ಟಾಪ್ 3 ನ್ಯೂಸ್
ವಿದ್ಯಾರ್ಥಿಗಳಿಗೆ ಬಿಗ್ ಶಾಕ್..!!
– ಸರ್ಕಾರಿ, ಅನುದಾನಿತ ಪದವಿ ಕಾಲೇಜು ಶುಲ್ಕ ಶೇ.5 ಹೆಚ್ಚಳ.!
– ₹20 ಮುಖಬೆಲೆಯ ಹೊಸ ನೋಟು ಶೀಘ್ರ ಬಿಡುಗಡೆ..!!
– ಬೆಂಗಳೂರು : ವಾರಾಂತ್ಯದ ಒಳಗೆ ಸಿಇಟಿ ಫಲಿತಾಂಶ ಪ್ರಕಟ ಸಾಧ್ಯತೆ..!!
NAMMUR EXPRESS NEWS
ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪದವಿ, ಕಾನೂನು ಹಾಗೂ ಚಿತ್ರಕಲಾ ಕಾಲೇಜುಗಳಲ್ಲಿನ 2025-26ನೇ ಸಾಲಿನ ಪ್ರವೇಶ ಕೋರ್ಸುಗಳ ಶುಲ್ಕವನ್ನು ಶೇ.5 ಹೆಚ್ಚಳ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ. ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ, ಅನುದಾನಿತ ಪದವಿ ಕಾಲೇಜು ಶುಲ್ಕ ಶೇ.5 ಹೆಚ್ಚಳ ಮಾಡಿದ್ದು, ಇದರಿಂದ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎಂ, ಕಾನೂನು, ಚಿತ್ರಕಲೆ ಸೇರಿದಂತೆ ಎಲ್ಲ ರೀತಿ ಪದವಿ ಕೋರ್ಸುಗಳ ಶುಲ್ಕ ಶೇ.5ರಷ್ಟು ಹೆಚ್ಚಾಗಲಿದೆ. ಇನ್ನೂ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಶುಲ್ಕವನ್ನು ಪ್ರತ್ಯೇಕವಾಗಿ ಪಡೆಯಲು ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕ, ಪ್ರವೇಶ ಶುಲ್ಕ, ಬೋಧನಾ ಶುಲ್ಕ ಹೀಗೆ 22 ರೀತಿಯ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗಿದೆ. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರತಿ ವರ್ಷ ಶೇ.5ರಷ್ಟು ಶುಲ್ಕ ಹೆಚ್ಚಿಸಲು ನಿಯಮ ರೂಪಿಸಲಾಗಿದೆ.
– ₹20 ಮುಖಬೆಲೆಯ ಹೊಸ ನೋಟು ಶೀಘ್ರ ಬಿಡುಗಡೆ..!!
ಮುಂಬೈ: ಗವರ್ನರ್ ಸಂಜಯ್ ಮದ್ದೋತ್ರಾ ಅವರ ಸಹಿ ಇರುವ ₹20 ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಗವರ್ನರ್ ಆಗಿದ್ದ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಲ್ಗೊತ್ರಾ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಾತ್ಮ ಗಾಂಧಿ ಅವರ ಭಾವಚಿತ್ರ ಇರುವ ನೋಟುಗಳ ಸರಣಿಯಂತೆಯೇ ಈ ಹೊಸ ನೋಟುಗಳನ್ನು ವಿನ್ಯಾಸಗೊಳಿಸಲಾಗಿದೆ. ಹಳೆಯ ನೋಟುಗಳಿಗೆ ಅನ್ವಯಿಸುವ ನಿಯಮಾವಳಿಗಳು ಇವುಗಳಿಗೂ ಅನ್ವಯವಾಗಲಿವೆ ಎಂದು ತಿಳಿಸಿದೆ.
– ಬೆಂಗಳೂರು: ವಾರಾಂತ್ಯದ ಒಳಗೆ ಸಿಇಟಿ ಫಲಿತಾಂಶ ಪ್ರಕಟ ಸಾಧ್ಯತೆ
ಬೆಂಗಳೂರು : ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಈ ವಾರಾಂತ್ಯದೊಳಗೆ ಪ್ರಕಟವಾಗುವ ಸಾಧ್ಯತೆ ಇದೆ. ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಮತ್ತು ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾದ ಬಳಿಕ ಸಿಇಟಿ ಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದರು. ಅದರಂತೆ ಈಗಾಗಲೇ ಈ ಫಲಿತಾಂಶಗಳು ಪ್ರಕಟವಾಗಿವೆ. ಈ ಫಲಿತಾಂಶ ಪರಿಗಣಿಸಿ ಸಂಬಂಧಿಸಿದ ವಿದ್ಯಾರ್ಥಿಗಳ ಸಿಇಟಿ ರ್‍ಯಾಂಕಿಂಗ್ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಣೆ ಬಳಿಕ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ-2 ಬರೆದಿದ್ದ 71 ಸಾವಿರ ವಿದ್ಯಾರ್ಥಿಗಳಲ್ಲಿ 41 ಸಾವಿರ ಮಂದಿ ಫಲಿತಾಂಶ ಉತ್ತಮಗೊಂಡಿದೆ. ಇದರಲ್ಲಿ ಬಹುತೇಕ ಮಂದಿ ವಿಜ್ಞಾನ ವಿಭಾಗದವರಾಗಿದ್ದು, ಅವರ ಉತ್ತಮಗೊಂಡಿರುವ ಫಲಿತಾಂಶವನ್ನು ಸಿಇಟಿ ರ್‍ಯಾಂಕಿಂಗ್‌ಗೆ ಈಗ ಪರಿಗಣಿಸಬೇಕಿದೆ. ದ್ವಿತೀಯ ಪಿಯುಸಿ ಮತ್ತು ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದಿರುವ ಅಂಕಗಳಲ್ಲಿ ತಲಾ ಶೇ.50ರಷ್ಟು ಅಂಕಗಳನ್ನು ಒಟ್ಟುಗೂಡಿಸಿ ರ್‍ಯಾಂಕಿಂಗ್ ನೀಡಲಾಗುತ್ತದೆ. ಉತ್ತಮಗೊಂಡಿರುವ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಯಾಟ್ಸ್ ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಬೇಕಿದೆ. ಒಟ್ಟಾರೆ ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ಈ ವಾರಾಂತ್ಯದೊಳಗೆ ಫಲಿತಾಂಶ ಪ್ರಕಟಿಸುವ ಪ್ರಯತ್ನದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ತೊಡಗಿದ್ದಾರೆ. ಏ.16 ಮತ್ತು 17ರಂದು ಈ ಬಾರಿಯ ಸಿಇಟಿ ಪರೀಕ್ಷೆಗಳನ್ನು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 3.11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.15ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. 1,958 ಅಭ್ಯರ್ಥಿಗಳು ಹಾಜರಾಗಿದ್ದರು.