ಗಗನಕ್ಕೇರಿದ್ದ ಅಡಿಕೆ ಬೆಲೆ ದಿಢೀರ್ ಕುಸಿತ..!!
– ಲಕ್ಷ ರೂ. ದಾಟುವ ಹೊತ್ತಲ್ಲೇ ಬೆಲೆ ಇಳಿಕೆ
– ಅತಿಯಾದ ಮಳೆ ಮತ್ತು ರೋಗಗಳಿಂದ ಇಳುವರಿ ಕುಸಿತ
NAMMUR EXPRESS NEWS
ಅಡಿಕೆಗೆ ಧಾರಣೆ ಕ್ವಿಂಟಲ್‌ಗೆ ಲಕ್ಷ ರೂ. ದಾಟಿ ದಾಖಲೆ ಬರೆಯಲಿದೆ ಎನ್ನುತ್ತಿರುವಾಗಲೇ ದಿಢೀರನೇ ಕುಸಿತ ಕಂಡು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಚಿನ್ನದ ಮಾದರಿಯಲ್ಲಿ ಅಡಿಕೆ ಧಾರಣೆ ಕಳೆದ ತಿಂಗಳು ನಿರಂತರವಾಗಿ ಏರುಗತಿಯಲ್ಲಿ ಸಾಗಿದ್ದು ಲಕ್ಷ ರೂ. ದಾಟಿ ದಾಖಲೆ ಬರೆಯುವ ಹಂತದಲ್ಲಿತ್ತು. ಈಗ ಅಡಿಕೆ ವೆರೈಟಿಗಳಾದ ಸರಕು, ರಾಶಿ ಇಡಿ, ಬೆಟ್ಟೆ, ಗೊರಬಲುಗೆ ದಿಢೀರ್ 5ರಿಂದ 6 ಸಾವಿರ ರೂ. ಧಾರಣೆ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ದರ ಇನ್ನೂ ಕುಸಿಯಲಿದೆ ಎಂಬ ಮಾತುಗಳು ವರ್ತಕ ವಲಯದಲ್ಲಿ ಕೇಳಿ ಬರುತ್ತಿವೆ.
10 ವರ್ಷಗಳ ಹಿಂದೆ ಸರಕು ಅಡಿಕೆ ಕ್ವಿಂಟಲ್‌ಗೆ 95,000 ರೂ., ರಾಶಿ ಇಡಿ ಅಡಿಕೆಗೆ 80,000 ರೂ. ದಾಟಿತ್ತು. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಹಾಗೂ ಅಮೆರಿಕದ ಸುಂಕ ಸಮರ ಅಡಿಕೆ ಧಾರಣೆ ಕುಸಿಯಲು ಕಾರಣ ಎನ್ನಲಾಗಿದೆ. ಕಳೆದ ಜನವರಿ ಕೊನೆಯಲ್ಲಿ ರಾಶಿ ಇಡಿ ಅಡಿಕೆಗೆ 57,000 ಸಾವಿರ ರೂ. ವರೆಗಿದ್ದ ದರ ಫೆಬ್ರವರಿಯಲ್ಲಿ53,000 ತಲುಪಿತ್ತು. ಆದರೆ, ಮಾರ್ಚ್ ಮೊದಲ ವಾರ ದರ ಇಳಿಕೆ ಕಂಡಿದ್ದು ತಿಂಗಳ ಕೊನೆಯಲ್ಲಿ ಏರಿಕೆಯಾಗಿತ್ತು. ಕಳೆದ ತಿಂಗಳು ಸರಕು ಅಡಿಕೆಗೆ 67,000ದಿಂದ 96,000 ರೂ.ವರೆಗೆ, ಬೆಟ್ಟೆ 53,000ರಿಂದ 63,000, ರಾಶಿ ಇಡಿ 55,000- 60,000 ರೂ. ಆಸುಪಾಸಿನಲ್ಲಿ ಧಾರಣೆ ನಡೆಯುತ್ತಿತ್ತು. ಪ್ರಸ್ತುತ ಸರಕು 60,129ರಿಂದ 98,896, ರಾಶಿ ಇಡಿ 49,000ದಿಂದ 57,000, ಬೆಟ್ಟೆ 51,554ರಿಂದ 58,700 ರೂ. ವರೆಗೆ ಮಾರಾಟವಾಗುತ್ತಿದೆ.
2023ರ ಜೂನ್, ಜುಲೈ ತಿಂಗಳಲ್ಲಿ ಅಡಿಕೆ ಧಾರಣೆ 55,000-57,000 ವರೆಗೆ ತಲುಪಿತ್ತು. 2024ರ ಮೇ ತಿಂಗಳಿನಲ್ಲಿ 55,000 ರೂ.ಗಳಿತ್ತು. ಆದರೆ, ಈ ವರ್ಷ ಏಪ್ರಿಲ್ ಮೊದಲ ವಾರದಲ್ಲಿಯೇ ಏರಿಕೆ ಕಂಡು ಮೇ ತಿಂಗಳಿನಲ್ಲಿ ಕುಸಿತ ಕಾಣುತ್ತಿದೆ.
ಮಲೆನಾಡು ಭಾಗದಲ್ಲಿಈಗ ಹಸ ಹಾಗೂ ಬೆಟ್ಟೆ ಅಡಿಕೆಯನ್ನು ತಯಾರಿಸುವವರು ಕಡಿಮೆಯಾಗುತ್ತಿದ್ದು ರಾಶಿ ಇಡಿ ಅಡಿಕೆ ಮಾಡುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಕಾರ್ಮಿಕರ ಕೊರತೆ ಕಾರಣಕ್ಕೆ ಅಡಿಕೆಯನ್ನು ಹೋಳು ಮಾಡದೆ ಯಂತ್ರದ ಸಹಾಯದಿಂದ ಸಿಪ್ಪೆಯನ್ನು ಬೇರೆ ಮಾಡಿ ಇಡಿ ಅಡಿಕೆಯನ್ನು ಮಾತ್ರ ಬೇಯಿಸಲಾಗುತ್ತದೆ. ಹಸ ಅಡಿಕೆಗೆ ಧಾರಣೆ 90,000 ರೂ. ಆಸುಪಾಸಿನಲ್ಲಿದ್ದರೂ ಬೆಳೆಗಾರರು ಹಸ ವೆರೈಟಿ ಮಾಡದೆ ಒಳ್ಳೆಯ ಧಾರಣೆಯಿಂದ ವಂಚಿತರಾಗುತ್ತಿದ್ದಾರೆ.
ಕಳೆದ 2 ವರ್ಷದಿಂದ ಅಡಿಕೆ ಇಳುವರಿ ಕಡಿಮೆ ಆಗುತ್ತಿದೆ. ಅತಿಯಾದ ಮಳೆ ಹಾಗೂ ಎಲೆಚುಕ್ಕಿ, ಹಳದೆ ಎಲೆ ರೋಗದಿಂದ ಅರ್ಧದಷ್ಟು ಅಡಿಕೆ ಇಳುವರಿ ಕಡಿಮೆಯಾಗುತ್ತಿದೆ. ಆದರೆ, ರೈತರು ವರ್ಷದ ಬೆಳೆ ಹೋದರೂ ಪರವಾಗಿಲ್ಲ, ತೋಟ ಉಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ. ಈ ಬಾರಿಯ ಬೇಸಿಗೆಯಲ್ಲಿ ಅಡಿಕೆ ಮರಗಳಲ್ಲಿ ಹಿಂಗಾರ ನಳನಳಿಸುತ್ತಿದ್ದು, ಹರಳು ಉಳಿದರೆ ಉತ್ತಮ ಫಸಲು ಕೈಗೆ ಸಿಗುವ ಆಶಾಭಾವ ಮೂಡಿದೆ.
