200 ರೂ. ಇಂದ 40 ಪೈಸೆಗೆ ಕುಸಿದ ಟೊಮೆಟೊ!
– ಕಣ್ಣೀರಿಡುತ್ತಾ ರಸ್ತೆಯಲ್ಲೇ ಎಸೆದು ಹೋದ ರೈತರು
– ಕಾಲ ಚಕ್ರದಲ್ಲಿ ಎಲ್ಲವೂ ನಡೆಯುತ್ತೆ…!
NAMMUR EXPRESS NEWS
ಬೆಂಗಳೂರು: ಕಳೆದ ಮೂರು ತಿಂಗಳ ಕಾಲ ಜನ ಸಾಮಾನ್ಯರನ್ನು ನಿದ್ದೆಗೆಡಿಸಿದ್ದ ಟೊಮೆಟೊ ಇಂದು ರೈತರನ್ನು ಕಣ್ಣೀರಿಡುವಂತೆ ಮಾಡುತ್ತಿದೆ. ವಾರಗಳ ಹಿಂದಷ್ಟೆ ಮಾರುಕಟ್ಟೆಯಲ್ಲಿ 200 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ ಇದೀಗ 1-2 ರೂಪಾಯಿಗೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ರೈತರು ಬೆಳೆದ ಟೊಮೆಟೊಗೆ ಕನಿಷ್ಠ ಸಾರಿಗೆ ಶುಲ್ಕವೂ ಸಿಗುತ್ತಿಲ್ಲ. ಹಾಗಾಗಿ ಆಂಧ್ರ ಪ್ರದೇಶದ ರೈತರು ಬೆಳೆಯನ್ನು ರಸ್ತೆಗೆ ಸುರಿದಿದ್ದಾರೆ. ಇತ್ತೀಚೆಗಷ್ಟೇ ನಂದ್ಯಾಲ ಜಿಲ್ಲೆಯ ಪಯಾಪಿಲಿಯ ಮಾರುಕಟ್ಟೆಯಲ್ಲಿ ಅಲ್ಪ ಬೆಲೆಗೆ ಮಾರಾಟವಾದ ಕಾರಣ ರೈತರು ತಂದಿದ್ದ ಟೊಮೆಟೊವನ್ನು ಅಲ್ಲಿಯೇ ಎಸೆದು ಹೋಗಿದ್ದಾರೆ. ಅವುಗಳನ್ನ ಜಾನುವಾರುಗಳು ತಿನ್ನುತ್ತಿರುವುದು ಕಂಡು ಬಂದಿದೆ.
ಬೆಲೆ ಊಹಿಸಲಾಗದಷ್ಟು ತೀವ್ರ ಕುಸಿದಿದ್ದು, ಕಟಾವು, ಸಾಗಾಣಿಕೆ ವೆಚ್ಚವೂ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಆಂಧ್ರ ಪ್ರದೇಶರಾಜ್ಯದ ಎಲ್ಲ ಮಾರುಕಟ್ಟೆಯಲ್ಲೂ ಇದೇ ಸ್ಥಿತಿ ಇದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ನಂದ್ಯಾಲ ಜಿಲ್ಲೆಯ ಪಯಾಪಿಲಿ ಮಾರುಕಟ್ಟೆಯಲ್ಲಿ ಕಿಲೋ ಟೊಮೆಟೊ 3 ರೂಪಾಯಿಗೆ ಮಾರಾಟವಾದರೆ, ಕರ್ನೂಲು ಜಿಲ್ಲೆಯ ಪತ್ತಿಕೊಂಡ ಕೃಷಿ ಮಾರುಕಟ್ಟೆಯಲ್ಲಿ ಬೆಲೆ ಭಾರೀ ಕುಸಿತ ಕಂಡಿದೆ. 25ಕೆ.ಜಿ ತೂಕದ ಟೊಮೆಟೊ ಬಾಕ್ಸ್ ಗೆ ಕೇವಲ 10ನಿಂದ 35 ರೂಪಾಯಿ ಮಾರಾಟವಾಗಿದೆ.
ಅಂದರೆ ಒಂದು ಕೆಜಿ ಟೊಮೆಟೊ ಸುಮಾರು 40 ಪೈಸೆಗೆ ಮಾರಾಟವಾಗಿದೆ. ಇದರಿಂದ ರೈತರು ಈ ಬೆಲೆಗೆ ಟೊಮೆಟೊವನ್ನು ಮಾರಲು ಮನಸು ಬಾರದೆ ರಸ್ತೆಗೆ ಎಸೆದು ಹೋಗಿದ್ದಾರೆ. ಚಿತ್ತೂರು ಜಿಲ್ಲೆಯ ಮದನಪಲ್ಲಿ ಮಾರುಕಟ್ಟೆಯಲ್ಲೂ ಇದೇ ಪರಿಸ್ಥಿತಿ ಇದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲೂ ಟೊಮೆಟೊ ಬೆಲೆ ಕುಸಿದಿದೆ. ರೈತರು ಆತಂಕದಲ್ಲಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ ಅಡಿಕೆ ಮಾರುಕಟ್ಟೆ
