Categories
ಚಿಕ್ಕಮಗಳೂರು

ಡ್ರಗ್ಸ್ ಮುಕ್ತ ಕಾಫಿನಾಡಿಗೆ ಬಿಜೆಪಿ ಯುವ ಮೋರ್ಚಾ ಪಣ

ಡ್ರಗ್ಸ್ ಮುಕ್ತ ಕಾಫಿನಾಡಿಗೆ ಬಿಜೆಪಿ ಯುವ ಮೋರ್ಚಾ ಪಣ

* ಜಿಲ್ಲೆಯಲ್ಲಿ ಹೆಚ್ಚಾಗಿದೆ ಗಾಂಜಾ,ಡ್ರಗ್ಸ್ ಸರಬರಾಜು
* ಎಸ್‌ಪಿ ಗೆ ಮನವಿ ಸಲ್ಲಿಸಿದ ಯುವ ಮೋರ್ಚಾ, ವಿಶೇಷ ಅಭಿಯಾನ
NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಕಂಡ ಕಂಡಲ್ಲಿ ಗಲಭೆ ಮಾಡಿ ಸಮಾಜದ ಸ್ವಾಸ್ತ್ಯ ಕೆಡಿಸುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ನೇತೃತ್ವದಲ್ಲಿ ಎಸ್ಪಿ ಡಾ.ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದೆ.
ಮಾದಕ ವಸ್ತುಗಳ ಹಾವಳಿಯು ಯುವ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದು, ನಗರದ ಸಾಯಿ ವಧುವನ ಬಡಾವಣೆಯಲ್ಲಿರುವ ಪಾರ್ಕ್, ಗೌರಿ ಕಾಲುವೆ, ನರಿಗುಡ್ಡನಹಳ್ಳಿ ವೃತ್ತ ದಲ್ಲಿ ಖಾಲಿಯಿರುವ ಲೇಔಟ್‌ಗಳಲ್ಲಿ, ಎ.ಐ.ಟಿ ವೃತ್ತ, ವಾಜಪೇಯಿ ಲೇಔಟ್, ರೈಲ್ವೆ ನಿಲ್ದಾಣದ ಸುತ್ತಮುತ್ತ ಸೇರಿದಂತೆ ನಗರದ ನಾನಾ ಭಾಗಗಳಲ್ಲಿ ದಿನ ಬೆಳಗಾದರೆ ಗಾಂಜಾ ಸೇವಿಸಿ ಬೈಕ್ ವೀಲಿಂಗ್ ಮಾಡುವುದು, ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡು ಬರುತ್ತಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕ ಸ್ವಾಸ್ಥ್ಯ ಕೆಡಿಸುವ ಇಂಥಹ ಕೃತ್ಯಗಳು ಇನ್ನಷ್ಟು ಉಲ್ಬಣಗೊಳ್ಳುವ ಮೊದಲೇ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಮತ್ತು ಮಾದಕ ವ್ಯಸನಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ತಮ್ಮ ಮನವಿಯಲ್ಲಿ ಯುವ ಮೋರ್ಚಾ ಒತ್ತಾಯಿಸಿದೆ.
ಈ ವೇಳೆ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್, ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಭಾಗಗಳಿಗೆ ಹೊರಗಿನಿಂದ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಆ ಪೈಕಿ ಕೆಲವರು ಗಾಂಜಾ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳನ್ನು ತಂದು ಜಿಲ್ಲೆಯ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಗಾಂಜಾ ಪೆಡ್ಲರ್‌ಗಳು, ಇನ್ನಿತರೆ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಾಲೇಜು ಕ್ಯಾಂಪಸ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಈ ರೀತಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಸೇವನೆ ಮಾಡುವವರು ಕಂಡುಬಂದಲ್ಲಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್‌ ಗೌಡ, ಶಶಿ ಆಲ್ದೂರು, ನಗರಾಧ್ಯಕ್ಷ ಜೀವನ್‌ ಕೋಟೆ, ಗ್ರಾಮಾಂತರ ಅಧ್ಯಕ್ಷ ಪುನೀತ್ ಗೌಡ,ಜಿಲ್ಲಾ ಉಪಾಧ್ಯಕ್ಷೆ ಅಂಕಿತ ಗೌಡ, ವಿವಿಧ ಪದಾಧಿಕಾರಿಗಳಾದ ರಾಜೇಶ್ ಕಲ್ಲೊಡ್ಡಿ, ಪುನೀತ್‌ ದೇವಾಂಗ, ಗೌತಮ್ ಅಟಕ, ಪುನೀತ್ ಬಿ.ಸಿ., ಕಾರ್ತಿಕ್ ಸೋಮಶೇಖ‌ರ್, ತಿಲಕ್ ರಾಜ ಅರಸ್, ಮಧು ನಾಯರ್, ಕಾರ್ತಿಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.