ತೀರ್ಥಹಳ್ಳಿಯ ಸಹಕಾರಿ ನಕ್ಷತ್ರ ನೆನಪು ಮಾತ್ರ!
– ಬಿ. ಎಸ್. ವಿಶ್ವನಾಥ್ ನಿಧನ: ಬೆಂಗಳೂರಲ್ಲಿ ಇಂದು ಅಂತ್ಯಕ್ರಿಯೆ
– ತೀರ್ಥಹಳ್ಳಿ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಮಿನುಗಿಸಿದ್ದ ನಾಯಕ
– ಕಣ್ಣು ದಾನ: ಸಾವಲ್ಲೂ ಸಾರ್ಥಕತೆ ತಂದ ಕುಟುಂಬ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಹಿರಿಮೆಯನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾರಿದ್ದ ಹಿರಿಯ ಸಹಕಾರಿ
ಬಿ.ಎಸ್ ವಿಶ್ವನಾಥನ್ (89) ಭಾನುವಾರ ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದು ಸೋಮವಾರ ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಜಿ ವಿಧಾನ ಪರಿಷತ್ ಸದಸ್ಯ, ರಾಜ್ಯ ಭೂ ಬ್ಯಾಂಕ್ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಸಹಕಾರಿ ತರಬೇತಿ ಕೇಂದ್ರದ ಅಧ್ಯಕ್ಷ, ತೀರ್ಥಹಳ್ಳಿ ಪುರಂದರ ವೇದಿಕೆ ಸ್ಥಾಪಕ, ಇಸ್ರೋ ಸಂಸ್ಥೆಯ ನಿರ್ದೇಶಕ, ಕೆನರಾ ಬ್ಯಾಂಕಿನ ಮಾಜಿ ನಿರ್ದೇಶಕ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೇಹಕ್ಕಲು ಸಮೀಪದ ಬಸರವಳ್ಳಿಯ ವಿಶ್ವನಾಥನ್ ಅವರು ಪತ್ನಿ ಶಾರದಾ, ಪುತ್ರ ಅವಿನಾಶ್ ಹಾಗೂ ಪುತ್ರಿ ಅರ್ಚನಾ ಅವರನ್ನು ಅಗಲಿದ್ದಾರೆ. ವಿಶ್ವನಾಥ್ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅನಾರೋಗ್ಯಪೀಡಿತರಾಗಿದ್ದರು. ರಾಜ್ಯದ ಪ್ರಮುಖ ಸಹಕಾರಿ ನಾಯಕರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ಜತೆ ಸದಾ ಸಂಬಂಧ ಹೊಂದಿದ್ದರು
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ವಿಶ್ವನಾಥನ್ ಅವರು ಸಮಾಜವಾದಿ ದುರೀಣ ಶಾಂತವೇರಿ ಗೋಪಾಲಗೌಡರ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ಅದರೆ ಬಳಿಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ತೀರ್ಥಹಳ್ಳಿಯ ಪುರಂದರ ವೇದಿಕೆ ಸ್ಥಾಪಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಅಲ್ಲದೆ ತೀರ್ಥಹಳ್ಳಿಯ ಅನೇಕ ಅಭಿವೃದ್ಧಿ ಕೆಲಸಗಳಿಗೆ ಮಾರ್ಗದರ್ಶಕರಾಗಿದ್ದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಂತಾಪ
ಸಹಕಾರಿ ಕ್ಷೇತ್ರದ ಬೀಷ್ಮ, ತೀರ್ಥಹಳ್ಳಿಯ ಹೆಮ್ಮೆ ವಿಶ್ವ ಸಹಕಾರಿ ಬಿ ಎಸ್ ವಿಶ್ವನಾಥನ್ ನಿಧನಕ್ಕ ಶಾಸಕ ಆರಗ ಜ್ಞಾನೇಂದ್ರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಶ್ವನಾಥನ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು. ಭಾನುವಾರ ಸಂಜೆ 5 ರ ನಂತರ ತೀರ್ಮಾನಿಸಿ ರಾತ್ರಿ 11 ಕ್ಕೆ ಅರಸಾಳು ರೈಲಿನ ಮೂಲಕ ಬೆಂಗಳೂರು ಹೊರಟು ಬೆಳಿಗ್ಗೆ 5 ಕ್ಕೆ ಬೆಂಗಳೂರು ತಲುಪಿ ವಿಶ್ವನಾಥನ್ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಇದೀಗ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ತೀರ್ಥಹಳ್ಳಿಯ ನೆಲದಲ್ಲಿ ಸಾಮಾಜಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರು ಜಪಿಸಿದ್ದಾರೆ ,ಸಾಹಿತ್ಯ ಲೋಕದ ಮೇರು ಪರ್ವತ ಕುವೆಂಪು, ರಾಜಕೀಯ ಕ್ಷೇತ್ರದ ಆದರ್ಶ ವ್ಯಕ್ತಿತ್ವ ಗೋಪಾಲ ಗೌಡರು ಹೀಗೆ ಬೇರೆ ಬೇರೆ ಕ್ಷೇತ್ರದ ಹಲವು ಜನ ಸಾದಕರಿಗೆ ಜನ್ಮ ಕೊಟ್ಟ ತೀರ್ಥಹಳ್ಳಿ, ಸಹಕಾರಿ ಕ್ಷೇತ್ರದಲ್ಲಿ ಬಿ ಎಸ್ ವಿಶ್ವನಾಥನ್ ಗೆ ಜನ್ಮ ಕೊಟ್ಟು ತೀರ್ಥಹಳ್ಳಿ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ ಹಿರಿಮೆ ತೀರ್ಥಹಳ್ಳಿ ಮಣ್ಣಿನದ್ದಾಗಿದೆ, ತೀರ್ಥಹಳ್ಳಿ ಹೆಸರು ವಿಶ್ವ ಬ್ಯಾಂಕಿನವರೆಗೆ ತೆಗೆದುಕೊಂಡು ಹೋದ ಕೀರ್ತಿಯೂ ಕೂಡ ವಿಶ್ವನಾಥನ್ ಅವರಿಗೆ ಸಲ್ಲುತ್ತದೆ ಎಂದಿರುವ ಶಾಸಕರು ಶ್ರೇಷ್ಠ ಸಹಕಾರಿ ಬಿ ಎಸ್ ವಿ ನಿಧನ ಈಡೀ ಸಹಕಾರಿ ರಂಗಕ್ಕೆ ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ
24.09.2023ರಂದು ಬೆಳಗ್ಗೆ 10.50ಕ್ಕೆ ನಿಧನರಾದ ವಿಶ್ವನಾಥ್ ಅವರ ಅಂತ್ಯ ಕ್ರಿಯೆಯು 25.09.2023ರಂದು ಮಧ್ಯಾಹ್ನ 2.00 ಗಂಟೆಗೆ ಬನಶಂಕರಿ 2ನೇ ಹಂತದ ಚಿತಾಗಾರದಲ್ಲಿ ನಡೆಯಲಿದೆ.
ಕಣ್ಣು ದಾನ: ಸಾವಲ್ಲೂ ಸಾರ್ಥಕತೆ ತಂದ ಕುಟುಂಬ
ಸಹಕಾರಿ ನಾಯಕರಾಗಿ ಹಲವರಿಗೆ ಬದುಕು ನೀಡಿ ತಮ್ಮದೇ ಆದ ಕೊಡುಗೆ ನೀಡಿದ್ದ ವಿಶ್ವನಾಥ್ ಅವರ ಕಣ್ಣನ್ನು ದಾನ ಮಾಡುವ ಮೂಲಕ ಕುಟುಂಬ ಸಾವಲ್ಲೂ ಸಾರ್ಥಕತೆ ಮೆರೆದಿದೆ.
ಗಣ್ಯರ ಸಂತಾಪ: ಸೇವೆಯ ನೆನಪು
ಸಹಕಾರಿ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡ, ಕಿಮ್ಮನೆ ರತ್ನಾಕರ್, ಬಸವಾನಿ ವಿಜಯದೇವ್, ನಾಗರಾಜ್ ಶೆಟ್ಟಿ ಸೇರಿದಂತೆ ಬಹುತೇಕ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮಲೆನಾಡ ಸಂಘಟನೆ ಸಹ್ಯಾದ್ರಿ ಸಂಘ ಇತ್ತೀಚಿಗೆ ಅವರ ಮನೆಗೆ ತೆರಳಿ ಅವರನ್ನು ಗೌರವಿಸಿತ್ತು.