Categories
ಬೆಂಗಳೂರು

ಒಂದು ದೇಶ, ಒಂದೇ ದಾಖಲೆ..‘ಜನನ ಪ್ರಮಾಣಪತ್ರ’ ಸಾಕು!

ಒಂದು ದೇಶ, ಒಂದೇ ದಾಖಲೆ..‘ಜನನ ಪ್ರಮಾಣಪತ್ರ’ ಸಾಕು!
– ಆಧಾರ್‌ನಿಂದ ಡಿಎಲ್‌ವರೆಗೆ ಎಲ್ಲಾ ಮಾಡಿಸಲು ಇದೊಂದೇ ದಾಖಲೆ
– 2000 ರೂ. ನೋಟು ಬದಲಾವಣೆ: ಅ.7 ಕೊನೆ ದಿನ

NAMMUR EXPRESS NEWS
ಬೆಂಗಳೂರು: ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಹೋದಾಗ ಒಂದು ಡಾಕ್ಯುಮೆಂಟ್‌ ಕೇಳುತ್ತಾರೆ, ವಾಹನ ಚಾಲನಾ ಪರವಾನಿಗೆ ಪಡೆಯಲು ಹೋದರೆ ಅವರು ಬೇರೊಂದು ದಾಖಲೆ ಬೇಕು ಎನ್ನುತ್ತಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ದಾಖಲೆ ಕೇಳಿದರೆ ಸಹಜವಾಗಿಯೇ ಕಿರಿಕಿರಿ ಆಗುತ್ತದೆ. ಮೇಲಾಗಿ ಎಲ್ಲಿಗೆ ಯಾವ ದಾಖಲೆ ಕೊಂಡೊಯ್ಯಬೇಕು ಎಂಬ ಗೊಂದಲ ಕಾಡುತ್ತದೆ. ಆದರೆ, ಅಕ್ಟೋಬರ್‌ 1ರಿಂದ ಜನರಿಗೆ ಈ ಗೊಂದಲ ಇರುವುದಿಲ್ಲ. ಬಹುತೇಕ ದಾಖಲೆ ಪಡೆಯಲು ಇನ್ನು ಮುಂದೆ ‘ಜನನ ಪ್ರಮಾಣಪತ್ರ’ ಒಂದೇ ಸಾಕಾಗುತ್ತದೆ. ಜನನ ಹಾಗೂ ಮರಣ ನೋಂದಣಿ ಕಾಯ್ದೆ (2023)ಯು ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ. ಕಾಯ್ದೆ ಜಾರಿಯಾದಾಗಿನಿಂದ ದೇಶದಲ್ಲಿ ಹಲವು ದಾಖಲೆ ಪಡೆಯಲು ಒಂದೇ ದಾಖಲೆ ನೀಡಬಹುದಾಗಿದೆ. ಜನನ ಪ್ರಮಾಣಪತ್ರ ಒಂದನ್ನು ನೀಡುವ ಮೂಲಕ ಬೇರೆ ದಾಖಲೆಗಳನ್ನು ಪಡೆಯಬಹುದಾಗಿದೆ.

ಇದರಿಂದ ದೇಶದ ಕೋಟ್ಯಂತರ ಜನ ಒಂದೇ ಪ್ರಮಾಣಪತ್ರ ನೀಡಿ, ಬೇರೆ ಬೇರೆ ದಾಖಲೆ ಪಡೆಯಲು ಅನುಕೂಲವಾಗಲಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ವಾಹನ ಚಾಲನಾ ಪರವಾನಗಿ, ಮತಪಟ್ಟಿಯಲ್ಲಿ ಹೆಸರು ಸೇರಿಸುವುದು, ಆಧಾರ್‌, ವಿವಾಹ ನೋಂದಣ, ಸರ್ಕಾರಿ ಉದ್ಯೋಗ ಸೇರಿ ಯಾವುದೇ ದಾಖಲೆ ಪಡೆಯಲು ಜನನ ಪ್ರಮಾಣಪತ್ರವನ್ನು ಏಕ ದಾಖಲೆಯಾಗಿ ಬಳಸಬಹುದಾಗಿದೆ. ಡಿಜಿಟಲ್‌ ನೋಂದಣಿಗೆ ಆದ್ಯತೆ, ಸಾರ್ವಜನಿಕ ಸೇವೆಗಳು ಜನರಿಗೆ ಸರಿಯಾಗಿ ತಲುಪಲಿ ಹಾಗೂ ಸಾಮಾಜಿಕ ಪಾರದರ್ಶಕತೆ ಕಾಪಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಜನನ ಹಾಗೂ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಹಾಗಾಗಿ, ಅಕ್ಟೋಬರ್‌ 1ರಿಂದ ಹೊಸ ನಿಯಮ ಅನ್ವಯವಾಗಲಿದೆ.

ಕಳೆದ ತಿಂಗಳು ಮುಕ್ತಾಯವಾದ ಸಂಸತ್‌ ಮುಂಗಾರು ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿಯ ವಿಧೇಯಕಕ್ಕೆ ಸಂಸತ್ತಿನ ಉಭಯ ಸದನಗಳು ಅಂಗೀಕಾರ ನೀಡಿವೆ. 1969ರಲ್ಲಿ ಜಾರಿಗೆ ಬಂದ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ನಿತ್ಯಾನಂದ ರೈ ಅವರು ವಿಧೇಯಕವನ್ನು ಮಂಡಿಸಿದ್ದರು. ಲೋಕಸಭೆಯಲ್ಲಿ ಆಗಸ್ಟ್‌ 1 ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್‌ 7ರಂದು ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿತ್ತು.

2000 ನೋಟುಗಳ ವಿನಿಮಯದ ಅವಧಿ ವಿಸ್ತರಿಣೆ

2000 ರೂ. ನೋಟು ಬದಲಾವಣೆಗೆ ಸೆ 30 ಕೊನೆಯಾಗಿದ್ದ ಗಡುವನ್ನು ಅಕ್ಟೋಬರ್ 7ರ ವರೆಗೆ ಕಾಲಾವಕಾಶ ನೀಡುವ ನಿರ್ಧಾರ ಕೈಗೊಂಡಿದೆ. 2 ಸಾವಿರದ ನೋಟುಗಳ ಬದಲಿಸಿಕೊಳ್ಳುವ ಅವಧಿಯನ್ನು ಆರ್‌ಬಿಐ ವಿಸ್ತರಿಸಿದೆ. ಬಾಕಿ ಉಳಿದಿರುವ ಮತ್ತು ಜನರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಹಿಂಪಡೆಯಲಾಗಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ, ಠೇವಣಿ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇನ್ನಷ್ಟು ಕಾಲ ವಿಸ್ತರಿಸಿದೆ.
ಇನ್ನೂ ಯಾರ ಬಳಿಯಾದರೂ 2000 ರೂಪಾಯಿ ನೋಟುಗಳಿದ್ದರೆ, ಅಂಥವರು ಸಾಧ್ಯವಾದಷ್ಟು ಬೇಗ ಅವುಗಳನ್ನು ಹತ್ತಿರದ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬೇಕು ಅಥವಾ ಬದಲಾಯಿಸಬೇಕು. ಅಕ್ಟೋಬರ್ 8 ರ ನಂತರ ಈ ನೋಟುಗಳು ಅಮಾನ್ಯವಾಗಲಿವೆ. ಗಡುವು ತೀರಿದ ಬಳಿಕ ಬ್ಯಾಂಕ್‌ಗಳು ಎರಡು ಸಾವಿರದ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲು ಅಥವಾ ಬದಲಾಯಿಸಿಕೊಳ್ಳಲು ಅವಕಾಶ ನೀಡುವುದಿಲ್ಲ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.