ಕರವೇ ಕಾಯಕರ್ತರ ಬಂಧನಕ್ಕೆ ರಾಜ್ಯಾದ್ಯಂತ ಹೋರಾಟ
– ಇಂಗ್ಲಿಷ್ ನಾಮಫಲಕ ವಿರುದ್ಧ ಹೋರಾಟ ಜೋರು
– ಮಾಲ್‌ಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯ
NAMMUR EXPRESS NEWS
ಬೆಂಗಳೂರು: ಮಾಲ್‌ಗಳು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಬುಧವಾರ ಬೃಹತ್ ಜಾಥಾ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ಗುರುವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ಕರವೇ ಹೋರಾಟಗಾರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಕೂಡ ಅನೇಕ ಕಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಇಂಗ್ಲಿಷ್ ನಾಮಫಲಕ ವಿರುದ್ಧ ಸಮರ ಸಾರಿರುವ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್‌ನಲ್ಲಿ ಬುಧವಾರ ಬೃಹತ್ ಪ್ರತಿಭಟನೆ ಜಾಥಾ ನಡೆಸಿದ್ದರು. ಜಾಥಾ ಮುಂದುವರಿದಂತೆ ತೀವ್ರ ಸ್ವರೂಪ ಪಡೆದುಕೊಂಡು ಪ್ರತಿಭಟನಾಕಾರರು ಆಂಗ್ಲ ನಾಮಫಲಕ ಧ್ವಂಸಗೊಳಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರವೇ ಮುಖಂಡರನ್ನು ಬಂಧಿಸಿ ಕರೆದೊಯ್ದು, ಪೊಲೀಸ್ ವಾಹನ ಚಾಲನಾ ಮತ್ತು ಸಂರಕ್ಷಣಾ ಶಾಲಾ ಒಳಭಾಗದಲ್ಲಿ ಇರಿಸಿದ್ದರು.
ನಾರಾಯಣಗೌಡ ಸೇರಿ 53 ಹೋರಾಟಗಾರರ ವಿರುದ್ಧ ಕಬ್ಬನ್‌ಪಾರ್ಕ್ ಸೇರಿ ವಿವಿಧ ಠಾಣೆಗಳಲ್ಲಿ 10 ಎಫ್‌ಐಆರ್ ದಾಖಲಾಗಿತ್ತು. ಇವರೆಲ್ಲರನ್ನೂ ಬಂಧಿಸಿದ್ದ ಪೊಲೀಸರು, ಬುಧವಾರ ತಡರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿತರನ್ನು ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ. ಇದರಿಂದ ಸಿಟ್ಟಿಗೆದ್ದ ಕರವೇ ಕಾರ್ಯಕರ್ತರು ನಾರಾಯಣಗೌಡ ಸೇರಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಸನ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ನಿಗದಿತ ಗಡುವಿನೊಳಗೆ ವಾಣಿಜ್ಯ ಮಳಿಗೆಗಳು, ಮಾಲ್‌ಗಳ ಹಾಗೂ ಅಂಗಡಿ ಮುಂಗಟ್ಟುಗಳು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕು. ಹೋರಾಟಗಾರರನ್ನು ಜೈಲಿಂದ ಬಿಡುಗಡೆಗೊಳಿಸಿ ಪ್ರಕರಣ ವಾಪಸ್ ಪಡೆಯಬೇಕೆಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಬಿಡುಗಡೆಗೆ ಬಿಜೆಪಿ ಆಗ್ರಹ: ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದು ಹೋರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮತ್ವ ಆಗಬೇಕು. ಕನ್ನಡ ನೆಲದಲ್ಲಿ ಕನ್ನಡವೇ ಉಸಿರಾಗಬೇಕು. ಬಂಧಿಸಿದವರನ್ನು ಬಿಡುಗಡೆ ಮಾಡ ಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಪಾಲಿಕೆ ಸದಸ್ಯರ ಕನ್ನಡ ಕಡೆಗಣನೆಗೆ ಆಕ್ರೋಶ: ಇಲ್ಲಿನ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಸದಸ್ಯರು ಕನ್ನಡ ಕಡೆಗಣಿಸಿರುವುದನ್ನು ಖಂಡಿಸಿ ಗುರುವಾರ ಪಾಲಿಕೆ ಆವರಣದಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮೇಯರ್ ಸೇರಿ ಬಹುತೇಕ ಸದಸ್ಯರು ಕನ್ನಡ ಕಡೆಗಣಿಸಿ ಹಿಂದಿ, ಮರಾಠಿ ಭಾಷೆಯಲ್ಲೇ ರ್ಚಚಿಸಿದ್ದಾರೆ. ಆಡಳಿತ ಭಾಷೆ ಕನ್ನಡವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
