ಬಸ್ಗಳಲ್ಲಿ ಪಟಾಕಿ ಸಾಗಿಸಿದರೆ ಶಿಕ್ಷೆ!
– ಪ್ರಯಾಣಿಕರು ಪಟಾಕಿ ಕೊಂಡೊಯ್ಯುವಂತಿಲ್ಲ
– ಸಾರಿಗೆ ಇಲಾಖೆ ನಿಯಮಗಳೇನು..ಪಟಾಕಿ ಏಕೆ ಕೊಂಡೊಯ್ಯುವಂತಿಲ್ಲ?
NAMMUR EXPRESS NEWS
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪಟಾಕಿ ಸಾಗಾಟ ನಿಷೇಧಿಸಿರುವ ಸಾರಿಗೆ ಇಲಾಖೆ, ಆದೇಶ ಮೀರಿ ಸಾಗಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಬಸ್, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪಟಾಕಿ ಸಾಗಾಟವನ್ನು ನಿಷೇಧಿಸಿದೆ. ಪ್ರಯಾಣಿಕರು ತಮ್ಮೊಂದಿಗೆ ಪಟಾಕಿ ತೆಗೆದುಕೊಂಡು ಹೋಗುತ್ತಿಲ್ಲ ಎಂಬುದನ್ನು ಪರಿಶೀಲಿಸುವಂತೆ ಖಾಸಗಿ ಬಸ್ ಮಾಲೀಕರಿಗೆ ಸೂಚನೆಯನ್ನೂ, ನೀಡಲಾಗಿದೆ.
ಬಸ್ ಮಾಲೀಕರ ವಿರುದ್ಧವೂ ಕ್ರಮ
ಒಂದು ವೇಳೆ ಪಟಾಕಿ ತೆಗೆದುಕೊಂಡು ಹೋಗುತ್ತಿರುವುದು ಪತ್ತೆ ಯಾದರೆ ಅಂತಹ ಪ್ರಯಾಣಿಕರು ಹಾಗೂ ಬಸ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ವಾಹನಗಳನ್ನು ಹೊರತುಪಡಿಸಿ ಗೂಡ್ಸ್ ವಾಹನಗಳಲ್ಲಿ ಪಟಾಕಿ ಸಾಗಣೆಗೆ ಅವಕಾಶ ನೀಡಲಾಗಿದ್ದರೂ, ಅದಕ್ಕೆ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಒಂದು ವೇಳೆ ಅನುಮತಿ ಪಡೆಯದೇ ಪಟಾಕಿ ತೆಗೆದುಕೊಂಡು ಹೋದರೆ ವಾಹನಗಳ ಪರ್ಮಿಟ್ ರದ್ದು ಮಾಡಿ, ವಶಕ್ಕೆ ಪಡೆಯಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಪಟಾಕಿ ಸಾಗಾಟದಲ್ಲಿನ ಲೋಪಗಳನ್ನು ಪತ್ತೆ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರದಿಂದ ತಪಾಸಣಾ ಕಾರ್ಯ ನಡೆಸುತ್ತಿದ್ದಾರೆ.
