಹಲಿಯಲ್ಲಿ ಪರಿಷ್ಕೃತ ದರ 1,676 ರೂ. ಆಗಿದೆ. ಹಿಂದೆ 1745.50 ರೂ. ಆಗಿತ್ತು. ಮುಂಬೈಯಲ್ಲಿಯೂ 69.50 ರೂ. ಇಳಿಕೆಯಾಗಿದ್ದು ಹೊಸ ಬೆಲೆಯನ್ನು 1,629 ರೂ.ಗೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ 1,840.5೦ ರೂ., ಕೋಲ್ಕತ್ತಾದಲ್ಲಿ ದರ ಪರಿಷ್ಕರಣೆಯ ಬಳಿಕ 1,787 ರೂ. ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ಮಧ್ಯೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್‌ ಬೆಲೆ 805.50 ರೂ. ಇದೆ.

ರಾಜ್ಯದಲ್ಲಿ ಇಂದಿನಿಂದ ಭಾರೀ ಮಳೆ: 12 ಜಿಲ್ಲೆಗಳಿಗೆ ಅಲರ್ಟ್

ಬೆಂಗಳೂರು : ರಾಜ್ಯದ ಗಡಿ ಜಿಲ್ಲೆಗಳಿಗೆ ಮುಂಗಾರು ಮಳೆಯ ಪ್ರವೇಶವಾಗಿದ್ದು, ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಜೂನ್ 7 ವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಲಾರ, ಕೊಡಗು, ಹಾಸನ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕುಂದಾಪುರ ವೈದ್ಯೆಗೆ ವೈದ್ಯಾಧಿಕಾರಿ ಕಿರುಕುಳ: ಕೇಸ್

ಕುಂದಾಪುರ: ಕುಂದಾಪುರ ಸರ್ಕಾರಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ವಿರುದ್ಧ ಸಹೋದ್ಯೋಗಿ ವೈದ್ಯೆಯೊಬ್ಬರು ಮಾನಸಿಕ ಕಿರುಕಳದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೈದ್ಯಾಧಿಕಾರಿ ರಾಬರ್ಟ್ ವಿರುದ್ಧ ಈ ಹಿಂದೆಯೂ ಹಲವು ಆರೋಪಗಳು ಕೇಳಿ ಬಂದಿತ್ತು. ಸದ್ಯ, ತನ್ನ ಸಹೋದ್ಯೋಗಿ ವೈದ್ಯೆಗೆ ಕಳೆದ ಆರು ತಿಂಗಳಿಂದ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಮಾನಸಿಕ ಹಿಂಸೆ ನೀಡಿದ್ದಲ್ಲದೇ ಹಾಗೂ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಕರ್ತವ್ಯದ ಆರಂಭದ ದಿನಗಳಿಂದ ಆಪಾದಿತನು ದೂರುದಾರರಿಗೆ ಕರ್ತವ್ಯದ ಸಮಯ ಮುಗಿದ ಮೇಲೆ ರಾತ್ರಿ 10-11 ಗಂಟೆಯ ನಂತರದಲ್ಲಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿ ವೈಯುಕ್ತಿಕ ಬದುಕನ್ನು ಕೆದಕುವ ಪ್ರಯತ್ನ ಮಾಡಿದ್ದಲ್ಲದೇ, ವೀಡಿಯೋ ಕರೆಗಳನ್ನು ಮಾಡಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ವೈದ್ಯೆ ಹೇಳಿದ್ದಾರೆ. ಅಲ್ಲದೇ ರಾತ್ರಿ ಕರ್ತವ್ಯದ ಹೊರತು ಸಮಯದಲ್ಲಿ ಅತೀ ಅಶ್ಲೀಲವಾಗಿ, ದೈಹಿಕ ರೂಪದ ಬಗ್ಗೆ ವರ್ಣಿಸುವುದು ಅಗೌರವಪೂರಕವಾಗಿ ಸಂಭಾಷಣೆಯ ಮೂಲಕ ತೀವ್ರ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಮಾತ್ರವಲ್ಲದೇ, ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಹಾಗೂ ಕೌಂಟುಂಬಿಕ ಹಾಗೂ ವೈಯುಕ್ತಿಕ ಮರ್ಯಾದೆಗೆ ಅಂಜಿ ಆರೋಪಿತನಿಗೆ ಗೌರವಪೂರ್ವಕವಾಗಿ ಉತ್ತರಿಸುತ್ತಾ ಆರೋಪಿತನ ಕೋರಿಕಗಳನ್ನು ನಿರಾಕರಿಸುತ್ತಾ ಬಂದರೂ ಆಪಾದಿತ ವೈದ್ಯ ದೂರುದಾರರು ಆಸ್ಪತ್ರೆಯ ಇತರ ಪುರುಷ ಸಿಬ್ಬಂದಿಯವರೊಂದಿಗೆ ಸ್ವಾಭಾವಿಕವಾಗಿ ಸಂಭಾಷಣೆ ಮಾಡಿರುವುದಕ್ಕೆ ಕಥೆಗಳನ್ನು ಕಟ್ಟಿ ಜೀವಬೆದರಿಕೆಯನ್ನು ಹಾಕಿದ್ದಲ್ಲದೇ, ಉದ್ಯೋಗದಿಂದ ತೆಗೆಯವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಠಾಣೆಯಲ್ಲಿ ಸಂತ್ರಸ್ತೆ ವೈದ್ಯೆ ದೂರು , 354, 354A, 504, 506, 509 0 ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ತಲೆಮರೆಸಿಕೊಂಡಿದ್ದಾರೆ

Categories
ರಾಜ್ಯ

ಜೂ.3ರಂದು ವಿಧಾನ ಪರಿಷತ್‌ ಸಮರ!

ಜೂ.3ರಂದು ವಿಧಾನ ಪರಿಷತ್‌ ಸಮರ!
– ಮತದಾನಕ್ಕೆ ಯಾವ ಯಾವ ದಾಖಲೆಗಳು ಕಡ್ಡಾಯ?
– ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ

NAMMUR EXPRESS NEWS
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಪರಿಷತ್ತಿಗೆ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಜೂನ್, 03 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದೆ. ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಎಸ್ಟಾಬ್ಲಿಸ್‍ಮೆಂಟ್ ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲಿರುವ ಮತದಾರರಿಗೆ ಜೂನ್, 03 ರಂದು ವಿಶೇಷ ಸಾಂದರ್ಭಿಕ ರಜೆ ಯನ್ನು ಮಂಜೂರು ಮಾಡಿ ಆದೇಶಿಸಿದೆ.

ದಾಖಲೆ ಏನೇನು ಬೇಕು?

ಭಾರತ ಚುನಾವಣಾ ಆಯೋಗದ ಆದೇಶದಂತೆ ಜೂನ್, 03 ರಂದು ಮತದಾನ ಮಾಡುವ ಸಮಯದಲ್ಲಿ ಮತದಾರರನ್ನು ಗುರುತಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ(ಎಪಿಕ್) ಯನ್ನು ಮುಖ್ಯ ದಾಖಲಾತಿಯಾಗಿ ಹಾಜರುಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಎಪಿಕ್ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗವು ನಿರ್ಧರಿಸಿರುವ ಪೂರಕ ದಾಖಲಾತಿಗಳಾದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ಸರ್ವೀಸ್ ಗುರುತಿನ ಚೀಟಿ(ನೌಕರರು ಕೇಂದ್ರ/ ರಾಜ್ಯ ಸರ್ಕಾರ ಪಬ್ಲಿಕ್ ಸೆಕ್ಟರ್, ಲೋಕಲ್ ಬಾಡಿಸ್ ಇತರ ಪ್ರೈವೆಟ್ ಇಂಡಸ್ಟ್ರೀಯಲ್ ಹೌಸಸ್). ಅಪಿಷಿಯಲ್ ಗುರುತಿನ ಚೀಟಿ (ಎಂ.ಪಿ, ಎಂ.ಎಲ್‍ಎ, ಎಂಎಲ್‍ಸಿ), ಶಿಕ್ಷಣ ಸಂಸ್ಥೆಯಿಂದ ನೀಡಿರುವ ಸರ್ವಿಸ್ ಗುರುತಿನ ಚೀಟಿ, ವಿಶ್ವವಿದ್ಯಾನಿಲಯದಿಂದ ನೀಡಿರುವ ಪ್ರಮಾಣ ಪತ್ರ, ವಿಶೇಷಚೇತನ ಗುರುತಿನ ಚೀಟಿ, ಯುನಿಕ್ ಡಿಸಾಬಿಲಿಟಿ ಗುರುತಿನ ಚೀಟಿ(ಯುಡಿಐಡಿ) ಈ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ ಎಂದು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.

Categories
ಮಾಹಿತಿ

ಜೂನ್‌ ಮೊದಲ ವಾರ ಆಕಾಶದಲ್ಲಿ ಖಗೋಳ ವಿಸ್ಮಯ!

ಜೂನ್‌ ಮೊದಲ ವಾರ ಆಕಾಶದಲ್ಲಿ ಖಗೋಳ ವಿಸ್ಮಯ!
– ನೋಡಲು ಮಿಸ್‌ ಮಾಡಬೇಡಿ; ಈ ಅಪರೂಪದ ಗ್ರಹಗಳ ಮೆರವಣಿಗೆ!
– ಏನಿದು ಖಗೋಳ ವಿಸ್ಮಯ…?

NAMMUR EXPRESS NEWS
ಜೂನ್‌ ಮೊದಲ ವಾರ ಪೂರ್ವ ಆಕಾಶದಲ್ಲಿ ಬೆಳಗ್ಗಿನ ಸೂರ್ಯೋದಯಕ್ಕೂ ಮೊದಲು ಅಪರೂಪದಕ್ಕೆ ಕಾಣಲು ಸಿಗುವ ಆರು ಗ್ರಹಗಳ ಮೆರವಣಿಗೆಯನ್ನು ಬರಿಗಣ್ಣಿನಿಂದ ನೋಡಬಹುದು ಎಂದು ಖ್ಯಾತ ಖಗೋಳ ವಿಜ್ಞಾನಿ ಡಾ.ಎಪಿ ಭಟ್‌ ತಿಳಿಸಿದ್ದಾರೆ. ಜೂನ್‌ 1ರಿಂದ ಪೂರ್ವ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವ ಶನಿ, ಮಂಗಳ, ಗುರು ಹಾಗೂ ಬುಧ ಗರಹಗಳ ಜತೆಗೆ ದೂರದರ್ಶಕದಲ್ಲಿ ನೋಡಬಹುದಾದ ನೆಪ್ಚೂನ್‌ ಹಾಗೂ ಯುರೇನಸ್‌ಗಳು ಕೂಡ ಕಾಣಸಿಗುತ್ತವೆ. ಒಟ್ಟಿನಲ್ಲಿ ಈ ದೃಶ್ಯ ಗ್ರಹಗಳು ಒಟ್ಟಾಗಿ ಮೆರವಣಿಗೆ ಹೊರಟಂತೆ ಕಾಣಿಸಲಿದೆ ಎಂದು ಹೇಳಿದ್ದಾರೆ.

ಕೆಲವು ವಾರಗಳಿಂದ ಸೂರ್ಯನಿಗೆ ನೇರವಾಗಿ ಬಂದು ಅಸ್ತವಾಗಿದ್ದ ಗುರುಗ್ರಹ ಜೂನ್‌ ಒಂದರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರುಗ್ರಹದ ಜತೆ ಜತೆಯಾಗಿ ಅಪರೂಪದ ಬುಧಗ್ರಹವೂ ಗೋಚರಿಸಲಿದೆ. ಬುಧ ಯಾವಾಗಲೂ ಬರಿಗಣ್ಣಿಗೆ ಕಾಣಿಸುವುದಿಲ್ಲ. ವರ್ಷದಲ್ಲಿ ಕೇವಲ ಕೆಲವು ದಿನಗಳಲ್ಲಿ ಕ್ಷಣ ಮಾತ್ರದಲ್ಲಿ ಕಾಣಿಸಿ ಮರೆಯಾಗುತ್ತದೆ. ಜೂನ್‌ ಒಂದರಂದು ಶನಿಗ್ರಹದ ಸಮೀ, ಜೂನ್‌ 2ರಂದು ನೆಪ್ಚೂನ್‌, ಮಂಗಳನ ಸಮೀಪ, ಜೂ.3ರಂದು ಯುರೇನಸ್‌ ಸಮೀಪ ಸರಿದು, ಜೂ.4ರಂದು ಗುರು, ಬುಧನ ಸಮೀಪ ಚಂದ್ರ ಕಾಣಲು ಸಿಗುತ್ತದೆ. ಈ ಆಕಾಶದ ಭವ್ಯತೆಗೆ ಚಂದ್ರ ಹಣತೆಯಂತೆ ಕಾಣಿಸಿ ಎಲ್ಲರನ್ನೂ ಆಕರ್ಷಿಸಲಿದೆ. ಅಂದರೆ ಈಗ ಸುಮಾರು 3 ಲಕ್ಷದ 70 ಸಾವಿರ ಕಿಮೀ. ದೂರದ ಚಂದ್ರ ಕೋಟಿ ಕೋಟಿ ಕಿಮೀ ದೂರದ ಗ್ರಹಗಳ ಜತೆ ಒಂದೇ ದೂರದಲ್ಲಿರುವಂತೆ ಕಾಣಿಸುವುದು ವಿಶೇಷ. ಈ ಅಪರೂಪದ ಖಗೋಳ ವಿಸ್ಮಯವನ್ನು ಖಗೋಳಾಸಕ್ತರು ನೋಡಿ ಆನಂದಿಸಬಹುದು ಎಂದು ಡಾ.ಎಪಿ ಭಟ್‌ ತಿಳಿಸಿದ್ದಾರೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
2024 ಜೂನ್ 01ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಅಶುಭ..?

** ಮೇಷ :
ಪ್ರಯಾಣಗಳು ಶ್ರಮದಾಯಕವಾಗಿರುತ್ತವೆ. ವೃತ್ತಿ ಮತ್ತು ವ್ಯಾಪಾರ ನಿರಾಶಾದಾಯಕವಾಗಿರುತ್ತದೆ. ದೈವ ಭಕ್ತಿ ಹೆಚ್ಚಾಗುತ್ತದೆ. ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಆರ್ಥಿಕವಾಗಿ ಅನುಕೂಲಕರವಾಗಿರುತ್ತವೆ. ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿರುತ್ತವೆ ಮತ್ತು ಹಣದ ವಿಷಯದಲ್ಲಿ ಪ್ರಮುಖ ನಿರ್ಧಾರಗಳು ಕೂಡಿ ಬರುತ್ತವೆ.

** ವೃಷಭ ರಾಶಿ :
ಸಮಾಜದಲ್ಲಿ ವಿಶೇಷ ಬೆಂಬಲ ಉಂಟಾಗುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಪರಿಚಯಗಳು ಹೆಚ್ಚಾಗುತ್ತವೆ. ಬಂಧು ಮಿತ್ರರ ಭೇಟಿ ಸಂತಸ ತರುತ್ತದೆ. ಉದ್ಯೋಗದಲ್ಲಿ ತೊಂದರೆಗಳು ನಿವಾರಣೆಯಾಗುತ್ತವೆ. ವ್ಯಾಪಾರ ವಹಿವಾಟು ಉತ್ಸಾಹದಿಂದ ಸಾಗುತ್ತದೆ.

** ಮಿಥುನ ರಾಶಿ :
ಪ್ರಯಾಣದಲ್ಲಿ ವಾಹನ ಸಮಸ್ಯೆಗಳು ಉಂಟಾಗುತ್ತವೆ. ಸ್ನೇಹಿತರು ನಿಮ್ಮ ಮಾತಿಗೆ ಒಪ್ಪುವುದಿಲ್ಲ. ಕೈಯಲ್ಲಿ ಹಣ ಉಳಿಯುವುದಿಲ್ಲ, ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳಿರುತ್ತವೆ. ಕುಟುಂಬ ಸದಸ್ಯರ ಒತ್ತಡ ಹೆಚ್ಚಾಗುತ್ತದೆ. ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ.

** ಕಟಕ ರಾಶಿ :
ಒಂದು ವಿಷಯದ ಸಲುವಾಗಿ ಹಿರಿಯರನ್ನು ಭೇಟಿಯಾಗುತ್ತೀರಿ. ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕೆಲಸದಲ್ಲಿ, ಶ್ರಮಕ್ಕೆ ತಕ್ಕ ಫಲಿತಾಂಶವನ್ನು ನೀವು ಪಡೆಯುತ್ತೀರಿ. ದೀರ್ಘಾವಧಿಯ ಹಳೆ ಸಾಲ ವಸೂಲಿಯಾಗುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿನ ಕೆಲವು ಘಟನೆಗಳು ಆಶ್ಚರ್ಯಕರವಾಗಿರುತ್ತವೆ.

** ಸಿಂಹ ರಾಶಿ :
ಆತ್ಮೀಯ ಸ್ನೇಹಿತರಿಂದ ಮಹತ್ವದ ಮಾಹಿತಿ ಸಂಗ್ರಹಿಸುತ್ತೀರಿ. ಸ್ನೇಹಿತರೊಂದಿಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ . ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ, ಸ್ವಲ್ಪ ಪ್ರಯತ್ನದಿಂದ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಆರ್ಥಿಕ ಲಾಭ ದೊರೆಯುತ್ತದೆ.

** ಕನ್ಯಾ ರಾಶಿ :
ಹೊಸ ಉದ್ಯಮ ಆರಂಭಿಸುವಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಣ್ಣಪುಟ್ಟ ವಿಷಯಗಳಿಗೆ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಉದ್ಯೋಗದಲ್ಲಿ ಶ್ರಮ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ಬದಲಾವಣೆಗಳಿರುತ್ತವೆ. ಉದ್ಯೋಗದ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ.

** ತುಲಾ ರಾಶಿ :
ಮಾನಸಿಕ ನೆಮ್ಮದಿಗಾಗಿ ದೈವಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ಸಮರ್ಥನೀಯವಲ್ಲದ ಆಲೋಚನೆಗಳಿಂದ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಸಹಾಯ ಮಾಡಿದ ಆಪ್ತ ಸ್ನೇಹಿತರಿಂದ ಒತ್ತಡ ಹೆಚ್ಚಾಗುತ್ತದೆ. ವ್ಯವಹಾರಗಳು ಸುಗಮವಾಗಿ ನಡೆಯದಿದ್ದಾಗ ಅಸಂತೃಪ್ತಿ ಉಂಟಾಗುತ್ತದೆ. ವೃತ್ತಿ ಮತ್ತು ಉದ್ಯೋಗಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತದೆ.

** ವೃಶ್ಚಿಕ ರಾಶಿ :
ಕೌಟುಂಬಿಕ ವಾತಾವರಣ ಉತ್ಸಾಹದಿಂದ ಕೂಡಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ. ಆಧ್ಯಾತ್ಮಿಕ ಮತ್ತು ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹೊಸ ವಾಹನ ಲಾಭ ಉಂಟಾಗುತ್ತದೆ. ಉದ್ಯೋಗದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆಯುತ್ತೀರಿ.

** ಧನುಸ್ಸು ರಾಶಿ :
ಭೂಮಿ ಸಂಬಂಧಿತ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಹಣದ ಆದಾಯ ಉತ್ತಮವಾಗಿರುತ್ತದೆ. ಹಿರಿಯರಿಂದ ಹಠಾತ್ ಆಮಂತ್ರಣಗಳನ್ನು ಸ್ವೀಕರಿಸುವಿರಿ. ನಿರುದ್ಯೋಗ ಪ್ರಯತ್ನಗಳು ಧನಾತ್ಮಕ ಫಲಿತಾಂಶಗಳನ್ನು ಹೊಂದಿರುತ್ತವೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.

** ಮಕರ ರಾಶಿ :
ಕೆಲವು ವ್ಯವಹಾರಗಳು ಮಧ್ಯದಲ್ಲಿ ನಿಲ್ಲುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಿನಾಕಾರಣ ಜಗಳಗಳು ಉಂಟಾಗುತ್ತವೆ. ಪ್ರಮುಖ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ದೂರದ ಪ್ರಯಾಣದ ಸೂಚನೆಗಳಿವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಉದ್ಯೋಗಗಳು ಸ್ವಲ್ಪ ಅಸ್ತವ್ಯಸ್ತವಾಗಿರುತ್ತವೆ.

** ಕುಂಭ ರಾಶಿ :
ಮಿತ್ರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಮಕ್ಕಳ ಶಿಕ್ಷಣದ ವಿಷಯಗಳಲ್ಲಿ ಒತ್ತಡ ಹೆಚ್ಚಾಗುತ್ತದೆ. ಸಾಲ-ಸಂಬಂಧಿತ ಒತ್ತಡ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಆಲೋಚನೆಗಳು ಕೂಡಿ ಬರುವುದಿಲ್ಲ. ಪಾಲುದಾರಿಕೆ ವ್ಯವಹಾರಗಳು ಕೂಡಿ ಬರುವುದಿಲ್ಲ. ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

** ಮೀನ ರಾಶಿ :
ಸಮಾಜದಲ್ಲಿ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಸಹೋದರರೊಂದಿಗಿನ ಆಸ್ತಿ ವಿವಾದಗಳಿಂದ ಮುಕ್ತಿ ದೊರೆಯುತ್ತದೆ. ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಪ್ತ ಸ್ನೇಹಿತರ ಸಲಹೆಯನ್ನು ಸ್ವೀಕರಿಸಲಾಗುತ್ತದೆ. ಹೊಸ ಆಹ್ವಾನಗಳು ಬರುತ್ತವೆ. ವ್ಯಾಪಾರ ವಿಸ್ತರಣೆ ಕೆಲಸಗಳು ವೇಗಗೊಳ್ಳುತ್ತವೆ. ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ.