ಅಯೋದ್ಯೆ ರಾಮಮಂದಿರ ಲೋಕಾರ್ಪಣೆ!
– ಸಾರ್ವತ್ರಿಕ ರಜೆಗಾಗಿ ಮನವಿ
– ಯಶ್ ಪಾಲ್ ಸುವರ್ಣರಿಂದ ಸಿಎಂ ಗೆ ಪತ್ರ!
NAMMUR EXPRESS NEWS
ಬೆಂಗಳೂರು: ಹಿಂದೂಗಳ 500 ವರ್ಷಗಳ ಕನಸು ನನಸಾಗುವ ಹೊತ್ತು. ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಪವಿತ್ರ ದಿನವಾದ, ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಭಾವನಾತ್ಮಕ ಐತಿಹಾಸಿಕ ಕ್ಷಣವನ್ನು ಮನೆ ಮನಗಳಲ್ಲಿ ಆಚರಿಸಲು ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ. ಜನವರಿ 22 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಶ್ರೀ ರಾಮ ದೇವರ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಕೋಟ್ಯಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
ಈ ವಿಶೇಷ ದಿನದಂದು ದೇಶದಾದ್ಯಂತ ಹಲವು ದೇವಸ್ಥಾನ, ಮಂದಿರ ಹಾಗೂ ಸಂಘ ಸಂಸ್ಥೆಗಳಲ್ಲಿ ವಿಶೇಷ ಪೂಜೆ, ಭಜನಾ ಸಂಕೀರ್ತನೆ, ಅನ್ನ ಸಂತರ್ಪಣೆಯ ನಡೆಯಲಿದ್ದು ಈ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದು, ಮನೆ ಮನೆಗಳಲ್ಲಿ ದೀಪಾವಳಿ ಹಬ್ಬದಂತೆ ಆಚರಿಸಲು ಕರೆ ನೀಡಿದ್ದಾರೆ. ಈ ಸುವರ್ಣ ಕ್ಷಣವನ್ನು ಕಣ್ತುಂಬಿಕೊಳ್ಳುವುದು, ಮಕ್ಕಳಿಂದ ವೃದ್ಧರವರೆಗೂ ಹಾಗೂ ಎಲ್ಲಾ ವೃತ್ತಿಗಳಿಗೂ ಸಾರ್ವತ್ರಿಕವಾಗಿ ರಜೆ ನೀಡಿದಾಗ ಮಾತ್ರ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
