Categories
ಬೆಂಗಳೂರು

ಸುಡುತ್ತಿದೆ ಬಿಸಿಲಿನ ತಾಪ..!

ಸುಡುತ್ತಿದೆ ಬಿಸಿಲಿನ ತಾಪ..!
– ಮೇನಲ್ಲಿ ಮನೆಯಿಂದ ಹೊರ ಬರೋದು ಇನ್ನೂ ಕಷ್ಟ!
– ಮಡಕೆ, ಮಣ್ಣಿನ ಬಾಟಲ್, ತಂಪು ಪಾನೀಯಕ್ಕೆ ಡಿಮ್ಯಾಂಡ್
– ಶಾಲಾ ಮಕ್ಕಳಿಗೆ ಬೇಸಿಗೆ ರಜೆ ವಿಸ್ತರಣೆ ಸಾಧ್ಯತೆ
– ತಿಂಗಳಾಂತ್ಯಕ್ಕೆ ಎಲ್ಲಾ ಕಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ಪ್ರಕರತೆ ಹೆಚ್ಚಾಗಿದೆ. ಇದರಿಂದ ಜನ ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಬೇರೆ ರಾಜ್ಯಗಳಲ್ಲಿ ಕೃಪೆ ತೋರಿದ ವರುಣ ದೇವ ಮಾತ್ರ ರಾಜ್ಯದ ಮೇಲೆ, ಬೆಂಗಳೂರಿಗರ ಮೇಲೆ ಕರುಣೆ ತೋರಿಸುತ್ತಿಲ್ಲ. ಇದರ ಜೊತೆಗೆ ಹಲವು ವಿಜ್ಞಾನಿಗಳು ಸಿಲಿಕಾನ್ ಸಿಟಿಯಲ್ಲಿ ಉಷ್ಣಾಂಶ ಜಾಸ್ತಿಯಾಗುವ ಮುನ್ಸೂಚನೆಯನ್ನೇ ನೀಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿನ ನೀರಿನ ಅಭಾವದಿಂದಾಗಿ ಉಷ್ಣಾಂಶ ಹೆಚ್ಚಾಗಿದ್ದು, ಮಾರ್ಚ್ ತಿಂಗಳಲ್ಲಿ 34 ಡಿಗ್ರಿ ಸೆಲಿಯನ್ಸ್ ಉಷ್ಣಾಂಶ ಇದ್ದರೆ ಇದು ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ರಾಜ್ಯದ ಹವಾಮಾನದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ರಜೆ ವಿಸ್ತರಣೆ: ಪರೀಕ್ಷೆ ವಿಳಂಬ, ಚುನಾವಣೆ, ಬಿಸಿಲು ಎಫೆಕ್ಟ್!

ರಾಜ್ಯದಲ್ಲಿ ಸದ್ಯ 5, 8 ಮತ್ತು 9 ನೇ ತರಗತಿಯ ಪರೀಕ್ಷೆ ವಿಳಂಬ, ಚುನಾವಣೆ, ಬಿಸಿಲು ಹಾಗೂ ಫಲಿತಾಂಶ ಘೋಷಣೆಯು ಸೇರಿದಂತೆ ಹಲವು ಕಾರಣಕ್ಕೆ ಈ ಭಾರಿ ಬೇಸಿಗೆ ರಜೆ ವಿಸ್ತರಣೆ ಆಗಲಿದ್ದು, ಶಾಲಾರಂಭ ವಿಳಂಬವಾಗೋ ಸಾಧ್ಯತೆ ಇದೆ. ಬಿರು ಬೇಸಿಗೆ ಕಾಲಿಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೀರಿನ ಕೊರತೆಯೂ ಕಾಡುತ್ತಿದೆ‌. ಇದರ ಮಧ್ಯೆ ಪರೀಕ್ಷಾ ಜ್ವರವೂ ಜೋರಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ದಿನ ಗಣನೆ ನಡೆದಿದೆ. ಈ ಮಧ್ಯೆ ಐದು, ಎಂಟು ಹಾಗೂ ಒಂಬತ್ತನೇ ತರಗತಿಯ ಪರೀಕ್ಷೆ ವಿಚಾರ ಈ ಕೋರ್ಟ್ ಅಂಗಳ ತಲುಪಿದೆ.

ಸದ್ಯ ಹೈಕೋರ್ಟ್ ಪರೀಕ್ಷೆಗೆ ಅನುಮತಿ ನೀಡಿದೆ. ಸರ್ಕಾರವೂ ಬೋರ್ಡ್ ಎಕ್ಸಾಂ ಗೆ ದಿನಾಂಕ ನಿಗದಿಗೊಳಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತೊಂದರೆಯಾಗದಂತೆ ಒಂಬತ್ತು ಹಾಗೂ ಇತರ ತರಗತಿಗಳ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಇದೆಲ್ಲದರ ಪರಿಣಾಮ ಈ ಭಾರಿ ಬೇಸಿಗೆ ರಜೆಯ ಮೇಲಾಗಲಿದ್ದು, ಕಲಿಕೆಯ ಕಾರಣಕ್ಕೆ ಬೇಸಿಗೆ ರಜೆಯನ್ನು ಮೊಟಕುಗೊಳ್ಳುತ್ತಿತ್ತು. ಆದರೆ ಈ ಭಾರಿ ಬೇಸಿಗೆ ರಜೆ ಮುಂದುವರೆಯಲಿದ್ದು ಜೂನ್ 10 ವೇಳೆಗೆ ಶಾಲೆ ಆರಂಭವಾಗಬಹುದೆಂದು ನೀರಿಕ್ಷಿಸಲಾಗುತ್ತಿದೆ. ಪ್ರತಿಭಾರಿಯೂ ಮೇ 24 ರ ವೇಳೆಗೆ ಶಾಲಾರಂಭ ಮಾಡಲಾಗುತ್ತಿತ್ತು.

ತಿಂಗಳಾಂತ್ಯಕ್ಕೆ ಎಲ್ಲಾ ಕಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಚಿಕ್ಕಮಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿ ಹಲವಡೆ ಸಾಧಾರಣ ಮಳೆಯಾಗಿದೆ. ಭಾನುವಾರ ರಾಜ್ಯದ ಕೆಲವು ಕಡೆ ಮಳೆಯಾಗಿದ್ದು, ಬಾಳೆಹೊನ್ನೂರಿನಲ್ಲಿ 2 ಸೆ.ಮೀ., ಬೆಳಗಾವಿಯ ಲೋಂಡಾದಲ್ಲಿ 1ಸೆ.ಮೀ. ಮಳೆಯಾಗಿದ್ದು, ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಒಣ ಹವೆ ಮುಂದುವರೆಯಲಿದೆ. ತಿಂಗಳಾಂತ್ಯಕ್ಕೆ ಮಾರ್ಚ್ 30 ಮತ್ತು 31 ರಂದು ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೇಸಿಗೆ: ಮಡಿಕೆ ಅಂಗಡಿಯಲ್ಲಿ ಗರಿಗೆದರಿದ ವ್ಯಾಪಾರ

ಬಿಸಿಲ ತಾಪ ದಿನೇ ದಿನೆ ಏರಿಕೆಯಾಗುತ್ತಿದೆ. ತಂಪು ನೀರಿಗಾಗಿ ಮಡಕೆ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸಹಜವಾಗಿಯೇ ಮಡಕೆ ವ್ಯಾಪಾರ ಗರಿಗೆದರಿದೆ. ಆಕರ್ಷಕ ಮಡಕೆಗಳು ಜನರ ಗಮನ ಸೆಳೆಯುತ್ತಿರುವುದು ವ್ಯಾಪಾರಿಗಳ ಮುಖದಲ್ಲಿ ಖುಷಿ ಮೂಡಿಸಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಡೆಯುವ ಸಂತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಡಕೆ ವ್ಯಾಪಾರಿಗಳು ಈಗ ಸಂತಸಗೊಂಡಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಜನರು ನೈಸರ್ಗಿಕ ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಲಾರಂಭಿಸಿದ್ದಾರೆ. ಮಡಕೆ ವ್ಯಾಪಾರ ಚೇತರಿಕೆ ಕಾಣಲು ಇದೂ ಒಂದು ಕಾರಣ. ಬಹುತೇಕರ ಮನೆಯಲ್ಲಿ, ಕಚೇರಿಗಳಲ್ಲಿ ಮಡಕೆ ಠಿಕಾಣಿ ಹೂಡಿದೆ.

ಇತ್ತೀಚೆಗೆ ಮಣ್ಣಿನ ಬಾಟಲ್ ಬಳಕೆ ಯುವಜನರಲ್ಲಿ ಟ್ರೆಂಡ್ ಆಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಆಕರ್ಷಕವಾದ ಮಣ್ಣಿನ ಬಾಟಲ್‌ಗಳು ಲಭ್ಯವಿವೆ. ಬೆಲೆ ಸ್ವಲ್ಪ ದುಬಾರಿ ಎನಿಸಿದರೂ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಿದೆ.
ತಂಪು ಪಾನೀಯಗಳಿಗೂ ಡಿಮ್ಯಾಂಡ್ ಹೆಚ್ಚಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.