ಶೀಘ್ರದಲ್ಲಿ ತೆರೆಯಲಿದೆ ಹಗಲು ರಾತ್ರಿ ಹೋಟೆಲ್!
– ಬ್ರಾಂಡ್ ಬೆಂಗಳೂರು ಕಾರ್ಯಕ್ರಮದಡಿ ಹೊಸ ಯೋಜನೆ
– ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನ ಬಂದ್
NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಶೀಘ್ರದಲ್ಲೇ ದಿನದ 24 ಗಂಟೆಯೂ ತೆರೆದಿರುತ್ತವೆ. ಮಹತ್ವಾಕಾಂಕ್ಷೆಯ ಬ್ರಾಂಡ್ ಬೆಂಗಳೂರು ಕಾರ್ಯಕ್ರಮದಡಿ ಟೆಕ್-ಕ್ಯಾಪಿಟಲ್ನ ಇಮೇಜ್ ಹೆಚ್ಚಿಸುವುದು ಇದರ ಗುರಿಯಾಗಿದೆ. ಆದರೆ ಅದರ ಜತೆ ಆಗುವ ಸಾಧಕ ಬಾಧಕಗಳ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಬ್ರಾಂಡ್ ಬೆಂಗಳೂರು ಕಾರ್ಯಕ್ರಮದಡಿ ಟೆಕ್-ಕ್ಯಾಪಿಟಲ್ನ ಇಮೇಜ್ ಹೆಚ್ಚಿಸುವುದು ಇದರ ಗುರಿಯಾಗಿದೆ. ಹೋಟೆಲ್ಗಳು ಮತ್ತು ರೆಸ್ಟೊರೆಂಟ್ಗಳನ್ನು ದಿನದ 24 ಗಂಟೆ ತೆರೆಯಲು ಅವಕಾಶ ನೀಡಬೇಕು ಎಂಬುದು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ನ ಬಹಳ ದಿನಗಳ ಬೇಡಿಕೆ ಬಾಕಿ ಉಳಿದಿದೆ. ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರ ಇದನ್ನು ಒಪ್ಪಿಕೊಂಡಿದ್ದರೂ, ಭದ್ರತಾ ಕಾರಣಗಳಿಂದ ಯಾವುದೇ ದೃಢ ನಿರ್ಧಾರ ಕೈಗೊಂಡಿರಲಿಲ್ಲ.
ಸಂಘದ ಸದಸ್ಯರೊಂದಿಗೆ ಶನಿವಾರ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರು. ಡಿಸಿಎಂ ಅವರನ್ನು ಭೇಟಿ ಮಾಡಿ ನಗರದಲ್ಲಿ 24 ಗಂಟೆಗಳ ಕಾಲ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಶಿವಕುಮಾರ್ ನಮ್ಮ ಬೇಡಿಕೆ ಆಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ವಾರ ಅಥವಾ 10 ದಿನಗಳಲ್ಲಿ ಹೋಟೆಲ್ಗಳು ಮತ್ತು ರೆಸ್ಟೊರೆಂಟ್ಗಳು ದಿನದ 24 ಗಂಟೆ ತೆರೆಯಲು ಅನುಮತಿ ನೀಡುವ ಆದೇಶ ಹೊರಬೀಳಬಹುದುಎಂದು ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 24,000 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಹೋಟೆಲ್ಗಳಿವೆ, ಅವುಗಳಲ್ಲಿ ಶೇ. 10 ರಷ್ಟು ಹೋಟೆಲ್ ಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ರಾತ್ರಿ 10 ಗಂಟೆಯ ನಂತರ ಹೋಟೆಲ್ಗಳನ್ನು ತೆರೆಯಲು ಪೊಲೀಸರ ವಿರೋಧದ ಕುರಿತು ಮಾತನಾಡಿದ ರಾವ್, ನಮ್ಮ ಬೇಡಿಕೆಯು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು, ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಇತರರಿಗೆ ಸಹಾಯ ಮಾಡಲಿದ್ದು, ಬ್ರಾಂಡ್ ಬೆಂಗಳೂರು ಉಪಕ್ರಮಕ್ಕೆ ಪೂರಕವಾಗಲಿದೆ ಎಂದು ಶಿವಕುಮಾರ್ ಭಾವಿಸಿದ್ದಾರೆ ಎಂದರು.
ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನ ಬಂದ್
ಬೆಂಗಳೂರು: ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಅವುಗಳ ಪರ ಜಾಹೀರಾತು, ಸೇವನೆಗೆ ಪ್ರಚೋದನೆ ಮತ್ತು ಸಂಗ್ರಹಣೆ ನಿಷೇಧಿಸಿ ಆರೋಗ್ಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಸಾರ್ವಜನಿಕರ ಆರೋಗ್ಯ ಕಾಪಾ ಡಲು ಸಂವಿಧಾನದ 47ನೇ ವಿಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದೆ. ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಹುಕ್ಕಾ, ತಂಬಾಕು ರಹಿತ ಮತ್ತು ನಿಕೋಟಿನ್ ರಹಿತ ಹುಕ್ಕಾ, ಸ್ವಾದಭರಿತ, ಮೊಲಾಸಿಸ್, ಶಿಶಾ ಒಳಗೊಂಡ ಹುಕ್ಕಾಗಳನ್ನು ನಿಷೇಧಿಸಲಾಗಿದೆ.
ಆದೇಶ ಉಲ್ಲಂಘಿಸಿದವರ ವಿರುದ್ಧ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಗಳ (ಕೋಟ್ಪಾ) ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿ ಕ್ರಮ ಜರುಗಿಸುವುದಾಗಿ ಆದೇಶದಲ್ಲಿ ತಿಳಿಸಿದೆ. ‘ಕೋಟ್ಪಾ ಕಾಯ್ದೆಯಡಿ ಹುಕ್ಕಾವನ್ನು ತಂಬಾಕು ಎಂದು ಪರಿಗಣಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ. ಮಕ್ಕಳು ಮತ್ತು ವಿದ್ಯಾರ್ಥಿ ಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ ಅಡಿಯಲ್ಲಿ ನಿಕೋಟಿನ್ ಅನ್ನು ವಿಷ ಎಂದು ಪರಿಗಣಿಸಲಾಗಿದೆ’ ಎಂಬ ವಿವರಣೆ ಆದೇಶದಲ್ಲಿದೆ.