Categories
ಚಿಕ್ಕಮಗಳೂರು

ಜನೌಷಧಿ ಕೇಂದ್ರ ತೆರವು ಆದೇಶ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಜನೌಷಧಿ ಕೇಂದ್ರ ತೆರವು ಆದೇಶ ವಿರೋಧಿಸಿ ಬಿಜೆಪಿ ಪ್ರತಿಭಟನೆ 

* ಜನೌಷಧ ಕೇಂದ್ರ ತೆರವಿಗೆ ಆದೇಶಿಸಿದ ರಾಜ್ಯಸರ್ಕಾರ
* ಸರ್ಕಾರದ ಆದೇಶದ ವಿರುದ್ಧ ಚಿಕ್ಕಮಗಳೂರು,ಎನ್.ಆರ್ ಪುರದಲ್ಲಿ ಪ್ರತಿಭಟನೆ

NAMMMUR EXPRESS NEWS
ಚಿಕ್ಕಮಗಳೂರು: ಬಡ ರೋಗಿಗಳ ಪಾಲಿಗೆ ವರದಾನವಾಗಿರುವ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿಗಳು, ಆರೊಗ್ಯ ಸಚಿವರು ಬಡವರ ವಿರೋಧಿ ಎಂದು ಆರೋಪಿಸಿದರಲ್ಲದೆ, ಕೂಡಲೇ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ದೀನ, ದುರ್ಬಲರು, ಬಡವರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿ ಆಸರೆಯಾಗಿದ್ದನ್ನು ಸಹಿಸದ ರಾಜ್ಯ ಸರ್ಕಾರ ಜನೌಷಧಿ ಕೇಂದ್ರ ಮುಚ್ಚಿಸಿ ಜನರಿಗೆ ಇನ್ನಷ್ಟು ಬರೆ ಎಳೆಯಲು ಮುಂದಾಗಿವೆ ಎಂದು ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಆರೋಪಿಸಿದರು.
ನರೇಂದ್ರ ಮೋದಿ ಜನಪರ ಆಡಳಿತವನ್ನು ಜನರ ಮನಸ್ಸಿನಿಂದ ಅಳಿಸುವ ದುರುದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಹುಡುಕುತ್ತಿದೆ. ಹಾಗೂ ಆಸ್ಪತ್ರೆಗಳಲ್ಲಿ ಅಳವಡಿಸಿರುವ ಕೇಂದ್ರ ಸಕಾರದ ಫ್ಲೆಕ್ಸ್‌ಗಳನ್ನು ತೆಗೆದು ಹಾಕುವುದು ಸರ್ಕಾರದ ಹುನ್ನಾರ. ಸರ್ಕಾರಿ ಕಚೇರಿಗಳು ಸಾರ್ವಜನಿಕ ಆಸ್ತಿ. ಕಾಂಗ್ರೆಸ್ಸಿಗೆ ಬರೆದುಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಜನರ ಸಮಯಕ್ಕೆ ಆರೋಗ್ಯ ಸುಧಾರಿಸಲು ಮೋದಿ ಸರ್ಕಾರ ಕಡಿಮೆ ವೆಚ್ಚದಲ್ಲಿ ಔಷಧಿ, ಶಸ್ತ್ರಚಿಕಿತ್ಸೆಗಾಗಿ ಪ್ರತಿಯೊಬ್ಬರಿಗೆ ಮೂರ್‍ನಾಲ್ಕು ಲಕ್ಷ ರೂ. ಆರ್ಥಿಕ ಸಹಾಯ ನೀಡಿದೆ. ಆದರೆ ರಾಜ್ಯದಲ್ಲಿ ಪಹಣಿ, ಹಾಲು, ಪೆಟ್ರೋಲ್ ಸೇರಿದಂತೆ ಇದೀಗ ರೋಗಿಗಳನ್ನು ಬಿಡದೇ ಖಾಸಗೀ ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸಬೇಕೆಂದು ರಾಜ್ಯ ಸರ್ಕಾರ ನಿರ್ಣಯಿಸಿ ಹಗಲು ದರೋಡೆ ಮಾಡುತ್ತಿದೆ ಎಂದರು.
ರಾಜ್ಯಸರ್ಕಾರ ಜನಸಾಮಾನ್ಯರ ಕಾಳಜಿಯಿದ್ದಲ್ಲಿ ಆರನೇ ಗ್ಯಾರಂಟಿಯಾಗಿ ಉಚಿತ ಶಿಕ್ಷಣ, ಆರೋಗ್ಯ ಸೇವೆಯನ್ನು ಒದಗಿಸಲಿ. ಜೊತೆಗೆ ಪ್ರತಿ ಖಾಸಗೀ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಲಿ ಇದನ್ನು ಮಾಡದೇ ಪ್ರತಿದಿನ ರಾಜ್ಯದ ಜನ ತಲೆ ತಗ್ಗಿಸುವಂತಹ ಕೆಲಸಗಳನ್ನೇ ಮಾಡುತ್ತಿದೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯಸರ್ಕಾರ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲು ಕೈಗೊಂಡಿರುವ ನಿರ್ಣಯವನ್ನು ಹಿಂಪಡೆಯದಿದ್ದಲ್ಲಿ ರಾಜ್ಯಾದ್ಯಂತ ಭಾಜಪ ಉಗ್ರವಾದ ಪ್ರತಿಭಟನೆ ನಡೆಸುತ್ತದೆ. ಜೊತೆಗೆ ಪ್ರಧಾನಿ ಮೋದಿಯವರ ಫ್ಲೆಕ್ಸ್‌ಗಳ ತೆರವಿಗೆ ಮುಂದಾದರೆ ರಾಜ್ಯಸರ್ಕಾರ ಫ್ಲೆಕ್ಸ್‌ಗಳು ಬೆಂಕಿಗಾಹುತಿ ಯಾಗಲಿದೆ ಎಂದು ಜಿಲ್ಲಾಧ್ಯಕ್ಷ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ತಾ.ಪಂ. ಮಾಜಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ನಗರಸಭಾ ಸದಸ್ಯ ಕಾಯಿ ರವಿ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರುಗಳಾದ ಡಾ.ನರೇಂದ್ರ, ಸಚ್ಚಿನ್‌ಗೌಡ, ಹೆಚ್.ಕೆ.ಕೇಶವಮೂರ್ತಿ, ಬಸವರಾಜ್, ಮೋಹನ್, ರೇವನಾಥ್, ಎಸ್‌ಡಿಎಂ ಮಂಜು ಮತ್ತಿತರರು ಪ್ರತಿಭನೆಯಲ್ಲಿ ಭಾಗವಹಿಸಿದ್ದರು.

* ಅಧ್ಯಕ್ಷ ನೀಲೇಶ್ ನೇತೃತ್ವದಲ್ಲಿ ಎನ್.ಆರ್ ಪುರದಲ್ಲಿ ಪ್ರತಿಭಟನೆ 
ಎನ್.ಆರ್ ಪುರ: ಬಡವರ ಪಾಲಿಗೆ ಸಂಜೀವಿನಿಯಾದ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಯಿಂದ ಸ್ಥಳಾಂತರಿಸಬಾರದು ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿ.ನಿಲೇಶ್ ಆಗ್ರಹಿಸಿದರು.
ಕಾಂಗ್ರೆಸ್‌ ಸರ್ಕಾರ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಯಿಂದ ಸ್ಥಳಾಂತರಿಸುವ ಹುನ್ನಾರ ನಡೆಸಿದೆ. ಬಡವರ ಕಷ್ಟವನ್ನು ಅರ್ಥಮಾಡಿಕೊಳ್ಳದ ಕಾಂಗ್ರೆಸ್ ಬಡವರ ಮೇಲೆ ಗದಾಪ್ರಹಾರ ಮಾಡಿಕೊಂಡು ಬಂದಿದೆ. ಪ್ರಸ್ತುತ ಖಾಸಗಿ ಔಷಧಿ ಅಂಗಡಿಯವರ ಕೈಗೊಂಬೆಯಾಗಿರುವ ಕಾಂಗ್ರೆಸ್ ಜನೌಷಧಿ ಕೇಂದ್ರವನ್ನು ಸ್ಥಳಾಂತರಿಸಲು ಮುಂದಾಗಿದೆ ಎಂದು ಆರೋಪಿಸಿದರು. ಜನೌಷಧಿ ಕೇಂದ್ರ ಸ್ಥಳಾಂತರಿಸಲು ಮುಂದಾದರೆ ಆಸ್ಪತ್ರೆ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಸ್.ಆಶೀಶ್ ಕುಮಾರ್, ಕೆಸವೆ ಮಂಜುನಾಥ್, ಫರ್ವೀಜ್, ರಾಜೇಂದ್ರ, ಪ್ರೀತಂ, ಮನೋಜ್, ವೈ.ಎಸ್.ರವಿ, ಮಂಜುನಾಥ್ ಲಾಡ್, ಜಯರಾಂ, ದರ್ಶನ್, ಶೇಖ‌ರ್ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.