Categories
ಕೊಪ್ಪ ಚಿಕ್ಕಮಗಳೂರು ಮಲ್ನಾಡ್

ಕೊಪ್ಪ, ನರಸಿಂಹರಾಜಪುರ ಸುದ್ದಿ

ಕೊಪ್ಪ, ನರಸಿಂಹ ರಾಜಪುರ ಸುದ್ದಿ

ಕೊಪ್ಪದ ಹುಡುಗಿ ರಾಷ್ಟ್ರ ಮಟ್ಟದಲ್ಲಿ ಸಾಧನೆ!
– ರಾಷ್ಟ್ರ ಮಟ್ಟದ ಮುಕ್ತ ಯೂತ್ ಗೇಮ್ಸ್‌ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ
– ರೈತರ ಸಮಸ್ಯೆ ಬಗೆಹರಿಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಮನವಿ
– ಕೊಪ್ಪದಲ್ಲಿ ಹೆಚ್ಚಾಯ್ತಾ ಇಸ್ಪೀಟ್?!: ಕಾಡಲ್ಲಿ ಆಟ ಆಡುತ್ತಿದ್ದ 9 ಮಂದಿ ಬಂಧನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಪಂಚಾಯತಿ ವ್ಯಾಪ್ತಿಯ ಕವನಹಳ್ಳದ ಕ್ಲೆಮೆಂಟ್ ಡಿಸೋಜಾ ಹಾಗೂ ಆಶಾ ಅವರ ಪುತ್ರಿಯಾದ ಅನೀಶಾ ಅವರು ಯೂತ್ ಗೇಮ್ಸ್ ಕೌನ್ಸಿಲ್ ಆಫ್ ಇಂಡಿಯಾ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆಯೋಜಿ ಸಿದ್ದ ರಾಷ್ಟ್ರ ಮಟ್ಟದ ಮುಕ್ತ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಿ, ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಗಿರುವ ಅನೀಶಾ ಮಾ.26 ರಿಂದ 30ರವರೆಗೆ ನೇಪಾಳ ದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೂತ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.

ರೈತರ ಸಮಸ್ಯೆ ಬಗೆಹರಿಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಮನವಿ

ನರಸಿಂಹರಾಜಪುರ: ನರಸಿಂಹರಾಜಪುರ ಹಾಗೂ ಚಿಕ್ಕ ಅಗ್ರಹಾರದ ಅರಣ್ಯ ಇಲಾಖೆ ಕಛೇರಿಗಳಿಗೆ ಭೇಟಿ ನೀಡಿ ಆಯಾ ವಲಯಗಳ ವ್ಯಾಪ್ತಿಯಲ್ಲಿ ಆಗಿರುವ 4(1) ನೋಟಿಫಿಕೇಶನ್ಗಳು, ಡೀಮ್ಡ್ ಫಾರೆಸ್ಟ್ ಹಾಗೂ ಡಿಸಿ ರಿಸರ್ವ್ ಕಡತದ ಪ್ರತಿಗಳನ್ನು ದೃಢೀಕರಿಸಿ ಕೊಡುವಂತೆ ಶೃಂಗೇರಿ ಕ್ಷೇತ್ರ ಒಕ್ಕೂಟದ ವತಿಯಿಂದ ಅರಣ್ಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಾಧ್ಯಕ್ಷರಾದ ನಾಗೇಶ್ ಎಂ ಎನ್, ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಹಂಚಿನಮನೆ, ಕ್ಷೇತ್ರ ಸಂಚಾಲಕ ಪ್ರದೀಪ್ ನೀಲುವಾನಿ, ನರಸಿಂಹರಾಜಪುರ ತಾಲೂಕು ಸಂಚಾಲಕ ಅಶೋಕ್, ಕ್ಷೇತ್ರ ಕಚೇರಿ ಕಾರ್ಯದರ್ಶಿ ಸಚಿನ್ ಮೂಡುಬಾಗಿಲು ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಸೃಜನ್ ಕೆ ರವರು ಜೊತೆಗಿದ್ದರು. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅರಣ್ಯ ಇಲಾಖೆಗಳ ವಲಯಗಳಿಗೆ ಈ ಬಗ್ಗೆ ಮನವಿಯನ್ನು ನೀಡಲು ನಿರ್ಧರಿಸಲಾಗಿದೆ.

ಕೊಪ್ಪದಲ್ಲಿ ಹೆಚ್ಚಾಯ್ತಾ ಇಸ್ಪೀಟ್?!: ಕಾಡಲ್ಲಿ ಆಟ ಆಡುತ್ತಿದ್ದ 9 ಮಂದಿ ಬಂಧನ

ಕೊಪ್ಪ: ಕೊಪ್ಪದಲ್ಲಿ ಇಸ್ಪೀಟ್ ದಂಧೆ ಹೆಚ್ಚಿದೆ. ಇತ್ತೀಚಿಗೆ ಅನೇಕ ಕಡೆ ಇಸ್ಪೀಟ್ ದಂಧೆ ಬಗ್ಗೆ ಪೊಲೀಸರು ದಾಳಿಗೆ ಮುಂದಾಗಿದ್ದಾರೆ. ಇಸ್ಪೀಟ್ ಜೂಜಾಟವಾಡುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿಎಸ್ಐ ಶ್ರೀಧರ ನಾಯ್ಕ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, 9 ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹರಿಹರಪುರದ ಭಂಡಿಗಡಿ ಗ್ರಾಮದಲ್ಲಿ ನಡೆದಿದೆ.

ಅಕೇಶಿಯ ಪ್ಲಾಂಟೇಶನ್ ಬಳಿಯಲ್ಲಿರುವ ಸರ್ಕಾರಿ ಕಾಡಿನಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಅರುಣ್ ಎಚ್ ಎ, ಶಿವರಾಂ ಬಿ.ಟಿ, ಸೂಚನ್ ಎ.ಎಸ್, ಸಚಿನ್ ಎ.ಎಸ್, ರಮೇಶ್ ಹೆಗ್ಡೆ, ರಾಘವೇಂದ್ರ, ರಾಘವೇಂದ್ರ ಎ.ಎನ್, ಅರುಣ ಮತ್ತು ಪ್ರಸನ್ನ ಎ ವೈ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ 52 ಇಸ್ಪೀಟ್ ಎಲೆಗಳನ್ನು, 3930 ರೂಪಾಯಿ ನಗದು ಹಣ, ಪ್ಲಾಸ್ಟಿಕ್ ಚೀಲ, ಮೇಣದಬತ್ತಿ ಸೇರಿದಂತೆ ಜೂಜಾಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹರಿಹರಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕ್ರೀಡಾ ಸುದ್ದಿ ತೀರ್ಥಹಳ್ಳಿ ಪ್ರತಿಭೆಗಳು

ವಾಲಿಬಾಲ್: ಕರ್ನಾಟಕ ತಂಡಕ್ಕೆ ಆಯ್ಕೆಯಾದ ತೀರ್ಥಹಳ್ಳಿ ಹುಡುಗ!

ವಾಲಿಬಾಲ್: ಕರ್ನಾಟಕ ತಂಡಕ್ಕೆ ಆಯ್ಕೆಯಾದ ತೀರ್ಥಹಳ್ಳಿ ಹುಡುಗ!
– ಹಾರೆಕೊಪ್ಪದ ಶಬರೀಶ್ ಗೌಡ ಈಗ ರಾಷ್ಟ್ರ ಮಟ್ಟದಲ್ಲಿ ಸಾಧನೆ
– ತೀರ್ಥಹಳ್ಳಿ ವಾಗ್ದೇವಿ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿ
– ಮಲೆನಾಡ ಮತ್ತೊಬ್ಬ ಕ್ರೀಡಾಪಟುಗೆ ಶುಭಾಶಯಗಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು/ತೀರ್ಥಹಳ್ಳಿ: ಮಾ.15 ರಿಂದ 20ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಯೂಥ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ತೀರ್ಥಹಳ್ಳಿ ಮೂಲದ ಶಬರೀಶ್ ಗೌಡ ಆಯ್ಕೆ ಆಗಿದ್ದಾರೆ. ತೀರ್ಥಹಳ್ಳಿ ತಾಲೂಕು ದಬ್ಬಣಗದ್ದೆ ಸಮೀಪದ ಹಾರೆಕೊಪ್ಪದ ಶ್ರೀಮತಿ ರಂಜಿತಾ ಶ್ರೀ ಜಗದೀಶ್ ಹಾರಕೊಪ್ಪ ಇವರ ಪುತ್ರ. ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಾಗ್ದೇವಿಯಲ್ಲಿ ಎಸ್.ಎಸ್.ಎಲ್.ಸಿ ಓದಿದ್ದು, ಬೆಂಗಳೂರು ಜಯನಗರದ ಸುರಾನಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ ಓದುತ್ತಿದ್ದಾರೆ. ಕ್ರೀಡಾ ಇಲಾಖೆ ಇವರನ್ನು ಆಯ್ಕೆ ಮಾಡಿದ್ದು, ಓಡಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ಕ್ಯಾಂಪ್ ಅಲ್ಲಿ ತರಬೇತಿ ಪಡೆದಿದ್ದರು.

ಶಬರೀಶ್ ಗೌಡ ಇವರಿಗೆ ಅಭಿನಂದನೆಗಳು

 ಶುಭ ಕೋರುವವರು
ಹಾರೆಕೊಪ್ಪ ಕುಟುಂಬದವರು ಮತ್ತು ಗ್ರಾಮಸ್ಥರು
ವಿಠಲ ನಗರ ಯುವಕ ಸಂಘ, & ವಿಠಲ ನಗರ ಗ್ರಾಮಸ್ಥರು

Categories
ಉಡುಪಿ ಕರಾವಳಿ ದಕ್ಷಿಣ ಕನ್ನಡ ಬೆಳ್ತಂಗಡಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಬೆಳ್ತಂಗಡಿ: ಅಕ್ರಮ ಡೀಸೆಲ್ ದಾಸ್ತಾನು: ದಾಳಿ
• ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ; ಮನೆಗಳಿಗೆ ಹಾನಿ
• ಬಂಟ್ವಾಳ: ಬಸ್ ನಲ್ಲಿ ಚಿನ್ನಾಭರಣ ಕಳುವು; ಆರೋಪಿ ಸೆರೆ
• ಉಡುಪಿ: ಕುಡಿದ ಅಮಲಲ್ಲಿ ವೃದ್ಧೆಯ ಕೊಲೆ..!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಬೆಳ್ತಂಗಡಿ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ವಿಶ್ವ, ಆಹಾರ ಶಿರಸ್ತೇದಾರರಾದ ಸಂತೋಷ್ ಮತ್ತವರ ತಂಡವು ಕಾರ್ಯಾಚರಣೆ ನಡೆಸಿದ ಘಟನೆ, ಕಣಿಯೂರು ಗ್ರಾಮದಲ್ಲಿ ನಡೆದಿದೆ. ಮುದೆಲ್ತಿಯಾರ್ ಎನ್ನುವಲ್ಲಿನ ಜಗದೀಶ್ ಎನ್ನುವವರ ಮನೆಯ ಶೆಡ್ ನಲ್ಲಿ ಡೀಸೆಲ್ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. 20 ಬ್ಯಾರಲ್ ನಲ್ಲಿ 200 ಲೀಟರ್ ನಂತೆ 4.000 ಲೀಟರ್ ಡೀಸೆಲ್, 5 ಬ್ಯಾರಲ್ ಕ್ಯಾನ್ ನಲ್ಲಿ 35 ಲೀಟರ್ ನಂತೆ ಸಂಗ್ರಹಿಸಿಟ್ಟಿದ್ದ 175 ಲೀಟರ್ ಡೀಸೆಲ್ ಹಾಗೂ 5 ಖಾಲಿ ಕ್ಯಾನ್ ಗಳಿದ್ದವು ಎನ್ನಲಾಗಿದೆ.

ಒಟ್ಟು 3.50.000 ರೂಪಾಯಿಯಷ್ಟು ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.‌ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಜಗದೀಶ್ ಮತ್ತು ಹರೀಶ್ ಎನ್ನುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೇ ಬಗೆಯ ಅನುಮತಿ ಇಲ್ಲದೆ, ಅಕ್ರಮವಾಗಿ ಡೀಸೆಲ್ ಅನ್ನು ದಾಸ್ತಾನು ಮಾಡಿರುವ ಕುರಿತು ಬಾತ್ಮೀದಾರರಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

• ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ; ಮನೆಗಳಿಗೆ ಹಾನಿ

ಕಡಬ: ಬಾವಿಯನ್ನು ತೋಡುವ ಸಮಯದಲ್ಲಿ ಬಳಕೆ ಮಾಡಿರುವ ಸ್ಫೋಟಕದಿಂದಾಗಿ ಸುತ್ತಮುತ್ತಲಿದ್ದ ಮನೆಗಳಿಗೆ ಹಾನಿಯಾಗಿರುವ ಘಟನೆ, ರಾಮಕುಂಜ ಗ್ರಾಮದ ಕಂಪ ಎನ್ನುವಲ್ಲಿ ನಡೆದಿದೆ. ಮೈಸೂರು ಮೂಲದ ಸೋಮಶೇಖರ್ ಎನ್ನುವವರು ತಮ್ಮ ಸಂಬಂಧಿಕರಿಂದ 33 ಸೆಂಟ್ಸ್ ಜಾಗವನ್ನು ಖರೀದಿಸಿದ್ದು, ಅಲ್ಲಿ ಅಡಿಕೆ ಮರಗಳಿವೆ ಎನ್ನಲಾಗಿದೆ. ಅದೇ ಜಾಗದಲ್ಲಿ ನೀರಿಗಾಗಿ ಬಾವಿಯನ್ನು ತೋಡಲು ಆರಂಭಿಸಿದ್ದು, 15 ಅಡಿ ಆಳಕ್ಕೆ ಹೋಗುತ್ತಿದ್ದಂತೆಯೇ ಕಲ್ಲು ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಫೋಟಕ ಬಳಸಲು ನಿರ್ಧರಿಸಿದ್ದಾರೆ.

ಪರಿಣಾಮವಾಗಿ ಅಕ್ಕಪಕ್ಕದ ಎರಡು ಮನೆಗಳ ಗೋಡೆಗಳಲ್ಲಿ ಬಿರುಕು ಕಂಡುಬಂದಿದ್ದು, ಮನೆಯ ಮಾಲೀಕರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ವಾಮನ ಮೂಲ್ಯ, ಕೆ.ಟಿ. ಮೋಹನ್ ಎನ್ನುವವರು ನೀಡಿರುವ ದೂರಿನ ಆಧಾರದ ಮೇಲೆ ಕಡಬ ಠಾಣೆಯ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಬಾವಿಯೊಳಗೆ ಸ್ಫೋಟವಾಗದೆ ಉಳಿದುಕೊಂಡಿದ್ದ ಮದ್ದು ಗುಂಡನ್ನು ತೆರವುಗೊಳಿಸಲು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಆಗಮಿಸಿ, ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಎಫ್ಎಸ್ಎಲ್ ತಂಡ ಜೊತೆಗೂಡಿತು ಎನ್ನುವ ಸಂಗತಿ ತಿಳಿದುಬಂದಿದೆ.

• ಬಂಟ್ವಾಳ: ಬಸ್ ನಲ್ಲಿ ಚಿನ್ನಾಭರಣ ಕಳುವು; ಆರೋಪಿ ಸೆರೆ

ಬಂಟ್ವಾಳ: ಕಳೆದ ಕೆಲವು ತಿಂಗಳುಗಳ ಹಿಂದೆ ಬಸ್ ನಲ್ಲಿ ನಡೆದ ಕಳುವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪತ್ತೆ ಹಚ್ಚಿ, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಕಲ್ಲಡ್ಕದ ಕುದ್ರೆಬೆಟ್ಟು ಸಮುದ್ರದ ಸಮೀಪದ ಹೊಟೇಲ್ ಬಳಿ ನಿಲ್ಲಿಸಿದ್ದ ದುರ್ಗಾಂಬ ಬಸ್ ನಲ್ಲಿ ಬ್ರಹ್ಮಾವರ ಮೂಲದ ದಂಪತಿಗಳು ಬ್ಯಾಗ್ ನಲ್ಲಿ ಇರಿಸಿದ್ದ 180 ಗ್ರಾಂ ತೂಕದ ಸುಮಾರು 20.00.000 ರೂಪಾಯಿಗಳಷ್ಟು ಬೆಲೆಬಾಳುವ ಚಿನ್ನಾಭರಣ ಕಳ್ಳತನವಾಗಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಅರುಣ್ ಕೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳದ ಎಎಸ್ ಪಿ, ಯಶ್ ಕುಮಾರ್ ಶರ್ಮಾ ಅವರ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿಗಳಾದ ಬಂಟ್ವಾಳ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣೆಯ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳಾದ ವಿಜಯ್ ಕುಮಾರ್, ಸುರೇಶ್ ಕುಮಾರ್, ರಾಜೇಶ್, ಇರ್ಷಾದ್, ಬಸವರಾಜ್, ವಿಜಯ್ ಕುಮಾರ್, ರೇವತಿ ಹಾಗೂ ಗಣಕಯಂತ್ರ ಸಿಬ್ಬಂದಿಗಳಾದ ಸಂಪತ್ ಕುಮಾರ್ ಮತ್ತು ದಿವಾಕರ್ ಅವರ ಜೊತೆಗೂಡಿ ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದರು.

ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯನ್ನು ಮಧ್ಯಪ್ರದೇಶ ಮೂಲದ ಸಮದ್ ಖಾನ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಆತ ಕಳುವು ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.

• ಉಡುಪಿ: ವಿನಾಕಾರಣ ನಡೆದ ವೃದ್ಧೆಯ ಕೊಲೆ

ಉಡುಪಿ: ಕುಡಿದ ಅಮಲಿನಲ್ಲಿ ನಡೆದ ಗಲಾಟೆಯಿಂದ, ವೃದ್ಧೆಯೊಬ್ಬರ ಕೊಲೆಯಾದ ಘಟನೆ, ಮಣಿಪುರ ಗ್ರಾಮದ ಕೆನರಾಡಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ವನಜ ಪೂಜಾರ್ತಿ ಎಂದು ಗುರುತಿಸಲಾಗಿದೆ. ವಲೇರಿಯನ್ ಮೆಂಡೋನ್ಸಾ ಅವರು ವನಜ ಪೂಜಾರ್ತಿ ಅವರ ಮನೆಗೆ ಆಗಾಗ ಮದ್ಯಸೇವನೆಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಸೋಮವಾರ ಸಂಜೆ 5:00 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 7:00ಗಂಟೆಯ ಸಮಯದಲ್ಲಿ ಪ್ರವೀಣ್ ಮೆಂಡೋನ್ಸಾ ಮತ್ತು ವಲೇರಿಯನ್ ಮೆಂಡೋನ್ಸಾ ನಡುವೆ ಕ್ಷುಲ್ಲಕ ಕಲಹ ಏರ್ಪಟ್ಟಿದೆ.

ಕುಡಿದಿದ್ದರಿಂದ ಗಲಾಟೆ ವಿಕೋಪಕ್ಕೆ ಹೋಗಿ, ಇಬ್ಬರೂ ಹರಿತವಾದ ಆಯುಧವೊಂದರಿಂದ ವನಜ ಪೂಜಾರ್ತಿ ಅವರ ಮೇಲೆ ಹಲ್ಲೆ ನಡೆಸಿ, ಕೊಲೆಯೆಸಗಿದ್ದಾರೆ ಎನ್ನಲಾಗಿದೆ. ಮಂಗಳವಾರದಂದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದು, ತನಿಖೆ ಮುಂದುವರಿದಿದೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಹೊಸನಗರ

ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರ ಮನೆಯಲ್ಲಿ ಧರ್ಮಸ್ಥಳ ಯಕ್ಷಗಾನ

ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರ ಮನೆಯಲ್ಲಿ ಧರ್ಮಸ್ಥಳ ಯಕ್ಷಗಾನ
ಮಾ.16ಕ್ಕೆ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ
– ಸರ್ವರಿಗೂ ಸ್ವಾಗತಿಸಿದ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿಯ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು ಇವರ ಮನೆ ಶ್ರೀ ಗಾಯತ್ರಿಯಲ್ಲಿ ಮಾರ್ಚ್ 16ರ ಸೋಮವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟದ ಸೇವೆಯನ್ನು ಆಯೋಜಿಸಲಾಗಿದೆ.

ಮಾ.16ನೇ ತಾರೀಕು ಬೆಳಿಗ್ಗೆ 8ಗಂಟೆಗೆ ಮನೆಗೆ ಶ್ರೀ ಕ್ಷೇತ್ರದ ದೈವ ದೇವರ ಆಗಮನವಾಗಲಿದೆ. 11 ಗಂಟೆಗೆ ಗಣ ಹೋಮ,ಫಲ ನೈವೇದ್ಯ ಸಮರ್ಪಣೆ ಶ್ರೀ ಮಹಾ ಗಣಪತಿ ದೇವರಿಗೆ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಮನೆಯಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಚಂಡೆ ವಾದನ, ಮಂಗಳ ವಾದ್ಯ ಗೋಷ್ಠಿ, ಭಜನಾ ಕುಣಿತ ಮತ್ತೆ ಊರಿನ ಸಮಸ್ತ ನಾಗರಿಕರ ಸಹಭಾಗಿತ್ವದಲ್ಲಿ ಶ್ರೀ ಕ್ಷೇತ್ರದ ದೈವ ದೇವರ ವೈಭವದ ರಾಜ ಬೀದಿ ಮೆರವಣಿಗೆಯು ಪೂರ್ಣಕುಂಭ ಸ್ವಾಗತದೊಂದಿಗೆ ತೀರ್ಥಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಸಾಗಿ ಯಕ್ಷಗಾನ ಚೌಕಿಯಲ್ಲಿ ವಿರಾಜಮಾನರಾದ ಮೇಲೆ ಮೆರವಣಿಗೆಯು ಸಂಪನ್ನವಾಗಲಿದೆ.

ಸಂಜೆ 6.30ರಿಂದ ಎಸ್.ಆರ್.ಆರ್ ಮಿಲ್ ಕೇರಿಯ ಸುಬ್ರಮಣ್ಯ ಅವರ ಜಾತ್ರಾ ಮೈದಾನದಲ್ಲಿ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಎಂಬ ಪ್ರಸಂಗವನ್ನು ಕ್ಷೇತ್ರದ ದಿಗ್ಗಜ ಕಲಾವಿದರು ಆಡಿ ರಂಜಿಸಲಿದ್ದಾರೆ. ಈ ಯಕ್ಷಗಾನ ಆಟವು ಕಾಲಮಿತಿಯದ್ದಾಗಿರುವುದರಿಂದ ಸಂಜೆ 6.30ಕ್ಕೆ ಪ್ರಾರಂಭಿಸಿ ರಾತ್ರಿ 12.30ಕ್ಕೆ ಮಂಗಳ ಹಾಡಲಿದ್ದಾರೆ. ಈ ಎಲ್ಲಾ ದೇವತಾ ಕಾರ್ಯಗಳಿಗೆ ನೀವೆಲ್ಲರೂ ಸಕುಟುಂಬ ಸಮೇತರಾಗಿ ಬಂದು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಮ್ಮೆಲ್ಲರಿಗೂ ಆದರದಿಂದ ಸ್ವಾಗತ ಕೋರುವವರು

ಶ್ರೀಮತಿ ಮೋಹಿನಿ ಎ ಆಚಾರ್ಯ, ಶ್ರೀ ಅನಂತಪದ್ಮನಾಭ
ಆಚಾರ್ಯ ಮತ್ತು ಮಕ್ಕಳು
ಹಾಗೂ ಸಿಬ್ಬಂದಿಗಳು ಶ್ರೀ ಗಾಯತ್ರಿ ಜ್ಯೂವೆಲ್ಲರ್ಸ್, ತೀರ್ಥಹಳ್ಳಿ

ಶ್ರೀಮತಿ ನಾಗವೇಣಿ
ಶ್ರೀ ರಾಜಗೋಪಾಲ ಆಚಾರ್ಯ ಮತ್ತು ಶೀರೂರು ಕುಟುಂಬಸ್ಥರು

ಶ್ರೀ ದಾಮೋಧರ ರಾವ್ ಮತ್ತು ಮಕ್ಕಳು ಹಾಗು ಪಡುಬಿದ್ರೆ ಕುಟುಂಬಸ್ಥರು

ಸರ್ವರಿಗೂ ಸುಸ್ವಾಗತ

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ತೀರ್ಥಹಳ್ಳಿಗೆ ಮತ್ತೊಂದು ಹೊಸ ಸೇತುವೆ!

ತೀರ್ಥಹಳ್ಳಿಗೆ ಮತ್ತೊಂದು ಹೊಸ ಸೇತುವೆ!
– ಭೀಮನಕಟ್ಟೆ-ಆಲಗೇರಿಯಲ್ಲಿ ತುಂಗಾ ಮಾಲತಿ ನದಿ ಸಂಗಮ ಸ್ಥಳದಲ್ಲಿ ಸೇತುವೆ
– ಸೇತುವೆ ನಿರ್ಮಾಣಕ್ಕೆ ಜಾರಕಿಹೊಳಿ-ಸಿದ್ದರಾಮಯ್ಯರಿಗೆ ಮನವಿ

– ರಾಮಕೃಷ್ಣಪುರದಲ್ಲಿ ಮಾ.15ಕ್ಕೆ ಸಮರ್ಪಣಾ ತಂಡದ ರಕ್ತದಾನ ಶಿಬಿರ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆ- ಆಲ ಗೇರಿ ಗ್ರಾಮಗಳ ನಡುವೆ ತುಂಗಾ ಹಾಗೂ ಮಾಲತಿ ನದಿ ಸಂಗಮ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ನೂತನ ಸೇತುವೆ ನಿರ್ಮಿಸುವಂತೆ ಅಲಗೇರಿ ಗ್ರಾಮದ ಯೋಗೇಂದ್ರ ನಾಯ್ಸ್ ಮಾರ್ಚ್ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕೀಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ತೀರ್ಥಹಳ್ಳಿ ಹಾಗೂ ಕಮ್ಮರಡಿ-ಶೃಂಗೇರಿ ಮಾರ್ಗದ ದೂರ ಈ ಸೇತುವೆ ನಿರ್ಮಾಣದಿಂದ 10 ಕಿಲೋಮೀಟರ್ ನಷ್ಟು ಕಡಿಮೆಯಾಗಲಿದೆ.

ತೀರ್ಥಹಳ್ಳಿ-ಹೆಗ್ಗೋಡು-ಚಕ್ಕೋಡಬೈಲು, ಕೊಡ ಗೊಳ್ಳಿ, ಕಾಸರವಳ್ಳಿ, ರಾಮಕೃಷ್ಣಾಪುರ ಸೇರಿ ದಂತೆ ಹಲವು ಗ್ರಾಮಗಳ ಸಾವಿರಾರು ಗ್ರಾಮಸ್ಥರಿಗೆ ಈ ಸೇತುವೆ ನಿರ್ಮಾಣದಿಂದ ಪ್ರಯೋಜನವಾಗಲಿದೆ. ಯೋಗೇಂದ್ರ ನಾಯಕ್ ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ತಮ್ಮ ಕಛೇರಿ ಸಿಬ್ಬಂದಿಗಳಿಗೆ ಸ್ಥಳದಲ್ಲೇ ಆದೇಶಿಸಿದ್ದಾರೆ. ಪ್ರವಾಸೋದ್ಯಮ ದೃಷ್ಟಿಯಲ್ಲಿ ತೀರ್ಥಹಳ್ಳಿಗೆ ಈ ಸೇತುವೆ ಮಹತ್ವ ಪಡೆಯಲಿದೆ.

ರಾಮಕೃಷ್ಣಪುರದಲ್ಲಿ ಮಾ.15ಕ್ಕೆ ಸಮರ್ಪಣಾ ತಂಡದ ರಕ್ತದಾನ ಶಿಬಿರ

ಪುನೀತ್ ರಾಜಕುಮಾರ್ ಜನ್ಮದಿನಾಚರಣೆಯ ಅಂಗವಾಗಿ ದಿನಾಂಕ 15ನೇ ತಾರೀಕು ಭಾನುವಾರದಂದು ರಾಮಕೃಷ್ಣಪುರದ ಸಮರ್ಪಣಾ ತಂಡದ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಪ್ರತಿ ವರ್ಷ ಮಾದರಿ ಕಾರ್ಯಕ್ರಮ ಮಾಡುತ್ತಿರುವ ಈ ತಂಡದ ರಕ್ತದಾನ ಶಿಬಿರದಲ್ಲಿ ಸರ್ವರೂ ಭಾಗಿಯಾಗಬೇಕು ಎಂದು ಆಯೋಜಕರು ಕೋರಿದ್ದಾರೆ.

Categories
ಕಾರವಾರ ದಾವಣಗೆರೆ ಬೆಂಗಳೂರು ರಾಜ್ಯ

ಪೆಟ್ರೋಲ್ ತುಂಬಿಸಲು ಮುಗಿಬಿದ್ದ ಜನ!

ಪೆಟ್ರೋಲ್ ತುಂಬಿಸಲು ಮುಗಿಬಿದ್ದ ಜನ!
– ಪೆಟ್ರೋಲ್ ದರ ಹೆಚ್ಚಾಗುವ ಆತಂಕಕ್ಕೆ ಜನರ ಕ್ಯೂ
– ಕಾರವಾರ ಸೇರಿ ರಾಜ್ಯದ ಹಲವೆಡೆ ಘಟನೆ
– ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಹೋಟೆಲ್ ತಿಂಡಿ ಭಾರ!?
– ಅಗ್ನಿವೀ‌ರ್ ನೇಮಕಾತಿಗೆ ಅರ್ಜಿ ಆಹ್ವಾನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು/ಕಾರವಾರ: ಮಧ್ಯ ಪ್ರಾಚ್ಯದಲ್ಲಿ ಭುಗಿಲೆದ್ದಿರುವ ಇರಾನ್ ಮತ್ತು ಇರಾಕ್ ನಡುವಿನ ಯುದ್ಧ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ತೈಲ ರಫ್ತಿಗೆ ಹೊಡೆತ ಬಿದ್ದ ಪರಿಣಾಮ ಭಾರತದಲ್ಲಿಯೂ ಎಲ್‌ಪಿಜಿ ಗ್ಯಾಸ್ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಇನ್ನೊಂದೆಡೆ, ಯುದ್ಧದ ಕಾರಣದಿಂದ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಆತಂಕಗೊಂಡ ಉತ್ತರ ಕನ್ನಡ ಜಿಲ್ಲೆಯ ಜನತೆ ಪೆಟ್ರೋಲ್, ಡೀಸೆಲ್‌ಗಾಗಿ ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ದಾಂಡೇಲಿ ಸೇರಿದಂತೆ ವಿವಿಧ ಭಾಗಗಳ ಜನ ಪೆಟ್ರೋಲ್ ಖರೀದಿಗೆ ಮುಂದಾಗಿದ್ದಾರೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿದಿನ 1 ಲಕ್ಷದ 20 ಸಾವಿರ ಲೀಟರ್ ಪೆಟ್ರೋಲ್ ಖರ್ಚಾಗುತ್ತಿತ್ತು. ಆದರೆ ಜನರ ಈ ದಿಢೀರ್ ಮುಗಿಬೀಳುವಿಕೆಯಿಂದಾಗಿ ಪ್ರತಿದಿನದ ಬಳಕೆ ಬರೋಬ್ಬರಿ 3 ಲಕ್ಷ ಲೀಟರ್‌ಗೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಐಓಸಿ (IOC) ಯ ಒಟ್ಟು 110 ಬಂಕ್‌ಗಳಿದ್ದು, ಇವುಗಳಲ್ಲಿ ಸರಾಸರಿ 20 ಸಾವಿರ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕ್‌ಗಳಿವೆ. ಸಾಕಷ್ಟು ಇಂಧನ ಲಭ್ಯವಿದ್ದರೂ ಜನ ಆತಂಕದಿಂದ ವಾಹನಗಳ ಟ್ಯಾಂಕ್ ಫುಲ್ ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಕಡೆ ಇಂತಹ ದೃಶ್ಯ ಕಂಡು ಬಂದಿದೆ. ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, “ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಇದ್ದರೂ ಭಾರತದಲ್ಲಿ ಇಂಧನ ಕೊರತೆ ಉಂಟಾಗುವುದಿಲ್ಲ. ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಸಾಕಷ್ಟು ಇಂಧನ ದಾಸ್ತಾನು ಲಭ್ಯವಿದೆ” ಎಂದು ಮಾಹಿತಿ ನೀಡಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಹೋಟೆಲ್ ತಿಂಡಿ ಭಾರ!?

ಎಲ್ಪಿಜಿ ಸಿಲಿಂಡರ್ ದರ ಏರಿಕೆ ಹಿನ್ನೆಲೆ ಹೋಟೆಲ್ ಅಲ್ಲಿ ತಿಂಡಿ ಊಟ ದರ ಹೆಚ್ಚಾಗುವ ಸಾಧ್ಯತೆ ಇದೆ.

ಅಗ್ನಿವೀ‌ರ್ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ : ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯ ಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಉಡುಪಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಏಪ್ರಿಲ್ 1ರೊಳಗೆ http://www.joinindinarmy.nic.in ರ ಮೂಲಕ ನೋಂದಾಯಿಸಿಕೊಳ್ಳುವುದು.

Categories
ಅಡಿಕೆ-ದರ ಮಲ್ನಾಡ್ ಶಿವಮೊಗ್ಗ

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಶಿವಮೊಗ್ಗ ಅಡಿಕೆ ಮಾರುಕಟ್ಟೆ

10-03-2026

ಸರಕು: 59800-76800-98496
ಬೆಟ್ಟೆ: 50610-63500-64310
ರಾಶಿ: 47199-53200-56259
ಗೊರಬಲು: 23099-36400-39599

ಮಲೆನಾಡ ಎಲ್ಲಾ ಕೃಷಿ ಸುದ್ದಿಗಳಿಗಾಗಿ…ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ವೀಕ್ಷಿಸಿ.

Categories
ಕರಾವಳಿ ಕುಂದಾಪುರ ಬೆಂಗಳೂರು ರಾಷ್ಟ್ರೀಯ ವಾರ್ತೆ

ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಡಿಜಿಟಲ್ ತಂತ್ರಜ್ಞ ಗೌತಮ್ ನಾವಡ

ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಡಿಜಿಟಲ್ ತಂತ್ರಜ್ಞ ಗೌತಮ್ ನಾವಡ
– ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನಲ್ಲಿ ಸಮ್ಮೇಳನ
– ಕುಂದಾಪುರದ ಫೋರ್ಥ್‌ಫೋಕಸ್ ಸಂಸ್ಥೆ ಸಂಸ್ಥಾಪಕ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕುಂದಾಪುರದ ವಿ ಗೌತಮ್ ನಾವಡ ಉಪನ್ಯಾಸ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ತಮ್ಮ ಡಿಜಿಟಲ್ ತಂತ್ರಜ್ಞಾನ ಜ್ಞಾನವನ್ನು ಹಂಚಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಾರ್ಚ್ 12 ಮತ್ತು 13ರಂದು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ “People, Planet and Profit: The New Paradigm of Sustainable Commerce” ನಡೆಯಲಿದೆ. ಈ ಸಮ್ಮೇಳನದಲ್ಲಿ ಶಿಕ್ಷಣ ತಜ್ಞರು, ಉದ್ಯಮಿಗಳು ಹಾಗೂ ಹಲವು ಕ್ಷೇತ್ರಗಳ ತಜ್ಞರು ಭಾಗವಹಿಸಿ ಆರ್ಥಿಕ ಬೆಳವಣಿಗೆ, ಪರಿಸರ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಸಮ್ಮೇಳನದಲ್ಲಿ ಮುಖ್ಯ ಭಾಷಣಗಳು, ತಾಂತ್ರಿಕ ಅಧಿವೇಶನಗಳು ಹಾಗೂ ಪ್ಯಾನೆಲ್ ಚರ್ಚೆಗಳು ನಡೆಯಲಿದ್ದು, ಸಸ್ಟೇನಬಲ್ ಬಿಸಿನೆಸ್ ಮಾದರಿಗಳು, ಕ್ಲೈಮೇಟ್ ಇನ್ವೆಸ್ಟಿಂಗ್, ಸರ್ಕ್ಯುಲರ್ ಎಕಾನಮಿ ಮತ್ತು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಬೆಂಗಳೂರಿನ ಕಾನ್ಸುಲ್ ಜನರಲ್ ಸ್ಟೀವನ್ ಕಾನೊಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರ ಜೊತೆಗೆ ವೋಲ್ವೋ ಗ್ರೂಪ್, ಡೆಲಾಯಿಟ್ ಸೇರಿದಂತೆ ಹಲವು ಸಂಸ್ಥೆಗಳ ತಜ್ಞರು ವಿವಿಧ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ.

ಉದ್ಯಮದ ಕುರಿತು ವಿಶೇಷ ಉಪನ್ಯಾಸ

ಸಮ್ಮೇಳನದ ಮಾರ್ಚ್ 12ರಂದು ನಡೆಯುವ Technical Session – 2ರಲ್ಲಿ, ಕುಂದಾಪುರ ಮೂಲದ ಉದ್ಯಮಿ ಹಾಗೂ ಫೋರ್ಥ್‌ ಫೋಕಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ವಿ ಗೌತಮ್ ನಾವಡ ಅವರು “Profit with purpose: Sustainable Growth in Business” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ಉಪನ್ಯಾಸದಲ್ಲಿ ಉದ್ಯಮ ಸಂಸ್ಥೆಗಳು ಲಾಭದಾಯಕತೆ ಸಾಧಿಸುವುದರ ಜೊತೆಗೆ ಪರಿಸರ ಮತ್ತು ಸಮಾಜದ ಜವಾಬ್ದಾರಿಯನ್ನು ಹೇಗೆ ಸಮನ್ವಯಗೊಳಿಸಬಹುದು ಎಂಬುದರ ಕುರಿತು ಅವರು ವಿವರಿಸಲಿದ್ದಾರೆ.

ನಾವುಡ ಹೇಳಿದ್ದೇನು..?

ಸಮ್ಮೇಳನದ ಕುರಿತು ಮಾತನಾಡಿದ ನಾವಡ ಅವರು, ”_ಇಂದಿನ ವ್ಯವಹಾರ ಜಗತ್ತಿನಲ್ಲಿ ಲಾಭ ಮಾತ್ರವಲ್ಲ, ಸಮಾಜ ಮತ್ತು ಪರಿಸರದ ಜವಾಬ್ದಾರಿಯೂ ಸಮಾನವಾಗಿ ಮಹತ್ವ ಪಡೆದಿದೆ. ದೀರ್ಘಕಾಲಿಕ ಬೆಳವಣಿಗೆಗಾಗಿ ಸಂಸ್ಥೆಗಳು ಜವಾಬ್ದಾರಿಯುತ ಹಾಗೂ ನೈತಿಕ ವ್ಯವಹಾರ ವಿಧಾನಗಳನ್ನು ಅನುಸರಿಸಬೇಕು. ಇಂತಹ ಸಮ್ಮೇಳನಗಳು ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವೆ ಸಂವಾದಕ್ಕೆ ಉತ್ತಮ ವೇದಿಕೆಯಾಗುತ್ತವೆ ಎಂದು ಹೇಳಿದರು. ಸಮ್ಮೇಳನದ ಎರಡನೇ ದಿನದಲ್ಲಿ ಇನ್ನಷ್ಟು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, “Balancing People, Planet and Profit: Is Sustainable Commerce Truly Achievable?” ಎಂಬ ವಿಷಯದ ಕುರಿತು ಪ್ಯಾನೆಲ್ ಚರ್ಚೆ ನಡೆಯಲಿದೆ. ಇಂತಹ ವೇದಿಕೆಗಳಲ್ಲಿ ಭಾಗವಹಿಸುವ ಮೂಲಕ ಫೋರ್ಥ್‌ಫೋಕಸ್ ಸಂಸ್ಥೆ ಉದ್ಯಮಶೀಲತೆ, ತಂತ್ರಜ್ಞಾನ ಆಧಾರಿತ ಬೆಳವಣಿಗೆ ಹಾಗೂ ಜವಾಬ್ದಾರಿಯುತ ವ್ಯವಹಾರ ಮಾದರಿಗಳ ಬಗ್ಗೆ ನಡೆಯುವ ಚರ್ಚೆಗಳಿಗೆ ತನ್ನ ಕೊಡುಗೆ ನೀಡುತ್ತಿದೆ.

ಡಿಜಿಟಲ್ ಕ್ಷೇತ್ರದಲ್ಲಿ ವಿ ಗೌತಮ್ ನಾವಡ ವಿಶೇಷ ಸಾಧನೆ

ವಿ ಗೌತಮ್ ನಾವಡ ಅವರು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಉದ್ಯಮಿ. ಅವರು ಕುಂದಾಪುರ ಮೂಲದ ಫೋರ್ಥ್‌ಫೋಕಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದು, ವೆಬ್ ಅಭಿವೃದ್ಧಿ, ಡಿಜಿಟಲ್ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಸಲಹಾ ಸೇವೆಗಳನ್ನು ವಿವಿಧ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೆ.

ದೇಶ ವಿದೇಶಕ್ಕೆ ಸೇವೆ ನೀಡುತ್ತಿರುವ ಫೋರ್ಥ್‌ಫೋಕಸ್ ಸಂಸ್ಥೆ

ಫೋರ್ಥ್‌ಫೋಕಸ್ ಒಂದು ವೆಬ್ ಸೊಲ್ಯೂಷನ್ ಸಂಸ್ಥೆಯಾಗಿದ್ದು, ಕಳೆದ 10 ವರ್ಷಗಳಿಗಿಂತ ಹೆಚ್ಚು ಅನುಭವದೊಂದಿಗೆ ವಿವಿಧ ಕ್ಷೇತ್ರಗಳ ಸಂಸ್ಥೆಗಳಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ವೆಬ್ ಆಧಾರಿತ ಪರಿಹಾರಗಳನ್ನು ಒದಗಿಸುತ್ತಿದೆ.

Categories
ಶಿವಮೊಗ್ಗ ಸಾಗರ

ಶಿಕಾರಿಪುರ: ಮಹಿಳೆಯರ ಸೇವೆ ನೆನೆದ ಗಣ್ಯರು!

ಶಿಕಾರಿಪುರ: ಮಹಿಳೆಯರ ಸೇವೆ ನೆನೆದ ಗಣ್ಯರು!
– ಶಿಕಾರಿಪುರದ ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಮಹಿಳಾ ದಿನಾಚರಣೆ, ಸರಸ್ವತಿ ಪೂಜೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿಕಾರಿಪುರ: ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾ ಜದ ಹಾಗೂ ಕುಟುಂಬದ ಏಳಿಗೆ ಸಾಧ್ಯ ಎಂದು ಪ್ರಾಚಾರ್ಯರಾದ ವಿಶ್ವನಾಥ ಪಿ ಹೇಳಿದ್ದಾರೆ. ಶಿಕಾರಿಪುರ ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣವು ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿ, ಪುರುಷರಂತೆಯೇ ಸಮಾನ ಅವಕಾಶಗಳನ್ನು ಪಡೆಯುವಂತೆ ಮಾಡುವುದಾಗಿದೆ. ಇದು ಆತ್ಮವಿಶ್ವಾಸ ಮೂಡಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು, ಮತ್ತು ಆರೋಗ್ಯ ಹಾಗೂ ಭದ್ರತೆಯನ್ನು ಖಚಿತಪಡಿಸುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಶಿಕ್ಷಕಿ ರೇಷ್ಮಾ ಬಾನುಸ್ತ್ರೀ ಕೇವಲ ಒಂದು ಹೆಸರಲ್ಲ, ಅದೊಂದು ಅದಮ್ಯ ಶಕ್ತಿ, ಪ್ರೀತಿ, ತ್ಯಾಗ ಮತ್ತು ಧೈರ್ಯದ ಸಂಕೇತ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪಾರ್ವತಮ್ಮ ಪತಿ, ತಂದೆ ಅಥವಾ ಸಹೋದರರ ಬೆಂಬಲವು ಮಹಿಳೆಯರ ಕನಸುಗಳನ್ನು ನನಸಾಗಿಸಲು ನೆರವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಶೇಖರ್ ಅವರ ಮಹಿಳಾ ಸಾಧಕಿಯರ ಪರಿಚಯ ಮಾಡಿಕೊಟ್ಟರು. ಉಪಸ್ಥಿತರಿದ್ದ ಪ್ರಶಾಂತ ಕುಬಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಶಿಕ್ಷಕಿಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.ಕು . ಚಿರಂಜೀವಿ ಪ್ರಾರ್ಥಿಸಿ, ಶಿಕ್ಷಕರಾದ ಎಂ.ಜಿ. ಚಂದನ ಸ್ವಾಗತಿಸಿ, ಪರಮೇಶ್ ನಾಯಕ್ ವಂದಿಸಿ, ನಿಂಗಪ್ಪ.ಡಿ ಕಾರ್ಯಕ್ರಮ ನಿರೂಪಿಸಿದರು.

ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜೆ

ಶಿಕಾರಿಪುರ:ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನರಲ್ಲಿ ತಾಳ್ಮೆ, ಸಹನೆ ತುಂಬಾ ಮಹತ್ವವಾಗಿದ್ದು, ಪರಿಶ್ರಮ ಪಟ್ಟು ಅಭ್ಯಾಸ ಮಾಡಬೇಕು. ಪಡೆಯುವ ಅಂಕದ ಕುರಿತು ಅತಿಯಾದ ಚಿಂತನೆ ಅವಶ್ಯಕತೆ ಇರುವುದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ . ಶಿವಕುಮಾರ್ ಹೇಳಿದ್ದಾರೆ. ನಗರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ ಮತ್ತು ಹತ್ತನೇ ಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರವೀಂದ್ರ ಕೆ.ಸಿ, ಶಾಲಾ ಪ್ರಾಚಾರ್ಯರಾದ ವಿಶ್ವನಾಥ. ಪಿ ಉದ್ಘಾಟನೆ ಮಾಡಿದರು. ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಮಾತನಾಡಿದರು. ರೇಷ್ಮಾ ಬಾನು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಹಾಲಸ್ವಾಮಿ,ಎಂ ಕೆ ಚಂದನ್ , ಚಂದ್ರಶೇಖರ್, ಮಂಜುಳಾ ಪಾಟೀಲ್, ಲಲಿತಾ, ರೇಖಾ, ಚಂದ್ರಮತಿ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು ಚೇತನಾ ಎಂ.ಎಸ್ ಮತ್ತು ತಂಡದವರು ಪ್ರಾರ್ಥಿಸಿ,ಕು ಪ್ರಣತಿ.ವಿ. ಸ್ವಾಗತಿಸಿ,ಕು.ವರ್ಷಿಣಿ.ಕೆ.ಆರ್ ವಂದಿಸಿ.ಕು . ಹೇಮಶ್ರೀ ಯು.ಪಿ ಕಾರ್ಯಕ್ರಮ ನಿರೂಪಿಸಿದರು.

Categories
ಮಾಹಿತಿ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

ಯುದ್ಧದ ಎಫೆಕ್ಟ್: ಸಿಲಿಂಡರ್ ಇನ್ನು ಸಿಗೋದು ಕಷ್ಟ?!

ಯುದ್ಧದ ಎಫೆಕ್ಟ್: ಸಿಲಿಂಡರ್ ಇನ್ನು ಸಿಗೋದು ಕಷ್ಟ?!
– ಸಿಲಿಂಡರ್ ಬುಕ್ಕಿಂಗ್ ನಲ್ಲಿ ಹೊಸ ನಿಯಮ: ಏನೇನು?
– ಯುದ್ಧದ ಸನ್ನಿವೇಶ ತಣ್ಣಗಾಗುವವರೆಗೆ ಸಿಲಿಂಡರ್ ವ್ಯತ್ಯಯ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಯುದ್ಧದ ಎಫೆಕ್ಟ್ ಇದೀಗ ಭಾರತಕ್ಕೂ ಬಿದ್ದಿದೆ. ಅಡುಗೆ ಅನಿಲದ ಪೂರೈಕೆಯಲ್ಲಿ ತೀವ್ರತರವಾದ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಲಿಂಡರ್ ಬುಕ್ಕಿಂಗ್ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಯುದ್ಧ ಹಿನ್ನೆಲೆ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಾಸ ಮತ್ತು ಗ್ರಾಹಕರಲ್ಲಿ ಮನೆ ಮಾಡಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.‌

ಮತ್ತೊಂದು ಕಡೆಯಿಂದ ದೇಶದ ಹಲವಾರು ಗ್ರಾಹಕರು ಸಿಲಿಂಡರ್ ಖಾಲಿಯಾಗುವ ಮೊದಲೇ, ಅಂದರೆ ಎರಡು ತಿಂಗಳಿಗೊಮ್ಮೆ ಬುಕ್ ಮಾಡುತ್ತಿದ್ದವರು ಇದೀಗ 15 ದಿನಗಳಲ್ಲೇ ಪುನಃ ಬುಕ್ಕಿಂಗ್ ಮಾಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಸಿಲಿಂಡರ್ ವಿಚಾರದಲ್ಲಿ ಕೃತಕ ಅಭಾವ ತಲೆದೋರುತ್ತಿದೆ ಎನ್ನಲಾಗಿದೆ.

ಭಾರತದಲ್ಲಿಯೂ ಆತಂಕ: ಬುಕ್ಕಿಂಗ್ ನಿಯಮ ಬದಲು!

ಸರ್ಕಾರವು ಭಾರತದಲ್ಲಿ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎನ್ನುವ ಆಶ್ವಾಸನೆಯನ್ನು ನೀಡುತ್ತಿದ್ದರೂ, ಇನ್ನೊಂದೆಡೆ ಬುಕ್ಕಿಂಗ್ ಅವಧಿಯನ್ನು ಇದ್ದಕ್ಕಿದ್ದಂತೆ ಹೆಚ್ಚಳಗೊಳಿಸಿರುವುದು ಜನಸಾಮಾನ್ಯರಲ್ಲಿ ಚಿಂತೆಯನ್ನುಂಟು ಮಾಡಿದೆ. ಅದರಲ್ಲೂ ಮಧ್ಯಮ ಮತ್ತು ದೊಡ್ಡ ಕುಟುಂಬದಲ್ಲಿ 25 ದಿನಗಳ ಸಿಲಿಂಡರ್ ಮಿತಿಯು ಹೆಚ್ಚಿನ ಸಮಸ್ಯೆಯನ್ನುಂಟು ಮಾಡುತ್ತದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇದಷ್ಟೇ ಅಲ್ಲದೆ ಸಿಲಿಂಡರ್ ಬೆಲೆ ಮತ್ತು ಪೂರೈಕೆಗೆ ಸಂಬಂಧಿಸಿದ ಸೀಮಿತ ಚೌಕಟ್ಟು ಹೊಟೇಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರಿದೆ.

ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ, ಎಲ್ಲವನ್ನು ಸುಗಮಗೊಳಿಸಲು ತೈಲ ಕಂಪನಿಗಳ ಉತ್ಪನ್ನ ಅಧಿಕಾರಿಗಳು ಸಮಿತಿಯೊಂದನ್ನು ವಿಶೇಷವಾಗಿ ರಚಿಸಿದ್ದು , ಸಮಿತಿಯು ಕೈಗಾರಿಕೆಗಳು ಮತ್ತು ಹೊಟೇಲ್ ಗಳ ಬೇಡಿಕೆಗಳನ್ನು ಪರಿಶೀಲಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಸಧ್ಯದ ಸಂದರ್ಭದಲ್ಲಿ ಗೃಹಬಳಕೆದಾರರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವಾಲಯವು ಸ್ಪಷ್ಟಪಡಿಸಿದೆ. ಇದರೊಂದಿಗೆ ಯುದ್ಧದ ಸನ್ನಿವೇಶ ತಣ್ಣಗಾಗುವವರೆಗೆ ಸಿಲಿಂಡರ್ ಪೂರೈಕೆಯಲ್ಲಿನ ಅನಿಶ್ಚಿತತೆ ಮುಂದುವರಿಯುವುದು ಅನಿವಾರ್ಯವಾಗಿದ್ದು, ದೇಶದ ಪ್ರಜೆಗಳು ಪರಿಸ್ಥಿತಿಯನ್ನು ಅರಿತುಕೊಂಡು ಬಳಕೆಯಲ್ಲಿ ಮಿತಿಯನ್ನಿಟ್ಟುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.