Categories
ಚಿಕ್ಕಮಗಳೂರು

ಬಾಳೆಹೊನ್ನೂರು ಕಾಡಾನೆ ದಾಳಿ: ಬೃಹತ್ ಹೋರಾಟ!

ಬಾಳೆಹೊನ್ನೂರು ಕಾಡಾನೆ ದಾಳಿ: ಬೃಹತ್ ಹೋರಾಟ!
* ತೀವ್ರ ಸ್ವರೂಪ ಪಡೆದ ಸಾರ್ವಜನಿಕರ ಪ್ರತಿಭಟನೆ
* ಸರ್ವಪಕ್ಷಗಳ ಪ್ರತಿಭಟನೆ,ಸ್ಥಳಕ್ಕೆ ಅರಣ್ಯ ಸಚಿವರು ಬರುವಂತೆ ಪಟ್ಟು
* ಕಾಡಾನೆಗಳನ್ನು ಸೆರೆಹಿಡಿಯುವಂತೆ ಪಟ್ಟು,ಮೃತ ದೇಹ ಇಟ್ಟು ಪ್ರತಿಭಟನೆಗೆ ನಿರ್ಧಾರ
* ಪುಂಡಾನೆ ಹಿಡಿಯಲು ಸಕ್ರೆಬೈಲಿನ ಆನೆ ಬಿಡಾರದಿಂದ ಸಾಕಾನೆ ರವಾನೆ

NAMMMUR EXPRESS NEWS
ಎನ್.ಆರ್ ಪುರ/ಬಾಳೆಹೊನ್ನೂರು: ಕಾಡಾನೆ ದಾಳಿಗೆ ಕಳೆದ ನಾಲ್ಕು ದಿನದಲ್ಲಿ ಇಬ್ಬರು ಮೃತರಾದ ಹಿನ್ನೆಲೆ ಸೋಮವಾರ ವಿವಿಧ ಸಂಘಟನೆಗಳು,ರೈತ ಸಂಘಟನೆಗಳು,ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಪಕ್ಷಾತೀತವಾಗಿ ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಕಳೆದ ನಾಲ್ಕು ದಿನದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಕೂಡಲೇ ಸೆರೆಹಿಡಿಯಬೇಕು, ಕಾಡು ಪ್ರಾಣಿಗಳ ಹಾವಳಿಗೆ,ಮಾನವ ಹಾಗೂ ಪ್ರಾಣಿ ಸಂಘರ್ಷಗಳಿಗೆ ಶಾಶ್ವತ ಪರಿಹಾರ ನೀಡುವಂತೆ,ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಥಳಕ್ಕಾಗಮಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಡಿ ಸಿ ಕೂಡಲೇ ಬರಬೇಕೆಂದು ಆಗ್ರಹಪಡಿಸಲಾಯಿತು.

ಅಧಿಕಾರಿಗಳ ವಿರುದ್ಧ ಜೀವರಾಜ್ ಆಕ್ರೋಶ

ಜಮೀನಿಗೆಂದು ಕೆಲಸಕ್ಕೆ ಹೋದರೆ ಕಾಡಾನೆ,ಕಾಡುಕೋಣಗಳು ದಾಳಿ ಮಾಡುತ್ತಿವೆ. ಕಳೆದ ಎಂಟು ತಿಂಗಳಿನಿಂದ ಕ್ಷೇತ್ರದ ಜನ ಸಹನೆಯಿಂದ ವರ್ತಿಸಿದ್ದಾರೆ.ಆದರೆ ಸರ್ಕಾರ ಇನ್ನು ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಇನ್ನೂ ಸುಮ್ಮನೆಯಿದ್ದರೆ ಊರಿನ ಎಲ್ಲಾ ಜನರು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗೋದು ಗ್ಯಾರಂಟಿ,ನಮ್ಮ ಜಾಗಕ್ಕೆ ಕಾಡು ಪ್ರಾಣಿಗಳು ಬಂದಾಗ ನಮ್ಮ ರಕ್ಷಣೆಯನ್ನೂ ಮಾಡಿಕೊಳ್ಳದಂತೆ ಜನರನ್ನು ಇಲಾಖೆಗಳು ಕಟ್ಟಿಹಾಕುತ್ತೆವೆ ಎಂದಾದರೇ ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ವಾ?,ಕೇವಲ ಪರಿಹಾರದ ಚೆಕ್ ವಿತರಿಸಿದಾಕ್ಷಣ ಸಮಸ್ಯೆ ಬಗೆಹರಿಯೊಲ್ಲ,ಅರಣ್ಯ ಸಚಿವರು ಅವೈಜ್ಞಾನಿಕ ಹೇಳಿಕೆ ನೀಡುವುದರೊಂದಿಗೆ ಮಲೆನಾಡಿನ ಜನರ ಬದುಕನ್ನು ಕಸಿಯುತ್ತಿದ್ದಾರೆ. ಕೂಡಲೇ ಈ ಮಾನವನ ಬದುಕಿನೊಂದಿ ಚೆಲ್ಲಾಟವಾಡುವುದನ್ನ ಬಿಟ್ಟು ನಮನೆ ರಕ್ಷಣೆ ನೀಡಬೇಕು, ಇದಕ್ಕೆ ಉತ್ತರಿಸಲು ಅರಣ್ಯ ಸಚಿವರು ಇಲ್ಲಿಗೆ ಬರಬೇಕು ಎಂದು ಮಾಜಿ ಶಾಸಕ ಡಿ.ಎನ್ ಜೀವರಾಜ್ ಆಗ್ರಹಿಸಿದರು.

ಸುಧಾಕರ್ ಶೆಟ್ಟಿ ಹೇಳಿದ್ದೇನು?

ದಾಳಿ ಮಾಡಿದ ಆನೆ ಎಲ್ಲಿದೆ ಎಂಬುದನ್ನು ಡ್ರೋಣ್ ಮುಖಾಂತರ ಪತ್ತೆ ಹಚ್ಚಬಹುದು, ಪತ್ತೆ ಹಚ್ಚಿ ಆ ಆನೆಗಳನ್ನು ಸೆರೆಹಿಡಿದು ಸ್ಥಳಾಂತರಬೇಕಾಗಿದೆ.ವಿಧಾನಸೌಧದಲ್ಲಿ ಕೂತು ಆದೇಶ ಮಾಡಿದಂತೆ ಮಲೆನಾಡಿನ ಜನರ ಬದುಕು ಇಲ್ಲ,ನಿಜಕ್ಕೂ ಸರ್ಕಾರ ಇದೆಯೋ ಇಲ್ವೋ ಅರ್ಥವಾಗುತ್ತಿಲ್ಲ, ಇಲ್ಲಿ ಯಾರೂ ಸುಮ್ಮನೆ ಬಂದಿಲ್ಲ ನಾಳೆ ನಮ್ಮ ಜೀವ ಏನಾಗುತ್ತೋ ಎಂಬ ಭಯ ಎಲ್ಲರಿಗೂ ಇದೆ. ಎಲ್ಲರಿಗೂ ಇದರಿಂದ ಶಾಶ್ವತ ಪರಿಹಾರಬೇಕಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಆಗ್ರಹಿಸಿದರು.

ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದೇನು?

ನಮಗಿರೋ ಮಾಹಿತಿ ಪ್ರಕಾರ ಕೊಪ್ಪ,ಎನ್.ಆರ್ ಪುರ ತಾಲೂಕಿನಲ್ಲಿ ಸಕಲೇಶಪುರ ಭಾಗದಿಂದ ಬಂದಿರೋ ಮೂರು ಆನೆಗಳಿದ್ದು,ಇವುಗಳನ್ನು ನಿಯಮಾನುಸಾರ ಇಲಾಖೆ ಹಿಡಿಯೋ ಪ್ರಯತ್ನ ಮಾಡಿದ್ದರೆ ಈ ಸಾವುಗಳನ್ನು ತಪ್ಪಿಸಬಹುದಿತ್ತು, ಅರಣ್ಯ ಇಲಾಖೆ ಮನುಷ್ಯರನ್ನು ಎರಡನೇ ದರ್ಜೆಯವರನ್ನಾಗಿ ನೋಡುತ್ತಿದೆ ಎನಿಸುತ್ತಿದೆ. ಮೂರು ಆನೆಗಳನ್ನು ಸೆರೆಹಿಡಿಯಬೇಕು 20 ಲಕ್ಷವಿರುವ ಪರಿಹಾರದ ಮೊತ್ತವನ್ನು 25 ಲಕ್ಷಕ್ಕೆ ಹೆಚ್ಚಿಸಬೇಕು,ಕೂಡಲೇ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರ್‌ಎಫ್‌ಓ ರನ್ನು ಅಮಾನತುಗೊಳಿಸಬೇಕು,ಕೆಲವು ತಿಂಗಳ ಹಿಂದೆ ಇದೇ ಬಾಳೆಹೊನ್ನೂರು ಸಮೀಪದ ಎಸ್ಟೇಟ್ ಒಂದಕ್ಕೆ ಕಾಡಾನೆಗಳ ಹಿಂಡು ಬಂದಿತ್ತು ಆ ಸಂದರ್ಭದಲ್ಲಿ ಇಲಾಖೆ ಬಹಳ ವೇಗವಾಗಿ ಕಾರ್ಯ ನಿರ್ವಹಿಸಿ ಆನೆಗಳನ್ನು ಸ್ಥಳಾಂತರಿಸಿತ್ತು,ಆದರೆ ಈಗ ಜನಸಾಮಾನ್ಯರ ಮೇಲೆ ದಾಳಿಯಾದಾಗ ಎಚ್ಚರವಹಿಸದೇ ಬೇಜವಾಬ್ದಾರಿತನ ತೋರಿಸುತ್ತಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಆಗ್ರಹಿಸಿದರು.

ಸರ್ಕಾರದ ಗಮನಕ್ಕೆ ತಂದಿದ್ದೇನೆ… ರಾಜೇಗೌಡ

ಕ್ಷೇತ್ರದಲ್ಲಾಗುತ್ತಿರುವ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷಗಳಾಗುತ್ತಿರುವುದನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು,ಅರಣ್ಯ ಸಚಿವರಿಗೂ ಮನವಿ ಮಾಡಿದ್ದೇನೆ.ಈಗಾಗಲೇ ಆನೆಗಳನ್ನು ಸೆರೆಹಿಡಿಯಲು ಆದೇಶವಾಗಿದೆ. ಸಕ್ರೇಬೈಲಿನಿಂದ ಆನೆಗಳು,ಅರವಳಿಕೆ ತಜ್ಞರು ಹೊರಟಿದ್ದು,ಆನೆಯನ್ನು ಕಂಡಿತ ಸೆರೆಹಿಡಿಯಲಾಗುವುದು. ಪರಿಹಾರ ವಿತರಿಸಿದಾಕ್ಷಣ ಹೋದ ಜೀವ ಬರುವುದಿಲ್ಲ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಶಾಶ್ವತ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ,ಅಗತ್ಯವಿದ್ದರೆ ನಿಯೋಗವೊಂದನ್ನು ಕರೆದೊಯ್ಯಲು ಸಿದ್ದನಿದ್ದೇನೆ.ಕ್ಷೇತ್ರದ ಜನರ ಜೊತೆ ನಾನಿದ್ದೇನೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಎಲ್ಲಾ ಪಕ್ಷದ ನಾಯಕರು ಹಾಜರ್

ಪ್ರತಿಭಟನೆಯಲ್ಲಿ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಶಾಸಕ ಡಿ.ಎನ್ ಜೀವರಾಜ್,ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಸೇರಿದಂತೆ ಎಲ್ಲಾ ರೈತ ಸಂಘಟನೆಗಳು,ವಿವಿಧ ಸಂಘ ಸಂಸ್ಥೆ,ಸಂಘಟನೆಗಳು,ನೂರಾರು ಸಂಖ್ಯೆಯಲ್ಲಿ ಸಾರ್ವಜನಿರು ಭಾಗವಹಿಸಿದ್ದರು.

ಪುಂಡಾನೆ ಹಿಡಿಯುಲು ಸಕ್ರೆಬೈಲಿನ ಆನೆ ಗ್ಯಾಂಗ್

ಕಾಡಾನೆ ದಾಳಿಗೆ ರೈತರೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಅರಣ್ಯ ಇಲಾಖೆಯೊಳಗೆ ನುಗ್ಗಲು ಯತ್ನಿಸಿ ತೀವ್ರ ಸ್ವರೂಪ ಪಡೆದಿತ್ತು. ಇದೀಗ ರೈತರ ಆಕ್ರೋಶಕ್ಕೆ ಅಲರ್ಟ್ ಆದ ಸರ್ಕಾರ ಆನೆ ಸೆರೆಗೆ ಮುಂದಾಗಿದೆ.
ರೈತರು ಬೀದಿಗಿಳಿಯುತ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದ್ದು, ಡಿಸಿ-ಡಿ.ಎಫ್.ಓ ತಕ್ಷಣ ಆನೆ ಸೆರೆಗೆ ಮುಂದಾಗ್ತೀವಿ ಎಂದಿದ್ರು. ಇದೀಗ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಬಿಡಾರದಿಂದ ನಾಲ್ಕು ಆನೆಗಳು ಕಾಡಾನೆ ಸೆರೆಗೆ ಮುಂದಾಗಿದ್ದು, ಇಂದು ಮಧ್ಯಾಹ್ನದಿಂದಲೇ ಆನೆ ಕಾರ್ಯಾಚರಣೆ ಆರಂಭವಾಗಲಿದೆ. ಕೊಡಗು, ಮೈಸೂರು, ಶಿವಮೊಗ್ಗದಿಂದ ವೈದ್ಯರ ತಂಡ ಆಗಮಿಸಲಿದ್ದು, ಸದ್ಯ ರೈತರ ಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.