ವಿದ್ಯುತ್ ದರ ಇಳಿಕೆ!
– ಯುನಿಟ್‌ಗೆ 37 ಪೈಸೆ ಕಡಿತ!
– ಉಚಿತ ವಿದ್ಯುತ್ ಪಡೆಯುವವರಿಗೆ ಈ ರಿಯಾಯಿತಿ ಇಲ್ಲ!
NAMMUR EXPRESS NEWS
ಬೆಂಗಳೂರು: ರಾಜ್ಯದ 5 ವಿದ್ಯುತ್ ವಿತರಣ ಕಂಪನಿಗಳು ಜನವರಿ ತಿಂಗಳಲ್ಲಿ ನೀಡುವ ಮಾಸಿಕ ವಿದ್ಯುತ್ ಬಿಲ್‌ನಲ್ಲಿ ಪ್ರತಿ ಯುನಿಟ್‌ಗೆ ಸರಾಸರಿ 37 ಪೈಸೆ ಕಡಿಮೆ ಮಾಡಲು ತೀರ್ಮಾನಿಸಿದೆ. ವಿದ್ಯುತ್ ಖರೀದಿ ದರ ಕಡಿಮೆಯಾಗಿದ್ದರಿಂದ ಜನವರಿ ತಿಂಗಳಲ್ಲಿ ನೀಡುವ ಬಿಲ್‌ನಲ್ಲಿ ಇದನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಎಂದು ಎಲ್ಲ ವಿದ್ಯುತ್ ಕಂಪನಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1.92 ಕೋಟಿ ಗ್ರಾಹಕರು ಇದರ ಲಾಭ ಪಡೆಯಲಿದ್ದಾರೆ. ಮನೆ ಬಳಕೆಯಿಂದ ಹಿಡಿದು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರವರೆಗೆ ಇದು ಅನ್ವಯವಾಗುತ್ತದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ತಿಂಗಳೂ ಇಂಧನ ಖರೀದಿಯಿಂದ ಆಗುವ ದರ ವ್ಯತ್ಯಾಸವನ್ನು ಆಯಾ ತಿಂಗಳ ಬಿಲ್‌ನಲ್ಲೇ ನಮೂದಿಸಲು ಆಯಾ ವಿತರಣ ಕಂಪನಿಗಳಿಗೆ ಅಧಿಕಾರ ನೀಡಿದೆ. ಅದರಂತೆ ಕಳೆದ ತಿಂಗಳು ಇಂಧನ ಖರೀದಿ ದರ ಇಳಿಮುಖಗೊಂಡಿರುವುದರಿಂದ ಜನವರಿ ತಿಂಗಳ ಬಿಲ್ ನಲ್ಲಿ ಗ್ರಾಹಕರಿಗೆ ಕಡಿಮೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಲ್ಬರ್ಗ ಕಂಪನಿ ಅತಿ ಹೆಚ್ಚು ಎಂದರೆ 51 ಪೈಸೆ ಕಡಿಮೆ ಮಾಡಿದ್ದರೆ, ಹುಬ್ಬಳ್ಳಿ ಕಂಪನಿ ಕೇವಲ 3ಪೈಸೆಯಷ್ಟು ಪ್ರತಿ ಯೂನಿಟ್‌ಗೆ ದರ ಕಡಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಸ್ಕಾಂ ಕಂಪನಿಯಲ್ಲಿ ಅತಿ ಹೆಚ್ಚು 96.80 ಲಕ್ಷ ಗ್ರಾಹಕರಿದ್ದು, ಅದರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರೇ ಹೆಚ್ಚು. ಅವರಿಗೆ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಮುಖಗೊಳ್ಳಲಿದೆ. ರಾಜ್ಯ ಸರ್ಕಾರ ಪ್ರತಿ ತಿಂಗಳೂ 200 ಯೂನಿಟ್ ಒಳಗೆ ಬಳಸುವವರಿಗೆ ಉಚಿತ ವಿದ್ಯುತ್ ನೀಡುವುದರಿಂದ ಅವರಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ. ಆದರೆ ಸರ್ಕಾರದ ಮೇಲಿರುವ ಹೊರೆ ಕಡಿಮೆಯಾಗಲಿದೆ. ಈಗ ಪ್ರತಿ ಯೂನಿಟ್ ದರ 7.15 ರೂ. ಹಾಗೂ 9 ರೂ ಇದೆ. 200 ಯೂನಿಟ್‌ಗೆ ಒಳಗೆ ಇರುವವರಿಗೆ 7.15 ರೂ. ಇದ್ದು, ನಂತರದ ವಿದ್ಯುತ್ ಬಳಕೆದಾರರಿಗೆ 9 ರೂ. ದರ ಅನ್ವಯವಾಗಲಿದೆ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಇನ್ನೂ ಹೆಚ್ಚು ವಿದ್ಯುತ್ ದರ ಇದೆ. ಪ್ರತಿ ತಿಂಗಳೂ ಇಂಧನ ಹೊಂದಾಣಿಕೆ ದರ ವ್ಯತ್ಯಾಸವಾಗುತ್ತಾ ಹೋಗುತ್ತದೆ.
