ಗೃಹಿಣಿಯರಿಗೆ ನವರಾತ್ರಿ ಗಿಫ್ಟ್: ಬಂತು ಹಣ!
– ಗೃಹ ಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಜಮೆ
– ಯುವ ನಿಧಿ ಯೋಜನೆ ಡಿಸೆಂಬರ್ ಅಂತ್ಯದಲ್ಲಿ?
NAMMUR EXPRESS NEWS
ಬೆಂಗಳೂರು: ನವರಾತ್ರಿ ಹೊತ್ತಲ್ಲೇ ರಾಜ್ಯ ಸರಕಾರ ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರಕಾರ ಇದೀಗ ಗೃಹಲಕ್ಷ್ಮೀ ಯೋಜನೆಯ ಮೂಲಕ ಗೃಹಿಣಿಯರಿಗೆ 2ನೇ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದೆ.
ಅಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಿದ್ದ ರಾಜ್ಯ ಸರಕಾರ ಸಪ್ಟೆಂಬರ್ ತಿಂಗಳಲ್ಲಿ ಮೊದಲ ಕಂತಿನ ಹಣವನ್ನು ಪಾವತಿ ಮಾಡಿದೆ. ಇದೀಗ ಸರಕಾರ ನವರಾತ್ರಿ, ದಸರಾ ಹೊತ್ತಲ್ಲೇ ಎರಡನೇ ಕಂತಿನ ಹಣವನ್ನು ಜಮೆ ಮಾಡಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದುವರೆಗೂ ಒಂದನೇ ಕಂತಿನ ಹಣ ಜಮೆ ಆಗದೇ ಇರುವವರಿಗೆ ಇದೀಗ ಪಡಿತರ ಚೀಟಿಯಲ್ಲಿನ ಸಮಸ್ಯೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಮಾಡಿದವರಿಗೆ ಈ ಬಾರಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಹಣ ಒಟ್ಟಿಗೆ ಜಮೆ ಆಗಲಿದೆ.
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು ರಾಜ್ಯ ಸರಕಾರ ಮನೆಯ ಯಜಮಾನಿಯ ಖಾತೆಗೆ 2000 ರೂಪಾಯಿ ಹಣವನ್ನು ಜಮೆ ಮಾಡುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ ಈಗಾಗಲೇ ರಾಜ್ಯದಲ್ಲಿ ಜಾರಿಗೆ ತಂದಿದೆ.
ಯುವ ನಿಧಿ ಜಾರಿಗೆ ತಯಾರಿ!
ಯುವ ನಿಧಿ ಯೋಜನೆ ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿಯ ತಿಂಗಳಲ್ಲಿ ಜಾರಿಗೆ ಬರಲಿದೆ. ಗೃಹಲಕ್ಷ್ಮೀ ಸೇರಿದಂತೆ ಸರಕಾರದ ಯೋಜನೆಗಳು ಜನರಿಗೆ ತಲುಪಬೇಕು ಅನ್ನೋ ಉದ್ದೇಶದಿಂದಲೇ ರಾಜ್ಯ ಸರಕಾರ ಇದೀಗ ಎರಡು ಬಾರಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಸಾಧ್ಯವಾಗಿರಲಿಲ್ಲ. ಇದೀಗ ಸರ್ವರ್ ಸಮಸ್ಯೆ ಉಂಟಾಗಿರುವ ಜಿಲ್ಲೆಗಳಿಗೆ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಕಾಲಾವಕಾಶವನ್ನು ನೀಡಿದೆ. ಸದ್ಯಕ್ಕೆ ಸರಕಾರ ನೀಡುವ ಕೊನೆಯ ಅವಕಾಶ ಆಗಿರಲಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.