Categories
ಬೆಂಗಳೂರು ರಾಜಕೀಯ ರಾಜ್ಯ ಹಾಸನ

34 ದಿನಗಳ ಬಳಿಕ ಪ್ರಜ್ವಲ್ ಅರೆಸ್ಟ್!

34 ದಿನಗಳ ಬಳಿಕ ಪ್ರಜ್ವಲ್ ಅರೆಸ್ಟ್!
– ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಎಸ್ ಐ ಟಿ ವಶಕ್ಕೆ
– ಜರ್ಮನಿಯಿಂದ ಬಂದು ವಿಮಾನದಿಂದ ಇಳಿಯುತ್ತಿದ್ದಂತೆ ವಶಕ್ಕೆ ಪಡೆದ ಅಧಿಕಾರಿಗಳು

NAMMUR EXPRESS NEWS
ಬೆಂಗಳೂರು: ಲೈಂಗಿಕ ಹಗರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಜರ್ಮನಿಯಿಂದ ಬಂದ ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜರ್ಮನಿಯ ಮ್ಯೂನಿಕ್ ನಗರದಿಂದ ಆಗಮಿಸಿದ್ದ ಪ್ರಜ್ವಲ್ ಬಂದಿದ್ದ ಲುಫ್ತಾನ್ಸಾ ವಿಮಾನ ಲ್ಯಾಂಡ್ ನಡುರಾತ್ರಿ ಆಗುತ್ತಿದ್ದಂತೆ ಸಿಐಎಸ್ ಎಫ್ ಅಧಿಕಾರಿಗಳು ವಶಕ್ಕೆ ಪಡೆದು ಇಮಿಗ್ರೇಷನ್ ಗೆ ಕರೆತಂದಿದ್ದು ಪರಿಶೀಲನೆ ಮತ್ತು ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿದ್ದ ಕಾರಣ ಲೋಕಸಭಾ ಸ್ಪೀಕರ್ ಗೆ ಮಾಹಿತಿ ನೀಡಿದ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಕಚೇರಿಗೆ ಕರೆದೊಯ್ದಿದ್ದಾರೆ.

ಆಗಮನಕ್ಕಾಗಿ ಕಾಯುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಿದ್ದರು. ಎಸ್ ಐಟಿ ಕಚೇರಿಯಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಹೆಚ್ಚುವರಿ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಇತ್ತೀಚೆಗೆ ವೀಡಿಯೋ ಬಿಡುಗಡೆ ಮಾಡಿದ್ದ ಪ್ರಜ್ವಲ್, ಮೇ 31ರಂದು ಬೆಂಗಳೂರಿಗೆ ಬರುತ್ತೇನೆ. ಬಳಿಕ ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದರು.

ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು.!

ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದೆನ್ನಲಾದ 2,900ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪೆನ್‌ಡೈವ್ ಮೂಲಕ ವೈರಲ್ ಆಗಿದ್ದು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈಗ ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಇದರ ಬೆನ್ನಲ್ಲಿಯೇ 34 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲಿಯೇ ಐವರು ಮಹಿಳಾ ಪೊಲೀಸ್ ಅಧಿಕಾರಿಗಳು ಹೆಡೆಮುರಿಕಟ್ಟಿ ಎಸ್‌ಐಟಿ ಕಚೇರಿಗೆ ಕರೆದು ತಂದಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಮಾಡಿದ ದಿನವೇ ವಿದೇಶಕ್ಕೆ (ಜರ್ಮನಿಗೆ) ತೆರಳಿದ್ದರು. ಒಂದು ವಾರ ಪ್ರವಾಸಕ್ಕೆಂದು ಪೂರ್ವ ನಿಯೋಜನೆಯಂತೆ ರಾಜತಾಂತ್ರಿಕ ಪಾಸ್‌ಪೋರ್ಟ್ ಆಧಾರದಲ್ಲಿ ಜರ್ಮನಿಗೆ ತೆರಳಿದ್ದ ಪ್ರಜ್ವಲ್, ಅವರ ಮೇಲೆ ಅಶ್ಲೀಲ ವಿಡಿಯೋ ಪ್ರಕರಣದಡಿ ಅತ್ಯಾಚಾರ ಆರೋಪ ಬರುತ್ತಿದ್ದಂತೆಯೇ ಅಲ್ಲಿಯೇ ತಲೆಮರೆಸಿಕೊಂಡಿದ್ದರು.

ಏ.26ರಿಂದ ಮೇ 30ರವರೆಗೆ ಜರ್ಮನಿಯಲ್ಲಿದ್ದು ಅಲ್ಲಿನ ಕಾಲಮಾನದ ಪ್ರಕಾರ ಮೇ 30ರ ಮಧ್ಯಾಹ್ನ 12.30ಕ್ಕೆ ಮ್ಯೂನಿಚ್‌ ನಗರದಿಂದ ಮೇ 30 ಮಧ್ಯರಾತ್ರಿ 12.49ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆಗಾಗಲೇ ಪ್ರಜ್ವಲ್‌ನನ್ನು ಬಂಧಿಸಲು ಸಿದ್ಧರಾಗಿದ್ದ ಎಸ್‌ಐಟಿ ಪೊಲೀಸರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಸಿಐಎಸ್‌ಎಫ್‌ ಪೊಲೀಸರೊಂದಿಗೆ ಚರ್ಚೆ ನಡೆಸಿ ಲುಕ್‌ಔಟ್ ನೋಟೀಸ್ ಹಾಗೂ ಬ್ಲೂ ಕಾರ್ನರ್ ನೋಟೀಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವಶಕ್ಕೆ ಪೆಡೆದಿದ್ದಾರೆ. ನಂತರ ಐವರು ಮಹಿಳಾ ಪೊಲೀಸರ ನೇತೃತ್ವದಲ್ಲಿ ಪ್ರಜ್ವಲ್‌ನನ್ನು ಬಂಧಿಸಲಾಗಿದೆ. ವಿಮಾನ ನಿಲ್ದಾಣದಿಂದ ಐವರು ಮಹಿಳಾ ಪೊಲೀಸ್ ಸಿಬ್ಬಂದಿಯೇ ಬಂಧಿಸಿ ಜೀಪ್‌ನಲ್ಲಿ ಕೂರಿಸಿಕೊಂಡು ಎಸ್‌ಐಟಿ ವಿಚಾರಣಾ ಸ್ಥಳಕ್ಕೆ ಕರೆದು ತಂದಿದ್ದಾರೆ. ಬೆಳಗ್ಗೆ ವಿಚಾರಣಾ ಪ್ರಕ್ರಿಯೆಗಳು ಆರಂಭವಾಗಲಿವೆ.

ಇಂದಿನಿಂದ ಶುರುವಾಗುತ್ತೆ ಎಸ್ ಐಟಿ ಅಸಲಿ ತನಿಖೆ.!

ಅತ್ಯಾಚಾರ ಆರೋಪದಲ್ಲಿ ಬಂಧನವಾಗಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ವಿಮಾನ ನಿಲ್ದಾಣದಿಂದ ಯಾವ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯದೇ ನೇರವಾಗಿ ಎಸ್‌ಐಟಿ ಕಚೇರಿಗೆ ಕರೆತರಲಾಗಿದೆ. ಎಸ್‌ಐಟಿ ಹಲವು ನೋಟೀಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಸಾಕಷ್ಟು ಹಿನ್ನೆಡೆ ಉಂಟಾಗಿತ್ತು. ಇಡೀ ಪ್ರಕರಣದ ಮುಖ್ಯ ಆರೋಪಿ ಆಗಿರೋ ಪ್ರಜ್ವಲ್ ರೇವಣ್ಣನನ್ನು ಇಂದು ಬೆಳಗ್ಗೆಯಿಂದ ತೀವ್ರವಾಗಿ ವಿಚಾರಣೆಗೆ ಒಳಪಡಿಸಲಿದ್ದಾರೆ.

ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಎಲ್ಲ ಸ್ಥಳಗಳಲ್ಲಿನ ಪ್ರಜ್ವಲ್‌ ರೇವಣ್ಣನಿಗೆ ಸಂಬಂಧಿಸಿದಂತಹ ಎಲ್ಲ ವಸ್ತುಗಳನ್ನು ಹಾಗೂ ಪ್ರಜ್ವಲ್ ವಿದೇಶದಿಂದ ಬರುವಾಗ ತಂದಿದ್ದ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರು ಬಳಸ್ತಿದ್ದ ಮೊಬೈಲ್ ಅನ್ನೂ ಎಸ್‌ಐಟಿ ವಶಕ್ಕೆ ಪಡೆದಿದೆ. ನಾಳೆ ಪ್ರಾಥಮಿಕ ಹಂತದ ವಿಚಾರಣೆ ನಡೆಸಲಿದ್ದು, ನಂತರ ಮೆಡಿಕಲ್ ಟೆಸ್ಟ್ ಮಾಡಿಸುವಂತಹ ಸಾಧ್ಯತೆಯಿದೆ. ಈಗಾಗಲೇ ಪ್ರಜ್ವಲ್ ರೇವಣ್ಣರನ್ನ ವಿಚಾರಣೆ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡಸಿದ್ದಾರೆ. ಎಸ್‌ಪಿಪಿ ಜಗದೀಶ್ ಹಾಗೂ ತನಿಖಾ ತಂಡವು ಎರಡು ಆಯಾಮಗಳಲ್ಲಿ ಪ್ರಶ್ನೆಗಳನ್ನ ತಯಾರು ಮಾಡಿಕೊಂಡಿದೆ. ಇನ್ನು ತನಿಖಾ ಹಂತದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆಯೂ ಪ್ರಶ್ನೆ ಮಾಡಲಿದ್ದಾರೆ.

ಅತ್ಯಾಚಾರ ಆರೋಪದ ದೂರು ದಾಖಲಾದರೂ ತಲೆ ಮರೆಸಿಕೊಳ್ಳಲು ಯಾರಾದರೂ ನಿಮಗೆ ಸಹಾಯ ಮಾಡಿದ್ದರಾ ಎಂಬ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ. ಒಂದು ವೇಳೆ ಯಾರಾದರೂ ಸಹಾಯ ಮಾಡಿದ್ದರೆ ಅವರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಬಳಸ್ತಿದ್ದ ಮೊಬೈಲ್ ನಾಶ ಮಾಡಿರೋ ಸಾಧ್ಯತೆಯಿದೆ. ಪ್ರಕರಣ ದಾಖಲಾಗ್ತಿದ್ದಂತೆಯೇ ಸಾಕಷ್ಟು ಬೆಳವಣಿಗೆ ಆಗಿತ್ತು. ವಿದೇಶದಲ್ಲಿ ಮೊಬೈಲ್ ಬಿಸಾಕಿ ಸಾಕ್ಷ್ಯ ನಾಶ ಮಾಡಿರುವ ಸಾಧ್ಯತೆಯೂ ಇದ್ದಂತಿದೆ. ಈ ಎಲ್ಲದರ ಬಗ್ಗೆಯೂ ಎಸ್‌ಐಟಿ ಇಂಟ್ರಾಗೇಷನ್ ಮಾಡಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.