Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ನಲ್ಲಿ ಮಲೆನಾಡು ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ನಲ್ಲಿ ಮಲೆನಾಡು ವಿದ್ಯಾರ್ಥಿಗಳ ಸಾಧನೆ
– ತೀರ್ಥಹಳ್ಳಿ, ನರಸಿಂಹ ರಾಜಪುರ ಮಕ್ಕಳ ಸಾಧನೆ
– 3200ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಮಲೆನಾಡ ಹುಡುಗರ ಸಾಧನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತಮಿಳುನಾಡಿನ ಪುದುಚೇರಿಯಲ್ಲಿ ಇತ್ತೀಚೆಗೆ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 21ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಸುಮಾರು 3200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಡಿಸಿಎಂಸಿ ಸೆಂಟರ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಶಾಲೆಯ ವಿದ್ಯಾರ್ಥಿಗಳು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

ಸಾಧಕ ಮಕ್ಕಳಿಗೆ ಅಭಿನಂದನೆ

ಚಿರನ್ ಅವರು ಓಪನ್ ಕೆಟಗರಿಯಲ್ಲಿ ವಿಜೇತರಾಗಿದ್ದು, ಅಕ್ಷರ ಅವರು ‘ಬಿ’ ಕೆಟಗರಿಯಲ್ಲಿ ದ್ವಿತೀಯ ಬಹುಮಾನವನ್ನು ಮತ್ತು ಅಭಿವೃದ್ಧ್ ಅವರು ‘ಸಿ’ ಕೆಟಗರಿಯಲ್ಲಿ ದ್ವಿತೀಯ ಬಹುಮಾನವನ್ನು ಗಳಿಸುವುದರ ಮೂಲಕ ಮಲೆನಾಡು ಭಾಗಕ್ಕೆ ಕೀರ್ತಿಯನ್ನು ತಂದಿದ್ದಾರೆ.

Join Abacus summer camp
Abacus summer camp with maths application that helps JEE foundation /Olympiad and Navodaya exams.
IPA, 2nd floor, Yadehalli society Building, Thirthahalli
Contact : 9740069897

Categories
ರಾಜ್ಯ ರಾಷ್ಟ್ರೀಯ ವಾರ್ತೆ ಹಬ್ಬಗಳು

ರಂಗಿನ ಹಬ್ಬ ಹೋಳಿ ಸಂಭ್ರಮ!

ರಂಗಿನ ಹಬ್ಬ ಹೋಳಿ ಸಂಭ್ರಮ!
– ದೇಶದ ಎಲ್ಲೆಡೆ ಹೋಳಿ ಹಬ್ಬದ ಸಡಗರ
– ಹೋಳಿ ಜತೆಗೆ ಜಾನಪದರ ಕುಣಿತ ವಿಶೇಷ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ವಿಶೇಷ ವರದಿ: ರಚನಾ ಕಾಮತ್

ಬಣ್ಣಗಳ ಹಬ್ಬವಾದ ಹೋಳಿಯನ್ನು ಆಚರಿಸಲು ಕೂಡ ಎರಡು ರೀತಿಯ ಪೌರಾಣಿಕ ಹಿನ್ನೆಲೆ ಇದೆ. ಹೋಳಿ ಹುಣ್ಣಿಮೆಯನ್ನು ಸೋಮವಾರ ದೇಶಾದ್ಯಂತ ಸಡಗರದ ಜೊತೆಗೆ, ಪ್ರತಿಯೊಂದು ಪ್ರಾಂತ್ಯದಲ್ಲೂ ವಿಭಿನ್ನ ಶೈಲಿಯಲ್ಲಿ, ತನ್ನದೇ ಆದ ಸಂಪ್ರದಾಯದೊಂದಿಗೆ ಆಚರಿಸಲಾಗುತ್ತಿದೆ. ಎಲ್ಲೆಡೆ ಬಣ್ಣ ಎರಚಿ ಹಬ್ಬವನ್ನು ಆಚರಣೆ ಮಾಡಲಾಗಿದೆ.

ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಇದು ಫೆಬ್ರವರಿ ತಿಂಗಳ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬರುತ್ತದೆ. ಈ ಬಾರಿ ಹೋಳಿ ಹಬ್ಬವು ಮಾರ್ಚ್ 3ರಂದು ಕಾಮದಹನ ಮತ್ತು 4ರಂದು ಬಣ್ಣಗಳೊಂದಿಗೆ ಆಚರಿಸಲಾಗುತ್ತಿದೆ.

ಹೋಳಿ ಹುಣ್ಣಿಮೆ ಎಂದರೆ ಎಲ್ಲರೂ ಒಂದಾಗಿ ಬೆರೆತು ಬಣ್ಣದ ಪುಡಿಗಳನ್ನು, ಪಿಚಕಾರಿಯ ಮೂಲಕ ಬಣ್ಣದ ನೀರನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸುವುದಷ್ಟೇ ಅಲ್ಲದೆ, ಮಾನವನ ಬದುಕಿಗೆ ಉತ್ತಮ ಸಂದೇಶವನ್ನು ಸಹ ನೀಡುತ್ತದೆ.‌ಮನುಷ್ಯನ ಜೀವನ ಕೆಟ್ಟ ಸಂಗತಿಗಳಿಂದ ಮುಕ್ತವಾಗಿ ಸದಾ ವರ್ಣಮಯವಾಗಿರಲಿ ಎನ್ನುವ ಉದ್ದೇಶವನ್ನು ಈ ಹಬ್ಬವು ಹೊಂದಿದೆ.‌ ಜೊತೆಗೆ ಇದಕ್ಕೆ ಎರಡು ಪೌರಾಣಿಕ ಹಿನ್ನೆಲೆ ಇವೆ.‌

ಹೋಳಿ ಹಬ್ಬದ ಪುರಾಣ ಏನು ಹೇಳುತ್ತೆ?

ಹಿರಣ್ಯಕಶಿಪುವಿಗೆ ಹೋಲಿಕ ಎನ್ನುವ ಸಹೋದರಿಯೊಬ್ಬಳಿದ್ದು, ಪ್ರಹ್ಲಾದನನ್ನು ಕೊಲ್ಲಲು ಆತನಿಗೆ ಸಹಾಯ ಮಾಡುತ್ತಿರುತ್ತಾಳೆ. ಹೋಲಿಕ ಬಳಿ ಒಂದು ವಸ್ತ್ರವಿದ್ದು, ಅದು ಅಗ್ನಿಯಿಂದ ರಕ್ಷಿಸುವಂತಿರುತ್ತದೆ. ಹೀಗಾಗಿ ಹೋಲಿಕ ಆ ವಸ್ತ್ರವನ್ನು ಸುತ್ತಿಕೊಂಡು ಪ್ರಹ್ಲಾದನನ್ನು ತೊಡೆಯ ಮೇಲೆ ಕೂರಿಸಿಕೊಂಡು, ಅಗ್ನಿಯಲ್ಲಿ ಕುಳಿತುಕೊಳ್ಳುತ್ತಾಳೆ. ಆಗ ವಿಷ್ಣುವು ಹೋಲಿಕಾ ಸುತ್ತಿಕೊಂಡಿದ್ದ ವಸ್ತ್ರವು ಜಾರಿ ಪ್ರಹ್ಲಾದನನ್ನು ಸುತ್ತುವರಿಯುವಂತೆ ಮಾಡುತ್ತಾನೆ.

ಇದರಿಂದಾಗಿ ಪ್ರಹ್ಲಾದನು ಅಗ್ನಿಯಿಂದ ರಕ್ಷಿಸಲ್ಪಟ್ಟು, ಹೋಲಿಕ ಅಗ್ನಿಗೆ ಆಹುತಿಯಾಗುತ್ತಾಳೆ. ಇದರ ಕುರುಹಾಗಿ ಎಲ್ಲೆಡೆ ಅಸತ್ಯ ಮತ್ತು ಅಮಂಗಳವನ್ನು ಸುಡುವ ‘ಹೋಲಿಕ ದಹನ’ವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಇದು ಭಕ್ತಿ ಮತ್ತು ನ್ಯಾಯದ ಗೆಲುವಿನ ಸಂಕೇತಗಳಾಗಿ ಮಾಡಲಾಗುತ್ತದೆ.

ರಾಜ್ಯದ ವಿವಿಧ ಭಾಗದಲ್ಲಿ ಆಚರಣೆ

ಉತ್ತರ ಕರ್ನಾಟಕ ಭಾಗದಲ್ಲಿ ಶಿವನು ಮನ್ಮಥನನ್ನು ತನ್ನ ಮೂರನೇ ಕಣ್ಣನ್ನು ತೆರೆದು ಸುಟ್ಟ ಪ್ರತಿಯಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಅಂದರೆ ಮನುಷ್ಯನಲ್ಲಿ ಅಡಗಿರುವ ಕಾಮ,ಕ್ರೋಧ, ಲೋಭ,ಮೋಹ, ಮದ ಮತ್ತು ಮತ್ಸರದಂತಹ ಗುಣಗಳನ್ನು ಸುಟ್ಟು ಭಸ್ಮ ಮಾಡಿ, ನಿಷ್ಕಲ್ಮಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎನ್ನುವುದರ ಆಧ್ಯಾತ್ಮಿಕ ಸಂಕೇತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಪದ ಹಿನ್ನೆಲೆ ಇದೆ.

ಮಲ್ಲೇಶಿ ಎನ್ನುವ ಬೇಡರ ಜನಾಂಗದ ಯುವಕನು ತನ್ನ ಅಧಿಕಾರ ಮದದಿಂದ ಕೊಬ್ಬಿ, ಜನರಿಗೆ ತೊಂದರೆ ನೀಡುತ್ತಾ ರಾತ್ರಿಯ ವೇಳೆ ತಮಟೆಯ ತಾಳಕ್ಕೆ ಕುಣಿಯುತ್ತಾ ಗಸ್ತು ತಿರುಗುತ್ತಿರುತ್ತಾನೆ. ಈ ಸಂದರ್ಭದಲ್ಲಿ ಸ್ತ್ರೀ ವ್ಯಾಮೋಹಿಯಾದ ಮಲ್ಲೇಶಿಯ ಕಣ್ಣು ದಾಸಪ್ಪ ಶೆಟ್ಟಿಯ ಮಗಳಾದ ರುದ್ರಾಂಬಿಕೆಯ ಮೇಲೆ ಬೀಳುತ್ತದೆ. ದುಷ್ಟನಾದ ಮಲ್ಲೇಶಿಯನ್ನು ರುದ್ರಾಂಬಿಕೆಯು ಸಮಾಜದ ಕಲ್ಯಾಣಕ್ಕಾಗಿ ವರಿಸಲು ಒಪ್ಪಿಕೊಳ್ಳುತ್ತಾಳೆ. ಎಂದಿನಂತೆ ಗಸ್ತು ತಿರುಗುತ್ತಿದ್ದ ತನ್ನ ಗಂಡನಾದ ಮಲ್ಲೇಶಿಯ ಮುಖದ ಮೇಲೆ ಹೋಳಿ ಹುಣ್ಣಿಮೆಯ ರಾತ್ರಿ ರುದ್ರಾಂಬಿಕೆ ಆಮ್ಲವನ್ನು ಎರಚುತ್ತಾಳೆ.

ಆಗ ಮಲ್ಲೇಶಿಗೆ ಕಣ್ಣು ಕಾಣದಂತಾಗಿ, ಕ್ರೋಧಗೊಂಡು ರುದ್ರಾಂಬಿಕೆಯನ್ನು ಅಟ್ಟಿಸಿಕೊಂಡು ಬರುತ್ತಾನೆ. ಆಗ 12 ಜನ ಸ್ಥಳೀಯರು ಮಲ್ಲೇಶಿಯನ್ನು ಹಿಡಿದು, ಕಟ್ಟಿಹಾಕಿ, ಆತನನ್ನು ಜೀವಂತವಾಗಿ ಸುಡುತ್ತಾರೆ. ಬಳಿಕ ರುದ್ರಾಂಬಿಕೆ ಚಿತೆಗೆ ಹಾರಿ ತನ್ನ ಪ್ರಾಣವನ್ನು ಬಿಡುತ್ತಾಳೆ. ಇದರ ದ್ಯೋತಕವಾಗಿ ಪ್ರತಿ ವರ್ಷ ಬೇಡರ ವೇಷ ಎನ್ನುವ ಜನಪದ ಸಂಪ್ರದಾಯವು ಆಚರಿಸಲ್ಪಡುತ್ತದೆ. ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವುದರ ಹಿಂದಿರುವ ಕಾರಣ ಕೂಡ ಇದೇ ಆಗಿರಬಹುದು.

ಹೋಳಿ ಕುಣಿತ ವಿಶೇಷ…

ಕರಾವಳಿ ಭಾಗದಲ್ಲಿ ಹೋಳಿ ಹುಣ್ಣಿಮೆಯನ್ನು ಸುಗ್ಗಿ ಹಬ್ಬವನ್ನಾಗಿ ಒಂದು ರೀತಿಯ ಜನಪದ ಶೈಲಿಯಲ್ಲಿ ಆಚರಿಸಲಾಗುತ್ತದೆ.
ಸುಗ್ಗಿ ಕುಣಿತದ ತಂಡ ಸಾಂಪ್ರದಾಯಿಕ ಉಡುಗೆಯೊಂದಿಗೆ, ತಲೆಗೆ ಬಣ್ಣದ ತುರಾಯಿಯನ್ನು ಧರಿಸಿಕೊಂಡು, ಪೇಟಗುಮಟೆ ವಾದ್ಯಗಳೊಂದಿಗೆ ಮನೆ ಮನೆಗೆ ತೆರಳಿ ಸುಗ್ಗಿಯ ಸಂಭ್ರಮವನ್ನು ಆಚರಿಸುತ್ತಾರೆ. ಮರಾಠಿ ನಾಯ್ಕ ಸಮುದಾಯವು ಇದರ ಮುಂಚೂಣಿಯಲ್ಲಿರುತ್ತದೆ.

ತಲೆಗೆ ಬಣ್ಣದ ತುರಾಯಿ ಪೇಟವನ್ನು ಕಟ್ಟಿ ಏಳು ದಿನಗಳ ಕಾಲ ಕುಣಿಯುತ್ತಾರೆ. ಇದಕ್ಕೆ ಗುಮಟೆ ಮತ್ತು ಜಾಗಟೆಯ ಸದ್ದು ಮತ್ತಷ್ಟು ಮೆರಗು ನೀಡುತ್ತದೆ. ಈ ಸಂದರ್ಭದಲ್ಲಿ ಸುಗ್ಗಿ ಕುಣಿತದ ತಂಡವು ಪ್ರತಿಯೊಂದು ಮನೆಯಿಂದ ಹಣ, ಊಟ, ತಿಂಡಿ ಮೊದಲಾದವುಗಳನ್ನು ಸ್ವೀಕರಿಸುತ್ತಾರೆ.‌ ಹೋಳಿ ಹಬ್ಬದ ದಿನ ಕರಿದೇವರಿಗೆ ಪೂಜೆ ಮಾಡಿ, ತುರಾಯಿಯನ್ನು ದೇವರಿಗೆ ಅರ್ಪಿಸುವ ಮೂಲಕ ತಮ್ಮ ಆಚರಣೆಯನ್ನು ಮುಗಿಸುತ್ತಾರೆ.

ಇನ್ನು ಮಲೆನಾಡು ಭಾಗದಲ್ಲಿ ಎಲ್ಲೆಡೆಯಂತೆ ಹಿಂದಿನ ದಿನ ಕಾಮದಹನ ಮರುದಿನ ಬೆಳಿಗ್ಗೆ ಬಣ್ಣಗಳ ಎರಚುವಿಕೆಯೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಬಣ್ಣಗಳ ಹಬ್ಬವಾದ ಕಾರಣ ಇದು ಮಕ್ಕಳಿಗೆ ಹೆಚ್ಚು ಮುದವನ್ನು ನೀಡುತ್ತದೆ. ಮಕ್ಕಳ ಸಂಭ್ರಮ ಕಂಡು ಹಿರಿಯರು ಕೂಡ ಆನಂದಪಡುತ್ತಾರೆ. ಪುರಾಣ, ಜನಪದ, ಆಧ್ಯಾತ್ಮ ಮತ್ತು ಬಣ್ಣಗಳ ಮಹತ್ವದ ಮಿಶ್ರಣವೇ ಹೋಳಿ ಹಬ್ಬದ ಆಚರಣೆಯಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ರತ್ನಾಕರ್ ಶೆಟ್ಟಿ ಸಾರಥ್ಯದಲ್ಲಿ ತೀರ್ಥಹಳ್ಳಿಗೆ ಅಭಿವೃದ್ಧಿ ಭಾಗ್ಯ!

ರತ್ನಾಕರ್ ಶೆಟ್ಟಿ ಸಾರಥ್ಯದಲ್ಲಿ ತೀರ್ಥಹಳ್ಳಿಗೆ ಅಭಿವೃದ್ಧಿ ಭಾಗ್ಯ!
– ತೀರ್ಥಹಳ್ಳಿ ಪಟ್ಟಣ ಪಂಚಾಯಿತ್ ವ್ಯಾಪ್ತಿಯ 2 ಕೋಟಿ 57 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
– ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಜ್ಞಾನೇಂದ್ರ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ 2.57 ಕೋಟಿ ವೆಚ್ಚದಲ್ಲಿ ವಿವಿಧ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಕುವೆಂಪು ಬೈಲು ರಂಗ ಮಂದಿರಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮ ತೀರ್ಥಹಳ್ಳಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯ್ತಿಯ ಆವರಣದಲ್ಲಿ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥಗೌಡ ನೆರವೇರಿಸಿದರು.

ಕಾಮಗಾರಿಗಳ ಪಟ್ಟಿ ಈ ಕೆಳಕಂಡಂತಿದೆ

* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ನಿಧಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು (1 ಕೋಟಿ 20 ಲಕ್ಷ).

* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಪ್ಪಗುಡ್ಡೆಯಲ್ಲಿರುವ ಸಾಂಸ್ಕೃತಿಕ ಮೈದಾನದಲ್ಲಿ “ಕುವೆಂಪು ಬಯಲು ರಂಗಮಂದಿರ” ನಿರ್ಮಾಣ ಮಾಡಲು ಹಾಗೂ ಮೈದಾನದ ಸುತ್ತ ರಿಬೈನಿಂಗ್ ವಾಲ್ ಮತ್ತು ರಂಗಮಂದಿರಕ್ಕೆ ವಿದ್ಯುದೀಕರಣ ನಿರ್ಮಾಣ ಕಾಮಗಾರಿ (80 ಲಕ್ಷ).

* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೆಟ್ಟಮಕ್ಕಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಬಾಳೇಬೈಲು ನೀರು ಶುದ್ದೀಕರಣ ಕೇಂದ್ರ ಸ್ಥಾವರಕ್ಕೆ 11 ಕೆ.ವಿ ಎ.ಬಿ ಕೇಬಲ್ (Express Line) ಅಳವಡಿಸುವ ಕಾಮಗಾರಿ (32.20 ಲಕ್ಷ).

* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ-14 ರ ಕುರುವಳ್ಳಿಯಲ್ಲಿ ವಾಟರ್ ಬ್ಯಾಂಕ್ ನಿರ್ಮಾಣ (25 ಲಕ್ಷ).

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಗಣಪತಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಾಗರಾಜ್, ಹಾಗೂ ಪಟ್ಟಣ ಪಂಚಾಯತಿಯ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Categories
ಮಲ್ನಾಡ್ ಶಿವಮೊಗ್ಗ

ಮಲೆನಾಡಲ್ಲಿ ಸೈಬರ್ ಕಳ್ಳರ ಜಾಲ ಬಯಲು!

ಮಲೆನಾಡಲ್ಲಿ ಸೈಬರ್ ಕಳ್ಳರ ಜಾಲ ಬಯಲು!
– ಶಿವಮೊಗ್ಗದಲ್ಲಿ ವಂಚಕರ ಜಾಲ ಪತ್ತೆ; ಮೂವರ ಬಂಧನ
– ಶಿವಮೊಗ್ಗದಲ್ಲಿ ಶಸ್ತ್ರಾಸ್ತ್ರಗಳು ಹೊಂದಿದ್ದ ಇಬ್ಬರು ಅರೆಸ್ಟ್!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ/ಚಿಕ್ಕಮಗಳೂರು: ಕಮಿಷನ್ ಆಸೆ ತೋರಿಸಿ, ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳ ವಿವರ ಪಡೆದು, ವಂಚಿಸುತ್ತಿದ್ದ ಅಂತರ್ ರಾಜ್ಯ ಜಾಲವೊಂದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ, ಕೊಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದ ಅಂತರ್ ರಾಜ್ಯ ಜಾಲವನ್ನು ಶಿವಮೊಗ್ಗದ ಸಿಇಎನ್ ಪೊಲೀಸರು ಭೇದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಸಾರ್ವಜನಿಕರ ಹೆಸರಿನಲ್ಲಿ ತೆರೆಯುತ್ತಿದ್ದ ಖಾತೆಗಳನ್ನು ಸೈಬರ್ ಕ್ರೈಂ ಹಣವನ್ನು ವರ್ಗಾಯಿಸಲು ಬಳಸಿಕೊಳ್ಳುತ್ತಿದ್ದರು ಎನ್ನುವುದು ತಿಳಿದುಬಂದಿದೆ. ವಿಲ್ಸನ್ ಎನ್ನುವವರ ಹೆಸರಿನಲ್ಲಿ ಖಾತೆಯೊಂದನ್ನು ತೆರೆದು ವಂಚಿಸುತ್ತಿದ್ದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.‌

ವಿಲ್ಸನ್ ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆಯನ್ನು ಕೈಗೊಂಡ ಪೊಲೀಸರು ಈ ದಂಧೆಯನ್ನು ಬಯಲಿಗೆಳೆದಿರುವುದಷ್ಟೇ ಅಲ್ಲದೆ ಸಾರ್ವಜನಿಕರು ತಮ್ಮ ದಾಖಲೆಗಳಿಗೆ ಸಂಬಂಧಿಸಿದಂತೆ ಅಪರಿಚಿತರ ಎದುರಿಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದಂತೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಶಸ್ತ್ರಾಸ್ತ್ರಗಳು ಹೊಂದಿದ್ದ ಇಬ್ಬರು ಅರೆಸ್ಟ್!
‎
‎ಶಿವಮೊಗ್ಗ: ಶಿವಮೊಗ್ಗದ ಆಲ್ಕೋಳ ವೃತ್ತದಲ್ಲಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬರುತ್ತಿದ್ದ  ಬೈಕ್ ಅನ್ನು ತಪಾಸಣೆ ನಡೆಸಿದ ವೇಳೆ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೈಕ್ ಸವಾರರು ಹಾಗೂ ಬೈಕ್ ಗಳನ್ನು ವಿನೋಬನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಬೈಕ್ ನಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿ ಅಪಾಯಕಾರಿಯಾಗಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ವಿನೋಬ ನಗರ ಪೊಲೀಸರು ದಾಳಿ ನಡೆಸಿದ್ದಾರೆ ದಾಳಿಯಲ್ಲಿ ರೈತ ಬಂದು ಎಂಬ ಹೆಸರಿರುವ ಎರಡು ಅಡಿ ಉದ್ದದ ಕಬ್ಬಿಣದ ಮಚ್ಚು ಮತ್ತೊಂದು ಹಿಡಿಕೆ ಇರುವ ಕಬ್ಬಿಣದ ಮಚ್ಚು ಪತ್ತೆಯಾಗಿದೆ.

ವಿಕಾಸ ಶಾಲೆಯಿಂದ ಆಲ್ಕೊಳ ವೃತ್ತಕ್ಕೆ ಬರುತ್ತಿದ್ದ ಕೆಎ 14 ಈ ವಿ 52 44 ಹೋಂಡಾ ಸಿಟಿ 110 ಡ್ರೀಮ್ ಬೈಕ್ ನಲ್ಲಿ ಬಂದಾಗ ತಪಾಸಣೆ ನಡೆಸಲಾಗಿದೆ. ತಪಾಸಣೆಯ ವೇಳೆ ಎರಡು ಆಯುಧಗಳು ಪತ್ತೆಯಾಗಿದ್ದು ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡದೆ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಆಯುಧಗಳನ್ನು ಪಟ್ಟೆಯಿಂದ ಸುತ್ತಿ ವಿಎನ್ಪಿಎಸ್ ಎಂದು ಮೊಹರು ಮಾಡಲಾಗಿದೆ. ‎ಮುನಿಯಪ್ಪ ಲೇಔಟಿನ ನಿವಾಸಿ ಪ್ರವೀಣ್ ಯಾನೆ ತಲೈವ 27 ವರ್ಷ ಈತನು ಬೈಕನ್ನು ಚಲಿಸಿಕೊಂಡು ಬಂದಿದ್ದು ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಹೊಸ ನಿವಾಸಿ ಭುವನೇಶ್ವರ್ 26 ವರ್ಷ ಎಂದು ಗುರುತಿಸಲಾಗಿದೆ ಇಬ್ಬರನ್ನು ಬಂಧಿಸಲಾಗಿದೆ.

Categories
Uncategorized ಕೊಪ್ಪ ಚಿಕ್ಕಮಗಳೂರು ಮಲ್ನಾಡ್

ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ರಂಗು

ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ರಂಗು
– ರಂಭಾಪುರಿ ಮಠಕ್ಕೆ ರಾಜಕೀಯ, ಧಾರ್ಮಿಕ ಗಣ್ಯರ ದಂಡು
– ಪ್ರಹ್ಲಾದ ಜೋಶಿ, ಡಿಸಿಎಂ ಶಿವಕುಮಾರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿ ಅನೇಕರುಭಾಗಿ
– ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಗಳೇ ದಾರಿದೀಪ: ಡಿಕೆಶಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಾಳೆಹೊನ್ನೂರು: ಶ್ರೀ ರಂಭಾಪುರಿ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ, ಬಾಳೆಹೊನ್ನೂರಿನಲ್ಲಿ ನಡೆದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿಯ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಗಣ್ಯರ ದಂಡು ಆಗಮಿಸಿದೆ.

ರಾಷ್ಟ್ರೀಯ, ರಾಜ್ಯದ ನಾಯಕರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ, ಡಿಸಿಎಂ ಶಿವಕುಮಾರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿ ಅನೇಕ ಗಣ್ಯರು ಆಗಮಿಸಿದ್ದಾರೆ. ಶಾಸಕ ರಾಜೇಗೌಡ, ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರಾದ ಜೀವರಾಜ್ ಇದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಗಳೇ ದಾರಿದೀಪ: ಡಿಕೆಶಿ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿರುವ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.

ಬಾಳೆಹೊನ್ನೂರು ಧರ್ಮಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದ ಅಂಗವಾಗಿ, ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಸ್ಥಳದಲ್ಲಿ ನಿರ್ಮಿಸಿರುವ 51 ಅಡಿ ಎತ್ತರದ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ರಂಭಾಪುರಿ ಪೀಠ ನಿರ್ಮಿಸಿರುವ ಮೇಲ್ಪಾರ್ ರಸ್ತೆಯ ಉದ್ಘಾಟನೆ ಸಮಾರಂಭದಲ್ಲಿ ‌ಶ್ರೀ ಶ್ರೀ ಶ್ರೀ ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ನೆರವೇರಿಸಿದರು.

ಶ್ರೀ ವೀರ ಗಂಗಾಧರ ಅಜ್ಜಯ್ಯನವರು ಈ ಪೀಠದ ಅಧ್ಯಕ್ಷರಾಗಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಅವರು ಸಂದೇಶವನ್ನು ಕೊಟ್ಟಿದ್ದರು. ನಮ್ಮ ಮನೆಗಳನ್ನು ಯಾವ ರೀತಿ ಕಾಪಾಡುತ್ತೇವೆಯೋ ಹಾಗೆಯೇ ನಮ್ಮ ಮಠಗಳನ್ನು ನಾವು ಕಾಪಾಡಬೇಕು ಎಂದರು.

Categories
ಉಡುಪಿ ಕರಾವಳಿ ಕುಂದಾಪುರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಬಂಟ್ವಾಳ: ಜಾನುವಾರುಗಳ ರಕ್ಷಣೆ
• ಬ್ರಹ್ಮಾವರ: ಪತ್ರಕರ್ತ ಆತ್ಮಹತ್ಯೆಗೆ ಶರಣು
• ಉಡುಪಿ: ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕೇಸ್
• ಕುಂದಾಪುರ: ಟ್ರೆಕ್ಕಿಂಗ್ ವೇಳೆ ನದಿಯಲ್ಲಿ ಮುಳುಗಿ ಸಾವು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಬಂಟ್ವಾಳ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ, ಅವುಗಳನ್ನು ವಶಪಡಿಸಿಕೊಂಡು ರಕ್ಷಿಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಕೊಳ್ನಾಡು ಗ್ರಾಮದ ಕರೈ ಪ್ರದೇಶದಲ್ಲಿ ನಡೆದಿದೆ. ರಾತ್ರಿಯ ವೇಳೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನವೊಂದು ರಸ್ತೆ ಬದಿಯಲ್ಲಿ ನಿಂತಿರುವ ಕುರಿತು ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ವಿಟ್ಲ ಠಾಣೆಯ ಎಸ್ಐ ರಾಮಕೃಷ್ಣ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಎರಡು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ಚಾಲಕನಾದ ನವೀನ್ ಮತ್ತು ಆತನ ಜೊತೆಗಿದ್ದ ಚೇತನ್ ಅವರನ್ನು ವಿಚಾರಿಸಿದಾಗ ಚನ್ನರಾಯಪಟ್ಟಣದ ಶಂಕರ್ ಎನ್ನುವ ವ್ಯಕ್ತಿಯು ಸಾಲೆತ್ತೂರು ಗ್ರಾಮದ ಶಾಫಿ ಎನ್ನುವ ವ್ಯಕ್ತಿಗೆ ಜಾನುವಾರುಗಳನ್ನು ಹತ್ಯೆ ಮಾಡಿ, ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಕಳುಹಿಸಿರುವುದಾಗಿ ತಿಳಿದುಬಂದಿದೆ.

ಅಲ್ಲದೆ ಜಾನುವಾರು ಸಾಗಾಟಕ್ಕೆ ಇನ್ನೊಬ್ಬರ ಹೆಸರಿನಲ್ಲಿ ಅಕ್ರಮವಾಗಿ ದಾಖಲೆಗಳನ್ನು ಪಡೆದಿರುವುದು ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಜಾನುವಾರುಗಳನ್ನು ಮತ್ತು ಅವುಗಳನ್ನು ಸಾಗಿಸಲು ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಬ್ರಹ್ಮಾವರ: ಉಪನ್ಯಾಸಕ ಹಾಗೂ ಪತ್ರಕರ್ತ ಆತ್ಮಹತ್ಯೆಗೆ ಶರಣು

ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಪ್ರವೇಶ ಪತ್ರ ದೊರೆತಿಲ್ಲ ಎನ್ನುವ ಕಾರಣದಿಂದಾಗಿ, ಉಪನ್ಯಾಸಕರೊಬ್ಬರು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರದಂದು ಆರೂರಿನಲ್ಲಿ ನಡೆದಿದೆ.

ಚಾಂತಾರಿನ ಖಾಸಗಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಕರ್ತರೂ ಕೂಡ ಆಗಿರುವ ಶೇಷಗಿರಿ ಭಟ್ ಅವರು ಶನಿವಾರ ಬೆಳಿಗ್ಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಪತ್ನಿಯನ್ನು ಶಾಲೆಗೆ ತೆರಳಲು ಸ್ಕೂಟಿಯಲ್ಲಿ ಬಸ್ ನಿಲ್ದಾಣಕ್ಕೆ ಬಿಟ್ಟು, ಬಳಿಕ ತಮ್ಮ ಮನೆಯ ಪಕ್ಕದಲ್ಲಿದ್ದ ಮೂಲ ಮನೆಯಲ್ಲಿ ವಾಸವಾಗಿದ್ದ ತಂದೆ ತಾಯಿಗಳಿಗೆ ತಿಂಡಿಯನ್ನು ನೀಡಿ, ಕಾಲೇಜಿಗೆ ಹೋಗುವುದಾಗಿ ತಿಳಿಸಿ ಮರಳಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಾನು ಕಾರ್ಯನಿರ್ವಹಿಸುತ್ತಿರುವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಪರೀಕ್ಷೆಯ ಪ್ರವೇಶ ಪತ್ರ ದೊರೆಯದೆ ಶನಿವಾರದಂದು ಪ್ರಾರಂಭಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದಿರುವುದಕ್ಕೆ ನೋವು ಮತ್ತು ಒತ್ತಡಗಳಿಗೆ ಒಳಗಾಗಿ ಈ ರೀತಿಯ ಕೃತ್ಯವೆಸಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಉಡುಪಿ: ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಕಂಬಳ ಕರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಇಲಾಖೆಯು 6.30 ಎಕರೆ ಜಮೀನಿನ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆಯನ್ನು ಹೊರಡಿಸಿದ್ದರು.ಆದರೆ ಕೆಲವರು ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು, ಈ ಹಿನ್ನೆಲೆಯಲ್ಲಿ ಸಂಸದ, ಶಾಸಕರು ಸೇರಿದಂತೆ 37 ಜನರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.

ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಇಲಾಖೆಯ ವತಿಯಿಂದ ಉಡುಪಿ ಕಂಬಳ ಕರೆಯ ಶಂಕುಸ್ಥಾಪನೆಯನ್ನು ಮಾರ್ಚ್ 4ರ ಬುಧವಾರದಂದು ನೆರವೇರಿಸಲು ಜಿಲ್ಲಾಡಳಿತವು ದಿನಾಂಕವನ್ನು ನಿಗದಿಪಡಿಸಿತ್ತು. ಆದರೆ ಬಿಜೆಪಿಯ ಸಂಸದರು ಮತ್ತು ಶಾಸಕರು ಸೇರಿದಂತೆ ಕಂಬಳದ ಸಮಿತಿಯವರು ಫೆಬ್ರವರಿ 28ರ ಶನಿವಾರದಂದೇ ಶಂಕುಸ್ಥಾಪನೆಯನ್ನು ನೆರವೇರಿಸಿರುವುದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಸುವರ್ಣ, ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜ, ರಾಜೇಶ್ ನಾಯಕ್, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಧನಂಜಯ ಸರ್ಜಿ, ರಾಜ್ಯ ಕಂಬಳ ಅಸೋಸಿಯೇಷನ್ ನ ಅಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಮೊದಲಾದವರ ವಿರುದ್ಧ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.‌

• ಕುಂದಾಪುರ: ಟ್ರೆಕ್ಕಿಂಗ್ ವೇಳೆ ನದಿಯಲ್ಲಿ ಮುಳುಗಿ ಸಾವು

ಕುಂದಾಪುರ: ಟ್ರೆಕ್ಕಿಂಗ್ ಗೆ ತೆರಳಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ಭಾನುವಾರದಂದು ಹೊಸಂಗಡಿಯ ಭಾಗಿಮನೆ ಎನ್ನುವಲ್ಲಿ ನಡೆದಿದೆ. ಕುಂದಾಪುರದಿಂದ ಎಂಟರಿಂದ ಹತ್ತು ಜನರ ತಂಡವೊಂದು ಹೊಸಂಗಡಿಯ ಮೆಟ್ಕಲ್ ಗುಡ್ಡದ ಕಡೆಗೆ ಟ್ರೆಕ್ಕಿಂಗ್ ಗೆ ಹೋಗಿದ್ದ ವೇಳೆಯಲ್ಲಿ ಈ ದುರಂತ ನಡೆದಿದೆ.

ಮೃತ ಮಹಿಳೆಯನ್ನು ಕುಂದಾಪುರದ ಮೆಡಿಕಲ್ ಶಾಪ್ ಒಂದರ ಮಾಲಕಿಯಾದ ಶುಭಶ್ರೀ ಕಾರಂತ್ ಎಂದು ಗುರುತಿಸಲಾಗಿದೆ. ನದಿಯಿಂದ ಮೇಲಕ್ಕೆ ತಂದ ಶುಭಶ್ರೀ ಅವರ ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂದರ್ಭದಲ್ಲಿ ಅಮಾಸೆಬೈಲು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಘಟನೆಯ ಕುರಿತು ಮಾಹಿತಿಯನ್ನು ಕಲೆ ಹಾಕಿದರು ಎನ್ನುವ ಸಂಗತಿ ತಿಳಿದುಬಂದಿದೆ.

Categories
ಚಿಕ್ಕಮಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ ಹಾಸನ

ಕಾಡಾನೆ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಸರ್ಕಾರದ ಪ್ಲಾನ್!

ಕಾಡಾನೆ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಸರ್ಕಾರದ ಪ್ಲಾನ್!
– ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರದ ಕ್ರಮ: ಅರಣ್ಯ ಸಚಿವ ಈಶ್ವರ್ ಖಂಡ್ರೆ
– ಬಾಳೆಹೊನ್ನೂರು ರೈತ ಸಂವಾದ: ಕಾಫಿ ನಾಡಲ್ಲಿ ಆನೆಯದ್ದೇ ಸದ್ದು!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಮಲೆನಾಡನ್ನು ಕಾಡುತ್ತಿರುವ ಅರಣ್ಯ ಮತ್ತು ಕಾಡು ಪ್ರಾಣಿಗಳು ಅದರಲ್ಲೂ ಕಾಡು ಆನೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ. ರೈತರ ಜೀವ, ಜೀವನೋಪಾಯ ಮತ್ತು ಅರಣ್ಯ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವುದು ನಮ್ಮ ಗುರಿ. ಮಾನವ–ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳು ಮತ್ತು ರೈತರ ಪಾತ್ರ ಅತ್ಯಂತ ಮಹತ್ವದಾಗಿದೆ. ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಲ್ಲ. ಆದರೆ ಸುಪ್ರೀಂಕೋರ್ಟ್ ತೀರ್ಪುಗಳು ಹಾಗೂ ಕೇಂದ್ರ–ರಾಜ್ಯ ಸರ್ಕಾರಗಳ ಅರಣ್ಯ ಕಾಯಿದೆಗಳ ಪಾಲನೆ ನಮ್ಮ ಕರ್ತವ್ಯವಾಗಿದೆ.ಅರಣ್ಯ ಜಮೀನನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಮೂಲಸೌಕರ್ಯ ಅಭಿವೃದ್ಧಿಗೆ ಅರಣ್ಯ ಭೂಮಿ ಬಳಸಬೇಕಾದರೆ ಅರಣ್ಯ ಸಂರಕ್ಷಣಾ ನಿಯಮಗಳಂತೆ ಪರ್ಯಾಯ ಭೂಮಿ ಪಡೆದು ಅರಣ್ಯ ಬೆಳೆಸುವುದು ಕಡ್ಡಾಯವಾಗಿದೆ ಎಂದರು.

ರಾಜ್ಯದಲ್ಲಿ ಅತೀ ಹೆಚ್ಚು ಕಾಡು ಆನೆಗಳು!

ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರದ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚಿನ ಆನೆ ದಾಳಿಯಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ನೋವಿನ ಸಂಗತಿ. ಸರ್ಕಾರ ತಕ್ಷಣವೇ ಆನೆ ಸೆರೆ ಕಾರ್ಯಾಚರಣೆಗೆ ಆದೇಶ ನೀಡಿತ್ತು. ರಾಜ್ಯದಲ್ಲಿ 6,395 ಆನೆಗಳೊಂದಿಗೆ ಕರ್ನಾಟಕ ಗಜಪಡೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಹುಲಿ ಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆನೆ, ಹುಲಿಗಳ ಸಂಖ್ಯೆಯ ಹೆಚ್ಚಳ ಮತ್ತು ಅರಣ್ಯ ಕ್ಷೀಣತೆಯಿಂದ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ.

ಶಾಶ್ವತ ಪರಿಹಾರಕ್ಕಾಗಿ ಕೈಗೊಂಡಿರುವ ಕ್ರಮಗಳು

– ಆನೆ, ಕಾಡೆಮ್ಮೆ, ಕಾಡುಕೋಣಗಳು ನಾಡಿಗೆ ಪ್ರವೇಶಿಸದಂತೆ 140 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಸ್ತಾವನೆ.
– ಸೂಕ್ಷ್ಮ ಪ್ರದೇಶಗಳಲ್ಲಿ ₹12 ಕೋಟಿ ವೆಚ್ಚದಲ್ಲಿ 7 ಕಿ.ಮೀ. ಬ್ಯಾರಿಕೇಡ್ ಕಾಮಗಾರಿ – ಶೀಘ್ರ ಆರಂಭ
– ಕೊಪ್ಪದಲ್ಲಿ ಆನೆ ಹಾವಳಿ ಹೆಚ್ಚಿರುವುದರಿಂದ ಪ್ರತ್ಯೇಕ ಆನೆ ಕಾರ್ಯಪಡೆ ಸ್ಥಾಪನೆಗೆ ಶೀಘ್ರ ಆದೇಶ
– ಥರ್ಮಲ್ ಡ್ರೋನ್ ಕ್ಯಾಮರಾಗಳ ಮೂಲಕ ವನ್ಯಜೀವಿಗಳ ಚಲನ–ವಲನದ ಮಾಹಿತಿ ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ
– ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೋ ಕಾಲರ್‌ಗಳನ್ನು ಹಿಂಡು ಆನೆಗಳಿಗೆ ಅಳವಡಿಸಿ, ಜನವಸತಿ ಪ್ರದೇಶಕ್ಕೆ ಬಂದಾಗ ತಕ್ಷಣ ಮಾಹಿತಿ ನೀಡುವ ವ್ಯವಸ್ಥೆ
– ಮಧ್ಯಪ್ರದೇಶದಲ್ಲಿ ಯಶಸ್ವಿಯಾಗಿ ಅನುಸರಿಸಿದ ಮಾದರಿಯ ಅಧ್ಯಯನಕ್ಕಾಗಿ ತಜ್ಞರ ತಂಡ ಕಳುಹಿಸಲಾಗುತ್ತಿದೆ.

ಬಾಳೆಹೊನ್ನೂರು ರೈತ ಸಂವಾದ: ಕಾಫಿ ನಾಡಲ್ಲಿ ಆನೆಯದ್ದೇ ಸದ್ದು!

ಬಾಳೆಹೊನ್ನೂರಲ್ಲಿ ಇತ್ತೀಚಿಗೆ ಅರಣ್ಯ ಸಚಿವರ ಜತೆ ರೈತ ಸಂವಾದ ನಡೆದಿದ್ದು, ಭಾರಿ ಚರ್ಚೆ, ಕೋಲಾಹಲಕ್ಕೆ ಕಾರಣವಾಯಿತು. ಶಾಸಕ ಟಿ. ಡಿ. ರಾಜೇಗೌಡ ಸೇರಿ ರೈತ ಸಂಘಟನೆಗಳು, ಮಲೆನಾಡು ರೈತ ಒಕ್ಕೂಟ, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸೇರಿ ಅನೇಕ ಸಂಘಟನೆಗಳ ಪದಾಧಿಕಾರಿಗಳು, ರಾಜಕಾರಣಿಗಳು, ಅಧಿಕಾರಿಗಳು ಇದ್ದರು.

Categories
ಮಲ್ನಾಡ್ ಶಿವಮೊಗ್ಗ ಹೊಸನಗರ

ಘಾಟಿಯಲ್ಲಿ ಮತ್ತೊಂದು ಬಸ್ಸಿಗೆ ಬೆಂಕಿ!

ಘಾಟಿಯಲ್ಲಿ ಮತ್ತೊಂದು ಬಸ್ಸಿಗೆ ಬೆಂಕಿ!
– ಬಸ್ ಸಂಪೂರ್ಣ ಬೆಂಕಿಗೆ ಆಹುತಿ: ಅಪಾಯದಿಂದ ಪಾರು
– ಹೊಸನಗರದಲ್ಲಿ ಎರಡನೇ ಘಟನೆ: ಎಚ್ಚರಿಕೆ ಕರೆ ಗಂಟೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಕುಂದಾಪುರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿ ಅವಘಡಕ್ಕೆ ಒಳಗಾದ ಘಟನೆ ಶನಿವಾರದಂದು ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ನಡೆದಿದೆ.

ಕುಂದಾಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಮಾಲಿಕತ್ವದ ಬಸ್ ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತ ಚಾಲಕರು ನಿರ್ವಾಹಕರು ಮತ್ತು ಪ್ರಯಾಣಿಕರು ಬಸ್ ನಿಂದ ಕೆಳಗೆ ಇಳಿದುದರ ಪರಿಣಾಮವಾಗಿ ಎಲ್ಲರೂ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಗೆ ಬಸ್ ಸಂಪೂರ್ಣವಾಗಿ ಆಹುತಿಯಾಗಿದೆ. ಎಲ್ಲರೂ ಅಪಾಯದಿಂದ ಪಾರು ಆಗಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ಶನಿವಾರ ಮಧ್ಯಾಹ್ನ ಕುಂದಾಪುರದಿಂದ ಶಿವಮೊಗ್ಗ ಹೋಗುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸಂಪೂರ್ಣ ಬಸ್ ಗೆ ಬೆಂಕಿ ಆವರಿಸಿದೆ. ಬಸ್ ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ 30 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಆರಂಭದಲ್ಲಿ ಇಂಜಿನ್ ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡು ನಂತರ ಬಸ್ ಗೆ ಸಂಪೂರ್ಣ ಬೆಂಕಿ ಹತ್ತಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಬೆಂಕಿ ಬಿದ್ದಿತ್ತು!

ಕಳೆದ ಕೆಲವು ತಿಂಗಳುಗಳ ಹಿಂದೆ ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಕೂಡ ಬೆಂಕಿಗೆ ಆಹುತಿಯಾಗಿ ಹಲವರು ಗಾಯಗೊಂಡ ಘಟನೆ ಇನ್ನೂ ಮಾಸಿಲ್ಲ. ಅದರ ಬೆನ್ನಲ್ಲೇ ಈ ಘಟನೆ ಜನರಲ್ಲಿ ಆತಂಕವನ್ನು ಮೂಡಿಸಿದೆ.

ಪ್ರಯಾಣಿಕರಿಗೆ ಸುರಕ್ಷತೆ ಹೇಗೆ..?

ದೂರದ ಪ್ರಯಾಣಕ್ಕೆ ಖಾಸಗಿ ಬಸ್ ಗಳನ್ನು ಚಾಲನೆಗೆ ಸಿದ್ಧಗೊಳಿಸುವ ಮೊದಲು ತಾಂತ್ರಿಕವಾಗಿ ಸೇರಿದಂತೆ ಕೆಲವು ಪರಿಶೀಲನೆಗಳನ್ನು ನಡೆಸುವ ಮೂಲಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅಗತ್ಯ. ಇಲ್ಲದಿದ್ದಲ್ಲಿ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು ಪ್ರಾಣಾಪಾಯಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಬೆಂಕಿ ಸಂಪೂರ್ಣ ಬಸ್ ಗೆ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲು ಆಗಿದೆ.

‎
‎

Categories
ಉಡುಪಿ ದಕ್ಷಿಣ ಕನ್ನಡ ಬೆಳ್ತಂಗಡಿ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಬೆಳ್ತಂಗಡಿ: ಗೋಹತ್ಯೆ ಪ್ರಕರಣ; ಆರೋಪಿ ಮನೆ ಜಪ್ತಿ
• ಮೂಡಬಿದರೆ: ಬೆಳಗಾವಿ ವ್ಯಕ್ತಿ ಮೂಡುಬಿದರೆಯಲ್ಲಿ ಕಾಣೆ
• ಉಡುಪಿ: ರ್ಕಾರಿ ಇಲಾಖೆಗಳ ಮೇಲೆ ಲೋಕಾಯುಕ್ತ ದಾಳಿ
• ಉಡುಪಿ: ಮಾರ್ಚ್ 4ರಂದು ಕಂಬಳದ ಶಂಕುಸ್ಥಾಪನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮನೆಯನ್ನು ಜಪ್ತಿ ಮಾಡಿರುವ ಘಟನೆ ಬಾರ್ಯ ಗ್ರಾಮದ ಹೊಸವಕ್ಲು ಎನ್ನುವಲ್ಲಿ ನಡೆದಿದೆ. ಆರೋಪಿಯಾದ ಅಬ್ದುಲ್ ರಹಿಮಾನ್ ಮನೆಯ ಅಂಗಳದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಗೋಹತ್ಯೆ ಮಾಡಿ, ಮಾಂಸವನ್ನು ಸಿದ್ಧಪಡಿಸುತ್ತಿರುವುದು ಕಂಡುಬಂದಿದೆ.

ಇದರ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣೆಯ ಪಿಎಸ್ಐ ಸುತೇಶ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು ಬರುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮನೆಯ ಸುತ್ತಮುತ್ತಲು ಪರಿಶೀಲನೆ ನಡೆಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಲಾಗಿದ್ದು, ಸಮೀಪದಲ್ಲಿದ್ದ ಆಟೋದಲ್ಲಿ ಕೂಡ ಗೋಮಾಂಸ ಪತ್ತೆಯಾಗಿದೆ. ಎರಡು ಸೇರಿ ಒಟ್ಟು 56 ಕೆಜಿಯಷ್ಟು ಗೋಮಾಂಸವಿತ್ತು ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಪೊಲೀಸರು ಗೋಮಾಂಸ, ತೂಕದ ಯಂತ್ರ, ಆಟೋ, ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

• ಮೂಡಬಿದರೆ: ಬೆಳಗಾವಿ ವ್ಯಕ್ತಿ ಮೂಡುಬಿದರೆಯಲ್ಲಿ ಕಾಣೆ

ಮೂಡಬಿದರೆ: ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಮೂಡಬಿದರೆಯಲ್ಲಿ ಕಾಣೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ವ್ಯಕ್ತಿಯನ್ನು ರಾಯಭಾಗ ತಾಲ್ಲೂಕಿನ ಮುಗಲ್ಕೋಡು ಗ್ರಾಮದ ಸಿದ್ಧಪ್ಪ ಮಾನಶೆಟ್ಟಿ ಎಂದು ಹೇಳಲಾಗಿದೆ. ಫೆಬ್ರವರಿ 21ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ತನ್ನ ಮಕ್ಕಳಿಗೆ ಪರೀಕ್ಷೆ ಬರೆಸಲು ಕರೆದುಕೊಂಡು ಬಂದಿದ್ದ ಸಿದ್ಧಪ್ಪ,ಪರೀಕ್ಷೆ ಮುಗಿಯುತ್ತಿದ್ದಂತೆ ಮಕ್ಕಳನ್ನು ಬಸ್ ಹತ್ತಿಸಿ ಊರಿಗೆ ಕಳುಹಿಸಿಕೊಟ್ಟು, ತನಗೆ ಸ್ವಲ್ಪ ಕೆಲಸ ಇರುವುದಾಗಿ ಮೂಡಬಿದರೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.

ಇಷ್ಟು ದಿನಗಳು ಕಳೆದರೂ ಸಿದ್ಧಪ್ಪ ಮನೆಗೆ ಮರಳಲಿಲ್ಲ. ಮನೆಯವರು ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಎಲ್ಲೆಡೆ ಹುಡುಕಾಡಿದರು ಸಿದ್ಧಪ್ಪ ಅವರು ಸುಳಿವು ಸಿಗದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರಾದ ಮಲ್ಲಪ್ಪ ಎನ್ನುವವರು ಮೂಡಬಿದರೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

• ಉಡುಪಿ: ಸರ್ಕಾರಿ ಇಲಾಖೆಗಳ ಮೇಲೆ ಉಪಲೋಕಾಯುಕ್ತ ದಾಳಿ

ಉಡುಪಿ: ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ತಾಲ್ಲೂಕು ಕಛೇರಿಗೆ ದಿಡೀರ್ ಭೇಟಿ ನೀಡಿದ ಲೋಕಾಯುಕ್ತರು ಅಧಿಕಾರಿಗಳನ್ನು ಬೆಚ್ಚಿಬಿಳಿಸಿದ್ದಾರೆ. ಒಂದೆಡೆ ಜೀನ್ಸ್ ಪ್ಯಾಂಟ್ ಧರಿಸಿ ಕಾರ್ಯನಿರ್ವಹಿಸಲು ಬಂದ ಸರ್ಕಾರಿ ಅಧಿಕಾರಿ, ಇನ್ನೊಂದೆಡೆ ಚಿಟ್ ಫಂಡ್ ಗೆ ಸಂಬಂಧಿಸಿದ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದ ಸರ್ಕಾರಿ ನೌಕರ, ಮತ್ತೊಂದೆಡೆ ತನ್ನ ವೈಯಕ್ತಿಕ ಬ್ಯಾಗಿನಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡಿದ್ದ ಸರ್ಕಾರಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಸರ್ಕಾರಿ ದಾಖಲೆಗಳನ್ನು ವೈಯಕ್ತಿಕ ಬ್ಯಾಗಿನಲ್ಲಿ ಇರಿಸಿಕೊಂಡು ಬಂದಿದ್ದ ಸರ್ಕಾರಿ ನೌಕರನನ್ನು ಅಮಾನತುಗೊಳಿಸಿ, ಆತನ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಉಡುಪಿ ನಗರ ಪೊಲೀಸರಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಮಲ್ಪೆಗೆ ಭೇಟಿ ನೀಡಿದ ಉಪಲೋಕಾಯುಕ್ತರು ಮಲಿನವಾದ ನೀರು ಸಮುದ್ರವನ್ನು ಸೇರುತ್ತಿರುವ, ಉಡುಪಿಯ ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಹೊಟೇಲ್ ಒಂದರಲ್ಲಿ ತಿಂಡಿಗಳ ದರವನ್ನು ನಮೂದಿಸದ ಹೊಟೇಲ್ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.

ಉಡುಪಿ: ಮಾರ್ಚ್ 4ರಂದು ಕಂಬಳದ ಶಂಕುಸ್ಥಾಪನೆ

ಉಡುಪಿ: 80 ಬಡಗುಬೆಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆಯ ವತಿಯಿಂದ ನಡೆಸಲಾಗುವ ಉಡುಪಿ ಕಂಬಳದ ಶಂಕುಸ್ಥಾಪನೆಯನ್ನು, ಮಾರ್ಚ್ ನಾಲ್ಕರಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಡಾ.ನಾಗೇಂದ್ರ ಹೆದ್ದೂರು ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸನ್ಮಾನ

ಡಾ.ನಾಗೇಂದ್ರ ಹೆದ್ದೂರು ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸನ್ಮಾನ
– ರಾಷ್ಟ್ರ ಮಟ್ಟದಲ್ಲಿ ಸರ್ಕಾರಿ ನೌಕರರ ಪರವಾಗಿ ಹೋರಾಟ
– ಮಧ್ಯಪ್ರದೇಶದ ಭೂಪಾಲ್ ನಿಲ್ದಾಣದಲ್ಲಿ ಎಲ್ಲಾ ರಾಜ್ಯದ ಪದಾಧಿಕಾರಿಗಳಿಂದ ಗೌರವ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಮಧ್ಯಪ್ರದೇಶದ ಭೂಪಾಲ್ ನಲ್ಲಿ ಫೆಬ್ರವರಿ 20ರಂದು ನಡೆದ ಸಭೆಯಲ್ಲಿ ಅಖಿಲ ಭಾರತ ಡಿ ಗ್ರೂಪ್ ನೌಕರರ ಒಕ್ಕೂಟದ ಆಲ್ ಇಂಡಿಯಾ ಉಪಾಧ್ಯಕ್ಷರು, ಆಲ್ ಇಂಡಿಯಾ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ತೀರ್ಥಹಳ್ಳಿ ಮೂಲದ ಡಾ.ನಾಗೇಂದ್ರ ಹೆದ್ದೂರು ಅವರು ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ ಎಲ್ಲಾ ರಾಜ್ಯದ ಸರ್ಕಾರಕ್ಕೆ ಸಂಬಂಧಿಸಿದ ಹೊರಗುತ್ತಿಗೆದಾರರಿಗೆ, ದಿನಗೂಲಿ ನೌಕರರಿಗೆ, ಪಿಸಿಪಿಯಲ್ಲಿರುವವರಿಗೆ, ಗ್ರಾಮ ಸಹಾಯಕರಿಗೆ, ನೀರು ಗಂಟಿಗಳಿಗೆ, ಕ್ಷೇಮಾಭಿವೃದ್ಧಿಯವರಿಗೆ, ಎಂ.ಆರ್ ಅವರಿಗೆ, ಅಂಗನವಾಡಿ ಶಿಕ್ಷಕರಿಗೆ, ಅಂಗನವಾಡಿ ಸಹಾಯಕರಿಗೆ ಕೆಲಸವನ್ನು ಖಾಯಂಗೊಳಿಸಬೇಕು. ಡಿ ದರ್ಜೆ ನೌಕರರಿಗೆ ವೇತನವನ್ನು ಜಾರಿಗೊಳಿಸಬೇಕು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಕೆಲಸವನ್ನು ಖಾಯಂ ಮಾಡಲು ಎಲ್ಲಾ ರಾಜ್ಯ ಸರ್ಕಾರಿ ಪರವಾನಿಗೆ ನೌಕರರನ್ನು, ಎಲ್ಲಾ ದಿನಗೂಲಿ ನೌಕರರನ್ನು ನ್ಯಾಯಯುತವಾಗಿ ಖಾಯಂ ಮಾಡಬೇಕು.‌

ಈ ಸೌಲಭ್ಯಗಳನ್ನು ದೊರಕಿಸದಿದ್ದಲ್ಲಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮಾರ್ಚ್ 17ರಂದು ಉಗ್ರ ಪ್ರತಿಭಟನೆಯನ್ನು ನಡೆಸಿ, ರಾಷ್ಟ್ರ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಧ್ಯಕ್ಷರ ಎದುರಿನಲ್ಲೇ ಡಾ.ನಾಗೇಂದ್ರ ಹೆದ್ದೂರು ಅವರು ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ನನ್ನ ಹುಟ್ಟೂರಾದ ತೀರ್ಥಹಳ್ಳಿಗೆ ಆಗಮಿಸಿ ನನಗೆ ಟಿಎಟಿಸಿಎಂಎಸ್ ನಲ್ಲಿ ಜವಾಬ್ದಾರಿಯನ್ನು ನೀಡಿ, ಹಾರೈಸಿದ್ದು, ತೀರ್ಥಹಳ್ಳಿಯ ದೇವರ ಕೃಪೆ, ಜನರ ಆಶೀರ್ವಾದದೊಂದಿಗೆ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ. ಅದೇ ರೀತಿ ಡಿ ಗ್ರೂಪ್ ನೌಕರರು ಹಾಗೂ ದಿನಗೂಲಿ ನೌಕರರ ಬೆಂಬಲದೊಂದಿಗೆ ಜಯಗಳಿಸುತ್ತೇನೆ” ಎಂದು ತಿಳಿಸಿದರು.‌

ಸಭೆಯಲ್ಲಿ ತಮಿಳುನಾಡಿನ ಜಿ ಗಣೇಶನ್, ಬಿ.ಎಂ.ನಟರಾಜ್, ರಾಮರಾಜ್ ದುಬೈ, ಮಧ್ಯಪ್ರದೇಶದ ಮಹೇಂದ್ರ ಶರ್ಮಾ, ದರ್ಶನ್ ಸಿಂಗ್ ಲಿಬಾನಾ, ಉತ್ತರ ಪ್ರದೇಶದ ಸುರೇಶ್ ಸಿಂಗ್ ಯಾದವ್, ಆಂಧ್ರಪ್ರದೇಶದ ನಕನಾ ಚಂದ್ರಶೇಖರ್, ಆಲ್ ಇಂಡಿಯಾ ಉನ್ನತ ದರ್ಜೆಯ ನಾಯಕರು, ಆಲ್ ಇಂಡಿಯಾ ಆರ್ಗಿನರ್ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ನೌಕರರ ಆರ್ಥಿಕ ಭದ್ರತೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ಕೊಟ್ಟ ಹಿನ್ನೆಲೆಯಲ್ಲಿ‌ ಡಾ.ನಾಗೇಂದ್ರ ಹೆದ್ದೂರು ಅವರನ್ನು ಮಧ್ಯಪ್ರದೇಶದ ಭೂಪಾಲ್ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.