Categories
ಕ್ರಿಕೆಟ್ ಬೆಂಗಳೂರು ರಾಜ್ಯ

ಅಂತೂ ಆರ್.ಸಿ ಬಿಯ ಹೊಸ ಅಧ್ಯಾಯ

ಅಂತೂ ಆರ್.ಸಿ ಬಿಯ ಹೊಸ ಅಧ್ಯಾಯ
– ಹಾಲಿ ಚಾಂಪಿಯನ್​ ಚೆನ್ನೈ ಸೋಲಿಸಿ ಪ್ಲೇ ಆಫ್​ಗೆ
– ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ

NAMMUR EXPREES NEWS
ಬೆಂಗಳೂರು: ಸತತ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟಿದೆ.
ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳುತ್ತಿತ್ತು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಫಾಫ್​ ಡುಪ್ಲೆಸ್​ ಮೊದಲ ವಿಕೆಟ್​ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈಗೆ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಮೊದಲ ಎಸೆತದಲ್ಲೇ ಆಘಾತವಿಕ್ಕಿದರು. ನಾಯಕ ಋತುರಾಜ್​ ಗಾಯಕ್ವಾಡ್​​ ಅವರನ್ನು ಶೂನ್ಯಕ್ಕೆ ಔಟ್​ ಮಾಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಚೆನ್ನೈ ಡೇಂಜಸರ್​ ಬ್ಯಾಟರ್​ ಡೇರಿಯಲ್​ ಮಿಚೆಲ್(4)​ ಅವರ ವಿಕೆಟ್​ ಕೂಡ ಕಳೆದುಕೊಂಡಿತು. ಆರ್​ಸಿಬಿ ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಸಾಗಲಿಲ್ಲ. ಮೂರನೇ ವಿಕೆಟ್​ಗೆ ರಹಾನೆ ಮತ್ತು ರಚಿನ್ ರವೀಂದ್ರ​ ಸೇರಿಕೊಂಡು ಉತ್ತಮ ಜತೆಯಾಟವೊಂದನ್ನು ಸಂಘಟಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ನಿಂದ ತಂಡಕ್ಕೆ 10 ಸರಾಸರಿಯಲ್ಲಿ ರನ್​ ಹರಿದುಬಂತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಫರ್ಗುಸನ್​ ಕೊನೆಗೂ ಬೇರ್ಪಡಿಸಿದರು.

33 ರನ್​ ಗಳಿಸಿದ ವೇಳೆ ರಹಾನೆ ವಿಕೆಟ್​ ಕಳೆದುಕೊಂಡರು. ರಹಾನೆ ಮತ್ತು ರಚಿನ್​ ಸೇರಿಕೊಂಡು ಮೂರನೇ ವಿಕೆಟ್​ಗೆ 66 ರನ್​ ಒಟ್ಟುಗೂಡಿಸಿದರು. ಕರ್ನಾಟಕ ಮೂಲದವರೇ ಆದ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ ಅರ್ಧಶತಕ ಬಾರಿಸುವ ಮೂಲಕ ಕನ್ನಡಿಗರಿಗೇ ಕಂಟಕವಾಗುವ ಸೂಚನೆ ನೀಡಿದರು. ಆದರೆ ಇವರ ಬ್ಯಾಟಿಂಗ್​ ಅಬ್ಬರಕ್ಕೆ ಸ್ವಪ್ನಿಲ್ ಸಿಂಗ್​ ಬ್ರೇಕ್​ ಹಾಕಿದರು. ಮ್ಯಾಕ್ಸ್​ವೆಲ್​ ಓವರ್​ನಲ್ಲಿ ಜೀವದಾನ ಪಡೆದರೂ ಕೂಡ ಇದೇ ಓವರ್​ನಲ್ಲಿ ಇಲ್ಲದ ರನ್​ ಕದಿಯಲು ಹೋಗಿ ರನೌಟ್​ ಬಲೆಗೆ ಬಿದ್ದರು. ರಚಿನ್​ 37 ಎಸೆತಗಳಿಂದ 61 ರನ್(5 ಬೌಂಡರಿ, 3 ಸಿಕ್ಸರ್​) ಬಾರಿಸಿದರು. ಈ ವಿಕೆಟ್​ ಪತನದ ಬಳಿಕ ಶಿವಂ ದುಬೆ(7) ವಿಕೆಟ್​ ಕೂಡ ಬಿತ್ತು.

ಮತ್ತೆ ಮಿನುಗಿದ ರವೀಂದ್ರ ಜಡೇಜಾ ಮತ್ತು ಧೋನಿ

ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು 201 ರನ್​ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರೂ ಕೂಡ ಇದು ಸಾಧ್ಯವಾಗಲಿಲ್ಲ. ಧೋನಿ ಕ್ರೀಸ್​ನಲ್ಲಿ ಇರುತ್ತಿದ್ದರೆ ಚೆನ್ನೈಗೆ ಗೆಲುವು ಖಚಿತವಾಗಿರುತ್ತಿತ್ತು. 6 ಎಸೆತಗಳಲ್ಲಿ 17 ರನ್​ ಬೇಕಿದ್ದಾಗ ಧೋನಿ ಯಶ್​ ದಯಾಳ್​ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್​ ಕಲೆಹಾಕಿದರು. ಈ ಸಿಕ್ಸರ್​ 110 ಮೀಟರ್​ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್​ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್​ ಚಚ್ಚಿದರು.

18ರಂದು ಆಡಿದ್ದ ಎಲ್ಲಾ ಪಂದ್ಯ ಗೆದ್ದ ಆರ್​ಸಿಬಿ

ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್​ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ. ಮೇ 18ರಂದು ಆರ್​ಸಿಬಿ ವಿರುದ್ಧ ಚೆನ್ನೈ 3ನೇ ಸೋಲಿಗೆ ತುತ್ತಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.