Categories
ಬೆಂಗಳೂರು

ಇನ್ಮೇಲೆ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್‌ ಸಂಪರ್ಕ ಕಟ್!

ಇನ್ಮೇಲೆ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್‌ ಸಂಪರ್ಕ ಕಟ್!
* ಸೆ.1 ರಿಂದ ಕಟ್ಟುನಿಟ್ಟಾಗಿ ನಿಯಮ ಪಾಲನೆ: 15 ದಿನ ಬಡ್ಡಿಯಿಲ್ಲದೆ ಕಾಲಾವಕಾಶ
– ಬೆಸ್ಕಾಂ ಅಲ್ಲಿ ಮೊದಲ ಪ್ರಯೋಗ: ಬಳಿಕ ಎಲ್ಲಾ ಕಡೆ ಜಾರಿ?

NAMMUR EXPFESS NEWS
ಬೆಂಗಳೂರು: ಬಿಲ್‌ ಬಂದ 30 ದಿನದೊಳಗೆ ವಿದ್ಯುತ್‌ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ.
ಸೆ.1 ರಿಂದ ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಲು ನಿರ್ಧರಿಸಿರುವ ಬೆಸ್ಕಾಂ- ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ ಮೀಟರ್‌ ರೀಡಿಂಗ್‌ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸಿ ಎಂದು ಬೆಸ್ಕಾಂ ಪ್ರಕಟಣೆ ಕೋರಿದೆ.
ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್‌ ಮಾಪನ ಮಾಡಿದ ಬಳಿಕ ಬಿಲ್‌ ಬಕಿ ಳಿಸಿಕೊಂಡಿರುವ ಗ್ರಾಹಕರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲು ಲೈನ್‌ಮೆನ್‌ಗಳ ಜೊತೆ ಮಾಪಕ ಓದುಗರು ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಇನ್ಮುಂದೆ ಮಾಪಕ ಓದುಗರೊಂದಿಗೆ ಇರುವ ಲೈನ್‌ಮೆನ್‌ಗಳು ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ.
ವಿದ್ಯುತ‌ ಬಿಲ್‌ ಪಾವತಿಗೆ ಅಂತಿಮ ದಿನಾಂಕದ ವರೆಗೆ (ಅಂದರೆ ಬಿಲ್ ನೀಡಿದ 15 ದಿನಗಳು) ಯಾವುದೇ ಬಡ್ಡಿಯಿಲ್ಲದೆ ಕಾಲಾವಕಾಶ ನೀಡಲಾಗುತ್ತದೆ. ಆದಾಗ್ಯೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ‌ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ.ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.
ಗ್ರಾಹಕರಿಗೆ ವಿಶೇಷ ಸೂಚನೆ:ಆನ್‌ಲೈನ್ ಮೂಲಕ ವಿದ್ಯುತ್‌ ಬಿಲ್‌ ಪಾವತಿಸಿದ ಸಂದರ್ಭದಲ್ಲಿ ಕೆಲವೊಮ್ಮೆ ಬೆಸ್ಕಾಂ ಸಾಫ್ಟ್‌ವೇರ್‌ನಲ್ಲಿ ವಿವರ ನಮೂದಾಗದೇ ಇದ್ದಾಗ, ಬಾಕಿ ತೋರಿಸುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ವಿದ್ಯುತ್‌ ಕಡಿತಕ್ಕೆ ಮುಂದಾದರೆ, ಸಿಬ್ಬಂದಿಗೆ ಬಿಲ್‌ ರಶೀದಿ ತೋರಿಸುವುದರಿಂದ ವಿದ್ಯುತ್‌ ಕಡಿತ ಮಾಡಲಾಗುವುದಿಲ್ಲ. ಹಾಗಾಗಿ, ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಕೋರಲಾಗಿದೆ. ಇಲ್ಲಿ ಯಶಸ್ವಿಯಾದರೆ ಮುಂದೆ ರಾಜ್ಯದಲ್ಲಿ ಈ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.