Categories
ಚಿಕ್ಕಮಗಳೂರು

ಚಿಕ್ಕಮಗಳೂರು ಪ್ರವಾಸಿ ತಾಣ ಎಲ್ಲೆಲ್ಲೂ ಪ್ಲಾಸ್ಟಿಕ್

ಚಿಕ್ಕಮಗಳೂರು ಪ್ರವಾಸಿ ತಾಣ ಎಲ್ಲೆಲ್ಲೂ ಪ್ಲಾಸ್ಟಿಕ್
– ಪ್ಲಾಸ್ಟಿಕ್ ಬಳಕೆ ಮತ್ತು ಮದ್ಯಪಾನ ಬಳಕೆ ಕಡ್ಡಾಯವಾಗಿ ನಿಷೇಧ
– ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ

NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆಲ್ಲ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌ ಹಾವಳಿಯೂ ಮಿತಿ ಮೀರುತ್ತಿದೆ. ಗಿರಿ ಶಿಖರ ನೋಡಲು ಬರುವ ಜನ ಪ್ಲಾಸ್ಟಿಕ್ ಬಾಟಲಿಯ ರಾಶಿ ನೋಡಬೇಕಾಗಿದೆ. ಚಿಕ್ಕಮಗಳೂರು ಜಿಲ್ಲೆಯು ಪರ್ವತ ಶ್ರೇಣಿ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟದ ಒಂದು ಭಾಗ. ಹಲವು ನದಿಗಳ ಉಗಮ ಸ್ಥಾನ ಕೂಡ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಳ್ಳಯ್ಯನಗಿರಿಯು ಪ್ರಮುಖ ಆಕರ್ಷಣೀಯ ಸ್ಥಳ. ಈ ಪರ್ವತವು ಭದ್ರ ವನ್ಯಜೀವಿ ಅಭಯಾರಣ್ಯ ಸುತ್ತುವರಿದಿದೆ. ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಹಿರೇಕೊಳಲೆ ಕೆರೆ ಕೂಡ ಇದೆ. ಹಸಿರು ಶೋಲಾ ಕಾಡು, ಹುಲ್ಲುಗಾವಲು ಮತ್ತು ಹಲವು ಜೀವ ವೈವಿಧ್ಯತೆಯಿಂದ ಕೂಡಿದೆ.

`ಪ್ರವಾಸಿ ತಾಣ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮದ್ಯಪಾನ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ, ತಪ್ಪಿದ್ದಲ್ಲಿ ₹1000 ದಂಡ ವಿಧಿಸಲಾಗುವುದು’ ಎಂಬ ಫಲಕಗಳನ್ನು ಗಿರಿ ಶ್ರೇಣಿ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಲಾಗಿದೆ. ಅವುಗಳ ಬಣ್ಣ ಮಾಸಿರುವ ಜತೆಗೆ ಅವುಗಳಿಗೆ ಕಿಮ್ಮತ್ತು ಇಲ್ಲವಾಗಿದೆ. ಫಲಕಗಳ ಅಡಿಯಲ್ಲೇ ಪ್ಲಾಸ್ಟಿಕ್‌ ಬಾಟಲಿಯ ರಾಶಿಯನ್ನು ಗಿರಿ ಶ್ರೇಣಿಯಲ್ಲಿ ಕಾಣಬಹುದು. ಗಿರಿ ಶ್ರೇಣಿಯ ಮಾರ್ಗದಲ್ಲಿ, ದರ್ಗಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಲೋಟ, ಬಾಟಲಿ, ತಟ್ಟೆ, ಚೀಲ, ಪೊಟ್ಟಣಗಳದ್ದೇ ಕಾರುಬಾರು. ಪ್ಲಾಸ್ಟಿಕ್ ತ್ಯಾಜ್ಯ ರಾರಾಜಿಸುತ್ತಿದೆ. ಇಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದು ಸವಾಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಮದ್ಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಕಸ ತೊಟ್ಟಿಗೂ ಹಾಕುವುದಿಲ್ಲ. ಬೆಟ್ಟಸಾಲಿನ ಸೊಬಗು ಕಣ್ಣುಂಬಿಕೊಳ್ಳಲು, ದತ್ತಪೀಠ, ದರ್ಗಾ ದರ್ಶನಕ್ಕೆ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ವಾರಾಂತ್ಯದಲ್ಲಂತೂ ಗಿರಿಮಾರ್ಗವು ಪ್ರವಾಸಿಗರ ವಾಹನಗಳಿಂದ ಗಿಜಿಗುಡುತ್ತದೆ.

ಊಟ ಉಪಹಾರಕ್ಕೆ ಪ್ಲಾಸ್ಟಿಕ್ ತಟ್ಟೆಲೋಟ ಬಳಸಿ, ಎಲ್ಲೆಂದರಲ್ಲಿ ಬಿಸಾಕಿದ್ದಾರೆ. ಕುರುಕುಲು ತಿನಿಸು ತಿಂದು ಪೊಟ್ಟಣಗಳನ್ನು ಎಸೆದಿದ್ದಾರೆ. ಗಾಳಿಗೆ ಇಡಿ ಗಿರಿಯ ತುಂಬ ಹರಡಿಕೊಳ್ಳುತ್ತಿವೆ. ಕೆಲವು ಕಡೆ ಮದ್ಯದ ಬಾಟಲಿಗಳು ಬಿದ್ದಿವೆ. ಕೆಲವು ಕಡೆ ಪ್ಲಾಸ್ಟಿಕ್ ತಿಪ್ಪೆಗಳೇ ನಿರ್ಮಾಣವಾಗಿವೆ. ಇದೊಂದು ಅಪೂರ್ವ ತಾಣ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ ಎಲ್ಲ ಸಮುದಾಯದವರು ಇಲ್ಲಿಗೆ ಬರುತ್ತಾರೆ. ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯ ಎಂಬುದನ್ನು ಪ್ರವಾಸಿಗರು ತಿಳಿದುಕೊಳ್ಳಬೇಕು. ನಿಯಮ ಪಾಲಿಸದವರ ವಿರುದ್ಧ ಸಂಬಂಧಪಟ್ಟವರು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಪ್ರವಾಸಿಗರು ಹೇಳುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.