ಚಿಕ್ಕಮಗಳೂರು ಟಾಪ್ ನ್ಯೂಸ್ !!
ಚಿಕ್ಕಮಗಳೂರು: ನಗರ ಸಭೆಯಲ್ಲಿ 5.12 ಕೋಟಿ ಮೊತ್ತದ ಬಜೆಟ್ ಮಂಡನೆ
– ಕಳಸ : ರಾಜಕೀಯ ಒತ್ತಡದಿಂದ ರೈತನ ಗೇಟ್ ತೆರವುಗೊಳಿಸಿದ್ರಾ ಅಧಿಕಾರಿಗಳು??
– ಕಳಸ : ಕಾಫಿನಾಡಲ್ಲಿ ಮುಂದುವರೆದ ಕಾಡ್ಲಿಚ್ಚು ಪ್ರಕರಣಗಳು
NAMMUR EXPRESS NEWS
ಚಿಕ್ಕಮಗಳೂರು: ನಗರಸಭೆಯ 2025-26ನೇ ಸಾಲಿನ 5.12 ಕೋಟಿ ರೂ. ಉಳಿತಾಯ ಬಜೆಟನ್ನು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಂಡಿಸಿದರು. ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯನ್ನು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ನಗರಸಭೆ ಪೌರಾಯುಕ್ತ ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಂಡಿಸಿದ ಬಜೆಟನ್ನು ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದರು. ನಗರಸಭೆಯ 2025-26ನೇ ಸಾಲಿನ ಬಜೆಟ್ನಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ಹೆಚ್ಚಿನ ಆದಾಯ ಮೂಲಗಳನ್ನು ಕಂಡುಕೊಳ್ಳಲಾಗಿದೆ. ಉಳಿದಂತೆ ಸರ್ಕಾರದ ಅನುದಾನ ಮತ್ತು ಇತರೆ ಯೋಜನೆಗಳಿಂದ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
– ಕಳಸ : ರಾಜಕೀಯ ಒತ್ತಡದಿಂದ ರೈತನ ಗೇಟ್ ತೆರವುಗೊಳಿಸಿದ್ರಾ ಅಧಿಕಾರಿಗಳು??
ಕಳಸ : ರೈತನೋರ್ವ ತಾನು ಬೆಳೆದಿದ್ದ ಕೃಷಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹಾಕಿದ್ದ ಕಬ್ಬಿಣದ ಗೇಟನ್ನು ತಾಲೂಕು ಆಡಳಿತ ತೆರವುಗೊಳಿಸಿದೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಚಿಕ್ಕನಕೊಡಿಗೆ ಗ್ರಾಮದ ಚಂದ್ರು ಎಂಬುವವರು ಕಳೆದ 50 ವರ್ಷಗಳಿಂದ ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಜಾನುವಾರುಗಳು ಹಾಳು ಮಾಡುತ್ತಿವೆ ಎಂದು ಚಂದ್ರು ಕಬ್ಬಿಣದ ಗೇಟ್ ಒಂದನ್ನು ಅಳವಡಿಸಿದ್ದರು. ಆದರೆ ಅದನ್ನು ಸ್ಥಳೀಯ ವ್ಯಕ್ತಿ ಶಾಂತಕುಮಾರ್ ಅನ್ನೋರು ರಾಜಕೀಯ ಪ್ರಭಾವ ಬಳಸಿ ಗೇಟನ್ನು ತೆರವುಗೊಳಿಸಿದ್ದಾರೆ ಎಂದು ಚಂದ್ರು ಆರೋಪಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಕಳಸ ತಹಸೀಲ್ದಾರ್ ಅವರನ್ನು ಕೇಳಿದ್ರೆ ಇದು ಗೋಮಾಳ ಜಾಗ ಅಂತ ಪಹಣಿಯಲ್ಲಿ ನಮೂದಾಗಿದೆ. ಸರ್ಕಾರಿ ಜಾಗವಾದ್ದರಿಂದ ಶಾಂತಕುಮಾರ್ ಎಂಬುವವರು ಗೇಟನ್ನು ತೆರವುಗೊಳಿಸುವಂತೆ ನೀಡಿದ ದೂರಿನ ಅನ್ವಯ ಸ್ಥಳ ಪರಿಶೀಲನೆ ನಡೆಸಿ ಗೇಟನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲಗೊಳಿಸಿದ್ದೇವೆ ಅಂತ ತಹಸೀಲ್ದಾರ್ ಹೇಳುತ್ತಿದ್ದಾರೆ. ಒಟ್ಟಾರೆ ಗೇಟ್ ಅಂತು ಈಗಾಗಲೇ ತೆರವಾಗಿದ್ದು ರಾಜಕೀಯ ಒತ್ತಡಕ್ಕೆ ಗೇಟ್ ತೆರವುಗೊಳಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಆಗಬೇಕು ಅಂತ ಚಂದ್ರು ಕುಟುಂಬ ಆಗ್ರಹಿಸುತ್ತಿದೆ.
– ಕಳಸ : ಕಾಫಿನಾಡಲ್ಲಿ ಮುಂದುವರೆದ ಕಾಡ್ಲಿಚ್ಚು ಪ್ರಕರಣಗಳು
ಕಳಸ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಡು ಬಿಸಿಲಿನ ತಾಪ ಹೆಚ್ಚಾಗುತಿದ್ದಂತೆಯೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಿಲ್ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಪರಿಣಾಮ 30 ಎಕರೆಗೂ ಅಧಿಕ ಭೂಮಿಯ ಸುಟ್ಟು ಕರಕಲಾಗಿದೆ. ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ಬೆಂಕಿಯು ತೀವ್ರವಾಗಿ ಹೆಚ್ಚಾಗುತ್ತಿದ್ದಂತೆಯೇ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಭಿವೃದ್ಧಿಯಲ್ಲೇ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಹೊಂದಿರುವ ಕಳಸದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದಿರುವುದರಿಂದ ಮೂಡಿಗೆರೆಯಿಂದ ಅಗ್ನಿಶಾಮಕ ಸಿಬ್ಬಂದಿಗಳು ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಸಿಲಿನ ತಾಪ ಹಾಗೂ ಗಾಳಿಯು ಹೆಚ್ಚಾಗುತ್ತಿದ್ದಂತೆಯೇ ಬೆಂಕಿಯು ತೀವ್ರಗೊಳ್ಳುತ್ತಿದೆ. ಹೀಗಾಗಿ ಹಲವು ವಿಧದ ಕ್ರಿಮಿಕೀಟಗಳು ಬೆಂಕಿಗೆ ಆಹುತಿಯಾಗಿವೆ. ಇತ್ತೀಚಿಗಷ್ಟೇ ಚಿಕ್ಕಮಗಳೂರು ಡಿಎಫ್ಓ ರಮೇಶ್ ಬಾಬು ಅವರು ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೆ ಅಗ್ನಿ ಪ್ರಕರಣಗಳಿಂದ 350ಕ್ಕೂ ಹೆಚ್ಚು ಎಕರೆ ಪ್ರದೇಶ ಬೆಂಕಿಗೆ ಆಗುತ್ತಿಯಾಗಿದೆ ಈ ಬೆನ್ನಲ್ಲಿ ಮತ್ತೆ ಅಗ್ನಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.