Categories
ರಾಜ್ಯ ಹವಾಮಾನ ಸುದ್ದಿ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ

ಹಾವೇರಿ: ಧಗಧಗಿಸಿದ ಬೆಂಕಿ ಸುಟ್ಟು ಭಸ್ಮವಾಯ್ತು 5 ಅಂಗಡಿ
– ಬೆಳಗಾವಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
– ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ
– ಗದಗ : ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ
– ಧಾರವಾಡ: ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ

NAMMUR EXPRESS NEWS
ಹಾವೇರಿ: ಹಾವೇರಿ ಜಿಲ್ಲೆಯ ಚಿಕ್ಕೇರೂರು ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು, ಐದಕ್ಕೂ ಅಧಿಕ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 30 ಲಕ್ಷ ರೂ.ಗಿಂತ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.‍ ಸದ್ಯ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ದಟ್ಟ ಹೊಗೆ ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಎಲೆಕ್ಟ್ರಿಕಲ್ ಅಂಗಡಿ, ಬೇಕರಿ, ಗೊಂಬಿ ಅಂಗಡಿ, ಫುಟವೇರ್ ಅಂಗಡಿ, ಹೊಟೇಲ್ ಭಸ್ಮ.ವಾಗಿದೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‌ಹಂಸಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

– ಬೆಳಗಾವಿ: ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಳಗಾವಿ: ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಖನಗಾಂವ ಗ್ರಾಮದ ಕೆ.ಎಚ್.ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೆಸ್‌ಆರ್‌ಟಿಸಿ ಬಸ್‌ ಮತ್ತು ಬೈಕ್‌ ಡಿಕ್ಕಿಯಾಗಿ ಈ ಅವಘಡ ನಡೆದಿದೆ. ಮೃತರನ್ನು ಸುಳೇಬಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ (29) ಎಂದು ಗುರುತಿಸಲಾಗಿದೆ. ಬೆಳಗಾವಿ ಕಡೆಗೆ ಬರುತ್ತಿದ್ದ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ವಿಠ್ಠಲ ದತ್ತಾ ಲೋಕರೆ 30 ಅಡಿ ದೂರದ ಹೊಲಕ್ಕೆ ಹಾರಿ ಬಿದ್ದಿದ್ದರು. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕೂಡ ಪಲ್ಟಿ ಹೊಡೆದಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

– ಮೈಸೂರಿನ ಗುಜರಿ ಗೋಡೌನ್​ನಲ್ಲಿ ಅನಿಲ ಸೋರಿಕೆ, 30 ಮಂದಿ ಅಸ್ವಸ್ಥ

ಮೈಸೂರು: ಗುಜರಿಯ ಗೋಡೌನ್‌ನಲ್ಲಿ ವಿಷಕಾರಿ ಅನಿಲ ಸೋರಿಕೆ‌ಯಾಗಿ 30 ಮಂದಿ ಅಸ್ವಸ್ಥಗೊಂಡ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಹಳೆ ಕೆಸರೆಯ ಗುಜರಿ ಅಂಗಡಿಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಆರಂಭದಲ್ಲಿ ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದ ಐವರು ಅಸ್ವಸ್ಥಗೊಂಡರೆ ಬಳಿಕ ಸುತ್ತಲಿನ ಗ್ರಾಮಸ್ಥರೂ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ಸೇರಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ವಿಷಾನಿಲ ಸೋರಿಕೆಯಾಗಿತ್ತು. ಮೊದಲು ಗುಜರಿ ಗೋಡೌನ್​ನಲ್ಲಿ ಕೆಲಸ ಮಾಡುತ್ತಿದ್ದವರು ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಗ್ರಾಮಸ್ಥರಿಗೆ ಕೆಮ್ಮು, ವಾಂತಿ ಶುರುವಾಗಿದೆ. ಅಸ್ವಸ್ಥಗೊಂಡಿರುವ 30 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿ ಗೋಡೌನ್​ನಲ್ಲಿ ಘಟನೆ ಸಂಭವಿಸಿದೆ. ಅನಿಲ ಗೋಡೌನ್​ನಿಂದ ಹೊರಕ್ಕೆ ಬಂದು ಕೆಸರೆ ಗ್ರಾಮದಲ್ಲಿ ಹರಡಿದಿಎ. ಕೆಸರೆ ಗ್ರಾಮಸ್ಥರಲ್ಲೂ ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡು ಪರದಾಡಿದ್ದಾರೆ. ಎನ್.ಆರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ. ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

– ಗದಗ : ವಾಟ್ಸ್ಆ್ಯಪ್‌ ಗ್ರೂಪ್‌ ಮೆಸೇಜ್‌ ಓಪನ್‌ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ

ಗದಗ: ವಾಟ್ಸ್ಆ್ಯಪ್‌ ಗ್ರೂಪ್‌ಗೆ ಬಂದಿದ್ದ ಮೆಸೇಜ್‌ವೊಂದನ್ನು ತೆರೆದು ನೋಡಿದ ವ್ಯಾಪಾರಿಯೊಬ್ಬರು ತಮ್ಮ ಖಾತೆಯಲ್ಲಿದ್ದ ಮೂರೂವರೆ ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸೈಬರ್‌ ವಂಚಕರು ಹಣ ಲಪಟಾಯಿಸಿದ್ದಾರೆ. ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅನಿಲ್‌ ಮಲ್ಲಪ್ಪ ಚಿನ್ನಾಪುರ ಎಂಬುವವರೇ ಸೈಬರ್‌ ವಂಚನೆಗೆ ಒಳಗಾದ ವ್ಯಕ್ತಿ. ನಗರದ ಜಿ.ಎಸ್. ಪಾಟೀಲ್‌ ಲೇಔಟ್‌ನಲ್ಲಿ ವಾಸವಾಗಿರುವ ಇವರು, ಮೊದಲು ಜಿ.ಎಸ್. ಪಾಟೀಲ್‌ ಲೇಔಟ್‌ ವಾಟ್ಸ್ಆ್ಯಪ್‌ ಗ್ರೂಪ್‌ನಲ್ಲಿ ಯುನಿಯನ್ ಬ್ಯಾಂಕ್‌ನ ಎಪಿಕೆ ಹೆಸರಿನಲ್ಲಿ ಬಂದಿದ್ದ ಲಿಂಕ್ ಮೆಸೇಜ್ ಅನ್ನು ತೆರದು ನೋಡಿದ್ದಾರೆ. ಇದಾದ ಬಳಿಕ ಮರುದಿನ ಫೋನ್‌ ಕರೆಯೊಂದು ಬಂದಿದೆ. ಯೂನಿಯನ್ ಬ್ಯಾಂಕ್ ಮುಖ್ಯಸ್ಥ ಎಂದು ಕರೆ ಮಾಡಿದ ವ್ಯಕ್ತಿಯು, ನಿಮ್ಮ ಬ್ಯಾಂಕ್ ಖಾತೆ ಡಿಆಕ್ಟಿವೇಟ್‌ ಆಗಿದೆ ಎಂದು ಕೆಲವು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದಾದ ಅರ್ಧಗಂಟೆಯಲ್ಲೇ ಅನಿಲ್‌ ಅವರ ಯೂನಿಯನ್‌ ಬ್ಯಾಂಕ್‌ ಖಾತೆಯಿಂದ ಮೊದಲ ಹಂತದಲ್ಲಿ 50 ಸಾವಿರ ರೂ, 2ನೇ ಹಂತದಲ್ಲಿ 2,25,000 ರೂ. ಹೀಗೆ ಒಟ್ಟು 3,74,998 ರೂಗಳನ್ನು ಸೈಬರ್‌ ವಂಚಕರು ಎಗರಿಸಿದ್ದಾರೆ. ಸೈಬರ್‌ ವಂಚನೆಗೆ ಒಳಗಾದ ಅನಿಲ್ ನಗರದ ರಾಜೀವ್‌ ಗಾಂಧಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಖಾತೆಯಿಂದ ಎಗರಿಸಿದ ಹಣ‌ವು ತಮಿಳುನಾಡು ಹಾಗೂ ಬಾಂಗ್ಲಾದೇಶದ ಬ್ಯಾಂಕ್‌ ಖಾತೆಗಳಿಗೆ‌ ಜಮೆ ಆಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ.

– ಧಾರವಾಡ: ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ

ಧಾರವಾಡ: ಹಿರಿಯ ಜೀವಿಯೊಬ್ಬರು ಮಳೆ ಬರುವಾಗಲೇ ತಪಸ್ಸಿಗೆ ಕುಳಿತ ಘಟನೆ ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ನಡೆದಿದೆ. ಜೋರಾಗಿ ಬರುತ್ತಿದ್ದ ಮಳೆಯಲ್ಲಿ ನಡು ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ಕುಳಿತ ವೃದ್ಧ, ಒಂಚೂರು ಅಲುಗಾಡದೆ ತಪಸ್ಸು ಮಾಡಿದ್ದಾರೆ. ಇನ್ನೂ ಈ ದೃಶ್ಯವನ್ನು ಓರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ಕರ್ನಾಟಕದಲ್ಲಿ ಮುಂಗಾರು ಮಳೆ..!

ಕರ್ನಾಟಕದಲ್ಲಿ ಮುಂಗಾರು ಮಳೆ..!

– ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ
– ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ

NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ವ್ಯಾಪಿಸತೊಡಗಿದ್ದು,ಶುಕ್ರವಾರ ಸಂಜೆ ಇಂದು ಬೆಳಗ್ಗೆ ತನಕ ಸುರಿದ ಮಳೆಗೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿವಿಧ ರೀತಿಯ ಅನಾಹುತ, ಅವಾಂತರಗಳಾಗಿವೆ. ವಿಜಯಪುರದ ಡೋಣಿ ನದಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿ ಸೇತುವೆ ಮೇಲೆ ಹರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತು. ಸವದತ್ತಿ ದೇವಸ್ಥಾನ ಮತ್ತು ಗೋಕರ್ಣದ ಮಹಾಬಲೇಶ್ವರ ದೇಗುಲದೊಳಗೆ ನೀರು ನುಗ್ಗಿದೆ. ಶಿವಮೊಗ್ಗ ಜಿಲ್ಲೆ ಆಗುಂಬೆ ಸಮೀಪ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಯೂ ನಡೆದಿದೆ. ಇನ್ನೊಂದೆಡೆ, ದಾರವಾಡದ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಧಾರಾಕಾರ ಮಳೆಗೆ ಜಪಕ್ಕೆ ಕುಳಿತ ವಿಡಿಯೋ ವೈರಲ್ ಆಗಿತ್ತು. ಕಲಬುರಗಿ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಜಾನುವಾರುಗಳು ಮೃತಪಟ್ಟಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು. ಇದೇ ರೀತಿ, ಉತ್ತರಕನ್ನಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಬೆಂಗಳೂರು, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ.

ಗೋಕರ್ಣ, ಸವದತ್ತಿ ದೇವಾಲಯಗಳಿಗೆ ನುಗ್ಗಿದ ಮಳೆ ನೀರು:

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಗೋಕರ್ಣದಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಸಂಗಮ ನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭ ಗುಡಿಗೆ ನುಗ್ಗಿತ್ತು. ಇದರಿಂದಾಗಿ ನಿನ್ನೆ ರಾತ್ರಿ ಭಕ್ತರಿಗೆ ಕೊಂಚ ತೊಂದರೆಯಾಗಿತ್ತು. ಗೋಕರ್ಣ ಮಂದಿರದ ಸಿಬ್ಬಂದಿ ಸತತ ಎರಡು ಗಂಟೆ ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು (ಮರಳ ದಿನ್ನೆ) ಕಡಿದು ನೀರು ಸರಾಗವಾಗಿ ಹೋಗುವಂತೆ ಮಾಡಿದ ಬಳಿಕ ದೇವಸ್ಥಾನದಲ್ಲಿ ನೀರಿನ ಪ್ರಮಾಣ ಇಳಿಕೆಯಾಯಿತು. ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿ ದೇವಸ್ಥಾನಕ್ಕೂ ಮಳೆ ನೀರು ನುಗ್ಗಿದೆ. ಇದರಿಂದಾಗಿ ಭಕ್ತರು ಪರದಾಡಬೇಕಾಯಿತು.

Categories
ರಾಜ್ಯ ಹವಾಮಾನ ಸುದ್ದಿ

ರಾಜ್ಯದಲ್ಲಿ ಮುಂಗಾರು ಜೂನ್ 6ಕ್ಕೆ ಎಂಟ್ರಿ!

ರಾಜ್ಯದಲ್ಲಿ ಮುಂಗಾರು ಜೂನ್ 6ಕ್ಕೆ ಎಂಟ್ರಿ!
– ಈ ಬಾರಿ ವಾಡಿಕೆಯ ಶೇ.50ಕ್ಕಿಂತ ಹೆಚ್ಚು ಮಳೆ
– ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ!

NAMMUR EXPRESS NEWS
ಬೆಂಗಳೂರು: ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಪ್ರವೇಶವಾಗಿದ್ದು, ಈಗಾಗಲೇ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುತ್ತಿರುವುದ ರಿಂದ ಜೂ.6 ಅಥವಾ 7ರಂದು ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳ ಗಳಲ್ಲಿ ಏಳು ದಿನಗಳ ಕಾಲ ಗುಡುಗು ಸಹಿತ ಪೂರ್ವ ಮುಂಗಾರು ಮಳೆಯಾಗಲಿದ್ದು, ಹಾಸನ, ಕೊಡಗು, ಮೈಸೂರು, ಉಡುಪಿ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗಲಿದೆ. ಮೇಲೆ ಮಾರುತಗಳ ಪರಿಣಾಮ ದಿಂದಾಗಿ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಉಳಿದಂತೆ ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರದಲ್ಲಿ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಮುಂದಿನ 72 ಗಂಟೆಗಳ ಕಾಲ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆಯಿಲ್ಲ. ನಂತರ ರಾಜ್ಯದಾದ್ಯಂತ 2 ರಿಂದ 3 ಡಿಗ್ರಿ ಕ್ರಮೇಣ ಕುಸಿಯಲಿದೆ ಎಂದು ಹೇಳಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮೋಡ ಕವಿದ ಆಕಾಶ ಇರಲಿದ್ದು, ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೇರಳದ ಮೇಲೆ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿದೆ. ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಮಾಲೀನ್ಸ್ ಮತ್ತು ಕೊಮೊರಿನ್ ಪ್ರದೇಶದ ಉಳಿದ ಭಾಗಗಳಿಗೆ ಮಾರುತಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಲಕ್ಷದ್ವೀಪ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾದ ಸಮಯದಲ್ಲಿ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ಬಾರಿ ವಾಡಿಕೆಯ ಶೇ.50ಕ್ಕಿಂತ ಹೆಚ್ಚು ಮಳೆ

ಈ ಬಾರಿ ವಾಡಿಕೆಗಿಂತ ಹೆಚ್ಚು ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಆಗಿದೆ. ಮಾರ್ಚ್ 1ರಿಂದ ಮೇ ಅಂತ್ಯದವರಿಗೆ ಹಲವು ಕಡೆ ವಾಡಿಕೆಯ ಶೇ.50ಕ್ಕಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅತಿ ಹೆಚ್ಚು ಮಂಗಳೂರಿನ ಪಣಂಬೂ ರಿನಲ್ಲಿ 366 ಎಂ. ಎಂ. ಚಿಕ್ಕಮಗಳೂರಿನಲ್ಲಿ 363 ಎಂ.ಎಂ ದಾಖಲೆ ಮಳೆ ಸುರಿದಿದೆ. ತದ ನಂತರದ ಸ್ಥಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಪ್ರದೇಶ 28 2 ಎಂ. ಎಂ ಮತ್ತು ಆಗುಂಬೆ 279 ಎಮ್ ಎಮ್ ದಾಖಲಿಸಿವೆ. ಕಾರವಾರ ಮತ್ತು ಕೊಪ್ಪಳದಲ್ಲಿ ಅತಿ ಕಡಿಮೆ ಮಳೆ ಸುರಿದಿದೆ.

ಬೆಂಗಳೂರಲ್ಲೂ ಉತ್ತಮ ಮಳೆ!

ಬೆಂಗಳೂರು ಜಿಲ್ಲೆಯ ವ್ಯಾಪ್ತಿಯಲ್ಲೂ ಪೂರ್ವ ಮುಂಗಾರು ಉತ್ತಮವಾಗಿದೆ. ಬೆಂಗಳೂರು ನಗರದಲ್ಲಿ ಪೂರ್ವ ಮುಂಗಾರು ಮಳೆ 181 ಎಂ ಎಂ ದಾಖಲಾಗಿದೆ. ಎಚ್.ಎ.ಎಲ್ ವಿಮಾನ ನಿಲ್ದಾಣದ ಸುತ್ತ ಮುತ್ತ 157 ಎಂ.ಎಂ ಮತ್ತು ಜಿಕೆವಿಕೆ ಸುತ್ತಲೂ 191 ಎಂ.ಎಂ ಮಳೆ ಸುರಿದಿದೆ.

Categories
ರಾಜ್ಯ ಶಿವಮೊಗ್ಗ ಹವಾಮಾನ ಸುದ್ದಿ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು?

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು?
– ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ
– ಕರಾವಳಿ, ಮಲೆನಾಡಲ್ಲಿ ಅಲರ್ಟ್ ಘೋಷಣೆ!

NAMMUR EXPRESS NEWS
ಬೆಂಗಳೂರು: ಕರ್ನಾಟಕಕ್ಕೆ ಜೂನ್‌ ಮೊದಲನೇ ವಾರದಲ್ಲಿ ಮುಂಗಾರು ಪ್ರವೇಶವಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಜೂನ್‌ ಮೊದಲ ವಾರದಲ್ಲಿ ಅಂದರೆ ಅಂದಾಜು ಜೂ.5ರಂದು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಜೂನ್‌ 7-8ರಂದು ಮುಂಗಾರು ರಾಜ್ಯಕ್ಕೆ ಪ್ರವೇಶವಾಗುತ್ತದೆ. ಈ ಬಾರಿ ಒಂದೆರಡು ದಿನ ಮೊದಲೇ ರಾಜ್ಯದಲ್ಲಿ ಮುಂಗಾರು ಮಳೆ ಸುರಿಯುವ ಬಹುತೇಕ ಸಾಧ್ಯತೆಗಳು ಕಂಡು ಬಂದಿದೆ. ಕಳೆದ ವರ್ಷ ರಾಜ್ಯದಲ್ಲಿ ಬರ ಉಂಟಾಗಿದ್ದ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ಮುಂಗಾರು ಪ್ರವೇಶ ವಾಗಿ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ವಾಡಿಕೆಯಷ್ಟು ಮಳೆ ಸುರಿಯುವ ಸಾಧ್ಯತೆಗಳಿವೆ. ಸುಮಾರು ಮೇ 22ರಂದು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞರು ತಿಳಿಸಿದ್ದಾರೆ.

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮೇ 23ರ ವರೆಗೆ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೇ 23ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಉತ್ತರ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇಂದು ಎಲ್ಲೆಲ್ಲಿ ಮಳೆ?

ಮೇ 20ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ (40-50 ಕಿ.ಮೀ) ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಿವಮೊಗ್ಗದಲ್ಲಿ ನಾಲ್ಕು ದಿನ ಭಾರಿ ಮಳೆ ಅಲರ್ಟ್!

ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

Categories
ಬೆಂಗಳೂರು ರಾಜ್ಯ ಹವಾಮಾನ ಸುದ್ದಿ

ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ..!

ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ..!
– ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್
– ಯಾವೆಲ್ಲ ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್​?

NAMMUR EXPRESS NEWS
ಬೆಂಗಳೂರು: ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಭಾರಿ ಮಳೆಯಾದರೆ ಇನ್ನು ಕೆಲವಡೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೂರು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆಯಾಗುವ ಪ್ರದೇಶಗಳ ಗರಿಷ್ಠ ತಾಪಮಾನದಲ್ಲಿ 3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಬಹುದು ಎಂದೂ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ 2023 ರ ಡಿಸೆಂಬರ್​ನಿಂದ ಈ ಏಪ್ರಿಲ್ ವರೆಗೆ ಮಳೆಯಾಗಿರಲಿಲ್ಲ. ಆದರೆ, ಮುಂದಿನ ಐದು ದಿನಗಳಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ವಿಜ್ಞಾನಿ ಮತ್ತು ನಿರ್ದೇಶಕ ಸಿಎಸ್ ಪಾಟೀಲ್ ಹೇಳಿದ್ದಾರೆ. ಮುಂದಿನ ಐದು ದಿನಗಳಲ್ಲಿ ರಾಜ್ಯಾದ್ಯಂತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಯಾವೆಲ್ಲ ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್​?

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿಯ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಮೇ 21 ರವರೆಗೆ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಗುಡುಗು, ಮಿಂಚು ಸಹಿತ 7 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಮತ್ತು ಕರಾವಳಿ ಕರ್ನಾಟಕದ ಶೇ 75 ಕ್ಕಿಂತ ಹೆಚ್ಚು ಮತ್ತು ಉತ್ತರ ಒಳನಾಡಿನಲ್ಲಿ ಶೇ 25-50 ರಷ್ಟು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಬರುವ ದಿನಗಳಲ್ಲಿ ಗರಿಷ್ಠ ನಿರೀಕ್ಷಿತ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. ಬೀದರ್, ಕಲಬುರಗಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇರಲಾರದು ಎಂದೂ ಇಲಾಖೆ ಹೇಳಿದೆ.

Categories
ಹವಾಮಾನ ಸುದ್ದಿ

ಈ ವರ್ಷ ಅತೀ ಹೆಚ್ಚು ಮಳೆ!

ಈ ವರ್ಷ ಅತೀ ಹೆಚ್ಚು ಮಳೆ!
– ಹವಾಮಾನ ಇಲಾಖೆ ಗುಡ್ ನ್ಯೂಸ್
– ಮೇ.31ರ ವೇಳೆಗೆ ಮುಂಗಾರು ಪ್ರವೇಶ

NAMMUR EXPRESS NEWS
ನವದೆಹಲಿ: ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ.31ರ ವೇಳೆಗೆ ದೇಶದ ದಕ್ಷಿಣದ ತುತ್ತತುದಿಯ ರಾಜ್ಯವಾದ ಕೇರಳದ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ‘ಈ ವರ್ಷ ನೈಋತ್ಯ ಮುಂಗಾರು ಮೇ 31ರ ವೇಳೆಗೆ ಕೇರಳ ಪ್ರವೇಶಿಸುವ ಸಂಭವವಿದೆ. ಈ ದಿನಾಂಕದಲ್ಲಿ 4 ದಿನ ಹಿಂದು-ಮುಂದು ಆಗಬಹುದು. ಈ ಬಾರಿ ಮುಂಗಾರು ಮುಂಚಿತವಾಗೇನು ಪ್ರವೇಶ ಮಾಡುತ್ತಿಲ್ಲ. ಸಾಮಾನ್ಯವಾಗಿ ಜೂ.1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ವಾಡಿಕೆ ಹೊಂದಿದ್ದು, ಅದೇ ಸಮಯವೇ ಈ ವರ್ಷವೂ ಪಾಲನೆಯಾಗಬಹುದು’ ಎಂದು ಹೇಳಿದೆ. ಜೂನ್‌- ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಲ್ಲಿ ಮಳೆ ಸುರಿಸುವ ಮುಂಗಾರು ಮಾರುತಗಳ ಈ ಬಾರಿ ದೀರ್ಘಕಾಲೀನ ಸರಾಸರಿಗಿಂತ ಹೆಚ್ಚಿ ಮಳೆ ಸುರಿಸಬಹುದು ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ಶುಭ ಸುದ್ದಿ ನೀಡಿತ್ತು.

ನೈಋತ್ಯ ಮಾನ್ಸೂನ್ ಭಾರತಕ್ಕೆ ಪ್ರಮುಖ ಮಳೆಯನ್ನು ತರುವ ಕಾಲ. ಇದು ದೇಶದ ವಾರ್ಷಿಕ ಮಳೆಯ ಬಹುಪಾಲನ್ನು ಒದಗಿಸುತ್ತದೆ. ಈ ಅವಧಿಯಲ್ಲಿ ಖಾರೀಫ್ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜೂನ್ ಮತ್ತು ಜುಲೈ ತಿಂಗಳ ಅವಧಿಯ ನೈಋತ್ಯ ಮಾನ್ಸೂನ್ ಅತಿ ಮಹತ್ವದ್ದು ಅಂತಲೇ ಪರಿಗಣಿಸಲಾಗುತ್ತದೆ. ನೈಋತ್ಯದಿಂದ ಬೀಸುವ ಮಾನ್ಸೂನ್ ಸಾಮಾನ್ಯವಾಗಿ ಜೂನ್‌ನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ.

– ಕಳೆದ ವರ್ಷ ಎಷ್ಟು ಮಳೆ ಬಂದಿತ್ತು?

2023ರಲ್ಲಿ ಜೂ.8ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶ ಮಾಡಿದ್ದವು. ಅಂದರೆ ಸಾಮಾನ್ಯ ಪ್ರವೇಶದ ದಿನಕ್ಕಿಂತ 7 ದಿನ ವಿಳಂಬವಾಗಿ ಆಗಮನವಾಗಿತ್ತು. ಕಳೆದ ವರ್ಷ ದೇಶದಲ್ಲಿ ದೀರ್ಘಕಾಲೀನ ಸರಾಸರಿಯ ಶೇ.93ರಷ್ಟು ಮಳೆ ಸುರಿದಿತ್ತು. ಈ ವರ್ಷ ಅತೀ ಹೆಚ್ಚು ಮಳೆಯಾಗುವ ಸೂಚನೆ ನೀಡಿದೆ.

Categories
ರಾಜ್ಯ ಹವಾಮಾನ ಸುದ್ದಿ

ರಾಜ್ಯಕ್ಕೆ ಎಂಟ್ರಿಯಾದ ವರುಣ!

ರಾಜ್ಯಕ್ಕೆ ಎಂಟ್ರಿಯಾದ ವರುಣ!
– ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
– ಬೆಂಗಳೂರಲ್ಲಿ ಒಂದು ವಾರದಿಂದ ಮಳೆ
– ಒಂದು ವಾರದಿಂದ ಭಾರೀ ಗಾಳಿ, ಮಳೆ: ವಿಮಾನ ಹಾರಾಟಕ್ಕೂ ಸಮಸ್ಯೆ

NAMMUR EXPRESS NEWS
ಬೆಂಗಳೂರು: ಕಾದ ಕಾವಲಿಯಂತಾಗಿದ್ದ ಕರುನಾಡಿಗೆ ವರುಣದೇವನ ಆಗಮನವಾಗಿದೆ. ಕಳೆದೊಂದು ವಾರದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಬೆಂಗಳೂರು, ಮಲೆನಾಡು, ಕರಾವಳಿ ಸೇರಿ ರಾಜ್ಯದ ಹಲವೆಡೆ ಮಳೆ ಸೂಚನೆ ಕಂಡು ಬಂದಿದೆ. ಮಲೆನಾಡಿನ ಹಲವೆಡೆ ಮಳೆಯಾಗಿದ್ದು, ಮಲೆನಾಡಿನ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ 9 ದಿನಗಳ ಕಾಲ ಮಳೆ ಬರುವ ಮುನ್ಸೂಚನೆ ಕೂಡ ಇದೆ. ಮೇ 12ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ.

ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆ ಆಗಿದೆ. ಕೆಲವೇ ದಿನದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಬೀಳಲಿದೆ. ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮ ನಗರ, ಶಿವಮೊಗ್ಗ, ವಿಜಯನಗರ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸ್ವಲ್ಪ ಮಳೆ ಬರಲಿದೆ. ಮೇ 11ರಂದು ಈ ಜಿಲ್ಲೆಗಳಲ್ಲದೇ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾ ಗಲಿದೆ. ಮುಂದಿನ ಒಂದು ವಾರ ಪ್ರತಿದಿನ ಸಂಜೆಯ ಹೊತ್ತಿಗೆ ಮಳೆ ಬರುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಮಾನ ಹಾರಾಟಕ್ಕೆ ಅಡಚಣೆಯಾದ ಮಳೆ!

ರಾಜಧಾನಿ ಬೆಂಗಳೂರಲ್ಲಿ ಗುರುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ಗಮನಾರ್ಹ ಅಡಚಣೆ ಉಂಟಾಗಿತ್ತು. ಭಾರಿ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ರಾತ್ರಿ 9.35 ರಿಂದ ರಾತ್ರಿ 10.29 ರವರೆಗೆ ವಿಮಾನ ನಿಲ್ದಾಣವು ಇಳಿಯಲು ಸೂಕ್ತವಲ್ಲ, ಅಂತರರಾಷ್ಟ್ರೀಯ ಪ್ರಯಾಣಿಕರ ಮತ್ತು ಸರಕು ವಿಮಾನಗಳು ಸೇರಿದಂತೆ ಹಲವಾರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಒಟ್ಟು ಹದಿಮೂರು ದೇಶೀಯ ವಿಮಾನಗಳು, ಮೂರು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಮತ್ತು ಒಂದು ಅಂತರರಾಷ್ಟ್ರೀಯ ಸರಕು ವಿಮಾನವನ್ನು ಚೆನ್ನೈಗೆ ಮರುನಿರ್ದೇಶಿಸಲಾಗಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ವಕ್ತಾರರು ತಿಳಿಸಿದ್ದಾರೆ.

ಚೆನ್ನೈಗೆ ತಿರುಗಿಸಿದ ದೇಶೀಯ ವಿಮಾನಗಳಲ್ಲಿ ಇಂಡಿಗೊದಿಂದ ನಾಲ್ಕು, ಏರ್ ಇಂಡಿಯಾ ಎಕ್ಸ್ಪ್ರೆಸ್ನಿಂದ ನಾಲ್ಕು, ವಿಸ್ತಾರಾದಿಂದ ಒಂದು, ಅಕಾಸಾ ಏರ್ನಿಂದ ಒಂದು, ಏರ್ ಇಂಡಿಯಾದಿಂದ ಒಂದು ಮತ್ತು ಸ್ಟಾರ್ ಏರ್ ನಿಂದ ಒಂದು ವಿಮಾನವಿತ್ತು. ಇದಲ್ಲದೆ, ಸಿಂಗಾಪುರದಿಂದ ಒಂದು ಸಿಂಗಾಪುರ್ ಏರ್ಲೈನ್ಸ್ ವಿಮಾನ, ಅಬುಧಾಬಿಯಿಂದ ಒಂದು ಎತಿಹಾದ್ ವಿಮಾನ ಮತ್ತು ಆಮ್ಸ್ಟರ್ಡ್ಯಾಮ್ನಿಂದ ಒಂದು ಕೆಎಲ್‌ಎಂ ವಿಮಾನವನ್ನು ಮೂರು ಅಂತರರಾಷ್ಟ್ರೀಯ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಮೇ 6 ರಂದು ಸುರಿದ ಭಾರಿ ಮಳೆಯಿಂದಾಗಿ ಚೆನ್ನೈಗೆ ಏಳು ಮತ್ತು ಕೊಯಮತ್ತೂರಿಗೆ ಒಂದು ಸೇರಿದಂತೆ ಎಂಟು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.

Categories
ರಾಜ್ಯ ಹವಾಮಾನ ಸುದ್ದಿ

ರಾಜ್ಯದ ಹಲವೆಡೆ ಮಳೆ ಆಗುತ್ತೆ!

ರಾಜ್ಯದ ಹಲವೆಡೆ ಮಳೆ ಆಗುತ್ತೆ!
– ದಕ್ಷಿಣ ಒಳನಾಡಿನಲ್ಲಿ ತುಸು ಬಿರುಸು
– ಹಲವು ಜಿಲ್ಲೆಗಳಲ್ಲಿ ಏರಿದ ತಾಪಮಾನ

NAMMUR EXPRESS NEWS
ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ 4 ದಿನ ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು,ವಿಜಯನಗರದಲ್ಲಿ ಮೇ 7ರಿಂದ ಮೇ 10ರವರೆಗೆ ಜೋರಾಗಿ ಮಳೆಯಾಗಲಿದೆ.

ದಕ್ಷಿಣ ಕನ್ನಡ, ಉಡುಪಿಯಲ್ಲಿ ಮೇ 7ರಿಂದ ಮುಂದಿನ ಐದು ದಿನ, ಉತ್ತರ ಕನ್ನಡದಲ್ಲಿ ಮೇ 10ರಿಂದ ಮುಂದಿನ ಮೂರು ದಿನ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರಿನಲ್ಲಿ ಮೇ 8ರಿಂದ ಮೇ 10ರವರೆಗೆ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.

ಬಿಸಿಲಿನ ತಾಪ ಏರಿಕೆ!

ಭಾನುವಾರ ಕಲಬುರಗಿಯಲ್ಲಿ 44.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ರಾಯಚೂರು 44.3, ಯಾದಗಿರಿ 44, ಕೊಪ್ಪಳ 43.3, ಬಳ್ಳಾರಿ 43.3, ತುಮಕೂರು 43.1, ವಿಜಯಪುರ 42.5, ಬಾಗಲಕೋಟೆ 42.5, ಬೀದರ್​ 42, ಧಾರವಾಡ 40 ಹಾಗೂ ಬೆಳಗಾವಿ 40 ಡಿ.ಸೆ. ಉಷ್ಣಾಂಶ ವರದಿಯಾಗಿದ್ದು, ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 4 ದಿನ ಬಿಸಿ ಗಾಳಿ ಬೀಸಲಿದೆ. ಸತತ 4 ದಿನ ಬಳಿಕ ಬೆಂಗಳೂರಿನಲ್ಲಿ 37 ಡಿ.ಸೆ.ಗೆ ಇಳಿದಿದೆ. ಮೇ 1ರಿಂದ ಮೇ 4ರವರೆಗೆ ನಗರದಲ್ಲಿ ಉಷ್ಣಾಂಶ 40ರ ಗಡಿ ದಾಟಿತ್ತು. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಿಸಿ ವಾತಾವರಣ ಇರಲಿದೆ.

Categories
ರಾಜ್ಯ ಹವಾಮಾನ ಸುದ್ದಿ

ಇಂದು ಭಾರೀ ಮಳೆ ಸಾಧ್ಯತೆ..!

ಇಂದು ಭಾರೀ ಮಳೆ ಸಾಧ್ಯತೆ..!
– 5 ದಿನ ಬಿಸಿಲು ಕೂಡ ಹೆಚ್ಚಳ
– ಗರಿಷ್ಠ ತಾಪಮಾನ: ಜನರ ಪರದಾಟ!

NAMMUR EXPRESS NEWS
ಬೆಂಗಳೂರು: ರಾಜ್ಯದ ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ದಿನೇ ದಿನೇ ಬಿಸಿಲು ಹೆಚ್ಚುತಿದೆ. ರಾಜ್ಯಾದ್ಯಂತ ಮೇ 5ರವರೆಗೆ ಒಣ ಹವೆ ಇರುವ ಸಾಧ್ಯತೆ ಇದೆ. ಮೇ 6ರಂದು ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಮೇ 7ರಂದು ಕೂಡ ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮೇ 1 ರಿಂದ ಮೇ 4ರವರೆಗೆ ಬೀದ‌ರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ (ಬಯಲು ಪ್ರದೇಶ), ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು (ಬಯಲು ಪ್ರದೇಶ) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮೇ 4 ರವರೆಗೆ ಬಿಸಿ ಮತ್ತು ಆದ್ರ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಮುಂದಿನ 5 ದಿನಗಳವರೆಗೆ ಬಾಗಲಕೋಟೆ, ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇನ್ನು ಮುಂದಿನ 5 ದಿನಗಳವರೆಗೆ ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

Categories
ರಾಜ್ಯ ಹವಾಮಾನ ಸುದ್ದಿ

ಏಪ್ರಿಲಿನಲ್ಲಿ 100 ವರ್ಷಗಳ ದಾಖಲೆ ಬಿಸಿಲು!

ಏಪ್ರಿಲಿನಲ್ಲಿ 100 ವರ್ಷಗಳ ದಾಖಲೆ ಬಿಸಿಲು!
– ಮೇನಲ್ಲೂ ಮುಂದುವರೆಯಲಿದೆ ಬಿಸಿಲಿನ ತಾಪ
– ಕೃಷಿ, ಕೆಲಸಕ್ಕೂ ಬಿಸಿಲು ತೊಂದರೆ: ಮುಂದೆ ಕಷ್ಟ ಕಷ್ಟ!

NAMMUR EXPRESS NEWS
ಅಯ್ಯೋ ಬಿಸಿಲು ಹೆಚ್ಚಿದೆ. ಹೊರಗಡೆ ಬರುವುದು ಕೂಡ ಕಷ್ಟ. ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಪ್ರಯಾಣ, ಕೆಲಸ, ಕೃಷಿ ಕೂಡ ಕಷ್ಟವಾಗುತ್ತಿದೆ. ಈ ನಡುವೆ ವರದಿಯೊಂದು ಬಿಡುಗಡೆಯಾಗಿದ್ದು, ಏಪ್ರಿಲ್ ತಿಂಗಳ ಉಷ್ಣಾಂಶವು ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದು 103 ವರ್ಷಗಳ ನಂತರ ಸಂಭವಿಸಿದೆ, ಅನೇಕ ಸ್ಥಳಗಳಲ್ಲಿ ತಾಪಮಾನವು 43 ಡಿಗ್ರಿಗಳನ್ನು ತಲುಪಿದೆ. ಹವಾಮಾನ ಇಲಾಖೆಯು 1921-2024 ರ ನಡುವಿನ ಏಪ್ರಿಲ್ ನಲ್ಲಿನ ಶಾಖದ ಡೇಟಾವನ್ನು ಹಂಚಿಕೊಂಡಿದೆ. ಈ ದತ್ತಾಂಶವು ಇದು ದೇಶದ ಅನೇಕ ಭಾಗಗಳಲ್ಲಿ ಗಮನಿಸಲಾದ ಅತ್ಯಂತ ಬಿಸಿಯಾದ ತಿಂಗಳು ಎಂದು ಸೂಚಿಸುತ್ತದೆ. ಮುಂದಿನ ಐದು ದಿನಗಳು ಇನ್ನೂ ಬಿಸಿಯಾಗಲಿವೆ.

ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಈ ತೀವ್ರ ಸ್ವರೂಪದ ಶಾಖವು ಮುಂದಿನ ಐದು ದಿನಗಳವರೆಗೆ ಮುಂದುವರಿಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಮಧ್ಯೆ, ಮತದಾನ ನಡೆಯುವ ಸ್ಥಳಗಳಲ್ಲಿ, ಶಾಖವು ಹೆಚ್ಚಾಗಿರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿಗೆ ಸಂಬಂಧಿಸಿದಂತೆ, ಈ ಎರಡು ತಿಂಗಳುಗಳು ಇತರ ವರ್ಷಗಳಿಗಿಂತ ಹೆಚ್ಚು ಬಿಸಿಯಾಗಿರಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆ ಹೇಳಿತ್ತು. ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಹವಾಮಾನ ಇಲಾಖೆಯ ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ ಜನರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಮನವಿ ಮಾಡಲಾಯಿತು. ಇಲ್ಲಿಯವರೆಗೆ, ಎರಡು ಹಂತದ ಮತದಾನದಲ್ಲಿ, ಅನೇಕ ಸ್ಥಳಗಳಲ್ಲಿ ಶಾಖದಿಂದಾಗಿ ಮತದಾನದ ಮೇಲೂ ಪರಿಣಾಮ ಬೀರಿದೆ.