ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್..!
– ಪಿಯು ಕಾಲೇಜುಗಳಿಗೆ 4689 ಅತಿಥಿ ಉಪನ್ಯಾಸಕರ ನೇಮಕ
– ಮಾಸಿಕ ₹14 ಸಾವಿರ ವೇತನ ಎಂದು ಶಿಕ್ಷಣ ಇಲಾಖೆ ಆದೇಶ
NAMMUR EXPRESS NEWS
ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಮಂಜೂರಾತಿ ಹುದ್ದೆಗಳಿಗೆ ಅನುಗುಣವಾಗಿ 2025-26ನೇ ಸಾಲಿಗೆ 4,689 ಅತಿಥಿ ಉಪನ್ಯಾಸಕರನ್ನು ನೇಮಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ.
ಅತಿಥಿ ಉಪನ್ಯಾಸಕರಿಗೆ ಮಾಸಿಕ ₹14 ಸಾವಿರ ವೇತನ ನಿಗದಿಪಡಿಸಲಾಗಿದೆ. ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ 10 ಗಂಟೆಗಳ ಕಾರ್ಯಭಾರ ನಿರ್ವಹಿಸಲು ಮಾತ್ರ ಅನುಮತಿ ನೀಡಬೇಕು. ಯಾವುದೇ ಕಾಲೇಜಿನಲ್ಲಿ 10/12 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ಇದ್ದಲ್ಲಿ ಮಾತ್ರ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬಹುದು. ವಿಷಯದಲ್ಲಿ ಬೋಧನೆಗೆ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಮುಂದೆ ಬಂದರೆ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಕಾಲೇಜಿನ ಪ್ರಾಚಾರ್ಯರು ಮತ್ತು ಹಿರಿಯ ಉಪನ್ಯಾಸಕರ ಸಮಿತಿ ಆಯ್ಕೆ ಮಾಡಬೇಕು ಎಂದು ಸೂಚಿಸಲಾಗಿದೆ.
ಆಯಾ ಜಿಲ್ಲಾ ವ್ಯಾಪ್ತಿಯ ಪಿಯು ಕಾಲೇಜುಗಳಲ್ಲಿ ಕಡಿಮೆ ಕಾರ್ಯ ಭಾರ ಹೊಂದಿರುವ ವಿಷಯಗಳಿಗೆ ಉಪನ್ಯಾಸಕರನ್ನು ಜಿಲ್ಲೆಯ ಇತರೆ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳಿಗೆ ನಿಯೋಜಿಸಿದ ನಂತರ ಅತಿಥಿ ಉಪ ನ್ಯಾಸಕರನ್ನು ನೇಮಿಸಿ ಕೊಳ್ಳಬೇಕು ಎಂದು ತಿಳಿಸಿದೆ.