ರಾಜಧಾನಿ ಪಟಾಕಿ ಅವಘಡಕ್ಕೆ 12 ಮಂದಿ ಬಲಿ!
– ಆನೇಕಲ್ ತಾಲೂಕು ಅತ್ತಿಬೆಲೆ ಪಟಾಕಿ ಅಂಗಡಿಯಲ್ಲಿ ಘಟನೆ
– ಸಾವಿನ ಸಂಖ್ಯೆ ಹೆಚ್ಚಳ: ಸ್ಥಳಕ್ಕೆ ಪೊಲೀಸ್ ತಂಡ
NAMMUR EXPRESS NEWS
ಬೆಂಗಳೂರು: ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಮಳಿಗೆ ಒಂದರಲ್ಲಿ ಸಂಭವಿಸಿದ ಭಾರೀಬೆಂಕಿ ಅವಘಡದಲ್ಲಿ ಈವರೆಗೆ 12 ಮಂದಿ ಸಜೀವ ದಹನ ಆಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟು 20 ಕಾರ್ಮಿಕರ ಪೈಕಿ ನಾಲ್ವರು ಪಾರಾಗಿದ್ದಾರೆ. ಅವರಲ್ಲಿ 12 ಜನ ಮೃತಪಟ್ಟಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ. ಪಟಾಕಿ ಮಳಿಗೆಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಪಟಾಕಿ ಮಳಿಗೆ ಹೊತ್ತಿ ಉರಿದಿದೆ. ಬಾನೆತ್ತರಕ್ಕೆ ಬೆಂಕಿಯ ಹೊಗೆ ಆವರಿಸಿದ್ದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಕರ್ನಾಟಕ ತಮಿಳುನಾಡು ಗಡಿಯ ಅತ್ತಿಬೆಲೆ ಬಳಿಯ ಬಾಲಾಜಿ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಅಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಾಹನದಿಂದ ಪಟಾಕಿ ಆನ್‌ಲೋಡ್ ಮಾಡುವಾಗ ದುರ್ಘಟನೆ ನಡೆದಿದ್ದು, ಗೋಡನ್ ವರೆಗೂ ವ್ಯಾಪಿಸಿ ಬೆಂಕಿ ಜ್ವಾಲೆ ಹೆಚ್ಚಾಗಿದೆ. ಎರಡು ವಾಹನಗಳು ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.