ಮಂಡ್ಯದಲ್ಲಿ ಈ ಸಲ ಕನ್ನಡ ಸಾಹಿತ್ಯ ಹಬ್ಬ
– ಜೂನ್ 7,8,9ರಂದು ಮಂಡ್ಯದಲ್ಲಿ ಆಯೋಜನೆಗೆ ತೀರ್ಮಾನ
– ಕನ್ನಡ ರಥ ಜಾಥಾ, 87 ಸಾಧಕರಿಗೆ ಸನ್ಮಾನ, ಮೂರು ದಿನ ವಿಚಾರ ಗೋಷ್ಠಿ
NAMMUR EXPRESS NEWS
ಬೆಂಗಳೂರು: ಮಂಡ್ಯದಲ್ಲಿ ಜೂನ್ 7, 8 ಮತ್ತು 9ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಅದ್ದೂರಿ ಎನ್ನುವುದಕ್ಕಿಂತ ಅರ್ಥಪೂರ್ಣವಾಗಿ ಸಮ್ಮೇಳನ ಹಮ್ಮಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು. ಮಂಡ್ಯ ಜಿಲ್ಲಾಡಳಿತದ ಸಹಕಾರ ಪಡೆದು ಸಮ್ಮೇಳನ ಆಯೋಜಿಸಬೇಕು.
ಕನ್ನಡ ಸಂಘಟನೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹಿರಿಯರು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದವರನ್ನು ಪರಿಗಣಿಸಬೇಕು’ ಎಂದೂ ಮುಖ್ಯಮಂತ್ರಿ ಸೂಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ಸಮ್ಮೇಳನದಲ್ಲಿ ಕನ್ನಡ ರಥ ಜಾಥಾ, 87 ಸಾಧಕರಿಗೆ ಸನ್ಮಾನ, ಮೂರು ದಿನ ವಿಚಾರ ಗೋಷ್ಠಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು. ಅಲ್ಲದೆ, ಸಮ್ಮೇಳನಕ್ಕೆ ₹30 ಕೋಟಿ ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿಗೆ ಅವರು ಮನವಿ ಸಲ್ಲಿಸಿದರು