ಚಿಕ್ಕಮಗಳೂರು: ಕಾಡಾನೆ ದಾಳಿಗೆ ರೈತ ಸಾವು!
– ಸೊಂಡಿಲಿನಿಂದ ರೈತನನ್ನು ಹಿಡಿದು ಮರಕ್ಕೆ ಹೊಡೆದ ಕಾಡಾನೆ
– ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ
NAMMUR EXPRESS NEWS
ಚಿಕ್ಕಮಗಳೂರು: ಕಾಡಾನೆ ದಾಳಿಯಿಂದಾಗಿ ರೈತ ಮೃಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ಮಾ. 31( ಇಂದು) ಮುಂಜಾನೆ ನಡೆದಿದೆ.
ಮೃತ ರೈತನನ್ನು ವೆಂಕಟೇಶ್ (58) ಎಂದು ಗುರುತಿಸಲಾಗಿದೆ. ವೆಂಕಟೇಶ್ ಮುಂಜಾನೆ ಕತ್ತಲಿದ್ದ ಕಾರಣ ಅಲ್ಲಿ ಕಾಡಾನೆ ಇದ್ದ ವಿಚಾರ ತಿಳಿಯದೇ ಮನೆ ಮುಂದೆ ಹಸು ಕಟ್ಟುತ್ತಿದ್ದರು. ಈ ವೇಳೆ ಆನೆ ಉಸಿರಾಡುವ ಸದ್ದು ಕೇಳಿ ಮೊಬೈಲ್‌ನಿಂದ ಟಾರ್ಚ್ ಲೈಟ್ ಹಾಕಿದ್ದಾರೆ. ಲೈಟ್ ಹಾಕಿದ ತಕ್ಷಣ ಆನೆ ಸೊಂಡಿಲಿನಿಂದ ರೈತನನ್ನು ಹಿಡಿದು ತೆಂಗಿನ ಮರಕ್ಕೆ ಹೊಡೆದಿದೆ. ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಲಾಖೆಯ ವಿರುದ್ಧ ಗ್ರಾಮಸ್ಥರ ಆಕ್ರೋಶ
ನಿರಂತರ ಕಾಡಾನೆ ದಾಳಿಯಿಂದ ತತ್ತರಿಸಿದ ಜಿಲ್ಲೆಯ ಜನತೆ ಹಾಗೂ ಇಂದು ಕಾಡಾನೆ ದಾಳಿಗೆ ಮೃತಪಟ್ಟ ತರೀಕೆರೆ ತಾಲೂಕಿನ ಗುರುಪುರದ ರೈತನ ಗ್ರಾಮದ ಸ್ಥಳೀಯರು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
