ಶಾಲೆಯಲ್ಲೇ ಇನ್ನು ಅಂಕಪಟ್ಟಿ ತಿದ್ದುಪಡಿ ಮಾಡಬಹುದು!
– ವಿದ್ಯಾರ್ಥಿಗಳಿಗೆ ತಪ್ಪಲಿದೆ ಅಲೆದಾಟ: ಯಾರಿಗೆ ತಿದ್ದುಪಡಿ ಅವಕಾಶ?
NAMMUR EXPRESS NEWS
ಬೆಂಗಳೂರು: ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿ ತಿದ್ದುಪಡಿಗಾಗಿ ಬೆಂಗಳೂರಿಗೆ ಬರಬೇಕಿಲ್ಲ. ಶಿಕ್ಷಣ ಇಲಾಖೆಗೆ ಅಲೆಯಬೇಕಿಲ್ಲ. ತಾವು ಓದಿದ ಪ್ರೌಢಶಾಲೆಯಲ್ಲಿಯೇ ಸೌಲಭ್ಯ ಪಡೆಯಬಹುದು. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅದಕ್ಕಾಗಿಯೇ ವಿದ್ಯಾರ್ಥಿ ಸ್ನೇಹಿ ತಂತ್ರಾಂಶ ಅಭಿವೃದ್ದಿ ಪಡಿಸಿದ್ದು, ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೂ ತಿದ್ದುಪಡಿ ಪ್ರಸ್ತಾವ ಸಲ್ಲಿಸಲು ಅನುಕೂಲವಾಗುವಂತೆ ಲಾಗಿನ್ ಸೌಲಭ್ಯ ಕಲ್ಪಿಸಿದೆ. ವಿದ್ಯಾರ್ಥಿಗಳು ಕೋರಿಕೆ ಸಲ್ಲಿಸಿದ ಒಂದು ವಾರದಲ್ಲೇ ಪರಿಷ್ಕೃತ ಅಂಕ ಪಟ್ಟಿ ಕೈ ಸೇರಲಿದೆ.
ಏನೇನು ಬದಲಾವಣೆ ಮಾಡಬಹುದು?
ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, ತಾಯಿ ತಂದೆ ಹೆಸರು, ಜನ್ಮ ದಿನಾಂಕ ಸೇರಿದಂತೆ ಯಾವುದಾದರೂ ತಪ್ಪುಗಳಿದ್ದರೆ ತಾವು ಓದಿದ ಶಾಲೆಗೆ ತೆರಳಿ, ಅಗತ್ಯವಾದ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಾಲತಾಣದ ಲಾಗಿನ್ ಮೂಲಕ ಶಾಲಾ ಮುಖ್ಯ ಶಿಕ್ಷಕರು ತಿದ್ದುಪಡಿ ಪ್ರಸ್ತಾವ ಸಲ್ಲಿಸುವರು. ಆನ್ಲೈನ್ ಮೂಲಕವೇ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಿಗದಿತ ಮೊತ್ತ ಪಾವತಿಸಬಹುದು. ಆನ್ಲೈನ್ ಮೂಲಕ ಹಣ ಪಾವತಿಸಲು ಬಯಸದವರು ಚಲಂ ಡೌನ್ಲೋಡ್ ಮಾಡಿಕೊಂಡು ತಮ್ಮ ಸಮೀಪದ ಯೂನಿಯನ್ ಬ್ಯಾಂಕ್ ಶಾಖೆಗೆ ತೆರಳಿ ಶುಲ್ಕ ಕಟ್ಟಬಹುದು.