Categories
ತೀರ್ಥಹಳ್ಳಿ ಪುತ್ತೂರು ಮಲ್ನಾಡ್ ಮಾಹಿತಿ ಸುದ್ದಿ

ಪ್ರಣವ್ ಕೆ. ಭಟ್ ಅವರಿಗೆ ಮಹತ್ವದ ಹುದ್ದೆ

ಪ್ರಣವ್ ಕೆ. ಭಟ್ ಅವರಿಗೆ ಮಹತ್ವದ ಹುದ್ದೆ
– ಪುತ್ತೂರಿನ ವಿವೇಕಾನಂದ ಸ್ವಾಯತ್ತ ಕಾಲೇಜಿನ ಆಂಗ್ಲ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಸಂಸ್ಥೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ/ ಪುತ್ತೂರು: ತೀರ್ಥಹಳ್ಳಿ ತಾಲೂಕು ಹುಲಿಮಂಡೆಯ ಜ್ಞಾನ ದರ್ಶಿನಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಣವ್ ಕೆ. ಭಟ್ ಅವರು ಪುತ್ತೂರಿನ ವಿವೇಕಾನಂದ ಸ್ವಾಯತ್ತ ಕಾಲೇಜಿನ ಆಂಗ್ಲ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಸಂಸ್ಥೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪ್ರಣವ್ ಅವರು ಅಮೂಲಾಗ್ರ ಕೊಡುಗೆ ನೀಡಿದ್ದು, ಇದೀಗ ಮಹತ್ವದ ಹುದ್ದೆ ಸಿಕ್ಕಿದೆ. ಬೋರ್ಡ್ ಆಫ್ ಸ್ಟಡೀಸ್‌ನ ಮುಖ್ಯ ಕರ್ತವ್ಯವೆಂದರೆ ಪಠ್ಯಕ್ರಮ ರೂಪಿಸುವುದು, ಅದರಲ್ಲಿ ಅಗತ್ಯವಾದ ಬದಲಾವಣೆಗಳನ್ನು ಸೂಚಿಸುವುದು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮಾರ್ಗದರ್ಶನ ನೀಡುವುದು. ಹಾಗೆಯೇ ಪರೀಕ್ಷಾ ವಿಧಾನ, ಪಠ್ಯಪುಸ್ತಕಗಳ ಆಯ್ಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಲಹೆಗಳನ್ನು ನೀಡುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ. ಪ್ರಣವ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ ರಾಷ್ಟ್ರೀಯ ವಾರ್ತೆ

ಭಾರತ ಚಾಂಪಿಯನ್..!

ಭಾರತ ಚಾಂಪಿಯನ್..!
– ದೇಶದಲ್ಲಿ ಸಂಭ್ರಮ: ಟಿ 20 -ವಿಶ್ವಕಪ್ ಗೆದ್ದ ಹೀರೋಸ್
– ಬೆಂಕಿ ಬ್ಯಾಟಿಂಗ್… ಬೆಂಕಿ ಬೌಲಿಂಗ್..

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಹಮದಾಬಾದ್‌: ಆರಂಭದಲ್ಲಿ ಬ್ಯಾಟರ್‌ಗಳ ವಿಸ್ಫೋಟಕ ಬ್ಯಾಟಿಂಗ್ ನಂತರ ಬೌಲರ್‌ಗಳ ಬೆಂಕಿ ಬೌಲಿಂಗ್‌ನಿಂದ ಫೈನಲ್ ಪಂದ್ಯದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು. ಸತತವಾಗಿ ಎರಡು ಟಿ20 ಫೈನಲ್ ಪಂದ್ಯವನ್ನು ಯಾವುದೇ ತಂಡ ಜಯಗಳಿಸಿಲ್ಲ. ಆದರೆ ಭಾರತ 2024 ಮತ್ತು 2026 ರಲ್ಲಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟಿ20 ವಿಶ್ವಕಪ್ ಆತಿಥ್ಯ ವಹಿಸಿದ ತಂಡ ಇಲ್ಲಿಯವರೆಗೆ ಚಾಂಪಿಯನ್‌ ಪಟ್ಟ ಅಲಂಕರಿಸಿರಲಿಲ್ಲ.

ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಿತ್ತು. ಇಲ್ಲಿಯವರೆಗೆ ಯಾವುದೇ ತಂಡ 3 ಟಿ20 ವಿಶ್ವಕಪ್ ಪಂದ್ಯ ಗೆದ್ದಿರಲಿಲ್ಲ. ಆದರೆ 2008, 2024 ಮತ್ತು 2026 ರಲ್ಲಿ ಜಯಿಸುವ ಮೂಲಕ ಭಾರತ ವಿಶ್ವದಾಖಲೆ ಬರೆದಿದೆ. ಇಂಗ್ಲೆಂಡ್ 2010, 2022 ರಲ್ಲಿ ಟ್ರೋಫಿ ಗೆದ್ದರೆ ವೆಸ್ಟ್ ಇಂಡೀಸ್ 2012 ಮತ್ತು 2016 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸಂಜು ಸ್ಯಾಮ್ಸನ್ ಮತ್ತೆ ಹೀರೋ ಆದರು. ಬುಮ್ರಾ 4 ವಿಕೆಟ್ ಪಡೆದು ಸಾಧನೆ ಮಾಡಿದರು. ಇಡೀ ದೇಶ ಈಗ ಸಂಭ್ರಮದಲ್ಲಿದೆ.

Categories
ಮಾಹಿತಿ ಸುದ್ದಿ ರಾಜಕೀಯ ರಾಜ್ಯ

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ : ಸಿಎಂ ಘೋಷಣೆ!

ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ : ಸಿಎಂ ಘೋಷಣೆ!
– ಬ್ರಾಹ್ಮಣ ಸಮುದಾಯಕ್ಕೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
– ಬೇಳೂರು ಗೋಪಾಲ ಕೃಷ್ಣ ಮನವಿಗೆ ಸ್ಪಂದನೆ

ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದೀಗ ರಾಜ್ಯ ಸರ್ಕಾರ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಘೋಷಣೆ ಮಾಡಿದೆ. ಇಂದಿನ ಶಿಷ್ಟ ಕನ್ನಡದಿದ ಭಿನ್ನವಾಗಿ ಹಳಗನ್ನಡದ ಭಾಷಾ ರೂಪಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಇದರ ವಿಶೇಷ. ಪ್ರಾಂತ್ಯವಾರು ಭಾಷಾ ವೈವಿಧ್ಯ ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕವಾಗಿದೆ.

ಇದು ಕನ್ನಡದ ಇತರ ಉಪಭಾಷೆಗಳ ಕಳೆದುಹೋಗಿರುವ ಹಳೆ ಕನ್ನಡದ ಅನೇಕ ವೈಶಿಷ್ಟ್ಯಗಳನ್ನು ಇಂದಿಗೂ ಉಳಿಸಿಕೊಂಡಿದೆ. ಹವ್ಯಕ ಕನ್ನಡವು ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ವಾಸವಾಗಿರುವ ಹವ್ಯಕರ ಮನೆ ಮಾತಾಗಿದೆ. ಇಂದು ಕನ್ನಡದಲ್ಲಿ ಆರು ಲಕ್ಷಕ್ಕೂ ಅಧಿಕ ಜನ ಹವ್ಯಕ ಕನ್ನಡವನ್ನು ಮಾತಾಡುತ್ತಾರೆ. ಕನ್ನಡ ಭಾಷೆ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹವಿಗನ್ನಡದ ಅಧ್ಯಯನ ಬಹಳ ಮುಖ್ಯವಾಗಿದ್ದು, ಇದುವರೆಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿಯೂ ಕಂಡುಬರುವ ಕೆಲವು ಆದಿ-ದ್ರಾವಿಡ ಲಕ್ಷಣಗಳನ್ನು ಹವಿಗನ್ನಡವು ಇಂದಿಗೂ ಉಳಿಸಿಕೊಂಡಿದೆ.

ಆದ್ದರಿಂದ ಹವಿಗನ್ನಡದ ಅಮೂಲಾಗ್ರ ಅಧ್ಯಯನ ಹಾಗ ಸಂರಕ್ಷಣೆಗಾಗಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆ ಅತ್ಯಗತ್ಯವಾಗಿದೆ. ಇದನ್ನು ಮನಗಂಡು, ಈ ವಿಶಿಷ್ಟ ಮತ್ತು ಅಪರೂಪದ ಭಾಷೆಯ ಅಧ್ಯಯನ, ಅಭಿವೃದ್ಧಿ ಮತ್ತು ಸಂರಕ್ಷಣೆ ದೃಷ್ಟಿಯಿಂದ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಘೋಷಿದ್ದಾರೆ. ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹವ್ಯಕ ಸಮಾಜ ಅಭಿನಂದನೆ ಸಲ್ಲಿಸಿದೆ. ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಈ ಬಗ್ಗೆ ಮನವಿ ಸಲ್ಲಿಸಿ ದ್ದರು.

Categories
ಮಾಹಿತಿ ಸುದ್ದಿ ರಾಷ್ಟ್ರೀಯ ವಾರ್ತೆ

ಮಹಿಳೆ ದೇಶದ ಆಸ್ತಿ, ಕುಟುಂಬದ ಕಣ್ಣು..!

ಮಹಿಳೆ ದೇಶದ ಆಸ್ತಿ, ಕುಟುಂಬದ ಕಣ್ಣು..!
– ಸಾಧನೆಗೆ ಸ್ಫೂರ್ತಿ ಹೆಣ್ಣು…ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

ಮಹಿಳಾ ದಿನಾಚರಣೆ ಮತ್ತೊಮ್ಮೆ ಬಂದಿದೆ.‌ ಮಹಿಳೆಯರಿಗೆ ದೊರಕಬೇಕಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸ್ಥಾನಮಾನಗಳಿಗಾಗಿ, ಲಿಂಗ ಸಮಾನತೆಯ ಕಾರಣಕ್ಕಾಗಿ ಹುಟ್ಟಿಕೊಂಡ ಈ ದಿನವನ್ನು ಪ್ರತಿವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1910ರಲ್ಲಿ ಕ್ಲಾರಾ ಜೆಟ್ ಕಿನ್ ಎನ್ನುವ ಮಹಿಳೆಯು ಈ ರೀತಿಯ ದಿನವನ್ನು ಆಚರಿಸಬೇಕು ಎನ್ನುವ ಸಂಗತಿಯನ್ನು ಮಂಡನೆ ಮಾಡಿದರು. ಅದರ ಮರು ವರ್ಷ ಅಂದರೆ 1911ರಿಂದ ಇದು ಆಚರಣೆಗೆ ಬಂದರೂ, 1975ರ ಮಾರ್ಚ್ 8ರಂದು ವಿಶ್ವಸಂಸ್ಥೆಯು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಎನ್ನುವುದನ್ನು ಅಧಿಕೃತವಾಗಿ ಅಂಗೀಕರಿಸಿತು.‌

ಇನ್ನು ದೇಶದ ವ್ಯಾಪ್ತಿಯಲ್ಲಿ ನೋಡುವುದಾದರೆ ಜನವರಿ 24ರಂದು ಹೆಣ್ಣು ಮಕ್ಕಳ ದಿನವನ್ನು, ಫೆಬ್ರವರಿ 13ರಂದು ಸರೋಜಿನಿ ನಾಯ್ಡು ಅವರ ಜನ್ಮದಿನದ ನೆನಪಿಗಾಗಿ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಹೆಚ್ಚಾಗಿ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನೇ ಅದ್ಧೂರಿಯಾಗಿ ಮತ್ತು ಪ್ರತಿವರ್ಷ ಕೆಲವು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ.‌ಇಂದು ಮಹಿಳೆಯು ತನ್ನ ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ಗುರುತಿಸಿಕೊಂಡಿರುವುದಷ್ಟೇ ಅಲ್ಲದೆ ಉನ್ನತ ಸ್ಥಾನಮಾನವನ್ನು ಗಳಿಸಿದ್ದು, ಮುನ್ನುಗ್ಗುತ್ತಿದ್ದರೂ ಕೂಡ, ಕೆಲವೆಡೆ ಮಹಿಳೆಯ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ.

ದೈಹಿಕವಾಗಿ, ಮಾನಸಿಕವಾಗಿ ಮತ್ತು ಅತ್ಯಾಚಾರದ ರೂಪದಲ್ಲೂ ಕೂಡ ಇದು ಮುಂದುವರಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನು ಕೆಲವೆಡೆ ಮಹಿಳೆಗೆ ದೊರೆತ ಸ್ವಾತಂತ್ರ್ಯವೂ ಸ್ವೇಚ್ಛೆಯಾಗಿ ಮಾರ್ಪಟ್ಟು ದುರುಪಯೋಗಗೊಳ್ಳುತ್ತಿದೆ. ಕೆಲ ಮಹಿಳೆಯರಿಗೆ ಧೈರ್ಯ, ಸ್ಥೈರ್ಯ, ದೃಢತೆ, ಆತ್ಮವಿಶ್ವಾಸ ಎಲ್ಲವೂ ಇದ್ದರೂ ಕೂಡ ಸಮಾಜದಲ್ಲಿ ನಡೆಯುತ್ತಿರುವ ವಂಚನೆ, ಅಹಿತಕರ ಘಟನೆಗಳು, ಅಕ್ರಮ ಚಟುವಟಿಕೆಗಳಿಂದಾಗಿ ಕುಗ್ಗುವ ಸ್ಥಿತಿ ಏರ್ಪಟ್ಟು ತನ್ನ ಅಸ್ತಿತ್ವವನ್ನು ತಾನು ಕಂಡುಕೊಳ್ಳಲಾಗದೆ, ಭವಿಷ್ಯವನ್ನು ರೂಪಿಸಿಕೊಳ್ಳಲಾಗದೆ, ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದೆ ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗಿ, ಉಸಿರುಗಟ್ಟಿಸುವಂತಹ ವಾತಾವರಣವದಲ್ಲಿ ಜೀವಿಸಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾಳೆ.

ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ದಿನಮಾನಗಳಲ್ಲಿ ಹೆಣ್ಣಿನ ವಿಚಾರದಲ್ಲಿ ಪುರುಷರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ಕೂಡ ಅದು ಹೆಚ್ಚಿನ ಪ್ರಮಾಣದಲ್ಲಿಲ್ಲ. ತನ್ನನ್ನು ಸಮಾನವಾಗಿ ಕಾಣಬೇಕೆಂದು ಬಯಸುವ ಮಹಿಳೆ, ತಾನೂ ಕೂಡ ಪುರುಷನನ್ನು ಅದೇ ದೃಷ್ಟಿಕೋನದಲ್ಲಿ ನೋಡಬೇಕೆಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತನಗೆ ಸ್ವಾತಂತ್ರ್ಯ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಪುರುಷನನ್ನು ಗುಲಾಮನನ್ನಾಗಿ ಕಾಣುತ್ತಿರುವ, ತನ್ನ ಹಠ ಸಾಧನೆಯ ದಳವನ್ನಾಗಿ ಉಪಯೋಗಿಸಿಕೊಳ್ಳುತ್ತಿರುವ ಅದೆಷ್ಟೋ ಮಹಿಳೆಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ.‌ ಇಂದಿನ ದಿನಗಳಲ್ಲಿ ಹಲವಾರು ಮಹಿಳೆಯರು ವಿಕೃತ ಮನಸ್ಥಿತಿಯನ್ನು ಹೊಂದುತ್ತಿರುವುದನ್ನು ನೋಡಿದರೆ ಎದೆ ಝಲ್ಲೆನ್ನಿಸುತ್ತದೆ.

ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರು ‘ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂದು ಹಾಡಿ ಹೊಗಳಿದ ಮಾತೃಹೃದಯಿ, ಭೂಮಿತೂಕದವಳು ಈಕೆಯೇ ಎಂದು ಅನುಮಾನಪಡುವಂತಹ ಸನ್ನಿವೇಶಗಳು ನಡೆಯುತ್ತಲೇ ಇದೆ.‌ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣವಾಗಲಿ, ಪರಿಪೂರ್ಣವಾಗಲಿ.‌ ತನಗೆ ಸಮಾಜದಿಂದ, ಸರ್ಕಾರದಿಂದ ದೊರಕುತ್ತಿರುವ ಅವಕಾಶಗಳು, ಸೌಕರ್ಯಗಳು, ಸ್ಥಾನಮಾನಗಳ ಮಹತ್ವ ಏನೆಂಬುದು ಮಹಿಳೆಗೇ ಅರಿವಾಗಿ ತನ್ನ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವಂತಾಗಲಿ. ಅಂತೆಯೇ ಮಹಿಳೆಯರನ್ನು, ಅವರ ನಿಜವಾದ ಸಾಮರ್ಥ್ಯವನ್ನು, ಸ್ಥಾನಮಾನವನ್ನು ಗೌರವಿಸಿ, ಪೂಜನೀಯ ಭಾವದಿಂದ ಕಾಣುವ ವಿಶಾಲ ಮನೋಭಾವದ ಪುರುಷರಿಗೂ ಕೂಡ ಮಹಿಳಾ ದಿನಾಚರಣೆಯ ಶುಭಾಶಯಗಳು.

Categories
ಕರಾವಳಿ ಕುಂದಾಪುರ ಪುತ್ತೂರು ಬೆಳ್ತಂಗಡಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಬೈಂದೂರು: ನಗದು, ಚಿನ್ನಾಭರಣ ಕಳುವು
• ಪುತ್ತೂರು: ಅವೈಜ್ಞಾನಿಕ ತಡೆಗೋಡೆ ನಿರ್ಮಾಣ; ನ್ಯಾಯಾಲಯದಿಂದ ತಡೆಯಾಜ್ಞೆ
• ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ವಿಚಾರಣೆ ಮುಂದೂಡಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಬೈಂದೂರು: ನಗದು, ಚಿನ್ನಾಭರಣ ಕಳುವು

• ಬೈಂದೂರು: ಹಗಲು ಹೊತ್ತಿನಲ್ಲೇ ಕಳ್ಳರು ಮನೆಗೆ ನುಗ್ಗಿ ನಗದು, ಚಿನ್ನಾಭರಣ ಕಳುವು ಮಾಡಿರುವ ಘಟನೆ ಪಟವಾಲ್ ಹೌಸ್ ಎನ್ನುವವರ ಮನೆಯಲ್ಲಿ ನಡೆದಿದೆ. ಮನೆಯಲ್ಲಿ ಪರಮೇಶ್ವರ ಪಟವಾಲ್ ಅವರ ಮಗ, ಸೊಸೆ ಮತ್ತು ಇಬ್ಬರು ಮಕ್ಕಳು ವಾಸವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಹೊಂಚು ಹಾಕಿದ್ದಾರೆ. ಅಲ್ಲದೆ ಹಂಚಿನ ಮನೆಯಾದ ಕಾರಣ ಖದೀಮರಿಗೆ ಮನೆಯ ಬೀಗ ಮುರಿದು, ಒಳನುಗ್ಗಲು ಸುಲಭವಾಯಿತು ಎನ್ನಲಾಗಿದೆ.

ಮನೆಯ ಸುತ್ತಮುತ್ತ ಮನೆಗಳಿದ್ದರೂ ಜನನಿಬಿಡ ಪ್ರದೇಶವಾಗಿರುವ ಕಾರಣ ಹಾಗೂ ಮನೆಯ ಬಗ್ಗೆ ತಿಳಿದುಕೊಂಡವರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. 20 ಪವನ್ ಚಿನ್ನ ಹಾಗೂ 2 ಲಕ್ಷ ರೂಪಾಯಿ ನಗದು ಹಣ ಕಳುವಾಗಿದೆ ಎಂದು ಅಂದಾಜಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಆಗಮಿಸಿದ ಶ್ವಾನದಳ, ಬೆರಳಚ್ಚು ತಂಡ, ಬೈಂದೂರು ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿದರು. ಶ್ವಾನದಳವು ಮನೆಯ ಪಕ್ಕದ ರಸ್ತೆಯವರೆಗೂ ತೆರಳಿದೆ ಎನ್ನುವ ಸಂಗತಿ ತಿಳಿದುಬಂದಿದೆ.

• ಪುತ್ತೂರು: ಅವೈಜ್ಞಾನಿಕ ತಡೆಗೋಡೆ ನಿರ್ಮಾಣ ನ್ಯಾಯಾಲಯದಿಂದ ತಡೆಯಾಜ್ಞೆ

ಪುತ್ತೂರು: ಕೃಷಿಭೂಮಿಯ ಪಕ್ಕದಲ್ಲಿ, ಲೇಔಟ್ ಮಾಡುವ ಸಂದರ್ಭದಲ್ಲಿ, ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಿರುವ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಬೇರಿಕೆಯಲ್ಲಿ ಲೇಔಟ್ ಮಾಡುವಾಗ ಸಮೀಪದಲ್ಲಿದ್ದ ಚಂದ್ರಾವತಿ ಮತ್ತವರ ಮಕ್ಕಳ ಕೃಷಿ ತೋಟಗಳಿಗೆ ಹಾನಿಯುಂಟಾಗಿದೆ. ಪರಿಣಾಮವಾಗಿ 300ಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಉದ್ಯಮಿಯ ವಿರುದ್ಧ ವಕೀಲರಾದ ನಾಗೇಶ್ ಶರ್ಮ ಅವರ ಮುಖಾಂತರ ದೂರು ನೀಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಪುತ್ತೂರು 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯವು ಕಾನೂನುಬದ್ಧ ಯೋಜನೆಯಿಲ್ಲದೆ, ಅವೈಜ್ಞಾನಿಕ ತಡೆಗೋಡೆಯಿಂದಾಗಿ ನೈಸರ್ಗಿಕ ಮಳೆ ನೀರು ಅಥವಾ ಒಳಚರಂಡಿ ಮಾರ್ಗಗಳಿಗೆ ಅಡಚಣೆಯುಂಟಾಗಿರುವ ಕಾರಣ ಪಕ್ಕದ ಕೃಷಿಭೂಮಿಗೂ ಹಾನಿಯುಂಟಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಲೇಔಟ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿದೆ.

• ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ವಿಚಾರಣೆ ಮುಂದೂಡಿಕೆ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತರು ಎಂದು ಪರಿಗಣಿಸಬೇಕೆಂದು ಹಾಗೂ ಅದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಫೆಬ್ರವರಿ 5ರಂದು ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ನಡೆಯಬೇಕಿದ್ದ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಲಾಗಿದೆ.

ಧರ್ಮಸ್ಥಳ ಪರ ವಕೀಲರಾದ ಸಿ.ವಿ.ನಾಗೇಶ್ ಹಾಗೂ ಎಸ್ಐಟಿ ಪರವಾಗಿ ವಕೀಲರಾದ ದಿವ್ಯರಾಜ್ ಹೆಗ್ಡೆ ವಾದವನ್ನು ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಅವರು ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿದ್ದರು. ಆದರೆ ನ್ಯಾಯಾಧೀಶರು ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಯಾವುದೇ ವಾದ ಮಂಡನೆಯಾಗಿರಲಿಲ್ಲ. ಈ ನಡುವೆ ಧರ್ಮಸ್ಥಳದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ವಕೀಲರಿಗೆ ವಾದ ಮಂಡನೆಗೆ ಅವಕಾಶವಿದೆ ಎಂದು ಹೇಳಲಾಗಿತ್ತು.

ಈ ಕಾರಣಕ್ಕಾಗಿ ಎಸ್ಐಟಿ ಪರ ವಕೀಲರಾದ ದಿವ್ಯರಾಜ್ ಹೆಗ್ಡೆ, ಧರ್ಮಸ್ಥಳ ಕ್ಷೇತ್ರದ ಪರ ವಕೀಲರಾದ ಮಹೇಶ್ ಕಜೆ, ಧರ್ಮಸ್ಥಳಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದವರ ಪರವಾಗಿ ವಾಸು ಪೂಜಾರಿ, ಎಸ್ಐಟಿ ಸೈಮನ್, ಡಿವೈಎಸ್ಪಿ ಲೋಕೇಶ್, ಪ್ರಮುಖ ಆರೋಪಿ ಚಿನ್ನಯ್ಯ ಹಾಜರಿದ್ದರು. ಆದರೆ, ಮಾರ್ಚ್ 5ರ ಗುರುವಾರದಂದು ಕೂಡ ವಿಚಾರಣೆ ನಡೆಯಲಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಮಾರ್ಚ್ 25ರ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಖಾಯಂ ನ್ಯಾಯಾಧೀಶರು ಆಗಮಿಸುವ ಸಾಧ್ಯತೆ ಇರುವ ಕಾರಣ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
ಬೆಂಗಳೂರು ಮಾಹಿತಿ ಸುದ್ದಿ ರಾಜ್ಯ

ರಾಜ್ಯ ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ಶಾಕ್..!

ರಾಜ್ಯ ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ಶಾಕ್..!
– ಯುದ್ಧದ ಎಫೆಕ್ಟ್, ಸಿಲಿಂಡ‌ರ್ ದರದಲ್ಲಿ ಭಾರೀ ಏರಿಕೆ
– ದಿನ ಬಳಕೆಯ ಗ್ಯಾಸ್ ಸಿಲಿಂಡ‌ರ್ 60, ವಾಣಿಜ್ಯ ಸಿಲಿಂಡರ್ 115 ರೂ ಏರಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್ ಶುಕ್ರವಾರದಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಮಂಡಿಸಿದ್ದು, ಈ ಸಂದರ್ಭದಲ್ಲಿ ಮದ್ಯದ ಮೇಲೆ ಹೊಸ ರೂಪದ ತೆರಿಗೆಯನ್ನು ವಿಧಿಸಿದ್ದಾರೆ. ಪಾನೀಯಗಳಲ್ಲಿರುವ ಮದ್ಯದ ಅಂಶವನ್ನು ಆಧಾರವಾಗಿಟ್ಟಕೊಂಡು ಏಪ್ರಿಲ್ 2026ರಿಂದ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರುವ ಘೋಷಣೆಯನ್ನು ಮಾಡಿದ್ದಾರೆ.

ಇದರೊಂದಿಗೆ ಮದ್ಯಪಾನದ ದುಷ್ಪರಿಣಾಮಗಳು, ಇದರಿಂದ ಸಮಾಜಕ್ಕೆ ಸಂಭವಿಸಬಹುದಾದ ಹಾನಿ ಮತ್ತೆ ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ಪದ್ಧತಿಯಲ್ಲಿ ಬದಲಾವಣೆಯನ್ನು ತರಲಾಗಿದೆ. ಅಲ್ಲದೆ ಈ ತೆರಿಗೆ ಪದ್ಧತಿಯು ಗೋಲ್ಡ್ ಸ್ಟ್ಯಾಂಡರ್ಡ್ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಧಾರವಾಡದ ನಿಮ್ಹಾನ್ಸ್ ಸಂಸ್ಥೆಗಳಲ್ಲಿ ಮಾದಕ ವ್ಯಾಸನಿಗಳ ಪುನರ್ವಸತಿ ಕೇಂದ್ರಗಳನ್ನು ಹಾಗೂ ಮುಖ್ಯವಾಗಿ ಮಾದಕ ವ್ಯಸನಕ್ಕೆ ಒಳಗಾಗಿರುವ 18 ವರ್ಷದೊಳಗಿನ ಮಕ್ಕಳಿಗಾಗಿ ಪ್ರಾಯೋಗಿಕವಾಗಿ ಈ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ಮದ್ಯದ ಮೇಲಿನ ತೆರಿಗೆಯಿಂದಾಗಿ ಮದ್ಯಪ್ರಿಯರಿಗೆ ಬೇಸರವುಂಟಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

ಯುದ್ಧದ ಎಫೆಕ್ಟ್, ಸಿಲಿಂಡ‌ರ್ ದರದಲ್ಲಿ ಭಾರೀ ಏರಿಕೆ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಅಮೆರಿಕಾ ಮತ್ತು ಇರಾನ್ ದೇಶಗಳ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಇಡಿ ಪ್ರಪಂಚದ ಮೇಲಾಗುತ್ತಿದೆ. ಭಾರತಕ್ಕೆ ಶೇ 50 ಕ್ಕಿಂತಲೂ ಅಧಿಕ ತೈಲ ಸಾಗಾಟವಾಗುತ್ತಿದ್ದ ಹಾರ್ಮೊಸ್ ಜಲಸಂಧಿಯನ್ನು ಇರಾನ್ ಮುಚ್ಚಿರುವ ಪರಿಣಾಮ ಭಾರತದ ತೈಲ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದೆ.

ಯುದ್ಧದ ಪರಿಣಾಮ ಭಾರತದ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಬಿಸಿತಟ್ಟಿದ್ದು, ದಿನ ಬಳಕೆಯ ಗ್ಯಾಸ್ ಸಿಲಿಂಡ‌ರ್ ಬೆಲೆಯಲ್ಲಿ 60 ರೂಪಾಯಿಯಷ್ಟು ಏರಿಕೆಯಾಗಿದೆ. ಅಲ್ಲದೆ ವಾಣಿಜ್ಯ ಬಳಕೆಯ ಸಿಲಿಂಡ‌ರ್ ಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು 115 ರೂ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ದರದಲ್ಲೂ ಏರಿಕೆಯಾಗುವ ಸಾಧ್ಯತೆ ಇದ್ದು, ಇದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆ ಆಗುವ ಸಾಧ್ಯತೆ ಇದೆ.

Categories
ಮಲ್ನಾಡ್ ಮಾಹಿತಿ ಸುದ್ದಿ ಶಿವಮೊಗ್ಗ

ಶರಾವತಿ ಕಣಿವೆ ಉಳಿಸುವ ಹೋರಾಟಕ್ಕೆ ಜಯ!?

ಶರಾವತಿ ಕಣಿವೆ ಉಳಿಸುವ ಹೋರಾಟಕ್ಕೆ ಜಯ!?
– ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಹಿನ್ನಡೆ: ಕೇಂದ್ರ ಸಮಿತಿ ಶಿಫಾರಸ್ಸು
– ಸ್ಥಳೀಯ ಹೋರಾಟಕ್ಕೆ ಗೆಲುವು?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವ ದೆಹಲಿ: 10 ಸಾವಿರ ಕೋಟಿ ವೆಚ್ಚದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆ ತಾಂತ್ರಿಕ ಅರ್ಹತೆ ಪರಿಸರ ಸುಸ್ಥಿರತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊoದಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯವು  ತಿಳಿಸಿದೆ. ಅಲ್ಲದೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ತಜ್ಞರ ತಂಡವು ಈ ಯೋಜನೆಗೆ ಅನುಮತಿ ನೀಡುವುದು ಬೇಡ ಎಂದು ಶಿಫಾರಸು ಮಾಡಿದೆ. ಇದರಿಂದಾಗಿ ಸ್ಥಳೀಯ ಜನರಿಗೆ ಹಾಗೂ ಪರಿಸರವಾದಿಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

‎ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರಾದ ಡಾ.ಎಚ್. ಎಸ್. ಸಿಂಗ್, ಪ್ರೊ.ರಾಮನ್ ಸುಕುಮಾರನ್ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಹಾನಿರ್ದೇಶಕರಾದ ಶಿವಕುಮಾರ್ ಅವರನ್ನು ಒಳಗೊಂಡ ತಜ್ಞರ ಸಮಿತಿಯು ಡಿಸೆಂಬರ್ 27ರಿಂದ 30ರವರೆಗೆ ಯೋಜನಾ ಪ್ರದೇಶದಲ್ಲಿ ಸುತ್ತಾಡಿ ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಪರಿಸರ ಸಚಿವಾಲಯಕ್ಕೆ 42 ಪುಟಗಳ ವರದಿ ಸಲ್ಲಿಸಿದೆ.

‎ವರದಿಯನ್ನು ಪರಿಷ್ಕರಿಸಿದ ಸಚಿವಾಲಯವು ಈ ಯೋಜನೆಯ ಅನುಷ್ಠಾನದಿಂದ ದೇಶದ ಪರಿಸರದ ಮೇಲೆ ಬಾರಿ ಪ್ರಮಾಣದಲ್ಲಿ ಹಾನಿ ಉಂಟಾಗುವ ಸಾಧ್ಯತೆ ಇದೆ ಹಾಗೂ ಇದರಿಂದಾಗಿ ದೀರ್ಘಕಾಲಿನ ಸುಸ್ಥಿರತೆಗೆ ಪರಿಣಾಮ ಬೀರಲಿದೆ ಎಂದು ಸಮಿತಿಯು ಅಭಿಪ್ರಾಯ ಪಟ್ಟಿದೆ. ಈ ಯೋಜನೆಯಿಂದಾಗಿ ಹೆಚ್ಚಿನದಾಗಿ ಲಾಭವೇನು ಆಗುವುದಿಲ್ಲ ತಾತ್ಕಾಲಿಕ ಲಾಭ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ವನ್ಯಜೀವಿಗಳಾದ  ಹುಲಿಗಳು ಹಾಗೂ ಸಿಂಹಬಾಲದ ಸಿಂಗಳೀಕ ಇತರೆ ವನ್ಯಜೀವಿಗಳ ಮೇಲಾಗುವ ಪರಿಣಾಮ ಅಪಾರವಾದದು ಎಂದು ಈ ಸಮಿತಿಯು ತಿಳಿಸಿದೆ.
‎
‎ತಜ್ಞರ ಸಮಿತಿ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳು ಏನೇನು?

‎• ಬಾರಿ ಪ್ರಮಾಣದ ಅರಣ್ಯ ನಾಶ ಉಂಟಾಗುತ್ತದೆ
‎• ವನ್ಯಜೀವಿಗಳ ಅವಸಸ್ಥಾನ ಹಾಗೂ ಸ್ಥಳೀಯ ಪ್ರಭೇದಗಳ ನಷ್ಟ
‎• ದೀರ್ಘ ಕಾಲದವರೆಗೆ ನದಿಗಳ ಅವನತಿ
‎• 500 ಮೆಗಾ ವ್ಯಾಟ್ ಗಿಂತ ಹೆಚ್ಚಿನ ನಿವ್ವಳ ವಿದ್ಯುತ್ ನಷ್ಟ
‎• ಭೂಗತ ಬಂಡೆಗಳನ್ನು ಸ್ಪೋಟಿಸಲು ಭಾರವಾದ ಯಂತ್ರಗಳನ್ನು ಬಳಸುವುದರಿಂದ ಭೂಕುಸಿತ ಹೆಚ್ಚಳ
‎• ಯೋಜನೆ ಜಾರಿಯಿಂದಾಗಿ ರೈತರ ವಾಣಿಜ್ಯಕ ಹಾಗೂ ಇತರೆ ಬೆಳೆಗಳ ನಾಶ

ಸ್ಥಳೀಯ ಹೋರಾಟಕ್ಕೆ ಗೆಲುವು?

ಕಳೆದೊಂದು ವರ್ಷದಿಂದ ಸಾವಿರಾರು ಜನ ಈ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿದ್ದರು. ಇದೀಗ ಈ ಹೋರಾಟಕ್ಕೆ ಸದ್ಯಕ್ಕೆ ಜಯ ಸಿಕ್ಕಿದೆ. ಮುಂದೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ.
‎

Categories
ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ

ಅಡಿಕೆ, ಚಿನ್ನ ಕಳ್ಳರ ಬಗ್ಗೆ ಎಚ್ಚರ!

ಅಡಿಕೆ, ಚಿನ್ನ ಕಳ್ಳರ ಬಗ್ಗೆ ಎಚ್ಚರ!
– ಅಡಿಕೆಗೆ ಚಿನ್ನದ ಬೆಲೆ: ಚಿನ್ನಕ್ಕೂ ಹೆಚ್ಚಿದ ದರ
– ಹೆಚ್ಚಿದ ಕಳ್ಳತನ: ಜನರೇ ಹುಷಾರ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು: ಅಡಿಕೆ ಕೊಯ್ಲು ಒಂದು ಹಂತ ಮುಗಿದಿದೆ. ಮಲೆನಾಡು ಮಲೆನಾಡು ಭಾಗದಲ್ಲಿ ಅಡಿಕೆಗೆ ಈಗ ಚಿನ್ನದ ದರ ಬಂದಿದೆ. ಈ ವೇಳೆ ಕಳ್ಳರ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ರೈತರು ಕೂಡ ಅಡಿಕೆ ಬೆಳೆ ಹಾಗೂ ತಮ್ಮ ಮನೆಯ ಸುರಕ್ಷಿತ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ರೈತರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು, ನಾಯಿಗಳನ್ನು ಸಾಕುವುದು ಒಳ್ಳೆಯದು. ಅಪರಿಚಿತರನ್ನು ಮನೆಯಲ್ಲಿ ಬಿಟ್ಟುಕೊಳ್ಳುವುದು ಅಪಾಯ. ಚಿನ್ನದ ದರ ಕೂಡ ಗಗನಕ್ಕೆ ಏರಿದೆ. ಹಾಗಾಗಿ ಕಳ್ಳತನ ಹೆಚ್ಚಳ ಆಗುವ ಸಾಧ್ಯತೆಗಳಿವೆ.

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಅನೇಕ ಭಾಗದಲ್ಲಿ ಕಳೆದ ತಿಂಗಳಿಂದ ಅನೇಕ ಕಳ್ಳತನ ಪ್ರಕರಣಗಳು ನಡೆದಿದ್ದು, ಪೊಲೀಸರು ಅನೇಕ ಪ್ರಕರಣಗಳಲ್ಲಿ ಕಳ್ಳರನ್ನು ಸೇರಿ ಹಿಡಿದಿದ್ದಾರೆ. ಒಂಟಿ ಮನೆಗಳು ಮತ್ತು ಕೆಲವು ಮನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನಲಾಗಿದೆ. ಅನಾಮಿಕರು, ಅಪರಿಚಿತರು ಅನುಮಾನ ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕಿದೆ. ಯಾವುದೇ ರೀತಿಯ ಅನುಮಾನ ಬಂದಲ್ಲಿ ಕಳ್ಳತನ ಪ್ರಕರಣ ಆಗುತ್ತಿರುವ ಸಂದರ್ಭಗಳಲ್ಲಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.

Categories
ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ

ಬಜೆಟ್ ಮಲೆನಾಡಿಗೆ ಹಲವು ಘೋಷಣೆ!

ಬಜೆಟ್ ಮಲೆನಾಡಿಗೆ ಹಲವು ಘೋಷಣೆ!
– ಅಡಿಕೆ ರೋಗ ನಿಯಂತ್ರಣಕ್ಕೆ 10 ಕೋಟಿ ಅನುದಾನ
– ರಾಜಧಾನಿಯ ಪ್ರಸಿದ್ಧ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು
– ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಘೋಷಣೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ/ ಚಿಕ್ಕಮಗಳೂರು: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾಖಲೆಯ 17 ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಮಲೆನಾಡಿನ ಅನೇಕ ಭಾಗದದಲ್ಲಿ ಜೀವನ ಆಧಾರ ಬೆಳೆಯಾದ ಅಡಿಕೆ ಬೆಳೆಯಲ್ಲಿ ಕಂಡುಬರುವ ಎಲೆಚುಕ್ಕಿ, ಹಳದಿ ರೋಗ ನಿವಾರಣೆಗಾಗಿ ಸರ್ಕಾರ 10 ಕೋಟಿ ಅನುದಾನವನ್ನು ಬಜೆಟ್ ಅಲ್ಲಿ ಘೋಷಣೆ ಮಾಡಿದೆ. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

.ಇದಕ್ಕೂ ಜೊತೆಗೆ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ತೋಟಗಾರಿಕೆಯನ್ನು ರೈತರ ಆದಾಯ ಹೆಚ್ಚಿಸುವ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಗುರಿ ಸರ್ಕಾರ ಹೊಂದಿದೆ. ಉತ್ತಮ ಗುಣಮಟ್ಟದ, ಅಧಿಕ ಮೌಲ್ಯದ ಮತ್ತು ಮಾರುಕಟ್ಟೆ ಆಧಾರಿತ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ಮಲೆನಾಡ ಕೃಷಿಗೆ ಅನುಕೂಲ ಆಗಲಿದೆ.

ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಘೋಷಣೆ

ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಂಪರೆಯನ್ನು ಸಮೃದ್ಧಗೊಳಿಸುವ ಮಹತ್ವದ ನಿರ್ಧಾರವಾಗಿ 2026–27ರ ರಾಜ್ಯ ಬಜೆಟ್‌ನಲ್ಲಿ ತೀರ್ಥಹಳ್ಳಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಘೋಷಣೆ ಮಾಡಲಾಗಿದೆ. ಇತ್ತೀಚಿಗೆ ತೀರ್ಥಹಳ್ಳಿಯ ನಿಯೋಗ ಸಿಎಂ ಭೇಟಿ ಮಾಡಿ ಮನವಿ ಮಾಡಿತ್ತು. ಇದೀಗ ತೀರ್ಥಹಳ್ಳಿಯಲ್ಲಿ ಅಧ್ಯಯನ ಕೇಂದ್ರ ಬರಲಿದೆ. ತೀರ್ಥಹಳ್ಳಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗುವುದು ಸಾಹಿತ್ಯ ಪ್ರೇಮಿಗಳಿಗೆ, ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಹತ್ತರ ಪ್ರೇರಣೆಯಾಗಲಿದೆ.

ರಾಜಧಾನಿಯ ಪ್ರಸಿದ್ಧ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು

ಮಲೆನಾಡೆಂದರೆ ಸದಾ ಸ್ಮರಣೀಯರಾದ ಧೀಮಂತ ನಾಯಕ ದಿ ಶಾಂತವೇರಿ ಗೋಪಾಲಗೌಡರು, ಭೂ ಸುಧಾರಣೆ-ಉಳುವವನೆ ಹೊಲದೊಡೆಯ ಘೋಷಣೆ ಅಡಿ ಭೂಸುಧಾರಣೆ ಅನುಷ್ಠಾನ ಜಾರಿಗೆ ಹೋರಾಡಿದ,ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಧೀಮಂತ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಹೆಸರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ಹೆಸರಿಗೆ ಮರು ನಾಮಕರಣ ಮಾಡಿರುವುದು ಮಲೆನಾಡಿಗೆ ಅತೀವ ಹೆಮ್ಮೆಯ ಸಂಗತಿ‌ಯಾಗಿದೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಹಾರೇಕೊಪ್ಪ ದಬ್ಬಣಗದ್ದೆಯಲ್ಲಿ ಧಾರ್ಮಿಕ ಸಂಭ್ರಮ!

ಹಾರೇಕೊಪ್ಪ ದಬ್ಬಣಗದ್ದೆಯಲ್ಲಿ ಧಾರ್ಮಿಕ ಸಂಭ್ರಮ!
– ಉಗ್ರ ಚೌಡೇಶ್ವರಿ, ಸಪರಿವಾರ ಅಮ್ಮನವರ ದೇವಸ್ಥಾನದ ಉಗ್ರಚೌಡೇಶ್ವರಿ ಮತ್ತು ಸಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನೆ
– ಮಾ. 8ಕ್ಕೆ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹಾರೇಕೊಪ್ಪ ದಬ್ಬಣಗದ್ದೆ ಗ್ರಾಮದ ಶ್ರೀ ಉಗ್ರ ಚೌಡೇಶ್ವರಿ ಮತ್ತು ಸಪರಿವಾರ ಅಮ್ಮನವರ ದೇವಸ್ಥಾನದ ಶ್ರೀಉಗ್ರಚೌಡೇಶ್ವರಿ ಮತ್ತು ಸಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನಾ ಮಹೋತ್ಸವವನ್ನು ಮಾರ್ಚ್ 6ರ ಶುಕ್ರವಾರದಿಂದ ಮಾರ್ಚ್ 8ರ ಭಾನುವಾರದವರೆಗೆ ಹಮ್ಮಿಕೊಳ್ಳಲಾಗಿದೆ.

ಇದರ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದಿನಾಂಕ 6ರ ಶುಕ್ರವಾರದಂದು ಬೆಳಿಗ್ಗೆ ಗಣಪತಿ ಪೂಜೆ, ಗುರುಪ್ರಾರ್ಥನೆ, ಗಣಹೋಮ ಮತ್ತು ಅಂದು ಸಂಜೆ 6:30ಕ್ಕೆ ಶ್ರೀನಾಗಬ್ರಹ್ಮ ದೇವರಿಗೆ ಬಿಂಬಶುದ್ಧಿ, ನೇತ್ರೋಮ್ಮಿಲನ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಸರ್ವ ಪ್ರಾಯಶ್ಚಿತ ನಾಗಮಂಡಲ ರಚನೆ, ಆಶ್ಲೇಷಬಲಿ, ಕಲಶ ಸ್ಥಾಪನೆ, ದಿಗ್ಬಲಿ ಮತ್ತು ಶಯನೋತ್ಸವ ನಡೆದಿದೆ.

ದಿನಾಂಕ 8ರ ಭಾನುವಾರದಂದು ಬೆಳಿಗ್ಗೆ ಶ್ರೀನಾಗದೇವರ ಪ್ರತಿಷ್ಠಾಪನೆ, ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ ಜರುಗಲಿದ್ದು ಅದೇ ದಿನ ಸಂಜೆ ಶ್ರೀಚೌಡೇಶ್ವರಿ ದೇವರು ಮತ್ತು ಸಪರಿವಾರ ದೇವರುಗಳಿಗೆ ಬಿಂಬಶುದ್ಧಿ, ನೇತ್ರೋಮ್ಮಿಲನ, ಅಧಿವಾಸ ಹೋಮ, ವಾಸ್ತುಮಂಡಲ ರಚನೆ, ದುರ್ಗಾದೀಪ ನಮಸ್ಕಾರ, ದಿಗ್ಬಲಿ, ಶಯನೋತ್ಸವ ನೆರವೇರಲಿದೆ. ಕೊನೆಯ ದಿನವಾದ ಭಾನುವಾರದಂದು ರಾತ್ರಿ 7:00 ಗಂಟೆಯಿಂದ ಮೇಗರವಳ್ಳಿಯ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರಿಂದ ‘ಸಂಪೂರ್ಣ ಶ್ರೀದೇವಿ ಮಹಾತ್ಮೆ’ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಅಂದು ಗೌರಿಗದ್ದೆಯ ಅವಧೂತರಾದ ಶ್ರೀವಿನಯ್ ಗುರೂಜಿ ಅವರ ಉಪಸ್ಥಿತಿಯಲ್ಲಿ ಶಿಖರ ಪ್ರತಿಷ್ಠಾಪನೆ ಹಾಗೂ ಶ್ರೀದೇವಿಗೆ ಪ್ರಾಣಪ್ರತಿಷ್ಠೆ ಹೋಮ ಮತ್ತು ಮಹಾಮಂಗಳಾರತಿ ನೆರವೇರಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಹಾರೇಕೊಪ್ಪದ ಗ್ರಾಮಸ್ಥರು, ಹಾರೇಕೊಪ್ಪದ ಶ್ರೀಚೌಡೇಶ್ವರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸದಸ್ಯರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.