Categories
ಚುನಾವಣಾ ಸುದ್ದಿ ರಾಜಕೀಯ ರಾಷ್ಟ್ರೀಯ ವಾರ್ತೆ

ಮೋದಿ ಪದಗ್ರಹಣಕ್ಕೆ ದೇಶದ ಕಾತುರ!

ಮೋದಿ ಪದಗ್ರಹಣಕ್ಕೆ ದೇಶದ ಕಾತುರ!

– ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ: ಭಾರೀ ಪೊಲೀಸ್‌ ಬಂದೋಬಸ್ತ್

NAMMUR EXPRESS NEWS
ನವದೆಹಲಿ: ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಲುವಾಗಿ ಭಾರೀ ಭದ್ರತೆ ಕಲ್ಪಿಸಲು ಸಿದ್ಧತೆ ನಡೆದಿದೆ.

ರಾಷ್ಟ್ರಪತಿ ಭವನದ ಸುತ್ತ ಅರೆಸೇನಾ ಪಡೆ ಸಿಬ್ಬಂದಿ, ಎನ್‌ಎಸ್‌ಜಿ ಕಮಾಂಡೋಗಳು, ಡ್ರೋನ್ ಗಳು ಮತ್ತು ಸೈಪರ್‌ಗಳ ಬಹು ಹಂತದ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ) ರಾಷ್ಟ್ರಗಳ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

ಪ್ರಮಾಣ ವಚನದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಅವರ ಹೋಟೆಲ್‌ಗಳಿಂದ ರಾಷ್ಟ್ರಪತಿ ಭವನಕ್ಕೆ ತೆರಳಲು ಮತ್ತು ಹಿಂತಿರುಗಲು ನಿಗದಿತ ಮಾರ್ಗವನ್ನು ಸೂಚಿಸಲಾಗುತ್ತದೆ.

ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೆಶೆಲ್ಸ್‌ನ ಉನ್ನತ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ನಗರದ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‌ಗಳಲ್ಲಿ ಈಗಾಗಲೇ ಭದ್ರತೆ ಕೈಗೊಳ್ಳಲಾಗಿದೆ. ರಾಷ್ಟ್ರಪತಿ ಭವನದ ಆವರಣದ ಒಳಗೆ ಮತ್ತು ಹೊರಗೆ ಮೂರು ಹಂತದ ಭದ್ರತೆಯನ್ನು ಹೊಂದಿರುತ್ತದೆ. ದೆಹಲಿ ಪೊಲೀಸ್‌ ಸಿಬ್ಬಂದಿಯನ್ನು ಹೊರ ಆವರಣದಲ್ಲಿ ನಿಯೋಜಿಸಲಾಗುವುದು ಮತ್ತು ಅರೆಸೇನಾ ಸಿಬ್ಬಂದಿಯನ್ನು ಭವನದ ಆಂತರಿಕ ಭದ್ರತೆಗೆ ನಿಯೋಜಿಸಲಾಗಿದೆ. ದೆಹಲಿ ಸಶಸ್ತ್ರ ಪೊಲೀಸ್‌ (ಡಿಎಪಿ) ಜವಾನರು ಸೇರಿದಂತೆ ಸುಮಾರು 2500 ಪೊಲೀಸ್‌ ಸಿಬ್ಬಂದಿಯನ್ನು ಸ್ಥಳದ ಸುತ್ತಲೂ ನಿಯೋಜಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.