ಮಹಿಳೆಯರ ಖಾತೆಗೆ 2000 ರೂ. ಹಣ!
– ಗೃಹಲಕ್ಷ್ಮಿ ಹಣಕ್ಕೆ ಕ್ಷಣಗಣನೆ ಶುರು: ಆ.30ಕ್ಕೆ ಕಾರ್ಯಕ್ರಮ
– ಮೈಸೂರಲ್ಲಿ ಅಧಿಕೃತ ಕಾರ್ಯಕ್ರಮದಲ್ಲಿ ಚಾಲನೆ
– ಆ.30ಕ್ಕೆ ಹಣ ಹಾಕಲಾಗುತ್ತಾ, ಆ.31ಕ್ಕೆ ಹಾಕ್ತಾರಾ?
NAMMUR EXPRESS NEWS
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಚಾಲನೆ ಸಿಗಲಿದೆ. ಆಗಸ್ಟ್ 30ರ ಬುಧವಾರ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಯೋಜನೆಗೆ ಹಣ ಹಾಕುವ ಮೂಲಕ ಚಾಲನೆ ಸಿಗಲಿದ್ದು, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮೈಸೂರಲ್ಲೇ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಪ್ರತಿ ಹಳ್ಳಿಯಲ್ಲೂ ಕಾರ್ಯಕ್ರಮ ನಡೆಯಲಿದೆ. ಮಹಿಳೆಯರ ಮೊಗದಲ್ಲಿ ಸಂಭ್ರಮ ಕಂಡು ಬರುತ್ತಿದೆ.
ಇನ್ನು ನೋಂದಣಿ ಆಗಿಲ್ಲ!:
ಜುಲೈ 19ರಂದು ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದ್ದು; ಜುಲೈ 20ರಿಂದ ನೋಂದಣಿ ಪ್ರಾರಂಭವಾಗಿದೆ. ಈ ಒಂದೂವರೆ ತಿಂಗಳಲ್ಲಿ ಸಾಕಷ್ಟು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಶೇ.60 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು ಇನ್ನೂ ಶೇ.40 ರಷ್ಟು ಮಹಿಳೆಯರ ನೋಂದಣಿ ಆಗಬೇಕಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿದ್ದರೆ ಅಂಥವರಿಗೆ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ದಿನ ಅಥವಾ ಆಗಸ್ಟ್ 31ರ ಗುರುವಾರ ‘ರಕ್ಷಾ ಬಂಧನ’ ಹಬ್ಬದ ದಿನವೇ ಖಾತೆಗೆ ತಲಾ 2,000 ಹಣ ಜಮೆ ಮಾಡಲಾಗುತ್ತದೆ.
ನೋಂದಣಿ ಆದವರೆಷ್ಟು?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ ಈವರೆಗೂ ಗೃಹಲಕ್ಷ್ಮಿ ಯೋಜನೆಯಡಿ 1,10,99,376 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಬಹುತೇಕ ಒಂದೂವರೆ ತಿಂಗಳ ಅಂತರದಲ್ಲಿ 1.10 ಕೋಟಿ ಮಹಿಳೆಯರು ಸೌಲಭ್ಯ ಬಯಸಿ ನೋಂದಣಿಗೆ ಮಾಡಿಸಿಕೊಂಡಿರುವುದು ವಿಶೇಷ.
ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ!
ಫಲಾನುಭವಿಗಳ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂಬುದನ್ನು ಸರಕಾರ ನಿಯೋಜಿಸಿರುವ 8147500500 ಸಹಾಯವಾಣಿ ಸಂಖ್ಯೆಗೆ ಎಸ್ಎಂಎಸ್ ಮಾಡಿದರೆ ತಕ್ಷಣ ನಿಮ್ಮ ನೋಂದಣಿ ಕುರಿತ ಮಾಹಿತಿ ನಿಮ್ಮ ಮೊಬೈಗೆ ಬರಲಿದೆ. 8147500500 ಸಹಾಯವಾಣಿ ಸಂಖ್ಯೆಗೆ ಎಸ್ಎಂಎಸ್ ಮಾಡಿದ ತಕ್ಷಣ ನಿಮ್ಮ ನೋಂದಣಿ ಯಶಸ್ವಿಯಾಗಿದ್ದರೆ.
ನಿಮ್ಮ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಂಖ್ಯೆ GL1702001XXXX ಅನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ -ಕರ್ನಾಟಕ ಸರಕಾರ’ ಎಂದು ಮೆಸೇಜ್ ಬರುತ್ತದೆ. ಹೀಗೆ ಮೆಸೇಜ್ ಬಂದರೆ ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಫೈನಲ್ ಪಟ್ಟಿಯಲ್ಲಿ ಇದ್ದೀರಿ ಎಂದರ್ಥ. ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ 2,000 ಹಣ ಜಮಾ ಖಚಿತವಾಗಲಿದೆ.
ಬಹು ನಿರೀಕ್ಷೆಯ ಯೋಜನೆ ಇದಾಗಿದ್ದು, ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.
