Categories
ಚಿಕ್ಕಮಗಳೂರು

ಕಾಫಿನಾಡಿನಾದ್ಯಂತ ಅದ್ದೂರಿ ಗಣೇಶೋತ್ಸವ

ಕಾಫಿನಾಡಿನಾದ್ಯಂತ ಅದ್ದೂರಿ ಗಣೇಶೋತ್ಸವ

* ಬಣ್ಣಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಗರ
* ಈ ಬಾರಿ 1700 ಗಣಪತಿ ಜಿಲ್ಲೆಯಾದ್ಯಂತ ಪ್ರತಿಷ್ಠಾಪನೆ

NAMMMUR EXPRESS NEWS
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಗೌರಿ – ಗಣೇಶ ಹಬ್ಬ ಸಂಭ್ರಮದಿಂದ ನಡೆಯಿತು. ಆದರೆ, ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳೆ ಅಡ್ಡಿ ಪಡಿಸಿದೆ. ಮಲೆನಾಡಿನ ಹಲವೆಡೆ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮೆರವಣಿಗೆ, ಉತ್ಸವಕ್ಕೂ ಅಡ್ಡಿಯಾಗಿದೆ.
ಗಣೇಶಮೂರ್ತಿ ತಯಾರಕರು, ತಾವು ಸಿದ್ಧಪಡಿಸಿ ಕಳೆದ ಒಂದು ವಾರದಿಂದ ನಗರ ಮತ್ತು ಪೇಟೆಯ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಇಟ್ಟಿದ್ದರು. ಮಳೆ ಸಾಧ್ಯತೆಯಿಂದ ಆದಷ್ಟು ಸುರಕ್ಷಿತ ಪ್ರದೇಶಗಳಲ್ಲಿ ಇಟ್ಟಿದ್ದರು. ಬುಧವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಆದರೆ, ಮಧ್ಯಾಹ್ನ ಆರಂಭವಾದ ಮಳೆ ಗುರುವಾರ ದವರೆಗೆ ಇನ್ನಷ್ಟು ಜೋರಾಗಿತ್ತು. ಆದರೆ, ಭಕ್ತರ ಉತ್ಸಹ ಕಡಿಮೆಯಾಗಿರಲಿಲ್ಲ,
ಮಳೆಯ ನಡುವೆಯೇ ಟ್ರ್ಯಾಕ್ಟರ್‌, ಆಟೋ, ಟಾಟಾ ಏಸಿ ವಾಹನಗಳಲ್ಲಿ ಗಣೇಶ ಮೂರ್ತಿ ತೆಗೆದುಕೊಂಡು ಹೋಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ರಾತ್ರಿ ವೇಳೆಯಲ್ಲಿ ವಿಸರ್ಜಿಸಲಾಯಿತು. ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿ ವಿಸರ್ಜಿಸಲು ಸ್ಥಳೀಯ ಸಂಸ್ಥೆಗಳು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ನೀರು ತುಂಬಿಸಿ ವ್ಯವಸ್ಥೆ ಮಾಡಿದ್ದವು.
ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌, ವಿಜಯಪುರ, ಹಿಂದೂ ಮಹಾಸಭಾ ಗಣಪತಿ ಸೇರಿದಂತೆ ಆಲ್ದೂರು,ಮೂಡಿಗೆರೆ,ತರೀಕೆರೆ,ಬಿರೂರು,ಕಳಸ,ಎನ್ ಆರ್ ಪುರ,ಬಾಳೆಹೊನ್ನೂರು,ಜಯಪುರ,ಕೊಪ್ಪ,ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ ಗಣಪತಿಯಲ್ಲಿ ಪ್ರತಿ ದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ ವೇಳೆಗೆ ಭಕ್ತರು ಪೆಂಡಾಲ್‌‌ಗಳಿಗೆ ಬಂದು ಗಣೇಶ ದರ್ಶನ ಪಡೆಯುವುದು, ನಂತರ ಕೆಲ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡಿಕೊಂಡು ಹೋಗುವುದನ್ನು ಹಲವು ವರ್ಷಗಳಿಂದ ರೂಢಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಮಳೆ ಇರುವುದರಿಂದ ಜನರು ಪೆಂಡಾಲ್‌ಗಳತ್ತಾ ಬರುವುದು ಕಡಿಮೆಯಾಗಲಿದೆ. ವರುಣನ ಆರ್ಭಟ ವಿಘ್ನ ನಿವಾರಕನಿಗೂ ತಟ್ಟಿದೆ.
ಈ ಬಾರಿ 1730 ಗಣೇಶ ಪ್ರತಿಷ್ಠಾಪನೆ
ಜಿಲ್ಲೆಯಾದ್ಯಂತ ನಡೆದಿದ್ದು ಕಳೆದ ವರ್ಷ ಸುಮಾರು 1900ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಈ ಬಾರಿ ಈ ಸಂಖ್ಯೆ 1730 ಕ್ಕೆ ಕುಸಿದಿದೆ. ಜಿಲ್ಲಾ ಪೊಲೀಸ್‌ ಇಲಾಖೆ 7 ಅತಿ ಸೂಕ್ಷ್ಮ ಹಾಗೂ 157 ಸೂಕ್ಷ್ಮ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳನ್ನು ಗುರುತು ಮಾಡಿದೆ. ಜತೆಗೆ ಮೆರವಣಿಗೆ ಸಾಗುವ ಕೆಲವು ಮಾರ್ಗಗಳನ್ನು ಸೂಕ್ಷ್ಮ ಎಂಬುದಾಗಿ ಗುರುತು ಮಾಡಿದೆ. ಬಂದೋಬಸ್ತಿಗೆ ಸುಮಾರು 1500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಇಲಾಖೆ ಬಳಸಿಕೊಳ್ಳುತ್ತಿದೆ. 16 ಕಡೆಗಳಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ. 24 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ಸೆ. 28ರವರೆಗೆ ಕಾರ್ಯನಿರ್ವಹಿಸಲು ನೇಮಕ ಮಾಡಿಕೊಳ್ಳಲಾಗಿದೆ. 3 ನೇ ದಿನವಾದ ಇಂದು ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.