ಗಣರಾಜ್ಯೋತ್ಸವಕ್ಕೆ ಎಲ್ಲೆಡೆ ಹೈ ಅಲರ್ಟ್!
– ರಾಜಧಾನಿ ಸೇರಿ ಹೋಟೆಲ್, ಲಾಡ್ಜ್ ಮೇಲೂ ನಿಗಾ
– ಪ್ರತಿ ಹಳ್ಳಿ ಹಳ್ಳಿಯಲ್ಲೂ ಗಣರಾಜ್ಯದ ಹಬ್ಬಕ್ಕೆ ಸಜ್ಜು
NAMMUR EXPRESS NEWS
ಬೆಂಗಳೂರು: ದೇಶವೇ ಹೆಮ್ಮೆ ಪಡುವ ಜನವರಿ 26ರ ಗಣರಾಜ್ಯೋತ್ಸವಕ್ಕೆ ಎಲ್ಲೆಡೆ ಭರದಲ್ಲಿ ಸಿದ್ಧತೆ ನಡೆಯುತ್ತಿದೆ. ಪ್ರತಿ ಶಾಲೆ, ಪ್ರತಿ ಸರ್ಕಾರಿ ಕಚೇರಿಯಲ್ಲಿ ಆಚರಣೆ ನಡೆಯಲಿದೆ. ಸ್ಥಳೀಯ ಆಡಳಿತಗಳು ಈ ಕಾರ್ಯಕ್ರಮ ನಿರ್ವಹಣೆ ಮಾಡಲಿವೆ. ನವ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪೆರೇಡ್ ನಡೆಯಲಿದೆ. ಇತ್ತ ರಾಜಧಾನಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಹಲವಾರು ಸಾಹಸಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದರ ನಡುವೆಯೇ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಬೆಂಗಳೂರಲ್ಲಿ ಕಾರ್ಯಕ್ರಮ ಸುಲಲಿತವಾಗಿ ನಡೆಯಲು ಹಾಗೂ ಮೈದಾನದ ಭದ್ರತೆಯ ಸಲುವಾಗಿ ಮುಂಜಾಗರೂಕತಾ ಕ್ರಮಗಳಾಗಿ ಕಳೆದ 15 ದಿನಗಳಿಂದ ಮೈದಾನಕ್ಕೆ ಪೊಲೀಸರನ್ನು ಕಣ್ಣಾವಲು ಇಡಲಾಗಿದೆ ಮತ್ತು ಬೆಂಗಳೂರು ನಗರದ ಎಲ್ಲಾ ಹೋಟೆಲ್, ಲಾಡ್ಜ್ಗಳು ತಂಗುದಾಣಗಳು, ಇನ್ನಿತರೆ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆ ಸೂಕ್ತ ನಿಗಾವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದ್ದಾರೆ. ಜನವರಿ 26ರಂದು ನಡೆಯುವ ಧ್ವಜಾರೋಹಣ, ಕವಾಯತು ಹಾಗೂ ಸಾಂಸ್ಕೃತಿಕ ಸಮಾರಂಭವನ್ನು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದ ವೇಳೆ ಒಳಗೆ ಮತ್ತು ಹೊರಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ನಿಯೋಜನೆ
ಬೆಂಗಳೂರು ನಗರದ ಎಲ್ಲಾ ವಿಭಾಗಗಳಿಂದ 9 ಡಿಸಿಪಿ, 16 ಎಸಿಪಿ, 46 ಪೊಲೀಸ್ ಇನ್ಸ್ಪೆಕ್ಟರ್ಸ್, 109-ಪಿಎಸ್ಐ/ಮಹಿಳಾ ಪಿಎಸ್ಐ, 77 ಎಎಸ್ಐ, 594 ಹೆಡ್ಕಾನ್ಸ್ಟೆಬಲ್/ ಪೊಲೀಸ್ ಕಾನ್ಸ್ಟೆಬಲ್ 87 ಮಹಿಳಾ ಸಿಬ್ಬಂದಿಗಳೊಂದಿಗೆ 184 ಸಾದಾ ಉಡುಪಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು 56 ಜನ ಕ್ಯಾಮೆರಾ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.
100ಕ್ಕೂ ಅಧಿಕ ಸಿಸಿಟಿವಿಗಳ ಕಣ್ಗಾವಲು
ಮೈದಾನದ ಸುತ್ತ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು 100 ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಮತ್ತು ಮೈದಾನದಲ್ಲಿ ಆಗಮಿಸುವವರ ತಪಾಸಣೆಗೆ 3 ಬ್ಯಾಗೇಜ್ ಸ್ಕ್ಯಾನರ್, 20-ಡಿಎಫ್ಎಂಡಿ ಮತ್ತು 40 ಎಚ್ಎಚ್ಎಂಡಿಗಳನ್ನು ಅಳವಡಿಸಲಾಗಿರುತ್ತದೆ.