Categories
ರಾಜ್ಯ

ಒಂದೇ ಆಸ್ತಿ ಹಲವರಿಗೆ ಖಾತೆ ಇನ್ಮೇಲೆ ಅಸಾಧ್ಯ!?

ಒಂದೇ ಆಸ್ತಿ ಹಲವರಿಗೆ ಖಾತೆ ಇನ್ಮೇಲೆ ಅಸಾಧ್ಯ!?
– ಕೃಷಿಯೇತರ ಭೂ ಮಾರಾಟದ ವಂಚನೆಗೆ ಮೂಗುದಾರ
– ಭೂಮಿ ಖರೀದಿಗೆ ಸರ್ಕಾರದ ಹೊಸ ನಿಯಮ ಏನು..?

NAMMUR EXPRESS NEWS
ಬೆಂಗಳೂರು:
ರಾಜ್ಯದಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಜಮೀನಿಗೆ ಖಾತಾ ನೋಂದಣಿಯಾದ ತರುವಾಯವೂ ಅದನ್ನು ಕೃಷಿ ಭೂಮಿ ಎಂಬುದಾಗಿ ಮಾರಾಟ ಮಾಡಿ ವಂಚಿಸಲು ಅವಕಾಶವಿಲ್ಲದಂತೆ ‘ಭೂಮಿ’ ತಂತ್ರಾಂಶದಲ್ಲೇ ನಿರ್ಬಂಧಿಸುವ ವ್ಯವಸ್ಥೆ ಜಾರಿಗೆ ಕಂದಾಯ ಇಲಾಖೆ ಸಜ್ಜಾಗಿದೆ. ಆ ಮೂಲಕ ಒಂದೇ ಆಸ್ತಿಯನ್ನು ಅಕ್ರಮವಾಗಿ ಹಲವರಿಗೆ ಮಾರಾಟ ಮಾಡಿ ವಂಚಿಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ರಾಜ್ಯದಲ್ಲಿ ನೋಂದಣಿಯಾಗುವ ಸ್ಥಿರಾಸ್ತಿಗಳ ಖಾತಾ, ಸರ್ವೆ ನಂಬರ್‌ ಇತರೆ ವಿವರವನ್ನು ಒದಗಿಸುವಂತೆ ಇಲಾಖೆಯು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರಮುಖೇನ ಕೋರಿದೆ. ಈ ಮಾಹಿತಿಯು ಇಲಾಖೆಗೆ ನಿರಂತರವಾಗಿ ಲಭ್ಯವಾಗುವುದರಿಂದ ಒಮ್ಮೆ ಖಾತಾ ಪಡೆದಿರುವ ಪರಿವರ್ತಿತ ಜಮೀನನ್ನು ‘ಭೂಮಿ’ ತಂತ್ರಾಂಶದಲ್ಲಿ ಮಾರಾಟಕ್ಕೆ ತಡೆಯೊಡ್ಡುವ ವ್ಯವಸ್ಥೆ ರೂಪಿಸಲು ಸಿದ್ಧತೆ ನಡೆದಿದೆ. ಜತೆಗೆ ಭೂಪರಿವರ್ತನೆಯಾದ ಆದರೆ ಅಭಿವೃದ್ಧಿಯಾಗದ ಜಮೀನುಗಳನ್ನು ‘ಭೂಮಿ’ ತಂತ್ರಾಂಶ ಮಾಹಿತಿ ಆಧರಿಸಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಕೃಷಿ ಭೂಮಿಯನ್ನು ನಿಯಮಾನುಸಾರ ಕೃಷಿಯೇತರ ಬಳಕೆಗೆ ಪರಿವರ್ತನೆ ಮಾಡಿ ಬಳಸಲು ಅವಕಾಶವಿದೆ. ಪರಿವರ್ತನೆ ಬಳಿಕ ಅಭಿವೃದ್ಧಿಪಡಿಸಿ ಖಾತಾ ಪಡೆದು ಮಾರಾಟ ಮಾಡಬಹುದಾಗಿದೆ. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಭೂಪರಿವರ್ತನೆಯಾಗಿದ್ದರೂ ಅಭಿವೃದ್ಧಿಪಡಿಸದಿದ್ದರೆ ಆಸ್ತಿ ಮಾರಾಟಕ್ಕೆ ನಿರ್ಬಂಧವಿರುವುದರಿಂದ ಆಸ್ತಿದಾರರಿಗೆ ತೊಂದರೆಯಾಗಿದೆ ಎಂಬ ಮಾತುಗಳಿವೆ.

ಹಿಂದೆ ಪರಿವರ್ತನೆಯಾದ ಭೂಮಿಗೆ ಖಾತಾ ಪಡೆದ ಬಳಿಕ ಅದು ಕೃಷಿ ಭೂಮಿಯಾಗಿ ಉಳಿದಿಲ್ಲಎಂಬುದಾಗಿ ‘ಭೂಮಿ’ ತಂತ್ರಾಂಶದಲ್ಲಿ ದಾಖಲಿಸುವ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಪಹಣಿ ತೋರಿಸಿ ಕೃಷಿ ಭೂಮಿ ಎಂದು ನಂಬಿಸಿ ಮತ್ತೊಬ್ಬರಿಗೆ ಮಾರಾಟ ಮಾಡುವ ಅಪಾಯವಿತ್ತು. ಏಕೆಂದರೆ ಖಾತಾ ಆದ ಆಸ್ತಿಯನ್ನು ಕೃಷಿ ಭೂಮಿ ಹೆಸರಿನಲ್ಲಿ ಮಾರಾಟವಾಗದಂತೆ ‘ಬ್ಲಾಕ್‌’ ಮಾಡುವ ವ್ಯವಸ್ಥೆ ‘ಭೂಮಿ’ ತಂತ್ರಾಂಶದಲ್ಲಿಇರಲಿಲ್ಲ. ಇದನ್ನು ಗಮನಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವರ್ಷದ ಹಿಂದೆಯೇ ‘ಭೂಮಿ’ ತಂತ್ರಾಂಶದಲ್ಲಿಇದನ್ನು ನಿರ್ಬಂಧಿಸಲು ಸೂಚಿಸಿದ್ದರು. ಇದರಿಂದ ಒಂದೆಡೆ ಅಕ್ರಮಗಳಿಗೆ ತಡೆಬಿದ್ದರೆ ಮತ್ತೊಂದೆಡೆ ಭೂಪರಿವರ್ತನೆಯಾಗಿದ್ದರೂ ಹಣಕಾಸಿನ ಕೊರತೆ ಇತರೆ ಕಾರಣಗಳಿಗೆ ಅಭಿವೃದ್ಧಿಪಡಿಸದಿದ್ದರೆ ಆ ಭೂಮಿಗೆ ಖಾತಾ ಪಡೆಯಲು ಸಾಧ್ಯವಾಗದಂತಾಯಿತು.

ಖಾತಾ ಕಡ್ಡಾಯದಿಂದ ಅನುಕೂಲ

ಇದಕ್ಕೆಲ್ಲಾ ಪರಿಹಾರವೆಂಬಂತೆ ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿಗೆ ‘ಇ- ಖಾತಾ’, ‘ಇ-ಸ್ವತ್ತು’, ‘ಇ- ಆಸ್ತಿ’ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ಈ ವಿವರ ನಮೂದಾಗುತ್ತಿದ್ದಂತೆ ‘ಭೂಮಿ’ ತಂತ್ರಾಂಶದಡಿ ಪಹಣಿ ಸಲ್ಲಿಸಿ ಅದೇ ಆಸ್ತಿಯನ್ನು ಕೃಷಿ ಭೂಮಿ ಎಂಬುದಾಗಿ ಮಾರಾಟ ಮಾಡುವುದಕ್ಕೆ ತಡೆ ಬೀಳಲಿದೆ. ಆ ಮೂಲಕ ಒಂದೇ ಆಸ್ತಿ ಹಲವರಿಗೆ ಮಾರಾಟವಾಗುವುದಕ್ಕೂ ‘ಬ್ರೇಕ್‌’ ಬೀಳಲಿದೆ. ಇನ್ನೊಂದೆಡೆ ಪರಿವರ್ತನೆಯಾದ ಭೂಮಿಯನ್ನು ಅಭಿವೃದ್ಧಿಪಡಿಸಲಾಗದಿದ್ದರೂ ಖಾತಾ ಪಡೆಯಲು ಅವಕಾಶ ನೀಡಬೇಕೆಂಬ ಬೇಡಿಕೆ ಆಸ್ತಿದಾರರಿಂದ ಇತ್ತು. ಅದಕ್ಕೂ ಸ್ಪಂದಿಸಿರುವ ಇಲಾಖೆಯು ಪರಿವರ್ತನೆಯಾದ ಆದರೆ ಅಭಿವೃದ್ಧಿಪಡಿಸದ ಆಸ್ತಿಯನ್ನು ‘ಭೂಮಿ’ ತಂತ್ರಾಂಶ ಮಾಹಿತಿ ಆಧರಿಸಿಯೇ ಮಾರಾಟ ಮಾಡಲು ಅವಕಾಶ ನೀಡಲು ಮುಂದಾಗಿದೆ. ಈ ವಿಚಾರವಾಗಿ ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, 10 ದಿನದೊಳಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಜತೆಗೆ, ಇ- ಖಾತಾ, ಇ-ಆಸ್ತಿ, ಇ- ಸ್ವತ್ತು ವಿವರಗಳು ಕಂದಾಯ ಇಲಾಖೆಗೆ ಲಭ್ಯವಾಗುವಂತೆ ಸಾಫ್ಟ್‌ವೇರ್‌ನಲ್ಲಿಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವ ಪ್ರಕ್ರಿಯೆ ನಡೆದಿದ್ದು, ಸದ್ಯದಲ್ಲೇ ಜಾರಿಗೆ ಇಲಾಖೆ ಪ್ರಯತ್ನ ನಡೆಸಿದೆ.
ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿಕೊಳ್ಳುವುದು ಹಾಗೂ ಅಭಿವೃದ್ಧಿಪಡಿಸುವುದರ ನಡುವೆ ಸಾಕಷ್ಟು ಅಂತರವಿದ್ದು, ಈ ಅವಧಿಯಲ್ಲಿಆಸ್ತಿ ಮಾರಾಟಕ್ಕೆ ನಿರ್ಬಂಧವಿರುವುದರಿಂದ ಆಸ್ತಿದಾರರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಸಚಿವರ ಸೂಚನೆಯಂತೆ ಪರಿವರ್ತನೆಯಾದ ಆದರೆ ಅಭಿವೃದ್ಧಿಯಾಗದ ಭೂಮಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜತೆಗೆ ಇ-ಖಾತಾ, ಇ-ಆಸ್ತಿ, ಇ-ಸ್ವತ್ತು ವಿವರವುಳ್ಳ ಆಸ್ತಿಗಳನ್ನು ಪಹಣಿ ಆಧಾರದಲ್ಲಿ ಮಾರಾಟಕ್ಕೆ ಅವಕಾಶವಿಲ್ಲದಂತೆ ‘ಭೂಮಿ’ ತಂತ್ರಾಂಶದಲ್ಲೇ ನಿರ್ಬಂಧಿಸುವ ವ್ಯವಸ್ಥೆಯೂ ಸದ್ಯದಲ್ಲೇ ಜಾರಿಯಾಗಲಿದೆ ಎಂದು ಸುನೀಲ್‌ ಕುಮಾರ್‌ ಪೊಮ್ಮಲ, ಕಂದಾಯ ಇಲಾಖೆ ಆಯುಕ್ತ ಹೇಳಿದ್ದಾರೆ

Categories
ಕೃಷಿ

ಅಡಿಕೆ ಆಯ್ತು, ಈಗ ಶ್ರೀಲಂಕಾದಿಂದ ಕಾಳು ಮೆಣಸು

ಅಡಿಕೆ ಆಯ್ತು, ಈಗ ಶ್ರೀಲಂಕಾದಿಂದ ಕಾಳು ಮೆಣಸು
– ಐದು ವಾರಗಳಲ್ಲಿ ಕಿಲೋಗೆ 35 ರೂಪಾಯಿ ಕುಸಿತ ಕಂಡ ಕರಿ ಚಿನ್ನ
– ರೈತರಲ್ಲಿ ಆತಂಕ: ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಪಟ್ಟು

NAMMUR EXPRESS NEWS
ಅಡಿಕೆ ಬಳಿಕ ಇದೀಗ ದೇಶೀಯ ಕಾಳು ಮೆಣಸು ದರ ಈಗ ಕುಸಿಯುತ್ತಿದೆ. ಕಾರಣ ವಿದೇಶದ ಕಾಳು ಮೆಣಸು!.
ಹೌದು. ದೇಶೀ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರವು ಎರಡು ವಾರಗಳಲ್ಲಿ ಕಿಲೋಗೆ 19 ರೂಪಾಯಿಗಳಷ್ಟು ಕುಸಿತ ಕಂಡಿದೆ. ಕಳೆದ ವಾರದಲ್ಲಿಯೇ ಕಿಲೋಗೆ ₹ 11 ಕುಸಿತವಾಗಿದೆ, ಕಳೆದ ಐದು ವಾರಗಳಲ್ಲಿ ಒಟ್ಟು ಕುಸಿತವು ಕೆಜಿಗೆ ₹35ರಷ್ಟು ಕುಸಿದಿದೆ. SAFTA ಅಡಿಯಲ್ಲಿ 8 ಶೇಕಡ ಸುಂಕದ ಅಡಿಯಲ್ಲಿ ಶ್ರೀಲಂಕಾದಿಂದ ಆಮದು ಮಾಡಿದ ಉತ್ಪನ್ನಗಳ ಬೃಹತ್ ಆಗಮನವು ಬೆಲೆ ಕುಸಿತಕ್ಕೆ ಕಾರಣವೆಂದು ಬೆಳೆಗಾರ ಸಂಘಟನೆಗಳು ಆರೋಪಿಸಿದೆ. ಕೊಚ್ಚಿ ಟರ್ಮಿನಲ್ ಮಾರುಕಟ್ಟೆಯಲ್ಲಿ ಅನ್‌ಗಾರ್ಬಲ್ಡ್ ಕಿಲೋಗೆ ₹627 ಮತ್ತು ಗಾರ್ಬಲ್‌ಗೆ ₹647 ರಂತೆ ಬೆಲೆಗಳು ಇವೆ. ಕೊಚ್ಚಿಯ ಕಾಳುಮೆಣಸಿನ ವ್ಯಾಪಾರಿ ಕಿಶೋರ್ ಶಾಮ್‌ಜಿ, ಮುಂಬೈನಿಂದ ಬಂದಿರುವ ಶ್ರೀಲಂಕಾದ ಕಾಳುಮೆಣಸು ಲಭ್ಯತೆಯೊಂದಿಗೆ ಬಹುತೇಕ ಎಲ್ಲಾ ಮಾರುಕಟ್ಟೆಗಳು ತುಂಬಿವೆ ಮತ್ತು ದಕ್ಷಿಣದ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗುತ್ತಿದೆ ಎಂದು ಹೇಳಿದರು.
ಶ್ರೀಲಂಕಾದ ಆಮದಿನ ಕಾರಣದಿಂದ ಸ್ಥಳೀಯವಾಗಿ ಬೆಳೆದ ಕಾಳುಮೆಣಸಿನ ಬೆಲೆ ಮೇಲೆ ಮತ್ತಷ್ಟು ಒತ್ತಡವನ್ನು ಹಾಕಿದ್ದು ಇದು ದರ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕಾಳು ಮೆಣಸು ಬೆಳೆಯುತ್ತಿರುವ ಬೆಳೆಗಾರರು ತಮ್ಮ ಸ್ಟಾಕ್ ಅನ್ನು ಮಾರಾಟ ಮಾಡಲು ಮುಂದಾಗುತಿದ್ದಾರೆ. ಬೆಲೆ ಚೇತರಿಕೆಯ ನಿರೀಕ್ಷೆಯಲ್ಲಿ ಕಾಳುಮೆಣಸು ದಾಸ್ತಾನು ಇಟ್ಟಿದ್ದ ರೈತರ ಸಂಘಗಳು ಸಹ ತಮ್ಮ ದಾಸ್ತಾನುಗಳನ್ನು ಖಾಲಿ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

ಅಂಕಿ ಅಂಶಗಳನ್ನು ಉಲ್ಲೇಖಿಸಿ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಿಂದ ಒಟ್ಟು 10,433 ಟನ್ ಆಮದು ಆಗಿದ್ದು ಇತರ ಉತ್ಪಾದಕ ದೇಶಗಳಿಂದ ಒಟ್ಟು 12,606 ಟನ್ ಆಮದಾಗಿದೆ. ಶ್ರೀಲಂಕಾ ವಾರ್ಷಿಕವಾಗಿ 25 ಸಾವಿರ ಟನ್‌ ಉತ್ಪಾದನೆ ಮಾಡುತಿದ್ದು ಇದರಲ್ಲಿ ಅರ್ದಕ್ಕಿಂತ ಹೆಚ್ಚು ಕಾಳು ಮೆಣಸನ್ನು ರಫ್ತು ಮಾಡಲೇ ಬೇಕಿದೆ. ಏಕೆಂದರೆ ಅಲ್ಲಿನ ಆಂತರಿಕ ಬಳಕೆ ಕಡಿಮೆ ಇದೆ. ತಮ್ಮ ಹೆಚ್ಚುವರಿ ದಾಸ್ತಾನುಗಳನ್ನು ಮಾರಾಟ ಮಾಡಲು ಭಾರತದತ್ತ ನೋಡುತ್ತಿದ್ದಾರೆ ಎಂದು ಭಾರತೀಯ ಮೆಣಸು ಮತ್ತು ಮಸಾಲೆಗಳ ವ್ಯಾಪಾರ ಸಂಘದ ನಿರ್ದೇಶಕರೂ ಆಗಿರುವ ಶಾಮ್ ಜಿ ಹೇಳಿದ್ದಾರೆ. ಆದರೆ ಆಮದು ಮಾಡಲಾದ ವಸ್ತುವು ಕಡಿಮೆ ಪ್ರಮಾಣದ ಸಾಂದ್ರತೆ, ಹೆಚ್ಚಿನ ಶೇಕಡಾವಾರು ತೇವಾಂಶ ಮತ್ತು ಶಿಲೀಂಧ್ರದ ಉಪಸ್ಥಿತಿಯನ್ನು ಹೊಂದಿದೆ ಎಂದು ಅವರು ಆರೋಪಿಸಿದರು ಮತ್ತು ಇದು ಭಾರತದಲ್ಲಿ ಉತ್ಪಾದಿಸಿದ ಮೆಣಸಿಗೆ ಬೆಲೆಗಳು ಕುಸಿಯಲು ಕಾರಣವಾಗುವ ಅಂಶವಾಗಿದೆ ಎಂದು ಅವರು ಆರೋಪಿಸಿದರು. ಭಾರತದ ಒಟ್ಟು ಉತ್ಪಾದನೆ 70 ಸಾವಿರ ಟನ್‌ಗಳಷ್ಟಿದ್ದು ಇದರಲ್ಲಿ ಶೇಕಡಾ 45 ರಷ್ಟು ಕರ್ನಾಟಕದ ಪಾಲು ಆಗಿದೆ. ಭಾರತೀಯ ಕಾಳುಮೆಣಸು ಮತ್ತು ಮಸಾಲೆ ವ್ಯಾಪಾರಿಗಳ ಒಕ್ಕೂಟದ ಕೇರಳ ಘಟಕವು ದೇಶೀಯ ರೈತರ ಹಿತಾಸಕ್ತಿಗಳಿಗೆ ಮಾರಕ ಆಗಿರುವ ಇಂತಹ ಆಮದುಗಳನ್ನು ತಡೆಯಬೇಕೆಂದು ಒತ್ತಾಯಿಸಿದೆ.

Categories
ಶಿವಮೊಗ್ಗ

ಶಿವಮೊಗ್ಗ ಸಂಸದ ರಾಘವೇಂದ್ರ ಅವರಿಗೆ ಮಹತ್ವದ ಹೊಣೆ

ಶಿವಮೊಗ್ಗ ಸಂಸದ ರಾಘವೇಂದ್ರ ಅವರಿಗೆ ಮಹತ್ವದ ಹೊಣೆ
– ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಸಲಹಾ ಸಮಿತಿಗೆ ನೇಮಕ
– ಸಿಂಪಲ್ ಸಂಸದರಿಗೆ ಶುಭಾಶಯಗಳ ಮಹಾಪೂರ

NAMMUR EXPRESS NEWS
ತೀರ್ಥಹಳ್ಳಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಬಿ.ವೈ. ರಾಘವೇಂದ್ರ ನೇಮಕವಾಗಿದ್ದಾರೆ. ಈಗಾಗಲೇ ರಾಜ್ಯದ ಮೆಚ್ಚಿನ ಸಂಸದರಾಗಿರುವ ರಾಘವೇಂದ್ರ ಅವರಿಗೆ ಈ ಸಮಿತಿಯಲ್ಲಿ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸುರಕ್ಷತಾ ಕ್ರಮಗಳನ್ನು ರೂಪಿಸಿ, ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರಿಗೆ ಮಲೆನಾಡಿನ ಬಿಜೆಪಿ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Categories
ಕರಾವಳಿ

ಮಣಿಪಾಲ: ಬೆಳ್ಳಂಬೆಳಗ್ಗೆ ಕಾರು ಅಪಘಾತ

ಮಣಿಪಾಲ: ಬೆಳ್ಳಂಬೆಳಗ್ಗೆ ಕಾರು ಅಪಘಾತ,

– ಮಂಗಳೂರು : ಪೊಲೀಸ್‌ ಹೆಸರಲ್ಲಿ ಕರೆ ಮಾಡಿ 50 ಲಕ್ಷ ರೂ. ವಂಚನೆ
– ಸುಳ್ಯ: ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯ ಬಂಧನ

NAMMUR EXPRESS NEWS
ಮಣಿಪಾಲ: ಈಶ್ವರ ನಗರದ ನಗರಸಭೆ ರೇಚಕದ ಬಳಿ ಹಳೆಯ ರಸ್ತೆಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ಮೋರಿಗೆ ಬಿದ್ದ ಘಟನೆ ಅ.27 ಬೆಳಗ್ಗೆ ನಡೆದಿದೆ. ಉಡುಪಿಯಿಂದ ಕುದುರೆಮುಖಕ್ಕೆ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಕಾರು ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ‌
ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ಅಡ್ಡವಾಗಿ ರಸ್ತೆ ಆಗೆದಿದ್ದು ಮತ್ತೆ ಹೊಂಡ ಬಿದ್ದಿದೆ, ರಸ್ತೆಯ ಸುತ್ತಮುತ್ತ ಹೊಂಡ ಇರುವುದರಿಂದ ವಾಹನ ಚಾಲಕರು ಅತ್ತಿಂದಿತ್ತ ಚಲಿಸಿ ನಿಯಂತ್ರಣ ತಪ್ಪಿ ಅಪಘಾತವು ದಿನನಿತ್ಯ ಆಗುವಂತಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

* ಮಂಗಳೂರು : ಪೊಲೀಸ್‌ ಹೆಸರಲ್ಲಿ ಕರೆ ಮಾಡಿ 50 ಲ.ರೂ. ವಂಚನೆ

ಮಂಗಳೂರು: ಪೊಲೀಸ್‌ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೋರ್ವರಿಂದ 50 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಅತನನ್ನು ಮಹಾರಾಷ್ಟ್ರದ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ವಿನಯ ಕುಮಾರ ಎಂದು ಪರಿಚಯಿಸಿಕೊಂಡಿದ್ದ. ಕಿರುಕುಳದ ಬಗ್ಗೆ ನಿಮ್ಮ ಮೇಲೆ ದೂರು ದಾಖಲಾಗಿದ್ದು ಠಾಣೆಗೆ ಬರಬೇಕು ಎಂದು ತಿಳಿಸಿದ. ಆಗ ದೂರುದಾರರು ತಾನು ಠಾಣೆಗೆ ಬರುವುದಿಲ್ಲ ಎಂದಾಗ, ಮೇಲಧಿಕಾರಿಗಳು ಕರೆ ಮಾಡುತ್ತಾರೆ ಎಂದ. ಬಳಿಕ ಆಕಾಶ ಕುಲ್ಲಹಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ತಾನು ಸಿಬಿಐನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ. ನರೇಶ್‌ ಗೋಯೆಲ್‌ ಎಂಬವರ ಮನೆಯನ್ನು ಜಪ್ತಿ ಮಾಡುವಾಗ ನಿಮ್ಮ ಎಟಿಎಂ ಕಾರ್ಡ್‌ ಸಿಕ್ಕಿದೆ ಎಂದು ಹೇಳಿದ್ದ.

* ಸುಳ್ಯ: ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯ ಬಂಧನ!

ಸುಳ್ಯ: ಸುಳ್ಯದಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ರಾಘವನ್‌ ಕೆದೀಶ್ವರನ್‌ ಆಲಿಯಾಸ್‌ ಕೋಳಿ ಕರಣ್‌ ಬಂಧಿತ ಆರೋಪಿ. ಕಳ್ಳತನ ಪ್ರಕರಣ ವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದು ಸುಳ್ಯ ಪೊಲೀಸ್‌ ಠಾಣೆಗೆ ಬೇಕಾಗಿದ್ದ ಅರೊಪಿಯನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿ ಕರೆ ತಂದ ಸಂದರ್ಭದಲ್ಲಿ ಸುಳ್ಯದ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಪೊಲೀಸರು ತಮಿಳುನಾಡಿನ ಸತ್ಯಮಂಗಲ ಎಂಬಲ್ಲಿಂದ ಬಂಧಿಸಿದ್ದರು.

Categories
ರಾಜ್ಯ

ಶೀಘ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಲ್ಲೂ ಡಿಜಿಟಲ್ ಪೇಮೆಂಟ್!

ಶೀಘ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಲ್ಲೂ ಡಿಜಿಟಲ್ ಪೇಮೆಂಟ್!
– ಯುಪಿಐ, ಎಟಿಎಂ ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ
– ಆ್ಯಂಡ್ರಾಯ್ಡ ಆಪರೇಟಿಂಗ್‌ನ ಟಚ್‌ ಸ್ಕ್ರೀನ್‌ ಯಂತ್ರ ಸೌಲಭ್ಯ
– ಹಣ ಇನ್ನು ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು

NAMMUR EXPRESS NEWS
Bengal: ಶೀಘ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಲ್ಲೂ ಡಿಜಿಟಲ್ ಪೇಮೆಂಟ್ ಜಾರಿಗೆ ಬರಲಿದೆ. ಈಗ ಎಲ್ಲಾ ಕಡೆ ಡಿಜಿಟಲ್ ಹಣ ವರ್ಗಾವಣೆ ಇರುವುದರಿಂದ ಕೆ.ಎಸ್. ಆರ್.ಟಿ.ಸಿ ಕೂಡ ಜಾರಿಗೆ ಮುಂದಾಗಿದೆ. ಯುಪಿಐ, ಎಟಿಎಂ ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ ಮಾಡಿಕೊಡಲು ಆ್ಯಂಡ್ರಾಯ್ಡ ಆಪರೇಟಿಂಗ್‌ನ ಟಚ್‌ ಸ್ಕ್ರೀನ್‌ ಯಂತ್ರ ಸೌಲಭ್ಯ ಸಿದ್ಧಮಾಡಿಕೊಳ್ಳಲಾಗುತ್ತಿದೆ. ಇನ್ನು ನಿಮ್ಮ ಮೊಬೈಲ್ ಅಲ್ಲೇ ಹಣ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು

ಈಗಾಗಲೇ ಮಾದರಿ ಯೋಜನೆ ಜಾರಿ!

ಕೆಎಸ್‌ಆರ್‌ಟಿಸಿಗೂ ಸ್ಮಾರ್ಟ್‌ ಟಿಕೆಟ್‌ ಯಂತ್ರಗಳು ಬಂದಿದ್ದು, ಪ್ರಯಾಣಿಕರು ಯುಪಿಐ ಮೂಲಕ ಕ್ಯೂಟರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿಸಬಹುದು. ಈ ನಗದು ರಹಿತ ವ್ಯವಸ್ಥೆಯು ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ವಾಯವ್ಯ ಸಾರಿಗೆಯವರು ಸ್ಕ್ಯಾನ್‌ ಮಾಡುವ ಯಂತ್ರವನ್ನು ಅಳವಡಿಸಿದ್ದಾರೆ. ಆದರೆ ಕೆಎಸ್‌ಆರ್‌ಟಿಸಿ ಎಟಿಎಂ ಕಾರ್ಡ್‌ ಮೂಲಕವೂ ಹಣ ಪಾವತಿಸಲು ಅವಕಾಶ ನೀಡಿದೆ. ಯಂತ್ರಗಳನ್ನು ನಿರ್ವಾಹಕರಿಗೆ ನೀಡುವ ಕಾರ್ಯ ಆರಂಭವಾಗಿದ್ದು, ಅದರ ನಿರ್ವಹಣೆ ಕರಗತವಾದ ಬಳಿಕ ಡಿಜಿಟಲ್‌ ಪಾವತಿ ಆರಂಭವಾಗಲಿದೆ.

ಆ್ಯಂಡ್ರಾಯ್ಡ ಯಂತ್ರ ಲಭ್ಯ: ಹೇಗೆ ಕಾರ್ಯಾಚರಣೆ?

ಈಗಿರುವ ಟಿಕೆಟ್‌ ವಿತರಣೆ ಯಂತ್ರಗಳ ಬದಲಿಗೆ ನಿರ್ವಾಹಕರಿಗೆ ಆ್ಯಂಡ್ರಾಯ್ಡ ಆಪರೇಟಿಂಗ್‌ನ ಟಚ್‌ ಸ್ಕ್ರೀನ್‌ ಸೌಲಭ್ಯದ ಸ್ಮಾರ್ಟ್‌ ವಿದ್ಯುನ್ಮಾನ ಟಿಕೆಟ್‌ ಯಂತ್ರ (ಇಟಿಎಂ) ನೀಡಲಾಗುತ್ತಿದೆ. 45 ಡಿಪೋಗಳಿಗೆ ಒದಗಿಸಲಾಗಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಎಲ್ಲ 83 ಡಿಪೋಗಳಿಗೆ 10,240 ಯಂತ್ರಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ಈ ವಿದ್ಯುನ್ಮಾನ ಯಂತ್ರಗಳಲ್ಲಿ ನಗದು ರಹಿತ ಟಿಕೆಟ್‌ ವ್ಯವಸ್ಥೆಯ ಸಾಫ್ಟ್‌ವೇರ್‌ ಅಳವಡಿಸಿ, ಅದರ ಕಾರ್ಯ ನಿರ್ವಹಣೆ, ಸಾಧಕ – ಬಾಧಕಗಳನ್ನು ಪರಿಶೀಲಿಸಿ, ಅನಂತರ ಎಲ್ಲ ಬಸ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಯಂತ್ರಗಳ ಬಳಕೆಗೆ ಸಂಬಂಧಿಸಿ ನಿರ್ವಾಹಕರು ಹಾಗೂ ಸಿಬಂದಿಗೆ ತರಬೇತಿ ನೀಡಲಾಗಿದೆ.

ಬಾಡಿಗೆ ಆಧಾರದಲ್ಲಿ ಯಂತ್ರಗಳ ಖರೀದಿ

ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ಗೆ ಸರಿ ಹೊಂದುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಖರೀದಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಸಮಗ್ರ ಟಿಕೆಟಿಂಗ್‌ ತಂತ್ರಾಂಶದ ವಿನ್ಯಾಸ, ಅಭಿವೃದ್ಧಿ, ಅನುಷ್ಠಾನ, ವೆಬ್‌ ಹೋಸ್ಟಿಂಗ್‌, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜತೆಗೆ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಯಂತ್ರಗಳ ಪೂರೈಕೆದಾರರನ್ನು ಆಯ್ಕೆ ಮಾಡಲು ದಿಲ್ಲಿ ಮೂಲದ ಮೇ ಎಬಿಕ್ಸ್‌ ಕ್ಯಾಶ್‌ ಸಂಸ್ಥೆ ಟೆಂಡರ್‌ ಪಡೆದುಕೊಂಡಿದೆ. ಎಲ್ಲ ಡಿಪೋಗಳಿಗೆ ವಿತರಣೆ ಆದ ಬಳಿಕ ಡಿಜಿಟಲ್ ಪಾವತಿ ಆರಂಭಿಸಲಾಗುವುದು. ಯಂತ್ರಗಳನ್ನು ತರಿಸಿದ ಬಳಿಕ ಅದರಲ್ಲಿ 52 ಸುಧಾರಣೆಗಳನ್ನು ಮಾಡಲಾಗಿದೆ. ಯುನಿಕೋಡ್ ಮೊದಲಾದ ಕನ್ನಡ ಅಕ್ಷರಗಳು ಸಹಿತ ಅನೇಕ ನಿರ್ವಾಹಕರು ಬದಲಾವಣೆಗಳಾಗಿದ್ದು, ಯಂತ್ರದ ಸರಿಯಾಗಿ ನಿರ್ವಹಣೆಯನ್ನು ಕಲಿತ ಬಳಿಕ ಡಿಜಿಟಲ್ ಪಾವತಿ ಆರಂಭವಾಗಲಿದೆ ಎಂದು ಕೆಎಸ್‌ಆರ್ ಟಿಸಿಯ ನಿಗಮ ಕಾರ್ಯದರ್ಶಿ ಡಾ| ಟಿ.ಎಸ್. ಲತಾ ತಿಳಿಸಿದ್ದಾರೆ.

Categories
ರಾಜ್ಯ

ದೀಪಾವಳಿಗೆ ಬಸ್ ದುಬಾರಿ: ಈಗ್ಲೇ ಬುಕ್ ಮಾಡ್ಕೊಳ್ಳಿ..!

ದೀಪಾವಳಿಗೆ ಬಸ್ ದುಬಾರಿ: ಈಗ್ಲೇ ಬುಕ್ ಮಾಡ್ಕೊಳ್ಳಿ..!
– ದುಬಾರಿ ದರ: ಕಡಿವಾಣ ಹಾಕಲು ಮುಂದಾದ ಸರ್ಕಾರ
– ಭಾರೀ ಟ್ರಾಫಿಕ್ ಸಾಧ್ಯತೆ: ಈಗಲೇ ಪ್ಲಾನ್ ಮಾಡಿಕೊಳ್ಳಿ..!

NAMMUR EXPRESS NEWS
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಿಂಗಳಾಂತ್ಯ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಸಾಲು ಸಾಲು ರಜೆಗಳಿದ್ದು, ಖಾಸಗಿ ಬಸ್‌ ಮಾಲೀಕರಿಗೆ ಹಬ್ಬವೋ ಹಬ್ಬ. ಯಾಕಂದ್ರೆ ಸಾಲು ಸಾಲು ರಜೆ ಇರುವುರಿಂದ ಟಿಕೆಟ್‌ ದರ ಹೆಚ್ಚಳದ ಚಿಂತನೆ ನಡೆಸಿದ್ದಾರೆ, ಇದೀಗ ಇದಕ್ಕೆ ರಾಜ್ಯ ಸಾರಿಗೆ ಇಲಾಖೆ ಕಡಿವಾಣ ಹಾಕಲು ಮುಂದಾಗಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಆನ್ ಲೈನ್ ಮೂಲಕ ಟಿಕೆಟ್ ದರವನ್ನು ಹೆಚ್ಚಿಸಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಖಾಸ್ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

ಅಲ್ಲದೇ ಸಾರ್ವಜನಿಕ ಸೇವಾ ವಾಹನಗಳಲ್ಲಿ ಸ್ಪೋಟಕ ಸಾಮಗ್ರಿಗಳ ಸಾಗಾಣಿಕೆಗೆ ‌ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಸಾರಿಗೆ ಇಲಾಖೆ, ಖಾಸಗಿ ಬಸ್ ಗಳು ಹೆಚ್ಚಿನ ಟಿಕೆಟ್ ದರ ಸಂಗ್ರಹಿಸಿದ್ರೆ ಸಾರ್ವಜನಿಕರು ದೂರು ನೀಡುವಂತೆ ಮನವಿ ಮಾಡಿದೆ. ನಿಯಂತ್ರಣ ಕೊಠಡಿ ಸಂಖ್ಯೆ-9449863429,9449863426 ಕರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ರಾಜ್ಯ ಸಾರಿಗೆ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲೂ ಮಾಮೂಲಿಗಿಂತ ಮೂರು ಪಟ್ಟು ಹೆಚ್ಚಿನ ಪ್ರಯಾಣ ದರ ವಸೂಲಿಗೆ ಮುಂದಾಗಿವೆ.

ದೀಪಾವಳಿ ಭಾರೀ ಟ್ರಾಫಿಕ್ ಜಾಮ್ ಸಾಧ್ಯತೆ

ದೀಪಾವಳಿ ಹಬ್ಬ ವಾರದ ಅಂತ್ಯದಲ್ಲಿ ಬಂದಿರುವುದರಿಂದ ಬೆಂಗಳೂರು ಸೇರಿ ಬಹುತೇಕ ಕಡೆಗಳಿಂದ ತಮ್ಮ ಊರುಗಳಿಗೆ ಜನ ಹೋಗುವುದರಿಂದ ಭಾರೀ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಬಸ್ ಅಥವಾ ರೈಲು ಟಿಕೆಟ್ ಈಗಲೇ ಬುಕ್ ಮಾಡಿ ದೃಡೀಕರಣ ಮಾಡಿಕೊಳ್ಳಿ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನವಾಗಿರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದರೂ, ನೀವು ಕೆಲಸದ ನಿಮಿತ್ತ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಿಶೇಷ ಸ್ನೇಹಿತರ ಸಹಾಯದಿಂದ, ನೀವು ಹಣಕಾಸಿನ ಮುಗ್ಗಟ್ಟುಗಳಿಂದ ಪರಿಹಾರವನ್ನು ಪಡೆಯುತ್ತೀರಿ.

** ವೃಷಭ ರಾಶಿ :
ವೃಷಭ ರಾಶಿಯ ಜನರು ಇಂದು ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಸಂವಾದದ ಮೂಲಕ ಕುಟುಂಬದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು.

** ಮಿಥುನ ರಾಶಿ :
ಇಂದು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯದ ಲಕ್ಷಣಗಳಿವೆ. ಕಚೇರಿಯಲ್ಲಿ ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ಹಣಕಾಸಿನ ನಷ್ಟ ಉಂಟಾಗಬಹುದು, ಆದ್ದರಿಂದ ಬಹಳ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇಂದು ಸಾಲ ನೀಡುವುದನ್ನು ತಪ್ಪಿಸಿ. ಇದರಿಂದ ನೀವು ತೊಂದರೆಗಳನ್ನು ಎದುರಿಸಬಹುದು.

** ಕರ್ಕಾಟಕ ರಾಶಿ :
ಇಂದು ನೀವು ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ವೃತ್ತಿಪರ ಜೀವನದಲ್ಲಿ ಹೊಸ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ. ಕೆಲವರು ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಇಂದು, ಯಾವುದೇ ಅಪರಿಚಿತರಿಗೆ ಸಾಲ ನೀಡುವುದನ್ನು ತಪ್ಪಿಸಿ. ಕುಟುಂಬದೊಂದಿಗೆ ಸಮಯ ಕಳೆಯಿರಿ.

** ಸಿಂಹ ರಾಶಿ :
ಇಂದು ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆ ದೂರವಾಗಲಿದೆ. ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕಾನೂನು ವಿಷಯಗಳಲ್ಲಿ ಜಯ ದೊರೆಯಲಿದೆ. ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭವಿದೆ. ಇಂದು ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸಲು ಯೋಜಿಸಬಹುದು.

** ಕನ್ಯಾ ರಾಶಿ :
ಇಂದು ನಿಮಗೆ ಶುಭ ದಿನವಾಗಿರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ನಿಮ್ಮ ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಮಾಡುವಿರಿ. ಉದ್ಯೋಗದಲ್ಲಿ ಜನರು ನಿಮ್ಮ ಕೆಲಸವನ್ನು ಹೊಗಳುತ್ತಾರೆ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು. ಇಂದು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ.

** ತುಲಾ ರಾಶಿ :
ಇಂದು ನಿಮ್ಮ ಜೀವನದಲ್ಲಿ ಹಲವು ಸವಾಲುಗಳು ಎದುರಾಗಲಿವೆ. ಆದರೆ, ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಹೊಸ ಹೂಡಿಕೆ ಆಯ್ಕೆಗಳ ಮೇಲೆ ನಿಗಾ ಇರಿಸಿ. ಯಾವುದೋ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ನಿಮ್ಮ ಮಾನಸಿಕ ಆರೋಗ್ಯಕ್ಕೆ ಗಮನ ಕೊಡಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ವ್ಯವಹಾರ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತಜ್ಞರಿಂದ ಸಲಹೆ ಪಡೆಯಲು ಹಿಂಜರಿಯಬೇಡಿ.

** ವೃಶ್ಚಿಕ ರಾಶಿ :
ಇಂದು ಕೆಲಸದ ಸ್ಥಳದಲ್ಲಿ ನಡೆಯುವ ರಾಜಕೀಯದಿಂದ ದೂರವಿರಿ. ನಿಮ್ಮ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸಿ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಇಂದು ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ.

** ಧನಸ್ಸು ರಾಶಿ :
ವೃತ್ತಿಪರ ಜೀವನದಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಆಫೀಸ್ ಗಾಸಿಪ್‌ಗಳಿಂದ ದೂರವಿರಿ. ಹೊಸ ಯೋಜನೆಯನ್ನು ಪ್ರಾರಂಭಿಸಲು ಹಿಂಜರಿಯಬೇಡಿ. ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಂವಾದದ ಮೂಲಕ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಇಂದು ನಿಮ್ಮ ಕೆಲಸದಲ್ಲಿ ಅಡಚಣೆ ಉಂಟಾಗಬಹುದು.

** ಮಕರ ರಾಶಿ :
ಈ ದಿನ ಜೀವನದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಹಠಾತ್ ಪ್ರವಾಸದ ಸಾಧ್ಯತೆ ಇರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಹಣ ವಾಪಸ್ ಬರಲಿದೆ. ಹಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಇಂದು ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

** ಕುಂಭ ರಾಶಿ :
ಇಂದು ನಿಮ್ಮ ಜೀವನದಲ್ಲಿ ಹಲವು ಏರಿಳಿತಗಳು ಎದುರಾಗಬಹುದು. ಮನಸ್ಸಿನಲ್ಲಿ ಭರವಸೆ ಮತ್ತು ಹತಾಶೆಯ ಭಾವನೆ ಮೂಡಬಹುದು. ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಇಂದು ಹಣದ ವ್ಯವಹಾರಗಳನ್ನು ತಪ್ಪಿಸಿ. ಸಂಬಂಧಗಳಲ್ಲಿ ಅಂತರ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು.

** ಮೀನ ರಾಶಿ :
ಇಂದು ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಂಭವವಿದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ, ಆದರೆ ನಿಮ್ಮ ಸಂಗಾತಿಯೊಂದಿಗೆ ತೊಂದರೆಗೆ ಸಿಲುಕಬೇಡಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಇಂದು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಹೂಡಿಕೆಯ ಆಯ್ಕೆಗಳ ಮೇಲೆ ಕಣ್ಣಿಡಿ, ಆದರೆ ತಜ್ಞರ ಸಲಹೆಯಿಲ್ಲದೆ ಹೂಡಿಕೆ ಮಾಡುವುದನ್ನು ತಪ್ಪಿಸಿ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜು ಹಳೆಯ ವಿದ್ಯಾರ್ಥಿಗಳ ಸಮಾವೇಶ

ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜು ಹಳೆಯ ವಿದ್ಯಾರ್ಥಿಗಳ ಸಮಾವೇಶ
– ಅ.31ರಂದು ತೀರ್ಥಹಳ್ಳಿ ಟಿ.ಎ. ಪಿ. ಸಿ.ಎಂ.ಎಸ್ ಅಲ್ಲಿ ಸಮಾವೇಶ
– ಸಮಸ್ತ ಹಳೆಯ ವಿದ್ಯಾರ್ಥಿಗಳಿಗೆ ಆಹ್ವಾನ: ಸುಸ್ವಾಗತ

ತೀರ್ಥಹಳ್ಳಿ: ಸರ್ಕಾರಿ ಪದವಿ ಪೂರ್ವ ಕಾಲೇಜು, ತೀರ್ಥಹಳ್ಳಿ ಇದರ ಹಳೆಯ ವಿದ್ಯಾರ್ಥಿಗಳ ಸಮಾವೇಶ ಅ.31ರಂದು ಬೆಳಿಗ್ಗೆ 10.30 ಗಂಟೆಗೆ ತೀರ್ಥಹಳ್ಳಿಯ TAPCMS ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ತಾವು ಹಾಗೂ ತಮ್ಮ ಸ್ನೇಹಿತರನ್ನು ಈ ಸಮಾಲೋಚನಾ ಸಭೆಗೆ ಕರೆದುಕೊಂಡು ಬರಲು ಕೋರಲಾಗಿದೆ.ಕಾಲೇಜಿನ ಅಭಿವೃದ್ಧಿ ಜತೆಗೆ ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಈ ಸಮಾವೇಶ ವೇದಿಕೆ ಆಗಲಿದೆ. ಪ್ರೀತಿಯ ಹಳೆಯ ವಿದ್ಯಾರ್ಥಿಗಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ನಿಮ್ಮ ಸಲಹೆ ಸೂಚನೆ ನೀಡಿ. ಕಾಲೇಜಿನ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ಸಂಚಾಲಕರು ಮನವಿ ಮಾಡಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಒಂದು ವೇದಿಕೆಯನ್ನು ಸೃಷ್ಟಿ ಮಾಡಿದೆ.. ಈ ಕಾಲೇಜು 1982ರಲ್ಲಿ ಶುರುವಾಗಿ ಹದಿನೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಎಲ್ಲಾ ಕಾಲೇಜುಗಳಂತೆ ತೀರ್ಥಹಳ್ಳಿ ತಾಲೂಕಿಗೆ ಅನೇಕ ಸಾಧಕರು, ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಕಾಲೇಜನ್ನು ಮತ್ತಷ್ಟು ಗಟ್ಟಿಗೊಳಿಸಲು ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಈ ಸಮಾವೇಶ ಹಮ್ಮಿಕೊಂಡಿದ್ದಾರೆ. ಕಾಲೇಜಿನಲ್ಲಿ 1982ನೇ ಇಸವಿಯಿಂದ 2022 ರವರೆಗೆ ದಾಖಲಾಗಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಜತೆ ಭಾಗಿಯಾಗಲು ಕೋರಲಾಗಿದೆ. ಹಾಗೆಯೇ ತಮ್ಮ ಬ್ಯಾಚಿನ ಹಾಗೂ ಈ ಕಾಲೇಜಲ್ಲಿ ಓದಿದ ಸ್ನೇಹಿತ ಸ್ನೇಹಿತೆಯರಿಗೆ ಹಂಚಿಕೊಳ್ಳಲು ಮನವಿ ಮಾಡಲಾಗಿದೆ.

Categories
ಚಿತ್ರದುರ್ಗ

ಮೊಬೈಲ್ ಮಾಯೆ ಮಕ್ಕಳನ್ನು ಹಾಳು ಮಾಡುತ್ತಿದೆ

ಮೊಬೈಲ್ ಮಾಯೆ ಮಕ್ಕಳನ್ನು ಹಾಳು ಮಾಡುತ್ತಿದೆ
– ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ವಿಚಾರ ಸಂಕಿರಣ
– ಸಮಾಜದಲ್ಲಿ ಧರ್ಮಸ್ಥಳ ಯೋಜನೆಯಿಂದ ಸಾಮಾಜಿಕ ಕ್ರಾಂತಿ

NAMMUR EXPRESS NEWS
ಹೊಸದುರ್ಗ:
ಜಾಗತೀಕರಣದ ಹಾವಳಿಯಿಂದಾಗಿ ಮನುಷ್ಯ ಮನುಷ್ಯರ ಮಧ್ಯೆ ಸಂಬಂಧವೇ ದೂರವಾಗಿದೆ. ಮೊಬೈಲ್ ಎಂಬ ಮಾಯೆ ಮಕ್ಕಳನ್ನ ಬಿಡದೆ ಬಾಧಿಸುತ್ತಿದೆ. ಇದು ಇದೇ ರೀತಿ ಮುಂದುವರೆದರೆ ತಂದೆ ಮಕ್ಕಳ ಬಾಂಧವ್ಯದ ಬದುಕೆ ದೂರವಾಗಿದ್ದು ಅತಿಯಾದ ಮೊಬೈಲ್ ಬಳಕೆಯಿಂದ ಭಾವನಾತ್ಮಕ ಸಂಬಂಧ ದೂರವಾಗಿ ಬುದ್ಧಿಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ ಎಂದು ಭದ್ರಾವತಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಾಧಾಕೃಷ್ಣ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಲು ರಾಮೇಶ್ವರ ಯೋಜನಾ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು.
ನಾವೆಲ್ಲಾ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬದುಕು ಕಟ್ಟಿಕೊಂಡೆವು. ನಮ್ಮ ಮಕ್ಕಳಿಗೆ ಕಾನ್ವೆಂಟ್ ಶಿಕ್ಷಣ ಕೊಡಿಸುವುದರ ಮೂಲಕ ಅವರ ಭಾವನಾತ್ಮಕ ಸಂಬಂಧವನ್ನೇ ಹಾಳು ಮಾಡುತ್ತಿದ್ದೇವೆ. ನಾವು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕೊಡುವ ಜವಾಬ್ದಾರಿ ತಾಯಂದಿರ ಮೇಲೆ ಇರುತ್ತದೆ. ಮಗು ಪೋಷಕರನ್ನ ಅಥವಾ ತಂದೆ-ತಾಯಿಯನ್ನು ಬಿಟ್ಟು ಇರಬಹುದು. ಆದರೆ, ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲದಂತ ಪರಿಸ್ಥಿತಿಗೆ ಮಗುವನ್ನ ತಂದು ಬಿಟ್ಟಿದ್ದೇವೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಏನೇಂಬುದನ್ನ ನಾವು ಅರಿಯಬೇಕಿದೆ. ಚಿಕ್ಕ ವಯಸ್ಸಿನಲ್ಲಿ ಮಗು ಅಳುವಾಗ ತಕ್ಷಣ ಮಗುವಿನ ಕೈಗೆ ಮೊಬೈಲ್ ಕೊಡುವ ಚಾಳಿಯನ್ನು ಬೆಳೆಸಿಕೊಂಡಿದ್ದೇವೆ. ಅತಿಯಾದ ಮೊಬೈಲ್ ಬಳಸಿದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅವನ ಶೈಕ್ಷಣಿಕ ಬುದ್ಧಿಮಟ್ಟ ಕುಂಠಿತವಾಗುತ್ತದೆ. ಶಿಕ್ಷಣದ ಭವಿಷ್ಯಕ್ಕೆ ಮಿತವಾದ ಮೊಬೈಲ್ ಬಳಕೆ ಜೀವನಕ್ಕೆ ದಾರಿಯಾಗಬಲ್ಲದು ಎಂದು ಹೇಳಿದರು.
ಕೇಂದ್ರ ಬ್ಯಾಂಕ್ ವಿಶ್ರಾಂತ ವ್ಯವಸ್ಥಾಪಕಿ ನಾಗಲಾಂಬಿಕ ಕಲ್ಮಠ ಮಾತನಾಡಿ, ಮೊಬೈಲ್ ದುರ್ಬಳಕೆಯನ್ನು ಹೊರತುಪಡಿಸಿ ನಮ್ಮ ಮಕ್ಕಳ ಹಬ್ಬದ ಬಗ್ಗೆ ಪೋಷಕರಾದ ನಾವುಗಳು ಏಳ್ಗೆ ಬಯಸಬೇಕು ಎಂದರು.
ಕಳೆದ 50 ವರ್ಷಗಳಿಂದ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಡೆಯವರು ಕೇವಲ ಧರ್ಮಸ್ಥಳವನ್ನಲ್ಲದೆ ನಾಡಿನ ಎಲ್ಲಾ ಸ್ಥಳಗಳ ಅಭಿವೃದ್ಧಿಯ ಚಿಂತನೆ ನಡೆಸಿ ಬಿ ಸಿ ಟ್ರಸ್ಟ್ ಮುಖಾಂತರ ನೊಂದ ಬಡ ಕುಟುಂಬಗಳ ಅಭಿವೃದ್ಧಿಗಾಗಿ ತನ್ನನ್ನ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರು ಮಾಡುತ್ತಿರುವ ನೂರಾರು ಜನಪರ ಕಾರ್ಯಕ್ರಮಗಳು ನಾಡಿನ ಜನರನ್ನ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯತ್ತ ಕೊಂಡಯುವಲ್ಲಿ ಧರ್ಮಸ್ಥಳ ಸಂಘ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ
ಗೂಳಿಹಟ್ಟಿ ಕೃಷ್ಣಮೂರ್ತಿ ಹೇಳಿದರು
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಸಿಂಧೂ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಚಂದ್ರಶೇಖರ್ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಗೂಳಿಹಟ್ಟಿ ಕೃಷ್ಣಮೂರ್ತಿ, ತುಂಬಿನಕೆರೆ ಬಸವರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗಂಗಮ್ಮ, ವಲಯ ಮೇಲ್ವಿಚಾರಕ ನಾಗರಾಜ್ ಮತ್ತು ಜ್ಞಾನವಿಕಾಸ ಸೇವಾ ಪ್ರತಿನಿಧಿಗಳು ಇದ್ದರು.

Categories
ಅಡಿಕೆ-ದರ

ಮಾರುಕಟ್ಟೆಯಲ್ಲಿ ಅಡಕೆ ರೇಟು ಎಷ್ಟಿದೆ ಗೊತ್ತಾ??

ಮಾರುಕಟ್ಟೆಯಲ್ಲಿ ಅಡಕೆ ರೇಟು ಎಷ್ಟಿದೆ ಗೊತ್ತಾ??

* ಬೆಟ್ಟೆ,ರಾಶಿ ಬೆಲೆ ಹೇಗಿದೆ?

NAMMUR EXPRESS NEWS
ಬೆಟ್ಟೆ
48009 – 56109

ಸರಕು
53190 – 90170

ಗೊರಬಲು
17650 – 34590

ರಾಶಿ
35069 – 50189

ನ್ಯೂ ವೆರೈಟಿ
45539 – 49461