ವಿಶ್ವದಲ್ಲೇ ಭಾರತ ಸೂಪರ್ ಪವರ್!
– ಚಂದ್ರ ಆಯ್ತು, ಸೂರ್ಯನ ಅಂಗಳದಲ್ಲಿ ಭಾರತ ಇತಿಹಾಸ!
– ವಿಶ್ವದ ಕಣ್ಣು ಈಗ ಭಾರತದ ಮೇಲೆ
– ಸೆ.2ರಂದು ಸೂರ್ಯನತ್ತ ಭಾರತ: ಇಸ್ರೋ ಮತ್ತೊಂದು ಹೆಜ್ಜೆ
NAMMUR EXPRESS NEWS
ಬೆಂಗಳೂರು: ಭಾರತ ಈಗ ವಿಶ್ವ ಮಟ್ಟದಲ್ಲಿ ಹಲವು ಸಾಧನೆಗೆ ಮುನ್ನುಡಿ ಬರೆಯುತ್ತಿದೆ. ಚಂದ್ರಯಾನದ 3ರ ಯಶಸ್ಸಿನ ಬಳಿಕ ಸೂರ್ಯನ ಅಂಗಳಕ್ಕೆ ಹಾರುವ ಯೋಜನೆಗೆ ಭಾರತದ ಹೆಮ್ಮೆಯ ಇಸ್ರೋ ಮುಂದಾಗಿದೆ. ಸೂರ್ಯಯಾನದ ಮುಹೂರ್ತ ಫಿಕ್ಸ್ ಮಾಡಿದೆ. ಸೆಪ್ಟೆಂಬರ್ 2ರಂದು ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ L-1 ಉಡಾವಣೆಯಾಗಲಿದೆ. ಈಗಾಗಲೇ ವಿಶ್ವದ ಬಲಿಷ್ಠ ರಾಷ್ಟ್ರಗಳು ಪ್ರಯತ್ನಕ್ಕೆ ಮುಂದಾಗಿದ್ದು ಭಾರತವೂ ಈಗ ಹೊಸ ಸಾಹಸಕ್ಕೆ ಇಳಿದಿದೆ.
ಏನಿದು ಯೋಜನೆ?:
ತಮಿಳುನಾಡಿನ ಶ್ರೀಹರಿಕೋಟಾದಲ್ಲಿರೋ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಬೆಳಗ್ಗೆ 11.50ಕ್ಕೆ ಆದಿತ್ಯಯಾನದ ನೌಕೆ ಉಡಾವಣೆಯಾಗಲಿದೆ. ಕೇವಲ 378 ಕೋಟಿ ರೂಪಾಯಿ ವೆಚ್ಚದಲ್ಲಿ ಇಸ್ರೋ ಮಿಷನ್ ಸನ್ ಕೈಗೊಂಡಿದೆ. ಸೋಮವಾರ ಅಧಿಕೃತವಾಗಿ ಇಸ್ರೋ ಉಡಾವಣೆ ಸಮಯ ಘೋಷಿಸಿದೆ.
ಇಸ್ರೋ ಆದಿತ್ಯ ಎಲ್-1 ಅನ್ನು ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದ ಲಾಂಗ್ರೇಜ್ ಪಾಯಿಂಟ್‌ಗೆ ತಲುಪಿಸುತ್ತದೆ. ಚಂದ್ರನಿಂದ ನಾಲ್ಕು ಪಟ್ಟು ದೂರದ ಅಂತರ ಇದಾಗಿದೆ. ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ ಇದಾಗಿರಲಿದೆ. ಅಂದರೆ, ಆ ಪಾಯಿಂಟ್‌ನಲ್ಲಿ ಸ್ಥಿರವಾಗಿ ನಿಲ್ಲಲಿರೋ ಈ ನೌಕೆ, ಸೂರ್ಯನ ಅಧ್ಯಯನ ಕೈಗೊಳ್ಳಲಿದೆ.
ಸೂರ್ಯನ ಬಳಿ ಈ ವೀಕ್ಷಣಾಲಯ ಯಾವ ರೀತಿ ತೆರೆದುಕೊಳ್ಳಲಿದೆ ಎಂದೂ ಇಸ್ರೋ ಚಿತ್ರ ಸಹಿತ ಮಾಹಿತಿ ನೀಡಿದೆ. ಇಸ್ರೋದ ಬಾಹುಬಲಿ ರಾಕೆಟ್, ಈ ನೌಕೆಯನ್ನು ಭೂಮಿಯ ಕೆಳಕ್ಷಕೆಯಲ್ಲಿ ಸ್ಥಾಪನೆ ಮಾಡಲಿದೆ. ಬಳಿಕ ನೌಕೆಯಲ್ಲಿರುವ ಪ್ರಪಲ್ಕನ್ ಮಾಡ್ಯುಲ್‌ಅನ್ನು ಬಳಸಿಕೊಂಡು ದೀರ್ಘ ಕಕ್ಷೆಯ ಮೂಲಕ ಇದನ್ನು ಲಾಂಗ್ರೇಜ್ -1 ಪಾಯಿಂಟ್‌ಗೆ ತಲುಪಿಸುವುದು ಇಸ್ರೋದ ಗುರಿಯಾಗಿದೆ.
ಈ ಎಲ್-1 ಪಾಯಿಂಟ್ ಎನ್ನುವ ಪ್ರದೇಶದಲ್ಲಿ ಭೂಮಿಯಗುರುತ್ವಾಕರ್ಷಣೆ ಬಲ ಇರೋದಿಲ್ಲ. ಭೂಕಕ್ಷೆಯನ್ನು ದಾಟಿದ ಬಳಿಕ ಇದನ್ನು ಎಲ್-1ನ ಹೊರಗಿರುವ ದೊಡ್ಡ ಹಾಲೋ ಆರ್ಬಿಟ್‌ಗೆ ನೌಕೆಯನ್ನು ಸೇರಿಸಲಾಗುತ್ತದೆ. ಉಡಾವಣೆಯಿಂದ ಎಲ್-1ವರೆಗಿನ ಆದಿತ್ಯ-ಎಲ್1 ಯೋಜನೆಯ ಅವಧಿ ಭರ್ತಿ ನಾಲ್ಕು ತಿಂಗಳು. ಇನ್ನು ಇಡೀ ಯೋಜನೆಯ ಮೂಲ ಉದ್ದೇಶ ಸೂರ್ಯನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವುದು. ಸೂರ್ಯನ ಕರೋನಾ ಬಿಸಿಯಾಗುವ ಬಗ್ಗೆ ಸೌರ ಮಾರುತ ಹೇಗೆ ಎದ್ದೇಳಲಿದೆ ಎನ್ನುವ ಬಗ್ಗೆ ನೌಕೆ ಅಧ್ಯಯನ ಮಾಡಲಿದೆ. ಸೂರ್ಯನ ವಾತಾವರಣದ ಅಮೂಲಾಗ್ರ ಅಧ್ಯಯನವನ್ನೂ ಮಾಡಲಿದೆ. ಸೌರ ಮಂಡಲದಲ್ಲಿ ಸೌರ ಗಾಳಿ ಹಂಚಿಕೆಯಾಗುವ ಬಗ್ಗೆ ತಾಪಮಾನ ಏರುವ ಬಗ್ಗೆ ನೌಕೆ ತಿಳಿದುಕೊಳ್ಳಲಿದೆ.
ಚಂದ್ರನ ಮೇಲೆ ಕುಳಿ ಪತ್ತೆ!
ಚಂದ್ರನ ಮೇಲೆ ಮೂನ್ ವಾಕ್ ಮಾಡುತ್ತಿರುವ ರೋವರ್ ಗೆ ಪ್ರಗ್ಯಾನ್ ಗೆ ಸುಮಾರು 4 ಮೀಟರ್ ವ್ಯಾಸ ಹೊಂದಿರುವ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ಟ್ವಿಟ್ ಮಾಡಿದೆ. ಆಗಸ್ಟ್ 27ರಂದು ರೋವರ್ ತಾನಿದ್ದ ಸ್ಥಳದಿಂದ ಮೂರು ಮೀಟರ್ ಮುಂದೆ ಸಾಗುವ ಮಾರ್ಗದಲ್ಲಿ 4 ಮೀಟರ್ ವ್ಯಾಸದ ಕುಳಿಯೊಂದು ಪತ್ತೆಯಾಗಿದೆ. ಹಾಗಾಗಿ ರೋವರ್ ಸಾಗುತ್ತಿರುವ ಮಾರ್ಗವನ್ನು ಬದಲಿಸಲಾಗಿದೆ ಎಂದು ಇಸ್ರೋ ತನ್ನ ಟ್ವಿಟ್ ನಲ್ಲಿ ತಿಳಿಸಿದೆ. ಇದೀಗ ಸುರಕ್ಷಿತವಾದ ಹಾದಿಯಲ್ಲಿ ರೋವರ್ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಈ ಟ್ವಿಟ್ ನೊಂದಿಗೆ ಇಸ್ರೋ ರೋವರ್ ಸೆರೆ ಹಿಡಿದ ಕುಳಿಯ ಚಿತ್ರವನ್ನೂ ಹಂಚಿಕೊಂಡಿದೆ.
