ರಾಜಧಾನಿ ಕೆಫೆಯಲ್ಲಿ ನಿಗೂಢ ಸ್ಪೋಟ!
– 10ಕ್ಕೂ ಹೆಚ್ಚು ಮಂದಿಗೆ ಗಾಯ: ಏನಿದು ಬ್ಲಾಸ್ಟ್?
– ಉದ್ಯೋಗ ಸಿಗದಕ್ಕೆ ಯುವಕ ಆತ್ಮಹತ್ಯೆ!
– ಸೇನೆಯ ಪರೀಕ್ಷೆಯಲ್ಲಿ ಫೇಲ್ ಆದ ಯುವಕ: ಶೃಂಗೇರಿಯಲ್ಲಿ ಘಟನೆ
NAMMUR EXPRESS NEWS
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಹೋಟೆಲ್ ಹಾನಿ ಉಂಟಾಗಿದೆ. ಘಟನೆಯಿಂದಾಗಿ ಕಫೆಯಲ್ಲಿದ್ದ ಹಲವು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಲ್ಲಿ ಪದೇ ಪದೇ ಸ್ಪೋಟ ಪ್ರಕರಣಗಳು ಸಂಭವಿಸುತ್ತಿದೆ. ಇದೀಗ ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿಯಲ್ಲಿ ಇರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟಕ್ಕೆ ಬಾಯ್ಲರ್ ಸ್ಪೋಟಗೊಂಡಿರುವುದು ಕಾರಣ ಎನ್ನಲಾಗುತ್ತಿದೆ.
ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆಯಿಂದಾಗಿ ಸ್ಥಳೀಯರು ಆತಂಕ ಗೊಂಡಿದ್ದಾರೆ. ಘಟನೆಯಿಂದಾಗಿ ಸುಮಾರು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಪೋಟ ಸಂಭವಿಸುವ ವೇಳೆಯಲ್ಲಿ ಕಫೆಯಲ್ಲಿ ಸಾಕಷ್ಟು ಗ್ರಾಹಕರು ಇದ್ದರು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂಧಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಉದ್ಯೋಗ ಸಿಗದಕ್ಕೆ ಯುವಕ ಆತ್ಮಹತ್ಯೆ!
ಶೃಂಗೇರಿ: ಉದ್ಯೋಗ ಸಿಗದ ಕಾರಣ ತಾಲ್ಲೂಕಿನ ಕಿಗ್ಗಾ ಸಮೀಪದ ಯಡದಾಳು ಗ್ರಾಮದ ಕಾರ್ತಿಕ್ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ತಾಯಿ, ಸಹೋದರ ಇದ್ದಾರೆ. ‘ಸೇನೆ ಸೇರುವ ಹಂಬಲದಲ್ಲಿದ್ದ ಕಾರ್ತಿಕ್ ಎರಡು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದರು. ಎರಡು ಬಾರಿ ಸೇನಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. 23 ವರ್ಷ ತುಂಬಿದ್ದರಿಂದ ಸೇನಾ ಸಂಬಂಧಿತ ಪರೀಕ್ಷೆಗಳಿಗೆ ಹಾಜರಾಗಲು ವಯಸ್ಸು ಮೀರಿತ್ತು. ಬೇರೆ ಕೆಲಸಕ್ಕೂ ಪ್ರಯತ್ನಿಸಿರಲಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಅವರ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್ ನೋಟ್ ಬರೆದಿಟ್ಟಿರುವ ಕಾರ್ತಿಕ್, ‘ನಾನು ಭಾರತೀಯ ಸೇನೆ ಸೇರಿದಂತೆ ಹಲವು ಕೋರ್ಸ್‌ಗಳ ಪರೀಕ್ಷೆ ಎದುರಿಸಿದ್ದೇನೆ. ಇದು ನನ್ನ ಕೊನೆಯ ಪ್ರಯತ್ನವಾಗಿತ್ತು. ಇದೂ ವಿಫಲವಾಗಿದೆ. ಇದನ್ನು ನನ್ನ ಮನೆಯವರಿಗೆ ಹೇಳುವ ಧೈರ್ಯ ನನಗಿಲ್ಲ. ಮೊಬೈಲ್ ಫೋನ್ ಅನ್ನು ಇಎಂಐ ಮೂಲಕ ಖರೀದಿಸಿದ್ದು, ಅದನ್ನು ನನ್ನ ಖಾತೆಯಿಂದಲೇ ಪಾವತಿಸಿ’ ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.