ಚಿಕ್ಕಮಗಳೂರು ಟಾಪ್ ನ್ಯೂಸ್
* ವ್ಯಕ್ತಿ ಮೇಲೆ ಕಾಡಾನೆ ದಾಳಿ, ಗಂಭೀರ ಗಾಯ
* ಎರಡು ಬೊಲೆರೋ ವಾಹನವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ ಶಾಸಕ
* ಕೇಂದ್ರ ಸಚಿವ ವಿ ಸೋಮಣ್ಣರಿಂದ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಅನುದಾನ
NAMMMUR EXPRESS NEWS
* ವ್ಯಕ್ತಿ ಮೇಲೆ ಕಾಡಾನೆ ದಾಳಿ, ಗಂಭೀರ ಗಾಯ
ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾನವ-ಕಾಡಾನೆ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೃದ್ಧರೊಬ್ಬರ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ ಪಿಲೀಪ್ (62) ಎಂಬುವವರು ತಮ್ಮ ಮನೆಯಿಂದ ಮೂತ್ರ ವಿಸರ್ಜನೆಗಾಗಿ ಹೊರ ಬಂದ ಸಂದರ್ಭದಲ್ಲಿ ಅವರ ಮನೆ ಎದುರಿಗೆ ಬಾಳೆಗಿಡ ತಿನ್ನುತ್ತಿದ್ದ ಕಾಡಾನೆ ಏಕಾಏಕಿ ಪಿಲೀಪ್ ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಕಾಲು ಜಾರಿ ಬಿದ್ದ ಕಾರಣ ಪಿಲೀಪ್ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.
ಪಿಲೀಪ್ ಅವರ ಬೆನ್ನು ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆಯಿಂದಾಗಿ ಸ್ಥಳೀಯರು ಭಯಭೀತರಾಗಿದ್ದು ಮಲೆನಾಡಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
* ಎರಡು ಬೊಲೆರೋ ವಾಹನವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ ಶಾಸಕ
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ಡಿ ರಾಜೇಗೌಡ ಅವರ 2025-26 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದಿಂದ ಖರೀದಿಸಲಾದ ಎರಡು ಮಹೀಂದ್ರಾ ಬೊಲೆರೊ ವಾಹನಗಳನ್ನು ಚಿಕ್ಕಮಗಳೂರು ಎಸ್ಪಿ ಡಾ. ವಿಕ್ರಂ ಅಮಟೆ ಅವರ ಮೂಲಕ ಇಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕಕ್ಕೆ ಹಸ್ತಾಂತರಿಸಿದ್ದಾರೆ.
* ಕೇಂದ್ರ ಸಚಿವ ವಿ ಸೋಮಣ್ಣರಿಂದ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಅನುದಾನ
ಅಜ್ಜಂಪುರ: ಜಿಲ್ಲೆಯ ಅಜ್ಜಂಪುರ-ಶಿವನಿ ರೈಲು ನಿಲ್ದಾಣಗಳ ಅಭಿವೃದ್ಧಿ, ಜೋಡಿ ರಸ್ತೆ ನಿರ್ಮಾಣಕ್ಕೆ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಇತ್ತೀಚೆಗೆ ಶಿವನಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಚಿವರಿಗೆ ಸ್ಥಳೀಯ ಮುಖಂಡರು ಶಿವನಿ-ಅಜ್ಜಂಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು, ಎರಡು ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಹಾಗೂ ಎಸ್ಎಚ್ 153 ರಸ್ತೆಯ ಎಲ್ಸಿ 140ರವರೆಗೆ ಜೋಡಿ ರಸ್ತೆ ಅಂಡರ್ ಪಾಸ್ನಿಂದ ಜೋಡಿ ರಸ್ತೆ ನಿರ್ಮಾಣ ಕೋರಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಎಸ್ಎಚ್ 153 ರಸ್ತೆಯ ಅಂಡರ್ ಪಾಸ್ನಿಂದ ಎಲ್ಸಿ 140ರವರೆಗಿನ ಜೋಡಿ ರಸ್ತೆಗಾಗಿ 2.28 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.