Categories
ಅಡಿಕೆ-ದರ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಸರಕು: 62800-77120-87440
ಬೆಟ್ಟೆ : 55100-58300-58800
ರಾಶಿ ಇಡಿ: 48199-55699-56169
ಗೊರಬಲು: 19010-37009-41679

Categories
ಮಾಹಿತಿ ಸುದ್ದಿ ರಾಜ್ಯ ವಿಶೇಷ ಸುದ್ದಿ

16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್!

16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್!
– ಬಜೆಟ್ ಅಲ್ಲಿ ಏನೇನು? ಯಾವುದು ವಿಶೇಷ..?
– ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ರಾಜ್ಯದ 2026-27 ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17 ನೇ ಬಾರಿಗೆ 4.48 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡಿಸಿದ್ದಾರೆ.

ರಾಜ್ಯ ಬಜೆಟ್‌ ಮುಖ್ಯಾಂಶಗಳು:

1. 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್‌
2. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಇನ್ನು ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆ
3. ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ಮೀಸಲು
4. ಕಾಲೇಜು ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಪುನರಾರಂಭ
5. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30 ಸಾವಿರ ಕೋಟಿ ಸಾಲ
6. ರಾಜ್ಯದ 5 ಕಡೆ ರೇಷ್ಮೆ ಪಾರ್ಕ್
7. ಬೆಂಗಳೂರು ಮೆಟ್ರೋ ವಿಸ್ತರಣೆ
8. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರ ಹುದ್ದೆ ಭರ್ತಿ
9. ಶಾಲಾ ಕಾಲೇಜುಗಳಿಗೆ 15 ಸಾವಿರ ಶಿಕ್ಷಕರ ನೇಮಕಾತಿ
10. ಕಾರವಾರದಲ್ಲಿ 198 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
11. ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನ ಮಾತೃತ್ವ ರಜೆ
12. ಅಲ್ಪಸಂಖ್ಯಾತ, SC-ST ನಿಗಮಗಳ ಸಾಲಗಳಿಗೆ ಬಡ್ಡಿ ಮನ್ನಾ
13. ಮಾನವ ವನ್ಯ ಜೀವಿಗಳ ಸಂಘರ್ಷ ತಡೆಗೆ 1445 ಕೋಟಿ ಮೀಸಲು
14. ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಯಲ್ಲಿ ಬಿಸಿಯೂಟ
15. ರಾಜ್ಯದ 11 ಜಿಲ್ಲೆಗಳಲ್ಲಿ 12 ಪೋಲಿಸ್ ಠಾಣೆ ಸ್ಥಾಪನೆ
16. ಕುಕ್ಕೆ ಕೊಲ್ಲೂರು ದೇಗುಲ ಅಭಿವೃದ್ಧಿ
17. ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರವಿತರಣೆ
18. ಉದ್ಯೋಗಸ್ಥ SC-ST ಮಹಿಳೆಯರಿಗೆ ಹೊಸ ಹಾಸ್ಟೆಲ್‌ ಘೋಷಣೆ
19. ಈ ವರ್ಷ 1.32 ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರ
20. ಕರ್ನಾಟಕ ರಾಜ್ಯದ ಒಟ್ಟಾರೆ ಸಾಲ 8.24 ಲಕ್ಷ ಕೋಟಿ
21. ಬೆಂಗಳೂರಿನಲ್ಲಿ AI ಕೇಂದ್ರ
22. ಒಟ್ಟು 56,432 ಹುದ್ದೆಗಳಿಗೆ ನೇಮಕಾತಿ
23. ಮದ್ಯ ದರ ಹಂತ ಹಂತವಾಗಿ ಏರಿಕೆ
24. ಸವಿತಾ ಸಮಾಜದವರಿಗೆ ಸಲೂನ್ ತೆರೆಯಲು ಶೇ 4 ಬಡ್ಡಿ ದರದಲ್ಲಿ 10 ಲಕ್ಷ ಸಾಲ
25. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಜೊತೆಗೆ 300 ಹಾಸಿಗೆಯ ಆಸ್ಪತ್ರೆ
26. ಮಹಿಳಾ ವೃದ್ಧಾಶ್ರಮ ಸ್ಥಾಪನೆ
27. ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ
28. ಅಲ್ಪಸಂಖ್ಯಾತ ಮಹಿಳಾ ಸಹಕಾರಿ ಸಂಘ ಸ್ಥಾಪನೆ ಘೋಷಣೆ
29. ಮಲೆನಾಡು ಕರಾವಳಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಅನುದಾನ
30. ಮೀನುಗಾರರಿಗೆ ಪ್ರೋತ್ಸಾಹ ಧನ 20 ಸಾವಿರಕ್ಕೆ ಏರಿಕೆ
31. ಗ್ರಾಮ ಪಂಚಾಯತ್ ವಿದ್ಯುತ್ ಬಿಲ್ ಹೊರೆ ತಪ್ಪಿಸಲು ಸೋಲಾ‌ರ್ ಗ್ರಿಡ್ ಸ್ಥಾಪನೆ

800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ

1.3900 ಕೋಟಿ ರೂಗಳ ವೆಚ್ಚದಲ್ಲಿ ಎಡಿಬಿ, ಕೆಕೆಆರ್‌ಡಿಬಿ ಮತ್ತು ಕೆಎಂಇಆರ್‌ಸಿ ನೆರವಿನೊಂದಿಗೆ 800 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ
2. ವಿಶ್ವವಿದ್ಯಾನಿಲಯಗಳಲ್ಲಿ 1,000 ಬೋಧಕ ಹುದ್ದೆಗಳ ಭರ್ತಿ
3. 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಪದವಿ ಕಾಲೇಜುಗಳ ಉನ್ನತಿಕರಣ
4. 500 ಕೋಟಿ ರೂಪಾಯಿ ವೆಚ್ಚದಲ್ಲಿ ಐಐಟಿ ಮಾದರಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿಶ್ವವಿದ್ಯಾಲಯದ ಅಭಿವೃದ್ಧಿ
5. ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿನ ಮಹಿಳಾ ಅಧಿಕ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ
6. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಧಾರವಾಡ ಮತ್ತು ಬೆಂಗಳೂರಿನಲ್ಲಿ ಡಿಜಿಟಲ್ ಲೈಬ್ರರಿ ಹಾಗು ಅಧ್ಯಯನ ಕೇಂದ್ರ ಸ್ಥಾಪನೆ
7. NCC ಕೆಡಿತ್ ಕಾರ್ಯ ಬಲ ಹೆಚ್ಚಳ
8. ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ 25 ಎಕರೆ ಜಮೀನು

Categories
ಕೊಪ್ಪ ಮಲ್ನಾಡ್ ಶಿವಮೊಗ್ಗ ಸಾಗರ

ಕಾಫಿ ನಾಡಲ್ಲಿ ಕಾಡಾನೆ ತಡೆಗೆ ಸರ್ಕಾರದ ಆದೇಶ!

ಕಾಫಿ ನಾಡಲ್ಲಿ ಕಾಡಾನೆ ತಡೆಗೆ ಸರ್ಕಾರದ ಆದೇಶ!
– ಶೃಂಗೇರಿ-ಕೊಪ್ಪ ಆನೆ ಕಾರ್ಯಪಡೆ ರಚನೆಗೆ ಅಸ್ತು
– ರಾಜೇಗೌಡ ಅವರ ಪ್ರಯತ್ನಕ್ಕೆ ಸಂದ ಫಲ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕಾಫಿ ನಾಡಿನಲ್ಲಿ ಕಾಡಾನೆ ಸೇರಿದಂತೆ ಇತರ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿದ್ದು, ಕಾಡಾನೆ ದಾಳಿಯಿಂದಾಗಿ ಮಲೆನಾಡು ಭಾಗದಲ್ಲಿ ಹಲವಾರು ಜನ ಕಾರ್ಮಿಕರು,ರೈತರು ಸಾವನ್ನಪ್ಪಿದ್ದು, ಫಸಲು ಕೈಗೆ ಬರುವಂತಹ ಸಮಯದಲ್ಲಿ ಬೆಳೆ ಹಾನಿಯಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಹ ಉಂಟಾಗಿದೆ.

ಶಾಸಕರಾದ ಟಿ.ಡಿ.ರಾಜೇಗೌಡ ಅವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಸಫಲರಾಗಿದ್ದು, ಮಾನವ ಮತ್ತು ಕಾಡಾನೆ ನಡುವಿನ ಸಂಘರ್ಷವನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ-ಕೊಪ್ಪ ಆನೆ ಕಾರ್ಯಪಡೆ ಕಾರ್ಯಗತಗೊಳಿಸಲು ಸಿದ್ಧತೆಯನ್ನು ನಡೆಸಲಾಗಿದೆ.

ಏನಿದು ಆನೆ ಕಾರ್ಯಪಡೆ?

ಆನೆ ಕಾರ್ಯಪಡೆಯು ಅನುಷ್ಠಾನಗೊಳ್ಳುವುದರಿಂದ ಹೆಚ್ಚು ಜನ ಅರಣ್ಯ ಸಿಬ್ಬಂದಿಗಳು, ಹೆಚ್ಚಿನ ಸಲಕರಣೆಗಳು ಮತ್ತು ಹೆಚ್ಚಿನ ಸಂಪನ್ಮೂಲ ಲಭ್ಯವಾಗುತ್ತದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಕಾಡಾನೆಯ ಹಾವಳಿ ನಿಯಂತ್ರಣಗೊಳ್ಳಲಿದೆ ಎನ್ನಲಾಗಿದೆ.

ಎಲ್ಲಿಂದ ಎಲ್ಲಿಗೆ?

ಇನ್ನು ಕೊಪ್ಪ ವಿಭಾಗದ ಚಿಕ್ಕ ಅಗ್ರಹಾರ ವಲಯದ ವ್ಯಾಪ್ತಿಯಲ್ಲಿ ಸಾರ್ಯಾದಿಂದ ಕರ್ಕೂಟ ಪ್ರದೇಶದವರೆಗೆ 2.8 ಕಿಲೋಮೀಟರ್ ದೂರದವರೆಗೆ ವಿನ್ಯಾಸ ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕಾಗಿ 4.69.40.000, ಬೆಳ್ಳಂಗಿಯಿಂದ ಕೊಳೆಹಳ್ಳದವರೆಗೆ 2.23 ಕಿಲೋಮೀಟರ್ ದೂರದವರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 4.31.70.000 ರೂಪಾಯಿ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದ್ದು ಒಟ್ಟು 7.61 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೆಡ್ ನಿರ್ಮಿಸಲು 12 ಕೋಟಿ 78 ಲಕ್ಷ ರೂಪಾಯಿ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

• ಭದ್ರಾವತಿ: ನದಿಯಲ್ಲಿ ಕಾಣಿಸಿಕೊಂಡ ಮೊಸಳೆ

ಭದ್ರಾವತಿ: ನದಿಯೊಳಗೆ ಮೊಸಳೆಯೊಂದು ಪ್ರತ್ಯಕ್ಷಗೊಂಡ ಘಟನೆ ನಡೆದಿದೆ. ಹೊಳೆಹೊನ್ನೂರಿನ ಭದ್ರಾ ನದಿಯಲ್ಲಿ ಇದು ಕಾಣಿಸಿಕೊಂಡಿದ್ದು, ವಾಹನಗಳಲ್ಲಿ ಸಂಚರಿಸುತ್ತಿದ್ದ ಜನರು ಸೇತುವೆಯ ಮೇಲ್ಭಾಗದಿಂದ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಪ್ರತ್ಯಕ್ಷ ದರ್ಶಿಗಳು ಅದರ ವೀಡಿಯೊ ತೆಗೆದಿರುವುದರಿಂದ ಈ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.‌ ಸ್ಥಳೀಯರು ಹೆಚ್ಚಿನ ಪ್ರಮಾಣದಲ್ಲಿ ಈ ನದಿಗೆ ಬಟ್ಟೆ ಒಗೆಯಲು ಹೋಗುವುದರಿಂದ ಅಲ್ಲಿಗೆ ತೆರಳುವ ಜನರು ಎಚ್ಚರಿಕೆಯಿಂದ ಇರಬೇಕೆಂದು ಹೇಳಲಾಗಿದೆ.

•ಸಾಗರ: ಹಲ್ಲಿನಲ್ಲಿ ಅಡಗಿದೆ ಸಾವಿನ ಅಸಲಿ ಕಥೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸಾಗರ: 2025 ರ ನವೆಂಬರ್ ತಿಂಗಳಿನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹೊಸ ತಿರುವೊಂದು ಇದೀಗ ದೊರೆತಿದೆ. ತ್ಯಾಗರ್ತಿ ಗ್ರಾಮದ ರವಿ ಎನ್ನುವ ಹೆಸರಿನ ವ್ಯಕ್ತಿಯೊಬ್ಬರು ಕಟ್ಟಿಗೆಗೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ತಲೆಬುರುಡೆಯನ್ನು ಕಂಡು ಬೆಚ್ಚಿ ಬಿದ್ದಿದ್ದರು. ತಕ್ಷಣ ರವಿಯವರು ಸ್ಥಳೀಯ ಪೊಲೀಸರು ಹಾಗೂ ಆನಂದಪುರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಮಾಹಿತಿ ಲಭಿಸುತ್ತಿದ್ದಂತೆ ಪಿಎಸ್ಐ ಪ್ರವೀಣ್ ಹಾಗೂ ಎಸ್ ಪಿ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ತಂಡವು ಪರಿಶೀಲನೆಯನ್ನು ನಡೆಸಿತ್ತು.

ತಲೆಬುರುಡೆಯನ್ನು ಹೊರತುಪಡಿಸಿ ಮೂಳೆ ರೀತಿಯ ಯಾವುದೇ ಅವಶೇಷಗಳು ಕಂಡುಬಾರದೆ, ಕೇವಲ ವ್ಯಕ್ತಿ ಧರಿಸಿದ್ದ ಎಂದು ಊಹಿಸಬಹುದಾದ ಬಟ್ಟೆಗಳು ಮಾತ್ರ ಸಿಕ್ಕಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಪೊಲೀಸರಿಗೆ 2024ರ ಜುಲೈ ತಿಂಗಳಿನಲ್ಲಿ ತ್ಯಾಗರ್ತಿ ಗ್ರಾಮದ ಬಸವರಾಜ್ ಎನ್ನುವ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಕುರಿತು ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ವ್ಯಕ್ತಿ ಇವರೇ ಇರಬಹುದೇ ಎನ್ನುವ ಅನುಮಾನ ಇದರಿಂದಾಗಿ ಬಲವಾಗತೊಡಗಿತು.

ಈ ಹಿನ್ನೆಲೆಯಲ್ಲಿ ಪರಿಶೀಲನೆಯ ಸಮಯದಲ್ಲಿ ಪೊಲೀಸರಿಗೆ ದೊರೆತಿದ್ದ ಬಟ್ಟೆಗಳನ್ನು ಬಸವರಾಜ್ ಅವರ ಕುಟುಂಬಸ್ಥರಿಗೆ ತೋರಿಸಿದಾಗ, ಅವರ ಪತ್ನಿ ಮತ್ತು ಮಗಳು ಆ ಬಟ್ಟೆಗಳು ತಮ್ಮ ಕುಟುಂಬದ ಸದಸ್ಯರದ್ದೇ ಎಂದು ದೃಢಪಡಿಸಿದ್ದರು ಎನ್ನಲಾಗಿದೆ. ಕೇವಲ ತಲೆಬುರುಡೆ ದೊರೆತಿದ್ದ ಕಾರಣ ವ್ಯಕ್ತಿಯ ಗುರುತಿಗಾಗಿ ವೈಜ್ಞಾನಿಕ ಪರೀಕ್ಷೆಯನ್ನು ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಯಿತು.‌ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮೂಲಕ ಎಸ್ಎಸ್ಎಲ್ ದಾವಣಗೆರೆ ಮತ್ತು ಹುಬ್ಬಳ್ಳಿಗೆ ಕಳುಹಿಸಲಾಗಿತ್ತು.‌

ವೈಜ್ಞಾನಿಕ ಪರೀಕ್ಷೆಯ ಸಂದರ್ಭದಲ್ಲಿ ತಲೆಬುರುಡೆಯೊಳಗಿದ್ದ ಒಂದೇ ಒಂದು ಹಲ್ಲು ಪ್ರಮುಖ ಸಾಕ್ಷಿಯಾಗಿ ದೊರೆತು, ಅದರ ಆಧಾರದ ಮೇಲೆ ಬಸವರಾಜ್ ಅವರ ಮಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆ ನಡೆಸಲಾಯಿತು. ಇದೀಗ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಅದು ಬಸವರಾಜ್ ಅವರ ತಲೆಬುರುಡೆಯೇ ಎನ್ನುವುದು ಧೃಡಪಟ್ಟಿದೆ. ತನಿಖೆಯ ಸಂದರ್ಭದಲ್ಲಿ ಬಂದ ಮಾಹಿತಿಯ ಪ್ರಕಾರ ಬಸವರಾಜ್ ತೀವ್ರ ಮದ್ಯವ್ಯಸನಿಯಾಗಿದ್ದು, ಕುಟುಂಬದಲ್ಲಿ ಕಲಹಗಳು ನಡೆಯುತ್ತಿದ್ದುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Categories
ಬೆಂಗಳೂರು ಮಾಹಿತಿ ಸುದ್ದಿ ರಾಜಕೀಯ ರಾಜ್ಯ

ಬಜೆಟ್ ಕ್ಷಣಗಣನೆ: ಜನರಿಗೆ ಸಿಗುತ್ತಾ ಸಿಹಿ!

ಬಜೆಟ್ ಕ್ಷಣಗಣನೆ: ಜನರಿಗೆ ಸಿಗುತ್ತಾ ಸಿಹಿ!
– 17 ನೇ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ
– ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ಲೈವ್
– ಮಹಿಳೆಯರಿಗೆ ಸೀರೆ… ಯುವಕರಿಗೆ ಉದ್ಯೋಗ ಸೃಷ್ಟಿಗೆ ಅವಕಾಶ?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 6ರಂದು 2026-27 ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ರಾಜ್ಯದ ಜನ ಅನೇಕ ಭರವಸೆ ಇಟ್ಟಿದ್ದು ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 2026 ರಂದು ರಾಜ್ಯದ 2026-27ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ ಅವರ 17ನೇ ಬಜೆಟ್ ಆಗಿರುವುದರಿಂದ ದಾಖಲೆಯಾಗಿದೆ.

ಈ ಬಜೆಟ್‌ ಮತ್ತೊಂದು ವಿಶೇಷವೆಂದರೆ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಈ ಬಜೆಟ್ ಮಂಡನೆಯ ನೇರಪ್ರಸಾರವನ್ನು ರಾಜ್ಯದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇರುವ ತನ್ನ ಡಿಜಿಟಲ್ ಡಿಸ್ಪ್ಲೇ (LED) ಪರದೆಗಳ ಮೂಲಕ ನೇರ ಪ್ರಸಾರ ಮಾಡಲು ಮುಂದಾಗಿದೆ.

ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆ ಹಾಗೂ ಬಳಿಕ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯ ನೇರ ಪ್ರಸಾರವನ್ನು ರಾಜ್ಯದ ವಿವಿಧ ಬಸ್ ನಿಲ್ದಾಣಗಳಲ್ಲಿ ಜನರು ವೀಕ್ಷಿಸುವ ಅವಕಾಶ ಇರಲಿದೆ.
ಮಹಿಳೆಯರಿಗೆ ಸೀರೆ… ಯುವಕರಿಗೆ ಉದ್ಯೋಗ ಸೃಷ್ಟಿಗೆ ಅವಕಾಶದ ಬಗ್ಗೆ ಹೆಚ್ಚು ಚರ್ಚೆಯಲ್ಲಿದೆ.

Categories
ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್

ಇರಾನ್‌ನಲ್ಲಿ ಕೊಪ್ಪದ ಗಡಿಕಲ್ ಸಮೀಪದ ಯುವಕ ಪತ್ತೆ!

ಇರಾನ್‌ನಲ್ಲಿ ಕೊಪ್ಪದ ಗಡಿಕಲ್ ಸಮೀಪದ ಯುವಕ ಪತ್ತೆ!
– ಡಾ.ಆರತಿ ಕೃಷ್ಣ, ರಾಮಸ್ವಾಮಿ, ಕೋಟಾ ಅವರ ಸಹಾಯ ಹಸ್ತ
– ದುಬೈನಲ್ಲಿ ಸಿಲುಕಿಕೊಂಡಿರುವ ತೀರ್ಥಹಳ್ಳಿ ವರ್ತಕರ ಸಂಘದ ಅಧ್ಯಕ್ಷ ಚೈತನ್ಯಜವಳಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಇರಾನ್ ದೇಶದ ಮರ್ಚಂಟ್ ನೇವಿಯಲ್ಲಿ ತರಬೇತಿಗೆ ತೆರಳಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ ಯುವಕ ನಿಶ್ಚಿತ್ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ. ಇರಾನ್ ಯುದ್ಧ ಆರಂಭಗೊಂಡ ಬಳಿಕ ಆತ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರು ಆತಂಕಕ್ಕೊಳಗಾಗಿ ಸರಕಾರದ ನೆರವು ಕೋರಿದ್ದರು.

ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿದು ವಿದ್ಯಾರ್ಥಿಯ ಪತ್ತೆಗೆ ಕಾರ್ಯ ಪ್ರವೃತ್ತರಾದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದ್ದು, ವಿದ್ಯಾರ್ಥಿ ಸುರಕ್ಷಿತವಾಗಿರುವುದನ್ನು ಖಚಿತ ಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ನಾಯಕರಾದ ರಾಮಸ್ವಾಮಿ ಅವರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಮುಕಾಂತರ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದರು. ಇದೀಗ ಕುಟುಂಬ ನಿರಾಳವಾಗಿದೆ.

ಸಂಪರ್ಕಕ್ಕೆ ಸಿಗದೆ ನಾಪತ್ತೆ: ಕುಟುಂಬದ ಕಣ್ಣೀರು!

ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿಕಲ್ ಸಮೀಪದ ಗಣಪತಿಕಟ್ಟೆಯ ನಿವಾಸಿ ಮಹೇಶ್ ಎಂಬುವರ ಪುತ್ರ ನಿಶ್ಚಿತ್, ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದನು. 8 ದಿನಗಳ ಹಿಂದೆ ತಂದೆಗೆ ಫೋನ್ ಮಾಡಿದ್ದ ನಿಶ್ಚಿತ್ ಬಳಿಕ ಸಂಪರ್ಕ ಸಿಗಲಿಲ್ಲ. ಕುವೈತ್‌ ಹೋಗುವುದಾಗಿ ಹೇಳಿದ್ದ ನಿಶ್ಚಿತ್ ಇದೀಗ ಕಣ್ಮರೆಯಾಗಿದ್ದು, ಮಗನ ಸಂಪರ್ಕ ಸಿಗದೆ ಪೋಷಕರು ಕಂಗಾಲಾಗಿದ್ದರು.ವಿಷಯ ತಿಳಿದು ಇಂದು ನಿಶ್ಚಿತ್ ಮನೆಗೆ ತೆರಳಿದ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಎಸ್ ಎನ್ ರಾಮಸ್ವಾಮಿ ಶೆಟ್ಟಿಗದ್ದೆಯವರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ವಿಷಯ ತಿಳಿಸಿದರು.

ಅವರು ಇಂಡಿಯನ್ ಎಂಬೆಸಿಗೆ ಸಂಪರ್ಕ ಮಾಡಿ ನಿಶ್ಚಿತ್ ಬಗ್ಗೆ ವಿಚಾರಿಸಿದಾಗ ನಿಶ್ಚಿತ್ ಇರಾನ್ ಬಿಟ್ಟು ನಾಲ್ಕು ದಿನ ಆಗಿದೆ ಕುವೈತ್ ಗೆ ಹೋಗುವ ಹಡಗಿನಲ್ಲಿ ಹೋಗ್ತಾ ಇದ್ದಾನೆ ಸಮುದ್ರ ಮಧ್ಯ ಹಡಗು ನಿಂತಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ ಎಂದರು. ಈ ವಿಷಯದಲ್ಲಿ ಆಸಕ್ತಿವಹಿಸಿ ಕಾರ್ಯನಿರ್ವಹಿಸಿದ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ರಾಮಸ್ವಾಮಿ ಶೆಟ್ಟಿಗದ್ದೆಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಯುದ್ಧಪೀಡಿತ ದುಬೈನಲ್ಲಿ ಸಿಲುಕಿಕೊಂಡಿರುವ ತೀರ್ಥಹಳ್ಳಿ ವರ್ತಕರ ಸಂಘದ ಅಧ್ಯಕ್ಷ ಚೈತನ್ಯಜವಳಿ..

ತೀರ್ಥಹಳ್ಳಿಯ ವರ್ತಕರ ಸಂಘದ ಅಧ್ಯಕ್ಷರಾಗಿರುವ ಚೈತನ್ಯಜವಳಿ 10 ದಿನಗಳ ಹಿಂದೆ ಕುಟುಂಬ ಸಮೇತರಾಗಿ ದುಬೈ ಪ್ರವಾಸ ತೆರಳಿದ್ದರು. ಅವರು ಮೊನ್ನೆ ಹಿಂದಿರುಗಬೇಕಾಗಿತ್ತು. ಅಮೇರಿಕಾ ಇರಾನ್ ನಡುವಿನ ಯುದ್ಧದ ಕಾರ್ಮೋಡಗಳು ದುಬೈ ದೇಶವನ್ನು ಆವರಿಸಿರುವ ಹಿನ್ನೆಲೆಯಲ್ಲಿ ದುಬೈನಿಂದ ಭಾರತಕ್ಕೆ ಬರುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಾಸವಾಗಿ ಚೈತನ್ಯ ಜವಳಿ, ಕುಟುಂಬ ಹಿಂದಿರುಗಬೇಕಾಗಿದ್ದ ವಿಮಾನ ರದ್ದಾಗಿ ಅವರು ಅಲ್ಲಿಯೇ ಉಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಮಾರ್ಚ್ 8ನೇ ತಾರೀಕಿನಂದು ಅವರ ಕುಟುಂಬಕ್ಕೆ ಹಿಂದಿರುಗುವ ವಿಮಾನ ಲಭ್ಯವಾಗುವ ನಿರೀಕ್ಷೆ ಇದೆ. ಚೈತನ್ಯ ಜವಳಿ ಕುಟುಂಬ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದು ಕ್ಷೇಮವಾಗಿದ್ದಾರೆ. ದುಬೈನಲ್ಲಿ ಆಹಾರ ಪದಾರ್ಥ ಸೇರಿ ಎಲ್ಲಾ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು ಈ ರೀತಿ ಅಲ್ಲಿ ಸಿಲುಕಿಕೊಂಡಿರುವ ಅನೇಕ ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿವೆ… ದುಬೈನಲ್ಲಿ ವಾಸವಾಗಿರುವ ಜವಳಿ ಕುಟುಂಬದ ಅಚಿಂತ್ಯ ಜವಳಿ ಪ್ರತಿನಿತ್ಯ ಮಿಸೈಲ್ ಶೆಲ್ ಗಳು ದುಬೈನಲ್ಲಿ ಬಂದು ಬೀಳುತ್ತಿವೆ. ಅವುಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ನಾವು ರಸ್ತೆ ಬದಿಯ ಕಟ್ಟಡಗಳಲ್ಲಿ ಮಲಗುತ್ತಿದ್ದೇವೆ ಮಿಸೈಲ್ ಕಂಡು ಬಂದಾಗ ರಸ್ತೆಗೆ ಬಂದು ನಿಲ್ಲುತ್ತಿದ್ದೇವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ .

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಶುರು!

ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಶುರು!
– ಮಾ.6 ರಂದು ಶ್ರೀ ಚಂಡಿಕಾ ಹವನ, ಅಶ್ಲೇಷ ಬಲಿ, ಮಾ. 7 ರಂದು ನವ ಪಲ್ಲಕ್ಕಿ ದೇವರ ಭಂಡಾರ ಉತ್ಸವ ಮೆರವಣಿಗೆ
– ಸರ್ವರನ್ನು ಆಹ್ವಾನಿಸಿದ ದೇವಸ್ಥಾನ ಸಮಿತಿ, ಗ್ರಾಮಸ್ಥರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಪ್ರಮುಖ ಶಕ್ತಿ ಕೇಂದ್ರವಾಗಿ ಇತ್ತೀಚಿನ ದಿನಗಳಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಕ್ಷೇತ್ರ ಹೆಗಲತ್ತಿಯ ಶ್ರೀ ನಾಗಯಕ್ಷೆ ದೇವಸ್ಥಾನದಲ್ಲಿ ಶ್ರೀ ನಾಗಯಕ್ಷೆ ಸೇವಾ ಸಮಿತಿ, ಶ್ರೀ ಕ್ಷೇತ್ರ ಹೆಗಲತ್ತಿ, ಸಿಂಗನಬಿದರೆ ಪೋಸ್ಟ್, ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ಈ ಕ್ಷೇತ್ರವು ಶಿವಮೊಗ್ಗದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಶ್ರೀ ಕ್ಷೇತ್ರ ಹಲವು ವರ್ಷಗಳಿಂದ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು, ಹಲವು ಪವಾಡಗಳಿಗೆ ಸಾಕ್ಷಿಯಾಗಿ ಜನಮನದಲ್ಲಿ ಭಕ್ತಿಯನ್ನು ಮೂಡಿಸಿದೆ.

ಮೂಲ ಪಾತ್ರಿಗಳಾದ ಶ್ರೀಮತಿ ಶಾರದಮ್ಮನವರಿಂದ ಸುಮಾರು 65 ವರ್ಷಗಳಿಗೂ ಹಿಂದಿನಿಂದ ಶ್ರೀ ಕ್ಷೇತ್ರದ ದೇವರುಗಳಾದ ಯಕ್ಷೆ, ಭೂತರಾಯ ಮತ್ತು ನಾಗ ದೇವರ ಕೃಪೆಯಿಂದ ಪವಾಡಗಳು, ಪುಣ್ಯಕಾರ್ಯಗಳು ನಡೆಯುತ್ತಾ ಬಂದಿದ್ದು ದೈವಾನುಗ್ರಹದಂತೆ ಈಗ ಮೂಲ ಪಾತ್ರಿಗಳ ಮಾಗಳಾದ ಶ್ರೀಮತಿ ಕಲ್ಪನಮ್ಮನವರು ಶ್ರೀ ಕ್ಷೇತ್ರದ ಮುಖ್ಯಪಾತ್ರಿಗಳಾಗಿ ಕ್ಷೇತ್ರದ ದಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಶ್ರೀ ಕ್ಷೇತ್ರದ 12ನೇ ವಾರ್ಷಿಕ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಮಾರ್ಚ್ ತಿಂಗಳ 5, 6, 7 ಮತ್ತು 8 ನೇ ತಾರೀಖಿನಂದು ವಿವಿದ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ದಿನಾಂಕ 5 ರಂದು ಶ್ರೀ ದುರ್ಗಾ ದೀಪ ನಮಸ್ಕಾರ, 6 ರಂದು ಶ್ರೀ ಚಂಡಿಕಾ ಹವನ ಮತ್ತು ಅಶ್ಲೇಷ ಬಲಿ ಕಾರ್ಯಗಳು ನಡೆಯಲಿವೆ.

ವಿಷೇಶವಾಗಿ ದಿನಾಂಕ 7 ರಂದು ನವ ಪಲ್ಲಕ್ಕಿ ದೇವರ ಭಂಡಾರ ಉತ್ಸವ ಮೆರವಣಿಗೆ” ಕಾರ್ಯಕ್ರಮವಿದ್ದು ಇದರಲ್ಲಿ ಕ್ಷೇತ್ರದ ಸುತ್ತಮುತ್ತಲಿನ ಹಲವು ದೇವಾನುದೇವತೆಗಳ ಪಲ್ಲಕ್ಕಿಗಳು ಪಾಲ್ಗೊಳ್ಳಲಿವೆ. ಇದಲ್ಲದೆ ಯಕ್ಷಗಾನ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಾ ಜರುಗಲಿದ್ದು ಭಕ್ತರಿಗೆ ಪ್ರಸಾದ ವಿತರಣೆ ಇರುತ್ತದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿಗಳಾದ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ಮತ್ತು ಮೂಲ ಪಾತ್ರಿಗಳಾದ ಶ್ರೀಮತಿ ಶಾರದಮ್ಮನವರ ದಿವ್ಯ ಪೂರ್ಣಾನುಗ್ರಹ ಆಶೀರ್ವಾದದೊಂದಿಗೆ ಹಾಗೂ ಪಾತ್ರಿಗಳಾದ ಶ್ರೀಮತಿ ಕಲ್ಪನಮ್ಮನವರ ಉಪಸ್ಥಿತಿಯಲ್ಲಿ ನೆರವೇರಲಿವೆ. ಸದ್ಭಕ್ತರೆಲ್ಲರೂ ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಕ್ಷೇತ್ರ ಹಗಲತ್ತಿಯ ದೈವಾನುಗ್ರಹಕ್ಕೆ ಪಾತ್ರರಾಗಬೇಕೆಂದು ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರೀ ನಾಗಯಕ್ಕೆ ಸೇವಾ ಸಮಿತಿ(ರಿ) ಹೆಗಲತ್ತಿ ಗ್ರಾಮ ಹಾಗೂ ಶಿಂಗನ ಬಿದರೆ ಗ್ರಾಮಪಂಚಾಯತ್ ಸಮಸ್ತ ಭಕ್ತರು ಮನವಿ ಮಾಡಿದ್ದಾರೆ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಆಗುಂಬೆ- ಶಿವಮೊಗ್ಗ ಮಾರ್ಗ ಸಾವಿನ ಹೆದ್ದಾರಿ!

ಆಗುಂಬೆ- ಶಿವಮೊಗ್ಗ ಮಾರ್ಗ ಸಾವಿನ ಹೆದ್ದಾರಿ!
– ತೀರ್ಥಹಳ್ಳಿ ಹೈವೇಯಲ್ಲಿ ಹೆಚ್ಚಿದ ಹಿಟ್ ಅಂಡ್ ರನ್!
– 3 ತಿಂಗಳಲ್ಲಿ 10ಕ್ಕೂ ಹೆಚ್ಚು ಜನರ ಸಾವು
– 50ಕ್ಕೂ ಹೆಚ್ಚು ಅಪಘಾತ: ಜವಾಬ್ದಾರಿ ಯಾರು..?

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಆಗುಂಬೆ ಹಾಗೂ ಶಿವಮೊಗ್ಗ ಮಾರ್ಗ ಸಾವಿನ ಹೆದ್ದಾರಿಯಾಗಿ ಪರಿಣಮಿಸಿದೆ.!. ಆಗುಂಬೆ ತೀರ್ಥಹಳ್ಳಿ ಶಿವಮೊಗ್ಗ ಹೈವೇಯಲ್ಲಿ ಹೆಚ್ಚಿದ ಹಿಟ್ ಅಂಡ್ ರನ್ ಇದೀಗ ಜನ ಆತಂಕದಲ್ಲೇ ಪಯಣ ಮಾಡಬೇಕಿದೆ. ಜನ ಕೂಡ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ವಾಕಿಂಗ್ ಮಾಡುವವರ ಮೇಲೆ ಕೂಡ ವಾಹನ ಹರಿದು ಅನೇಕರು ಗಾಯಗೊಂಡಿದ್ದಾರೆ.

3 ತಿಂಗಳಲ್ಲಿ 10ಕ್ಕೂ ಹೆಚ್ಚು ಜನರ ಸಾವು: 50ಕ್ಕೂ ಹೆಚ್ಚು ಅಪಘಾತ: ಜವಾಬ್ದಾರಿ ಯಾರು..?

ಲಾರಿ ಚಾಲಕ ನಿದ್ದೆಯ ಮಂಪರಿನಲ್ಲಿ ವ್ಯಕ್ತಿಯೊಬ್ಬರಿಗೆ ಗುದ್ದಿದ ಹಿಟ್ ಆ್ಯಂಡ್ ರನ್ ನಡೆಸಿ ಓರ್ವ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕು ಬಿಳಲುಕೊಪ್ಪದ ಬಳಿ ನಡೆದಿದೆ. 3 ತಿಂಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಈ ರಸ್ತೆಯಲ್ಲಿ ಹಿಟ್ ಅಂಡ್ ರನ್ ಬಲಿ ಆಗಿದ್ದಾರೆ. ಪರಿಣಾಮವಾಗಿ ಅಪಘಾತಕ್ಕೆ ಒಳಗಾದ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಮೃತ ವ್ಯಕ್ತಿಯನ್ನು ನರಸಿಂಹ ಕೆ.ಎಸ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ದೊರೆತ ದಾಖಲೆಯಿಂದ ನರಸಿಂಹ ಅವರು ಗಾರ್ಡರಗದ್ದೆಯವರು ಎಂದು ತಿಳಿದುಬಂದಿದೆ.‌

ಹೈವೇ ಉದ್ದಕ್ಕೂ ಅಪಘಾತ

ಆಗುಂಬೆ, ನಾಲೂರು, ಗುಡ್ಡೆಕೇರಿ, ಮೇಗರವಳ್ಳಿ, ಕೈಮರ, ತೀರ್ಥಹಳ್ಳಿ, ಕುಡುಮಲ್ಲಿಗೆ, ತೂದುರು, ಮಂಡಗದ್ದೆ, ಗಾಜನೂರು ಭಾಗದಲ್ಲಿ ರಸ್ತೆ ಚೆನ್ನಾಗಿ ಆಗಿರುವುದರಿಂದ ವಾಹನ ಸವಾರರು ಮಿತಿ ಮೀರಿದ ವೇಗಕ್ಕೆ ಅನೇಕರು ಬಲಿ ಆಗಿದ್ದಾರೆ.

ತೀರ್ಥಹಳ್ಳಿ ಹಾಗೂ ಆಗುಂಬೆಯ ನಡುವಿನ ಮುಖ್ಯರಸ್ತೆಯಲ್ಲಿ ದಿನಕ್ಕೊಂದರಂತೆ ಅಪಘಾತ ಪ್ರಕರಣಗಳು ನಡೆಯುತ್ತಿದೆ. ಮೇಗರವಳ್ಳಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಓರ್ವ ಸಾವನ್ನು ಕಂಡಿದ್ದಾರೆ. ಅಲ್ಲದೆ ಶಿವರಾಜಪುರದಲ್ಲಿ ಕಾರು ತೊಳೆಯುತ್ತಿದ್ದವನ ಮೇಲೆ ಕಾರು ಹರಿದು ಸಾವನ್ನು ಕಂಡಿದ್ದಾನೆ. ಹೀಗೆ ದುರಂತ ದಿನವೂ ಮಾಮೂಲಿ ಆಗಿದೆ.

ಹೈವೇ ಎಚ್ಚರಿಕೆ ಮಾಡಲು ಜನರ ಪಟ್ಟು!

ಬ್ಯಾರಿ ಕೇಡ್, ರಸ್ತೆ ಹಂಪ್ ಗಳನ್ನು ಕಲ್ಪಿಸಿ ಕೊಡುವುದರ ಮೂಲಕ, ಅಪಘಾತಗಳು ಸಂಭವಿಸದಂತೆ ತಡೆಗಟ್ಟಲು ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿದೆ. ಮಾಹಿತಿ ಫಲಕ, ವೇಗ ಮಿತಿ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

Categories
ಉಡುಪಿ ಕರಾವಳಿ ಕುಂದಾಪುರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

ಬಸ್ಸಲ್ಲಿ ಬಿದ್ದಿದ್ದ 3 ಲಕ್ಷದ ಚಿನ್ನದ ಸರ ವಾಪಸು ಕೊಟ್ಟ ಕಂಡಕ್ಟರ್!
– ವಿಶಾಲ್ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆ ಮಾನವೀಯತೆ

• ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಶಿಕ್ಷೆ
• ಉಡುಪಿ:ಯುವಕನಿಗೆ ಚೂರಿ ಇರಿತ; ನಾಲ್ವರ ಬಂಧನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: 3 ಲಕ್ಷ ಬೆಲೆ ಬಾಳುವ ಚಿನ್ನದ ಸರ ಬಸ್ಸಲ್ಲಿ ಬೀಳಿಸಿಕೊಂಡಿದ್ದು, ವಿಶಾಲ್ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆ ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಬಸ್ಸಿನಲ್ಲಿ ಸುಮಾರು 3,00,000 ಬೆಲೆ ಬಾಳುವ ಚಿನ್ನದ ಸರ ಸಿಕ್ಕಿದ್ದು ಚಿನ್ನವನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡ ಅವರು ಯಾವುದೇ ಲಾಭದ ಆಸೆಗೆ ಒಳಗಾಗದೆ ಚಿನ್ನ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಪ್ರಚಾರ ಮಾಡಿದ್ದು, ಈ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಯಾದ ಸುದೀಕ್ಷಾ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಕೊಂಡಿದ್ದು ಅವರು ಸೂಕ್ತದ ಮಾಹಿತಿಯನ್ನು ನೀಡಿ ಚಿನ್ನದ ಸರವನ್ನು ಮರಳಿ ಪಡೆದಿರುತ್ತಾರೆ .

ಚಿನ್ನದ ಸರವನ್ನು ಪ್ರಾಮಾಣಿಕತೆಯಿಂದ ನೀಡಿದ ರಾಜೇಶ್ ಹೆಗಡೆ ಇವರಿಗೆ ವಿಶಾಲ್ ಮೋಟರ್ಸ್ನ ಮಾಲೀಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ. ಜನತೆ ಕೂಡ ರಾಜೇಶ್ ಅವರ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರೇಮ ಪ್ರಕರಣಕ್ಕೆ ಸಂಧಾನಕ್ಕೆ ಬಂದವರಿಗೆ ಚೂರಿ ಇರಿತ!

ಉಡುಪಿ: ​ಪ್ರೇಮ ಪ್ರಕರಣವೊಂದರ ಸಂಧಾನದ ವೇಳೆ ಬಿಜೆಪಿ ಹಾಗೂ ಹಿಂದೂ ಯುವ ಸೇನೆಯ ಮುಖಂಡ ಮಂಜು ಕೋಳ ಅವರಿಗೆ ಚೂರಿಯಿಂದ ಇರಿದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಲಿಮಾರು ನಿವಾಸಿಗಳಾದ ಪ್ರಜೇಶ್, ಪುನೀತ್, ಅಮೃತ್, ಅಭಿಜಿತ್ ಹಾಗೂ ಇನ್ನೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಅವರ ಪತಿ ಮಂಜು ಕೋಳ ಅವರು, ಮಂಗಳವಾರ ಸಂಜೆ ಮಲ್ಪೆ ಬೀಚ್ ಬಳಿ ಜೋಡಿಯೊಂದರ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯಿತಿ ನಡೆಸಲು ತೆರಳಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಉಂಟಾದ ಗಲಾಟೆಯಲ್ಲಿ, ಯುವಕನೊಬ್ಬ ಮಂಜು ಅವರ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ.

ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಈ ಹಲ್ಲೆಯು ವೈಯಕ್ತಿಕ ಕಾರಣಗಳಿಂದ ನಡೆದಿದ್ದು, ಯಾವುದೇ ಕೋಮು ಹಿನ್ನೆಲೆಯನ್ನು ಹೊಂದಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇದೊಂದು ವೈಯಕ್ತಿಕ ಕಾರಣಕ್ಕಾಗಿ ನಡೆದ ಘಟನೆಯಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳನ್ನು ನಂಬಬಾರದು ಹಾಗೂ ಹರಡಬಾರದು. ಗಾಯಾಳು ಮಂಜು ಕೋಳ ಅವರ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ,” ಎಂದು ತಿಳಿಸಿದ್ದಾರೆ.

• ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಶಿಕ್ಷೆ

ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದುದರ ಹಿನ್ನೆಲೆಯಲ್ಲಿ , ಯುವಕನಿಗೆ ಶಿಕ್ಷೆ ನೀಡಿರುವ ಘಟನೆ ನಡೆದಿದೆ. ರಾಘವನ್ ಅಲಿಯಾಸ್ ಕೋಳಿಕಿರಣ್ ಆರೋಪಿಯಾಗಿದ್ದು, ಈತನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರ ವಶದಲ್ಲಿದ್ದ ಆತ ಪರಾರಿಯಾಗಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಅವರು ತನಿಖೆಯನ್ನು ನಡೆಸಿ, ಆತನನ್ನು ಬಂಧಿಸಲು ಬೇಕಾದ ಅಗತ್ಯ ಸಾಕ್ಷಿಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ, ಕೋಳಿಕಿರಣ್ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯ ಸಲ್ಲಿಸಿದ್ದರು ಎನ್ನುವ ಮಾಹಿತಿ ಲಭಿಸಿದೆ.

ಈ ಹಿನ್ನೆಲೆಯಲ್ಲಿ ಸುಳ್ಯದ ಎಸ್ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪ ಸಾಬೀತಾಗಿರುವ ಕಾರಣ ನ್ಯಾಯಾಧೀಶರಾದ ಬಿ.ಮೋಹನ್ ಬಾಬು ಅವರು ಆರೋಪಿಗೆ ಬಿಎನ್ ಎಸ್ ಕಲಂ 121 (1)ರ ಅಡಿಯಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ , 10.000ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಆರು ತಿಂಗಳುಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಹಾಗೂ ಸರ್ಕಾರಿ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಲು ನಡೆಸಿರುವ ಹಲ್ಲೆಗಾಗಿ ಕಲಂ 132ರ ಅನ್ವಯ ಒಂದು ವರ್ಷ ಕಾಲ ಸಾದಾ ಕಾರಾಗೃಹ ಶಿಕ್ಷೆ, 10.000ರೂಪಾಯಿ ದಂಡ ಹಾಗೂ ದಂಡ ತಪ್ಪಿದಲ್ಲಿ ಮೂರು ತಿಂಗಳುಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ಪೊಲೀಸರು ಕಾನೂನು ಬದ್ಧವಾಗಿ ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ತಡೆಯನ್ನುಂಟು ಮಾಡಿ ಪರಾರಿಯಾದ ಹಿನ್ನೆಲೆಯಲ್ಲಿ ಕಲಂ 262ರ ಅನ್ವಯ ಒಂದು ವರ್ಷ ಕಾಲ ಸಾದಾ ಕಾರಾಗೃಹ ಶಿಕ್ಷೆ, 10.000 ರೂಪಾಯಿ ದಂಡ ಹಾಗೂ ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳುಗಳ ಕಾಲ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.

Categories
agumbe ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಶಿವಮೊಗ್ಗ ವಿಮಾನ ನೈಟ್ ಲ್ಯಾಂಡಿಂಗ್ ಸಮೀಕ್ಷೆ ಪಾಸ್!

ಶಿವಮೊಗ್ಗ ವಿಮಾನ ನೈಟ್ ಲ್ಯಾಂಡಿಂಗ್ ಸಮೀಕ್ಷೆ ಪಾಸ್!
– ಇನ್ನು ಮುಂದೆ ರಾತ್ರಿ ವಿಮಾನ ಕೂಡ ಓಡಾಟ ಶುರು?
– ಆಗುಂಬೆ: ಘನ ವಾಹನಗಳ ಸಂಚಾರಕ್ಕೆ ಹಣ ವಸೂಲಿ ಆರೋಪ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
‎ಶಿವಮೊಗ್ಗ: ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಹುನಿರೀಕ್ಷಿತ ವಿಮಾನಗಳ ನೈಟ್‌ ಲ್ಯಾಂಡಿಂಗ್‌ ಸೌಲಭ್ಯಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಈ ಸಂಬಂಧ ಕೈಗೊಳ್ಳಲಾಗಿದ್ದ ಮಣ್ಣು ಪರೀಕ್ಷೆಯ ವರದಿ ಈಗ ಪಾಸಿಟಿವ್ ಆಗಿ ಬಂದಿದೆ. ‎ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ‘ವಿಮಾನ ನಿಲ್ದಾಣದಲ್ಲಿ ಡಾಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್ (DoVR) ಉಪಕರಣ ಅಳವಡಿಸಲು ಉದ್ದೇಶಿಸಲಾಗಿದೆʼ ಎಂದು ತಿಳಿಸಿದರು.

ಅತ್ಯಾಧುನಿಕ ತಾಂತ್ರಿಕ ಉಪಕರಣ ಅಳವಡಿಸಲು ಮೊದಲು ಆ ಪ್ರದೇಶದ ಭೂಮಿಯ ಸ್ಥಿರತೆ ಪರೀಕ್ಷಿಸುವುದು ಕಡ್ಡಾಯವಾಗಿದೆ. ಅದರಂತೆ DoVR ಸ್ಥಾಪಿಸಲು ಉದ್ದೇಶಿಸಲಾದ ಜಾಗದ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈಗ ಮಣ್ಣಿನ ಪರೀಕ್ಷಾ ವರದಿ ಲಭ್ಯವಾಗಿದ್ದು, ಉಪಕರಣ ಅಳವಡಿಕೆಗೆ ಮಣ್ಣು ಪೂರಕವಾಗಿದೆ ಎಂದು ದೃಢಪಟ್ಟಿದೆ. ಮಣ್ಣು ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, DoVR ಕೆಲಸ ಪ್ರಾರಂಭವಾಗಿವೆ, ಎಂದು ನಂಜಯ್ಯನಮಠ ಅವರು ತಿಳಿಸಿದ್ದಾರೆ. ಈ ತಾಂತ್ರಿಕ ಸೌಲಭ್ಯವು ಕಾರ್ಯಗತಗೊಂಡರೆ, ವಿಮಾನಗಳು ರಾತ್ರಿ ವೇಳೆ ಹಾಗೂ ಮಂದ ವಾತಾವರಣ ಇರುವ ಸಂದರ್ಭದಲ್ಲೂ ಸುರಕ್ಷಿತವಾಗಿ ವಿಮಾನವನ್ನ ಇಳಿಯಲು ಸಹಕಾರಿಯಾಗಲಿದೆ.

ಆಗುಂಬೆ: ಘನ ವಾಹನಗಳ ಸಂಚಾರಕ್ಕೆ ಹಣ ವಸೂಲಿ ಆರೋಪ!
‎
‎ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ಅತೀ ದೊಡ್ಡ ಘನ ವಾಹನಗಳಿಗೆ ಅನುಮತಿ ಇಲ್ಲದೆ ಇದ್ದರೂ ಸಹ ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಹಣ ವಸೂಲಿ ಮಾಡಿ ಅತೀ ದೊಡ್ಡ ಘನ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ. ಸರಿ ಸುಮಾರು 19 ರಿಂದ 20 ಅಡಿ ಉದ್ದದ ಈಚರ್ ಗಾಡಿಗಳನ್ನು ರಾತ್ರಿಯ ವೇಳೆ ಹಣ ಪಡೆದುಕೊಂಡು ಆಗುಂಬೆ ಘಾಟಿಯಲ್ಲಿ ಬಿಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಈ ಬಗ್ಗೆ ಚೆಕ್ ಪೋಸ್ಟ್ ನಲ್ಲಿದ್ದವರನ್ನು ವಿಚಾರಿಸಿದರೆ ನಮಗೇನು ಗೊತ್ತಿಲ್ಲ, ದಿನ ಹೋಗುತ್ತಿವೆ ಎಂಬ ಸಾಬೂಬು ಉತ್ತರ ಹೇಳುತ್ತಿದ್ದಾರೆ. ಸಿಸಿಟಿವಿ ಹಾಳಾಗಿದೆ, ಫಾರೆಸ್ಟ್ ಅಧಿಕಾರಿಗಳು ಬರಬೇಕು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಂದು 19 ಅಡಿ ಈಚರ್ ಲಾರಿಗೆ ಒಂದು ಸಾವಿರಕ್ಕೂ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಹಣ ಯಾರ ಜೇಬಿಗೆ ಹೋಗುತ್ತದೆ ಎಂಬುದು ತಿಳಿಯಬೇಕಿದೆ.

‎ಘಾಟಿಯಲ್ಲಿ ಪಾಸಾದ 19 ಅಡಿ ಈಚರ್ ಗಾಡಿಗಳು ಎರಡು ಮೂರನೇ ಕಿರಿದಾದ ತಿರುವುಗಳಲ್ಲಿ ಗಾಡಿಯು ಸರಿಯಾಗಿ ತಿರುಗದೆ ಗಾಡಿಯ ಡ್ರೈವರ್ ಗಾಡಿಯನ್ನು ಹಿಂದೆ ಮುಂದೆ ತೆಗೆದು ಹರಸಾಹಸಪಟ್ಟು ಗಾಡಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಇನ್ನೂ ಕೆಲವು ಗಾಡಿಯವರು ರಾತ್ರಿಯ ಸಮಯವಾದ್ದರಿಂದ ಹಿಂದೆ ಮುಂದೆ ಗಾಡಿ ತೆಗೆಯಲು ಗೊತ್ತಾಗದೆ ರೋಡ್ ದಂಡೆಗೆ ಲಾರಿಗುದ್ದಿ ಘಾಟಿದಂಡೆ ಪುಡಿ ಪುಡಿ ಮಾಡಿ ಹಿಂದೆ ಮುಂದೆ ಲಾರಿತೆಗೆದು ಹೋಗುತ್ತಿದ್ದಾರೆ.

ಈ ರೀತಿ ಇತ್ತೀಚೆಗೆ ರಾತ್ರಿ 10 ಗಂಟೆ ನಂತರ ಸಮಯದಲ್ಲಿ ಗಾಡಿಗಳು ಪಾಸಾಗುತ್ತಿವೆ ಎಂಬ ಮಾತು ನಿರಂತರವಾಗಿ ಕೇಳಿ ಬರುತ್ತಿದೆ. ಹಾಗೆಯೇ ಸಣ್ಣ ಗಾಡಿಗಳಾದ ಬಾಳೆಕಾಯಿ, ತರಕಾರಿ, ಜಲ್ಲಿ, ಮೀನು, ಕೋಳಿ ಗಾಡಿಗಳಿಗೆ ಸಣ್ಣ ಪುಟ್ಟ ಗೂಡ್ಸ್ ಪಿಕಪ್ ಗಳಿಗೆ 50 ರಿಂದ ನೂರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ.

ವಾಹನಗಳಲ್ಲಿ ಏನಿದೆ ಎಂಬುದನ್ನು ಪರಿಶೀಲಿಸದೆ ಹಣ ತೆಗೆದುಕೊಂಡು ವಾಹನ ಬಿಡುತ್ತಿದ್ದಾರೆ ಎಂಬ ದೂರು ವಾಹನ ಚಾಲಕರಿಂದಲೇ ಕೇಳಿ ಬಂದಿದೆ. ಜಿಲ್ಲಾಧಿಕಾರಿಗಳ ಆದೇಶ ಇದ್ದರು ಸಹ ಹಣ ವಸೂಲಿ ಮಾಡಿ ಘನ ( ಅತೀ ದೊಡ್ಡ) ವಾಹನ ಓಡಾಟಕ್ಕೆ ಅನುಮತಿ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ.

Categories
ಆರೋಗ್ಯ ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಹೆಲ್ತ್ ಎಕ್ಸ್ಪ್ರೆಸ್

ಗರ್ಭಿಣಿಯರಿಗೆ ಸಕ್ಕರೆ ಕಾಯಲೆ ಇದ್ರೆ ಡೇಂಜರ್!

ಗರ್ಭಿಣಿಯರಿಗೆ ಸಕ್ಕರೆ ಕಾಯಲೆ ಇದ್ರೆ ಡೇಂಜರ್!
– ಏನು ಮಾಡಬೇಕು… ಚಿಕಿತ್ಸೆ ಹೇಗೆ..?..ಮುನ್ನೆಚ್ಚರಿಕೆ ಏನು?
– ಸಕ್ಕರೆ ಕಾಯಿಲೆಯಿಂದ ಭ್ರೂಣಕ್ಕೆ ತೊಂದರೆ!

ಲೇಖನ: ಡಾ.ನಿವೇದಿತಾ ಹೆಗಡೆ
ಬ್ರೂಣ ಶಾಸ್ತ್ರ ,ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
ಸಹ್ಯಾದ್ರಿನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ
ಶಿವಮೊಗ್ಗ

ನಮ್ಮೂರ್ ಎಕ್ಸ್ ಪ್ರೆಸ್: ಅರೋಗ್ಯ
ಸೃಜನಳ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಆಕೆಯು ಮದುವೆಯಾಗಿ ೧೦ ವರ್ಷಗಳ ನಂತರ ಗರ್ಭಿಣಿಯಾಗಿದ್ದಳು. ಏಳು ತಿಂಗಳು ತುಂಬಿದ್ದರಿಂದ ಸೀಮಂತ ಏರ್ಪಡಿಸಲಾಗಿತ್ತು.ಆದರೆ ಬೆಳಿಗ್ಗೆಯಿಂದ ಮಗು ಸರಿಯಾಗಿ ಹಂದಾಡದೇ ಇದ್ದುದರಿಂದ ಆಕೆ ಸ್ವಲ್ಪ ಗಾಬರಿಗೊಂಡಳು. ಮನೆಯಲಿ ಸೀಮಂತ ಇದ್ದುದರಿಂದ ಮರುದಿನ ವೈದ್ಯರಿಗೆ ತೋರಿಸಿದರೆ ಆಯಿತು ಎಂದು ನಿರ್ಧರಿಸಿದಳು.

ಮಾರನೇ ದಿನ ಪ್ರಸೂತಿ ತಜ್ಞರನ್ನು ಕಂಡಾಗ, ವೈದ್ಯರು ಸ್ಕ್ಯಾನಿಂಗ್ ಮಾಡಿದರು. ಆಘಾತಕಾರಿ ಸುದ್ದಿಯೆಂದರೆ ಮಗುವಿನ ಹೃದಯ ಬಡಿತ ನಿಂತು ಹೋಗಿದ್ದು ಗರ್ಭದಲ್ಲೇ ಮರಣ ಹೊಂದಿತ್ತು. ರಕ್ತ ಪರೀಕ್ಷೆಯ ನಂತರ ತಿಳಿದು ಬಂದದ್ದು ಆಕೆಗೆ ಸಕ್ಕರೆ ಕಾಯಿಲೆ ಇದೆಯೆಂದು.

ಗರ್ಭಧಾರಣೆ ಕೊನೆಯ ವಾರಗಳಲ್ಲಿ ಇದು 8-10% ಡಯಾಬಿಟಿಸ್ ಇರುವ ತಾಯಂದಿರಲ್ಲಿ ಕಂಡು ಬರುತ್ತದೆ. ಸರಿಯಾಗಿ ನಿರ್ವಹಿಸದ ಸಕ್ಕರೆ ಕಾಯಿಲೆಯು ಇದಕ್ಕೆ ಕಾರಣವಾದರೂ, ಶುಗರ್ ಕಂಟ್ರೋಲ್ ಚೆನ್ನಾಗಿದ್ದರೂ ಗರ್ಭಿಣಿಯರಲ್ಲಿ ಪ್ರಸವ ಪೂರ್ವದಲ್ಲಿ ಮಗುವಿನ ಮರಣ ಸಂಭವಿಸಬಹುದು.

ಭಾರತದಲ್ಲಿ ಸಕ್ಕರೆ ಕಾಯಲೆ ಹೆಚ್ಚಳ!

​ಭಾರತವು ಸಿಹಿ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ ಕಾಯಿಲೆಯ ರಾಜಧಾನಿಯೂ ಆಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಸುಮಾರು 100 ಮಿಲಿಯನ್ ಜನರು ಸಕ್ಕರೆ ಕಾಯಿಲೆಗೆ ತುತ್ತಾಗಿದ್ದಾರೆ. ವಿದೇಶಿಯರಿಗಿಂತ 10 ವರ್ಷ ಮೊದಲೇ ನಮ್ಮಲ್ಲಿ ಡಯಾಬಿಟಿಸ್ ಶುರುವಾಗಬಹುದು.

ಬದಲಾದ ಜೀವನ ಶೈಲಿ, ಕಮ್ಮಿ ವ್ಯಾಯಾಮ ಹಾಗೂ ಅನುವಂಶೀಯತೆಯು ಇದಕ್ಕೆ ಕಾರಣವೆನ್ನಬಹುದು.​ಹಾಗೆಯೇ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಗರ್ಭಾವಸ್ಥೆಯ ಮಧುಮೇಹ (Gestational Diabetes Mellitus) ಪ್ರತಿ ವರ್ಷ 4 ಮಿಲಿಯನ್ ಗರ್ಭಿಣಿಯರಲ್ಲಿ ಕಂಡು ಬರುತ್ತಿದೆ. ಶೇಕಡಾ 10-20% ಗರ್ಭಿಣಿಯರು ಇದಕ್ಕೆ ತುತ್ತಾಗಿದ್ದು, ಇದು ನಂತರದ ದಿನಗಳಲ್ಲಿ Type-2 ಡಯಾಬಿಟಿಸ್ ಆಗಿ ಮಾರ್ಪಾಡುಗೊಳ್ಳುತ್ತದೆ.

​ಕಾರಣಗಳು ಏನು?
– ​ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ವ್ಯತ್ಯಾಸ.
– ​ಬೊಜ್ಜುತನ, ಥೈರಾಯ್ಡ್ ತೊಂದರೆ, ಪಿಸಿಒಡಿ (PCOD) ತೊಂದರೆ.
– ​ಅನುವಂಶೀಯತೆ.

​ಪರಿಶೀಲನೆ (Diagnosis):
​ಗರ್ಭಿಣಿಯ ಮೊದಲ ಭೇಟಿಯಲ್ಲೇ Random Blood Sugar ಮತ್ತು ಗ್ಲೈಕೇಟೆಡ್ ಹಿಮೋಗ್ಲೋಬಿನ್ (HbA1c) ಪರೀಕ್ಷೆ ಮಾಡಲಾಗುತ್ತದೆ. ನಂತರ ಸುಮಾರು 24ನೇ ವಾರದಲ್ಲಿ ಗ್ಲೂಕೋಸ್ ಮಿಶ್ರಣವನ್ನು ಕುಡಿಸಿ ಪರೀಕ್ಷೆ ಮಾಡಲಾಗುತ್ತದೆ. ಇದನ್ನು Glucose Challenge Test ಎಂದು ಕರೆಯಲಾಗುತ್ತದೆ.​

ಈ ಟೆಸ್ಟ್ ಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಜೀವನಶೈಲಿ ಬದಲಾವಣೆ, ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ಹೇಳಲಾಗುತ್ತದೆ. ಇದರಲ್ಲಿ ಹತೋಟಿಗೆ ಬರದಿದ್ದಲ್ಲಿ ಮೆಟ್‌ಫಾರ್ಮಿನ್ (Metformin) ಮಾತ್ರೆ ಅಥವಾ ಇನ್ಸುಲಿನ್ (Insulin) ಅನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇದು ಗರ್ಭಾವಸ್ಥೆಯ ಕೊನೆಯವರೆಗೂ ತೆಗೆದುಕೊಳ್ಳಬೇಕಾಗುತ್ತದೆ.

​ಸಕ್ಕರೆ ಕಾಯಿಲೆಯಿಂದ ಭ್ರೂಣಕ್ಕೆ ತೊಂದರೆ: ​ಗರ್ಭಪಾತವಾಗುವ ಸಾಧ್ಯತೆ.

​ಭ್ರೂಣದಲ್ಲಿ ಅಂಗವಿಕಲತೆ – ಹೃದಯದ ತೊಂದರೆ, ಬೆನ್ನುಹುರಿ ಸೀಳುವಿಕೆ (Open Spina Bifida), ಕಿಡ್ನಿ ತೊಂದರೆ, ಅನ್ನನಾಳದ ತೊಂದರೆ, Caudal Regression Syndrome ಇತ್ಯಾದಿ. ಮಗುವಿನ ಬೆಳವಣಿಗೆ ಅಧಿಕಗೊಂಡು ಹೆರಿಗೆ ಸಮಯದಲ್ಲಿ ತೊಂದರೆ ಆಗಬಹುದು. ಇದಕ್ಕೆ Macrosomia ಎಂದು ಕರೆಯಲಾಗುತ್ತದೆ. ಹೆರಿಗೆ ಸಮಯದಲ್ಲಿ ಭುಜ ಸಿಕ್ಕಿಹಾಕಿಕೊಂಡು (Shoulder Dystocia) ಡೆಲಿವರಿ ಸುಲಭವಾಗದೇ ಇರಬಹುದು.

​Polyhydramnios: ಮಗುವಿನ ಸುತ್ತ ಇರುವ ನೀರಿನ ಪ್ರಮಾಣ ಅಧಿಕಗೊಂಡು ಸಮಯಕ್ಕಿಂತ ಮೊದಲೇ ನೀರು ಹೋಗುವುದು, ಹೊಕ್ಕುಳ ಬಳ್ಳಿ ಜಾರುವುದು ಉಂಟಾಗುವ ಸಾಧ್ಯತೆ ಇರುತ್ತದೆ. ​ಇಂತಹ ಗರ್ಭಿಣಿಯರಲ್ಲಿ ಸಿಸೇರಿಯನ್ ಸಾಧ್ಯತೆಯೂ ಹೆಚ್ಚಿರುತ್ತದೆ.

​ಹೆರಿಗೆ ನಂತರದ ತೊಂದರೆಗಳು:
​ಸಕ್ಕರೆ ಕಾಯಿಲೆಯಿಂದ C-Section ಗಾಯ ವಾಸಿಯಾಗುವುದು ನಿಧಾನವಾಗಬಹುದು ಅಥವಾ ಗಾಯಕ್ಕೆ ಸೋಂಕು ತಗಲಬಹುದು. ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುವ ಸಂಭವ ಇರುತ್ತದೆ.

​ಡಯಾಬಿಟಿಸ್ ಬಗ್ಗೆ ಇರುವ ಅಪನಂಬಿಕೆಗಳು:
​- ಸಕ್ಕರೆ ಕಾಯಿಲೆ ಸಕ್ಕರೆ ತಿಂದರೆ ಬರುತ್ತದೆ, ಆದ್ದರಿಂದ ಬೆಲ್ಲವನ್ನು ಜಾಸ್ತಿ ತಿನ್ನಬಹುದು.
​- ಬೊಜ್ಜುತನ ಇರುವವರಿಗೆ ಮಾತ್ರ ಸಕ್ಕರೆ ಕಾಯಿಲೆ ಬರಬಹುದು.
​- ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ ಬಂದರೆ ಅದು ಪ್ರಸವದ ನಂತರವೂ ಕಡಿಮೆ ಆಗುವುದಿಲ್ಲ.
– ​ಡಯಾಬಿಟಿಸ್ ಗರ್ಭಿಣಿಯರು ಕಡ್ಡಾಯವಾಗಿ ಸಿಸೇರಿಯನ್ ಮಾಡಿಸಿಕೊಳ್ಳಬೇಕು.
​- ಡಯಾಬಿಟಿಸ್‌ನಿಂದ ತಾಯಿಗೆ ಮಾತ್ರ ತೊಂದರೆ, ಮಗುವಿಗೆ ಯಾವುದೇ ತೊಂದರೆ ಇರುವುದಿಲ್ಲ.

​ಬಾಣಂತಿ ಆರೈಕೆ:
​ಮೊದಲೇ ತಿಳಿಸಿದಂತೆ ಗರ್ಭಾವಸ್ಥೆಯಲ್ಲಿ ಕಾಣುವ ಮಧುಮೇಹ ಕ್ರಮೇಣ ಹೆರಿಗೆಯ ನಂತರ ಸರಿ ಹೋಗುತ್ತದೆ. ಆದರೂ ಬಾಣಂತಿಯರು ಮೊದಲ 1 ರಿಂದ 3 ತಿಂಗಳವರೆಗೆ ಸಕ್ಕರೆ ಕಾಯಿಲೆಗೆ ಅನುಗುಣವಾಗಿ ಪಥ್ಯ ಮಾಡುವುದು ಉತ್ತಮ. 6 ವಾರಗಳು ಕಳೆದ ನಂತರ ಮತ್ತೆ ರಕ್ತದಲ್ಲಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಂತರದ ದಿನಗಳಲ್ಲೂ ಒಳ್ಳೆಯ ಪೌಷ್ಟಿಕ ಆಹಾರ ಮತ್ತು ವ್ಯಾಯಾಮ ಮಾಡುವುದರಿಂದ ದೇಹದ ತೂಕವನ್ನು ಹತೋಟಿಯಲ್ಲಿಡಬೇಕು. ಇದರಿಂದ Type-2 ಡಯಾಬಿಟಿಸ್ ಬರುವುದನ್ನು ತಡೆಯಬಹುದು.

​Type-2 ಡಯಾಬಿಟಿಸ್ ಇರುವಂತಹ ತಾಯಂದಿರು ಗರ್ಭಪೂರ್ವ ಸಮಾಲೋಚನೆಗೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. HbA1c ರಕ್ತದಲ್ಲಿ 7ಕ್ಕಿಂತ ಕಡಿಮೆ ಇದ್ದಾಗ ಗರ್ಭಧಾರಣೆಯಾದರೆ ಮಗುವಿನಲ್ಲಿ ಅಂಗವಿಕಲತೆ ಆಗುವ ಪ್ರಮಾಣ ಕಡಿಮೆಯಾಗುತ್ತದೆ. ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಭ್ರೂಣಕ್ಕೆ ತೊಂದರೆ ಮಾಡದಂತಹ ಡಯಾಬಿಟಿಸ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಮೆಟ್‌ಫಾರ್ಮಿನ್ ಮತ್ತು ಇನ್ಸುಲಿನ್ ಎರಡೂ ಗರ್ಭಾವಸ್ಥೆಯಲ್ಲಿ ಕೊಡಬಹುದಾದ ಔಷಧಗಳು.

​ಈಗಾಗಲೇ ಡಯಾಬಿಟಿಸ್ ಇರುವುದರಿಂದ ಕಣ್ಣಿನ ರೆಟಿನಾ (Retina) ಪರೀಕ್ಷೆ, ಕಿಡ್ನಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಕೆಲವೊಮ್ಮೆ ಡಯಾಬಿಟಿಸ್ ರಕ್ತನಾಳಗಳಿಗೆ ತೊಂದರೆ ಮಾಡಿದ್ದಲ್ಲಿ (Vascular disease), ಗರ್ಭಕ್ಕೆ ಸರಿಯಾಗಿ ರಕ್ತ ಸಂಚಾರವಾಗದೇ ಮಗುವಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ.

ಗರ್ಭಧಾರಣೆಯ ನಂತರ ಬರುವ Gestational Diabetes ಅಥವಾ ಈಗಾಗಲೇ ಡಯಾಬಿಟಿಸ್ ಇರುವವರಾಗಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಸರಿಯಾದ ಪಥ್ಯ, ಜೀವನಶೈಲಿ ಮತ್ತು ವೈದ್ಯರ ಸಲಹೆಯಿಂದ ಡಯಾಬಿಟಿಸ್ ಇರುವವರೂ ಗರ್ಭಿಣಿಯಾಗಬಹುದು. ಸರಿಯಾದ ಸಮಯಕ್ಕೆ ತಕ್ಕಂತೆ ವೈದ್ಯರ ಸಲಹೆ ಪಾಲಿಸುವುದರಿಂದ ಮುಂದಾಗುವ ಅನಾಹುತಗಳನ್ನು ಕಡಿಮೆ ಮಾಡಬಹುದು.

ಅನುರಾಧಾ ನರ್ಸಿಂಗ್ ಹೋಂ
ಸೊಪ್ಪುಗುಡ್ಡೆ, ತೀರ್ಥಹಳ್ಳಿ
9035932022, 9480767611

ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರು, ಕುಟುಂಬದವರಿಗೆ ಶೇರ್ ಮಾಡಿರಿ…

​