ಚಿಕ್ಕಮಗಳೂರು ಟಾಪ್ ನ್ಯೂಸ್ !!
* ಕಾಫಿನಾಡಲ್ಲಿ ಧಾರಾಕಾರ ಮಳೆ
* ಭದ್ರಾ ನದಿಯಿಂದ ಮರಳು ಸಾಗಿಸುತ್ತಿದ್ದ ಆರೋಪಿ ಪೊಲೀಸರ ವಶಕ್ಕೆ
* ವಾಮಾಚಾರಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ
* ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 10.49 ಲಕ್ಷ ಕಳೆದು ಕೊಂಡ ವ್ಯಕ್ತಿ
* ಸರ್ಕಾರಿ ಶಾಲಾವರಣದಲ್ಲಿ ಪಾರ್ಟಿ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು
* ಸಿಡಿಲು ಬಡಿದು ಮಹಿಳೆ ಸಾವು
NAMMUR EXPRESS NEWS
* ಕಾಫಿನಾಡಲ್ಲಿ ಧಾರಾಕಾರ ಮಳೆ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆ ಕೊಂಚ ರಿಲೀಫ್ ನೀಡಿದ್ದ ವರುಣ ಇಂದು ಧಾರಾಕಾರವಾಗಿ ಅಬ್ಬರಿಸಿದ್ದಾನೆ. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ತಾಲೂಕಿನ ವಸ್ತಾರೆ, ಕೂದುವಳ್ಳಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಕಳೆದ ವಾರ ಸುರಿದಿದ್ದ ಮಳೆಗೆ ಕಾಫಿ ಗಿಡಗಳಲ್ಲಿ ಹೂವು ಅರಳಿತ್ತು ನಿನ್ನೆ ಉತ್ತಮ ಮಳೆಯಾಗಿರುವುದರಿಂದ ಕಾಫಿ ಕಾಯಿ ಕಟ್ಟಲು ಅನುಕೂಲವಾಗಲಿದೆ. ಇನ್ನು ಮಳೆ ಬೀಳದ ಅಕ್ಕ ಪಕ್ಕ ಪ್ರದೇಶಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸೆಕೆಯೂ ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ ದ್ವೀಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.
* ಭದ್ರಾ ನದಿಯಿಂದ ಮರಳು ಸಾಗಿಸುತ್ತಿದ್ದ ಆರೋಪಿ ಪೊಲೀಸರ ವಶಕ್ಕೆ
ತರೀಕೆರೆ: ಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ತರೀಕೆರೆ ತಾಲೂಕಿನ ಸಿದ್ದಿಪುರದ ಬಳಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ಆರೋಪಿಯನ್ನು ಲಕ್ಕವಳ್ಳಿ ಠಾಣೆಯ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಸಿದ್ದಿಪುರದ ನಿವಾಸಿ ದರ್ಶನ್ ಬಂಧಿತನಾಗಿದ್ದು, ಭದ್ರಾನದಿಯಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದಾಗ ಲಕ್ಕವಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತನಿಂದ 3,000 ಮೌಲ್ಯದ ಮರಳು, ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
* ವಾಮಾಚಾರಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ
ಚಿಕ್ಕಮಗಳೂರು: ವಾಮಾಚಾರ ಮಾಡಿದ್ದಾರೆ ಎಂಬ ಆತಂಕದಿಂದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಯಂತಿ (29) ಆತ್ಮಹತ್ಯೆಗೆ ಶರಣಾದ ಗೃಹಿಣಿ. ತನ್ನ ಮೇಲೆ ತಿಮ್ಮಾ ಭೋವಿ, ಲಕ್ಷ್ಮಣ ರಾಮ ಭೋವಿ ಎಂಬುವವರು ವಾಮಚಾರ ಮಾಡಿದ್ದಾರೆ ಎಂದು ಆತಂಕಕ್ಕೆ ಒಳಗಾಗಿದ್ದ ಜಯಂತಿ ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾಮಾಚಾರದ ಖಿನ್ನತೆ ಯಿಂದ ಹೊರ ಬರಲು ಪತ್ನಿಗೆ ಚಿಕಿತ್ಸೆಯನ್ನು ನೀಡಲಾಗಿತ್ತು ಆದರೂ ಆತಂಕ ದಿಂದ ನನ್ನ ಪತ್ನಿ ಆತ್ಮಹತ್ಯೆ ಮಾಡಿದ್ದಾಳೆ ಆಕೆಯ ಸಾವಿಗೆ ಹಿರಿಯಣ್ಣ ತಿಮ್ಮಾ ಭೋವಿ ಹಾಗೂ ಲಕ್ಷ್ಮಣ ರಾಮ ಭೋವಿಯೇ ಕಾರಣ ಎಂದು ಮೃತ ಜಯಂತಿ ಮಂಜು ಭೋವಿ ಆರೋಪಿಸಿದ್ದಾರೆ.
* ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 10.49 ಲಕ್ಷ ಕಳೆದು ಕೊಂಡ ವ್ಯಕ್ತಿ
ಚಿಕ್ಕಮಗಳೂರು: ವಾಟ್ಸಾಪ್ನಲ್ಲಿ ಬಂದ ಲಿಂಕನ್ನು ಕ್ಲಿಕ್ ಮಾಡುತ್ತಿದಂತೆಯೇ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ. ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.20ರಂದು ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಗ್ರೂಪ್ ನಲ್ಲಿ ಪಿ.ಎಂ.ಕಿಸಾನ್ ಯೋಜನಾ ಹೆಸರಿನಲ್ಲಿ ಎಪಿಕೆ ಫೈಲ್ ಲಿಂಕ್ ಬಂದಿದ್ದು, ಲಿಂಕ್ ಡೌನ್ ಲೋಡ್ ಮಾಡಿದ ಕೂಡಲೇ ವ್ಯಕ್ತಿಯ ಗಮನಕ್ಕೆ ಬರುವಷ್ಟರಲ್ಲಿ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 10.49 ಲಕ್ಷ ರೂ. ಕಡಿತಗೊಂಡಿದೆ.
ಆದ್ದರಿಂದ ಸಾರ್ವಜನಿಕರು ವಾಟ್ಸಾಪ್, ಫೇಸ್ಬುಕ್ ಮೆಸೆಂಜರ್, ಟೆಲಿಗ್ರಾಂ, ಇಸ್ಟ್ರಾಗ್ರಾಮ್, ಇ-ಮೇಲ್ ಇತ್ಯಾದಿ ಸಾಮಾಜಿಕ ಮಾಧ್ಯಮ ಗಳಲ್ಲಿ ಬರುವ ಈ ರೀತಿಯ ವಿಶ್ವಾಸಾರ್ಹವಲ್ಲದ, ಎಪಿಕೆ ಫೈಲ್ ಗಳನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೆ ಯಾವುದೇ ಕಾರಣಕ್ಕೂ ಡೌನ್ ಲೋಡ್ ಮಾಡಿಕೊಳ್ಳಬಾರದಾಗಿ ಸಾರ್ವಜನಿಕರು ಇಂತಹ ವಂಚನೆಗೆ ಒಳಗಾದಲ್ಲಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡ ಬೇಕೆಂದು ಜಿಲ್ಲಾ ಪೊಲೀಸ್ ವತಿಯಿಂದ ವಿನಂತಿ ಮಾಡಲಾಗಿದೆ.
* ಸರ್ಕಾರಿ ಶಾಲಾ ಆವರಣದಲ್ಲಿ ಪಾರ್ಟಿ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಕೊಪ್ಪ: ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಕಮ್ಮರಡಿ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡುತ್ತಿದ್ದ 5 ಜನರ ವಿರುದ್ಧ ಕಲಂ 15(ಎ) ಕರ್ನಾಟಕ ಅಬಕಾರಿ ಕಾಯ್ದೆ ರೀತ್ಯಾ ಪ್ರಕರಣವನ್ನು ಹರಿಹರಪುರ, ಠಾಣೆಯ ಪೊಲೀಸರು ದಾಖಲಿಸಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಎಚ್ಚರಿಕೆ ನೀಡಿರುವ ಪೊಲೀಸರು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಎಲ್ಲರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಶಾಲೆಗಳಲ್ಲಿ ಸಂಜೆ ಸಂದರ್ಭದಲ್ಲಿ ಹಾಗೂ ರಜಾ ದಿನಗಳಲ್ಲಿ ಸರ್ಕಾರಿ ಶಾಲಾ ಆವರಣಗಳಲ್ಲಿ ಪಾರ್ಟಿ ನಡೆಸಿ ಎಣ್ಣೆ ಬಾಟಲಿ ಹಾಗೂ ಸಿಗರೇಟ್ ಗಳನ್ನು ಬಿಸಾಕಿತ್ತುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
* ಸಿಡಿಲು ಬಡಿದು ಮಹಿಳೆ ಸಾವು
ಚಿಕ್ಕಮಗಳೂರು: ತಾಲೂಕಿನ ತಿಮ್ಮನಹಳ್ಳಿ ಗ್ರಾಮದ 62 ವರ್ಷದ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ದೇವರಾಜೇಗೌಡ ಅವರ ಪತ್ನಿ ನಾಗಮ್ಮ ಮೃತಪಟ್ಟವರು. ಆರದವಳ್ಳಿ ಗ್ರಾಮದ ತನ್ನ ಅಳಿಯ ಗಂಗೇಗೌಡ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಗ ಮಧ್ಯಾಹ್ನ 2 ಗಂಟೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತ ಭಾನುವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿಯಿತು. ಮಧ್ಯಾಹ್ನ 1.30ರ ವೇಳೆಗೆ ಶುರವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಗರದಲ್ಲಿ ರಸ್ತೆಗಳು ಮತ್ತು ಚರಂಡಿಗಳ ಮೇಲೆ ನೀರು ಉಕ್ಕಿ ಹರಿಯಿತು. ಮೊದಲ ಮಳೆ ಕಂಡು ಜನ ಸಂತಸಪಟ್ಟರು.
ಜಿಲ್ಲೆಯ ಆಲ್ದೂರು ಮತ್ತು ಮೂಡಿಗೆರೆಯಲ್ಲೂ ಭಾನುವಾರ ಮಧ್ಯಾಹ್ನ ಸ್ವಲ್ಪ ಹೊತ್ತು ಧಾರಾಕಾರ ಮಳೆಯಾಗಿದೆ.